ಒಂದು ನೋಟ
– ಆಂಗ್ಲ ಮೂಲ: ಧನುರ್ಧರ ದಾಸ, ಅನುವಾದ: ಎಂ.ಕೆ.ಗೋಪಿನಾಥ್
ಬದುಕಲು ಒಂದು ವೃತ್ತಿಯನ್ನು ಹಿಡಿಯುವಂತೆ ಕೃಷ್ಣನು ನಮ್ಮನ್ನು ಪ್ರೋತ್ಸಾಹಿಸುತ್ತಾನೆ. ಅದೇ ಹೊತ್ತಿನಲ್ಲಿ ಬದುಕಿನ ನೈಜ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಕಾರ್ಯಶೀಲರಾಗುವಂತೆಯೂ ಮಾಡುತ್ತಾನೆ.

ಒಮ್ಮೆ ದಕ್ಷಿಣ ಭಾರತದಲ್ಲಿ ಶ್ರೀಲ ಪ್ರಭುಪಾದರನ್ನು ಒಬ್ಬ ಪತ್ರಿಕಾ ವರದಿಗಾರ ಪ್ರಶ್ನಿಸಿದ. “ಸ್ವಾಮಿ, ತಾವು ಅದ್ವೈತಿಯೆ ಅಥವಾ ದ್ವೈತಿಯೇ?” ಆ ವರದಿಗಾರನ ಹುಸಿ ಬುದ್ಧಿಜೀವಿಯ ಧ್ವನಿಯನ್ನು ಗುರುತಿಸಿದ ಶ್ರೀಲ ಪ್ರಭುಪಾದರು ಭಗವದ್ಗೀತೆಯನ್ನು ಉಲ್ಲೇಖಿಸುತ್ತಾ ಹೀಗೆಂದು ಪ್ರತಿಕ್ರಿಯಿಸಿದರು.
“ಇಂತಹ ವಿಷಯಗಳನ್ನು ಚರ್ಚಿಸುವುದರಿಂದ ಪ್ರಯೋಜನವೇನು? ಕೃಷ್ಣನುಅನ್ನಾದ್ ಭವಂತಿ ಭೂತಾನಿ ಎನ್ನುತ್ತಾನೆ. ಅನ್ನ ಎಂದರೆ ಧಾನ್ಯಗಳು, ಜನರಿಗೆ ಧಾನ್ಯಗಳಿಲ್ಲ. ಧಾನ್ಯಗಳು ಮಳೆಯಿಂದ ಬೆಳೆಯುತ್ತವೆ. ಯಜ್ಞಗಳಿಂದ ಮಳೆ ಉಂಟಾಗುತ್ತದೆ. ಆದ್ದರಿಂದ ಯಜ್ಞಗಳನ್ನು ಮಾಡಿ.” ಮುಖ್ಯಾಂಶ, ”ಆತ್ಮ ಸಾಕ್ಷಾತ್ಕಾರದ ಹಾದಿಯಲ್ಲಿ ನಡೆವಾಗಲೂ ಕೂಡ ನಾವು ನಮ್ಮ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು.”
ಅರ್ಜುನನು ಕ್ಷತ್ರಿಯನಂತೆ ಯುದ್ಧದಲ್ಲಿ ತೊಡಗುವಂತೆ ಕೃಷ್ಣನು ಪ್ರಚೋದಿಸುತ್ತಿರುತ್ತಾನೆ ಎಂಬುದು ಭಗವದ್ಗೀತೆಯಲ್ಲಿದೆ. ಈ ಪ್ರಚೋದನೆ ಕೃಷ್ಣನ ಯಜ್ಞದ ಒಂದು ಭಾಗವೇ. ಆ ಬಳಿಕ ಕೃಷ್ಣನು ಯಜ್ಞವನ್ನು ಅನೇನ ಪ್ರಸವಿಷಧ್ವಮ್ ಎಂದು ವರ್ಣಿಸುತ್ತಾನೆ.
ಹಾಗೆಂದರೆ “ಒಬ್ಬನನ್ನು ಹೆಚ್ಚು ಹೆಚ್ಚು ಸಂಪದ್ಭರಿತನ್ನಾಗಿ ಮಾಡುವುದು” ಎಂದರ್ಥ ಅಷ್ಟೇ ಅಲ್ಲ. ಏಷಾ ವೋತ್ಸವಿಷ್ಠ ಕಾಮಧುಕ ಎನ್ನುವುದೂ ಕೃಷ್ಣನ ಗುರಿ. ಆ ಮಾತಿಗೆ “ಸುಖವಾಗಿ ಬದುಕಲು ಹಾಗೂ ಮೋಕ್ಷಗಳಿಸಲು ಬೇಕಾದುದೆಲ್ಲವನ್ನೂ ನಿಮಗೆ ದಯಪಾಲಿಸುವುದು” ಎಂದರ್ಥ.
ವೇದವು ವಿಧಿಸುವ ವೃತ್ತಿಧರ್ಮವು ಸಂಪದಭ್ಯುದಯವನ್ನು ತರುತ್ತರಾದರೂ ಆಧ್ಯಾತ್ಮಿಕ ಮಾರ್ಗದರ್ಶನವಿಲ್ಲವಾದಲ್ಲಿ ಆರ್ಥಿಕ ಅಭಿವೃದ್ಧಿಯೊಂದೇ ಬದುಕಿನ ನಿಜವಾದ ಗುರಿಯೆಂದು ಭಾವಿಸುವ ಪ್ರವೃತ್ತಿ ನಮ್ಮದಾಗುತ್ತದೆ.
ಏಸು ಕ್ರಿಸ್ತನು ಹೇಳುವಂತೆ, “ವ್ಯಕ್ತಿಯು ತನ್ನ ನಿರಂತರಾತ್ಮವನ್ನು ಕಳೆದುಕೊಂಡು ಇಡೀ ವಿಶ್ವವನ್ನೇ ಗೆದ್ದರೂ ಏನು ಲಾಭ ಬಂದ ಹಾಗಾಯಿತು?”
ನಾವು ನಮ್ಮ ಬದುಕಿನ ನಿಜವಾದ ಸಮಸ್ಯೆಗಳನ್ನು ಅರ್ಥಮಾಡಿಕೊಂಡಾಗ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಹೊಂದಾಣಿಕೆಗಳಿಂದ ಗಳಿಸುವ ಸುಖದ ಮಿತಿಗಳು ನಮಗೆ ನಿಚ್ಚಳವಾಗಿ ಕಾಣುತ್ತವೆ. ಉದಾಹರಣೆಗೆ ನನ್ನ ಒಬ್ಬ ಭಾರತೀಯ ಮಿತ್ರನು ಅಮೆರಿಕಕ್ಕೆ ವಲಸೆ ಹೋಗುವ ಆಲೋಚನೆಯಲ್ಲಿ ಮಗ್ನನಾದ.
ತನಗಿದ್ದ ಅವಕಾಶಗಳು ತುಂಬ ಕಡಮೆ ಎಂದರಿತ ಆತ ತನ್ನ ವ್ಯಾಪಾರದಲ್ಲಿ ಆಸಕ್ತಿ ಕಳೆದುಕೊಂಡ. “ಜನ್ಮ ಮೃತ್ಯು ಜರಾ ವ್ಯಾಧಿ ದುಃಖ ದೋಷಾನುದರ್ಶನಮ್.” ಹುಟ್ಟು ಸಾವು, ವೃದ್ಧಾಪ್ಯ ಹಾಗೂ ರೋಗ – ಇವು ಬದುಕಿನ ನಿಜವಾದ ಸಮಸ್ಯೆಗಳೆಂದು ಜ್ಞಾನವಂತನು ಪರಿಭಾವಿಸುತ್ತಾನೆ ಎಂಬ ಕೃಷ್ಣನ ಈ ಮಾತು ಭಗವದ್ಗೀತೆಯಲ್ಲಿ ಬರುತ್ತದೆ – ಅದನ್ನು ಓದುವಂತೆ ನಾನು ನನ್ನ ಸ್ನೇಹಿತನಿಗೆ ಹೇಳಿದೆ.
ಆನಂತರ ಕೆಲವು ಪ್ರಶ್ನೆಗಳನ್ನು ಕುರಿತು ಆಲೋಚಿಸುವಂತೆ ಆತನಿಗೆ ತಿಳಿಸಿದೆ. ಆ ಪ್ರಶ್ನೆಗಳು ಇವು; ಅಮೆರಿಕದಲ್ಲಿ ವಾಸಿಸುವುದರಿಂದ ನೀನು ಹೃದಯ ಕಾಯಿಲೆ ಹಾಗೂ ಕ್ಯಾನ್ಸರ್ನಂಥ ಕಾಯಿಲೆಗಳಿಗೆ ಅತೀತನಾಗುವೆಯ? ಅಮೆರಿಕನ್ನರು ಮುದುಕರಾಗಿ ಸಾಯವುದಿಲ್ಲವೆ?

ಆ ಸ್ನೇಹಿತ ಒಂದು ವಾರ ಬಿಟ್ಟು ಮತ್ತೆ ನನ್ನಲ್ಲಿಗೆ ಬಂದಾಗ ಆತನಿಗೆ ತನ್ನ ತಪ್ಪಿನ ಅರಿವಾಗಿತ್ತು. ಬರೇ ಒಂದು ಭೌಗೋಳಿಕ ಹೊಂದಾಣಿಕೆಯು ನನ್ನ ಬದುಕಿನ ನೈಜ ಸಮಸ್ಯೆಗಳನ್ನು ಪರಿಹರಿಸಬಹುದೆಂದು ಭಾವಿಸಿದ್ದು ನನ್ನ ಮೂರ್ಖತನ” ಎಂದು ಆತ ಒಪ್ಪಿಕೊಂಡ.
ಹೀಗಿರುತ್ತ, ಬದುಕಿನ ಈ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅಷ್ಟೇನೂ ಸುಲಭವಾಗಿಲ್ಲ. ಭಗವದ್ಗೀತೆಯಲ್ಲಿ ಅರ್ಜುನನು ಒಂದು ದೊಡ್ಡ ಸಂದಿಗ್ಧವನ್ನು ಎದುರಿಸುತ್ತಾನೆ. ರಾಜ್ಯ ಗಳಿಸಲು ತಾನು ಯುದ್ಧ ಮಾಡಿದರೆ ಯಾರೊಂದಿಗೆ ತನ್ನ ಅರಸುತನವನ್ನು ಅನುಭವಿಸಬೇಕೋ ಆ ಪ್ರೀತಿಪಾತ್ರರನ್ನು ಕೊಲ್ಲಬೇಕು.
ಯುದ್ಧ ಮಾಡಲಿಲ್ಲವೋ ತನ್ನ ಆದಾಯ ಕಡಮೆ ಆಗುವುದಲ್ಲದೆ ಕ್ಷತ್ರಿಯ ಧರ್ಮವನ್ನು ಪಾಲಿಸದ ಲೋಪಕ್ಕೆ ಗುರಿಯಾಗಬೇಕು. ಈ ಧೈರ್ಯ ಕುಗ್ಗಿಸುವ ಸ್ಥಿತಿಯು ಅರ್ಜುನನಿಗೆ ಒಂದು ಮುಖ್ಯ ಸಾಕ್ಷಾತ್ಕಾರವನ್ನು ನೀಡುತ್ತದೆ. “ನನ್ನ ಇಂದ್ರಿಯಗಳನ್ನು ಹಿಂಡುತ್ತಿರುವ ಈ ದುಃಖವನ್ನು ಓಡಿಸುವ ಮಾರ್ಗ ನನಗೆ ಕಾಣುತ್ತಿಲ್ಲ.
ಸಂಪದ್ಭರಿತ ಹಾಗೂ ಎದುರಾಳಿಗಳಿಲ್ಲದ, ಸ್ವರ್ಗಲೋಕದ ದೇವತೆಗಳು ಅನುಭವಿಸುವ ಸಾರ್ವಭೌಮತ್ವದ ರಾಜ್ಯವೊಂದು ನನಗೆ ಈ ಭೂಮಿಯ ಮೇಲೆ ದೊರೆತರೂ ನಾನು ನನ್ನ ದುಃಖವನ್ನು ತೊಡೆದು ಹಾಕಲಾರೆ. ಅರ್ಜುನನ ತೊಳಲಾಟಕ್ಕೆ ಪ್ರತಿಕ್ರಿಯಿಸಿದ ಕೃಷ್ಣನು ಭಗವದ್ಗೀತೆಯನ್ನು ಬೋಧಿಸಿದ. ದಿವ್ಯ ಜ್ಞಾನದ ನೆರವಿನಿಂದ ಬದುಕಿನ ಕಳವಳಗಳನ್ನು ದೂರಮಾಡಬಹುದೆಂದು ತೋರಿಸುವುದು ಕೃಷ್ಣನ ಉದ್ದೇಶವಾಗಿತ್ತು.
ಅರ್ಜುನನಂತೆ ನಮ್ಮಲ್ಲಿ ಯಾರು ಬೇಕಾದರೂ ಕಳವಳದಿಂದ ಜ್ಞಾನದೆಡೆಗೆ ಭಗವದ್ಗೀತೆಯ ಮಾರ್ಗದರ್ಶನದಿಂದ ನಡೆಯಬಹುದು. ಆದರೆ ಯಾರು ಆರ್ಥಿಕ ಆಸೆಗಳಿಂದ ಮಾರ್ಗದರ್ಶನ ಪಡೆಯುವರೋ ಅವರು ಭ್ರಮೆಯತ್ತ ನಡೆಯಲ್ಪಡುತ್ತಾರೆ. ವೈದಿಕ ಚರಿತ್ರೆಯ ತುಂಬ ಹೀಗೆ ಭ್ರಮೆ ಹಿಡಿದ ಜನರ ಉದಾಹರಣೆಗಳು ಸಿಗುತ್ತವೆ ಹಾಗೂ ಆಧುನಿಕ ಬದುಕು ಪ್ರತಿದಿನ ನಮಗೆ ಇಂಥ ಹೆಚ್ಚು ಹೆಚ್ಚು ಸಾದೃಶ್ಯಗಳನ್ನು ನೀಡುತ್ತದೆ. ನನ್ನ ತಾರುಣ್ಯವು ಎರಡು ಪ್ರಸಂಗಗಳನ್ನು ನನ್ನ ನೆನಪಿಗೆ ತರುತ್ತದೆ.
ವಿಶ್ವವಿದ್ಯಾಲಯದ ಮೂರನೆಯ ವರ್ಷದಲ್ಲಿದ್ದಾಗ ಒಮ್ಮೆ ನನ್ನ ಬಂಧುಗಳನ್ನು ಭೇಟಿ ಮಾಡಲು ಬಂದ ಹೊತ್ತಿನಲ್ಲಿ ಉದ್ಯಮಿ ಹಾವರ್ಡ್ ಹ್ಯೂಸ್ನ ಬಗೆಗೆ ನಾನೊಂದು ಪತ್ರಿಕಾವರದಿ ಕೇಳಿದೆ. ಈ ಹ್ಯೂಸ್ ಅಮೆರಿಕದ ಅತ್ಯಂತ ಶ್ರೀಮಂತ. ಈತ ನಿಗೂಢ ರೀತಿಯಲ್ಲಿ ಹತ್ತು ವರ್ಷಗಳಿಗೂ ಮೀರಿ ಜನರ ಕಣ್ಣಿಗೆ ಬೀಳದಂತೆ ಪ್ರತ್ಯೇಕವಾಗಿದ್ದು ಬಿಟ್ಟ.
ಕಾಯಿಲೆಗಳ ಬಗೆಗೆ ಹೆದರಿದ್ದ ಈತ ತನ್ನ ಬಂಗಲೆಯ ಶುದ್ಧೀಕರಿಸಿದ ಕೊಠಡಿಗಳಲ್ಲಿ ಬಂದಿಯಂತೆ ವಾಸಿಸುತ್ತಿದ್ದ. ಇವನ ಆಳೊಬ್ಬ ಇವನಿಗೂ ಹೊರ ಜಗತ್ತಿಗೂ ಸಂಪರ್ಕ ಸೇತುವೆಯಾಗಿದ್ದ. ಈ ಆಳಾದರೋ ಶ್ವೇತವಸ್ತ್ರಗಳನ್ನು ಧರಿಸಿ, ಕೈಗೆ ಗವಸುಗಳನ್ನು ತೊಟ್ಟುಕೊಂಡು ದಿನಕ್ಕೆ ಮೂರು ಸಲ ಹ್ಯೂಸ್ಗೆ ಆಹಾರ ಇತ್ಯಾದಿ ಒದಗಿಸುತ್ತಿದ್ದ.
ಆದರೆ ಹ್ಯೂಸ್ ಇನ್ಪ್ಲೊಯೆಂಜಾ ಜ್ವರದಿಂದ ಸತ್ತುಹೋಗಿದ್ದ. ಈ ಸುದ್ದಿಯನ್ನು ಬಿತ್ತರಿಸಿದಾತನ ಡೊಂಕು ಮಾತು ರೋಗವನ್ನು ಜಯಿಸಲು ಹಾಗೂ ಸಾವನ್ನು ಹಿಮ್ಮೆಟ್ಟಿಸಲು ಹ್ಯೂಸ್ ಎಂತೆಂಥ ಮೂರ್ಖ ಪ್ರಯತ್ನಗಳಿಗೆ ಕೈ ಹಾಕಿದ್ದ ಎಂಬುದನ್ನು ಹೇಗೋ ಬಯಲು ಮಾಡಿತು.
ಇಂತಹದೇ ಇನ್ನೊಂದು (ಎರಡನೆಯ) ಪ್ರಸಂಗ ನಡೆದದ್ದು ನಾನು ಟೆಕ್ಸಾಸ್ನ ಡಲ್ಲಾಸ್ನಲ್ಲಿನ ಹರೇಕೃಷ್ಣ ಕೇಂದ್ರದಲ್ಲಿ ವಾಸಿಸುತ್ತಿದ್ದ ಕಾಲದಲ್ಲಿ. ಒಂದು ದಿನ ನಾನು ಇನ್ನೊಬ್ಬ ಭಕ್ತನ ಜೊತೆ ನಮ್ಮ ಕೇಂದ್ರದ ಹತ್ತಿರವಿದ್ದ ಎಣ್ಣೆ ಜಹಗೀರುದಾರ ಎಚ್.ಎಲ್.ಹಂಟ್ನನ್ನು ಕಂಡು ನಾವು ಹೊರತಂದಿದ್ದ ಭಗವದ್ಗೀತೆ ಯಥಾರೂಪದ ಒಂದು ಪ್ರತಿಯನ್ನು ಕೊಡಲು ಹೋದೆ.

ಆದರೆ ಹಂಟ್ ಮಹನೀಯನಿಗೆ ರೂಪಿಸಲಾಗಿದ್ದ ರಕ್ಷಣಾ ವ್ಯವಸ್ಥೆ ತುಂಬ ದೊಡ್ಡ ರೀತಿಯದಾಗಿತ್ತು. ನಮ್ಮ ಉದ್ದೇಶ ಸಾಧುವಾದದ್ದೇ ಆದರೂ ಹಂಟ್ನ ಮನೆಯ ಕಾವಲು ಭಟರು ನಮ್ಮನ್ನು ಬಾಗಿಲಲ್ಲೇ ತಡೆದರು. ದುರದೃಷ್ಟವಶಾತ್ ಹಂಟ್ನ ಕಾವಲುಭಟರು ಮರಣವನ್ನು ತಡೆಯಲಾಗಲಿಲ್ಲ. ಆತ ಒಂದು ವಾರದ ಬಳಿಕ ಅನಿರೀಕ್ಷಿತವಾಗಿ ತೀರಿಕೊಂಡ.
ಆದರೆ ಸಂಪತ್ತು ಕೇಡು ತರುವಂಥದೇನೂ ಆಗಿರಬೇಕಾದ್ದಿಲ್ಲ. ಏಕೆಂದರೆ ಸಂಪತ್ತನ್ನು ನೀವು ಹೇಗೆ ಬಳಸುತ್ತೀರೋ ಎಂಬುದರ ಮೇಲೆ ಅದರ ಬೆಲೆ ಕಟ್ಟುವುದು ನಡೆಯುತ್ತದೆ. ಉದಾಹರಣೆಗೆ ಒಂದು ಚಾಕು ಕತ್ತಿಯನ್ನು ಕೊಲೆಗಡುಕನ ಆಯುಧವಾಗಿ ಬಳಸಬಹುದು.
ಹಾಗೆಯೇ ಕುಶಲ ಕರ್ಮಿಯೊಬ್ಬನ ಉಪಕರಣವಾಗಿಯೂ ಬಳಸಬಹುದು. ಅದೇ ರೀತಿ ನಮ್ಮ ಬಿಡುವಿಲ್ಲದ ಕೆಲಸ ಕಾರ್ಯಗಳು ನಮ್ಮನ್ನು ಆಧ್ಯಾತ್ಮಿಕತೆಯಿಂದ ದೂರ ದೂರ ಮಾಡಬಲ್ಲವು. ಆದರೆ ಅದೇ ಕೆಲಸ ಕಾರ್ಯಗಳು ನಮ್ಮ ಬದುಕಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಹಾಯ ಮಾಡುತ್ತವೆ ಎಂಬುದನ್ನು ಭಗವದ್ಗೀತೆಯು ನಮಗೆ ಬೋಧಿಸುತ್ತದೆ.
ಆದ್ದರಿಂದ ಭಗವಾನ್ ಕೃಷ್ಣನು ಅರ್ಜುನನಿಗೆ ಹೀಗೆಂದು ಬೋಧಿಸುತ್ತಾನೆ. “ಓ ಕುಂತೀಪುತ್ರ, ನೀನು ಏನನ್ನೇ ಮಾಡಿದರೂ, ಏನನ್ನೇ ತಿಂದರೂ, ಏನನ್ನೇ ಅರ್ಪಿಸಿದರೂ, ಕೊಟ್ಟರೂ ಮತ್ತು ನೀನು ಯಾವ ತೆರನ ತಪಶ್ಚರ್ಯೆಗಳನ್ನು ನಡೆಸಿದರೂ, ಅವೆಲ್ಲವೂ ನನಗೆ ಸಮರ್ಪಿತವಾದದ್ದೆಂದು ತಿಳಿದು ಮಾಡು ಹೀಗೆ ಮಾಡುವುದರಿಂದ ನೀನು ಕರ್ಮ ಬಂಧನದಿಂದ ಮುಕ್ತನಾಗುವೆ. ಅಷ್ಟೇ ಅಲ್ಲ ಕರ್ಮದ ಸತ್ಫಲ ಅಥವಾ ದುಷ್ಫಲಕ್ಕೆ ನೀನು ಬಾಧ್ಯನಾಗುವುದಿಲ್ಲ.”
ಲೌಕಿಕ ಸಂಪನ್ಮೂಲಗಳು ಆಧ್ಯಾತ್ಮಿಕ ಉನ್ನತಿಗೆ ಹೇಗೆ ನೆರವಾಗಬಲ್ಲವು ಎಂಬುದನ್ನು ಇಲ್ಲಿ ಕಾಣಬಹುದು. ಕುರುಡನು ನೋಡಲಾರ, ಹಾಗೆಯೇ ಕುಂಟನು ನಡೆಯಲಾರ, ಆದರೆ ಕುರುಡನು ಕುಂಟನನ್ನು ತನ್ನ ಭುಜದ ಮೇಲೆ ಹೊರಬಲ್ಲ, ಇಬ್ಬರೂ ಕೂಡಿ ನೋಡುವುದು ನಡೆಯುವು ಎರಡನ್ನೂ ಮಾಡಬಲ್ಲರು.
ಇದೇ ರೀತಿ ನಾವು ನಮ್ಮ ಬದುಕಿನ ಸಮಸ್ಯೆಗಳನ್ನು ವೈಯಕ್ತಿಕ ಹಾಗೂ ಸಾಮೂಹಿಕ ಸಮಸ್ಯೆಗಳನ್ನು – ಅತ್ಯುತ್ತಮವಾಗಿಯೇ ಪರಿಹರಿಸಕೊಂಡೇವು. ನಮ್ಮ ಲೌಕಿಕ ಸಂಪನ್ಮೂಲಗಳಿಗೆ ಆಧ್ಯಾತ್ಮಿಕ ಕಣ್ಣುಗಳು ದಾರಿ ತೋರಿಸಿದಾಗ, ಶ್ರೀಲ ಪ್ರಭುಪಾದರು ಭಾರತ ಭೂಮಿಯನ್ನು ಕುಂಟು ಎಂದು ವರ್ಣಿಸಿದರು.
ಏಕೆಂದರೆ ಭಾರತಾಂಭೆಗೆ ಆಧ್ಯಾತ್ಮಿಕ ದೃಷ್ಟಿಕೋನ ಉಂಟಾದರೂ ಆಕೆ ಆರ್ಥಿಕವಾಗಿ ದುರ್ಬಲಳು. ಇದಕ್ಕೆ ವ್ಯತಿರಿಕ್ತವಾಗಿ ಮುಂದುವರಿದ ದೇಶಗಳು ಕುರುಡರಂತಿವೆ. ಏಕೆಂದರೆ ಆ ದೇಶಗಳ ಬಳಿ ಸಂಪತ್ತಿದ್ದರೂ ಅವುಗಳಿಗೆ ಮಾರ್ಗ ತೋರುವವರು ಇಲ್ಲ.
ಅವರದೇ ಆದ ದರ್ಶನವೂ ಆ ದೇಶಗಳ ಜನತೆಗಿಲ್ಲ. ಈ ಸ್ಥಿತಿಯೇ ಕಾರಣವಾಗಿ ಔದ್ಯೋಗಿಕವಾಗಿ ಮುಂದುವರಿದ ರಾಷ್ಟ್ರಗಳ ಸಂಪನ್ಮೂಲಗಳು ಭರತಖಂಡದ ಆಧ್ಯಾತ್ಮಿಕ ಒಳನೋಟಗಳು ಹೇಳುವಂತೆ ಬಳಕೆಯಾದಲ್ಲಿ ಜಗತ್ತಿನ ಸಮಸ್ಯೆಗಳನ್ನು ನಿವಾರಿಸಬಲ್ಲವಾಗಿವೆಯೆಂದು ಶ್ರೀಲ ಪ್ರಭುಪಾದರು ಬೋಧಿಸಿದರು.
ಈ ತತ್ತ್ವವನ್ನು ಪ್ರಭುಪಾದರು ಕಾರ್ಯರೂಪಕ್ಕೂ ತಂದರು. ಪಾಶ್ಚಾತ್ಯ ದೇಶಗಳ ಶಿಷ್ಯರು ಕೊಟ್ಟ ದೇಣಿಗೆ ರೂಪದ ಹಣದಿಂದ ಶ್ರೀಲ ಪ್ರಭುಪಾದರು ಭಗವದ್ಗೀತೆಯ ಯಥಾರೂಪದ ನೂರು ಮಿಲಿಯಕ್ಕೂ ಮೀರಿ ಪ್ರತಿಗಳನ್ನು ನಲವತ್ತು ಭಾಷೆಗಳಲ್ಲಿ ಮುದ್ರಣ ಮಾಡಿಸುವ ಏರ್ಪಾಡು ಮಾಡಿದರು. ಅಷ್ಟೇ ಅಲ್ಲ ಈ ಗ್ರಂಥಗಳು ವಿಶ್ವದ ಎಲ್ಲೆಡೆ ವಿತರಣೆಯಾಗುವಂತೆ ನೋಡಿಕೊಂಡರು.






Leave a Reply