ಅವಿವೇಕದಿಂದ ಪರಾಜಯ

ಜ್ಞಾನೋದಯ ಹೊಂದಿರುವ ಕಣ್ಣುಗಳಿಗೆ ಆಧುನಿಕ ಸಾಧನಗಳು ಮಂತ್ರ ಮುಗ್ಧ ಮಾಡತ್ತದೆಯೇ?’

ಶ್ರೀಲ ಪ್ರಭುಪಾದರು 10ನೇ ಸೆಪ್ಟೆಂಬರ್, 1973ರಂದು ಸ್ಟಾಕ್ ಹೋಮ್ ನಲ್ಲಿ ನೀಡಿದ ಉಪನ್ಯಾಸ

– ಅನುವಾದ: ಡಾ.ಕೆ.ವೈ.ಬಾಲರಾಜ್‌

ಪರಾಭವಸ್ತಾವದಬೋಧಜಾತೋ

ಯಾವನ್ನ ಜಿಜ್ಞಾಸತ ಆತ್ಮತತ್ತ್ವಮ್ |

ಯಾವತ್ಕ್ರಿಯಾಸ್ತಾವದಿದಂ ಮನೋ ವೈ

ಕರ್ಮಾತ್ಮಕಂ ಯೇನ ಶರೀರ ಬನ್ಧಃ ||

‘ವ್ಯಕ್ತಿಯು ಜೀವನದ ಆಧ್ಯಾತ್ಮಿಕ ಮೌಲ್ಯಗಳನ್ನು ಕುರಿತು ಜಿಜ್ಞಾಸೆ ಮಾಡದವರೆಗೆ ಅವನು ವಿಫಲನಾಗುತ್ತಾನೆ. ಮತ್ತು ಅಜ್ಞಾನದಿಂದುಂಟಾದ ಕ್ಲೇಶಗಳಿಗೆ ಒಳಪಡುತ್ತಾನೆ. ಪುಣ್ಯಕರ್ಮವಾಗಿರಲಿ, ಪಾಪಕರ್ಮವಾಗಿರಲಿ, ಕರ್ಮಕ್ಕೆ ತಕ್ಕ ಫಲಗಳು ಇದ್ದೇ ಇರುತ್ತವೆ.

ವ್ಯಕ್ತಿಯು ಯಾವುದೇ ಬಗೆಯ ಕರ್ಮದಲ್ಲಿ ತೊಡಗಿದಾಗ ಅವನ ಮನಸ್ಸನ್ನು ಕರ್ಮಾತ್ಮಕ ಎನ್ನುತ್ತಾರೆ. ಕರ್ಮಾತ್ಮಕ ಎಂದರೆ ಕಾಮ್ಯಕರ್ಮಗಳಿಂದ ಪ್ರಭಾವಿತವಾಗಿರುವುದು. ಮನಸ್ಸು ಅಶುದ್ಧವಾಗಿರುವವರೆಗೆ ಪ್ರಜ್ಞೆಯು ಅಶುದ್ಧವಾಗಿರುತ್ತದೆ. ವ್ಯಕ್ತಿಯು ಕಾಮ್ಯಕರ್ಮಗಳಲ್ಲಿ ತೊಡಗಿರುವವರೆಗೆ ದೇಹಧಾರಣೆ ಮಾಡಬೇಕು.”  (ಶ್ರೀಮದ್ ಭಾಗವತಮ್ 5.5.5)

ಹಿಂದಿನ ಶ್ಲೋಕದಲ್ಲಿ ಋಷಭದೇವನು ಇಂದ್ರಿಯತುಷ್ಟಿಗಾಗಿ ಹುಚ್ಚುತನ ಮತ್ತು ಎಲ್ಲ ರೀತಿಯ ಪಾಪಕರ್ಮಗಳನ್ನು ಮಾಡುವುದು ಒಳ್ಳೆಯದಲ್ಲವೆಂದು ಹೇಳಿದ್ದಾನೆ. ನಾಸ್ತಿಕರು ಈ ರೀತಿಯಾಗಿ ಹೇಳಬಹುದು, ”ನಮಗೆ ಭೌತಿಕ ದೇಹ ಸಿಕ್ಕಿದೆ ಮತ್ತು ಅದರಿಂದ ಸ್ವಲ್ಪ ದುಃಖವೂ ಉಂಟಾಗಿದೆ.

ಇದರಲ್ಲಿ ತಪ್ಪೇನಿದೆ? ಈ ದೇಹ ಒಂದು ದಿವಸ ನಾಶವಾಗುತ್ತದೆ. ಆಗ ಯಾವುದೇ ನೋವುಗಳು ಮತ್ತು ಸುಖವಿರುವುದಿಲ್ಲ.” ಇದು ಬೌದ್ಧ ಸಿದ್ಧಾಂತವೂ ಕೂಡ ಆಗಿದೆ. ಇವರ ಪ್ರಕಾರ ಶರೀರವು ಜಡದ ಸಂಯೋಜನೆಯಿಂದ ಆಗಿದೆ ಮತ್ತು ಅದಕ್ಕೆ ಸುಖ ಹಾಗೂ ದುಃಖಿಗಳು ಇವೆ. ಈ ದೇಹವನ್ನು ಶೂನ್ಯವಾಗಿ ಮಾಡಿ. ಆಗ ಸುಖವೂ ಇರುವುದಿಲ್ಲ ಮತ್ತು ದುಃಖವೂ ಇರುವುದಿಲ್ಲ.

ಅದಕ್ಕೆ ಋಷಭದೇವನು ಈ ರೀತಿಯಾಗಿ ಉತ್ತರಿಸುತ್ತಾನೆ – ” ಈ ದೇಹ ನಾಶವಾದ ಮೇಲೆ ಇನ್ನೊಂದು ದೇಹವನ್ನು ಪಡೆಯಬೇಕಾಗುತ್ತದೆ. ಎಲ್ಲಿಯವರೆಗೆ ನೀವು ಒಂದು ದೇಹದನಂತರ ಇನ್ನೊಂದು ದೇಹವನ್ನು ಸ್ವೀಕರಿಸುತ್ತಾ ಇರುತ್ತೀರಿ ಐಹಿಕ ಅಸ್ತಿತ್ವದ ಕ್ಲೇಶಮಯ ಸ್ಥಿತಿ ಅಂದರೆ ದುಃಖಮಯ ಸ್ಥಿತಿ ಮುಂದುವರಿಯುತ್ತಲೇ ಇರುತ್ತದೆ.”

ಪ್ರಾರಂಭದಲ್ಲಿ ಋಷಭದೇವನು ಹೇಳುತ್ತಾನೆ, ಈ ಮಾನವ ಶರೀರವನ್ನು ಕೇವಲ ಇಂದ್ರಿಯ ತೃಪ್ತಿಗಾಗಿ ನಾಯಿ ಮತ್ತು ಹಂದಿಗಳಂತೆ ದುರುಪಯೋಗ ಮಾಡಿಕೊಳ್ಳಬಾರದು. ಆದ್ದರಿಂದ ಈಗ ಅವನು ಹೇಳುತ್ತಾನೆ. ಪರಾಭವಸ್ ತಾವದ್ ಅಬೋಧ-ಜಾತೋ ಯಾವನ್ ನ ಜಿಜ್ಞಾಸತ ಆತ್ಮತತ್ತ್ವಮ್, “ಈ ದೇಹಧಾರಿ ಜೀವನದಲ್ಲಿ ಆತ್ಮ ತತ್ತ್ವದ ಅವಶ್ಯಕತೆಯಿದೆ ಎಂದು ಈ ಮೂರ್ಖರಿಗೆ ಗೊತ್ತಿಲ್ಲ.

ಅವರೇನೂ ಮಾಡುತ್ತಿದ್ದರೋ ಅದು ಅವರ ಅಪಜಯವಾಗಿದೆ. ವೈಜ್ಞಾನಿಕ ಪ್ರಗತಿಯಿಂದ ಈಗ ನಮಗೆ ಚಂದ್ರಗ್ರಹಕ್ಕೆ ಹೋಗಲು ಸಾಧ್ಯವಾಯಿತು. ಇದು ನಮ್ಮ ಸಾಧನೆ ಎಂದು ಅವರು ಯೋಚಿಸುತ್ತಾದ್ದಾರೆ. ಅವರು ಹೋಗುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಅವರು ಪ್ರಯತ್ನಿಸುತ್ತಿದ್ದಾರೆ. ಆದರೆ ಋಷಭದೇವನು ಹೇಳುತ್ತಾನೆ. ”ಇದು ಅವರ ಸಾಧನೆಯಲ್ಲಿ ಅವರ ಪರಾಜಯ.” ಏಕೆ? ಏಕೆಂದರೆ ಅವರಿಗೆ ಚಂದ್ರ ಅಥವಾ ಸೂರ್ಯಗ್ರಹಕ್ಕೆ ಹೋಗಲು ಸಾಧ್ಯವಿಲ್ಲ. ಅವರು ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ.

ಸುಮ್ಮನೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ಒಂದು ವೇಳೆ ನೀವು ವಿದೇಶಕ್ಕೆ ಹೋಗಬೇಕು ಎಂದಿರಿ. ಆಗ ನೀವು ಬಲವಂತದಿಂದ ಅಲ್ಲಿಗೆ ಹೋಗಲು ಸಾಧ್ಯವೇ? ಇಂಗ್ಲೆಂಡ್‌ನಲ್ಲಿ ಕೆಲವು ವಿದೇಶೀಯರು ಕಳ್ಳತನದಿಂದ ಬರುತ್ತಾರೆ. ಆದ್ದರಿಂದ ಅದಕ್ಕೆ ಅವಕಾಶವಿಲ್ಲ. ಅದೇ ರೀತಿಯಾಗಿ ಶಾಸ್ತ್ರಗಳಿಂದ ನಮಗೆ ಗೊತ್ತಾಗುವುದೇನೆಂದರೆ ಅರ್ಹರಾಗದೇ ಯಾರೂ ಚಂದ್ರಗ್ರಹ ಅಥವಾ ಬೇರೆ ಗ್ರಹಕ್ಕೆ ಹೋಗಲಾರರು.

ಭಗವದ್ಗೀತೆಯಲ್ಲಿ, ಯಾಂತಿ ದೇವ – ವ್ರತೌ ದೇವಾನ್‌ ಎಂದು ಹೇಳಲಾಗಿದೆ. ಅಂದರೆ ಉನ್ನತವಾದ ಲೋಕಗಳಿವೆ. ಅಲ್ಲಿ ದೇವತೆಗಳು ವಾಸಿಸುತ್ತಾರೆ. ದೇವತೆಗಳೊಂದಿಗೆ ಇರಲು ಅರ್ಹರಾಗದೆ ನೀವು ಅಲ್ಲಿಗೆ ಹೋಗಲು ಆಗುವುದಿಲ್ಲ.

ಅದೇ ರೀತಿಯಾಗಿ ಕೃಷ್ಣಲೋಕಕ್ಕೆ ಪ್ರವೇಶಿಸಲು ಅರ್ಹರಾಗದೇ ಬಲವಂತದಿಂದ ಅಲ್ಲಿಗೆ ಹೋಗಲು ನಿಮಗೆ ಆಗುವುದಿಲ್ಲ. ಅದು ಸಾಧ್ಯವೇ ಇಲ್ಲ. ಪರದೇಶಕ್ಕೆ ಹೋಗಬೇಕಾದರೆ ನಿಮಗೆ ವೀಸಾ, ಪಾಸ್‌ಪೋರ್ಟ್ ಜೊತೆಗೆ ವಲಸೆ ಹೋಗಲು ಏನೇನು ಬೇಕೋ ಅವೆಲ್ಲವೂ ಇದ್ದರೆ ನಿಮಗೆ ಅಲ್ಲಿ ಪ್ರವೇಶಿಸಲು ಬಿಡುತ್ತಾರೆ.

ಒಂದು ವೇಳೆ ನೀವು ಬೇರೆ ಗ್ರಹಲೋಕಕ್ಕೆ ಹೋದರೆ, ಅಲ್ಲಿಂದ ನಿಮ್ಮನ್ನು ಓಡಿಸಲಾಗುತ್ತದೆ. ಅಂತಹ ಪ್ರಯತ್ನದ ಉಪಯೋಗವಾದರೂ ಏನು? ನಿಮಗೆ ಅಲ್ಲಿ ಪ್ರವೇಶಿಸಲು ಅವಕಾಶವೂ ಕೊಡುವುದಿಲ್ಲ ಮತ್ತೆ ನೀವು ಅಲ್ಲಿರಲು ಸಾಧ್ಯವಿಲ್ಲ.

ಆದ್ದರಿಂದ ವೈಜ್ಞಾನಿಕ ಅಭಿವೃದ್ಧಿಯಿಂದ ಅಲ್ಲಿಗೆ ಹೋಗುವ ನಿಮ್ಮ ಪ್ರಯತ್ನ ಬರೀ ಸೋಲಷ್ಟೆ. ಇಂತಹ ತಿರುಗಾಟದಿ೦ದ ಅವರೇನು ಸಾಧಿಸಿದ್ದಾರೆ? ಇಲ್ಲ, ಯಾವ ನಿಕೃಷ್ಟ ಸಾಧನೆಯೂ ಇಲ್ಲ. ಆದರೆ ರಷ್ಯ ಮತ್ತು ಅಮೆರಿಕನ್ ರು ಚಂದ್ರನಲ್ಲಿಗೆ ಹೋಗಲು ಲಕ್ಷಾಂತರ ಡಾಲರ್ ಗಳನ್ನು ಖರ್ಚು ಮಾಡುತ್ತಾರೆ.

ಒಂದು ವೇಳೆ ನೀವು ಅಲ್ಲಿಗೆ ಹೋದರೂ ಕೂಡ, ಅಲ್ಲಿ ಸಾಯಲೇಬೇಕಾಗುತ್ತದೆ. ಮತ್ತೆ ಈ ದೇಹವನ್ನು ಬಿಡಬೇಕಾಗುತ್ತದೆ. ನಿಮ್ಮನ್ನು ಮರಣದ ಅನಂತರ ಎಲ್ಲಿ ಇಡಲಾಗುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ಇದು ಪ್ರಕೃತಿಯ ಕೈಯಲ್ಲಿದೆ – “ಮರಣದ ನಂತರ ನಾನು ಈ ಗ್ರಹಲೋಕ ಅಥವಾ ಆ ಗ್ರಹಲೋಕಕ್ಕೆ ಹೋಗುತ್ತೇನೆ’ ಎಂದು ನೀವು ಆಜ್ಞೆ ಮಾಡಲು ಆಗುವುದಿಲ್ಲ. ಇಲ್ಲ. ನೀವು ಸಂಪೂರ್ಣವಾಗಿ ಪ್ರಕೃತಿಯ ನಿಯಂತ್ರಣದಲ್ಲಿರುತ್ತೀರಿ.

ಪ್ರತಿಯೊಬ್ಬರೂ ಮಹತ್ವಾಕಾಂಕ್ಷಿಯಾಗಿದ್ದಾರೆ. ಆದರೆ ಕೇವಲ ಮಹತ್ವಾಕಾಂಕ್ಷೆಯಾಗುವುದರಿಂದಲೇ ಶ್ರೀಮಂತ ಅಥವಾ ಗೌರವಾನ್ವಿತ ವ್ಯಕ್ತಿಯಾಗಲು ಸಾಧ್ಯವೇ? ಅದು ಸಾಧ್ಯವಿಲ್ಲ. ವ್ಯಕ್ತಿಯು ಅದಕ್ಕೆ ಅರ್ಹನಾಗಿರಬೇಕು. ಅದಕ್ಕೆ ಇವೆಲ್ಲವೂ ವ್ಯರ್ಥ ಪ್ರಯತ್ನಗಳು. ನೀವು ಉನ್ನತ ನಿಯಮದ ಅನುಸಾರವಾಗಿ ಕೆಲಸ ಮಾಡಬೇಕಾಗುತ್ತದೆ.

ಉನ್ನತವಾದ ಪ್ರಮಾಣಭೂತ ಸಾಕ್ಷಿ ಇದೆ ಮತ್ತು ತೀರ್ಪು ಇದೆ ಎಂದು ಹೇಳಿದರೆ ಜನರು ನಂಬುವುದಿಲ್ಲ. ತಾವು ಏನು ಬೇಕಾದರೂ ಮಾಡಬಹುದು ಎಂದು ಕುರುಡಾಗಿ ಅವರು ಯೋಚಿಸುತ್ತಾರೆ. ಅದು ಒಳ್ಳೆಯದಲ್ಲ, ಅದು ಪರಾಭವ (ಸೋಲು), ಪರಾಭವಸ್ ತಾವದ್ ಅಬೋಧ-ಜಾತಃ ಒಬ್ಬವ್ಯಕ್ತಿ ಎಲ್ಲಿಯವರೆಗೆ ತಾನು ಯಾರು (ಯಾವನ್‌ನ ಜಿಜ್ಞಾಸತ) ಎಂದು ಅನ್ವೇಷಣೆ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅವನು ಪರಾಭವನಾಗುತ್ತಾನೆ.

ಪರಿಸ್ಥಿತಿ ಈ ರೀತಿಯಾಗಿದೆ. ಯಾರಿಗೂ ತಮ್ಮ ಗುರುತನ್ನು ತಿಳಿದುಕೊಳ್ಳುವುದರಲ್ಲಿ ಆಸಕ್ತಿಯೇ ಇಲ್ಲ. ಸನಾತನ ಗೋಸ್ವಾಮಿಯವರಿಂದ ನಮಗೆ ಈ ಮಾಹಿತಿ ಸಿಗುತ್ತದೆ. ಯಾವಾಗ ಅವರು ಮೊದಲ ಸಲ ಶ್ರೀ ಚೈತನ್ಯ ಮಹಾಪ್ರಭುಗಳನ್ನು ಭೇಟಿಯಾಗುತ್ತಾರೋ ಆಗ ಅವರು ಚೈತನ್ಯರಿಗೆ ‘ಕೇ ಆಮಿ’, ‘ಕೇನೇ ಆ ಮಾಯ ಜಾರೇ ತಾಪ-ತ್ರಯ’ ಎಂದು ಪ್ರಶ್ನಿಸುತ್ತಾರೆ.

‘ದಯವಿಟ್ಟು ತಿಳಿಸಿ ನಾನು ಯಾರೆಂದು ಮತ್ತು ನಾನೇಕೆ ಈ ಭೌತಿಕ ಅಸ್ತಿತ್ವದ ಮೂರು ಕ್ಲೇಶಗಳಿಗೆ ಒಳಪಡುತ್ತಿದ್ದೇನೆ? ನನಗೆ ಜೀವನದ ಈ ಎಲ್ಲ ಕ್ಲೇಶಗಳು ಬೇಕಾಗಿಲ್ಲ. ಆದರೆ ಅದನ್ನು ಸ್ವೀಕರಿಸಲು ನನಗೆ ಬಲವಂತ ಪಡಿಸಲಾಗಿದೆ. ಆದ್ದರಿಂದ ನನ್ನ ಸ್ಥಾನ ಏನು? ಏಕೆ ಇವೆಲ್ಲವನ್ನೂ ಸ್ವೀಕರಿಸಲು ನನಗೆ ಬಲವಂತಪಡಿಸಲಾಗಿದೆ ?”

ಇದನ್ನು ಆತ್ಮತತ್ತ್ವ ಜಿಜ್ಞಾಸೆ ಎನ್ನಲಾಗುತ್ತದೆ. ”ನಾನು ಯಾರು?” ಯಾರಿಗೂ ತಾನು ಯಾರು ಎಂಬುದು ಗೊತ್ತಿಲ್ಲ. ಪ್ರತಿಯೊಬ್ಬರೂ ಯೋಚಿಸುತ್ತಾರೆ, “ನಾನು ಈ ದೇಹವಾಗಿದ್ದೇನೆ.” ಆದ್ದರಿಂದ ಅವನು ಅಬೋಧ-ಜಾತಃ ಅಂದರೆ ಅವನು ಜನ್ಮದಿಂದಲೇ ಮೂಢನು. ಅವನಿಗೆ ತನ್ನ ಗುರುತೇ ಗೊತ್ತಿಲ್ಲ. ಕೆಲವರು “ನಾನು ಅಮೆರಿಕನ್‌”, “ನಾನು ಭಾರತೀಯ”, ‘ನಾನು ರಷಿಯನ್” ಎ೦ದೆಲ್ಲ ಯೋಚಿಸುತ್ತಾರೆ. ಇವೆಲ್ಲವೂ ನಾಯಿ ಗುರುತುಗಳು.

ನಾಯಿಯು ‘ನಾನು ಈ ದೇಹವಾಗಿದ್ದೇನೆ, ಬೆಕ್ಕು ನಾನು ಈ ದೇಹವಾಗಿದ್ದೇನೆ” ಎಂದು ಯೋಚಿಸುತ್ತದೆ. ಅದೇ ರೀತಿಯಾಗಿ ಮನುಷ್ಯನು ಯೋಚಿಸಿದರೆ ಅವನು ಅಜ್ಞಾನದಲ್ಲಿರುತ್ತಾನೆ. ಒಂದು ವೇಳೆ ನೀವು ಅಜ್ಞಾನದಲ್ಲಿದ್ದರೆ ನೀವೇನೇ ಸಾಧಿಸಿದರೂ ಅದು ನಿಮ್ಮ ಪರಾಭವವಾಗುತ್ತದೆ. ಇದನ್ನು ಅರ್ಥಮಾಡಿಕೊಳ್ಳಬೇಕು.

ಒಬ್ಬ ವ್ಯಕ್ತಿಯು ಅನ್ವೇಷಣಾಶೀಲನಾಗಿರಬೇಕು. ಸನಾತನ ಗೋಸ್ವಾಮಿಯವರು ಇದಕ್ಕೆ ಒಳ್ಳೆಯ ಉದಾಹರಣೆಯಾಗಿದ್ದಾರೆ. ಅವರು ಚೈತನ್ಯ ಮಹಾಪ್ರಭುಗಳ ಬಳಿ ಹೋಗಿ ಕೇಳಿದರು – ”ಪ್ರಭುಗಳೇ, ನಾನು ಯಾರು ಎಂದು ನನಗೆ ತಿಳಿಯಪಡಿಸಿ. ಸಾಮಾನ್ಯ ಜನರು ನನ್ನನ್ನು ತುಂಬಾ ತಿಳಿದವ, ಪಂಡಿತಜೀ ಎಂದು ಕರೆಯುತ್ತಾರೆ.”

ಭಾರತದಲ್ಲಿ ಬ್ರಾಹ್ಮಣರನ್ನು ‘ಪಂಡಿತಜಿ’ ಎಂದು ಸಂಬೋಧಿಸಲಾಗುತ್ತದೆ. ಪಂಡಿತಜೀ ಎಂದರೆ ತುಂಬಾ ತಿಳಿದಂಥವರು. ಆದ್ದರಿಂದ ಸನಾತನ ಗೋಸ್ವಾಮಿಯವರನ್ನು ಸಾಮಾನ್ಯ ಜನರು ತುಂಬಾ ತಿಳಿದಂಥವರು ಎಂದು ಕರೆಯುತ್ತಾರೆ, ಆದರೆ ನಿಜವಾಗಿಯೂ ನಾನು ಯಾರೆಂಬುದೇ ನನಗೆ ಗೊತ್ತಿಲ್ಲ” ಎಂದು ಸನಾತನರು ಒಪ್ಪಿಕೊಳ್ಳುತ್ತಾರೆ.

ಯಾವುದೇ ವಿದ್ವಾಂಸ, ಡಾಕ್ಟರ್, ಪಿಎಚ್.ಡಿ. ಪದವೀಧರರಿಗೆ ನೀವು ಯಾರು ಎಂದು ಕೇಳಿ ಮಾಸ್ಕೋದಲ್ಲಿ ಪ್ರೊಫೆಸರ್ ಕೋಟೋವ್ ಸ್ಕಿ ಹೇಳಿದ್ದಾರೆ, ”ಈ ದೇಹದ ಸಮಾಪ್ತಿಯ ಅನ೦ತರ ಎಲ್ಲವೂ ಸಮಾಪ್ತವಾಗುತ್ತದೆ.” ಅವನಿಗೆ ತಾನು ಯಾರೆಂಬುದೇ ಗೊತ್ತಿಲ್ಲ. ಪರಿಸ್ಥಿತಿಯು ಈ ರೀತಿಯಾಗಿದೆ.

ಆದ್ದರಿಂದ ಪಂಡಿತರು ಮತ್ತು ತಿಳಿದವರೆ೦ದು ಅನ್ನಿಸಿಕೊಂಡವರು ತಾವೇನು ಮಾಡಿದರೂ ಸೋಲುತ್ತಿದ್ದಾರೆ. ಏಕೆಂದರೆ ಅವರಿಗೆ ತಮ್ಮ ಗುರುತೇ ಗೊತ್ತಿಲ್ಲ. ಎಲ್ಲಿಯವರೆಗೆ ನಿಮಗೆ ನಿಮ್ಮ ಗುರುತು ಗೊತ್ತಾಗುವುದಿಲ್ಲವೋ, ಜೀವನದ ಗುರಿಗಾಗಿ ನೀವು ಹೇಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಒಂದು ವೇಳೆ ನಿಮ್ಮ ಗುರುತಿನ ಬಗ್ಗೆ ನಿಮಗೆ ತಪ್ಪು ತಿಳುವಳಿಕೆ ಇದ್ದರೆ ನೀವೇನೇ ಮಾಡಿದರೂ ಅದು ನಿಮ್ಮ ಸೋಲಾಗುತ್ತದೆ.

ಯಾವತ್ ಕ್ರಿಯಾಸ್ ತಾವದ್ ಇದಂ ಮನೋ ವೈ ಕರ್ಮಾತ್ಮಕಂ ಯೇನ ಪರೀರ-ಬಂಧಃ

ಎಲ್ಲರಿಗೂ ವಿವಿಧ ರೀತಿಯ ಮನೋಭಾವವಿರುತ್ತದೆ. ಕರ್ಮಾತ್ಮಕಮ್ ಎಂದರೆ ಸಾಮಾನ್ಯ ಮನೋಭಾವ. ಅಂದರೆ “ನಾನು ಒಳ್ಳೆಯ ರೀತಿಯಾಗಿ ಕೆಲಸ ಮಾಡುವೆ, ಹೆಚ್ಚಿನ ಹಣವನ್ನು ಗಳಿಸುವ ಮತ್ತು ಜೀವನದಲ್ಲಿ ಸುಖದಿಂದ ಇರುವೆ.” ಯಾರು ವೈದಿಕ ಸಂಪ್ರದಾಯವನ್ನು ಅನುಸರಿಸುತ್ತಾರೋ ಅವರು ತಮ್ಮ ಪುಣ್ಯ ಕಾರ್ಯಗಳಿಂದ ಮತ್ತು ಧಾರ್ಮಿಕ ಚಟುವಟಿಕೆಗಳಿಂದ ತಮ್ಮ ಮುಂದಿನ ಜೀವನದಲ್ಲಿ ಸುಖದಿಂದಿರಲು ಪ್ರಯತ್ನಿಸುತ್ತಿದ್ದಾರೆ.

ಆದರೆ ಧಾರ್ಮಿಕ ಕಾರ್ಯಗಳು ಕೂಡ ಕರ್ಮದ ಚಟುವಟಿಕೆಗಳಾಗಿವೆ. ಆದ್ದರಿಂದ ನಮ್ಮ ಸಿದ್ಧಾಂತದ ಪ್ರಕಾರ ನಮಗೆ ಅಧಾರ್ಮಿಕ ಕಾರ್ಯವೊಂದೇ ಅಲ್ಲ ಧಾರ್ಮಿಕ ಕಾರ್ಯದಲ್ಲೂ ಆಸಕ್ತಿ ಇಲ್ಲ. ಇದು ನಮ್ಮ ಸ್ಥಿತಿ.

ಧಾರ್ಮಿಕ ಕಾರ್ಯಗಳಿಂದ ನಿಮಗೆ ಉತ್ತಮವಾದ ಶ್ರೀಮಂತರ ಮನೆಯಲ್ಲಿ ಜನನವಾಗಬಹುದು. ನೀವು ಪಂಡಿತರಾಗಬಹುದು ಮತ್ತು ನೀವು ಸುಂದರರು ಕೂಡ ಆಗಬಹುದು. ನೀವು ಅಮೆರಿಕದವರು ಅಥವಾ ಪಾಶ್ಚಾತ್ಯರಂತೆ ತುಂಬಾ ತಿಳಿದವರಾಗಿದ್ದೀರಿ ಮತ್ತು ಭೌತ ವಿಜ್ಞಾನದಲ್ಲಿ ಪ್ರಗತಿಯನ್ನು ಹೊಂದಿದ್ದೀರಿ. ನೀವು ನೋಡಲು ಸುಂದರರಾಗಿದ್ದೀರಿ ಮತ್ತು ಬೇರೆ ರಾಷ್ಟ್ರದವರಿಗಿಂತಲೂ ಶ್ರೀಮಂತರಾಗಿದ್ದೀರಿ. ಇದೆಲ್ಲವೂ ನಿಮ್ಮ ಪೂರ್ವದ ಧಾರ್ಮಿಕ ಕಾರ್ಯಗಳಿಂದಾಗಿದೆ.

ಒಂದು ವೇಳೆ ನಿಮ್ಮ ಧಾರ್ಮಿಕ ಚಟುವಟಿಕೆಗಳಿಂದ ನಿಮಗೆ ಈ ಎಲ್ಲ ಅವಕಾಶಗಳು ಸಿಕ್ಕಿವೆಯಾದರೂ, ಸದಾ ಮಂಜು ತುಂಬಿಕೊಂಡಿರುವ ಗ್ರೀನ್‌ ಲ್ಯಾಂಡ್‌ನಲ್ಲಿ ಜನ್ಮ ಪಡೆದರೂ ಕೂಡ ಅಲ್ಲಿಯೂ ಕೂಡ ನಿಮಗೆ ಅನನುಕೂಲತೆಗಳೇ ಇವೆ. ನೀವು ಆಫ್ರಿಕಾದಲ್ಲಿ ಜನ್ಮ ಪಡೆದರೂ, ಅಲ್ಲಿಯೂ ಕೂಡ ನಿಮಗೆ ಯಾವ ಅನುಕೂಲತೆಗಳೂ ಇರುವುದಿಲ್ಲ.

ಆಧ್ಯಾತ್ಮಿಕ ದೃಷ್ಟಿಯಿಂದ ಎಲ್ಲ ಅನುಕೂಲತೆಗಳು ಮತ್ತು ಅನನುಕೂಲತೆಗಳು ಒಂದೇ. ಯಾವುದೇ ಜನ್ಮದಲ್ಲಿಯಾದರೂ ನೀವು ತಾಯಿಯ ಗರ್ಭವನ್ನು ಪ್ರವೇಶಿಸಬೇಕು. ಆದ್ದರಿಂದ ಶ್ರೀಮಂತ ತಾಯಿ ಅಥವಾ ಬಡತಾಯಿ, ಕಪ್ಪುತಾಯಿ ಅಥವಾ ಬಿಳಿತಾಯಿ, ಬುದ್ಧಿವಂತ ತಾಯಿ ಅಥವಾ ಮೂರ್ಖತಾಯಿಯ ಗರ್ಭದಲ್ಲಿಯ ಜನನ ಒಂದೇ. ಏಕೆಂದರೆ ತಾಯಿಯ ಗರ್ಭದಲ್ಲಿದ್ದು ನೀವು ಅನುಭವಿಸುತ್ತಿರುವ ನೋವು ಒಂದೇ ಆಗಿದೆ.

ಭೌತಿಕ ದೇಹವನ್ನು ಪಡೆದ ಕೂಡಲೇ ನೀವು ದೈಹಿಕ ಸುಖ ಮತ್ತು ದುಃಖಗಳನ್ನು ಅನುಭವಿಸಬೇಕಾಗುತ್ತದೆ. ಮರಣ ಸಮಯದಲ್ಲಿರುವ ಆ ನೋವಿನ ಪರಿಸ್ಥಿತಿ ಎಲ್ಲರಿಗೂ ಒಂದೇ ಆಗಿರುತ್ತದೆ. ಆದ್ದರಿಂದ ನೀವು ಶ್ರೀಮಂತರು ಅಥವಾ ಬಡವರು ಆಗಿದ್ದರೂ ಅದು ಗಣ್ಯವಾದುದಲ್ಲ. ಏಕೆಂದರೆ ಭೌತಿಕ ಪರಿಸ್ಥಿತಿ ಪ್ರತಿಯೊಬ್ಬರನ್ನೂ ದುಃಖಪಡುವ ಹಾಗೆ ಮಾಡುತ್ತದೆ.

ಒಂದು ವೇಳೆ ನಿಮ್ಮ ಮನಸ್ಸನ್ನು ಕಾಮ್ಯ ಕರ್ಮಗಳಲ್ಲಿಯೇ ತೊಡಗಿಸಿ ನೀವು ನಿಮ್ಮ ಆಸೆಗಳನ್ನು ಪೂರೈಸದೇ ಹೋದರೆ ಪ್ರಕೃತಿಯು ನಿಮ್ಮ ಆಸೆಗಳನ್ನು ಪೂರೈಸುವುದಕ್ಕಾಗಿ ಮುಂದಿನ ಜೀವನದಲ್ಲಿ ಇನ್ನೊಂದು ದೇಹವನ್ನು ಕೊಡುತ್ತದೆ. ಇದು ನಡೆಯುತ್ತಲೇ ಇರುತ್ತದೆ. ಆದ್ದರಿಂದ ಇದು ನಿಮ್ಮ ಪರಾಭವ ಅಥವಾ ಸೋಲು.

ನಿಮ್ಮ ಕರ್ತವ್ಯವು, ನೀವು ಈ ದೇಹವಲ್ಲ. ನೀವು ಚೇತನಾತ್ಮ ಮತ್ತು ಪ್ರಭು ಕೃಷ್ಣನ ಅಂಶವಾಗಿರುವುದನ್ನು ತಿಳಿದುಕೊಳ್ಳುವುದಾಗಿದೆ. ನಿಮ್ಮ ನಿಜವಾದ ಕರ್ತವ್ಯವು ಪೂರ್ಣವಾಗಿ ಕೃಷ್ಣ ಪ್ರಜ್ಞಾವಂತರಾಗುವುದು, ಭಗವದ್ಧಾಮಕ್ಕೆ ಮರಳುವುದು ಮತ್ತು ಈ ಜನನ – ಮರಣ ಚಕ್ರವನ್ನು ಕೊನೆಗೊಳಿಸುವುದಾಗಿದೆ.

ಆದರೆ ಯಾರು ಇದನ್ನು ಅರ್ಥಮಾಡಿಕೊಳ್ಳುತ್ತಾರೆ? ಆದ್ದರಿಂದ ಕೃಷ್ಣ ಯೇ ಭಜೇ ಸೇ ಬಡ ಚತುರ ಎಂದು ಹೇಳಲಾಗಿದೆ. ಯಾರು ಕೃಷ್ಣಪ್ರಜ್ಞೆ ಚಳವಳಿಯ ಅರ್ಥವನ್ನು ಅರಿತುಕೊಂಡಿರುತ್ತಾರೋ ಅವರು ತುಂಬಾ ಜಾಣರಾಗಿರಬೇಕು. ಏಕೆಂದರೆ, ಚಾಣರಾಗದೆ ಅವರು ಈ ಚಳವಳಿಯ ಮೂಲತತ್ತ್ವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

ಈ ಚಳವಳಿಯ ಮೂಲತತ್ತ್ವವು ಕೃಷ್ಣನನ್ನು ಅರ್ಥಮಾಡಿಕೊಳ್ಳುವುದಾಗಿದೆ. ಕೃಷ್ಣನನ್ನು ಅರಿತುಕೊಂಡರೆ, ಈ ದೇಹವನ್ನು ತ್ಯಜಿಸಿದ ಅನಂತರ ನೀವು ಕೃಷ್ಣನ ಬಳಿಗೆ ಹೋಗುತ್ತೀರಿ. ದೇವಸ್ಥಾನದಲ್ಲಿ ಕೃಷ್ಣನನ್ನು ಪೂಜಿಸುವುದು ಮತ್ತು ಅವನನ್ನು ಅಲಂಕರಿಸುವ ಈ ಭಕ್ತಿ ಸೇವೆಯೂ ಕೃಷ್ಣನನ್ನು ಅರಿತುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಿದೆ. ಆದರೂ ಒಂದು ವೇಳೆ ಶಾಸ್ತ್ರದಲ್ಲಿ ಅಥವಾ ನಿಮ್ಮ ಆಚಾರ್ಯರು ಸೂಚಿಸಿದಂತೆ ನಿಮ್ಮನ್ನು ನೀವು ಕೃಷ್ಣ ಸೇವೆಯಲ್ಲಿ ತೊಡಗಿಸಿಕೊಂಡರೆ ಕೃಷ್ಣನು ನಿಮಗೆ ಪ್ರಕಟಗೊಳ್ಳುತ್ತಾನೆ. ಅದುವೇ ಬೇಕಾಗಿರುವುದು ಮತ್ತು ಅದುವೇ ನಿಮ್ಮ ಜೀವನದ ಪರಿಪೂರ್ಣತೆ. ಕೃಷ್ಣನನ್ನು ಅರ್ಥಮಾಡಿಕೊಂಡ ಕೂಡಲೇ ನೀವು ಭಗವದ್ಧಾಮಕ್ಕೆ ಮರಳಲು ಅರ್ಹರಾಗುತ್ತೀರಿ ಮತ್ತು ಜನನ ಮರಣದ ಈ ಚಕ್ರವನ್ನು ಕೊನೆಗೊಳಿಸುತ್ತೀರಿ.

ಗೆಲುವಿನ ಈ ಗುಟ್ಟು ಜನರಿಗೆ ಅರ್ಥವಾಗುವುದಿಲ್ಲ ಅಥವಾ ಅವರಿಗೆ ಅರ್ಥವಾಗುವುದೇ ಇಲ್ಲ. ಅವರು ಅಷ್ಟೊಂದು ಅದೃಷ್ಟವಂತರಲ್ಲ. ಆದರೆ ಹಿರಿಯರ ಆಜ್ಞೆಯಂತೆ ಈ ಚಳವಳಿಯನ್ನು ಮುಂದುವರಿಸುವುದು ನಮ್ಮ ಕರ್ತವ್ಯವಾಗಿದೆ. ಯಾರು ಈ ಚಳವಳಿಯ ಲಾಭವನ್ನು ಪಡೆಯುತ್ತಾರೆಯೋ ಅವರು ಜನನ-ಮರಣದ ಈ ಚಕ್ರದಿ೦ದ ಪಾರಾಗುತ್ತಾರೆ.

ಋಷಭದೇವನು ಹೇಳುತ್ತಾನೆ, ಎಲ್ಲಿಯವರೆಗೆ ಒಬ್ಬವ್ಯಕ್ತಿಯ ಮನಸ್ಸು” ನಾನು ಕೆಲಸ ಮಾಡಿ ಸುಖದಿಂದ ಇರುವೆ” ಎಂಬ ಕಲ್ಪನೆಯಲ್ಲಿ ಮುಳುಗಿರುತ್ತಾನೆಯೋ ಆ ವ್ಯಕ್ತಿ ಪರಾಭವನಾಗುತ್ತಾನೆ. ಜನರು ಇಲ್ಲಿ ಕೈಗಾರಿಕೆಗಳು, ಉದ್ದಿಮೆ ಮತ್ತು ಇನ್ನು ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ.

ಅದೆಲ್ಲದರ ನಿಜವಾದ ಉದ್ದೇಶ ಇಂದ್ರಿಯಗಳನ್ನು ತೃಪ್ತಿ ಪಡಿಸುವುದಾಗಿದೆ. ಆದರೆ ಕೃಷ್ಣಪ್ರಜ್ಞೆಯನ್ನು ಅರ್ಥಮಾಡಿಕೊಳ್ಳದೆ, ಕೃಷ್ಣಪ್ರಜ್ಞರಾಗದೆ ಒಬ್ಬವ್ಯಕ್ತಿ ಕೇವಲ ಈ ಕಾಮ್ಯಕರ್ಮಗಳಿಗೆ ತನ್ನ ಸಮಯವನ್ನು ವ್ಯರ್ಥಮಾಡುತ್ತಿದ್ದರೆ, ಅದು ಅವನ ಪರಾಭವ ಅಥವಾ ಸೋಲು. ಪರಾಭವಸ್ ತಾವದ್ ಅಬೋಧ-ಜಾತಃ.

ಮುಂದಿನ ಶ್ಲೋಕದಲ್ಲಿ ಋಷಭದೇವನು ಹೇಳುತ್ತಾನೆ : –

ಏವಂ ಮನಃ ಕರ್ಮವಶಂ ಪ್ರಯುಙ್ಕ್ತೇ

ಅವಿದ್ಯಯಾಽತ್ಮನ್ನುಪಧೀಯಮಾನೇ |

ಪ್ರೀತಿರ್ನಯಾವನ್ಮಯಿ ವಾಸುದೇವೇ

ಮುಚ್ಯತೇ ದೇಹಯೋಗೇನ ತಾವತ್ ||

“ ವ್ಯಕ್ತಿಯು ತಮೋಗುಣ ಆವೃತನಾದಾಗ ಅವನು ಜೀವಿಯನ್ನು ಮತ್ತು ಪರಮಪುರುಷನನ್ನು ಅರಿತುಕೊಳ್ಳಲಾರ, ಮತ್ತು ಅವನ ಮನಸ್ಸು ಕಾಮ್ಯ ಕರ್ಮಗಳಿಗೆ ವಶವಾಗಿರುತ್ತದೆ. ಆದ್ದರಿಂದ ನನ್ನಿಂದ ಅನ್ಯನಲ್ಲದ ಶ್ರೀವಾಸುದೇವನಲ್ಲಿ ಪ್ರೀತಿಯನ್ನು ಬೆಳೆಸಿಕೊಳ್ಳುವವರೆಗೆ ಮತ್ತೆ ಮತ್ತೆ ಭೌತಿಕ ಶರೀರವನ್ನು ಪಡೆಯುವುದರಿ೦ದ ಮುಕ್ತನಾಗುವುದಿಲ್ಲ.’ (ಶ್ರೀಮದ್ಭಾಗವತ – 5.5.6)

ಆದ್ದರಿಂದ ಪ್ರತಿಯೊಬ್ಬನೂ ಈ ಜೀವನದ ತಪ್ಪು ಕಲ್ಪನೆಯಲ್ಲಿಯೇ ಇದ್ದಾನೆ. ಆದರೆ ಒಂದು ವೇಳೆ ಅವನು ಹೇಗಾದರೂ ವಾಸುದೇವ ಕೃಷ್ಣನ ಭಕ್ತನಾದರೆ ಅವನಿಗೆ ರಕ್ಷಣೆ ಇದೆ. ಪ್ರೀತಿರ್ ನ ಯಾವನ್ ಮಯಿ ವಾಸುದೇವೇ. ಋಷಭದೇವನು ವಾಸುದೇವನ ಅವತಾರನಾಗಿದ್ದಾನೆ.

ಒಂದು ವೇಳೆ ಜನನ ಮತ್ತು ಮರಣದ ಈ ಬಂಧನದಲ್ಲಿ ಯಾರಿಗಾದರೂ ಭಕ್ತನ ಸಂಪರ್ಕವಾಗಿ ಭಕ್ತಿಸೇವೆಯ ಬೀಜವು ಸಿಕ್ಕರೆ ಅದು ಅವನ ಜನನ ಮತ್ತು ಮರಣಗಳ ಚಕ್ರದ ಪುನರಾವರ್ತನೆಯಿಂದ ರಕ್ಷಣೆಯು ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಜನರಿಗೆ ನಾವು ಅವಕಾಶಗಳನ್ನು ಕೊಡುತ್ತಿದ್ದೇವೆ. ಜಗತ್ತಿನ ವಿವಿಧ ಭಾಗಗಳಲ್ಲಿ ನಾವು ಕೇಂದ್ರಗಳನ್ನು ತೆರೆಯುತ್ತಿದ್ದೇವೆ. ಅದರ ಉದ್ದೇಶವೇನು? ಅದರ ಉದ್ದೇಶ ಪ್ರತಿಯೊಬ್ಬರಿಗೂ ವಾಸುದೇವ ಕೃಷ್ಣನ ಭಕ್ತರಾಗಲು ಅವಕಾಶ ಕೊಡುವುದಾಗಿದೆ. ಆಗಲೇ ಅವನಿಗೆ ರಕ್ಷಣೆ.

ಜನರು ಹೋರಾಡುತ್ತಿದ್ದಾರೆ, ಕಷ್ಟಪಟ್ಟು ದುಡಿಯುತ್ತಿದ್ದಾರೆ ಮತ್ತು ಇಂದ್ರಿಯತೃಪ್ತಿಯ ಪರಿಣಾಮವಾದ ಜನನ-ಮರಣದ ಚಕ್ರದ ಪುನರಾವರ್ತನೆ ಪಡೆಯುತ್ತಿದ್ದಾರೆ. ಅಸ್ತಿತ್ವಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಒಂದು ವೇಳೆ ಯಾರಿಗಾದರೂ ಹೇಗಾದರೂ ವಾಸುದೇವನ ಭಕ್ತಿಸೇವೆಯ ಬೀಜ ಸಿಕ್ಕರೆ, ಅವನು ರಕ್ಷಿಸಲ್ಪಡುತ್ತಾನೆ. ಕೃಷ್ಣಪ್ರಜ್ಞರಾಗದೇ ಜನನ ಮರಣದ ಪ್ರಕ್ರಿಯೆಯ ಪುನರಾವರ್ತನೆ ನಡೆಯುತ್ತಲೇ ಇರುತ್ತದೆ ಮತ್ತು ಒಂದು ದೇಹದಿಂದ ಇನ್ನೊಂದು ದೇಹ ಪಡೆಯುತ್ತಲೇ ಇರುತ್ತೀರಿ. ಈ ತಿಳುವಳಿಕೆಯೇ ಕೃಷ್ಣಪ್ರಜ್ಞೆಯ ಮೂಲ ಸಿದ್ಧಾಂತ.

ಕೃಷ್ಣ ಪ್ರಜ್ಞೆಯು ಒಂದು ರೀತಿಯ ಧಾರ್ಮಿಕ ನಂಬಿಕೆಯೆ೦ದು ತಿಳಿದುಕೊಳ್ಳಬೇಡಿ. ಅದು ಜನನ ಮರಣದ ಪುನರಾವರ್ತನೆಯಿಂದ ಹೇಗೆ ಬಿಡುಗಡೆ ಹೊಂದಬೇಕು ಎನ್ನುವ ವಿಜ್ಞಾನ. ಇದುವೇ ವಿಜ್ಞಾನ. ಜನರು ಯಾವುದೇ ಧಾರ್ಮಿಕ ಪದ್ಧತಿಯನ್ನು ಸ್ವೀಕರಿಸಿದಂತೆ ಇದು ಧಾರ್ಮಿಕ ಪದ್ಧತಿ ಅಲ್ಲ.

ಕೆಲವರು ಹಿಂದೂಗಳು, ಕೆಲವರು ಮುಸಲ್ಮಾನರು, ಕೆಲವರು ಕ್ರಿಶ್ಚಿಯನ್ ಆಗಿರುತ್ತಾರೆ. ಆ ರೀತಿಯಾಗಿ ಇದು ಅಲ್ಲ. ಇದು ವಿಜ್ಞಾನ. “”ಹೇಗಾದರೂ ಭಗವತ್ಪ್ರೇಮವನ್ನು ಬೆಳೆಸಿಕೊಳ್ಳಿ. ಆಗ ನೀವು ರಕ್ಷಿಸಲ್ಪಡುತ್ತೀರಿ” ಎಂದು ನಾವು ಬೋಧಿಸುತ್ತಿದ್ದೇವೆ. ಹೇಗೆ ಆ ಭಗವತ್ಪ್ರೇಮವನ್ನು ವೃದ್ಧಿಸಿಕೊಳ್ಳುವುದು? ನಮ್ಮ ಚಟುವಟಿಕೆಗಳಿಂದ.

ಬೆಳಗ್ಗೆ ಬೇಗ ಏಳುವುದು, ಮಂಗಳಾರತಿ ಮಾಡುವುದು, ವಿಗ್ರಹವನ್ನು ಸಿಂಗರಿಸುವುದು, ಒಳ್ಳೆಯ ಆಹಾರವನ್ನು ಅರ್ಪಿಸುವುದು, ಹಬ್ಬ ಆಚರಿಸುವುದು, ಪುಸ್ತಕಗಳನ್ನು ರಚಿಸುವುದು ಮತ್ತು ಅವುಗಳನ್ನು ಹಂಚುವುದರಿಂದ, ಭಕ್ತಿಸೇವೆಯಲ್ಲಿನ ಈ ಚಟುವಟಿಕೆಗಳು ನಮ್ಮನ್ನು ಜನನ-ಮರಣದ ಪುನರಾವರ್ತನೆಯಿಂದ ರಕ್ಷಿಸುತ್ತವೆ. ಇಲ್ಲದಿದ್ದರೆ ನಾವು ನಾಶವಾಗುತ್ತವೆ ಮತ್ತು ಈ ಜನನ ಮರಣದ ಚಕ್ರದ ಪುನರಾವರ್ತನೆ ಮುಂದುವರಿಸಲೇಬೇಕಾಗುತ್ತದೆ.

ಇದು ಅವಿದ್ಯಾ. ಈ ಅವಿದ್ಯೆ, ಅಜ್ಞಾನದಿಂದ ಕೆಲವು ಸಲ ನಾವು ಮಾನವರು, ಕೆಲವು ಸಲ ಬೆಕ್ಕುಗಳು, ನಾಯಿಗಳು ಮತ್ತು ಕೆಲವು ಸಲ ದೇವತೆಗಳಾಗಿರುತ್ತೇವೆ. ಇದು ನಡೆಯುತ್ತಲೇ ಇರುತ್ತದೆ. ಚೈತನ್ಯ ಮಹಾಪ್ರಭುಗಳು ಹೇಳುತ್ತಾರೆ. ಬ್ರಹ್ಮಾನಂದ ಬ್ರಹ್ಮಿತೆ. ವಿಶ್ವದಾದ್ಯಂತ ಒಂದು ದೇಹದಿಂದ ಇನ್ನೊಂದು ದೇಹಕ್ಕೆ, ಒಂದು ಗ್ರಹಲೋಕದಿಂದ ಇನ್ನೊಂದು ಗ್ರಹಲೋಕಕ್ಕೆ ನಾವು ಅಲೆದಾಡುತ್ತಲೇ ಇದ್ದೇವೆ.

ಒಂದು ವೇಳೆ ಈ ಕೃಷ್ಣ ಪ್ರಜ್ಞಾ ಚಳವಳಿಯ ಸಂಪರ್ಕಕ್ಕೆ ಒಬ್ಬವ್ಯಕ್ತಿ ಬಂದು, ಕೃಷ್ಣಪ್ರಜ್ಞೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ, ಅವನು ಅದೃಷ್ಟವಂತನು. ಏಕೆಂದರೆ ಅವನಿಗೆ ಜನನ-ಮರಣ ಚಕ್ರದ ಪುನರಾವರ್ತನೆಯಿಂದ ರಕ್ಷಣೆಯಿದೆ.

ಆದ್ದರಿಂದ ಕೃಷ್ಣನು ಸ್ವತಃ ಸರ್ವಧರ್ಮಾನ್ ಪರಿತ್ಯಜ್ಯ ಮಾಮ್ ಏಕಮ್ ಶರಣಂ ವ್ರಜ ಎಂದು ಹೇಳಿದ್ದಾನೆ. ಅದು ನಿಮ್ಮ ಒಳ್ಳೆಯದಕ್ಕಾಗಿ ಕೃಷ್ಣನು ಹೇಳುತ್ತಾನೆ. “ನನ್ನಲ್ಲಿ ಶರಣಾಗತನಾಗು’ ಇದರಲ್ಲಿ ಕೃಷ್ಣನಿಗೇನು ಲಾಭವಿಲ್ಲ. ಒಂದು ವೇಳೆ ನೀವು ಶರಣಾಗತರಾಗದಿದ್ದರೆ, ಕೃಷ್ಣನು ಏನೂ ಕಳೆದುಕೊಳ್ಳುವುದಿಲ್ಲ.

ಅವನು ಸರ್ವಾಂತರ್ಯಾಮಿ. ಅವನು ನಿಮ್ಮ ಹಾಗೆ ಲಕ್ಷಾಂತರ ಭಕ್ತರನ್ನು ತನ್ನ ಆಸೆಯಿಂದಲೇ ಸೃಷ್ಟಿಸಬಹುದು. “ನೀವು ನನ್ನ ಭಕ್ತರಾಗಿರಿ, ನಾನು ನಿಮ್ಮನ್ನು ಶ್ರೀಮಂತರಾಗಿ ಮಾಡುತ್ತೇನೆ” ಎಂದು ಅವನು ಪ್ರಚಾರ ಮಾಡುತ್ತಿಲ್ಲ. ಇಲ್ಲ, ಇದೆಲ್ಲ ನಿಮ್ಮ ಒಳ್ಳೆಯದಕ್ಕಾಗಿ. ನೀವು ವಾಸುದೇವನ ಭಕ್ತರಾದರೆ ಈ ಜನನ-ಮರಣ ಚಕ್ರದ ಪುನರಾರ್ವನೆಯಿಂದ ರಕ್ಷಿತರಾಗಿರುತ್ತೀರಿ.

ನಾವು ಕೃಷ್ಣನ ಅಂಶವಾಗಿರುವುದರಿಂದ ಮತ್ತು ಅವನ ಮಕ್ಕಳಾಗಿರುವುದರಿಂದ ಕೃಷ್ಣನು ಈ ರೀತಿಯಾಗಿ ನಮಗೆ ಕರುಣೆ ತೋರಿಸುತ್ತಿದ್ದಾನೆ. ಶ್ರೀಮಂತನೊಬ್ಬ ತಂದೆಗೆ ತನ್ನ ಮಗ ಬೀದಿಯಲ್ಲಿ ಹುಚ್ಚನಂತೆ ತಿರುಗುವುದು, ಓಡಾಡುವುದು ಇಷ್ಟವಿಲ್ಲ. ಆದರೆ ಅವನ ಮಗ ಮನೆಗೆ ಬರದೇ ಇದ್ದರೆ ತಂದೆಗೆ ಏನೂ ನಷ್ಟವಿಲ್ಲ. ಮತ್ತು ಒಂದು ವೇಳೆ ಮಗ ತನ್ನ ಶ್ರೀಮಂತ ತಂದೆಯ ಮನೆಗೆ ಬಂದರೆ ಅದು ಅವನ ಒಳಿತಿಗಾಗಿಯೇ ಇರುತ್ತದೆ.

ಆದ್ದರಿಂದ ಕೃಷ್ಣನು “ನನ್ನಲ್ಲಿ ಶರಣಾಗತರಾಗಿ” ಎಂದು ಪ್ರಚಾರ ಮಾಡುತ್ತಿದ್ದಾನೆ. ಯಾರು ಅದೃಷ್ಟವಂತರಾಗಿರುತ್ತಾರೋ ಅವರು ಕೃಷ್ಣನ ಈ ಕೊಡುಗೆಗಳನ್ನು ಸ್ವೀಕರಿಸುತ್ತಾರೆ. ಯಾವಾಗ ನಾವು ನಿಜವಾಗಿಯೂ ಕೃಷ್ಣನನ್ನು ಪ್ರೇಮಿಸುತ್ತೇವೆಯೋ ಅದನ್ನು ಪ್ರೀತಿಯೆಂದು ಕರೆಯುತ್ತಾರೆ.

ನಾವು ನಮ್ಮ ಪ್ರೀತಿಯ ಮಕ್ಕಳನ್ನು ಹೆಂಡತಿಯನ್ನು ಅಥವಾ ಗಂಡನನ್ನು ಪ್ರೇಮಿಸುತ್ತೇವೆ. ಆದರೆ ಅದು ನಿಜವಾದ ಪ್ರೇಮವಲ್ಲ. ಅದು ತಾತ್ಕಾಲಿಕ ಭಾವನೆ. ನಿಜವಾದ ಪ್ರೇಮವು ಕೃಷ್ಣನಿಂದಲೇ ಸಾಧ್ಯ. ಒಂದು ಸಲ ನೀವು ಕೃಷ್ಣನನ್ನು ಪ್ರೇಮಿಸಿದರೆ ಆ ಪ್ರೇಮವು ಯಾವತ್ತೂ ಮುರಿಯುವುದಿಲ್ಲ. ಆದ್ದರಿಂದ ಹೇಗಾದರೂ ಕೃಷ್ಣಪ್ರೇಮದಲ್ಲಿ ತೊಡಗಿ, ಅದುವೇ ಜೀವನದ ಜಯವಾಗುತ್ತದೆ.

ಅತ್ಯಂತ ಧನ್ಯವಾದಗಳು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi