ಸಮಚಿತ್ತತೆಯ ಪಾಠ

ಸಂಕೀರ್ತನ ಯಶೋಗಾಥೆಗಳು

‘ಪುಸ್ತಕ ಸಂಕೀರ್ತನೆ, ಬದ್ಧಾತ್ಮಗಳ ಮೇಲೆ ಪರಿಣಾಮ ಬೀರಿ, ಅವರನ್ನು ಕೃಷ್ಣಪ್ರಜ್ಞಾವಂತರನ್ನಾಗಿಸುವ ಮಹತ್ಸಾಧನ. ಇಂಥ ಸಾಧನವೊಂದು ತಮ್ಮ ಕೈಯಲ್ಲಿದೆಯೆಂದಾಗ ಸೂಕ್ಷ್ಮ ಅಹಂಭಾವ ಆವರಿಸುವ ಅಪಾಯಗಳಿರುತ್ತದೆ. ತಾನೊಬ್ಬ ಅಸಾಧಾರಣವಾದುದನ್ನು ಸಾಧಿಸುತ್ತಿರುವವನು ಎನ್ನುವ ಹಮ್ಮು ಉಂಟಾಗುತ್ತದೆ.

ಕೃಷ್ಣಪಜ್ಞೆಯನ್ನು ಬಿತ್ತುವುದೇನೋ ಆಸಾಧಾರಣ ಕಾರ್ಯ ಸರಿಯೇ. ಆದರೆ ಅದರ ಫಲಾಫಲಗಳ ಯಜಮಾನರು ತಾವೇ ಎಂದು ಬೀಗುವುದು ಸರಿಯಲ್ಲ.”

ಶ್ರೀಲ ಪ್ರಭುಪಾದರು ಪುಸ್ತಕ ಸಂಕೀರ್ತನ ಕಾರ್ಯದಲ್ಲಿ ತಮ್ಮನ್ನು ಸಮರ್ಪಿಸಿಕೊಂಡವರಿಗೆ ಹೇಳುತ್ತಿದ್ದ ಕಿವಿಮಾತಿದು. ಶ್ರೀಮದ್ಭಾಗವತಮ್‌ನ ತೃತೀಯ ಸ್ಕಂಧ, ಐದನೇ ಅಧ್ಯಾಯ 31ನೇ ಶ್ಲೋಕದ ಭಾವಾನುವಾದದಲ್ಲಿ ಪ್ರಭುಪಾದರು ತಮ್ಮ ಅಭಿಪ್ರಾಯವನ್ನು ಹೀಗೆ ಉಲ್ಲೇಖಿಸಿದ್ದಾರೆ –

”ಪುಸ್ತಕ ವಿತರಕನು ಕೆಲವೊಮ್ಮೆ ಫಲಾಕಾಂಕ್ಷೆ ಅಥವಾ ಪರಿಣಾಮಗಳ ಬಗೆಗಿನ ನಿರೀಕ್ಷೆಯಿಂದ ಮಿಥ್ಯಾಹಂಕಾರವನ್ನು ಅನುಭವಿಸುತ್ತಾನೆ. ಯಶಸ್ಸಿನ ಕಾರಣದಿಂದ ಹೆಮ್ಮೆಯನ್ನೂ ವೈಫಲ್ಯದ ಕಾರಣದಿಂದ ಉದ್ವೇಗ ಮತ್ತು ಕೋಪಗಳನ್ನೂ ಹೊಂದುತ್ತಾನೆ.”

ಇದರ ಪ್ರಭಾವದಿಂದ ಆತ, ”ತನಗೆ ತಾನು ದೇವರ ಸಮಾನ’ ಎಂದು ತಿಳಿಯುತ್ತಾನೆ. ತಾನು ಸ್ವತಃ ಆನಂದಿಸಬಲ್ಲ, ನಿಯಂತ್ರಿಸಬಲ್ಲ, ಶಿಕ್ಷಿಸಬಲ್ಲ ಮತ್ತು ಸೇವೆಯನ್ನು ಪಡೆಯಬಲ್ಲನೆಂದು ತಿಳಿಯುತ್ತಾನೆ.

ಆದ್ದರಿಂದ ಪುಸ್ತಕ ವಿತರಕರು ಮೊಟ್ಟಮೊದಲು ರೂಢಿಸಿಕೊಳ್ಳಬೇಕಾದುದು ಫಲಾಫಲಗಳಿಂದ ಮುಕ್ತರಾಗುವ ಗುಣವನ್ನು. ಆತನು ಯುದ್ಧಕ್ಕಾಗಿ ಯುದ್ಧ, ಸಂತೋಷ, ದುಃಖ, ಲಾಭ-ನಷ್ಟ, ಸೋಲು ಗೆಲುವುಗಳು ನನಗೆ ಸೇರಿದ್ದಲ್ಲ ಎಂಬ ಭಾವನೆಯನ್ನು ಬೆಳೆಸಿಕೊಳ್ಳಲೇಬೇಕು. ಅದು ದೊಡ್ಡದಿರಲಿ ಅಥವಾ ಸಣ್ಣದೇ ಇರಲಿ, ಪುಸ್ತಕ ವಿತರಕರು ಪರಿಣಾಮಗಳ ನಿರೀಕ್ಷೆಯಿರಿಸಿಕೊಳ್ಳಬಾರದು.

ತನ್ನ ಕೆಲಸ ಫಲ ನೀಡಿದಾಗ ತಾನೇನೋ ದೊಡ್ಡದು ಮಾಡಿಬಿಟ್ಟೆ ಎಂದಾಗಲೀ ಅದು ನಿರೀಕ್ಷಿತ ಪರಿಣಾಮ ನೀಡದಾದಾಗ ದುಃಖದಿಂದ ಚಿಂತಿಸುವುದಾಗಲೀ ಮಾಡಕೂಡದು. ಈ ಎರಡೂ ಚಿ೦ತನೆಗಳು ಫಲಾಪೇಕ್ಷಿತಗಳಾಗಿರುವುದರ ಪರಿಣಾಮವೇ ಆಗಿದೆ.

ಪುಸ್ತಕ ವಿತರಕನು ತನ್ನ ಕರ್ತವ್ಯವನ್ನು, ಸೇವೆಯನ್ನು  ಸಮರ್ಥವಾಗಿ ಮಾಡುವ ನಿಟ್ಟಿನಲ್ಲಿ ಪ್ರವೃತ್ತನಾಗಿರಬೇಕು. ಆಗ ಉತ್ತಮ ಫಲಗಳು ತಾನಾಗಿಯೇ ದೊರಕುತ್ತವೆ. ಜೊತೆಗೆ ಉನ್ನತವಾದ ಆನ೦ದವನ್ನು ಆತ್ಮತೃಪ್ತಿಯನ್ನು ಉಂಟುಮಾಡುತ್ತದೆ.

ಹೆಮ್ಮೆ- ಉದ್ವೇಗಗಳು ಭೌತಿಕ ಜಗತ್ತಿಗೆ ಅಂಟಿಕೊಂಡಿರುವ ಲಕ್ಷಣಗಳು. ಶರಣಾಗತಿ ಭಾವ ಮತ್ತು ಸೇವಾತತ್ತ್ವಕತೆಗಳು ಆಧ್ಯಾತ್ಮಿಕ ಜಗತ್ತಿನ ಲಕ್ಷಣಗಳು.

ಶ್ರೀಲ ಪ್ರಭುಪಾದರು ಪ್ರತಿಯೊಂದು ಕೆಲಸದ ಮೂಲಕವೂ ಸರಳವಾಗಿ ಆಧ್ಯಾತ್ಮಿಕ ತತ್ತ್ವಗಳನ್ನು ಬಿತ್ತರಿಸುತ್ತಿದ್ದರು. ಭಕ್ತಿ ಸೇವೆ, ಸಾಧನೆ, ಮಂತ್ರಜಪ, ಸಂಕೀರ್ತನೆಗಳ ರೀತಿಯಲ್ಲೇ ಪುಸ್ತಕ ಸಂಕೀರ್ತನೆಯೂ ಕೃಷ್ಣಪ್ರಜ್ಞೆಯ ಪಥದಲ್ಲಿ ಮುನ್ನಡೆಸಬಲ್ಲದು ಎಂದು ಮನಗಾಣಿಸಿಕೊಳ್ಳುತ್ತಿದ್ದರು.

”ಪುಸ್ತಕ ಸಂಕೀರ್ತನೆ’ ಕೇವಲ ಪುಸ್ತಕ ಮಾರಾಟವಲ್ಲ, ಅದರ ಹಿಂದೆ ಇಂಥದೊಂದು ದರ್ಶನವೇ ಇದೆ ಎನ್ನುವುದಕ್ಕೆ ಈ ಮೇಲಿನ ನಿದರ್ಶನ ಸಾಕಲ್ಲವೇ?

“ಕರ್ಮಗಳನ್ನು ಮಾಡಲಿಕ್ಕಷ್ಟೇ ನಿನಗೆ ಹಕ್ಕಿದೆ. ಅದರ ಫಲಾಫಲಗಳ ಮೇಲೆ ನಿನಗೆ ಅಧಿಕಾರವಿಲ್ಲ. ನೀನು ಮಾಡುವ ಕರ್ಮಗಳ ಫಲಿತಾಂಶಕ್ಕೆ ನೀನೇ ಕಾರಣ ಎಂದು ತಿಳಿಯಬೇಡ ಮತ್ತು ಎಂದಿಗೂ ಕರ್ಮದಿಂದ ತಪ್ಪಿಸಿಕೊಳ್ಳುವ ಯೋಚನೆ ಮಾಡಬೇಡ.” (ಭಗವದ್ಗೀತೆ – 2.47)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi