– ಆಂಗ್ಲ ಮೂಲ : ಧನುರ್ಧರ ಸ್ವಾಮಿ, ಅನುವಾದ: ಎಂ.ಕೆ. ಗೋಪಿನಾಥ್
ವೈದಿಕ ಬದುಕಿನ ನಾಲ್ಕನೆಯ ಹಂತವಾದ ಸಂನ್ಯಾಸವು ತ್ಯಾಗ ಹಾಗೂ ವಿರಕ್ತಿಗಳ ಪ್ರತೀಕ. ಆದರೆ ಸಂನ್ಯಾಸಕ್ಕೆ ಸಲ್ಲುವತನಕ ಕಾಯಬೇಕೇಕೆ ಎಂದು ಪ್ರಭು ಕೃಷ್ಣನು ಕೇಳುತ್ತಾನೆ.

ಆಧ್ಯಾತ್ಮಿಕ ಬದುಕಿಗೆ ವೈರಾಗ್ಯವು ಅತ್ಯಾವಶ್ಯಕ. ಆದರೆ ವೈರಾಗ್ಯವನ್ನು ಸಾಧಿಸಲು ನಾವು ಕಾಡಿಗೆ ಹೋಗಬೇಕೆಂಬುದು ಈ ಮಾತಿನ ಅರ್ಥವಲ್ಲ. ಮನೆಯಲ್ಲಿ ವಿರಕ್ತ ಜೀವನ ನಡೆಸುವುದು ಎಲ್ಲಿಂದ ಪ್ರಾರಂಭವಾಗುತ್ತದೆಂದರೆ ನಾವು ಕೃಷ್ಣನನ್ನು ನಮ್ಮ ಕುಟುಂಬದ ಕೇಂದ್ರವನ್ನಾಗಿ ಮಾಡಿಕೊಂಡಾಗ. ಪ್ರತಿದಿನ ಕೃಷ್ಣನನ್ನು ಪೂಜಿಸುವುದರಿಂದ ನಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಅವನ ಸಂತೋಷಕ್ಕಾಗಿ ಮಾಡುವ ಕಲೆಯಲ್ಲಿ ಪ್ರಾವೀಣ್ಯ ಪಡೆಯಬಹುದು.
ಭಗವದ್ಗೀತೆಗೆ ವ್ಯಾಖ್ಯಾನವನ್ನು ಬರೆದಿರುವ ಹೆಸರಾಂತ ಯುದ್ಧವಿರೋಧಿ ಒಬ್ಬರು ಒಮ್ಮೆ ಮಾತನಾಡುತ್ತಾ, ಪ್ರಭು ಕೃಷ್ಣನು ಅರ್ಜುನನಿಗೆ ಕೊಲ್ಲೆಂದು ಆಜ್ಞಾಪಿಸಿದ್ದನೇ ಆಗಿದ್ದಲ್ಲಿ ತಾವು ಭಗವಾನ್ ಕೃಷ್ಣನ ಅಧಿಕಾರವನ್ನು ಒಪ್ಪುವುದಿಲ್ಲ ಎಂದು ಹೇಳಿದರು. ಆದರೆ ಭಗವಾನ್ ಕೃಷ್ಣನು ಅರ್ಜುನನಿಗೆ ಯುದ್ಧ ಮಾಡೆಂದು ಹೇಳುತ್ತಾನೆ.
ಅಷ್ಟೇ ಅಲ್ಲ ಆಶ್ಚರ್ಯವೋ ಎಂಬಂತೆ ತನ್ನ ಬಿನ್ನಹವನ್ನು ಹದಿನೆಂಟು ಅಧ್ಯಾಯಗಳಲ್ಲಿ ಹರಿದ ತತ್ತ್ವೋಪದೇಶದಿಂದ ಬೆಂಬಲಿಸುತ್ತಾನೆ. ಇಷ್ಟಾಗಿಯೂ ಭಗವದ್ಗೀತೆಯು ಯುದ್ಧವನ್ನು ಕುರಿತ ಒಂದು ಗ್ರಂಥವಲ್ಲ. ಗೀತೆಯಲ್ಲಿ ಸೂಕ್ಷ್ಮವಾದ ವಿಷಯವೊಂದರ ಪ್ರಸಕ್ತಿಯಿದೆ.
ತನ್ನ ರಾಜ್ಯದ ಪ್ರಜೆಗಳನ್ನು ಶತ್ರುಗಳ ಆಕ್ರಮಣದಿಂದ ರಕ್ಷಿಸುವಂಥ ವರ್ಗದ ಅಗತ್ಯ ಪ್ರತಿ ರಾಜ್ಯಕ್ಕೂ ಇದೆಯಾದರೂ, ಯುದ್ಧ ಮಾಡೆಂದು ಅರ್ಜುನನಿಗೆ ಹೇಳಿದ ಪ್ರಭು ಕೃಷ್ಣನ ವಾದವು ರಾಜ್ಯರಕ್ಷಕ ಕರ್ತವ್ಯಕ್ಕಿಂತ ಹೆಚ್ಚಿನದನ್ನು ಪ್ರತಿಪಾದಿಸುತ್ತದೆ; ವ್ಯಕ್ತಿಯು ತನ್ನ ಕರ್ತವ್ಯದ ಮೂಲಕ ಪರಿಪೂರ್ಣತೆಯನ್ನು ಹೇಗೆ ಸಾಧಿಸಬಹುದೆಂಬುದರ ವಿಶ್ಲೇಷಣೆಯು ಕೃಷ್ಣನ ತತ್ತ್ವೋಪದೇಶದಲ್ಲಿದೆ, ಅವನ ಉಪದೇಶ ಯೋಧನಿಗೂ ಸಲ್ಲುತ್ತದೆ.
ಪರಿಪೂರ್ಣತೆಯನ್ನು ಅರಸುತ್ತಾ ನಡೆವ ವ್ಯಕ್ತಿಯ ಪ್ರಥಮ ಪರಿಗಣನೆಯು ಕರ್ಮದಿಂದ ಮುಕ್ತನಾಗುವುದರ ಬಗೆಗಿರಬೇಕು. ಕರ್ಮ ಸಿದ್ಧಾಂತವು ಚಲನೆಯನ್ನು ಕುರಿತ ಭೌತಿಕ ಸಿದ್ಧಾಂತಕ್ಕೆ ಸಮನಾದದ್ದು ಮಾತ್ರವಲ್ಲ ಪ್ರತಿಯೊಂದು ಭೌತಿಕ ಕ್ರಿಯೆಗೆ ಸಮನಾದ ಹಾಗೂ ತದ್ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆಂದು ಹೇಳುತ್ತದೆ.
ಮಾನವ ಕಾರ್ಯಗಳ ಮೇಲೆ ಕೃಷ್ಣನ ಅಧಿಕಾರ ವ್ಯಾಪ್ತಿಯಿದೆ ಮತ್ತು ಅವನ ಮಾನುಷ ಕಾರ್ಯಗಳಿಗೆ ಬಹುಮಾನ ಹಾಗೂ ಶಿಕ್ಷೆಗಳನ್ನು ನೀಡುತ್ತಾನೆ. ಕರ್ಮದಿಂದ ಬಂಧಿತನಾಗಿ ಒಬ್ಬವಕ್ತಿಯು ತನ್ನ ಕರ್ಮಕ್ಕೆ ತಕ್ಕ ಒಳ್ಳೆಯ ಅಥವಾ ಕೆಟ್ಟಫಲವನ್ನು ಅನುಭವಿಸಲು ಮೇಲಿಂದ ಮೇಲೆ ಹುಟ್ಟುತ್ತಿರಬೇಕು. ಆದ್ದರಿಂದ ಕಾಮ್ಯ ಕರ್ಮದಲ್ಲಿ ನಿರತನಾದ ವ್ಯಕ್ತಿಯು ಎಂದಿಗೂ ಪರಿಪೂರ್ಣತೆಯನ್ನು ಸಾಧಿಸಲಾರ.
ಹೀಗಾಗಿ ಕ್ಷತ್ರಿಯ ಯೋಧನಾಗಿದ್ದ ಅರ್ಜುನನು ತನ್ನ ಕರ್ಮದ ಮೂಲಕ ಪರಿಪೂರ್ಣತೆ ಗಳಿಸಲು ಊಹೆಯಲ್ಲಿ ತೊಡಗುವುದು ಕೂಡ ವಿಶೇಷವಾಗಿ ದುಸ್ತರವಾಗಿತ್ತು. ನರಹತ್ಯೆ ಮಾಡಿದ್ದಕ್ಕೆ ಸಿಗಲಿದ್ದ ಪ್ರತಿಫಲ ಒಂದು ಭಯಾನಕವಾದ ನೋಟ. ಆದ್ದರಿಂದ ತನ್ನ ಕಾರ್ಯವನ್ನು ಕೈಬಿಡುವುದರಿಂದ ಮಾತ್ರ ಸಿದ್ಧಿ ಗಳಿಸಬಹುದೆಂದು ಅರ್ಜುನನು ನಿರ್ಣಯಿಸಿಕೊಂಡ.
ಬುದ್ಧಿ ಯೋಗವನ್ನು ಕುರಿತ ಕೃಷ್ಣನ ಉಪದೇಶವನ್ನು ಕೇಳಿ ತನ್ನ ಕಾರ್ಯವನ್ನು ತ್ಯಾಗ ಮಾಡುವುದರ ಬಗೆಗೆ ತನ್ನ ಅಪೇಕ್ಷೆಗೆ ದೃಢತೆ ಬಂತೆಂದು ಅರ್ಜುನ ಭಾವಿಸಿದ. ಬುದ್ಧಿಯೋಗ ಎನ್ನುವ ಶಬ್ದಕ್ಕೆ ಅಕ್ಷರಶಃ ಅರ್ಥವೆಂದರೆ ಆಧ್ಯಾತ್ಮಿಕ ಜ್ಞಾನ ಸಂಪಾದನಾ ಕಾರ್ಯದಲ್ಲಿ ಮುಂದುವರಿಯಲು ಒಬ್ಬ ವ್ಯಕ್ತಿಯು ತನ್ನ ಬುದ್ಧಿಯನ್ನು ಬಳಸಬೇಕು ಎನ್ನುವುದು.

ಕರ್ಮ ಎನ್ನುವುದನ್ನು ತಪಶ್ಚರ್ಯೆ ಹಾಗೂ ತತ್ತ್ವಶಾಸ್ತ್ರೀಯ ಪ್ರಯತ್ನಗಳಿಗಾಗಿ ಬಿಟ್ಟುಕೊಟ್ಟುಬಿಡುವುದನ್ನು ಆಧ್ಯಾತ್ಮಿಕತೆಯಲ್ಲಿ ಬುದ್ಧಿಯ ಪಾತ್ರ ಎಂದು ಅರ್ಜುನನು ನಿರ್ಣಯಿಸಿಕೊಂಡ. ಬೇರೆ ಮಾತುಗಳಲ್ಲಿ ಹೇಳಬಹುದಾದರೆ ಅರ್ಜುನ ಸಂನ್ಯಾಸಿ ಆಗಬಯಸಿದ.
ಅರ್ಜುನನು ಸಂನ್ಯಾಸವನ್ನು ಅಪೇಕ್ಷಿಸಿದ್ದರ ಕಾರಣ ಅರಿವಿಗೆ ನಿಲುಕುವಂಥದ್ದು. ವೇದಗಳು ಹೇಳುವ ಪ್ರಕಾರ ಮಾನುಷ ಬದುಕು, ಆತ್ಮಸಾಕ್ಷಾತ್ಕಾರಕ್ಕಾಗಿ ಇದೆ. ಆದ್ದರಿ೦ದ ಬುದ್ಧಿವಂತನಾದ ಮನುಷ್ಯನು ನಿಶ್ಚಯವಾಗಿ ತನ್ನನ್ನು ಪ್ರಾಪಂಚಿಕ ಕೆಲಸ ಕಾರ್ಯಗಳಿಂದ ಬಿಡಿಸಿಕೊಳ್ಳಲು ಪ್ರಯತ್ನಪಡಬೇಕು. ತತ್ಕಾಲದ ಯಾವು ಯಾವುದೋ ಕೆಲಸಗಳಿಗೆ ಕೈ ಹಾಕದಂತಿರಲು ಅಂಥ ಪ್ರಯತ್ನ ಅಗತ್ಯ.
ವಿರಕ್ತಿ ಹಾಗೂ ಅದರಿಂದ ಆಗುವ ಸ್ಪಷ್ಟ ಅನುಕೂಲಗಳನ್ನು ಕುರಿತಂತೆ ಕೃಷ್ಣನ ಮಾತನ್ನು ಉಪದೇಶವೆಂದು ಅರ್ಜುನನು ಭಾವಿಸಿದ. ಅಷ್ಟೇ ಅಲ್ಲ ತಾನು ಪರಿಪೂರ್ಣತೆ ಸಾಧಿಸಲು ತನ್ನ ವೃತ್ತಿಯನ್ನೇ ಅವಲಂಬಿಸಬೇಕೆಂಬ ಕೃಷ್ಣನ ಆಗ್ರಹದಿಂದ ಅರ್ಜುನನಿಗೆ ಆಶ್ಚರ್ಯವೇ ಆಯಿತು. ಅವನು ಪ್ರಭುವನ್ನೇ ಪ್ರಶ್ನಿಸಿದ ”ಓ ಕೃಷ್ಣ, ಕಾಮ್ಯ ಕರ್ಮಕ್ಕಿಂತ ಬುದ್ಧಿವಂತಿಕೆಯೇ ಮೇಲೆನ್ನುವುದಾದರೆ ಈ ಘಾತುಕ ಯುದ್ಧದಲ್ಲಿ ನನ್ನನ್ನು ತೊಡಗಿಸಲು ನೀನೇಕೆ ಬಯಸುತ್ತಿ?”
ಅರ್ಜುನನು ತನ್ನ ಕಾರ್ಯದಿಂದಲೇ ಪರಿಪೂರ್ಣತೆ ಗಳಿಸಲು ಅವನನ್ನು ಪ್ರೋತ್ಸಾಹಿಸಲು ಕೃಷ್ಣನು ಸಂನ್ಯಾಸವನ್ನು ಕುರಿತಂತೆ ಅವನ ಅಲ್ಪ ಜ್ಞಾನವನ್ನು ಸರಿಪಡಿಸಲು ಪ್ರಾರಂಭಿಸಿದನು.
ಸಂನ್ಯಾಸವೆಂದರೆ ದೈಹಿಕವಾಗಿ ಮನೆಯಿಂದ ದೂರವಿರುವುದು ಎಂದರ್ಥವಲ್ಲ. ವ್ಯಕ್ತಿಯು ಆಂತರಂಗಿಕವಾಗಿ ವಿರಕ್ತನಾಗಿರಬೇಕು. ಯಾವಾತನು ತನ್ನ ನಿಗದಿತ ಕಾರ್ಯಗಳನ್ನು ಮಾಡುವ ಮೂಲಕ ಪ್ರಾಪಂಚಿಕ ಒಲವುಗಳನ್ನು ಶುದ್ಧೀಕರಿಸಿಕೊಳ್ಳದೆ ಸಂನ್ಯಾಸಿಯಂತೆ ನಟಿಸುತ್ತಾನೋ ಅಂಥವನನ್ನು ಕೃಷ್ಣನು ಖಂಡಿಸುತ್ತಾನೆ.
“ಯಾವ ವ್ಯಕ್ತಿಯು ಕರ್ಮೇಂದ್ರಿಯಗಳನ್ನು ನಿಯಂತ್ರಿಸಿಯೂ ತನ್ನ ಮನಸ್ಸನ್ನು ಕರ್ಮೇಂದ್ರಿಯಗಳ ಕಡೆ ಹರಿಯಬಿಡುತ್ತಾನೋ ಅಂಥವನು ನಿಶ್ಚಯ ವಾಗಿಯೂ ತನ್ನನ್ನೇ ಮೋಸಗೊಳಿಸಿಕೊಳ್ಳುತ್ತಾನೆ. ಅಂಥವನನ್ನು ಠಕ್ಕ ಎಂದು ಕರೆಯುತ್ತಾರೆ.”
ಠಕ್ಕನು ತನ್ನ ತೋರಿಕೆಯ ವಿರಕ್ತಿಯನ್ನು ಮುಂದುವರಿಸಿಕೊಂಡು ಹೋಗಲಾರ ಏಕೆಂದರೆ ಸಂನ್ಯಾಸದ ಬದುಕು ನೋವಿನಿಂದ ಕೂಡಿದ ಬದುಕು. ಸಂನ್ಯಾಸಿಯು ಪ್ರಕೃತಿ ನೀಡಿರುವ ಕೊಡುಗೆಗಳನ್ನು ಪೂರ್ಣವಾಗಿ ಅವಲಂಬಿಸಿ ತುಂಬ ಸರಳ ಬದುಕನ್ನು ನಡೆಸುವಷ್ಟಕ್ಕೆ ತೃಪ್ತಿಪಡಬೇಕು.
ಉದ್ಯೋಗ ಇಲ್ಲದ ಆದರೆ ಪ್ರಾಪಂಚಿಕ ಸುಖಗಳನ್ನು ಅಪೇಕ್ಷಿಸುವ ಹುಸಿ ಸಂನ್ಯಾಸಿಯು ಭಿಕ್ಷೆಗೆ ಹೋಗಿ ಬೇರೆಯವರ ನೆರವಿನಿಂದ ಬದುಕಲು ಬಲಾತ್ಕಾರವಾಗಿ ದೂಡಲ್ಪಡುತ್ತಾನೆ. ವ್ಯಕ್ತಿಯ ಉದರ ಪೋಷಣೆಗಾಗಿ ಮಾತ್ರ ಇರುವ ಇಂಥ ಹೆಸರಿಗೆ ಮಾತ್ರದ ಸಂನ್ಯಾಸವನ್ನು ಕೃಷ್ಣನು ಎಂದಿಗೂ ಪ್ರತಿಪಾದಿಸುವುದಿಲ್ಲ.

– ಪ್ರತಿಯಾಗಿ ಅವನು ಅರ್ಜುನನಿಗೆ ನೀಡುವ ಸಲಹೆಯೆಂದರೆ ”ನಿನಗೆ ವಿಧಿತವಾದ ಕಾರ್ಯವನ್ನು ಮಾಡು. ಹೀಗೆ ಮಾಡುವುದು ಕೆಲಸ ಮಾಡದೆ ಇರುವುದಕ್ಕಿಂತ ಉತ್ತಮ. ಕೆಲಸ ಮಾಡದೆ ವ್ಯಕ್ತಿಯು ತನ್ನ ಭೌತ ಶರೀರವನ್ನು ಕೂಡ ಸಂರಕ್ಷಿಸಿಕೊಳ್ಳಲಾರ.
ಪರಿತ್ಯಾಗದ ಕೇಡುಗಳು ಹಾಗೂ ದೇಹವನ್ನು ಸಂರಕ್ಷಿಸಿಕೊಳ್ಳಬೇಕಾದ್ದರ ಅಗತ್ಯ ಈ ಎರಡೂ ಸಂಗತಿಗಳು ಅರ್ಜುನನ ಸಂನ್ಯಾಸದ ಬಯಕೆಯನ್ನು ತಣ್ಣಗೆ ಮಾಡಿದವು. ಆದರೂ ಮನೆಯಲ್ಲಿ ತಾನು ಸುಖವಾಗಿರಬಲ್ಲದರ ಸಾಧ್ಯತೆ ಕುರಿತಂತೆ ಅವನ ಆಶ್ಚರ್ಯ ಹಾಗೆಯೇ ಉಳಿದಿತ್ತು. ಅವನ ಕರ್ಮವನ್ನು (ಆಜ್ಞಾಪಿತ ಕಾರ್ಯ) ನೆನೆಸಿಕೊಂಡು ಹೆದರಿ ಹಣ್ಣಾದ.
ಆದ್ದರಿಂದ ಪ್ರಭು ಕೃಷ್ಣನು ಅವನಿಗೆ ಹೇಳಿದ್ದೇನೆಂದರೆ ಕರ್ಮವು ಕೂಡ – ಕರ್ಮ ಪ್ರತಿಕ್ರಿಯೆ ಇಲ್ಲದ್ದಾಗಿರಬಹುದು ಎಂದು ” ವಿಷ್ಣುವಿನ ಪ್ರೀತ್ಯರ್ಥವಾಗಿ ಮಾಡಬೇಕಾದಂಥ ಕಾರ್ಯವನ್ನು ಮಾಡಲೇಬೇಕು. ಇಲ್ಲದಿದ್ದರೆ ನಾವು ಮಾಡುವ ಕೆಲಸವು ಈ ಐಹಿಕ ಪ್ರಪಂಚದಲ್ಲಿ ಬಂಧನಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಓ ಕುಂತೀಪುತ್ರ ನಿನಗೆ ವಿಧಿಸಲಾಗಿರುವ ಕೆಲಸವನ್ನು ವಿಷ್ಣು ತೃಪ್ತ್ಯರ್ಥವಾಗಿ ಮಾಡು ಹೀಗೆ ಮಾಡುವುದರಿಂದ ನೀನು ಸದಾ ಬಂಧಮುಕ್ತನಾಗಿ ಉಳಿಯುವೆ”
ಕರ್ಮವನ್ನು ಕುರಿತು ಅರ್ಜುನನಿಗೆ ಆ ಶಬ್ದಕ್ಕಿರುವ ಆಳವಾದ ಅರ್ಥವನ್ನು ಹೇಳುವುದರ ಮೂಲಕ ಭಗವಾನ್ ಕೃಷ್ಣನು ಗೃಹಸ್ಥ ಬದುಕಿನಲ್ಲೂ ಪರಿಪೂರ್ಣತೆ ಸಾಧಿಸುವ ದಾರಿಯ ಕೀಲಿಕೈಯನ್ನು ಕೊಟ್ಟನು. ಯಾವಾತನು ಒಂದು ಕಾರ್ಯಕ್ಕೆ ಹೊಣೆಗಾರನೋ ಆ ಕಾರ್ಯದ ಪರಿಣಾಮಗಳನ್ನು ಆತನೇ ಎದುರಿಸಬೇಕು ಎಂಬುದು ಕರ್ಮಸಿದ್ಧಾಂತದ ಬುನಾದಿ.
ಒಂದು ಕೆಲಸ ಮಾಡುವುದರ ಹೊಣೆ ಆ ಕೆಲಸ ಮಾಡುವವನದಲ್ಲ. ಪ್ರತಿಯಾಗಿ ಆ ಹೊಣೆ ಇಂಥ ಕೆಲಸ ಮಾಡೆಂದು ಹೇಳಿದವನದಾಗಿರುತ್ತದೆ. ಈ ವಿಚಾರ ಅರ್ಜುನನಿಗೀಗ ತಿಳಿಯಬೇಕು. ವಿಷ್ಣು ಪ್ರೀತ್ಯರ್ಥವಾಗಿ ಕೆಲಸ ಮಾಡುವುದೆಂದರೆ, ವ್ಯಕ್ತಿಯು ತನ್ನ ಅಪೇಕ್ಷೆಯನುಸಾರ ಕೆಲಸಮಾಡುತ್ತಿಲ್ಲ; ಅವನು ಕೆಲಸ ಮಾಡುತ್ತಿರುವುದು ಭಗವತ್ ಸೇವಾ ಅಪೇಕ್ಷೆಯಿಂದ ಎಂಬುದು. ಇಂತಹ ಕಾರ್ಯಶೀಲನಾದ ವ್ಯಕ್ತಿಯು ಹೀಗೆ ತಾನು ಮಾಡಿದ ಕೆಲಸದ ಪರಿಣಾಮಗಳಿಂದ ವಿಮುಕ್ತಿ ಪಡೆಯುತ್ತಾನೆ.
ಉದಾಹರಣೆಗೆ ಒಬ್ಬ ಯೋಧನು ಸರಕಾರಿ ಆಜ್ಞೆಯನುಸಾರ ಯುದ್ಧ ಮಾಡಿರುತ್ತಾನಾಗಿ ಅವನನ್ನು ಕೊಲೆಗಡುಕನೆಂದು ನ್ಯಾಯಾಲಯಕ್ಕೆ ಎಳೆಯುವುದಿಲ್ಲ. ಅವನು ಅನೇಕ ಶತ್ರು ಸೈನಿಕರನ್ನು ಕೊಂದಿದ್ದರೂ ಅವನು ಕೊಲೆ ಪಾತಕಿಯಲ್ಲ. ಇದೇ ಯೋಧನು ಬೇರೆ ಯಾವುದೋ ಕಾರಣಕ್ಕೆ ತನ್ನ ಹಳ್ಳಿಯ ಒಬ್ಬನೇ ಒಬ್ಬವ್ಯಕ್ತಿಯನ್ನು ಕೊಂದರೂ ಅವನಿಗೆ ಉಗ್ರ ಶಿಕ್ಷೆ ವಿಧಿಸಲಾಗುತ್ತದೆ.
ಆದ್ದರಿಂದ ಕರ್ಮ ಎಂಬುದಕ್ಕೆ ಅರ್ಥ ಏನೆಂದರೆ ವ್ಯಕ್ತಿಯು ಸ್ವ ಇಚ್ಛೆಯಿಂದ ಕಾರ್ಯ ಮಾಡಿದರೆ ಆ ಕಾರ್ಯದ ಪರಿಣಾಮವೂ ಅವನದೇ. ಇದಕ್ಕೆ ಪ್ರತಿಯಾಗಿ ಕರ್ತವ್ಯದ ದೃಷ್ಟಿಯಿಂದ ಮಾಡಲಾಗುವ ಕಾರ್ಯಗಳು ಪ್ರತಿಕ್ರಿಯೆಯನ್ನು ತಾರವು.
ಈ ನಿಟ್ಟಿನಲ್ಲಿ ಆತ್ಮ ಸಾಕ್ಷಾತ್ಕಾರಕ್ಕೆ ಒಂದು ಕಾರ್ಯಸಾಧ್ಯ ವಿಧಾನವನ್ನು ಭಗವದ್ಗೀತೆಯು ಶ್ರೀಸಾಮಾನ್ಯನಿಗೆ ಒದಗಿಸುತ್ತದೆ. ಹೀಗಿದ್ದೂ ವಿಷ್ಣುವಿಗಾಗಿ ಕೆಲಸ ಮಾಡುವುದು ಹಾಗೂ ಕಾರ್ಯಕ್ಕೆ ತಕ್ಕ ಪ್ರತಿಫಲ ಬೇಕೆಂಬ ಬಗೆಗೆ ವಿರಕ್ತಿ ತಾಳುವುದು – ಈ ಎರಡು ವಿಚಾರಗಳಿಗೆ ನಿಪುಣರ ಮಾರ್ಗದರ್ಶನದ ಅಗತ್ಯವಿದೆ.

ಈ ಮಾರ್ಗದರ್ಶನ ಇಂದಿನ ದಿನ ತುಂಬ ಬೇಕಾಗಿದೆ. ಏಕೆಂದರೆ ಆತ್ಮಸಾಕ್ಷಾತ್ಕಾರಕ್ಕೆ ಮೀಸಲಾದ ಸಮಾಜವು ವ್ಯಕ್ತಿಯ ವಿಧಿತ ಕಾರ್ಯಗಳೇನು ಎಂದು ಹೇಳುತ್ತಿಲ್ಲ. ಅರ್ಜುನನಿಗೆ ಅದನ್ನು ಹೇಳಲು ಜನ ಇದ್ದರು.
ಗೃಹಸ್ಥನಾಗಿದ್ದುಕೊಂಡು ಪರಿಪೂರ್ಣತೆಯನ್ನು ಸಾಧಿಸಬಹುದೆಂಬ ಭಗವಾನ ಕೃಷ್ಣನ ತತ್ತ್ವಕ್ಕೆ ಒಂದು ಉತ್ತಮ ಉದಾಹರಣೆಯು ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ ಹಾಗೂ ಉಪದೇಶಗಳನ್ನೊಳಗೊಂಡ ಶ್ರೀಚೈತನ್ಯ ಚರಿತಾಮೃತ ಎಂಬ ಪುಸ್ತಕದಲ್ಲಿ ದೊರೆಯುತ್ತದೆ.
ಚೈತನ್ಯರು ದಕ್ಷಿಣ ಭಾರತದ ಪ್ರವಾಸದಲ್ಲಿದ್ದಾಗ ಪ್ರತಿ ಹಳ್ಳಿಯಲ್ಲಿ ಅವರನ್ನು ಕಾಣಲು ಬರುತ್ತಿದ್ದ ಪ್ರತಿಯೊಬ್ಬರಿಗೂ ಅವರು ಸ್ಫೂರ್ತಿ ತುಂಬುತ್ತಿದ್ದುದು ದೈವ ಪ್ರಜ್ಞೆ ಬೆಳೆಸಿಕೊಳ್ಳುವಂತೆ, ಕೂರ್ಮಕ್ಷೇತ್ರ ಎಂಬ ಹಳ್ಳಿಯಲ್ಲಿ ಒಬ್ಬ ಶ್ರೀಮಂತ ಬ್ರಾಹ್ಮಣನು ಚೈತನ್ಯರನ್ನು ತನ್ನ ಮನೆಗೆ ಆಹ್ವಾನಿಸಿ ಭಯ ಭಕ್ತಿಗಳಿಂದ ಅವರನ್ನು ಉಪಚರಿಸಿದ.
ಭಗವಾನ್ ಚೈತನ್ಯರ ಉಪಸ್ಥಿತಿಯಿಂದ ಸ್ಫೂರ್ತಿಗೊಂಡು ಅವನು ಹೀಗೆ ಭಿನ್ನವಿಸಿಕೊಂಡ. ನನ್ನ ಪ್ರಿಯ ಪ್ರಭುವೆ, ನನಗೆ ನಿಮ್ಮ ಅನುಗ್ರಹ ನೀಡಿ, ನಾನು ನಿಮ್ಮೊಡನೆ ಬರುವಂತೆ ಮಾಡಿ. ಈ ಪ್ರಾಪಂಚಿಕ ಬದುಕಿನ ವಿಪತ್ತುಗಳನ್ನು ನಾನು ಸಹಿಸಲಾರೆ.”
ಆದರೆ ಈ ಕಲಿಯುಗದಲ್ಲಿ ವ್ಯಕ್ತಿಯು ಹಠಾತ್ತಾಗಿ ತನ್ನ ಸಂಸಾರವನ್ನು ತ್ಯಜಿಸುವ ಪರಿಯು ಯೋಗ್ಯ ಮಾರ್ಗವೆಂದು ಭಗವಾನ್ ಚೈತನ್ಯರಿಗೆ ತೋರಲಿಲ್ಲ. ಪ್ರತಿಯಾಗಿ ಚೈತನ್ಯರು ಆ ಬ್ರಾಹ್ಮಣನಿಗೆ ಮನೆಯಲ್ಲೇ ಇದ್ದು ತನ್ನ ಕೆಲಸ ಕಾರ್ಯಗಳನ್ನು ಮಾಡುತ್ತಾ ಆಧ್ಯಾತ್ಮಿಕ ಬದುಕನ್ನು ಅಭ್ಯಸಿಸಿ ಪರಿಶುದ್ಧನಾಗಬೇಕೆಂದು ಉಪದೇಶಿಸಿದರು.
ಚೈತನ್ಯರು ಆ ಬ್ರಾಹ್ಮಣನಿಗೆ, ಮತ್ತೆ ಆ ಮಾತನ್ನಾಡಬೇಡಿ, ಮನೆಯಲ್ಲೇ ಇದ್ದು ಕೃಷ್ಣನಾಮವನ್ನು ಸದಾ ಜಪಿಸಿ. ಭಗವದ್ಗೀತೆ ಹಾಗೂ ಶ್ರೀಮದ್ಭಾಗವತಗಳಲ್ಲಿ ಕೃಷ್ಣನು ನೀಡಿರುವ ಆಜ್ಞೆಗಳನ್ನು ಪರಿಪಾಲಿಸುವಂತೆ ಪ್ರತಿಯೊಬ್ಬರಿಗೂ ಹೇಳಿ… ಈ ಉಪದೇಶಗಳನ್ನು ನೀವು ಪರಿಪಾಲಿಸಿದರಾದರೆ ಮನೆಯಲ್ಲಿನ ನಿಮ್ಮ ಪ್ರಾಪಂಚಿಕ ಬದುಕು ನಿಮ್ಮ ಆಧ್ಯಾತ್ಮಿಕ ಮುನ್ನಡೆಗೆ ಅಡ್ಡಿ ಬರುವುದಿಲ್ಲ.
ಭಗವದ್ಗೀತೆಯಲ್ಲಿ ಕೃಷ್ಣನು ನೀಡಿರುವ ಸಂದೇಶವು ಎಲ್ಲರಿಗೂ ಅನ್ವಯವಾಗುತ್ತವೆ. ಆದ್ದರಿಂದ ನಾವು ತಿಳಿಯಬೇಕಾದ್ದೇನೆಂದರೆ ಯುದ್ಧದ ಮಧ್ಯೆಯೂ ಆಧ್ಯಾತ್ಮಿಕ ಪರಿಪೂರ್ಣತೆ ಸಾಧ್ಯವಿರುವಾಗ, ಮನೆಯಲ್ಲಿ (ಗೃಹಸ್ಥ ಬದುಕಿನಲ್ಲಿ) ಪರಿಪೂರ್ಣತೆ ಗಳಿಸುವುದು ಏಕೆ ಸಾಧ್ಯವಿಲ್ಲ?






Leave a Reply