ಸಂಕೀರ್ತನ ಯಶೋಗಾಥೆಗಳು
ಪುಸ್ತಕ ವಿತರಣೆಯ ಕೆಲಸ ಕೇವಲ ಪುಸ್ತಕಗಳನ್ನು ಹಂಚಿಬಿಟ್ಟ ಮಾತ್ರಕ್ಕೆ ಮುಗಿದುಹೋಗುವಂಥದಲ್ಲ. ಅವನ್ನು ಕೊಳ್ಳುವವರ ಜೊತೆ ನಿರಂತರ ಸಂಪರ್ಕ ಸಾಧಿಸಬೇಕು. ಅವರಲ್ಲಿ ಭಕ್ತಿ ಬೀಜ ಬಿತ್ತಬೇಕು. ಸಾವಕಾಶವಾಗಿ ಅವರನ್ನು ಕೃಷ್ಣಪ್ರಜ್ಞಾವಂತ ರನ್ನಾಗಿಸಬೇಕು. ಜನಸಾಮಾನ್ಯರನ್ನು ಕೃಷ್ಣ ಪ್ರಜ್ಞಾಂದೋಲನದತ್ತ ಒಲಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಈ ಪುಸ್ತಕ ಸಂಕೀರ್ತನೆ.

ಈ ಕುರಿತಂತೆ ಇಟಲಿಯ ಚಿತ್ರಕ ದಾಸರ ಅನುಭವ ಹೀಗಿದೆ:
“ನನ್ನಿಂದ ಪುಸ್ತಕ ವಿತರಣೆಗಾಗಿ ಹೊರಗೆ ಹೋಗುವ ಕೆಲಸ ಸಾಧ್ಯವಾಗದಾಯಿತು. ಆದ್ದರಿಂದ ನಾನು ಅದರ ಮುಂದಿನ ಬೆಳವಣಿಗೆಗಳತ್ತ ಗಮನ ಹರಿಸುವ ಕೆಲಸ ವಹಿಸಿಕೊಂಡೆ. ಆದರೆ ಪ್ರಾಯೋಗಿಕವಾಗಿ ಅದರಲ್ಲಿ ತೊಡಗಿದ ಅನಂತರ ಅದು ನೇರವಾಗಿ ಪುಸ್ತಕ ಸಂಕೀರ್ತನೆಯೊಂದಿಗೆ ಹೊಂದಿಕೊಂಡಿರುವುದು ಗೊತ್ತಾಯಿತು.
ಸಾಮಾನ್ಯವಾಗಿ ನಾವು, ಭಕ್ತರು ಮೂರಕ್ಕಿಂತ ಹೆಚ್ಚು ಪ್ರಭುಪಾದರ ಪುಸ್ತಕಗಳನ್ನು ಕೊಳ್ಳುವವರ ವಿಳಾಸ ಪಡೆದುಕೊಳ್ಳುತ್ತೇವೆ. ಅನಂತರದ ದಿನಗಳಲ್ಲಿ ಅವರನ್ನು ಭೇಟಿಯಾಗಿ ಪ್ರಭುಪಾದರ ಸಂಪೂರ್ಣ ಪುಸ್ತಕಗಳ ಸೆಟ್ ಕೊಳ್ಳುವಂತೆ ಮನವೊಲಿಸುತ್ತೇವೆ.
ನಾನು ವಹಿಸಿಕೊಂಡಿದ್ದು ಈ ಎರಡನೇ ಕೆಲಸವನ್ನು. ನಮ್ಮ ವಿತರಕರು ಪುಸ್ತಕ ಕೊಂಡ ಜನರ ವಿಳಾಸ ಸಂಗ್ರಹಿಸಿದ್ದರಷ್ಟೇ, ಆದರೆ ಅವರನ್ನು ಸಂಪರ್ಕಿಸಿರಲಿಲ್ಲ. ನಾನು ಮತ್ತು ದುರ್ಗಮ ಇಬ್ಬರೂ ಆ ಜವಾಬ್ದಾರಿಯನ್ನು ವಹಿಸಿಕೊಂಡೆವು. ನಮ್ಮಿಂದ ಅದು ಸಾಧ್ಯವಾಯಿತು ಮತ್ತು ನಾವು ಅವರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡೆವು.

ಅವರ ಆಸಕ್ತಿಯನ್ನು ಹೆಚ್ಚಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿತ್ತು. ಅವರನ್ನು ಕೃಷ್ಣನಿಗೆ ಹತ್ತಿರದವರನ್ನಾಗಿ ಮಾಡಲು ಬೇರೆ ಉಪಾಯವೇನಾದರೂ ಇದೆಯೇ ಎಂದು ಚಿಂತಿಸಿದೆವು. ಕೆಲವು ಮಂದಿ ತಮಗೆ ಪುಸ್ತಕಗಳನ್ನು ಓದಲು ಕೆಲವು ಕಠಿಣತೆಗಳು ಅಡ್ಡಿಯಾಗುತ್ತಿವೆ ಎಂದು ಹೇಳಿಕೊಂಡರು. ನಾವು ಅವರಲ್ಲಿ ಉತ್ಸಾಹ ತುಂಬಿ, ಓದು ಮುಂದುವರಿಸುವಂತೆ ಪ್ರೇರೇಪಿಸಿದೆವು.
ನಮ್ಮ ಓದುಗರ ಮನೆಯಲ್ಲಿ ಅವರ ಸ್ನೇಹಿತರು, ಸಂಬಂಧಿಗಳು ಮುಂತಾದವರನ್ನು ಸೇರಿಸಿ ಸಂಕೀರ್ತನ ಗೋಷ್ಠಿಗಳನ್ನು ಏರ್ಪಡಿಸುವಂತೆ ಹುರಿದುಂಬಿಸಿದೆವು, ಮತ್ತು ನಾವು ನಾಮ ಸಂಕೀರ್ತನೆ, ತತ್ತ್ವೋಪದೇಶ, ಪ್ರಸಾದ ತಯಾರಿಕೆ ಮೊದಲಾದವುಗಳಿಂದ ಅವರನ್ನು ಉತ್ಸಾಹಗೊಳಿಸಲು ಸಾಧ್ಯವಾಯಿತು. ಈ ಉತ್ಸಾಹ ಸಹಜವಾಗಿಯೇ ಅವರನ್ನು ಕೃಷ್ಣನತ್ತ ಸೆಳೆಯಿತು.
ಇವೆಲ್ಲ ಸಾಧ್ಯವಾಗಿದ್ದು ಪುಸ್ತಕ ವಿತರಣೆಯಿಂದ ಎನ್ನುವುದನ್ನು ಮರೆಯದಿರಿ. ನಮ್ಮ ನಡುವೆ ಇಂಥದೊಂದು ಸಂಪರ್ಕಬೆಳೆಯಲು ಸಾಧ್ಯವಾಗಿದ್ದೇ ಅದರಿಂದ!
ನಿಮ್ಮ ‘ಮನೆಬಾಗಿಲಿಗೆ ಸಂಕೀರ್ತನೆ’ ಕಾರ್ಯಕ್ರಮ ಅತೀವ ಸ್ಫೂರ್ತಿದಾಯಕವಾಗಿದೆ. ಇದರಿಂದ ಹೆಚ್ಚು ಹೆಚ್ಚು ಜನರು ನಮ್ಮ ಆಂದೋಲನದ ಮಹತ್ವವನ್ನು ಮನಗಂಡು ತಮ್ಮ ಮನೆಗಳಿಗೆ, ಸಂಸ್ಥೆಗಳಿಗೆ ತಾವಾಗಿಯೇ ಆಹ್ವಾನ ನೀಡಲು ಆರಂಭಿಸುತ್ತಾರೆ. ಇಷ್ಟಕ್ಕೂ ಕೃಷ್ಣಪ್ರಜ್ಞಾಂದೋಲನವೊಂದು ಜೀವವುಣಿಸುವಂಥ ಅಮೃತ ಕಲಶವೇ ಆಗಿದೆ. ಆದ್ದರಿಂದ ಈ ಕಾರ್ಯಕ್ರಮವನ್ನು ಮತ್ತಷ್ಟು ವೃದ್ಧಿಗೊಳಿಸಿ.
– ಶ್ರೀಲ ಪ್ರಭುಪಾದರು 1971ರ ಏಪ್ರಿಲ್ 11 ರಂದು ಭಗವಾನ್‌ದಾಸರಿಗೆ ಬರೆದ ಪತ್ರದಲ್ಲಿ.






Leave a Reply