– ದಶಂ
ಚೈತನ್ಯ ಮಹಾಪ್ರಭುಗಳು, ತಮ್ಮ ಸಂನ್ಯಾಸ ಸ್ವೀಕಾರದ ಅನಂತರ ನವದ್ವೀಪವನ್ನು ತೊರೆದು, ತೀರ್ಥಯಾತ್ರೆ ಕೈಗೊಂಡರು. ವೃಂದಾವನ ಮಥುರಾಗಳಿಗಿಂತ ಅವರು ಹೆಚ್ಚು ಕಾಲ ನೆಲಸಿದ್ದು, ಲೀಲಾ ಪ್ರಸಂಗಗಳನ್ನು ಮೆರೆದದ್ದು, ಜಗನ್ನಾಥ ಕ್ಷೇತ್ರವಾದ ಶ್ರೀಧಾಮ ಜಗನ್ನಾಥ ಪುರಿಯಲ್ಲಿ.

ಅವರ ವಾಸ್ತವ್ಯದ ಕಾಲದ ಹಲವಾರು ಲೀಲೆಗಳಲ್ಲಿ ಉತ್ಕಲದ ರಾಜ ಪ್ರತಾಪ ರುದ್ರನಿಗೆ ಅನುಗ್ರಹಿಸಿದ್ದು ಮತ್ತು ಗುಂಡೀಚಾ ಮಂದಿರದ ಮಾರ್ಜನ ಹಾಗೂ ಈ ಘಟನಾವಳಿಗಳ ಜೊತೆ ಮೇಳೈಸಿರುವ ಶ್ರೀಲ ಅದ್ವೈತ ಗೋಸ್ವಾಮಿ ಹಾಗೂ ಶ್ರೀಲ ನಿತ್ಯಾನಂದ ಪ್ರಭುಗಳ ವಿದ್ವತ್ಪೂರ್ಣ ವಿನೋದ ಸಂಭಾಷಣೆಗಳು. ಇದು ಚೈತನ್ಯ ಚರಿತಾಮೃತದ ರಸಘಟ್ಟಗಳಲ್ಲಿ ಒಂದು.
ಚೈತನ್ಯ ಚರಿತಾಮೃತದ ಮಧ್ಯಲೀಲಾದ – ಅಧ್ಯಾಯ 12ರ ಒಟ್ಟು 212 ದ್ವಿಪದಿಗಳಲ್ಲಿ ಹೊಮ್ಮಿರುವ ಈ ಕಥಾನಕ ಕಾವ್ಯ ಗುಣದಿಂದ, ತನ್ನೊಳಗಣ ತತ್ತ್ವ ವಿಚಾರದಿಂದ ಮೋಹಕವಾದ ಕಥನ ಶೈಲಿಯಿಂದ ಗಮನ ಸೆಳೆಯುತ್ತದೆ.
ಪುರಿ ಜಗನ್ನಾಥನ ರಥಯಾತ್ರೆಯ ಮುನ್ನ ಶ್ರೀಚೈತನ್ಯ ಮಹಾಪ್ರಭುಗಳು ಗುಂಡೀಚಾ ಮಾರ್ಜನ ನಡೆಸಿದರು. ಈ ಸಂದರ್ಭದಲ್ಲಿ ಮಹಾಪ್ರಭುಗಳ ಭಕ್ತವೃಂದವೇ ಅಲ್ಲಿ ನೆರೆದಿತ್ತು. ಈ ಭಕ್ತ ಮಹಾಪೂರದ ನಡುವೆ ಶ್ರೀ ಚೈತನ್ಯರು ಸೂರ್ಯನಂತೆ ಕಂಗೊಳಿಸುತ್ತಿದ್ದರು. ಮಹಾಪ್ರಭುಗಳ ಗುಣಗಾನ ಕೇಳಿದ ಪ್ರತಾಪರುದ್ರ, ಅವರ ದರ್ಶನಕ್ಕೆ ಉತ್ಕಂಠಿತನಾಗಿ ಪರಿತಪಿಸಲಾರಂಭಿಸಿದ.
ಒರಿಸ್ಸಾದ “ಕಟಕ್” ನ ರಾಜೋದ್ಯಾನ, ಶತಪಥ ತಿರುಗುತ್ತಿದ್ದ ರಾಜ ಗಂಭೀರ ವದನನಾಗಿ ಯೋಚಿಸುತ್ತಿದ್ದ; ನನ್ನನ್ನು ದೊರೆ ಎಂದೆನ್ನುತ್ತಾರೆ, ನಾಡಿನೊಡೆಯ. ಒರಿಯಾದ ಸಮಸ್ತ ಸಮಾಜ ಬಾಂಧವರು ಶ್ರೀ ಚೈತನ್ಯ ಮಹಾಪ್ರಭುಗಳನ್ನು ಕಂಡು ಸೇವಿಸಿ ಧನ್ಯರಾಗುತ್ತಿದ್ದಾರೆ.
ಪ್ರತಾಪ ರುದ್ರ ಹೆಸರೊಂದು ಅಂಟಿಕೊಂಡು, ನಾನು ಈ ರಾಜಕೀಯ ಶಿಷ್ಟಾಚಾರಗಳಿಗೆ ರಾಜಧರ್ಮದ ವೈವಿದ್ಯಗಳಿಗೆ ಗಂಟು ಬೀಳದಿದ್ದರೆ, ಪ್ರಭುಗಳ ದರ್ಶನಕ್ಕೆ ಧಾವಿಸಬಹುದಿತ್ತು. ಈಗೇನು ಮಾಡಲಿ? ನನ್ನ ಧರ್ಮಾನುಸಾರ ಪತ್ರ ಬರೆದು, ಅನುಮತಿ ಕೇಳಿ, ಪ್ರಭುಗಳನ್ನು ಸಂದರ್ಶಿಸುವೆ.
ಇಂದೇ ಕರಣಿಕರ ಕೈಲಿ ರಾಜಮುದ್ರಾಂಕಿತ ಶ್ರೀಮುಖ ರವಾನಿಸುತ್ತೇನೆ. ಸಾರ್ವಭೌಮ ಭಟ್ಟಾರಕರಿಗೆ ತಲಪಲಿ. ಈ ರೀತಿ ಎರಡು ಮೂರು ಬಾರಿ ಬರೆದಿದ್ದಾಗಿದೆ. ಉತ್ತರದಲ್ಲಿ ಮತ್ತೊಮ್ಮೆ ಪತ್ರ ಬರೆಯಿರೆನ್ನುವ ಒಕ್ಕಣೆ. ಭೇಟಿಗೆ ಬಾ ಎಂಬ ನಿರ್ದೇಶನವಿಲ್ಲ.
ಈ ಬಾರಿ ಮಹಾಪ್ರಭುಗಳು ಸಮಸ್ತ ಭಕ್ತರಲ್ಲಿ ವಿಜ್ಞಾಪನೆ ಮಾಡಿಕೊಳ್ಳಬೇಕು, ಅದರಂತೆ ಸಾನಿಧ್ಯದಲ್ಲಿ ಬಿನ್ನವತ್ತಳಿಕೆ ಸಲ್ಲಿಸಲು ಕರಣಿಕರಿಗೆ ತಿಳಿಸಬೇಕು. ಮನಸ್ಸಿನಲ್ಲಿ ನಿಶ್ಚಯವು ಒಡಮೂಡಿದಂತೆ ರಾಜನ ಮುಖ ಪ್ರಸನ್ನವಾಯಿತು. ಲಗುಬಗೆಯಿಂದ ಅರಮನೆಯತ್ತ ಹೊರಟ.
ಜಯ ಜಯ ಶ್ರೀವಾಸಾದಿ ಗೌರಭಕ್ತ ಗಣ|
ಶಕ್ತಿದೇಹ ಕರಿಯೇನ ಚೈತನ್ಯ ವರ್ಣನ ||
ಪತ್ರದ ಒಕ್ಕಣೆಯನ್ನು ಜೋರಾಗಿ ಓದಿದರು ಭಟ್ಟಾಚಾರ್ಯರು. “ದಕ್ಷಿಣ ಭಾರತ ಯಾತ್ರೆಯ ತರುವಾಯ ಮಹಾಪ್ರಭುಗಳು ಪುನರಾಗಮಿಸಿದ್ದಾರೆ. ಅವರ ಭೇಟಿಗೆ ನಾನು ಕಾತರನಾಗಿದ್ದೇನೆ.” ಪತ್ರ ಓದುತ್ತಾ ಓದುತ್ತಾ, ಮಹಾಪ್ರಭುಗಳ ಭಕ್ತ ವೃಂದದ ಸಮೀಪಕ್ಕೆ ಧಾವಿಸಿದರು.
ಎಲ್ಲರೆದುರು ಪತ್ರ ವಾಚನ ಮುಂದುವರಿಯಿತು. “ಶ್ರೀ ಚೈತನ್ಯ ಮಹಾಪ್ರಭುಗಳ ಪಾದಕಮಲಗಳಲ್ಲಿ ದೊರೆಯು ಭಕ್ತಿಯ ಪರಿ”ಯ ಕಾಣಿಸಿದ ಪತ್ರದಿಂದ ಎಲ್ಲರೂ ವಿಸ್ಮಿತರಾದರು. “ಗೌರ ಹರಿಯಾದ ಚೈತನ್ಯ ಮಹಾಪ್ರಭು ಕೃಪೆ ತೋರಿ, ನನ್ನ ಭೇಟಿಗೆ ಸಮ್ಮತಿಸಲಿ, ಇಲ್ಲವಾದರೆ ನಾನು ರಾಜ್ಯ ತೊರೆದು, ದಂತ ಬಳೆ ಧರಿಸುವ ಹಾಗೆ ಕಿವಿಚುಚ್ಚಿಕೊಂಡು ಯೋಗ ದೀಕ್ಷೆ ಧರಿಸಿ ಮಧುಕರಿ ಮಾಡುತ್ತಾ ಅಂಡಲೆಯುತ್ತೇನೆ.
ಪ್ರಭುವಿನ ಪಾದಕಮಲಗಳ ಆಶ್ರಯ, ಕೃಪೆಯ ಭಿಕ್ಷೆ ಇಲ್ಲದ ಮೇಲೆ ರಾಜ್ಯವೇಕೆ? ಅದರ ಭೋಗವೇಕೆ?
ವಿನಯದಿಂದ ತುಂಬಿದ ಕಳಕಳಿಯ ಮನವಿಗೆ ಎಲ್ಲರ ಮನ ಕಲಕಿತು. ಭಟ್ಟಾಚಾರ್ಯರೇ ನುಡಿದರು. “ನಡೆಯಿರಿ ಮತ್ತೊಮ್ಮೆ ಭಕ್ತ ವೃಂದವೆಲ್ಲಾ ಸೇರಿ ಪ್ರಭುವಿನಲ್ಲಿ ಅರಿಕೆ ಮಾಡಿಕೊಳ್ಳೋಣ” ಗೌರ ಭಕ್ತರೆಲ್ಲಾ ಪ್ರಭುವಿನ ಸಾನ್ನಿಧ್ಯ ತಲಪಿದರು.
ತೇಜಃಪುಂಜರಾದ, ನೀಲಕಾಯದ, ಗೌರ ವರ್ಣದ ಮಹಾಪ್ರಭು, ಪರಮ ಕರುಣಾಮಯಿ. ಭಕ್ತರಿಗಾಗಿ ಆರ್ದ್ರ ಪೂರಿತ ಅಂತಃಕರಣದಿಂದ ಕಾರುಣ್ಯಪೂರಿತ ದೃಷ್ಟಿ ಬೀರಿ ವಿಶ್ವಾಸದಿಂದ ನಸುನಗುತ್ತಾ, “ಏನೋ ಹೇಳಲು ಬಂದಿದ್ದೀರಿ! ಆದರೆ ನೀವು ಬಾಯಿ ಬಿಡುತ್ತಿಲ್ಲವಲ್ಲ! ಹೇಳಿ, ಏನು ಬಂದಂತಹ ಕಾರಣ?” ಮೃದು ಮಾತಿನ ಶೀತಲ ಸ್ಪರ್ಶಕ್ಕೆ ಎಲ್ಲರೂ ತಡವರಿಸಿದರು. ಪ್ರಭುಗಳ ಅನನ್ಯ ಸಹವರ್ತಿ ಶ್ರೀ ನಿತ್ಯಾನಂದರು ಅರುಹಿದರು.
“ಅರಿಕೆ ಮಾಡಿಕೊಳ್ಳಲೆಂದೇ ಬಂದೆವು. ಬಿನ್ನಹಕೆ ಬಾಯಿಲ್ಲವಾಗಿದೆ. ಮಾತಾಡೋಣವೆಂದರೆ ತಮ್ಮ ಮೇಲಿನ ಗೌರವ ಭಯಗಳು ಬಿಡುತ್ತಿಲ್ಲ. ಮಾತಾನಾಡದಿದ್ದರೆ ಬೇರೆ ಉಪಾಯವೇ ಇಲ್ಲ. ದಯವಿಟ್ಟು ಅನುಗ್ರಹಿಸಬೇಕು.” ಮಹಾಪ್ರಭುಗಳ ಪ್ರೇಮಪೂರಿತ ನೋಟದಿಂದ ಉತ್ಕರ್ಷಿತರಾಗಿ ನಿತ್ಯಾನಂದ ಪ್ರಭುಗಳು ಅರಿಕೆ ಮಾಡಿದರು.

“ನಮ್ಮ ಬಿನ್ನಹದ ಔಚಿತ್ಯದ ಅರಿವು ನಮಗಿಲ್ಲ. ಒರಿಸ್ಸಾದ ರಾಜನಾದ ಪ್ರತಾಪ ರುದ್ರದೇವನು ತಮ್ಮ ದರ್ಶನಕಾಂಕ್ಷಿಯಾಗಿದ್ದಾನೆ. ದರ್ಶನ ಭಾಗ್ಯ ಕರುಣಿಸದಿದ್ದರೆ ಭಿಕ್ಷು ಆಗಲಿದ್ದಾನೆ.”
ದೇಖಿಖ ಸೇ ಮುಖ ಚನ್ದ್ರ ನಯನ ಭರಿಯಾ |
ಧರಿಬಾ ಸೇ ಪಾದ ಪದ್ಮ ಹೃದಯೇ ಕುಲಿಯಾ ||
”ತಮ್ಮ ಮುಖಚಂದ್ರಮನ ನಯದಲಿ ಇರಿಸಿ, ಹೃದಯದಲಿ ತಮ್ಮ ಪಾದ ಕಮಲವನ್ನು ಧರಿಸಿ, ಮುಡಿ ಬಾಗಿ ಕೈ ಜೋಡಿಸಿ ಬೇಡಿದ್ದಾನೆ ಕರುಣಿಸಿರಿ” ನಿತ್ಯಾನಂದ ಪ್ರಭುಗಳು ಭಕ್ತರೆಲ್ಲರ ಪರವಾಗಿ ವಿನಂತಿಸಿದರು, ಸ್ವಭಾವತಃ ಪರಮ ಕರುಣಾಮೂರ್ತಿಗಳಾದ ಮಹಾಪ್ರಭುವಿನ ಅಂತರಂಗ ಭಕ್ತರ ಮೇಲಿನ ಪ್ರೇಮದಿಂದ ತುಂಬಿಬಂತು. ಆದರೂ ಬಹಿರಂಗವಾಗಿ ಒಂದೆರಡು ಕಠಿಣ ಮಾತುಗಳನ್ನಾಡಲು ಅವರು ಇಚ್ಛಿಸಿದರು.
”ಆಧ್ಯಾತ್ಮಿಕತೆಯ ಮಾತು ಬದಿಗಿರಲಿ ಆಚೆ,
ದಾಮೋದರರೂ ಸೇರಿ ಕುಟುಕದಿಹರೆ ಲೌಕಿಕರು ಈಚೆ”
ದಾಮೋದರರು ರಾಜನೀತಿ, ಲೋಕನೀತಿಗಳನ್ನು ಬಲ್ಲವರು. ಧರ್ಮನೀತಿ ಪ್ರವೀಣರೂ ಸಹ. ಹಾಗಾಗಿ ಪ್ರಭುಗಳು ಈ ಚಟಾಕಿ ಹಾರಿಸಿದರು. ದಾಮೋದರರು ಒಪ್ಪಿಗೆ ಇತ್ತರೆ ಮಾತ್ರ ದೊರೆಯ ಭೇಟಿ ಎಂದು ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದರು.
ದಾಮೋದರ ಪಂಡಿತರು ಶ್ರೇಷ್ಠ ಭಕ್ತರು, ಮಹಾಪ್ರಭುಗಳ ಸ್ವಭಾವಕ್ಕೆ ತಟ್ಟುವಂತಹ ಅಥವಾ ಬಾಧಕವಾಗುವಂತಹದೇನಾದರೂ ನಡೆದಾಗ, ಆ ಕ್ಷಣವೇ ಬೊಟ್ಟು ಮಾಡಿ ತೋರಿಸುತ್ತಿದ್ದರು. ಭಕ್ತರಾಗಿ, ಪ್ರಭುಗಳನ್ನು ಟೀಕಿಸುವ ಕೆಲಸಕ್ಕೆ ಕೈ ಹಾಕಬಾರದೆಂದು ಎಚ್ಚರಿಸುವ ಧ್ವನಿ ಪ್ರಭುಗಳ ಮಾತಿನಲ್ಲಡಗಿತ್ತು.
ದಾಮೋದರ ಪ್ರಭುಗಳು ಶ್ರೀ ಚೈತನ್ಯರ ಬಗೆಗೆ ತುಂಬ ಪ್ರೇಮವಿಟ್ಟುಕೊಂಡಿದ್ದರು. ಅವರ ಶ್ರದ್ಧೆ ಪ್ರಶ್ನಾತೀತ, ಕೂಡಲೇ ಅವರೆಂದರು,”ತಾವು ಸರ್ವತಂತ್ರ ಸ್ವತಂತ್ರನಾದ ಆ ದೇವೋತ್ತಮ ಪರಮ ಪುರುಷನೇ ಸೈ! ನಿಮಗೆ ಯುಕ್ತಾ ಯುಕ್ತತೆ ಹೇಳಲು ಸಾಧ್ಯವೇ? ನಾನಾದರೋ, ಗಣನೆಗೆ ನಿಲುಕದ ಒಬ್ಬ ಸಾಧಾರಣರಲ್ಲಿ ಅತಿ ಸಾಧಾರಣ.
ಹೀಗಿರುತ್ತಾ, ತಮಗೆ ಶಾಸನ ವಿಧಿಸುವ ಧಾರ್ಷ್ಟ್ಯವೆಲ್ಲಿಯದು? ನೀವೇ ನಿಮ್ಮ ಸ್ವಂತ ನಿರ್ಧಾರದ ಮೇಲೆ ರಾಜನನ್ನು ಭೇಟಿ ಮಾಡುವಿರಾದಲ್ಲಿ ನಾನು ಅದನ್ನು ನೋಡಿ ಸಂತಸ ಪಡಬಹುದಷ್ಟೆ.”
ಚತುರರೂ ಆದ ಪಂಡಿತರು ಮುಂದುವರಿಸಿದರು.
“ದೊರೆಗೆ ನಿಮ್ಮಲ್ಲಿ ತುಂಬ ಅಕ್ಕರೆಯಿದೆ. ನೀವಾದರೂ ಅವನ ವಿಷಯದಲ್ಲಿ ಪ್ರೀತಿ ವಾತ್ಸಲ್ಯವುಳ್ಳವರೇ, ಅವನ ಅಕ್ಕರೆಯ ಪಾವಿತ್ರ್ಯದಿಂದಾಗಿ, ತಾವು ಅವನನ್ನು ಮುಟ್ಟುವಿರಿ, ಎಂದು ನಾನು ಅರ್ಥಮಾಡಿಕೊಂಡಿರುವೆ. ತಾವು ದೇವೋತ್ತಮ ಪರಮ ಪುರುಷರು. ಆದರೂ ತಾವು ಭಕ್ತರ ಪ್ರೀತಿ ವಿಶ್ವಾಸಗಳನ್ನು ಅವಲಂಬಿಸಿಕೊಂಡಿದ್ದೀರಿ. ಇದು ತಮ್ಮ ಔದಾರ್ಯವಂತ ಸ್ವಭಾವ.”
ಹೀಗೆ ಗುರುಶಿಷ್ಯರ ಸಲ್ಲಾಪ ಸಾಗಿದ್ದಾಗ ಪ್ರಭು ನಿತ್ಯಾನಂದರು, ಮಧ್ಯೆ ಪ್ರವೇಶಿಸಿ ”ತಾವು ಅಪೇಕ್ಷೆಪಟ್ಟ ವಸ್ತುವು ಕೈವಶವಾಗದಿದ್ದಾಗ, ತನ್ನ ಪ್ರಾಣವನ್ನಾದರೂ ತೊರೆಯುವುದು ಅನುರಕ್ತನಾದವನ ಸ್ವಭಾವವಲ್ಲವೇ? ಅದಾಗ್ಯೂ ನೀವು ಹೋಗಿ ರಾಜನನ್ನು ಕಾಣಿರಿ ಎಂದು ನಿರ್ದೇಶಿಸುವ ಧೈರ್ಯ ಮೂರು ಲೋಕದಲ್ಲಿ ಯಾರಿಗಿದೆ? ನನಗೊಂದು ದಾರಿ ಕಾಣಿಸುತ್ತಿದೆ.
ಅದರಂತೆ ಆದಲ್ಲಿ ದೊರೆಯ ಭೇಟಿಯು ನಡೆಯದೆ, ದೊರೆಯ ಪ್ರಾಣವೂ ಹೋಗದೆ ಇರಬಹುದು.” ಎಲ್ಲರೆಡೆಗೆ ಅವರು ದೃಷ್ಟಿ ಹಾಯಿಸಿದರು.
ಕುತೂಹಲಭರಿತರಾಗಿ ತಮ್ಮನ್ನೇ ನೋಡುತ್ತಿದ್ದ ಭಕ್ತರೆಲ್ಲರ ಮನಸಿನ ಆಸೆಗಳಿಗೆ ಬುದ್ಧಿಯ ಚಮತ್ಕಾರದಿಂದ ಪರಿಹಾರ ಸೂಚಿಸಲು ಮುಂದಾಗಿ ಪ್ರಭುಗಳತ್ತ ತಿರುಗಿ, ”ತಾವು ಧರಿಸುವ ಬಹಿರುಡುಗೆಯ ಒಂದು ಜೊತೆಯನ್ನು ರಾಜನಿಗೆ ಕಳುಹಿಸಿ ಕೊಡುವ ಕೃಪೆ ತೋರಬೇಕು, ತಮ್ಮ ದರ್ಶನ ಮುಂದೆಂದಾದರೂ ಆಗುವುದೆಂಬ ಆಸೆ ರಾಜನಲ್ಲಿ ಬಲವಾಗಿ ಉಳಿದು, ಬದುಕುಳಿಯುತ್ತಾನೆ.”
ಏಕ ಬಹಿರ್ವಾಸ ದೇಹ ಕೃಪಾಕರಿ
ತಾಹ ಪಾಞ ರಾಣಾ ರಾಜೇ ತೇಮಾರ ಆಶಾಧರಿ
ಬದುಕಬಹುದು, ರಾಜ, ತಮ್ಮ ದರ್ಶನದ ಆಸೆಯಿಂ ಭರಿಸಿ
ತಾವು ಒಂದು ಜೊತೆ ಬಹಿರುಡುಗೆ ಕೃಪೆಯಿಂದ ಅನುಗ್ರಹಿಸಿ!
“ನೀವೆಲ್ಲರೂ ಶ್ರೇಷ್ಠರಾದ ವಿದ್ವಾಂಸರು. ನಿಮ್ಮೆಲ್ಲರ ಮನಸ್ಸಿಗೆ ಬ೦ದ ನಿರ್ಧಾರದಂತೆ ನಾನೀ ಸಲಹೆಗೆ ಒಪ್ಪುತ್ತೇನೆ” ಎಂದು ಮಹಾ ಪ್ರಭುಗಳು ಶಿಷ್ಯರೆದುರು ಘೋಷಿಸಿದರು.

ಕೂಡಲೇ ನಿತ್ಯಾನಂದ ಪ್ರಭುಗಳು ಮಹಾಪ್ರಭುಗಳ ಆತ್ಮೀಯ ಸೇವಕನಾದ ಶ್ರೀ ಗೋವಿಂದೇರ ಪಾಶನಿಗೆ ಬಿನ್ನವಿಸಿ ಒಂದು ಜೊತೆ ಹೊರಉಡುಗೆ ಧರಿಸಿ ಸಾರ್ವಭೌಮ ಭಟ್ಟಾಚಾರ್ಯರಿಗೆ ವಸ್ತ್ರವನ್ನು ಕೊಟ್ಟರು. ಆಚಾರ್ಯರ ಮೂಲಕ ಅದು ರಾಜನಿಗೆ ತಲಪಿತು.
“ಆಹಾ ನನ್ನ ಭಾಗ್ಯವೇ! ಮಹಾತ್ಮರ ದರ್ಶನಕ್ಕಾಗಿ ಹಂಬಲಿಸಿದರೆ ಅವರ ಸಾನಿಧ್ಯವನ್ನು ಸರ್ವದಾ ನೆನಪಿಗೆ ತರುವ ಅವರ ಬಹಿರುಡುಗೆಯು ನನಗೆ ಅನುಗ್ರಹವಾಗಿದೆ. ಹೌದು! ಹಿರಿಯರು ಹೇಳುತ್ತಿದ್ದರು ಕೃಷ್ಣನು ಪೂಜಾರ್ಹನಾದಂತೆಯೇ, ಅವನಿಗೆ ಸಂಬಂಧಿಸಿದ ಸಮಸ್ತ ವಸ್ತು ಪರಿಕರಗಳು ಪೂಜಾರ್ಹರೇ!
ಅವನ ಧಾಮವಾದ ವೃಂದಾವನವೂ ಪೂಜಾರ್ಹವೇ? ಅಲ್ಲಿನ ಮರಗಳು, ಗಿಡಗಳು, ದನಕರುಗಳು, ಬೀದಿಗಳು, ಬೆಟ್ಟಗುಡ್ಡಗಳು, ನದಿತೊರೆಗಳು ಪ್ರತಿಯೊಂದೂ ಪೂಜಾರ್ಹವೇ! ಹಾಗಾಗಿಯೇ ಅಲ್ಲವೇ ಭಕ್ತರು ಹಾಡುವುದು
ಜಯ ಜಯ ವೃಂದಾವನ ವಾಸೀಯತ ಜನಃ
ವೃಂದಾವನ ವಾಸಿಗಳಿಗೆ ಸರ್ವಮಂಗಳವೂ ಸಿದ್ಧಿಸಲಿ.
ಆರಾಧನಂ ಸರ್ವೇಷು ವಿಷ್ಣೋ ಆರಾಧನಂ ಪರಂ;
ತಸ್ಮಾತ್ ಪರತರಂ ದೇವೀ ತದೀಯಾನಾಂ ಸಮಾರ್ಚನಂ
ಪುರಾಣಿಕರು ಪದ್ಮಪುರಾಣದ ಈ ವಾಕ್ಯ ವಿಶ್ಲೇಷಿಸುತ್ತಾ ಶಿವನು ಸ್ವತಃ ‘ತದೀಯಾನಾಮ್’ ಎಂದಿದ್ದನ್ನು ವಿವರಿಸಿರಲಿಲ್ಲವೇ? ಜಗತ್ತಿನಲ್ಲೆಲ್ಲಾ ಘನತೆವೆತ್ತ ಪೂಜೆಯೆಂದರೆ ವಿಷ್ಣುವಿನ ಪೂಜೆ. ಇದನ್ನು ಮೀರಿದ ಪೂಜೆಯೆಂದರೆ ತದೀಯಾ ಪೂಜೆ. ಹಾಗೆಂದರೆ ವಿಷ್ಣುವಿಗೆ ಸಂಬಂಧಿಸಿದ ಪರಿಕರಗಳ ಪೂಜೆ.
ಇದೇ ರೀತಿ ಭಗವಂತನ ಅಂತರಂಗಕ್ಕೆ ಹತ್ತಿರನಾದವನು ದಾಸ ಗುರು ಮತ್ತು ಸಮಸ್ತ ವೈಷ್ಣವರು. ವೈಷ್ಣವರು ಬಳಸುವ ವಸ್ತುಗಳೂ ಗುರುಗಳು ಬಳಸುವ ವಸ್ತುಗಳು. ಹಾಗಾಗಿ ‘ತದೀಯಾ’ ಇದು ಪೂಜಾರ್ಹವಾದದ್ದು, ಭಕ್ತಿಸೇವೆಯನ್ನು ಮೈಗೂಡಿಸಿಕೊಂಡು ಕೃಷ್ಣಪ್ರಜ್ಞೆಯನ್ನು ಜೀವನ ಧರ್ಮ ಮಾಡಿಕೊಳ್ಳುವ ಕಾತರ ಬೀಳುವ ನನಗೆ ಹಾಗಾಗಿ ಈ ಬಹಿರುಡುಗೆ ಒಂದು ಮಹಾಶಿರ್ವಾದ!”
ಯಸ್ಯದೇವೇ ಪರಾಭಕ್ತಿರ್ ಯಥಾದೇವೇ ತಥಾಗುರೌ |
ತಸ್ಸೈತೇ ಕಥಿತಾ ಹ್ಯರ್ಥಾಃ ಪ್ರಕಾಶಂತೇ ಮಹಾತ್ಮನಃ ||
ಪ್ರಭು ಹಾಗು ಗುರು ಈ ಇಬ್ಬರಲ್ಲಿ ಯಾರಿಗೆ ಪೂರ್ಣ ವಿಶ್ವಾಸವುಂಟೋ ಅಂತಹ ಮಹಾತ್ಮರಿಗೆ ಮಾತ್ರ ವೈದಿಕ ಜ್ಞಾನದ ಎಲ್ಲ ಭಾವಗಳು ವಿದಿತವಾಗುತ್ತವೆ. ಇದಲ್ಲವೆ ಶ್ವೇತಾಶ್ವತರ ಉಪನಿಷತ್ತಿನ ಈ ತಾತ್ಪರ್ಯದರ್ಥ; ಮಹಾಪ್ರಭುಗಳ ಬಹಿರುಡುಗೆ ನನ್ನ ಆಧ್ಯಾತ್ಮಿಕ ಜೀವನಕ್ಕೆ ಹೊಸ ಅರ್ಥ, ಬೆಳಕಾಗಿದೆ. ನಾನಿದನ್ನು ಪೂಜಿಸುತ್ತೇನೆ. ಹೇಗೆ ಮಹಾಪ್ರಭುಗಳನ್ನು ಸೇವಿಸುತ್ತಿದ್ದೇನೆಯೋ, ಹಾಗೆಯೇ ಈ ವಸ್ತುಗಳನ್ನು ಸೇವಿಸುತ್ತೇನೆ.”
ರಾಜ ಪ್ರತಾಪ ರುದ್ರ ದೀರ್ಘವಾದ ಚಿಂತನೆಯಿಂದ ಮೈಕೊಡವಿ ಎದ್ದ. ಮಹಾಪ್ರಭುಗಳ ಬಹಿರುಡುಗೆಗೆ ಸಾಷ್ಟಾಂಗ ನಮಸ್ಕರಿಸಿ, ರಾಜಾತಿಥ್ಯದಿಂದ ಬರಮಾಡಿಕೊಂಡು ಪೂಜಿಸಲಾರಂಭಿಸಿದ.
ರಾಜತಾಂತ್ರಿಕರಾಗಿ ರಾಜ ಸಭೆಯಲ್ಲಿದ್ದ ರಾಮಾನಂದ ರಾಯರಿಗೆ ಮಹಾಪ್ರಭುಗಳ ಸೇವೆ ಮಾಡುತ್ತಾ ಅವರ ಜೊತೆಯೇ ಇದ್ದುಬಿಡುವ ಆಸೆಯಾಯಿತು. ದಕ್ಷಿಣ ಭಾರತದ ಪ್ರವಾಸದ ಅನಂತರ ಒಂದು ದಿನ ರಾಜನಲ್ಲಿ ಈ ಕುರಿತು ಪ್ರಸ್ತಾವಿಸಿ ಅನುಮತಿ ಕೋರಿದರು.
ರಾಜನು ಸಂತಸದಿಂದ ಒಪ್ಪಿಗೆ ಕೊಟ್ಟ. ತನ್ನಂತರಂಗದ ಆಸೆಯಾದ ಮಹಾಪ್ರಭುಗಳ ದರ್ಶನಕ್ಕೆ, ಅವರ ಸಾನ್ನಿಧ್ಯದಲ್ಲೇ ಇರುವ ರಾಮಾನಂದ ರಾಯರು ವ್ಯವಸ್ಥೆ ಮಾಡಿಯಾರು ಎಂಬುದು ರಾಜನ ದೂರದ ಆಸೆ. ಇದೇ ನಿರೀಕ್ಷೆಯಲ್ಲಿ ಕಾಲಾಯಾಪನೆ ಮಾಡುತ್ತಿದ್ದ.
ಮಹಾಪ್ರಭು ಮಹಾಕೃಪ ಕರೋನ ತೋಮಾರೇ
ಮೋರೇ ಮಿಲಿಬಾರೇ ಅವಶ್ಯ ಸಾಧತೇ ತಾಜ್ ಹಾರೇ
ತಮ್ಮ ಮೇಲೆ ಮಹಾಪ್ರಭುವಿನ ಕೃಪೆ ಅಪಾರ!
ಪ್ರಾರ್ಥಿಸಿ ಕರುಣಿಸಲಿ, ನನಗೂ ಕೃಪೆ ದರ್ಶನ ದ್ವಾರ!
ಇದೇ ಆಕಾಂಕ್ಷೆಯನ್ನು ಹೊತ್ತು ರಾಜನು ಪುರಿ ಕ್ಷೇತ್ರಕ್ಕೆ ರಾಮಾನಂದ ರಾಯರ ಜೊತೆ ಬಂದಿಳಿದನು. ರಾಮಾನಂದ ರಾಯರೊಬ್ಬರೆ, ಚೈತನ್ಯ ಮಹಾಪ್ರಭುಗಳ ದರ್ಶನಕ್ಕೆ ಧಾವಿಸಿದರು. ಆಗ ರಾಜನಿಗೆ ಮಹಾಪ್ರಭುಗಳ ಬಗೆಗಿರುವ ದೈವೋನ್ಮಾದ ಪೂರಿತ ಪ್ರೇಮದ ಪರಿಯನ್ನು ವಿವರಿಸಿ ಮನವರಿಕೆ ಮಾಡಿದರು.
ಸಮಯ ಸಿಕ್ಕಾಗಲೆಲ್ಲಾ ರಾಜನ ಭಕ್ತ ಮಾನಸಿಕತೆಯ ಬಗ್ಗೆ ವಿವರಿಸತೊಡಗಿದರು. ಮೊದಲೇ ರಾಜತಾಂತ್ರಿಕ ನಿಪುಣರಲ್ಲವೇ? ಸಮಯ ಸಂದರ್ಭ ನೋಡಿ ರಾಜನ ಬಗೆಗೆ ಪ್ರಭುಗಳ ಮನಸ್ಸು ಮೃದುಗೊಳಿಸಿದರು. ಪ್ರಭುಗಳ ಭಕ್ತಿಸೇವೆಯಲ್ಲಿ ಬಳಸಿದ ಅವರ ರಾಜತಾಂತ್ರಿಕ ಕೌಶಲವು ಅವರ ಭಕ್ತಿಸೇವೆಯ ಒಂದು ರೂಪವೇ ಸರಿ.

ದೊರೆಗಾದರೂ, ತನ್ನ ಆಕಾಂಕ್ಷೆ ಕೈಗೂಡದೇ ಸಂಕಟವಾಗತೊಡಗಿತು. ನೇರವಾಗಿಯೇ ರಾಮಾನಂದರಾಯರು ಶ್ರೀ ಚೈತನ್ಯ ಮಹಾಪ್ರಭುಗಳಲ್ಲಿ ನಿವೇದಿಸಿಕೊ೦ಡರು, ‘ಒಮ್ಮೆಯಾದರೂ ಪ್ರತಾಪರುದ್ರದೇವನಿಗೆ ನಿಮ್ಮ ಪಾದಕಮಲಗಳನ್ನಾದರು ತೋರಿಸಿ” “ಸಂನ್ಯಾಸಿಯಾಗಿರುವನು ರಾಜನನ್ನು ಭೇಟಿಯಾದರೆ ರಾಜಧರ್ಮ ಪರಿಪಾಲಿಸಲು ಅವನಿಗೆ ಕಷ್ಟವಾಗಬಹುದು.
ರಾಜನ ಲೌಕಿಕ ಮತ್ತು ಪಾರಮಾರ್ಥಿಕ ಜೀವನಗಳೆರಡೂ ಹಾಳಾದಂತೆಯೇ! ಲೋಕದ ಜನರ ಉಪಹಾಸ್ಯಕ್ಕೆ ದಾರಿಯಾಗುತ್ತೆ” ಎಂಬ ಮಹಾಪ್ರಭುಗಳ ಮಾತಿಗೆ ರಾಮಾನಂದರು ”ತಾವು ದೇವೋತ್ತಮ ಪರಮ ಪುರುಷ, ತಾವು ಯಾರಿಗೂ ಯಾವುದಕ್ಕೂ ಅಂಜಬೇಕಿಲ್ಲ” ಎಂದು ಸಮಜಾಯಿಷಿ ನೀಡಿದರು.
ಶುಕ್ಲವಸ್ತ್ರೇ ಮಸಿಬಿನ್ದು ಯೈ ಛೇ ನಾ ಲುಕಾಯ
ಸಂನ್ಯಾಸೀರ ಅಲ್ಪಸರ್ವ ಲೋಕೇ ಗಾಯ
ಜಗದ ಕಣ್ಣಿಗೆ ಸಂನ್ಯಾಸಿಯ ಸಣ್ಣ ಕುಂದು,
ಶುಭ್ರ ವಸ್ತ್ರದ ಮೇಲಿನ ಮಸಿಯ ಸಣ್ಣ ಬಿಂದು!
ಪ್ರಭು ಕಹೇ ಪೂರ್ಣ ಯೈ ಛೇ ರುಣ್ದೇರ ಕಲಸ
ಸುರಾಬಿನ್ದು ಪಾತೇ ಕೇಯಾ ನಾ ಕರೇ ಪರಶ
ಕ್ಷೀರ ತುಂಬಿದ ಪಾತ್ರೆಗೆ ಹಳವಂಡದ ಬಿಂದು
ಬಿದ್ದರಾಯ್ತು ಮುಟ್ಟರಾರು ಪಾವಿತ್ರ್ಯಕ್ಕೆ ಕುಂದು
“ಸಂನ್ಯಾಸಿಯು ಪರಮ ಶುಭನಾಗಿರಬೇಕು. ಅವನಲ್ಲಿನ ಒಂದು ಸಣ್ಣ ಕುಂದು ಸಹ ಶುಭ್ರ ಬಟ್ಟೆಯ ಮೇಲಿನ ಕಪ್ಪು ಚುಕ್ಕೆಯಂತೆ ಎದ್ದು ಕಾಣಿಸುತ್ತದೆ. ಜನರ ಬಾಯಲ್ಲಿ ಕಾಳ್ಗಿಚ್ಚಾಗಿ ಹರಡುತ್ತದೆ. ಹಾಲು ತುಂಬಿದ ಪಾತ್ರೆಗೆರಡು ಬಿಂದು ಹಳವಂಡ ಬಿದ್ದರೆ, ಅದನ್ನು ಯಾರೂ ಮುಟ್ಟಲಾರರು”
“ರಾಜನು ಸದ್ಗುಣಿ, ನನ್ನ ಭಕ್ತ, ದಾಸ ಇರಬಹುದು ಆದರೆ ಅವನು ರಾಜ. ನಿಮ್ಮ ಆಗ್ರಹವು ಅವನನ್ನು ಭೇಟಿಯಾಗಲೇ ಬೇಕೆಂದಿದ್ದರೆ ಅವನ ಮಗನನ್ನು ಭೇಟಿಯಾಗುವೆ.”
ಆತ್ಮಾ ವೈ ಜಾಯಿತೇ ಪುತ್ರಃ ತಈ ಶಾಸ್ತ್ರ ವಾಣೀ
ಪುತ್ರೇರ ಮಿಲನೇ ಯೇನ ಮಿಲಿಬೇ ಆಪನಿ
ಸುತನೇ ಪಿತನ ಸಮರ್ಥ ಪ್ರತಿನಿಧಿ ಎಂದಿದೆ ಧರ್ಮಸೂತ್ರ
ರಾಜನ ಭೇಟಿಯಂತೆಯೇ ಭೇಟಿ ಮಾಡಲಿ ನನ್ನ ರಾಜಪುತ್ರ
ರಾಮಾನಂದರಾಯರು ಪ್ರತಾಪರುದ್ರದೇವನಿಗೆ ಇವೆಲ್ಲವನ್ನು ವಿವರಿಸಿದರು. ”ಶ್ರೀಮದ್ಭಾಗವತದಲ್ಲೂ ಸಹ, ಆತ್ಮಾವೈ ಪುತ್ರ ಉತ್ಪನ್ನ ಇತಿ ವೇದಾನುಶಾಸನಮ್ ವ್ಯಕ್ತಿಯು ತಾನೇ ತನ್ನ ಮಗನಾಗಿ ಹುಟ್ಟಲಿ ಎಂದು ವೇದಗಳು ಆಜ್ಞಾಪಿಸುತ್ತವೆ. ತಂದೆ ಬೇರೆಯಲ್ಲ, ಮಗ ಬೇರೆಯಲ್ಲ, ಇದು ನೀನು ಒಪ್ಪಿಕೋ” ಎಂದರು. ದೊರೆಯು ಒಪ್ಪಿ ತನ್ನ ಮಗನನ್ನು ಭೇಟಿಗೆ ಕಳುಹಿಸಿದ.
ಆಗ ತಾನೇ ತಾರುಣ್ಯಕ್ಕೆ ಕಾಲಿಡುತ್ತಿದ್ದ ಮಿರಮಿರನೆ ಮಿಂಚುವ ಕಪ್ಪು ಬಣ್ಣದ ಮೈಯ ಕಟ್ಟಿನ ತಾವರೆಯ ಕಂಗಳ ರಾಜೋಚಿತ ಉಡುಗೆಯ ರಾಜಕುಮಾರ ಮಹಾಪ್ರಭುಗಳ ದರ್ಶನಕ್ಕೆ ಬಂದ. ಅವನನ್ನು ನೋಡಿದವರೆಲ್ಲಾ ಉದ್ದೀಪನಗೊಂಡು ‘ಕೃಷ್ಣ ಕೃಷ್ಣ’ ಎಂದು ಕೃಷ್ಣ ಸ್ಮರಣೆ ಮಾಡಿದರು.
ಹಳದಿ ವಸ್ತ್ರಧರಿಸಿದ್ದ ಅವನನ್ನು ಕೃಷ್ಣ ಸ್ಮರಣೆ ಮಾಡುತ್ತಾ ಎದ್ದು ಬಂದು, ಪ್ರೇಮದುನ್ಮಾದದಿಂದ ಮಹಾಪ್ರಭುಗಳು ಎದುರುಗೊಂಡು ಮಾತನಾಡಲುಪಕ್ರಮಿಸಿದರು. ಮಹಾನ್ ಭಕ್ತನೊಬ್ಬ ಇಲ್ಲಿಗೆ ಬಂದಿದ್ದಾನೆ. ನಂದ ಮಹಾರಾಜನ ಮಗನಾದ ದೇವೋತ್ತಮ ಪರಮ ಪುರುಷ ಕೃಷ್ಣನನ್ನು ಸ್ಮರಿಸಿಕೊಳ್ಳಬಹುದು’ ಎಂದು ಹೇಳಿ ರಾಜಪುತ್ರನನ್ನು ಅಪ್ಪಿಕೊಂಡರು.
“ಅರೆ ಇದೇನಾಗುತ್ತಿದೆ! ನನ್ನ ಹೃದಯ ತುಂಬಿ ಬರುತ್ತಿದೆ. ಆನಂದದ ಅನುಭವದಿಂದ ಭಾವೋದ್ವೇಗವಾಗುತ್ತಿದೆ, ಕಂಠ ತುಂಬಿ ಬರುತ್ತಿದೆ. ಕೃಷ್ಣ! ಕೃಷ್ಣ!! ಎಂಬ ಮಂತ್ರವೊಂದೇ ನನಗೆ ಆಡಲಾಗುತ್ತಿರುವುದು. ನಾನೀಗ ನರ್ತಿಸುತ್ತೇನೆ” ರಾಜ ಪುತ್ರನು ಪ್ರಭುಗಳ ಆಲಿಂಗನದಿಂದ ದೈವಪ್ರೇಮದಿಂದ ಮೈದುಂಬಿದನು, ಕಂಬನಿ ಹರಿಯಿತು, ಮೈ ಬೆವರಿತು, ದೇಹ ಮರಗಟ್ಟಿದಂತಾಯಿತು.
ಹೇ ಕೃಷ್ಣ ಹೇ ಕೃಷ್ಣ ಎನ್ನುತ್ತಾ ರಾಜಪುತ್ರ ನರ್ತಿಸತೊಡಗಿದ. ಅವನ ಆಧ್ಯಾತ್ಮಿಕ ಭಾಗ್ಯ ಕಂಡು, ನೆರೆದ ಭಕ್ತರೆಲ್ಲರೂ ಪ್ರಶಂಸೆಯ ಮಾತುಗಳನ್ನಾಡಿದರು. ಸ್ವತಃ ಮಹಾಪ್ರಭುಗಳೇ ಅವನನ್ನು ಮುಟ್ಟಿಸಂತೈಸಿದರು. ತಮ್ಮನ್ನು ಕಾಣಲು ಪ್ರತಿದಿನ ಬರುವಂತೆ ಅವನಿಗೆ ಆದೇಶಿಸಿದರು.

ರಾಮಾನಂದ ರಾಯರು, ರಾಜಪುತ್ರನನ್ನು ದೊರೆಯ ಬಳಿಗೆ ವಾಪಸ್ಸು ಬಿಟ್ಟು ಬಂದರು. ಘಟನಾವಳಿಗಳನ್ನು ಕೇಳಿ ರಾಜ ಸಂತಸಪಟ್ಟು ಮಗನನ್ನು ಅಪ್ಪಿಕೊಂಡನು.
ಪುತ್ರೇ ಆಲಿಙ್ಗನ ಕರಿ ಪ್ರೇಮಾವಿಷ್ಟ ಹೈಲಾ ।
ಸಾಕ್ಷಾತ್ ಪರಶಯೇನ ಮಹಾಪ್ರಭುತ ಪಾಇಲಾ ||
ಅಪ್ಪುತ್ತಲೇ ಪುತ್ರನನ್ನು ಉಕ್ಕಿತಾನಂದಾನುಭೂತಿ |
ಚೈತನ್ಯ ಪ್ರಭುವನೆ ಸಾಕ್ಷಾತ್ ಅಪ್ಪಿದೊಲು ರೀತಿ ||
ಸೇಇ ಹೈತೇ ಭಾಗ್ಯವಾನ್ ರಾಜಾರ ನನ್ದನ |
ಪ್ರಭು-ಭಕ್ತ-ಗಣ-ಮಧ್ಯೇ ಹೈಲಾ ಏಕ ಜನ ||
ಶ್ರೀ ಚೈತನ್ಯ ಮಹಾಪ್ರಭುಗಳ ಆಲಿಂಗನ ಭಾಗ್ಯ ಪಡೆದ ತನ್ನ ಮಗನನ್ನು ರಾಜ ಅಪ್ಪಿಕೊಂಡನು. ಭಗವದಾನಂದದ ಆನಂದಾನುಭೂತಿಯಿಂದ ರಾಜ ರೋಮಾಂಚನಗೊಂಡನು. ಸಾಕ್ಷಾತ್ ಮಹಾಪ್ರಭುವಿನ ಆಲಿಂಗನದ ಆನಂದಾನುಭೂತಿಗಳು ಅವರನ್ನಪ್ಪಿದ ತನ್ನ ಮಗನ ಮೂಲಕವೇ ಅವನಿಗಾಯಿತು. ಈ ದಿನದಿಂದ ರಾಜಪುತ್ರನು ಮಹಾಪ್ರಭುಗಳ ಅತ್ಯಂತ ಆಪ್ತರಾದ ಅಂತರಂಗ ಭಕ್ತರಲ್ಲಿ ಒಬ್ಬನಾದನು.
ಏಇ- ಮಿತ ಮಹಾಪ್ರಭು ಭಕ್ತ-ಗಣ-ಸಙ್ಗೇ |
ನಿರನ್ತರ ಕ್ರೀಡಾ ಕರೇ ಸಙ್ಕೇರ್ತನ-ರಙ್ಗೇ ||
ಹೀಗೆ ಮಹಾಪ್ರಭು ಭಕ್ತ ಗಣ ಸಂಘದಲಿ ।
ಲೀಲಾಪ್ರಸಂಗಗಳ ಮೆರೆಸಿದರು, ಸಂಕೀರ್ತನದ ರಂಗದಲಿ ||
ತಮ್ಮ ಭಕ್ತರ ಸಂಘದಲ್ಲಿರುತ್ತಾ, ವಿವಿಧ ಲೀಲೆಗಳ ತೋರುತ್ತಾ ಸಂಕೀರ್ತನ ಚಳವಳಿಯನ್ನು ಮಹಾಪ್ರಭುಗಳು ಬೆಳೆಸುತ್ತಿದ್ದರು.
ಗುಂಡೀಚಾ ಮಾರ್ಜನ ನಡೆದು, ರಥಯಾತ್ರೆಯೂ ನೆರವೇರಿತು. ಅನಂತರದ ದಿನಗಳಲ್ಲಿ ಸಾಮಾನ್ಯನಂತೆ ಬಂದು, ಮಹಾಪ್ರಭುಗಳ ಪಾದಸೇವೆ ಮಾಡಿದ ರಾಜಾ ಪ್ರತಾಪರುದ್ರನಿಗೂ ಅವರ ಆಶೀರ್ವಾದ ಲಭಿಸಿತು, ಗುಂಡೀಚಾ ಮಾರ್ಜನದ ನೆವದಲ್ಲಿ ದೊರೆಯ ಅಳಿದುಳಿದಿರಬಹುದಾದ ಅಹಂಕಾರ-ದರ್ಪಗಳ ಮಾರ್ಜನವೂ ನಡೆದು ಅವನು ಮಹಾಪ್ರಭುಗಳ ಕಾರುಣ್ಯ ಪಡೆದು ಕೃತಕೃತ್ಯನಾದನು.






Leave a Reply