ಕೃಷ್ಣ ಪಾಕಶಾಲೆ

ದಕ್ಷಿಣ ಕನ್ನಡದ ವಿಶೇಷ ಇಡ್ಲಿಗಳು

– ಎಸ್‌.ವಿ.ಗಾಯತ್ರಿ

ಹಲಸಿನ ಎಲೆ ಕಡುಬು (ಕೊಟ್ಟೊ)

ಬೇಕಾಗುವ ಪದಾರ್ಥ:

ಉದ್ದಿನಬೇಳೆ – 1 ಪಾವು

ಅಕ್ಕಿ- 1 1/2 ಪಾವು

ಉಪ್ಪು – ರುಚಿಗೆ ತಕ್ಕಷ್ಟು

ಹಲಸಿನ ಎಲೆ – 50

ಬಿದಿರಿನ ಸಣ್ಣ ಕಡ್ಡಿ ತುಂಡುಗಳು

ಮಾಡುವ ವಿಧಾನ : ಉದ್ದಿನ ಬೇಳೆಯನ್ನು 2-3 ಗಂಟೆ ಮೊದಲೇ ನೆನೆ ಹಾಕಿ, ಅಕ್ಕಿಯನ್ನು ತೊಳೆದು ಬಸಿಯಿರಿ. ನೀರೆಲ್ಲಾ ಬಸಿದು ಆರಿದನಂತರ ಸಣ್ಣ ರವೆ ಮಾಡಿ, ಅಕ್ಕಿ ರವೆಯನ್ನು ಜರಡಿ ಹಿಡಿದು ಅಕ್ಕಿಹಿಟ್ಟನ್ನು ಬೇರ್ಪಡಿಸಿ, ಪ್ರತ್ಯೇಕವಾಗಿ ತೆಗೆದಿಟ್ಟುಕೊಳ್ಳಿ.

ಅನಂತರ ಸ್ವಲ್ಪ ಸ್ವಲ್ಪವೇ ನೀರು ಬೆರೆಸಿ ಉದ್ದಿನ ಬೇಳೆಯನ್ನು ನುಣ್ಣಗೆ ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ, ಅನಂತರ ಜರಡಿ ಹಿಡಿದಿಟ್ಟ ಅಕ್ಕಿ ರವೆ ಹಾಗೂ ಉದ್ದಿನ ಹಿಟ್ಟನ್ನು ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 4-5 ಗಂಟೆಗಳ ಕಾಲ ಮುಚ್ಚಿಡಿ.

ಚಿತ್ರ-1

ಅನಂತರ ಹಲಸಿನ ಎಲೆಯಿಂದ ತಯಾರಿಸಿದ ಪ್ರತಿ ಬಟ್ಟಲಲ್ಲಿ (ದೊನ್ನೆಯಲ್ಲಿ) ಮುಕ್ಕಾಲು ಭಾಗ ಹಿಡಿಸುವಷ್ಟು ಈ ಹಿಟ್ಟನ್ನು ತುಂಬಿ, ಇಡ್ಲಿ ಪಾತ್ರೆಯ ಹಬೆಯಲ್ಲಿ 20-25 ನಿಮಿಷಗಳ ಕಾಲ ಬೇಯಿಸಬೇಕು.

ಹಲಸಿನ ದೊನ್ನೆಯಿಂದ ಕಡ್ಡಿ ತುಂಡುಗಳನ್ನು ಬಿಡಿಸಿ ತೆಗೆದರೆ ಒಳಗಡೆ ‘ ಕೊಟ್ಟೊ’ ಸಿದ್ಧ. ಕೊಟ್ಟೊ ಬೆಂದಿದ್ದರೆ ಎಲೆಯಿಂದ ಬಿಟ್ಟು ಬರುವುದು.

ಹಲಸಿನ ಕೊಟ್ಟೆ ತಯಾರಿಸುವ ವಿಧಾನ: ಹೆಚ್ಚು ಒರಟು ಅಲ್ಲದ ಹೆಚ್ಚು ಮೃದುವೂ ಅಲ್ಲದ ಹಲಸಿನ ಸಮಗಾತ್ರದ ಎಲೆಗಳನ್ನು ತೆಗೆದು 2-3 ಬಾರಿ ನೀರಿನಲ್ಲಿ ತೊಳೆದು ಅನಂತರ ಬಟ್ಟೆಯಿಂದ ಒರೆಸಿಟ್ಟುಕೊಳ್ಳಿ.

ಚಿತ್ರ-2

ಊದುಕಡ್ಡಿಗಾತ್ರದಷ್ಟು ಸಣ್ಣಗೆ ಸಿಗುವ ಬಿದಿರಿನ ಕಡ್ಡಿಗಳನ್ನು (ಸುಮಾರು 1ರಿಂದ 1 1/2 ಇಂಚು) ಮಾಡಿಟ್ಟುಕೊಳ್ಳಿ, ಎಲೆಯ ನುಣಪಾದ ಭಾಗವು ಹೊರ ಬರುವಂತೆ ಮೊದಲು ಒಂದರ ಮೇಲೊಂದು ಎಲೆಯಿಟ್ಟು ಒಂದು ಕಡ್ಡಿ ಸೇರಿಸಿ ಹೆಣೆಯಿರಿ. ಅನಂತರ ಮತ್ತೊಂದು ಎಲೆಯನ್ನು ಅದರ ಮೇಲಿಟ್ಟು ಇನ್ನೊಂದು ಕಡ್ಡಿಯನ್ನು ಮೂರು ಎಲೆಗಳಿಗೂ ಸೇರಿಸಿ ಹಾಕಿ ಆಮೇಲೆ ಮತ್ತೊಂದು ಎಲೆಯನ್ನು ಚಿತ್ರ 1ರಲ್ಲಿರುವಂತೆ ಇಟ್ಟು ಹೆಣೆಯಿರಿ.

ಒಂದರ ಮೇಲೊಂದು ಹತ್ತಿರ ಹತ್ತಿರ ಎಲೆ ಬರುವಂತೆ ನಾಲ್ಕು ಬದಿಗಳಿಂದಲೂ ಚಿತ್ರ 2 ರಲ್ಲಿರುವಂತೆ ʼಲೋಟʼದಂತೆ ಕಾಣುವ ಹಾಗೆ ಕೊಟ್ಟೊ ಹೆಣೆಯಿರಿ.

ಸಿಹಿ ಇಡ್ಲಿ

ಬೇಕಾಗುವ ಪದಾರ್ಥ:

ಅಕ್ಕಿ – 1 ಪಾವು

ಬೆಲ್ಲ – 1 ಅಚ್ಚು

ತೆಂಗಿನಕಾಯಿ – 1/2 ಹೋಳು

ಏಲಕ್ಕಿ – 4-5

ಸಿಹಿ ಕುಂಬಳಕಾಯಿ – 1/2 ಕೆ.ಜಿ.

ಅಥವಾ ಸೌತೆಕಾಯಿ – 1/2 ಕೆ.ಜಿ

ಉಪ್ಪು – 1/2 ಚಿಟಿಕೆ

ಖಾದ್ಯ ತೈಲ ಅಥವಾ ತುಪ್ಪ

ಮಾಡುವ ವಿಧಾನ: ಅಕ್ಕಿಯನ್ನು ತೊಳೆದು ಬಸಿಯಿರಿ. ನೀರೆಲ್ಲಾ ಅರಿದನಂತರ ತುಸು ದಪ್ಪ ರವೆ ಮಾಡಿಟ್ಟುಕೊಳ್ಳಿ. ಸಿಹಿ ಕುಂಬಳಕಾಯಿಯ ಬೀಜ ಹಾಗೂ ಸಿಪ್ಪೆ ತೆಗೆದು ಸಣ್ಣಗೆ ತುರಿದಿಟ್ಟುಕೊಳ್ಳಿ.

ಬೆಲ್ಲವನ್ನು ಪುಡಿಮಾಡಿ ಸಿಹಿಕುಂಬಳ ತುರಿಯೊಂದಿಗೆ ಬೆರೆಸಿ 10–15 ನಿಮಿಷ ಮುಚ್ಚಿಡಿ. ಬೆಲ್ಲ ಚೆನ್ನಾಗಿ ಬೆರೆತನಂತರ ಅದಕ್ಕೆ ತೆಂಗಿನಕಾಯಿ ತುರಿ ಏಲಕ್ಕಿಪುಡಿಯನ್ನು ಸೇರಿಸಿ ಸಿಹಿ ಇಡ್ಲಿಹಿಟ್ಟು ಹೆಚ್ಚು ತೆಳುವು ಅಲ್ಲದಂತೆ ಗಟ್ಟಿಯಾಗದಂತೆ ಅಗತ್ಯವಿದ್ದಲ್ಲಿ ಹದವಾಗಿ ಸ್ವಲ್ಪ ನೀರು ಹಾಕಿ ಕಲಸಿಟ್ಟುಕೊಳ್ಳಿ. ಇಡ್ಲಿ, ತಟ್ಟೆಗೆ ಸ್ವಲ್ಪ ಖಾದ್ಯ ತೈಲ ಸವರಿ ಹಿಟ್ಟು ಹಾಕಿ ಹಬೆ ಪಾತ್ರೆಯಲ್ಲಿ 20-25 ನಿಮಿಷಗಳ ಕಾಲ ಬೇಯಿಸಿ. ಬೆಂದ ಸಿಹಿ ಇಡ್ಲಿಗೆ ಸ್ವಲ್ಪ ತುಪ್ಪ ಹಾಕಿಕೊಳ್ಳಬಹುದು.

ಸಿಹಿಕುಂಬಳಕಾಯಿ ಬದಲು ಸೌತೇಕಾಯಿ ಬೆರೆಸಿದರೆ ಅದರಲ್ಲೇ ಹೆಚ್ಚು ನೀರು ಬಿಟ್ಟುಕೊಳ್ಳುವುದು. ಹಾಗಾಗಿ ನೋಡಿಕೊಂಡು ನೀರು ಬೆರೆಸಿ ಹಿಟ್ಟು ಕಲಸಿ.

ಸೌತೆಕಾಯಿ ಖಾರ ಇಡ್ಲಿ

ಬೇಕಾಗುವ ಪದಾರ್ಥ:

ಸೌತೇಕಾಯಿ (ಚಿಕ್ಕದು 2) ದೊಡ್ಡದಾದರೆ – 1

ತೆಂಗಿನಕಾಯಿ – 1/2 ಹೋಳು

ಅಕ್ಕಿ ರವೆ – 1 ಪಾವು

ಹಸಿಮೆಣಸಿನ ಕಾಯಿ – 4-5

ಹಿಂಗಿನ ಪುಡಿ – 2 ಚಿಟಿಕೆ

ಉಪ್ಪು – ರುಚಿಗೆ ತಕ್ಕಷ್ಟು

ಖಾದ್ಯ ತೈಲ – 2 ಚಮಚ

ಮಾಡುವ ವಿಧಾನ : ಸಿಹಿ ಇಡ್ಲಿಗೆ ತಿಳಿಸಿದಂತೆ ಅಕ್ಕಿ ರವೆಯನ್ನು ಮಾಡಿಟ್ಟುಕೊಳ್ಳಿ. ತೆಂಗಿನಕಾಯಿಯನ್ನು ತುರಿದಿಡಿ. ನಂತರ ಸೌತೆಕಾಯಿ ಸಿಪ್ಪೆ ತೆಗೆದು ಸಣ್ಣಗೆ ರವೆಯನ್ನು ಮಾಡಿಟ್ಟುಕೊಳ್ಳಿ.

ಸೌತೆಕಾಯಿ ಹಾಗೂ ತೆಂಗಿನತುರಿ, ಹಿಂಗಿನಪುಡಿ, ಉಪ್ಪು, ಹಸಿಮೆಣಸಿನಕಾಯಿ ಚೂರುಗಳನ್ನು ಹಾಕಿ 10-15 ನಿಮಿಷಗಳ ಕಾಲ ಮುಚ್ಚಿಡಿ. ಅನಂತರ ಅಕ್ಕಿರವೆಯನ್ನು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಬೆರೆಸಿ ಇಡ್ಲಿ ತಟ್ಟೆಗೆ ಸ್ವಲ್ಪ ಖಾದ್ಯ ತೈಲವನ್ನು ಹಚ್ಚಿ ಇಡ್ಲಿ ಹಿಟ್ಟನ್ನು ಹಾಕಿ. ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿ, ಜೊತೆಗೆ ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನಬಹುದು.

ಇದೇ ಹಿಟ್ಟನ್ನು ಅರಿಶಿನ ಗಿಡದ ಎಲೆಯಲ್ಲಿಟ್ಟು ಮಾಡಿದರೆ ಮತ್ತಷ್ಟು ಪರಿಮಳ ಬರುವುದು. ಅರಿಶಿನ ಎಲೆಯನ್ನು ಶುಭ್ರಗೊಳಿಸಿ ಒಂದರ ಮೇಲೊಂದಿಟ್ಟು ಹದಗಾತ್ರದ ಸೌಟಿನಲ್ಲಿ ಸೌತೆ ಇಡ್ಲಿ ಹಿಟ್ಟನ್ನು ಹಾಕಿ ಕೆಳಗೆ ಇಟ್ಟಿರುವ ಒಂದು ಎಲೆ ತುದಿಯನ್ನು ಮೇಲಿನಿಂದ ಮುಚ್ಚಿ ಒಂದರ ನಂತರ ಮತ್ತೊಂದು ತುದಿಯನ್ನು ಮುಚ್ಚಿ ಎಲ್ಲ ಬದಿಗಳಿಂದಲೂ ಪೊಟ್ಟಣದಂತೆ ಮಾಡಿ.

ಇದೇ ರೀತಿ ಮಾಡಿದ ಉಳಿದ ಇಡ್ಲಿ ಹಿಟ್ಟಿನ ಪೊಟ್ಟಣಗಳನ್ನು ಇಡ್ಲಿ ಹಬೆ ಪಾತ್ರೆಯಲ್ಲಿಟ್ಟು ಒಂದರ ಮೇಲೊಂದಿಟ್ಟು ಸುಮಾರು 30 ನಿಮಿಷ ಬೇಯಿಸಿದರೆ ಸೌತೆ ಅರಿಶಿನ ಎಲೆ ಇಡ್ಲಿ ಸಿದ್ಧ.

ಬೇಕಿದ್ದಲ್ಲಿ ಇದನ್ನು ಸಿಹಿಕುಂಬಳಕಾಯಿ ತುರಿಯೊಂದಿಗೂ ತಯಾರಿಸಬಹುದು. ತಯಾರಿಸಿದ ವಿಶೇಷ ಇಡ್ಲಿಗಳನ್ನು ಭಗವಂತನಿಗರ್ಪಿಸಿ ತಿನ್ನಲು ಮರೆಯದಿರಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi