ಶ್ರೀ ಕೃಷ್ಣನ ಔದಾತ್ಯ

– ವಿದ್ವಾನ್‌ ಟಿ.ಕೇಶವ ಭಟ್ಟ

ಮಾನವರೊಡನೆ ಮಾನವನಾಗಿ ಬೆರೆತ ದೇವೋತ್ತಮ ಪರಮಪುರುಷ ಶ್ರೀಕೃಷ್ಣನ ಉದಾತ್ತಗುಣಗಳ ಕಿರು ಪರಿಚಯ ಈ ಲೇಖನದ ಉದ್ದೇಶ.

ದ್ವಾಪರಯುಗದ ಕೊನೆಯ ಭಾಗದ ಒಂದು ಕಾಲದಲ್ಲಿ ಶ್ರಾವಣಮಾಸ ಕೃಷ್ಣಪಕ್ಷ ಅಷ್ಟಮಿಯ ರಾತ್ರಿ ಕಗ್ಗತ್ತಲೆ. ಆಗ ತಾನೇ ಚಂದ್ರೋದಯವಾಗಿ ಬೆಳಕು ಕಾಣಿಸತೊಡಗಿದೆ. ಲೋಕದಲ್ಲಿ ಕವಿದ ಆಧರ್ಮದ ಕತ್ತಲೆಯನ್ನು ತೊಲಗಿಸಲು ಆ ಚಂದ್ರನೊಡನೆ ಮೂಡಿದ ಆಶಾಕಿರಣವೋ ಎಂಬಂತೆ, ಮಥುರೆಯ ಕರಾಳ ಕಾರಾಗೃಹದಲ್ಲಿ ಮಹಾವಿಭೂತಿ ಪುರುಷನೋರ್ವನ ಜನನವಾಯಿತು.

ಆತನೇ ವಸುದೇವ ದೇವಕಿಯರ ಅಷ್ಟಮಪುತ್ರನಾದ ಭಗವಾನ್ ಶ್ರೀ ಕೃಷ್ಣನು. ಅವನ ಕಾರ್ಯಸಾಧನೆಯಿಂದ ಸತ್ಪುರುಷರು ಬಂಧಮುಕ್ತರಾದರು. ಯೋಗಿಗಳಿಗೆ ವಿಶೇಷವಾದ ಜ್ಞಾನೋದಯವಾಯಿತು. ದುರುಳರು ನಾಶವಾದರು, ಧರ್ಮ ಸಾಮ್ರಾಜ್ಯ ಸ್ಥಾಪಿತವಾಯಿತು. ಶ್ರೀ ಕೃಷ್ಣನ ವ್ಯಕ್ತಿತ್ವವೆಂಬುದು ಅಲೌಕಿಕವೂ ಹೌದು.

ಭಾರತೀಯ ಐತಿಹಾಸಿಕ ಕಥಾನಾಯಕರಲ್ಲಿ ಪರಮ ಉದಾತ್ತತೆಗೆ ಹೆಸರಾದವರಲ್ಲಿ ಮೊದಲಿಗನು ಶ್ರೀ ರಾಮನು. ಕನ್ನಡ ಕವಿ ನಾಗಚಂದ್ರನು ಅವನನ್ನು ಉದಾತ್ತರಾಘವನೆಂದೇ ವರ್ಣಿಸಿದ್ದಾನೆ. ಶ್ರೀ ಮದ್ರಾಮಾಣಯದ ಪ್ರಕಾರ, ಅವನು ಮರ್ಯಾದಾ ಪುರುಷೋತ್ತಮನು, ಜೀವನದಲ್ಲಿ ಪ್ರಮಾದರಹಿತನಾಗಿ – ಅಂದರೆ, ಮಾನವಸಂಹಿತೆಯಿಂದ ಒಂದು ತಪ್ಪನ್ನೂ ಮಾಡದ ಮಹಾನುಭಾವನು.

ಆದುದರಿಂದ ಮರ್ಯಾದಾಪುರುಷೋತ್ತಮನು, ಧರ್ಮರಕ್ಷಣೆಗಾಗಿ, ಅಧರ್ಮನಾಶಕ್ಕಾಗಿ ಅವತಾರವೆತ್ತಿದವನು, ಶ್ರೀ ಕೃಷ್ಣನೂ ಅಂತೆಯೇ ಭಗವದವತಾರಿ. ಶ್ರೀ ರಾಮನು ಆಂಶಾವತಾರಿಯಾದರೆ, ಶ್ರೀ ಕೃಷ್ಣನು ಪೂರ್ಣಾಂಶಗಳಿಂದ ಕೂಡಿದ ಅವತಾರಿ.

ಆದುದರಿಂದ ಭಕ್ತರಿಂದ ಅವನು ದೇವನೆಂದೇ ಪರಿಗಣಿತನಾಗಿದ್ದಾನೆ. ಅವನ ಬದುಕಿನ ಸುತ್ತಲೂ ಅದ್ಭುತವೂ ಅಲೌಕಿಕವೂ ಆದ ಅಮಾನುಷ ಚರಿತ್ರೆಗಳೂ ಪೋಣಿಸಲ್ಪಟ್ಟಿವೆ. ಅವನನ್ನು ಹೆಚ್ಚಿನವರು ಅನುಕರಣೀಯತೆ ಅನುಸರಣೀಯತೆಗಳಿಗೆ ಅತೀತನನ್ನಾಗಿ, ಪೂಜಾಯೋಗ್ಯನನ್ನಾಗಿ ಮತ್ತು ಧ್ಯಾನಯೋಗ್ಯನನ್ನಾಗಿ ಕಾಣುತ್ತಾರೆ. ನಮಗಿಂದು ಶ್ರೀಕೃಷ್ಣನ ಉದಾತ್ತತೆಯ ಅರಿವು ಅತ್ಯವಶ್ಯ.

ಶ್ರೀ ಕೃಷ್ಣನನ್ನು ಪತ್ರ-ಪುಷ್ಪ-ಧೂಪ-ದೀಪ-ನೈವೇದ್ಯಗಳಿಂದ ಮಾಡತಕ್ಕ ಭಕ್ತಿಪೂಜೆಗಳಿಗೂ ಮಿಗಿಲಾಗಿ – ಸ್ವಕರ್ಮದಿಂದ ಸ್ವಧರ್ಮಪಾಲನೆಯಿಂದ ಆತನನ್ನು ಅರ್ಚಿಸಬೇಕು. ಅರ್ಜುನನಂತಹ ಭಕ್ತಿ ಸಂಪನ್ನತೆಯನ್ನು ಮೂಡಿಸಿಕೊಳ್ಳಬೇಕು. ಶ್ರೀ ಕೃಷ್ಣನ ಭಕ್ತಾಗ್ರೇಸರನಾದ ಅರ್ಜುನನು ಕೃಷ್ಣನ ಸ್ತುತಿಕೀರ್ತನೆಗಳಲ್ಲಿ ತನ್ಮಯನಾಗದೆ, ಅವನ ಆಜ್ಞೆಯಂತೆ, ಪ್ರೇರಣೆಯಂತೆ ಕರ್ತವ್ಯಶೀಲನಾಗಿ ಭಕ್ತನೆನಿಸಿದನು.

ಈ ದೃಷ್ಟಿಯ ಅಧ್ಯಯನಕ್ಕೆ ಕೃಷ್ಣನ ಲೌಕಿಕ ಜೀವನದಲ್ಲಿ ಸಮೃದ್ಧವಾಗಿ ವಸ್ತುವಿನ್ಯಾಸಗಳಿವೆ.

ಶ್ರೀಕೃಷ್ಣನ ಲೌಕಿಕ ಉದಾತ್ತತೆಯನ್ನರಿಯಲು ನಮಗೆ ಮುಖ್ಯವಾಗಿ ಇರತಕ್ಕ ಸಾಹಿತ್ಯ ಗ್ರಂಥಗಳು – ಮಹಾಭಾರತ ಮತ್ತು ಭಾಗವತ ಮಹಾಪುರಾಣ. ಭಾಗವತವು ಅವನನ್ನು ಅಲೌಕಿಕ ಮಹಿಮನಾಗಿಸಿ, ಅದ್ಭುತ ಚಮತ್ಕೃತಿಯುಳ್ಳವನಾಗಿ, ಪರಮಾತ್ಮನಾಗಿ, ಲೀಲಾನಾಟಕ ಪಾತ್ರಧಾರಿಯಾಗಿ ವರ್ಣಿಸಿದೆ.

ಅದರೊಂದಿಗೆ ಅವನನ್ನು ಜಾರನೆಂದೂ ಚೋರನೆಂದೂ ವರ್ಣಿಸಿರುವುದುಂಟು. ಈ ಜಾರತ್ವ ಚೋರತ್ವಗಳು ಅಲೌಕಿಕ ಅಥವಾ ಆಧ್ಯಾತ್ಮಿಕ ಅರ್ಥದಿಂದ ಕೂಡಿದ ಆರೋಪಗಳಲ್ಲದೆ, ವಾಸ್ತವಿಕವಾಗಿ ಕೃಷ್ಣನು ಅಂಥವನಲ್ಲ. ಇದಕ್ಕೆ ಉದಾಹರಣೆಗಳಿವೆ. ಬಾಲ್ಯದಲ್ಲಿ ಅಳುತ್ತಿದ್ದ ಅವನನ್ನು ಸಂತೈಸುವುದಕ್ಕಾಗಿ ಒಮ್ಮೆ ಗೋಪಿ ಅವನಿಗೊಂದು ಕಥೆ ಹೇಳಿದಳಂತೆ. ಕವಿ ರುದ್ರಭಟ್ಟನ (1180) ಜಗನ್ನಾಥವಿಜಯದ ಪದ್ಯ ಹೀಗಿದೆ.

ಕತೆಯಂ ಕೇಳೆಲೆ ಕಂದ ಹುಂ ರಘುಜನೆಂಬ ಹುಂ ಸಕಾಂತಂ ವನ

ಸ್ಥಿತನಾದಂ ಗುರು ಪೇಳೆ ಹುಂ ದಶಶಿರಂ ಕೊಂಡೊಯ್ದನಾ ರಾಮನಾ

ಸತಿಯಂ ತಾನೆನೆ ಪೂರ್ವಮಂ ನೆನೆಯಿತಂ ಹುಂಕೊಳ್ಳದುತ್ಕೋಪ ಹೂಂ

ಕೃತಿಯಂ ಮಾಡುತುಮೌಂಡುಗರ್ಚಿ ಕಿಸುಗಣ್ಣಿಟ್ಟಚ್ಯುತಂ ರಂಜಿಕಂ (3-61)

ಗೋಪಿಯು ಬಾಲಕೃಷ್ಣನಿಗೆ ಶ್ರೀ ರಾಮನ ಕಥೆಯನ್ನು ಹೇಳುತ್ತಿದ್ದಾಗ ಹುಂಗುಟ್ಟುತ್ತಿದ್ದ ಕೃಷ್ಣನು – ಹತ್ತುತಲೆಯ ರಾವಣನು ಸೀತೆಯನ್ನು ಕದ್ದೊಯ್ದನೆಂದು ಹೇಳಿದಾಗ, ಯಥಾರೀತಿ ಹುಂ ಎಂದು ಹೇಳದೆ, ಅತಿಕೋಪದ ಹೂಂಕಾರವನ್ನು ಮಾಡಿದುದು ಮಾತ್ರವಲ್ಲ, ಕಣ್ಣುಕೆಂಪು ಮಾಡಿದುದಲ್ಲದೆ, ಅವುಡುಗಚ್ಚಿ ಸಿಟ್ಟನ್ನು ಪ್ರದರ್ಶಿಸಬೇಕಾದರೆ – ಅವನ ನೈತಿಕಪಜ್ಞೆ ಅದೆಷ್ಟರದು! ಎಂಬ ಅರಿವಾಗುವುದು.

 ಶ್ರೀಕೃಷ್ಣನ ಗಾರ್ಹಸ್ಥ್ಯವು ಜನಸಾಮಾನ್ಯರ ವಿಚಾರಕ್ಕೆ ನಿಲುಕುವಂತಹುದಲ್ಲ. ಅವನಿಗೆ ಎಂಟುಮಂದಿ ಮಹಿಷಿಯರು ಮಾತ್ರವಲ್ಲದೆ, ಹದಿನಾರು ಸಾವಿರದ ನೂರುಮಂದಿ ರಾಜಕನ್ಯೆಯರು ಜನಸಾಮಾನ್ಯರ ವಿಚಾರಶಕ್ತಿಗೆ ನಿಲುಕುವಂತಹುದಲ್ಲ. ಆ ರಾಜಕನ್ಯೆಯರೊಂದಿಗೆ ವಿವಾಹಿತ ಸಂಬಂಧವೂ ಇದ್ದುದಾಗಿ ಭಾಗವತದಲ್ಲಿ ಹೇಳಲಾಗಿದೆ.

ಆ ಹದಿನಾರು ಸಾವಿರ ಕನ್ಯೆಯರು ಲಕ್ಷ್ಮೀದೇವಿಯ ಅಂಶದವರೆಂದು ತಿಳಿಸಲಾಗಿದೆಯಲ್ಲದೆ, ಅವರನ್ನು ಏಕಕಾಲದಲ್ಲಿ ಕೃಷ್ಣನು ಸ್ವತಃ ಹದಿನಾರು ಸಾವಿರ ಶ್ರೀ ಕೃಷ್ಣರೂಪಧಾರಿಯಾಗಿ ವರಿಸಿಕೊಂಡು ಅವರೆಲ್ಲರೊಡನೆ ಓರ್ವ ಸಾಮಾನ್ಯ ಮನುಷ್ಯನಂತೆ ಗೃಹಸ್ಥಧರ್ಮಾಚರಣೆಯಲ್ಲಿದ್ದನೆಂತಲೂ ಹೇಳಲಾಗಿದೆ. (ನೋಡಿ : ಸ್ವಂಧ 10, ಅಧ್ಯಾಯ: 59). ಇದನ್ನು ಅವನ ಭಕ್ತ ಲೀಲೆ ಅಥವಾ ಆಧ್ಯಾತ್ಮಲೀಲೆ ಎನ್ನಬಹುದು.

ಶ್ರೀ ಕೃಷ್ಣನು ಚಿಕ್ಕಂದಿನಿಂದಲೇ ಸಮಾಜಜೀವಿಯಾಗಿದ್ದನು, ಶ್ರೇಷ್ಟವಾದ ವೃಷ್ಣಿವಂಶದಲ್ಲಿ ಜನ್ಮತಾಳಿದ್ದರೂ ತಾನು “ಗೋಪಾಲ’ನೆಂದು ಹೇಳಿಕೊಂಡನು. ಕೀಳುಬಾಳಿನ ಗೋಪಾಲಕರ ಜೊತೆಯಲ್ಲಿ ಗೋಪಾಲವೃತ್ತಿಯಲ್ಲಿದ್ದು ಗೋಪಸಮಾಜವನ್ನು ಒಂದುಗೂಡಿಸಿದನು. ಗೋಸೇವೆಯನ್ನು ಸಮಾಜಸೇವೆಯ ಅಂಗವಾಗಿ ಪರಿಗಣಿಸಿದನು.

ಯಾದವರಲ್ಲಿ ಆಗ ಎರಡು ಪಂಗಡಗಳಿದ್ದವು. ಒಂದು ಪಂಗಡಕ್ಕೆ ಆಹುಕನು ಮುಖಂಡನಾದರೆ ಇನ್ನೊಂದಕ್ಕೆ ಆಕ್ರೂರನು ನಾಯಕನು. ಶ್ರೀ ಕೃಷ್ಣನು ಆಹುಕನ ಮಗಳಾದ “ಸಂತನು” ಎಂಬಾಕೆಯನ್ನು ಆಕ್ರೂರನಿಗೆ ಮದುವೆಮಾಡಿಸಿ, ಈ ಪಂಗಡಗಳನ್ನು ಒಂದುಗೂಡಿಸಿದನು. ಪಾಂಡವರನ್ನೂ ಕೌರವರನ್ನೂ ಒಂದುಗೂಡಿಸುವುದು ಅಸಾಧ್ಯವಾದಾಗ, ಸತ್ಪುರುಷರಾದ ಪಾಂಡವರ ಪಕ್ಷವನ್ನು ವಹಿಸಿ, ಕೌರವರನ್ನು ನಾಶಗೊಳಿಸಿದನು.

ಶ್ರೀ ಕೃಷ್ಣನ ಲೌಕಿಕ ವ್ಯವಹಾರ ನೈಪುಣ್ಯ ಅಸಾಮಾನ್ಯ. ಅದಕ್ಕೆ ಉದಾಹರಣೆಯಾಗಿ ಕಂಸವಧೆ – ಜರಾಸಂಧ ವಧೆಗಳ ವೃತ್ತಾಂತಗಳಿವೆ. ದುರುಳ ಕಂಸನಿಂದ ಲೋಕವು ನೊಂದಿದ್ದರೂ ಅವನನ್ನು ಎದುರಿಸುವ ಧೈರ್ಯ ಯಾರಿಗೂ ಇದ್ದಿಲ್ಲ. ಈ ಸಂದರ್ಭದಲ್ಲಿ ಕೃಷ್ಣ ಬಲರಾಮರು ಮಲ್ಲಯುದ್ಧ ಪ್ರವೀಣರಾಗಿ ದುಷ್ಟರನ್ನು ಸಂಹರಿಸುತ್ತಿರುವುದು ಕಂಸನಿಗೆ ಕುಕ್ಕುತ್ತಿತ್ತು.

ಈ ಅಳಿಯಂದಿರು ಒಂದಲ್ಲೊಂದು ದಿನ ತನ್ನನ್ನೇ ನಾಶಪಡಿಸುವರೆಂದು ಅವನು ತಿಳಿದಿದ್ದನು. ಆದುದರಿಂದ ಅವರಿಬ್ಬರನ್ನೂ ಕೃತ್ರಿಮಪ್ರೇಮದಿಂದ ಬರಮಾಡಿಸಿ ಮುಷ್ಟಿಕ ಚಾಣೂರರೆಂಬ ಮಲ್ಲರಿಂದ ಕೊಲ್ಲಿಸಲು ಬಗೆದನು. ಆದರೆ ಇವರು ಆ ಮಲ್ಲರನ್ನು ಕೊಂದರಲ್ಲದೆ, ಆ ಕಣದಲ್ಲೇ ಕಂಸನ ಬಳಿಗೆ ನೆಗೆದು, ಅವನ ಶಿರವನ್ನು ಛೇದಿಸಿದರು. ಸೈನ್ಯ ನಾಶವೇನೂ ಆಗಲಿಲ್ಲ.

ಕಂಸನನ್ನು ಕೊಂದನಂತರ ಕೃಷ್ಣನೇ ಸಿಂಹಾಸನವನ್ನು ಏರಬಹುದಾಗಿದ್ದರೂ ಅವನು ಹಾಗೆ ಮಾಡದೆ ಉಗ್ರಸೇನನಿಗೇ ಪಟ್ಟವನ್ನಿತ್ತನು.

ಮಗಧಾಧಿಪನಾದ ಜರಾಸಂಧನು ಅತ್ಯಂತ ಕ್ರೂರನಾಗಿದ್ದನು. ಆತನು ತನ್ನೊಡನೆ ಕಾದಿದ ರಾಜರನ್ನು ಸೆರೆಹಿಡಿದು, ನೂರರ ಸಂಖ್ಯೆಯಾದೊಡನೆ ಅವರೆಲ್ಲರನ್ನೂ ನಿರ್ದಯವಾಗಿ ಮಹಾದೇವನಿಗೆ ಬಲಿಕೊಡುತ್ತಿದ್ದನಂತೆ! ಅಂತಹ ಬಲಿಷ್ಠನಾದ ಮಾಗಧನನ್ನು ಕೃಷ್ಣನು ಸುಲಭವಾಗಿ ಭೀಮದಿಂದ ಕೊಲ್ಲಿಸಿದನು.

ಕೃಷ್ಣನು ರಾತ್ರಿಯಲ್ಲಿ ಭೀಮಾರ್ಜುನರ ಸಹಿತ ಜರಾಸಂಧನ ದುರ್ಗದೊಳಗೆ ಬಂದು ರಣಭಿಕ್ಷವನ್ನು ಯಾಚಿಸಿ ಭೀಮನಿಂದ ಅವನನ್ನು ಕೊಲ್ಲಿಸುವಲ್ಲಿ ಹೆಚ್ಚಿನ ಪ್ರಾಣಹಾನಿಯಾಗಿಲ್ಲ. ಶಿಶುಪಾಲನನ್ನು ಕೊಲ್ಲುವ ಸಂದರ್ಭದಲ್ಲಿಯೂ ಕೃಷ್ಣನು ಅವನೊಬ್ಬನನ್ನೇ ಕೊಂದನು.

ಶ್ರೀ ಕೃಷ್ಣನ ಸಾಮಾಜಿಕ ಉದಾತ್ತತೆಗೆ ಹಲವು ಉದಾಹರಣೆಗಳಿವೆ – ಅವನು ಸಮಾಜಹಿತವನ್ನೇ ಧ್ಯೇಯವಾಗಿಟ್ಟುಕೊಂಡು, ಸಮಾಜಘಾತಕರನ್ನು – ಅಂದರೆ ಅವರ ದುಷ್ಕೃತ್ಯಗಳನ್ನು ದ್ವೇಷಿಸಿದನಲ್ಲದೆ, ವ್ಯಕ್ತಿ ದ್ವೇಷವನ್ನಿಟ್ಟುಕೊಳ್ಳಲಿಲ್ಲ. ಶಿಶುಪಾಲನನ್ನು ವಧಿಸಿದ ಅನಂತರ, ಅವನ ಔರ್ಧ್ವದೈಹಿಕಗಳನ್ನು ವಿಧಿವತ್ತಾಗಿ ಮಾಡಿಸಿ ಅವನ ಸ್ಥಾನದಲ್ಲಿ ಅವನ ಮಗನಿಗೆ ರಾಜ್ಯಾಭಿಷೇಕ ಮಾಡಿಸಿದನು.

ದಂಡೋಪಾಯವನ್ನು ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಪ್ರಯೋಗಿಸಿದನು. ಅದನ್ನು ಕೂಡ ಕನಿಷ್ಠ ಪ್ರಮಾಣದಲ್ಲಿ ಪ್ರಯೋಗಿಸಿ ಕನಿಷ್ಠ ಫಲವನ್ನು ಸಂಪಾದಿಸಿಕೊಂಡನು. ಧರ್ಮರಾಯನ ರಾಜಸೂಯ ಯಾಗದಲ್ಲಿ ಅತಿಥಿಗಳ ಪಾದ ತೊಳೆಯುವ ಕೆಲಸವನ್ನು ಕೃಷ್ಣನು ಕೈಗೊಂಡನೆಂದು ಸಭಾಪರ್ವದಲ್ಲಿ ಹೇಳಿದೆ. ವ್ಯಾಸ, ಧೃತರಾಷ್ಟ್ರ, ಕುಂತಿ, ಯುಧಿಷ್ಠಿರ ಇವರನ್ನು ಕಂಡಾಗಲೆಲ್ಲಾ ಸ್ವತಃ ನಮಸ್ತೇ’ ಎಂದು ವಂದಿಸುತ್ತಿದ್ದನೆಂದು ಮಹಾಭಾರತದಿಂದ ತಿಳಿದುಬರುತ್ತದೆ.

ರಾಜಸೂಯದ ಸಂದರ್ಭದಲ್ಲಿ ಅಗ್ರಪೂಜೆಯ ಗೌರವವು ಅನಿರೀಕ್ಷಿತವಾಗಿ ಆಕಾಂಕ್ಷಿತವಾಗಿ ಕೃಷ್ಣನಿಗೆ ದೊರೆತುದು ನಿಜ. ಆದರೆ ಮುಂದೆ ಅಶ್ವಮೇಧ ಯಾಗಕಾಲದಲ್ಲಿ ಅಂತಹ ಗೌರವವನ್ನು ತನಗೆ ಕೊಡಬಾರದೆ೦ದು ಮೊದಲಾಗಿಯೇ ಸೂಚಿಸಿದ್ದನು. ಅರ್ಜುನನಿಗೆ ಸಾರಥಿಯಾದುದನ್ನು ಪರಿಭಾವಿಸಿದರೆ, ಶ್ರೀಕೃಷ್ಣನ ನಿರಹಂಕಾರ ವೃತ್ತಿಗೂ ಪ್ರಸಿದ್ಧಿ ವಿಮುಖತೆಗೂ ಸೇವಾಭಾವನೆಗೂ ಬೇರೆ ಉದಾಹರಣೆಗಳು ಬೇಕಾಗಿಲ್ಲ.

ಶ್ರೀಕೃಷ್ಣನು ಧರ್ಮನಿಷ್ಠ ರಾಜನೀತಿಪಟು. ಕಂಸ, ಜರಾಸಂಧ, ಕೌರವಾದಿಗಳ ಏಕಸತ್ತಾತ್ಮಕ ಅಧಾರ್ಮಿಕ ಸಾಮ್ರಾಜ್ಯವನ್ನು ಉರುಳಿಸಿ, ಯುಧಿಷ್ಠಿರನ ಆತ್ಮನಿರ್ಣಯರೂಪದ ಧರ್ಮಬದ್ಧ ಸಾಮ್ರಾಜ್ಯದ ಸ್ಥಾಪನಾಚಾರ್ಯನವನು, ಯೋಗೇಶ್ವರನು ಅವನ ಪ್ರತಿಪಾದನೆಯ ಯೋಗವು ಸಮತಾಭಾವದಿಂದ ಕೂಡಿದ್ದು ರಾಜಧರ್ಮವೂ ಯೋಗಾಂತರ್ಗತ. ಧರ್ಮ ಸಾಮ್ರಾಜ್ಯ ಸ್ಥಾಪನೆಗಿಂತ ದೊಡ್ಡ ಯೋಗವಿಲ್ಲ.

ಅದನ್ನು ಸಾಧಿಸಿದುದರಿಂದಲೇ ಕೃಷ್ಣನು ಯೋಗೇಶ್ವರನೆನಿಸಿದನು. ಈ ಯೋಗೇಶ್ವರನು ಕಂಡ ಸಮಾನತೆ, ಮನುಷ್ಯರಿಗೆ ಮಾತ್ರವೇ ಅನ್ವಯಿಸುವಂಥದ್ದಲ್ಲ. ಅದು ಭಗವದ್ಗೀತೆಯಲ್ಲಿ ಹೇಳಿರುವಂತೆ ಮಾನವರಲ್ಲಿ ಹಸು, ಆನೆ, ನಾಯಿ ಮುಂತಾದ ಪ್ರಾಣಿಗಳಲ್ಲಿಯೂ ಕಾಣುವ ಸಮಾನತೆಯಾಗಿದೆ. ಶ್ರೀ ಕೃಷ್ಣನ ಪ್ರಭಾವದಿಂದ ಕೂಡಿದ ಯಾದವರ ರಾಜ್ಯದಲ್ಲಿ ಮದಿರೆ (ಸುರಾಪಾನ) ಸಂಪೂರ್ಣ ನಿಷಿದ್ಧವಾಗಿತ್ತು. ಮದಿರಾಪಾನಕ್ಕೆ ಮರಣದಂಡನೆ ಇದ್ದಿತಂತೆ.

ಶ್ರೀ ಕೃಷ್ಣನು ಲೋಕಪ್ರೇಮಿ. ಹಾಗೆಯೇ ಮಾತೃ-ಪಿತೃ-ಭಕ್ತನೂ ಆಗಿದ್ದನು. ದುರುಳ ಕಂಸನನ್ನು ಕೊಂದು ತಾಯ್ತಂದೆಯರನ್ನು ಸೆರೆಯಿಂದ ಬಿಡಿಸಿದನಂತರ, ಅವರೊಡನೆ ಕೃಷ್ಣನು ಹೇಳಿದ ಮಾತಿದು – (ಜಗನ್ನಾಥವಿಜಯ ಕಾವ್ಯದಿಂದ ಆಯ್ದುದು)

ಕೇಳೆಲೆ ತಾತ ಕೇಳ್ ಜನನಿ ಕಂಸನ ಕಾರಣದಿಂದಗಲ್ಟು ಗೋ

ಪಾಲಯವಾಸವಾಸರಾದೆಮಗೆ ನಿಮ್ಮ ಪದಾರ್ಚನೆಗೆಯ್ಯದಿನ್ನೆಗಂ

ಕಾಲಮಿದಿಂತು ಪೋಯ್ತು ಪಿತೃ-ಮಾತೃ-ಗುರು-ದ್ವಿಜ-ದೇವಪೂಜೆಯಂ

ಕಾಲಮಿದೆಯ್ದೆ ಸಲ್ಲದನ ಬಾಳೈ ನಿರರ್ಥಕಮಲ್ತೆ ಲೋಕದೊಳ್ (6.93)

ಶ್ರೀಕೃಷ್ಣನ ಮಾನವೋಚಿತ ಉದಾತ್ತ ಮನೋವೃತ್ತಿಗೆ ಈ ಉದಾಹರಣೆ ಸಾಲದೆ?

ವೈಯಕ್ತಿಕವಾಗಿ ಶ್ರೀಕೃಷ್ಣನು ಅತಿ ನಿಷ್ಠಾವಂತನು. ಸಕಾಲದಲ್ಲಿ ಸಂಧ್ಯೋಪಾಸನೆ ಅವನ ನಿತ್ಯಕರ್ಮವಾಗಿದ್ದಿತು. ರುಕ್ಮಿಣಿಯನ್ನು ವರಿಸಿದ ಅನಂತರ ಪುತ್ರಪ್ರಾಪ್ತಿಗಾಗಿ ಬ್ರಹ್ಮಚರ್ಯಪೂರ್ವಕವಾಗಿ ಹಿಮಾಲಯದ ಪಾರ್ಶ್ವದಲ್ಲಿ ತಪಸ್ಸು ಮಾಡಿದನೆಂದು ಸೌಪ್ತಿಕಪರ್ವದಲ್ಲಿ ಹೇಳಲಾಗಿದೆ.

ಎಲ್ಲ ಉಪನಿಷತ್ತುಗಳ ಸಾರಭೂತವಾದ ಭಗವದ್ಗೀತೆಯನ್ನು ಅವನು ಉಪದೇಶಿಸಿರಬೇಕಾದರೆ, ಅವನು ಸರ್ವದಾ ಮಾರ್ಗದರ್ಶನ ಮಾಡಿದವನು. ಅವನ ಆಧ್ಯಾತ್ಮಿಕ ಹಾಗೂ ಲೌಕಿಕ ಅಧ್ಯಯನದಿಂದ ನವಚೈತನ್ಯವನ್ನು ಪಡೆದು ಜ್ಞಾನಯುಕ್ತ ಕರ್ಮಯೋಗಿಗಳಾಗಿ ಧರ್ಮಯುಕ್ತ ಸಮಾಜಹಿತ ಕಾರ್ಯಗಳಲ್ಲಿ ಮುಂದಡಿಯಿಡಲು ಸಾಧ್ಯವಾದೀತು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi