ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ-ಸಂದೇಶ

19ನೇ ಆಗಸ್ಟ್ 2007ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ಇಸ್ಕಾನ್ ಬೆಂಗಳೂರು ಸಹಯೋಗದಲ್ಲಿ ನಡೆದ “ಚೈತನ್ಯ ಪಂಥ ಹಾಗೂ ದಾಸ ಪಂಥ’ ವಿಚಾರ ಸಂಕಿರಣದ ಪ್ರಬಂಧದ ಸಾರಾಂಶ.

– ಶ್ರೀಯುತ ಬಾ.ವೇ.ಶ್ರೀಧರ, ಮೈಸೂರು, ನಿಘಂಟು ತಜ್ಞರು, ನಿರ್ದೇಶಕರು, ಪ್ರಸಾರಾಂಗ.

ದಕ್ಷಿಣದಲ್ಲಿ ಮಧ್ವಾಚಾರ್ಯರು, ರಾಮಾನುಜಾಚಾರ್ಯರು, ಉತ್ತರದಲ್ಲಿ ರಮಾನಂದ ಕಬೀರರು, ಪೂರ್ವದಲ್ಲಿ ಚೈತನ್ಯರು, ಪಶ್ಚಿಮದಲ್ಲಿ ವಲ್ಲಭಾಚಾರ್ಯರು ಶ್ರೀಕೃಷ್ಣ ಸಾಮ್ರಾಜ್ಯವನ್ನು ಭಕ್ತಿ ಪಂಥವನ್ನು ಸ್ಥಾಪಿಸಿದ ಭಕ್ತರ ಸಾಲಿನಲ್ಲಿ ಅಗ್ರಗಣ್ಯರು.

ಇತರ ಅನೇಕ ದೇಶೋದ್ಧಾರಕರಂತೆ ಭಕ್ತಿಯೋಗವನ್ನು ಜನಸಮುದಾಯಕ್ಕೆ ಬೋಧಿಸಿದ ಆಚಾರ್ಯರು ನಮ್ಮ ದೇಶಕ್ಕೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಶಾಂತಿ ಸ್ಥಾಪನೆಯ ಮಹತ್ಕಾರ್ಯವು ಭಕ್ತಿಪಂಥದ ಆಚಾರ್ಯರಿಂದ ನಡೆದಂತೆ ಬೇರೆ ಯಾರಿಂದಲೂ ನಡೆದಿಲ್ಲ.

ಶ್ರೀಕೃಷ್ಣನನ್ನು, ಶ್ರೀಹರಿಯನ್ನು ಚಿಂತಿಸಿ, ಧ್ಯಾನಿಸಿ, ಜಪಿಸಿ, ಪೂಜಿಸಿ ಮರ್ತ್ಯನು ಅಮರ್ತ್ಯನಾಗಬಲ್ಲ, ಪಾಪಿ ಪುಣ್ಯಾತ್ಮನಾಗಬಲ್ಲ, ಸಂಸಾರಿ ಸಂಸಾರ ಸಾಗರವನ್ನು ದಾಟಬಲ್ಲ; ಭಕ್ತಿಯು ಭವಸಾಗರವನ್ನು ದಾಟಬಲ್ಲ ನಾವೆ. ಭಗವತ್ ಸಾಕ್ಷಾತ್ಕಾರಕ್ಕೆ ಜ್ಞಾನಯೋಗ ಕರ್ಮಯೋಗಗಳಿಗಿಂತ ಭಕ್ತಿಯೋಗವೇ ಸುಲಭವಾದ ಮಾರ್ಗ ಎಂದು ಚೈತನ್ಯರು ಸಾರಿದರು.

ಚೈತನ್ಯರ ಉಪದೇಶಗಳು ಭಾರತೀಯ ಸಮಾಜದ ಮೇಲೆ ಐದು ಶತಮಾನಗಳ ಹಿಂದೆಯಷ್ಟೇ ಅಲ್ಲದೆ ಈಗಲೂ ಪ್ರಭಾವ ಬೀರುತ್ತಿವೆ, ಮುಂದೆಯೂ ಬೀರುತ್ತವೆ; ಮಾತ್ರವಲ್ಲ, ಜಗತ್ತಿನಾದ್ಯಂತ ತ್ವರಿತವಾಗಿ ಹರಡುತ್ತಿವೆ.

ಈ ಪ್ರಬಂಧದಲ್ಲಿ ಕೆಳಕಂಡ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಪೀಠಿಕೆ, ಚೈತನ್ಯರ ಕಾಲದಲ್ಲಿ ಬಂಗಾಳದ ಪರಿಸ್ಥಿತಿ, ಚೈತನ್ಯರ ಪೂರ್ವಜರು, ಚೈತನ್ಯರ ಜನನ, ಬಾಲ್ಯ, ವಿದ್ಯಾಭ್ಯಾಸ, ವೈವಾಹಿಕ ಜೀವನ, ಭಕ್ತಿಯಿಂದ ಮುಕ್ತಿ ಎಂಬುದರ, ಹರಿನಾಮ ಸಂಕೀರ್ತನೆಯ ಆಂದೋಲನ, ಕೇಶವ ಭಾರತಿಗಳಿಂದ ಸಂನ್ಯಾಸ ಸ್ವೀಕಾರ,

ದಕ್ಷಿಣ ಭಾರತದ ತೀರ್ಥಯಾತ್ರೆ, ಮಹಾರಾಜನಿಂದ ಚಂಡಾಲನವರೆಗೆ, ಬ್ರಾಹ್ಮಣರಿಂದ ಮುಸಲ್ಮಾನರವರೆಗೆ, ಬುದ್ಧಿಜೀವಿಗಳಿಂದ ಚಾರ್ವಾಕರವರೆಗೆ ಎಲ್ಲರನ್ನೂ ಭಕ್ತಿಪಂಥಕ್ಕೆ ಆಕರ್ಷಿಸಿದ್ದು, ಚೈತನ್ಯರು ಭಗವಂತನ ಅವತಾರವೆಂದು ಶ್ರೀ ರಾಮಕೃಷ್ಣ ಪರಮ ಹಂಸರು ಹೇಳಿದ್ದು, ಚೈತನ್ಯರು ರಚಿಸಿದ ಶಿಕ್ಷಾಷ್ಟಕ, ಕೃಷ್ಣರಾಜ ಕವಿರಾಜ ಗೋಸ್ವಾಮಿಯವರ ‘ಚೈತನ್ಯ ಚರಿತಾಮೃತ’ ಮತ್ತು ಅದರ ಸಾರ.

ಚೈತನ್ಯರ ಉಪದೇಶಾಮೃತ, ಮಾನವಕೋಟಿಗೆ ಅವರ ಕೊಡುಗೆ, ಅವರ ಜೀವನ ಸಂದೇಶ ಇತರರಿಗೆ ಉದ್ಧಾರದ ಹಾದಿ ಲಕ್ಷಾಂತರ ಜನರು ಸಂಸಾರಯಾತ್ರೆಯನ್ನು ಸುಗಮವಾಗಿ ನಡೆಸಲು ಊರುಗೋಲು.

ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ-ಸಂದೇಶ

ಶ್ರೀ ಚೈತನ್ಯರ ಬಗ್ಗೆ ಪ್ರಬಂಧ ಮಂಡಿಸುವುದಕ್ಕೆ ನಾನು ಯೋಗ್ಯನೇ ಎನ್ನುವ ಚಿಂತೆ ನನ್ನದು. ಇಂಗ್ಲಿಷ್ ನಾಣ್ಣುಡಿಯಂತೆ, “ದೇವತೆಗಳೇ ಹೆಜ್ಜೆಯಿಡಲು ಹೆದರುವ ಸ್ಥಳಕ್ಕೆ ಮೂರ್ಖನೊಬ್ಬ ಮುನ್ನುಗ್ಗುವಂತೆ,” ನಾನು ಮುಂದೆ ಬಂದಿರುವೆನೇನೋ ಎನಿಸುತ್ತಿದೆ. ತಾವೆಲ್ಲ ಭಾಗವತೋತ್ತಮರು ನನ್ನ ಹುಂಬತನವನ್ನು ಮನ್ನಿಸುವಿರೆಂದು ತಿಳಿಯುತ್ತೇನೆ.

ದಕ್ಷಿಣದಲ್ಲಿ ಮಧ್ವಾಚಾರ್ಯರು, ರಾಮಾನುಜಾಚಾರ್ಯರು, ಉತ್ತರದಲ್ಲಿ ರಮಾನಂದ-ಕಬೀರರು, ಪೂರ್ವದಲ್ಲಿ ಚೈತನ್ಯರು, ಪಶ್ಚಿಮದಲ್ಲಿ ವಲ್ಲಭಾಚಾರ್ಯರು ಶ್ರೀಕೃಷ್ಣಭಕ್ತಿ ಸಾಮ್ರಾಜ್ಯವನ್ನು ಜನಮನದಲ್ಲಿ ಸ್ಥಾಪಿಸಿದ ಸಹಸ್ರಮಾನದ ಸಂತ ಶ್ರೇಷ್ಠರಲ್ಲಿ ಅಗ್ರಗಣ್ಯರು.

ಲೋಕದಲ್ಲಿ ಐಶ್ವರ್ಯ, ಬುದ್ಧಿಶಕ್ತಿ, ಐಶ್ವರ್ಯ ಮದ, ತರ್ಕಕೌಶಲ ಇವುಗಳಲ್ಲಿ ತಾಂಡವಾಡುತ್ತಿದ್ದ ಕಾಲದಲ್ಲಿ ಚೈತನ್ಯರು ಮಾನವ ಜನಾಂಗಕ್ಕೆ ಬೆಳಕು ನೀಡಿದರು. ಇದಕ್ಕೆಲ್ಲ ಕಳಶವಿಟ್ಟ ಹಾಗೆ ಭಕ್ತಿಯೋಗವನ್ನು ಜನ ಸಾಮಾನ್ಯರಿಗೆ ಪರಿಚಯಿಸಿದ ಮಹಾ ಆಚಾರ್ಯರು ನಮ್ಮ ದೇಶಕ್ಕೆ ಅನುಪಮವಾದ ಸೇವೆ ಸಲ್ಲಿಸಿದ್ದಾರೆ.

ಶಾಂತಿ ಸ್ಥಾಪನೆಯ ಮಹತ್ಕಾರ್ಯ ಭಕ್ತಿಪಂಥೀಯರಿಂದ ನಡೆದಿರುವ ಹಾಗೆ, ಬೇರೆ ಯಾರಿಂದಲೂ ನಡೆದಿಲ್ಲ. 12ನೆಯ ಶತಮಾನದಲ್ಲಿ ಶ್ರೀ ರಾಮಾನುಜಾಚಾರ್ಯರು ಮಾಡಿದ್ದನ್ನೇ 15ನೆಯ ಶತಮಾನದಲ್ಲಿ ಚೈತನ್ಯರು ಪೂರ್ವದಲ್ಲಿ ಮತ್ತು ಭಾರತದಾದ್ಯಂತ ಮಾಡಿದರು.

ಶ್ರೀ ಕೃಷ್ಣನನ್ನು – ಶ್ರೀ ಹರಿಯನ್ನು ಚಿಂತಿಸಿ, ಧ್ಯಾನಿಸಿ, ಜಪಿಸಿ ಮರ್ತ್ಯನು ಅಮರ್ತ್ಯನಾಗಬಲ್ಲ. ಪಾಪಿಯು ಪುಣ್ಯಾತ್ಮನಾಗಬಲ್ಲ, ಸಂಸಾರಿಯು ಸಂಸಾರ ಸಾಗರವನ್ನು ದಾಟಬಲ್ಲ – ಹೀಗೆ ಈ ಭಕ್ತಿಯೋಗವೇ ಭವಸಾಗರವನ್ನು ದಾಟಬಲ್ಲ ನೌಕೆ ಎಂದು ಹೇಳಿದರು. ಭಕ್ತಿಯಿಂದಲೇ ಮುಕ್ತಿ. ಭಗವತ್ ಸಾಕ್ಷಾತ್ಕಾರಕ್ಕೆ ಜ್ಞಾನಯೋಗಕ್ಕಿಂತ, ಕರ್ಮಯೋಗಕ್ಕಿಂತ ಭಕ್ತಿಯೋಗವೇ ಸುಲಭ ಸಾಧನ ಮಾರ್ಗ ಎಂದು ಅವರು ಹೇಳಿದರು.

ಈ ಶರಣಾಗತಿ ತತ್ತ್ವವನ್ನು ಜಗತ್ತಿಗೆ ಸಾರಲು ತಮ್ಮ ಎರಡೂ ಕೈಗಳನ್ನು ಎತ್ತಿರುವ ಚೈತನ್ಯರು, ಆ ರೀತಿಯಲ್ಲಿ ಶರಣಾಗುವುದನ್ನು ಮೊತ್ತ ಮೊದಲು ಮನವರಿಕೆ ಮಾಡಿಕೊಟ್ಟರು. ಈ ಹಿಂದೆ ಶರಣಾಗತಿ ತತ್ತ್ವವನ್ನು ತೋರಿಸಿದರು ರಾಮಾನುಜಾಚಾರ್ಯರು.

ಅವರು ಈ ಭಾವವನ್ನು “ಪ್ರಪತ್ತಿ” ಎಂದು ಕರೆದರು. “Absolute self surrender.’ ಇದಕ್ಕೆ ಅವರೊಂದು ವ್ಯಾಖ್ಯಾನ ಕೊಡುತ್ತಾರೆ; ‘ಸ್ವಪ್ರಯತ್ನ ನಿವೃತ್ತಿ’, ಭಕ್ತಿಯೋಗದಲ್ಲಾದರೂ ನೀವು ಹಣ್ಣು ಕಾಯಿ, ಹೂವು, ಗಂಧದ ಕಡ್ಡಿಗಳನ್ನಿಡಬೇಕು. ಈ ಶರಣಾಗತಿ ತತ್ವಕ್ಕೆ ಅದು ಕೂಡ ಬೇಕಾಗಿಲ್ಲ. “ನಾನು ನಿನಗೆ ಶರಣು.” ಅಷ್ಟೇ ಸಾಕು.

ಮುಂದುವರಿದ ರಾಷ್ಟ್ರಗಳಲ್ಲಿ ಇತರ ದೇಶಗಳಲ್ಲಿ ಅಣುಬಾಂಬ್‌ಗಳಿಂದ ಮದ್ದುಗುಂಡುಗಳಿಂದ, ಸೇವಾದಳಗಳಿಂದ ರಾಜತಂತ್ರದಿಂದ ಸಾಧಿಸಲಾಗದ ಶಾಂತಿ ಸ್ಥಾಪನಾ ಕೆಲಸವನ್ನು ನಮ್ಮ ದೇಶದಲ್ಲಿ ಕೌಪೀನ ಧಾರಿಗಳಾಗಿ, ಕಾಷಾಯ ವಸ್ತ್ರಧಾರಿಗಳಾಗಿ, ನಿತ್ಯ ಭಿಕ್ಷೆಯಿಂದ, ಏಕಾಂತವಾಗಿ, ಏಕಾಂಗಿಯಾಗಿ, ಚೈತನ್ಯರಂಥ ಭಕ್ತಾಗ್ರಣಿಗಳು ಸಾಧಿಸಿಬಿಟ್ಟಿದ್ದಾರೆ.

ಅಷ್ಟು ಮಾತ್ರವಲ್ಲ, ರಾಜಾಧಿರಾಜರನ್ನೂ ಈ ಮಾರ್ಗದಿಂದಲೇ ಕಾಲಿಗೆ ಎರಗುವಂತೆ ಮಾಡಿದ್ದಾರೆ. ಶಾಂತಿ ಸ್ಥಾಪನೆಗೆ ಸಂತ ಶ್ರೇಷ್ಠರು ಮಾನವರ ಹೃದಯಗಳಲ್ಲೇ ಪ್ರವೇಶಿಸಿ, ಅವುಗಳಲ್ಲಿ ಭಗವದ್ಭಕ್ತಿಯೆಂಬ ಬೀಜವನ್ನು ಬಿತ್ತಿ, ಶಾಂತಿ- ಸಮಾಧಾನಗಳೆಂಬ ಪಕ್ವವೂ ಮಧುರವೂ ಆದ ಫಲಗಳನ್ನು ಬೆಳೆದಿದ್ದಾರೆ.

ಬಹಳ ಹಿಂದಿನ ಕಾಲದಿಂದಲೂ ಬಂಗಾಳವು ನಮ್ಮ ದೇಶದ ಇತರ ಭಾಗಗಳಿಗಿಂತ ನ್ಯಾಯ ತರ್ಕಶಾಸ್ತ್ರಗಳ ಅಧ್ಯಯನಕ್ಕೆ ಹೆಸರು ವಾಸಿಯಾಗಿತ್ತು. ತರ್ಕದ ಹುಟ್ಟಿನಲ್ಲಿ ವೇದಾಂತ – ಭಕ್ತಿ ವಿಚಾರಗಳು ಬೆಳಕು ಕಾಣುತ್ತಿರಲಿಲ್ಲ. ಭಕ್ತಿಪಂಥ ತಾರ್ಕಿಕರು, ಶಕ್ತಿಪೂಜಕರ ಕುಣಿತದಿಂದ ಸೊರಗುತ್ತಿತ್ತು.

ಇಡಿಯ ಬಂಗಾಳವು ತರ್ಕದಿಂದ ಶುಷ್ಕವಾಗಿದ್ದ ಸಂದರ್ಭದಲ್ಲಿ ಶ್ರೀ ಚೈತನ್ಯರು ಕೃಷ್ಣನನ್ನು ತಮ್ಮ ಹೃದಯೇಶ್ವರನನ್ನಾಗಿ ಸ್ವೀಕರಿಸಿ, ವಿಷ್ಣುಭಕ್ತಿಯೆಂಬ ಆನಂದ ಸಾಗರದಲ್ಲಿ ತೇಲಾಡಿದರಲ್ಲದೆ, ಜನ ಸಮೂಹವನ್ನು ಪುನೀತರನ್ನಾಗಿ ಮಾಡಿದರು.

ಆ ಮಹಾನುಭಾವರು ಬಿತ್ತಿದ ಭಕ್ತಿ ಬೀಜವು ಚಿಗುರೊಡೆದು ಮರವಾಗಿ, ಹೆಮ್ಮರವಾಗಿ ಫಲ-ಪುಷ್ಪಭರಿತವಾಯಿತು. ಚೈತನ್ಯರ ಪೂರ್ವಜರು ಒರಿಸ್ಸಾದ ಜಯಪುರದಲ್ಲಿ ವಾಸಿಸುತ್ತಿದ್ದರು. 15ನೆಯ ಶತಮಾನದಲ್ಲಿ ಮಧುಕರ ಮಿಶ್ರನೆಂಬುವನು ಅಲ್ಲಿನ ರಾಜನಿಗೆ ಹೆದರಿ ಅಸ್ಸಾಂನ ಸಿಲ್ಹೋಟ್‌ಗೆ ತೆರಳಿ ಬಹುಕಾಲ ಅಲ್ಲಿಯೇ ವಾಸವಾಗಿದ್ದನು.

ಅವನ ಮೊಮ್ಮಗ ಜಗನ್ನಾಥ ಅಥವಾ ಪುರಂದರ ಮಿಶ್ರನು 1460ರಲ್ಲಿ ಅಸ್ಸಾಂನ್ನು ಬಿಟ್ಟು ಬಂಗಾಳದ ನವದ್ವೀಪ ಎಂಬ ಪಟ್ಟಣ ಸೇರಿದನು. ಅದೇ ಊರಿನಲ್ಲಿ ನ್ಯಾಯಶಾಸ್ತ್ರ ಪಂಡಿತನಾದ ನೀಲಾಂಬರ ಚಕ್ರವರ್ತಿ ಎನ್ನುವವರ ಮಗಳು ಶಚೀದೇವಿಯನ್ನು ವಿವಾಹವಾದನು.

ಶಚೀದೇವಿಯಿಂದ ಮಿಶ್ರನಿಗೆ 8 ಮಕ್ಕಳಾದರು. ಒಬ್ಬನೂ ಉಳಿಯಲಿಲ್ಲ. ಅನಂತರ ವಿಶ್ವರೂಪ ಎನ್ನುವ ಒಂಬತ್ತನೆಯ ಮಗು ಹುಟ್ಟಿತು. ಆತನನ್ನು ಪ್ರೀತಿಯಿಂದ ಸಾಕಿ ಸಲಹಿ, ವಿದ್ಯಾಬುದ್ಧಿಗಳನ್ನು ಕಲಿಸಿ, ಇನ್ನೇನು ಮದುವೆ ಮಾಡಬೇಕೆನ್ನುವಷ್ಟರಲ್ಲಿ ಅವನು ಸಂಸಾರದಲ್ಲಿ ಬೇಸತ್ತು, ದಕ್ಷಿಣದೇಶಕ್ಕೆ ತೆರಳಿ, ಅಲ್ಲಿ ಸಂನ್ಯಾಸ ಸ್ವೀಕರಿಸಿದನು. ಆಮೇಲೆ ಅವನು ಎಲ್ಲಿರುವನೆಂದು ತಂದೆ-ತಾಯಿಗಳಿಗೆ ತಿಳಿಯಲೇ ಇಲ್ಲ.

ಶಚೀದೇವಿ ಹತ್ತನೇ ಬಾರಿ ಗರ್ಭಧರಿಸಿದಳು. ನವಮಾಸ ಪರ್ಯಂತ ಆಕೆಯ ಮನಸ್ಸು ಪ್ರಾಪಂಚಿಕ ವಸ್ತುಗಳೊಂದನ್ನೂ ಬಯಸದೆ ಸದಾ ಭಗವನ್ನಾಮ ಸ್ಮರಣೆಯಲ್ಲಿ ಕಳೆಯಬಯಸಿತು. ಕ್ರಿ.ಶ. 1486ರ ಫೆಬ್ರವರಿ 18ರಂದು ಆಕೆಗೊಂದು ಗಂಡು ಮಗು ಜನಿಸಿತು.

ಅಂದು ಚಂದ್ರಗ್ರಹಣವಾದ್ದರಿಂದ ಗಂಗಾನದಿಯಲ್ಲಿ ಸಾವಿರಾರು ಭಕ್ತರು ಭಗವನ್ನಾಮ ಸ್ಮರಣೆ ಮಾಡುತ್ತಿದ್ದರು. ಮಗು ಹುಟ್ಟಿದ ಕೂಡಲೇ ಅದರ ಕಿವಿಗೆ ಬಿದ್ದಿದ್ದು ‘ಹರಿನಾಮ’ ಘೋಷವೇ. ಮಗುವಿಗೆ ‘ವಿಶ್ವಂಭರ’ ಎಂದು ನಾಮಕರಣ ಮಾಡಿದರು. ಈ ಮಗುವೇ ಮುಂದೆ ಚೈತನ್ಯ ಮಹಾಪ್ರಭುವಾದರು.

ಈ ಹಿಂದೆ ಹುಟ್ಟಿದ್ದ ಎಲ್ಲಾ ಎಂಟು ಮಕ್ಕಳು ಸತ್ತು ಹೋಗಿದ್ದುದರಿಂದ, ಈ ಮಗುವೂ ಹಾಗೆಯೇ ಆಗಬಹುದೆಂದು ಕೆಲವರು ಅದನ್ನು ʼನಿಮಾಯ್’ ಎಂದು ಕರೆದರು. ‘ನಿಮಾಯ್’ ಎಂದರೆ ಬಂಗಾಳದಲ್ಲಿ ‘ಅಲ್ಪಾಯು’ ಎನ್ನುವ ಅರ್ಥವಿದೆಯೆಂದು ಕೇಳಿದ್ದೇನೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ಆದರೆ, ‘ನಿಂಬವೃಕ್ಷ’ ಅಂದರೆ ಬೇವು. ಇದರ ಕೆಳಗೆ ಹುಟ್ಟಿದುದರಿಂದ ‘ನಿಮಾಯ್‌’ ಎಂದೂ ಹೇಳುತ್ತಾರೆ. ಮಗು ನೋಡಲು ಗೌರವರ್ಣದಿಂದ ಸುಂದರವಾಗಿದ್ದುದರಿಂದ ಅದನ್ನು ‘ಗೌರಾಂಗ’ ಎಂದೂ ಕರೆಯುತ್ತಿದ್ದರು. ಎಳೆಯ ಮಗುವಾಗಿದ್ದ ನಿಮಾಯ್ ಒಂದೇ ಸಮನೆ ಅಳುತ್ತಿದ್ದನು.

ನೆರೆಮನೆಯ ಹೆಂಗಸರು ‘ಹರಿಬೋಲ್’ ‘ಹರಿಬೋಲ್’ ಎಂದ ಕೂಡಲೇ ಅಳು ನಿಲ್ಲಿಸುತ್ತಿದ್ದನು. ಅವನ ಜನನ ಕಾಲವನ್ನು ನೋಡಿ ಜ್ಯೋತಿಷ್ಯರು, ಚಂದ್ರಗ್ರಹಣ ಕಾಲದಲ್ಲಿ ಹರಿನಾಮ ಸಂಕೀರ್ತನೆ ನಡೆಯುತ್ತಿದ್ದಾಗ ಹುಟ್ಟಿದ್ದರಿಂದ ಮುಂದೆ ಈತ ಹರಿಭಕ್ತಿ ಪ್ರಸಾರವನ್ನು ಮಾಡಿ, ಭಕ್ತಿಪಂಥದ ಆಚಾರ್ಯನಾಗುವನೆಂಬ ಭವಿಷ್ಯ ನುಡಿದರು.

ಹುಟ್ಟಿದ ಮಕ್ಕಳೆಲ್ಲ ಸತ್ತುಹೋಗಿ, ವಯಸ್ಸಾದ ಮೇಲೆ ಹುಟ್ಟಿದ್ದರಿ೦ದ, ವಿಶ್ವಂಬರನನ್ನು ಕಂಡರೆ ಅವನ ತಂದೆ-ತಾಯಿಗಳಿಗೆ ಎಣೆಯಿಲ್ಲದ ಪ್ರೀತಿ. ಚಿಕ್ಕವನಾಗಿದ್ದಾಗ ಆತ, ಮನೆಗೆ ಬಂದ ಪಂಡಿತರ ಪಂಚೆ ಎಳೆಯುವುದು, ಅವರ ಪುಸ್ತಕ ಕದಿಯುವುದು – ಈ ಕೆಲಸಗಳನ್ನೆಲ್ಲ ಮಾಡುತ್ತಿದ್ದನು.

ಬೀದಿಯಲ್ಲಿ ಪುಂಡ ಪೋಕರಿಗಳ ಜೊತೆಯಲ್ಲಿ ಓಡಾಡುವುದು, ಉರುಳಾಡುವುದು ಮಾಡಿಕೊಂಡಿರುತ್ತಿದ್ದನು. ತಂದೆಗೆ ಬೇಜಾರಾಗಿ, ಹೀಗೆಲ್ಲ ಏಕೆ ಮಾಡುತ್ತಿದ್ದೀ?’ ಎಂದು ಕೇಳಿದಾಗ, “ನೀನು ನನ್ನನ್ನು ಒಳ್ಳೆ ಬುದ್ಧಿಕಲಿಯಲು ಶಾಲೆಗೆ ಸೇರಿಸಿಲ್ಲವಲ್ಲ” ಎಂದು ಉತ್ತರಿಸಿದ.

ತಂದೆಯು, ಮಗನನ್ನು ಓದಿಸಿ ಬೆಳೆಸಿದರೆ ಅವನು ವಿದ್ಯಾವಂತನಾಗಿ ಅಣ್ಣನಂತೆ ಓಡಿ ಹೋಗುವನೆಂದು ಭಾವಿಸಿ, ಶಾಲೆಗೆ ಕಳುಹಿಸದೇ ಇರುವುದೇ ಮೇಲು ಎಂದು ಭಾವಿಸಿದ್ದನು. ತುಂಬಾ ಬುದ್ಧಿವಂತನಾದ ನಿಮಾಯ್, ತರ್ಕ-ವ್ಯಾಕರಣ, ನ್ಯಾಯಶಾಸ್ತ್ರ, ಅಲಂಕಾರ ಶಾಸ್ತ್ರಗಳನ್ನು ಅತಿ ಶೀಘ್ರವಾಗಿ ಕಲಿತನು.

20ರ ವೇಳೆಗೆ ತುಂಬ ಮೇಧಾವಿ ಎನಿಸಿಕೊಂಡು, ಸಂಸ್ಕೃತ ಪಾಠಶಾಲೆಯೊಂದರ ಮುಖ್ಯೋಪಾಧ್ಯಾಯನಾದನು. ಆಗಿನ ಕಾಲದಲ್ಲಿ ಎಲ್ಲೆಡೆ ವಾಕ್ಯಾರ್ಥಗಳು, ತರ್ಕಸ್ಪರ್ಧೆಗಳು ನಡೆಯುತ್ತಲೇ ಇದ್ದವು.

ನವದ್ವೀಪಕ್ಕೆ ಬಂದ ಪಂಡಿತೋತ್ತಮರನ್ನೆಲ್ಲ ಸೋಲಿಸಿ, ವಿಶ್ವಂಭರ ಪ್ರಸಿದ್ಧನಾದನು. ಚಿಕ್ಕವನಿದ್ದಾಗ ತನ್ನ ಆಟ-ಪಾಠಗಳಿಂದಲೂ, ದೊಡ್ಡವನಾದ ಅನಂತರ ತನ್ನ ವಿದ್ಯಾಬುದ್ಧಿಗಳಿಂದಲೂ ತಂದೆ ತಾಯಿಯರಿಗೆ ಅಚ್ಚುಮೆಚ್ಚಾದನು. ವಿಶ್ವಂಭರ ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಅದೇ ಊರಿನಲ್ಲಿದ್ದ ಪಂಡಿತ ವಲ್ಲಭಾಚಾರ್ಯನ ಮಗಳಾದ ಲಕ್ಷ್ಮೀಯನ್ನು ಮೆಚ್ಚಿ ಸುಮಾರು 15ನೆಯ ವಯಸ್ಸಿನಲ್ಲಿ ಮದುವೆಯಾದನು.

ಕೆಲಕಾಲಾನಂತರ ಆತನು ದೇಶ ಸಂಚಾರಕ್ಕೆಂದು ಹೊರಟು, ಬಂಗಾಳದ ನಾನಾ ಪಂಡಿತರನ್ನೆಲ್ಲ ವಾದದಲ್ಲಿ ಸೋಲಿಸಿ, ಹೇರಳವಾಗಿ ಹಣವನ್ನು ಬಹುಮಾನವನ್ನು ಗಳಿಸಿದನು.

ಹೀಗೆ, ಪರಸ್ಥಳದಲ್ಲಿದ್ದಾಗ ಪತ್ನಿ ಲಕ್ಷ್ಮಿ ಹಾವು ಕಚ್ಚಿಸತ್ತಳೆಂದು ತಿಳಿದು ಊರಿಗೆ ಮರಳಿದನು. ಪತ್ನಿ ವಿಯೋಗದಿಂದ ಬೇಸರಗೊಂಡಿದ್ದ ವಿಶ್ವಂಭರನಿಗೆ, ಅದೇ ಊರಿನಲ್ಲಿದ್ದ ಸನಾತನ ಮಿಶ್ರ ಎನ್ನುವ ಬ್ರಾಹ್ಮಣರು ತಮ್ಮ ಏಕೈಕ ಪುತ್ರಿಯಾದ ವಿಷ್ಣುಪ್ರಿಯಾಳನ್ನು ಕೊಟ್ಟು ಮದುವೆ ಮಾಡಿದರು.

ಈ ಮಧ್ಯೆ, ವಿಶ್ವಂಭರರ ತಂದೆ ವಿಧಿವಶರಾದಾಗ, ಆತ ಗಯೆಗೆ ಹೋಗಿ ಶ್ರಾದ್ಧಾದಿಗಳನ್ನು ಮಾಡಿ, ಗದಾಧರನನ್ನು ಆರಾಧಿಸಿದರು. ಆ ಗದಾಧರ ಮೂರ್ತಿಯ ಸಾನ್ನಿಧ್ಯದಲ್ಲಿಯೇ ಆತನ ಮನಸ್ಸು ಭಗವದ್ವಿಚಾರದತ್ತ ತಿರುಗಿತು.

ಯಾವ ಕ್ಷೇತ್ರದಲ್ಲಿ ಬುದ್ಧದೇವನಿಗೆ ಜ್ಞಾನೋದಯವಾಯಿತೋ ಅಲ್ಲೇ ವಿಶ್ವಂಭರನ ಹೃದಯ ಪರಿವರ್ತನೆಯಾಯಿತು. ಶುಷ್ಕ ತರ್ಕವಾದಗಳ ಒಣ ಪಾಂಡಿತ್ಯದಿಂದ ತುಂಬಿದ್ದ ಆತನ ಹೃದಯ ಕರಗಿತು. ಗೌತಮರು ರಾಜ್ಯಭೋಗ ಪತ್ನಿ-ಪುತ್ರರ ಸಹಯೋಗವನ್ನು ತೊರೆದು ಹೋದದ್ದು ಅವನ ಮನಸ್ಸು ಕಲಕಿತು.

ಅದೇ ಸಮಯದಲ್ಲಿ ಆತನಿಗೆ ಮಾಧವೇಂದ್ರ ಪುರಿಯವರ ಶಿಷ್ಯರಾದ ಈಶ್ವರ ಪುರಿಯವರ ಸಂಪರ್ಕವಾಯಿತು. ಮಾಧವ ಪುರಿಗಳು, ಉಡುಪಿಯಲ್ಲಿ ಅವತರಿಸಿ ದ್ವೈತ ಮತವನ್ನು ಸ್ಥಾಪಿಸಿದ ಮಧ್ವ ಸಂಪ್ರದಾಯದ ಒಬ್ಬಯತಿಗಳು. ವಿಶ್ವಂಭರನು ಈಶ್ವರ ಪುರಿಯನ್ನು ಗುರುವಾಗಿ ಸ್ವೀಕರಿಸಿದನು. ಅವರು ಅವನಿಗೆ ಭಕ್ತಿಪಂಥದ ತತ್ತ್ವಗಳನ್ನು ಉಪದೇಶಿಸಿದರು.

ಶ್ರೀಮದ್ಭಾಗವತ ಪುರಾಣವನ್ನು ಪರಿಚಯಿಸಿದರು. ವಿಶ್ವಂಭರನಿಗೆ ತಾನು ಮಹಾವಿದ್ವಾಂಸನೆಂಬ ಅಹಂಕಾರ ತೊಲಗಿತು. ದಯೆ, ವಿನಯ, ಸರಳತೆಗಳುಂಟಾದವು. ಭಕ್ತಿ ತತ್ತ್ವವು ಹೃದಯವನ್ನು ಪ್ರವೇಶಿಸಿದ್ದರಿಂದ ವಿಶ್ವಂಭರನು ಪ್ರೇಮ ಸ್ವರೂಪಿಯೂ, ಪರೋಪಕಾರಿಯೂ, ದೀನನೂ ಆದನು.

ಆತನ ಹೃದಯವನ್ನು ಪ್ರವೇಶಿಸಿದ ಭಗವತ್ ಚೈತನ್ಯರ ಪ್ರೇಮ ಪ್ರವಾಹದ ರಭಸವನ್ನು ತಡೆದುಕೊಳ್ಳಲಾಗದೆ, ಆತ ಹುಚ್ಚನಂತೆ ಗಂಗಾ ತೀರದಲ್ಲಿ ಅಲೆಯುತ್ತ, ಯಾರಿಗಾದರೂ ಉಪಕಾರ ಮಾಡಬೇಕೆಂದು ಕಾಯುತ್ತಿದ್ದನು. ಆತ ಅಸ್ಪೃಶ್ಯರ ಬಟ್ಟೆಗಳನ್ನು ಒಗೆದುಕೊಟ್ಟನು.

ಇದನ್ನು ನೋಡಿ ಕೆಲವರು ಆಡಿಕೊಂಡದ್ದುಂಟು. ಆದರೆ ಆತ ಅದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಮರವು ತನ್ನ ರೆಂಬೆ ಕೊಂಬೆಗಳನ್ನು ಕಡಿದು ಹಾಕುವ ಶತ್ರುವಿಗೂ ನೆರಳು ಕೊಡುವಂತೆ, ಮಳೆ, ಗಾಳಿ, ಬಿಸಿಲುಗಳಿಗೆ ಒಗ್ಗಿಕೊಂಡೂ ಫಲಪುಷ್ಪಗಳನ್ನು ಕೊಡುವಂತೆ, ಪರೋಪಕಾರಿಯಾಗಿದ್ದನು.

ವಿಶ್ವಂಭರನಿಗೆ ಮುಂಚೆಯೇ ವೈಷ್ಣವ ಭಕ್ತಿಪಂಥವನ್ನು ಸ್ವೀಕರಿಸಿದ ಅದ್ವೈತ ಪ್ರಭು, ಶ್ರೀವಾಸಾದಿಗಳು ನ್ಯಾಯತರ್ಕ ಪಂಡಿತನಾದ ವಿಶ್ವಂಭರನಲ್ಲಿ ಆದ ಬದಲಾವಣೆಯನ್ನು ಗಮನಿಸಿದರು. ಶ್ರೀವಾಸ ಪಂಡಿತರ ಮನೆಯ ಆವರಣದಲ್ಲಿ ಒಂದು ರಾತ್ರಿ ಸಂಕೀರ್ತನ ಶಾಲೆಯನ್ನು ತೆರೆದು, ಅಲ್ಲಿ ಕೀರ್ತನೆ, ಸಂಕೀರ್ತನೆಗಳನ್ನು ಮಾಡಿ ಆನಂದದಿಂದ ನರ್ತಿಸುತ್ತಿದ್ದನು.

ವೈಷ್ಣವ ಬೋಧಕ ಶ್ರೀ ನಿತ್ಯಾನಂದ ಪ್ರಭು ಅವನ ಜೊತೆ ಸೇರಿಕೊಂಡರು. ಆಗ ನಾಡಿಯಾ, ವೈಷ್ಣವ ಆಚಾರ್ಯ ಕೇಂದ್ರವಾಗಿತ್ತು. ವಿಶ್ವಂಭರನು ಪ್ರಭು ನಿತ್ಯಾನಂದ ಹಾಗೂ ಹರಿದಾಸರಿಗೆ ಹೀಗೆ ಹೇಳಿದನು; “ಮಿತ್ರರೇ ನಗರದ ಮನೆ ಮನೆಗೂ ಹೋಗಿ, ಅವರಿಗೆ ಹರಿನಾಮ ಸಂಕೀರ್ತನೆಯನ್ನು ಮಾಡಲು ಹೇಳಿ. ಪ್ರತಿ ಸಾಯಂಕಾಲ ಬಂದು ಅದರ ಪರಿಣಾಮ ಏನಾಯಿತು ಎಂದು ನನಗೆ ಹೇಳಿ.”

ಭಗವಂತನ ಗುಣಾತಿಶಯಗಳ ಕೀರ್ತನೆಗಳು ಅವನ ಮಧುರಕಂಠದಿಂದ ಪ್ರಯತ್ನವಿಲ್ಲದೆಯೇ ಪುಂಖಾನುಪುಂಖವಾಗಿ ಹೊರಡುತ್ತಿದ್ದವು. ಹರಿನಾಮ ಸಂಕೀರ್ತನೆ ಗೈಯುತ್ತ ಭಕ್ತ್ಯಾವೇಶದಿಂದ ಆನಂದ ಪರವಶನಾಗಿ ಕುಣಿಯುತ್ತಿದ್ದುದು ಎಂಥಾ ಕಠಿಣ ಹೃದಯಗಳನ್ನು ಕರಗಿಸಿ ಪ್ರೇಮಾರರ್ದ್ರರನ್ನಾಗಿ ಮಾಡುತ್ತಿತ್ತು.

ಅವನ ನಿತ್ಯ ಸಂಕೀರ್ತನೆಗಳಲ್ಲಿ ಜಾತಿಮತಭೇದವಿಲ್ಲದೆ, ಪಂಡಿತ ಪಾಮರರೆನ್ನದೆ, ದೊಡ್ಡವನು ಚಿಕ್ಕವರೆನ್ನದೆ, ಎಲ್ಲರೂ ಸೇರುತ್ತಿದ್ದರು. ಸಹಸ್ರಾರು ಜನ ನಾಸ್ತಿಕರು ಆಸ್ತಿಕರಾಗಿ ವಿಶ್ವಂಭರನ ಭಕ್ತಿಪಂಥಕ್ಕೆ ಸೇರಿದರು. ಅವನನ್ನ ಎಲ್ಲರೂ ‘ಮಹಾಪ್ರಭು’ ಎಂದು ಕರೆದರು.

ಇದನ್ನು ಅನೇಕರು ಸಹಿಸಲಾರದೆ ಹೋದರು. ವರ್ಣಾಶ್ರಮದ ಕಟ್ಟು ಪಾಡುಗಳನ್ನು ಪವಿತ್ರ ಮಂತ್ರದ ಗೌಪ್ಯತೆ ಗಾಂಭೀರ್ಯಗಳನ್ನು ಈತ ಬೀದಿಪಾಲು ಮಾಡುತ್ತಿದ್ದಾನೆಂದೂ, ಪಾತ್ರರು ಅಪಾತ್ರರೆನ್ನದೆ ಎಲ್ಲರಿಗೂ ಹಂಚುತ್ತಿದ್ದಾನೆಂದು ಆತನನ್ನು ದೂಷಿಸತೊಡಗಿದರು.

ಪವಿತ್ರ ಗಂಗಾಸ್ನಾನ ಮಾಡಿ, ಅರಿಷಿಣ ಬಟ್ಟೆ ತೊಟ್ಟು ನಾಮಗಳನ್ನು ಧರಿಸಿ ತುಳಸೀಹಾರ ಹಾಕಿಕೊಂಡು ತಾಳ ಹಾಕುತ್ತಾ ಶ್ರೀ ಕೃಷ್ಣನ ಮಹಿಮಾತಿಶಯಗಳನ್ನು ಹಾಡುತ್ತಾ ಕೃಷ್ಣನ ದಿವ್ಯ ರೂಪವನ್ನು ಅಂತರಂಗದಲ್ಲಿ ದರ್ಶಿಸುತ್ತಾ ಆನಂದಬಾಷ್ಪ ಸುರಿಸುತ್ತಾ, ಮೈಮೇಲೆ ಪರಿವೆಯೇ ಇಲ್ಲದೆ ನವದ್ವೀಪದ ಹಾದಿಬೀದಿಗಳಲ್ಲಿ ಅಂಗಡಿ ಮುಂಗಟ್ಟುಗಳ ಮುಂದೆ ಸಾಗುತ್ತಿದ್ದ ವಿಶ್ವಂಭರನ ಸಂಕೀರ್ತನೆಯನ್ನು ನೋಡಿದವರು, ಇದು ಜನರನ್ನು ಮರಳು ಮಾಡುವ ತಂತ್ರ ಎನ್ನುವರು.

ಪಾಂಡಿತ್ಯದ ಆಟ ನಡೆಯದೇ, ಉದರನಿಮಿತ್ತವಾದ ಬಹುಕೃತ ವೇಷ ಎಂದು ಜರಿಯುವರು. ಆದರೆ ವಿಶ್ವಂಭರನು ಮಾತ್ರ ಈ ಯಾವ ಮಾತುಗಳನ್ನು ಲೆಕ್ಕಿಸದೆ ಆತ್ಮಾರಾಮನಾಗಿದ್ದುಬಿಟ್ಟನು. ಇವನ ಸಂಕೀರ್ತನೆಗಳಿಗೆ ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು.

‘ಹರಿಬೋಲ್’ ‘ಹರಿಬೋಲ್’ ಎಂಬ ಧ್ವನಿಯು ಬೀದಿ ಬೀದಿಯಲ್ಲಿ ಮೊಳಗಿ ಈತನ ಜನಪ್ರಿಯತೆ ಹೆಚ್ಚಿದ್ದು ಇವನ ದ್ವೇಷಿಗಳಿಗೆ ಸಹಿಸಲಾಗಲಿಲ್ಲ. ಅಪಹಾಸ್ಯ, ಹೆದರಿಕೆ, ಬೆದರಿಕೆಗಳಿಗೆ ಜಗ್ಗದ ಅವನ ವಿರುದ್ಧ ರಾಜನಿಗೆ ದೂರು ನೀಡಿದರು. ನವದ್ವೀಪದ ಖಾಜಿ – ಅಂದರೆ ನ್ಯಾಯಾಧೀಶರ ಬಳಿ ದೂರು ಹೋದಾಗ, ಆತ ಹಾದಿ ಬೀದಿಗಳಲ್ಲಿ ಮಾಡುವ ಸಂಕೀರ್ತನೆಯಿಂದ ನಾಗರಿಕರಿಗೆ ತೊಂದರೆಯಾದರೆ ದಂಡನೆಗೆ ಗುರಿಯಾಗಬೇಕಾಗುತ್ತದೆ ಎಂದು ಆದೇಶಿಸಿದನು.

ಮತ್ತು ಚಾಂದ್‌ ಖಾಜಿಯು ಶ್ರೀವಾಸ ಪಂಡಿತನ ಮನೆಗೆ ಬಂದು ಆತನ ಮೃದಂಗವನ್ನು ಒಡೆದು ಹಾಕಿದನು. ನಿಮಾಯ್ ಸಂಕೀರ್ತನೆಯನ್ನು ನಿಲ್ಲಿಸದಿದ್ದರೆ, ಅವನನ್ನು ಅವನ ಕಡೆಯವರನ್ನೂ ಮುಸಲ್ಮಾನರನ್ನಾಗಿ ಪರಿವರ್ತಿಸುವುದಾಗಿ ಬೆದರಿಕೆ ಹಾಕಿದನು.

ಇದನ್ನು ಕೇಳಿ ಕೆಂಡಾಮಂಡಲವಾದ ವಿಶ್ವಂಭರ, ಹದಿನಾಲ್ಕು ಸಂಕೀರ್ತನ ತಂಡಗಳನ್ನು ಕಟ್ಟಿಕೊಂಡು ಕೈಯಲ್ಲಿ ಪಂಜುಗಳನ್ನು ಹಿಡಿದುಕೊಂಡು, ಎಲ್ಲರೂ ಖಾಜಿಯ ಮನೆಯ ಬಳಿಗೆ ಹೋಗಿ ಅವನ ಎದುರಿಗೇ ಉಚ್ಚ ಕಂಠದಿಂದ ಹರಿನಾಮ ಸಂಕೀರ್ತನೆ ಮಾಡಿದರು. ಅನಂತರ ಚೈತನ್ಯನು ಅವನ ಜೊತೆ ಸಂಭಾಷಿಸಿ, ಅವನನ್ನು ಒಮ್ಮೆ ಮುಟ್ಟಿದನು. ಆಗ ಖಾಜಿಯ ಮೈ ಮನಗಳಲ್ಲಿ ವಿದ್ಯುತ್‌ ಸಂಚಾರ ಉಂಟಾಯಿತು.

ಆಗ ಖಾಜಿಯೂ ಸಂಕೀರ್ತನ ತಂಡದೊಡನೆ ಸಂಕೀರ್ತನೆ ಮಾಡಿ, ಹಿಂದೆ ನೀಡಿದ ಆಜ್ಞೆಯನ್ನು ಹಿಂದಕ್ಕೆ ಪಡೆದನು. ನಿಮಗೆ ಮನಬಂದಂತೆ ಸಂಕೀರ್ತನೆ ಮಾಡಿಕೊಳ್ಳಿ ಎಂದನು. ಈ ಖಾಜಿಯ ಗೋರಿ ಇಂದಿಗೂ ಇದೆ. ಅದಕ್ಕೆ ಗೌರವ ಸಲ್ಲಿಸಲು ಯಾತ್ರಿಕರು ಈಗಲೂ ಅಲ್ಲಿಗೆ ಹೋಗುತ್ತಾರೆ.

ಆಗ ವಿಶ್ವಂಭರನ ಶತ್ರುಗಳು ಆ ಊರಿನ ಪುಂಡರಾದ ಜಗಾಯ್‌ ಮಾಧಾಯ್‌ ಎಂಬುವರನ್ನು ಪ್ರೇರೇಪಣೆ ಮಾಡಿ ನಿತ್ಯಾನಂದ, ವಿಶ್ವಂಭರನಿಗೆ ಕಲ್ಲು ಹೊಡೆಸಿದರು.

ಆದರೆ ಆ ಪಾತಕಿಗಳನ್ನು ಅವರು ಅಪ್ಪಿಕೊಂಡು, ಆಲಂಗಿಸಿಕೊಂಡು, ಆ ಪಾತಕಿಗಳ ಕಲ್ಲು ಹೃದಯವೂ ಕರಗುವಂತೆ ಮಾಡಿದರು. ಅವರು ವಿಶ್ವಂಭರ ಮತ್ತು ನಿತ್ಯಾನಂದರ ಕಾಲಿಗೆರಗಿ, ತಮ್ಮ ಅಪರಾಧವನ್ನು ಮನ್ನಿಸಬೇಕೆಂದು ಬೇಡಿಕೊಂಡು ಮುಂದೆ ಜೀವಮಾನ ಪರ್ಯಂತ ವಿಶ್ವಂಭರನ ಅನುಯಾಯಿಗಳಾದರು.

ಅನಂತರ ವಿಶ್ವಂಭರನ್ನು, ತನಗೆ ಕೃಷ್ಣನೇ ಸರ್ವಸ್ವವಾಗಿರುವಾಗ, ಮನೆಮಠ, ಆಸ್ತಿಪಾಸ್ತಿಗಳನ್ನು ಕಟ್ಟಿಕೊಂಡು ಏನೂ ಉಪಯೋಗವಿಲ್ಲ ಪರಮಭಾಗವತರಾದವರಿಗೆ ಇವೆಲ್ಲವೂ ಪ್ರತಿಬಂಧಕಗಳು ಎನಿಸಿ, ಎಲ್ಲವನ್ನೂ ತ್ಯಜಿಸಿ ಬಿಟ್ಟರು. ಕೇವಲ ಉಪದೇಶದಿಂದ ಪ್ರಯೋಜನವಿಲ್ಲ ಆಚರಣೆ ಮುಖ್ಯ ಎಂದು ನಿರ್ಧರಿಸಿ, ಶ್ರೀ ಕೇಶವ ಭಾರತಿ ಯತಿಗಳನ್ನು ಆಶ್ರಯಿಸಿ ಸಂನ್ಯಾಸ ಸ್ವೀಕರಿಸಿದನು.

ಕೌಪೀನ ಧರಿಸಿ, ಶಿರಮುಂಡನ ಮಾಡಿಕೊಂಡು, ದಂಡ ಕಮಂಡಲಗಳನ್ನು ಹಿಡಿದುಕೊಂಡು ತಾಯಿಯ ಪಾದಗಳಿಗೆರಗಿದನು. “ಅಮ್ಮಾ, ಈ ಶರೀರ ನಿನ್ನದಾದುದರಿಂದ ನಿನ್ನಾಜ್ಞೆಯನ್ನು ಶಿರಸಾ ಪಾಲಿಸಬೇಕು. ಆಧ್ಯಾತ್ಮ ಸಾಧನೆ ಮಾಡಲು ನನಗೆ ವೃಂದಾವನಕ್ಕೆ ಹೋಗಲು ಅನುಮತಿ ನೀಡು” ಎಂದು ಕೋರಿದನು.

ಎಂಟು ಮಕ್ಕಳನ್ನು ವಿಧಿವಶಮಾಡಿ, ಕೈಗೆ ಬಂದ ಒಂಬತ್ತನೆಯವನು ದೇಶಾಂತರ ಹೋಗಿ, ಹತ್ತನೆಯವನು ಹೀಗೆ ಸಂನ್ಯಾಸ ಸ್ವೀಕರಿಸಿದಾಗ ಆಕೆಯ ಹೃದಯ ಒಡೆದಂತಾಯಿತು. ಪತ್ನಿಯೂ ಬಿಕ್ಕಿ ಬಿಕ್ಕಿ ಅತ್ತಳು. ಆಕೆ, ಸಂನ್ಯಾಸ ನೀಡಿದ ಕೇಶವ ಭಾರತಿಯವರನ್ನು ಕೊಂದು ಬಿಡುವುದಾಗಿ ಹೇಳಿದಳು. ಆಗ ವಿಶ್ವಂಭರ, “ಅಮ್ಮಾ ನೀನು ಅನುಮತಿ ನೀಡದಿದ್ದರೆ ನಾನು ಮನೆ ಬಿಟ್ಟುಹೋಗುವುದಿಲ್ಲ.

ಆದರೆ, ನಾನು ಗೃಹಸ್ಥ ಜೀವನವನ್ನೇ ನಡೆಸಬೇಕೆಂದು ಒತ್ತಾಯಿಸಿದರೆ, ಪ್ರಾಣ ಕಳೆದುಕೊಳ್ಳುತ್ತೇನೆ’ ಎಂದು ಹೇಳಿದರು.

ತಾಯಿಯು ಅದ್ವೈತ ಆಚಾರ್ಯ ಹಾಗೂ ಇತರರೊಡನೆ ಮಾತನಾಡಿ, ಜಗನ್ನಾಥಪುರಿಗೆ ಹೋಗಿ ವಿಶ್ವಂಭರನು ನೆಲೆಸಬೇಕೆಂದು ಹೇಳಿದಳು. ಅದಕ್ಕೊಪ್ಪಿ ಆತ ಒರಿಸ್ಸಾಗೆ ತೆರಳಿದರು. ಶ್ರೀ ಕೇಶವಭಾರತಿ ಸ್ವಾಮಿಗಳು ಅವರಿಗೆ ಶ್ರೀಕೃಷ್ಣ ಚೈತನ್ಯ ಎಂದು ನಾಮಕರಣ ಮಾಡಿದರು. ಹೀಗೆ ಅವರು ಪ್ರಾಪಂಚಿಕ ಬಂಧನಗಳಿಂದ ಮುಕ್ತರಾದರು. ತ್ಯಾಗವೇ ಮಾನವನನ್ನು ನಿಜವಾದ ಮಾನವರನ್ನಾಗಿಸುವುದು, ಅಮರನಾಗಿಸುವುದು. ತ್ಯಾಗವಿಲ್ಲದವನು ದಾನವನಾಗುವನು.

ಶ್ರೀ ಕೃಷ್ಣನ ಚರಣಕಮಲವನ್ನು ನೆನೆದು ಕಣ್ಣು ಮುಚ್ಚಿದರೆ ಅವರಿಗೆ ಬಾಹ್ಯ ಪ್ರಪಂಚದ ಸ್ಮರಣೆಯೇ ಇರುತ್ತಿರಲಿಲ್ಲ. ನೀಲಾಕಾಶ, ಯಮುನಾನದಿ, ಕಪ್ಪುಮೋಡ, ಇವೆಲ್ಲವನ್ನು ನೋಡಿದಾಗ ಅವರಿಗೆ ಕೃಷ್ಣ ಸ್ಮರಣೆ ಉಂಟಾಗಿ ದೇಹದ ಅರಿವೇ ಇರುತ್ತಿರಲಿಲ್ಲ. ಶ್ರೀ ಕೃಷ್ಣ, ದ್ವಾರಕಾಧೀಶ, ದಾಮೋದರ ಎಂಬ ಹೆಸರುಗಳನ್ನು ಕೇಳಿದೊಡನೆ ಅವರಲ್ಲಿ ಭಾವಾವೇಶ ಉಂಟಾಗಿ ಭಗವದ್ ಸಾನ್ನಿಧ್ಯಕ್ಕೆ ಹೋಗಿಬಿಡುತ್ತಿದ್ದರು. ಎಷ್ಟೋ ದಿನಗಳ ಕಾಲ ಅವರಿಗೆ ಬಾಹ್ಯ ಪ್ರಪಂಚದ ಪರಿವೆಯೇ ಇರುತ್ತಿರಲಿಲ್ಲ.

ಚೈತನ್ಯರು ಮೊದಲು ಕುಮಾರ ಪರ್ವತಕ್ಕೆ ಹೋಗಿ, ಪವಾಡ ಸದೃಶವಾಗಿ ವಾಸುದೇವನೆಂಬ ಕುಷ್ಠರೋಗಿಯ ಮೇಲೆ ತಮ್ಮ ಕೃಪಾಕಟಾಕ್ಷ ಬೀರಿ, ಆತನನ್ನು ಕೈಯಿಂದ ಮುಟ್ಟಿ ಆತನ ಕುಷ್ಠ ರೋಗವನ್ನು ವಾಸಿ ಮಾಡಿದರು. ಚೈತನ್ಯರು ಗೊಂಡಾರಣ್ಯದ ಮೂಲಕ ಜಗನ್ನಾಥ ಪುರಿಗೆ ಹೋಗುವಾಗ ಹರಿನಾಮ ಸಂಕೀರ್ತನೆ ಮಾಡಿ ಆನೆ, ಹುಲಿಗಳೂ ಆನಂದದಿಂದ ಕುಣಿಯುವಂತೆ ಮಾಡಿದರೆಂದು ಬಲಭದ್ರರು ಹೇಳುತ್ತಾರೆ.

ಚೈತನ್ಯರು ರೂಪ ಮತ್ತು ಸನಾತನ ಗೋಸ್ವಾಮಿಗಳಿಗೆ ನೀಡಿದ ಉಪದೇಶವನ್ನು ಕೃಷ್ಣದಾಸ ಕವಿರಾಜ ಗೋಸ್ವಾಮಿಯವರು ‘ಚೈತನ್ಯ ಚರಿತಾಮೃತ’ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ. ಶ್ರೀ ಚೈತನ್ಯರ ಬಗ್ಗೆ ಪ್ರಮಾಣಬದ್ಧವಾದ ಒಂದು ಜೀವನ ಚರಿತ್ರೆಯೆಂದರೆ ಇದೆಯೇ.

ಭಗವಂತನ ಪ್ರಾರ್ಥನಾ ವಿಧಿಗಳು ವೇದಾಂತ ವಿಷಯಗಳು, ಮೋಕ್ಷಪ್ರಾಪ್ತಿಯ ಸಾಧನಗಳು, ಐತಿಹಾಸಿಕ-ಭೌಗೋಳಿಕ ವಿಷಯಗಳೂ ಇಲ್ಲಿವೆ. ಮನಸ್ಸನ್ನು ಸೂರೆಗೊಳ್ಳುವ ಅನೇಕ ಸಂತರ ಕಥೆಗಳೂ ಇಲ್ಲಿವೆ.

ಮುಮುಕ್ಷಗಳಿಗೆ, ಲೌಕಿಕ ಜ್ಞಾನಾಪೇಕ್ಷಿಗಳಿಗೆ, ಕೇವಲ ಕಥನ ಕುತೂಹಲಿಗಳಿಗೆ ಕೂಡಾ ಇಲ್ಲಿ ಸಾಕಷ್ಟು ಮಾಹಿತಿ ಇದೆ. ಮನುಷ್ಯನ ಜ್ಞಾನಪಿಪಾಸೆಯನ್ನು ತೀರಿಸುವಷ್ಟು ಬಹುಮುಖೀ ಜ್ಞಾನ ಸಂಪತ್ತು ಇದರಲ್ಲಿದೆ. ಇದನ್ನು ಓದಿ ಬಾಳನ್ನು ಹಸನು ಮಾಡಿಕೊಳ್ಳಬಹುದು.

ಚೈತನ್ವರು ಸಂನ್ಯಾಸ ಸ್ವೀಕಾರಾನಂತರ ನಾಮ ಸಂಕೀರ್ತನೆಯ ಪ್ರಚಾರ ಮಾಡಿದರು. ಕೃಷ್ಣಭಕ್ತಿಯನ್ನು ಜನಗಳ ಹೃದಯದಲ್ಲಿ ತುಂಬಿ, ಜನರ ಮನಸ್ಸು ಕೃಷ್ಣಪ್ರಜ್ಞೆಯಲ್ಲಿ ಲೀನವಾಗುವಂತೆ ಮಾಡಿದ ಮಹಾಪುರುಷರು ಅವರು.

ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಮನ್ಮನಾ ಭವ ಮದ್ಭಕ್ತೋ ಮದ್ಯಾಜಿ ಮಾಮ್‌ ನಮಸ್ಕುರು – ಎಂಬಲ್ಲಿ ಪ್ರಪತ್ತಿ ಮಾರ್ಗವನ್ನು ಬೋಧಿಸಿದ್ದಾನೆ. ಅದೊಂದೇ ಅಲ್ಲ ಬೇರೆ ಶ್ಲೋಕಗಳಲ್ಲೂ ಈ ಬೋಧನೆ ಇದೆ.

‘ಪ್ರಪತ್ತಿ ಮಾರ್ಗ, ಭಕ್ತಿ ಮಾರ್ಗಕ್ಕಿಂತ ಸುಲಭ. ಭಕ್ತಿಮಾರ್ಗಕ್ಕಾದರೂ ಸ್ವಲ್ಪ ಕಷ್ಟ ಪಡಬೇಕಾಗುತ್ತದೆ. ಪ್ರಪತ್ತಿ ಮಾರ್ಗಕ್ಕೆ ಅದೂ ಬೇಕಿಲ್ಲ.” ಹೀಗೆ ಮಾಡುವ ಶರಣಾಗತಿಯಲ್ಲಿ ಆರು ನಿಯಮಗಳಿಗೆ ಗಮನ ಕೊಡಬೇಕೆಂದು ಚೈತನ್ಯರನ್ನುದ್ಧರಿಸಿ ಪ್ರಭುಪಾದರು ಹೇಳುತ್ತಾರೆ.

1. ಭಕ್ತಿಸೇವೆಯ ಆಚರಣೆಯಲ್ಲಿ ಬರುವುದೆಲ್ಲವನ್ನು ಒಪ್ಪಿಕೊಳ್ಳುವುದು.

2. ಪ್ರತಿಕೂಲವಾದುದನ್ನು ತ್ಯಜಿಸುವುದು.

3. ಭಗವಂತನು ರಕ್ಷಿಸುವನೆಂಬ ದೃಢ ನಂಬಿಕೆ.

4. ಪ್ರಭುವಿನ ಕರುಣೆಯೊಂದರ ಮೇಲೆಯೇ ಶುದ್ಧಾಂಗ ನಂಬಿಕೆ.

5. ಭಗವಂತನ ಸಂತೋಷದ ಹೊರತು ಉಳಿದೆಲ್ಲದರ ಮೇಲೆ ನಿರಾಸಕ್ತಿ.

6. ಸದಾ ಕಾಲವೂ ವಿನಯ ಹಾಗೂ ನಮ್ರತಾ ಭಾವ ಮೆರೆಯುವುದು.

ಕೃಷ್ಣಪ್ರಜ್ಞೆಯಿಂದ ನಡೆಸುವ ಇಂತಹ ಚಟುವಟಿಕೆಗಳಿಂದ ಮಾನವನು ಪರಿಪೂರ್ಣವಾಗುತ್ತಾನೆ. ಭಗವಂತನ ಪವಿತ್ರ ನಾಮವೇ ಭಗವಂತನ ‘ಧ್ವನಿ’ಯ ಅವತಾರ. ಅವನ ದಿವ್ಯನಾಮಕ್ಕೂ ದಿವ್ಯ ರೂಪಕ್ಕೂ ಏನು ವ್ಯತ್ಯಾಸವಿಲ್ಲವೆಂದು ಅವರು ಬೋಧಿಸಿದರು.

ಹೀಗೆ ಪವಿತ್ರ ನಾಮೋಚ್ಚಾರಣೆಯ ಬಗ್ಗೆ ಬೋಧಿಸುತ್ತಾ ‘ನಾರದೀಯ ಪುರಾಣ’ ದ ಶ್ಲೋಕವನ್ನು ಬೋಧಿಸುತ್ತಾರೆ;

ಹರೇರ್ನಾಮ ಹರೇರ್ನಾಮ ಹರೇರ್ನಾಮೈವ ಕೇವಲಮ್ |

ಕಲೌ ನಾಸ್ಯ್ತೈವ ನಾಸ್ಯ್ತೈವ ನಾಸ್ಯ್ತೈವ ಗತಿರನ್ಯಥಾ ||

ಈ ಕಲಿಗಾಲದಲ್ಲಿ ಮೋಕ್ಷಸಾಧನೆಯ ಏಕೈಕ ಮಾರ್ಗವೆಂದರೆ ಹರಿನಾಮ ಸ್ಮರಣೆ. ಬೇರಾವ ಸಾಧನವೂ ಇಲ್ಲ, ಇಲ್ಲ, ಇಲ್ಲ ಇಲ್ಲವೇ ಇಲ್ಲ!” ಶ್ರೀ ಕೃಷ್ಣ ಚೈತನ್ಯರು 1510ರಲ್ಲಿ ಪುರಿಯಿಂದ ಗೋವಿಂದ ದಾಸ್ ಮತ್ತು ಕೃಷ್ಣದಾಸ ಎಂಬ ಇಬ್ಬರು ಬ್ರಾಹ್ಮಣ ಭಕ್ತರೊಡನೆ ದಕ್ಷಿಣದ ಕಡೆಗೆ ತೆರಳಿ ಯಾತ್ರೆ ಹೊರಟರು.

ತಿರುಪತಿ, ಕಾಳಹಸ್ತಿ, ಶ್ರೀರಂಗಂ, ತಂಜಾವೂರು, ಕುಂಭಕೋಣ, ರಾಮೇಶ್ವರ, ಕನ್ಯಾಕುಮಾರಿ, ತಿರುವನಂತಪುರ, ಉಡುಪಿ, ಗೋಕರ್ಣ, ಹಂಪೆ, ಪಂಡರಾಪುರ, ಕೊಲ್ಲಾಪುರ, ಪುಣೆ ಮೊದಲಾದ ಕ್ಷೇತ್ರಗಳಿಗೆ ಭೇಟಿ ನೀಡಿದರು.

ದಾರಿಯುದ್ದಕ್ಕೂ ಅಖಂಡ ಹರಿನಾಮ ಸಂಕೀರ್ತನೆ ನಡೆಯಿತು. ಶ್ರೀ ಚೈತನ್ಯರ ಅನುಪಮ ಭಕ್ತಿಯನ್ನು ನೋಡಿ ಸಹಸ್ರಾರು ಜನ ತಮ್ಮ ತಮ್ಮ ಪಂಥಗಳನ್ನು ತೊರೆದು ವೈಷ್ಣವರಾಗಿ ಅವರ ಶಿಷ್ಯರಾದರು.

ಅನೇಕ ಬೌದ್ಧ ಪಂಡಿತರೂ, ಅದ್ವೈತಿಗಳೂ, ನಾಸ್ತಿಕರೂ, ಶಕ್ತಿಪೂಜಕರೂ ಕಳ್ಳ-ಕಾಕರೂ ಭಕ್ತಿ ಪಂಥಕ್ಕೆ ಸೇರಿಕೊಂಡರು. ಪರಿಶುದ್ಧ ಜೀವನ ಮಾರ್ಗದಿಂದ ದೂರ ಸರಿದ ತಮ್ಮ ಶಿಷ್ಯರನ್ನು ದಂಡಿಸಿದರು.

ಹೀಗೆ ಎರಡು ವರ್ಷಗಳ ದಕ್ಷಿಣ ದೇಶದ ತೀರ್ಥಯಾತ್ರೆ ಮುಗಿಸಿ ಪುರಿಗೆ ಹಿಂತಿರುಗಿದರು. 1516ರಲ್ಲಿ ವೃಂದಾವನ ಯಾತ್ರೆಗೆ ಹೊರಡಬೇಕೆ೦ದು ನಿಶ್ಚಯಿಸಿದಾಗ, ಅವರ ಭಕ್ತಾಗ್ರಣಿಗಳೊಬ್ಬನಾದ ಒರಿಸ್ಸಾದ ರಾಜ ಪ್ರತಾಪ ರುದ್ರದೇವನು ಅವರ ಪ್ರಯಾಣಕ್ಕೆ ಬೇಕಾದ ಸಕಲ ಸಲಕರಣೆಗಳನ್ನು ವಾಹನಗಳನ್ನು ಸಿದ್ಧಗೊಳಿಸಿದನು.

ಆದರೆ ಚೈತನ್ಯರು, ಕೃಷ್ಣನ ದಾಸನಾದ ನಾನು ರಾಜರಂತೆ ವೈಭವದಿಂದ ವಾಹನವೇರಿ ಹೋಗುವುದು ಸರಿಯಲ್ಲ ಎಂದು ಭಾವಿಸಿ, ರಾತ್ರಿ ಛೋಟಾ ನಾಗಪುರದ ಕಾಡಿನ ಮಧ್ಯದಲ್ಲಿ ಪಯಣಿಸಿ ಕಾಶಿ ಸೇರಿದರು.

ಶ್ರೀ ಕೃಷ್ಣನ ಲೀಲಾಕ್ಷೇತ್ರಗಳಾಗಿದ್ದ ಮಥುರಾ, ವೃಂದಾವನ, ಗೋಕುಲಗಳಲ್ಲಿ ಸಂಚರಿಸುವಾಗ ಚೈತನ್ಯರ ಮನಸ್ಸಿನಲ್ಲಿ ಏಳುತ್ತಿದ್ದ ಭಾವನಾಲಹರಿಗಳನ್ನು ಮಾತಿನಿಂದ ವರ್ಣಿಸಲು ಸಾಧ್ಯವಿಲ್ಲ. ಶ್ರೀಕೃಷ್ಣನು ಗೋಪಿಯರೊಂದಿಗೆ, ಗೊಲ್ಲಬಾಲಕರೊಂದಿಗೆ ಮಾಡಿದ ಲೀಲಾ ವಿನೋದಗಳನ್ನು ಸ್ಮರಿಸಿಕೊಂಡು ಚೈತನ್ಯರು ಕೆಲವು ವೇಳೆ ನಗುತ್ತಾ, ಕೆಲವು ವೇಳೆ ಅಳುತ್ತಾ, ಕೆಲವು ವೇಳೆ ಕುಣಿಯುತ್ತಾ, ಮತ್ತೊಮ್ಮೆ ನಿಟ್ಟುಸಿರು ಬಿಡುತ್ತಾ, ಆನಂದಪರವಶನಾಗಿ ಗದ್ಗದ ಕಂಠದಿಂದ ಹಾಡುತ್ತಾ ಮೈ ಮರೆಯುತ್ತಿದ್ದರು.

ಹೀಗೆ ಹೊರಗಿನ ಜಗತ್ತಿನ ಅರಿವಿಲ್ಲದೆ ಎಷ್ಟೋ ದಿನಗಳು ಕಳೆಯುತ್ತಿದ್ದವು. ಅಲ್ಲಿ ಸ್ವಾಯಂಭುವ ತೀರ್ಥ, ವಿಕ್ರಮತೀರ್ಥ, ವಿಷ್ಣುತೀರ್ಥ, ಭೂತೇಶ್ವರ ತೀರ್ಥ, ಗೋಕರ್ಣ ತೀರ್ಥವೇ ಮೊದಲಾದ ಪುಣ್ಯ ತೀರ್ಥಗಳಲ್ಲಿ ಮಿಂದು, ಮಧುವನ, ತಾಳವನ ಮುಂತಾದ ಕ್ಷೇತ್ರಗಳನ್ನು ಸಂದರ್ಶಿಸಿದರು.

ಚೈತನ್ಯರು ವೃಂದಾವನದಲ್ಲಿರುವಾಗ ತಮ್ಮ ದರ್ಶನಕ್ಕೆ ನೆರೆಯುತ್ತಿದ್ದ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರಿಗೆ ಕೃಷ್ಣಭಕ್ತಿಯ ಬಗ್ಗೆ ಉಪದೇಶಿಸುತ್ತಿದ್ದರು. ಒಮ್ಮೆ ಹರಿಭಕ್ತಿಯ ಆವೇಶದಲ್ಲಿ ಅವರು ಮೈಮರೆತು ಮಲಗಿದ್ದಾಗ ಶಿಷ್ಯರು ಅವರ ಸುತ್ತ ಕುಳಿತಿದ್ದರು. ಆ ಮಾರ್ಗವಾಗಿ ಬಂದ ಮುಸಲ್ಮಾನ ಸೈನಿಕರು ಇವರು ಕಳ್ಳರೆಂದು ಭಾವಿಸಿ ಎಲ್ಲರನ್ನು ಬಂಧಿಸಿದರು.

ಅಷ್ಟರಲ್ಲಿ ಚೈತನ್ಯರಿಗೆ ಪ್ರಜ್ಞೆತಿಳಿದು, ತಾನೊಬ್ಬ ಸಂನ್ಯಾಸಿ ಎಂದು ಉಳಿದವರೆಲ್ಲ ತನ್ನ ಶಿಷ್ಯರೆಂದು ತಿಳಿಸಿದಾಗ ಆ ಮುಸಲ್ಮಾನರೆಲ್ಲರೂ ಭಕ್ತಿ ಪಂಥವನ್ನು ಸ್ವೀಕರಿಸಿ ಅವರ ಶಿಷ್ಯತ್ವ ಪಡೆದರು. ಹೀಗೆ ಲಕ್ಷಾಂತರ ಜನರು ಅವರ ಉಪದೇಶಾಮೃತ ಪಡೆದು ಪುನೀತರಾದರು. ಅವರ ಶಿಷ್ಯಕೋಟಿಯಲ್ಲಿ ಮಹಾರಾಷ್ಟ್ರದ ಸಂತ ತುಕಾರಾಮರೇ ಮೊದಲಾದವರು, ಮಹಾರಾಜರಿಂದ ಚಾಂಡಾಲರವರೆಗೂ, ಬ್ರಾಹ್ಮಣರಿಂದ ಮುಸಲ್ಮಾನರವರೆಗೂ ಎಲ್ಲ ಜಾತಿಯ ಎಲ್ಲ ಅಂತಸ್ತಿನವರೂ ಇದ್ದರು.

ತಾಳಮೇಳ ಯುಕ್ತವಾದ ಭಜನೆಯ, ಸಂಕೀರ್ತನೆಯ ಆಡಂಬರ ಕಂಡವರು ಮಾತ್ರ ಅವರ ಅನುಯಾಯಿಗಳಾದರೆಂದು ಭಾವಿಸಬಾರದು. ಅವರ ಶಿಷ್ಯವೃಂದದಲ್ಲಿ ಸಾಧು-ಸಂತರೂ, ತರ್ಕ ಪಂಡಿತರೂ, ಬೌದ್ಧರೂ, ಚಾರ್ವಾಕರೂ ಇದ್ದರು.

ಒರಿಸ್ಸಾ ರಾಜನಾದ ಪ್ರತಾಪ ರುದ್ರದೇವನು ಚೈತನ್ಯರ ದರ್ಶನ ಲಾಭಾಕಾಂಕ್ಷಿಯಾಗಿ ತನ್ನ ರಾಜಧಾನಿಗೆ ಬಂದು ದರ್ಶನ ನೀಡಬೇಕೆಂದು ಕೋರಿಕೆ ಕಳಿಸಿದನು. ಆಗ ಚೈತನ್ಯರು, ನಾನು ಸರ್ವಸಂಗ ಪರಿತ್ಯಾಗಿಯಾದ ಸಂನ್ಯಾಸಿ, ರಾಜಸ್ನೇಹದಿಂದ ಆತನೊಂದಿಗಿನ ಸಲುಗೆಯೂ, ಸಕಲ ದುಷ್ಟ ಸಂಪತ್ತುಗಳೂ ಬರುತ್ತವೆ. ಆದ್ದರಿಂದ ಲೌಕಿಕವಾದ ನೇರ ಸಂಪತ್ತುಗಳಿಂದ, ಪದವಿಗಳಿಂದ ದೂರವಿರಲು ಇಷ್ಟಪಡುತ್ತೇನೆ ಎಂದರು.

ಆದರೆ ಅವರ ದರ್ಶನಲಾಭಕ್ಕಾಗಿ ಪ್ರತಾಪರುದ್ರ ಕಾಯುತ್ತಲೇ ಇದ್ದನು. ಜಗನ್ನಾಥನ ರಥಯಾತ್ರೆಗೆ ಚೈತನ್ಯರು ಸಂಕೀರ್ತನ ತಂಡದೊಂದಿಗೆ ಬಂದು ತಾಳೆ ಹಾಕಿ ನರ್ತನ ಮಾಡುತ್ತಾ ಇರುತ್ತಿದ್ದರು.

ಗೌರಾಂಗನ ಸೇವೆಯನ್ನು ನೋಡಿದ ರಾಜನು ಅರಮನೆಯ ಉಪ್ಪರಿಗೆಯಿಂದ ಕೆಳಗಿಳಿದು ಬಂದು ದಂಡವತ್ ಪ್ರಣಾಮ ಮಾಡಿ, “ನನ್ನ ಜನ್ಮ ಸಾರ್ಥಕವಾಯಿತು.” ನನ್ನ ಸಮಸ್ತ ಸಂಪದವನ್ನು ನಿಮ್ಮ ಪದತಲದಲ್ಲಿಡುವೆ. ನನ್ನನ್ನು ತಮ್ಮ ಕನಿಷ್ಠ ಭಕ್ತನಾಗಿಯಾದರೂ ಪರಿಗಣಿಸಿ’ ಎಂದು ಬೇಡಿದನು.

ಚೈತನ್ಯರು  ದಕ್ಷಿಣ ಭಾರತ ತೀರ್ಥಯಾತ್ರೆಯ ಅನಂತರ ಮೂವತ್ತೊಂದರಿಂದ ನಲವತ್ತೆಂಟನೇ ವಯಸ್ಸಿನವರೆಗೆ, 12 ವರ್ಷಗಳ ಕಾಲ ಜಗನ್ನಾಥ ಪುರಿಯಲ್ಲಿ ಕಾಶೀಮಿಶ್ರನ ಮನೆಯಲ್ಲಿ ವಾಸಿಸುತ್ತಾ ಕೃಷ್ಣ ಸೇವೆಯಲ್ಲಿ ನಿರತರಾಗಿದ್ದರು.

ಭಕ್ತರು – ಅನುಯಾಯಿಗಳಿಗೆ ಅವರೇ ಕೃಷ್ಣನ ಅವತಾರ, ಅಪರಾವತಾರವಾಗಿದ್ದರು. ಅವರು ಷೋಡಶೋಪಚಾರ ಮಾಡಿ, ಚೈತನ್ಯರನ್ನು ಪುರುಷೋತ್ತಮನೆಂದು ಸ್ತುತಿಸಿದರು, ವಿರಾಗಿಗಳೂ ಭಕ್ತರೂ ಆಗಿದ್ದ ಚೈತನ್ಯರು, ಮೋಸಹೋಗಬೇಡಿ, ನಾನೂ ಮನುಷ್ಯನೇ, ಸಂನ್ಯಾಸ ಸ್ವೀಕರಿಸಿದ ಒಬ್ಬ ಬೈರಾಗಿ ಎಂದು ಹೇಳಿದರು.

ಚೈತನ್ಯರು ಭಗವಂತನ ಅವತಾರವೆಂದೇ ಶ್ರೀ ರಾಮಕೃಷ್ಣರು ಹೇಳುತ್ತಾರೆ. ಕೃಷ್ಣ ಹರಿನಾಮ ಸಂಕೀರ್ತನವು ಹಲವಾರು ವರ್ಷಗಳಿಂದ ಹೃದಯದಲ್ಲಿ ಕಟ್ಟಿಕೊಂಡ ಕಲ್ಮಷವನ್ನೆಲ್ಲ ತೊಡೆದುಹಾಕುತ್ತದೆ. ಜನನ ಮರಣಗಳ ಸಂಕೋಲೆಯಿಂದ ಬಿಡಿಸುತ್ತದೆ. ಅದೇ ಎಲ್ಲ ದಿವ್ಯಜ್ಞಾನದ ಜೀವಾಳ.

ನಿನ್ನ ಪವಿತ್ರ ನಾಮಗಳು ಲಕ್ಷಾಂತರ, ಆ ದಿವ್ಯ ನಾಮಗಳಲ್ಲಿ ದಿವ್ಯ ಶಕ್ತಿಯನ್ನು ತುಂಬಿರುವೆ. ನಾಮಜಪಕ್ಕೆ, ಸಂಕೀರ್ತನೆಗೆ ರೀತಿರಿವಾಜುಗಳಿಲ್ಲ. ನಿನ್ನ ಪವಿತ್ರನಾಮದ ಮೂಲಕ ನಿನ್ನನ್ನು ಸೇರಲು ದಾರಿಮಾಡಿಕೊಟ್ಟಿದ್ದೀಯೆ ಎಂಬುದು ‘ಶಿಕ್ಷಾಷ್ಟಕ’ದ ಸಾರಾಂಶ.

ಚೈತನ್ಯರ ಸುತ್ತ ಕಲ್ಪನೆಗಳು, ಉತ್ಪ್ರೇಕ್ಷೆಗಳು ಬೆಳೆದು, ನಾವಿಂದು ನಂಬಲಸಾಧ್ಯವಾದ ಅತಿಮಾನುಷ ವ್ಯಕ್ತಿಯನ್ನಾಗಿ ಮಾಡಿರುವೆವೆಂದು ತೋರುತ್ತದೆ. ಹೀಗೆ ಆರೋಪ ಮಾಡಿದನ್ನೆಲ್ಲ ತೆಗೆದರೂ ಕೂಡ, ಇನ್ನು ತೆಗೆಯಲು ಸಾಧ್ಯವಿಲ್ಲವೆನ್ನುವ ವ್ಯಕ್ತಿತ್ವ ಎದ್ದು ನಿಲ್ಲುತ್ತದೆ.

ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿದರೆ ಚೈತನ್ಯರು ಮಹಾಮಹಿಮರಾಗಿ ಕಾಣುತ್ತಾರೆ. ಅವರನ್ನೇ ಆದರ್ಶ ಮೂರ್ತಿಯಾಗಿ ಸ್ವೀಕರಿಸಿ, ಸಾಧುಸಂತರು, ಭಕ್ತರು ಉದ್ಧಾರವಾಗಿದ್ದಾರೆ. ಅವರ ಜೀವನ ಸಂದೇಶಗಳು ಇತರರಿಗೆ ಉದ್ಧಾರಕ ದಾರಿ ತೋರಿವೆ.

ಶ್ರೀ ಕೃಷ್ಣನನ್ನು ಚೈತನ್ಯರನ್ನು ಊರುಗೋಲಾಗಿ ಮಾಡಿಕೊಂಡು ಲಕ್ಷಾಂತರ ಜನ ಸಂಸಾರ ಯಾತ್ರೆಯನ್ನು ಸುಗಮವಾಗಿ ನಡೆಸಿದ್ದಾರೆ, ನಡೆಸುತ್ತಿದ್ದಾರೆ, ಮುಂದೆಯೂ ನಡೆಸುತ್ತಾರೆ.

ಹೀಗೆ ಚೈತನ್ಯರ ಜೀವನ ಸಂದೇಶಗಳು ಅನಂತ ಕಾಲ ನಮ್ಮ ಬಾಳನ್ನು ಬೆಳಗಲಿವೆ. ಧನ್ಯವಾದಗಳು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi