ಶ್ರೀ ರಾಮಾನುಜಾಚಾರ್ಯರ ದಿವ್ಯ ಕರುಣೆ

ಶ್ರೀ ವೈಷ್ಣವ ಸಂಪ್ರದಾಯದ ಶ್ರೇಷ್ಠ ಆಚಾರ್ಯರಾದ ಶ್ರೀ ರಾಮಾನುಜರು ಭಕ್ತಿ, ಪಾಂಡಿತ್ಯ, ಕರುಣೆಗಳ ಸಾಕಾರ ಮೂರ್ತಿಯಾಗಿದ್ದರು. ಉಪೇಕ್ಷಿತ ವರ್ಗದವರ ಮೇಲೆ ಕೃಪೆದೋರಿ ಅಷ್ಟಾಕ್ಷರೀ ಮಂತ್ರವನ್ನು ಬಹಿರಂಗವಾಗಿ ಉಪದೇಶಿಸುವ ಸಾಹಸ ಮೆರೆದ ಅವರೊಬ್ಬ ಕ್ರಾಂತಿಕಾರೀ ಸಂತ.

ಚೈತ್ರಾದ್ರಾಮ್‌ ಸಮ್ಭವಮ್‌

ವಿಷ್ಣೋರ್‌ ದರ್ಶನ – ಸ್ಥಾಪನೋತ್ಸುಕಮ್‌ |

ತುಂದೀರ- ಮಂಡಲೇ ಶೇಷ

ಮೂರ್ತಿಮ್‌ ರಾಮಾನುಜಮ್‌ ಭಜೇ ||

‘ಚೈತ್ರ ಮಾಸದಲ್ಲಿ ತುಂದೀರ ದೇಶದಲ್ಲಿ ಜನಿಸಿದ. ಶ್ರೀ ವಿಷ್ಣುತತ್ತ್ವವನ್ನು ಭೂಮಿಯಲ್ಲಿ ಸ್ಥಾಪಿಸಲೆಂದೇ ಜನ್ಮತಾಳಿದ, ಅನಂತ ಶೇಷನ ಅವತಾರವಾಗಿರುವ ಶ್ರೀರಾಮಾನುಜರನ್ನು ಕುರಿತು ಭಯಸುತ್ತೇನೆ’

ಅನಂತಶೇಷನ ಅವತಾರವಾದ ಶ್ರೀರಾಮಾನುಜಾಚಾರ್ಯರು ವೈಷ್ಣವ ತತ್ತ್ವದ ಹರಿಕಾರರು. ವಿಷ್ಣುಭಕ್ತರು, ಶ್ರೇಷ್ಠ ಆಚಾರ್ಯರಷ್ಟೇ ಅಲ್ಲ, ಅವರೊಬ್ಬ ಕ್ರಾಂತಿಕಾರೀ ಸಂತ ಮತ್ತು ಸಮಾಜ ಸುಧಾರಕ. ಸಾಮರಸ್ಯತೆಯ ಪ್ರತೀಕ.

ವಿಷ್ಣು ಪಾರಮ್ಯವನ್ನು ಸ್ಥಾಪಿಸುವಲ್ಲಿ ಶ್ರೀರಾಮಾನುಜಾಚಾರ್ಯರು ಕೈಗೊಂಡ ಕಾರ್ಯಗಳು ಅಮೋಘವಾದುದು. ಅವರ ಅಂತರಂಗದಲ್ಲಿ ಸಹಜವಾಗಿ ನೆಲೆಯಾಗಿದ್ದ ಶುದ್ಧ ಭಕ್ತಿ ಅವರಿಂದ ಮಹತ್ಕಾರ್ಯವನ್ನು ಸಾಧ್ಯವಾಗಿಸಿತು. ಜೊತೆಗೆ ಪ್ರಕಾಂಡ ಪಾಂಡಿತ್ಯದ ಮೆರುಗು ಮಹಾಪಂಡಿತವರ್ಗದವರನ್ನೂ ಸೆಳೆದು ವಿಷ್ಣುವಿಗೆ ತಲೆಬಾಗುವಂತೆ ಮಾಡಿತು. ಅವರು ಬೋಧಿಸಿದ ‘ಶ್ರೀವೈಷ್ಣವ ಭಕ್ತಿ ಪಂಥ” ರಾಜ ಮಹಾರಾಜರುಗಳನ್ನೂ ತನ್ನ ತೆಕ್ಕೆಗೆ ಸೆಳೆದು ಉದ್ದರಿಸಿತು.

ಶ್ರೀರಾಮಾನುಜಾಚಾರ್ಯರಿಗೆ ಹಿಂದುಳಿದ ವರ್ಗದ ಜನಸಾಮಾನ್ಯರ ಮೇಲೆ ಅಪಾರ ಕರುಣೆ. ನಿಮ್ಮ ವರ್ಗದಲ್ಲಿ ಜನಿಸಿದ್ದರೂ ಮಹಾನ್ ಭಕ್ತರಾಗಿದ್ದ ಕಂಚೀಪೂರ್ಣರಿಂದ ಅವರು ಬಾಲ್ಯದಲ್ಲಿಯೇ ವಿಷ್ಣು ಭಕ್ತಿಯ ಮೊದಲ ಅನುಭವ ಪಡೆದಿದ್ದರಷ್ಟೆ. ಮು೦ದೆಯೂ ಅವರು ಹಿಂದುಳಿದವರೆಂದು ಕರೆಯಲ್ಪಡುತ್ತಿದ್ದ ವರ್ಗದ ಭಕ್ತಶ್ರೇಷ್ಠರಿಂದಲೇ ವಿದ್ಯಾಭ್ಯಾಸ ಪಡೆದು, ದೀಕ್ಷೆಯನ್ನೂ ಸ್ವೀಕರಿಸಿ ಸಮಾಜಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟರು.

ಶ್ರೀರಾಮಾನುಜರು ಆಧ್ಯಾತ್ಮಿಕ ಉನ್ನತಿಗೆ ಎಲ್ಲರೂ ಬಾಧ್ಯಸ್ಥರೆಂದು ಸಾರಿದರು. ಕೇವಲ ಒಂದು ವರ್ಗದ ಇಡುಗಂಟಾಗಿದ್ದ ಮಂತ್ರ ಜಪ ಸಾಧನೆಗಳು ಎಲ್ಲರಿಗೂ ದಕ್ಕಬೇಕು, ಅವರೂ ದೈವಿಕ ಆನಂದ ಅನುಭವಿಸಬೇಕೆಂಬುದು ಅವರ ಆಶಯವಾಗಿತ್ತು.

ಅವರು ವೈಷ್ಣವ ಮಂತ್ರ ದೀಕ್ಷೆ ಪಡೆಯುವ ಉದ್ದೇಶದಿಂದ ಶ್ರೇಷ್ಠ ಆಚಾರ್ಯರಾಗಿದ್ದ ಗೋಷ್ಠಿಪೂರ್ಣರು ಅವರ ಕೋರಿಕೆಯನ್ನು ನಿರಾಕರಿಸಿದರು. ವೈಷ್ಣವ ಮಂತ್ರ ದೀಕ್ಷೆ ಪಡೆಯಲೇಬೇಕೆಂಬ ಇಚ್ಛೆ ರಾಮಾನುಜರಲ್ಲಿ ಉತ್ಕಟವಾಗಿತ್ತು. ಅವರು ಮತ್ತೆ ಮತ್ತೆ ಆಚಾರ್ಯರ ಬಳಿ ತೆರಳಿ ತಮ್ಮ ಬೇಡಿಕೆ ಸಲ್ಲಿಸಿದರು. ಆದರೂ ಫಲಕಾರಿಯಾಗಲಿಲ್ಲ.

ಹೀಗೆ ಅವರು ಒಟ್ಟುಹದಿನೆಂಟು ಬಾರಿ ಗೋಷ್ಠಿಪೂರ್ಣರನ್ನು ಭೇಟಿಯಾದ ಮೇಲೆ ರಾಮಾನುಜಾಚಾರ್ಯರ ತೀವ್ರ ಆಕಾಂಕ್ಷೆಗೆ ಸೋತು ಮಂತ್ರದೀಕ್ಷೆ ನೀಡಲು ಒಪ್ಪಿಕೊಂಡರು. ಅದಕ್ಕೂ ಮುನ್ನ ಅವರು, ತಾವು ಬೋಧಿಸುವ ಮಂತ್ರವನ್ನು ಯಾರ ಮುಂದೆಯೂ ಹೇಳಬಾರದೆಂದು ರಾಮಾನುಜರಿಂದ ಭಾಷೆ ಪಡೆದರು.

ಅನಂತರ ಮಂತ್ರವನ್ನು ಅವರ ಕಿವಿಯಲ್ಲಿ ಉಸುರಿ “ಇದು ಬಹಳ ಶಕ್ತಿಶಾಲಿ ಮಂತ್ರ, ಯಾರು ಇದನ್ನು ಸದಾಕಾಲ ಜಪಿಸುತ್ತಾರೋ ಅವರು ನಿಶ್ಚಿತವಾಗಿ ಮುಕ್ತಿಯನ್ನು ಹೊಂದುವರು, ವೈಕುಂಠ ಧಾಮಕ್ಕೆ ತೆರಳಿ ಶ್ರೀ ವಿಷ್ಣುವಿಗೆ ಸ್ವತಃ ಸೇವೆ ಸಲ್ಲಿಸಲು ಸಮರ್ಥರಾಗುವರು” ಎಂದು ತಿಳಿಸಿದರು.

ಮಂತ್ರ ದೀಕ್ಷೆ ಪಡೆದು ಅಲ್ಲಿಂದ ಶ್ರೀರಾಮಾನುಜರು ಶ್ರೀರಂಗಂನತ್ತ ಹೊರಟರು. ಅವರ ಸುತ್ತ ಜನಸಾಗರವೇ ನೆರೆಯಿತು. ಅವರಿಗೆ ರಾಮಾನುಜರು ಗೋಷ್ಠಿಪೂರ್ಣರಿಂದ ಮಂತ್ರ ದೀಕ್ಷೆ ಪಡೆಯಲಿದ್ದಾರೆ ಎಂಬ ಸುದ್ದಿ ತಿಳಿದಿತ್ತು. ಈಗ ಅವರು ರಹಸ್ಯೋಪದೇಶವನ್ನು ತಾವೂ ಪಡೆಯಬೇಕೆಂಬ ಬಯಕೆಯಿಂದ ಆಚಾರ್ಯರಲ್ಲಿ ಬಿನ್ನವಿಸಿಕೊಂಡರು.

ಶ್ರೀ ರಾಮಾನುಜಾಚಾರ್ಯರಿಗೆ, ಯಾವುದರ ಜಪಮಾತ್ರದಿಂದ ಎಲ್ಲ ಬಂಧನಗಳಿಂದ ಮುಕ್ತಿ ದೊರಕುವುದೋ ಆ ದಿವ್ಯಮಂತ್ರವನ್ನು ಜನರಿಗೆ ಉಪದೇಶಿಸಬೇಕೆಂದು ಅಂತಃಸ್ಫುರಣೆಯಾಯಿತು. ಅದರಂತೆ ಅವರು ಆ ಗುಂಪನ್ನು ಉದ್ದೇಶಿಸಿ, “ಓಂ ನಮೋ ನಾರಾಯಣಾಯ” ಎನ್ನುತ್ತಾ, ನೀವೆಲ್ಲರೂ ಇದನ್ನು ಒಟ್ಟಾಗಿ ಜಪಿಸಿ ಎಂದು ಘೋಷಿಸಿದರು.

ಜನ ಸಮೂಹ, ಮಂತ್ರವನ್ನು ಪಡೆದು ಕೃತಾರ್ಥವಾಯಿತು. ಅವರೆಲ್ಲರೂ ಆನಂದ ಸಾಗರದಲ್ಲಿ ಮಿಂದುಹೋದರು. ಆದರೆ ಈ ಸುದ್ದಿ ಗೋಷ್ಠಿಪೂರ್ಣರನ್ನು ತಲುಪುತ್ತಿದ್ದಂತೆಯೇ ಅವರು ರಾಮಾನುಜರನ್ನು ಕರೆಸಿದರು. ತಮ್ಮ ಹೊಸ ಶಿಷ್ಯ ಅವಿಧೇಯನಾಗಿ ನಡೆದುಕೊಂಡು ಕೊಟ್ಟ ಮಾತಿಗೆ ತಪ್ಪಿ ನಡೆದ ಎಂದು ಆಪಾದಿಸಿದರು.

“ನಾನು ನಿನಗೆ ಈ ಮಂತ್ರವನ್ನು ರಹಸ್ಯವಾಗಿ ಜಪಿಸಲು ಹೇಳಿದ್ದೆ, ನೀನು ಇಷ್ಟು ಬೇಗ ಅದನ್ನು ಜನರೆದುರಿಗೆ ಯಾಕೆ ಹೇಳಿದೆ? ಇದರ ಶಿಕ್ಷೆ ಏನಿರಬಹುದು ಗೊತ್ತೇನು?’ ಎಂದು ಗುಡುಗಿದರು. ಅದಕ್ಕೆ ರಾಮಾನುಜರು ಕಾಂಡವಾಗಿ “ಹೌದು ಗುರುದೇವ. ನಿಮ್ಮ ಮಾತಿಗೆ ತಪ್ಪಿ ನಡೆದದ್ದಕ್ಕೆ ನಾನು ನರಕಕ್ಕೆ ಹೋಗಬಹುದು” ಎಂದರು. ಶಿಷ್ಯನ ಶಾಂತತೆ ಗುರುಗಳಿಗೆ ಅಚ್ಚರಿ ತರಿಸಿತು. ನರಕಕ್ಕೆ ಹೋಗುವ ಅರಿವಿದ್ದೂ ಈ ಉದ್ಧಟತನಕ್ಕೆ ಕೈಹಾಕಿದ ಕಾರಣ ಕೇಳಿದರು.

ಶ್ರೀರಾಮಾನುಜರು ನುಡಿದರು. ”ನನ್ನ ಪ್ರಿಯ ಗುರುದೇವ, ನೀವು ನನಗೆ ನೀಡಿದ ಶಕ್ತಿಶಾಲಿ ಮಂತ್ರವನ್ನು ಅದನ್ನು ಬಯಸುವ ಪ್ರತಿಯೊಬ್ಬರಿಗೂ ನೀಡಬೇಕೆಂದು ನನಗೆ ಬೋಧೆಯಾಯಿತು. ಈ ಜನರಲ್ಲಿ ನಾನು ಲೌಕಿಕ ಬಂಧನದಿಂದ ಮುಕ್ತಿ ಪಡೆಯುವ ಉತ್ಕಟ ಹಂಬಲವನ್ನು ಕಂಡೆ.

ಇನ್ನು ನನ್ನಿಂದ ತಡೆದುಕೊಳ್ಳಲಾಗಲಿಲ್ಲ. ನಿಮ್ಮ ಕರುಣೆಯ ಕೊಡುಗೆಯನ್ನು ಎಲ್ಲರಿಗೂ ಹಂಚುವಂತೆ ದಿವ್ಯಶಕ್ತಿಯ ಪ್ರೇರಣೆಯಾಯಿತು. ಇದು ಪಾಪವೇ ಎಂದಾದರೆ, ನನ್ನನ್ನು ಶಿಕ್ಷಿಸಿ, ನರಕಕ್ಕೆ ಹೋಗೆಂದು ಶಪಿಸಿ, ಅದು ನನ್ನ ಪಾಪಕ್ಕೆ ಸೂಕ್ತವೇ ಆಗಿದೆ. ಆದರೆ ನನ್ನಿಂದ ಮಂತ್ರವನ್ನು ಬೇಡಿದ ಈ ಜನಸಾಮಾನ್ಯರನ್ನು ಶಪಿಸದೆ ಬಿಟ್ಟುಬಿಡಿ.”

ಶಿಷ್ಯನ ಪ್ರಾಮಾಣಿಕತೆಯನ್ನು, ಸಾಮಾನ್ಯರೆಡೆಗಿನ ಕರುಣೆಯನ್ನು ಕಂಡ ಗೋಷ್ಠಿಪೂರ್ಣರ ಅಂತಃಕರಣ ಕಲಕಿತು. ಇಷ್ಟಕ್ಕೂ ಭಗವಂತನ ಕರುಣೆಯನ್ನು ಹ೦ಚುವುದಕ್ಕಿಂತ ಮಿಗಿಲಾದ ಆದರ್ಶ ಬೇರಾವುದಿದೆ? ಶ್ರೀರಾಮಾನುಜರು ತಮ್ಮ ಗುರುಗಳ ಮಾತನ್ನು ಮೀರಿದರೂ ಮಂತ್ರದ ಸಾಮರ್ಥ್ಯವನ್ನು ಅರಿತುಕೊಂಡರು. ಜನರಲ್ಲಿ ಕರುಣೆ ತೋರಿ ಮಂತ್ರ ನೀಡಿದ, ಅವರಲ್ಲಿ ಭಕ್ತಿ ಭಾವ ಬೆಳೆಸಿದ, ಶ್ರೀ ಸಂಪ್ರದಾಯದ ಪ್ರವರ್ತಕರಾದ ಅವರು ಹೇಗೆ ತಾನೆ ಶಾಪಕ್ಕೆ ಅರ್ಹರಾಗಬಲ್ಲರು?

ಗೋಷ್ಠಿಪೂರ್ಣರ ಹೃದಯ ಕರಗಿತು. ತಾವೇ ಶಿಷ್ಯನ ಕಾಲಿಗೆ ಅಡ್ಡಬಿದ್ದರು. “ನನ್ನನ್ನು ಕ್ಷಮಿಸು ಮಗೂ, ಇನ್ನೀಗ ನೀನೇ ನನ್ನ ಗುರು, ನಾನು ನಿನ್ನ ಶಿಷ್ಯ. ನಿನ್ನ ಗುರುವಿನ ಸ್ಥಾನ ವಹಿಸಲು ನನಗೇನು ಅರ್ಹತೆ ಇದೆ? ನಿನ್ನ ಹಿರಿಮೆಯನ್ನು ನಾನು ಹೇಗೆ ಅರಿಯಲಿ?  ನನ್ನನ್ನು ನಿನ್ನ ಶಿಷ್ಯನಾಗಿ ಸ್ವೀಕರಿಸು” ಎಂದು ವಿನಂತಿಸಿದರು.

ಶ್ರೀರಾಮಾನುಜಾಚಾರ್ಯರು ಸ್ವಹಿತವನ್ನು ಕಡೆಗಣಿಸಿ ಹಾದಿ ತಪ್ಪಿದ ಸಂಪ್ರದಾಯಕ್ಕೆ ವಿರುದ್ಧವಾಗಿ ಜನಸಾಮಾನ್ಯರನ್ನು ಅಪ್ಪಿಕೊಂಡರು. ಹಿಂದೆ ದಬ್ಬಲ್ಪಟ್ಟಿದ್ದ ಜನ ಸಮೂಹವನ್ನು ತಮ್ಮ ಕರುಣಾಪೂರ್ಣ ಹಸ್ತದಿಂದ ಮೇಲಕ್ಕೆತ್ತಿದರು.

ಪಂಡಿತ ಶ್ರೇಷ್ಠರು, ಬ್ರಾಹ್ಮಣರು, ರಾಜಾಧಿರಾಜರಿಗೆ ಉಪದೇಶ ನೀಡಿ ಅವರ ಮನಃಪರಿವರ್ತನೆ ಮಾಡುವುದಕ್ಕೆ ನೀಡಿದ ಪ್ರಾಮುಖ್ಯವನ್ನು ಅಥವಾ ಅದಕ್ಕಿಂತ ಹೆಚ್ಚಿನ ಪ್ರಾಶಸ್ತ್ಯವನ್ನು ಜನಸಾಮಾನ್ಯರ ಉದ್ಧಾರಕ್ಕೆ ನೀಡಿದರು.

ಆಧ್ಯಾತ್ಮಿಕ, ಬೌದ್ಧಿಕ ಮತ್ತು ಸಾಮಾಜಿಕ ಸ್ತರಗಳೆಲ್ಲದರಲ್ಲೂ ಪರಿವರ್ತನೆ ತಂದ ಕ್ರಾಂತಿಕಾರಿ ಸಂತ ಶ್ರೀರಾಮಾನುಜಾಚಾರ್ಯರು ಪ್ರಾತಃ ಸ್ಮರಣೀಯರು, ಜಗದ್ವಂದ್ಯರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi