ಆಧ್ಯಾತ್ಮಿಕ ಲೋಕದಲ್ಲಿ ರಾಧಾಕುಂಡದ ವಿಸ್ತರಣೆ
ಕಳೆದ ಬಾರಿ ರಾಧಾಕುಂಡದ ಆವಿರ್ಭಾವ ಕುರಿತು ಓದಿರುವಿರಿ. ಈ ಸಂಚಿಕೆಯಲ್ಲಿ ಆಧ್ಯಾತ್ಮಿಕ ಲೋಕದಲ್ಲಿನ ರಾಧಾಕುಂಡದ ವಿವರಣೆ ಮತ್ತು ಅಷ್ಟ ಸಖೀ / ಸಖ ಕುಂಜಗಳ ವಿವರಗಳನ್ನು ನೀಡಲಾಗಿದೆ.

ಗೋಲೋಕ ವೃಂದಾವನದ ಪ್ರತಿರೂಪವೇ ವೃಂದಾವನ. ಇಲ್ಲಿನ ರಾಧಾಕುಂಡ, ಅದರ ಪ್ರತಿರೂಪ. ಗೋಲೋಕ ವೃಂದಾವನದಲ್ಲಿ ರಾಧಾಕುಂಡವು ಕದಂಬ, ಚಂಪಕ, ಅಶೋಕ, ಆಮ್ರ, ಪುನ್ನಾಗ ಮತ್ತು ಬಕುಳ ವೃಕ್ಷಗಳಿಂದ ಆವೃತವಾಗಿದೆ. ಅವುಗಳ ಮೇಲೆ ಲವಂಗ ಮತ್ತು ವಸಂತೀ ಲತೆಗಳು ಹಬ್ಬಿಕೊಂಡಿವೆ. ಕುಂಡದ ತೀರಗಳು ಬಗೆಬಗೆಯ ಹರಳುಗಳಿಂದ ಅಲಂಕೃತವಾಗಿವೆ. ಅಲ್ಲಿ ರಾಧಾಕೃಷ್ಣರು ಸ್ವರ್ಣ-ರತ್ನ ಖಚಿತವಾದ ಉಯ್ಯಾಲೆಯಲ್ಲಿ ಜೀಕಿಕೊಳ್ಳುತ್ತ ವಿಹರಿಸುತ್ತಾರೆ.
ಶ್ರೀಲ ಭಕ್ತಿ ವಿನೋದ ಠಾಕುರರು ತಮ್ಮ “ಗೀತಮಾಲಾ” ಕೃತಿಯಲ್ಲಿ ವಿವರಿಸಿರುವಂತೆ;
ರಾಧಾಕುಂಡದ ತೀರಗಳು ಮನಸ್ಸಿನ ಇಚ್ಛೆಯನ್ನು ಪೂರೈಸುವ ಸ್ಪರ್ಶ ಶಿಲೆಗಳಿಂದ ತುಂಬಿಹೋಗಿವೆ. ನೂರಾರು ಅಲೌಕಿಕ ಹೂದೋಟಗಳು ಕುಂಡದ ಸುತ್ತಲೂ ಹರಡಿಕೊಂಡಿವೆ. ಇಲ್ಲಿನ ಮರ-ಗಿಡ-ಬಳ್ಳಿಗಳು ಹವಳ ಮತ್ತು ಕೆಂಪು ಕಲ್ಲುಗಳದ್ದಾಗಿದ್ದು, ಅವು ನೀಡುವ ಫಲಗಳು ವಜ್ರ ಮತ್ತು ಮುತ್ತಿನದವಾಗಿರುತ್ತವೆ.
ಕೃಷ್ಣದಾಸ ಕವಿರಾಜ ಗೋಸ್ವಾಮಿಗಳು ತಮ್ಮ “ಶ್ರೀಗೋವಿಂದ ಲೀಲಾಮೃತ” ದಲ್ಲಿ ಮತ್ತು ಶ್ರೀ ವಿಶ್ವನಾಥ ಚಕ್ರವರ್ತಿಗಳು ತಮ್ಮ “ಶ್ರೀಕೃಷ್ಣ ಭಾವನಾಮೃತ” ದಲ್ಲಿ ಆಧ್ಯಾತ್ಮಿಕ ಲೋಕದಲ್ಲಿನ ರಾಧಾಕುಂಡವನ್ನು ಹೀಗೆ ವರ್ಣಿಸಿದ್ದಾರೆ.
“ರಾಧಾಕುಂಡದ ನಾಲ್ಕೂ ಬದಿಗಳಲ್ಲಿ ಸಾಲಂಕೃತ ಸ್ನಾನ ಘಟ್ಟಕ್ಕೆ ಕೊಂಡೊಯ್ಯುವ ರತ್ನಖಚಿತ ಮೆಟ್ಟಿಲುಗಳಿವೆ. ಸ್ವರ್ಣಮಯವಾದ ಸೇತುವೆಯೊಂದು ರಾಧಾಕುಂಡ – ಶ್ಯಾಮಕುಂಡಗಳನ್ನು ಬೆಸೆಯುತ್ತವೆ. ಘಟ್ಟದ ಇನ್ನೊಂದು ಮಗ್ಗುಲಲ್ಲಿ ಮುತ್ತು ರತ್ನಗಳಿಂದ ಅಲಂಕೃತವಾದ ಜೋಡಿ ಉಯ್ಯಾಲೆಗಳಿವೆ.
ಬಂಗಾರದ ವೇದಿಕೆಗಳಿವೆ ಮತ್ತು ಹರಳುಗಳಿಂದ ಕೂಡಿದ ಕಟ್ಟಡಗಳಿವೆ. ಅಲ್ಲಿ ಅಪರಿಮಿತವಾದ ವೃಕ್ಷಗಳು ಹೂಬಳ್ಳಿಗಳೂ ಇವೆ. ಅವು ಸದಾ ಬಗೆ ಬಗೆಯ ಸುವಾಸಿತ ಪುಷ್ಪಗಳಿಂದ ಶೋಭಿಸುತ್ತಿರುತ್ತವೆ. ರಾಧಾಕುಂಡದ ಸುತ್ತಲೂ ಕಲ್ಪವೃಕ್ಷಗಳು ತುಂಬಿಹೋಗಿವೆ. ಸ್ನಾನಘಟ್ಟಗಳು ಬಗೆಬಗೆಯ ಕುಂಜ (ಉದ್ಯಾನವನ)ಗಳಿಂದ ಆವೃತವಾಗಿವೆ.
ಅಷ್ಟಕುಂಜಗಳ ವಿವರಣೆ
1. ಶ್ರೀಲಲಿತಾದೇವೀ ಕುಂಜ: ಉತ್ತರ ದಿಕ್ಕಿನಲ್ಲಿದೆ. ಇದು ಅತಿ ದೊಡ್ಡ ಕುಂಜ. ಸ್ವರ್ಣ ಮತ್ತು ರತ್ನಖಚಿತವಾದ ವೇದಿಕೆಯುಳ್ಳ ಈ ಕುಂಜ ಬಹಳ ಆಕರ್ಷಣೀಯ, ಆವರಣದ ನಡುಭಾಗದಲ್ಲಿ ‘ಅನಂಗ ರಂಗಾಂಬುಜ’ನ ಸ್ವರ್ಣ ಮಂದಿರವಿದೆ. ಇದು ಸಾವಿರ ದಳ ಕಮಲದ ಆಕಾರದಲ್ಲಿದೆ.
2. ಶ್ರೀವಿಶಾಖಾದೇವೀ ಕುಂಜ: ಈಶಾನ್ಯ ದಿಕ್ಕಿನಲ್ಲಿದೆ.

3. ಶ್ರೀ ಚಿತ್ರಾದೇವೀ ಕುಂಜ: ಪೂರ್ವದಿಕ್ಕಿನಲ್ಲಿದೆ. ವಿವಿಧ ವರ್ಣದ ಪುಷ್ಪಗಳಿಂದ ಕೂಡಿದ ಈ ಕುಂಜ ಅತ್ಯಂತ ಸುಂದರವೂ, ಮನೋಹಾರಿಯೂ ಆಗಿದೆ. ಚಿತ್ರಾ ಎಂದರೆ, “ಬೆರಗುಗೊಳಿಸುವಂಥದ್ದು” ಎಂದು.
4. ಶ್ರೀ ಇಂದುಲೇಖಾದೇವೀ ಕುಂಜ: ಆಗ್ನೇಯ ದಿಕ್ಕಿನಲ್ಲಿದೆ, ಇಲ್ಲಿ ಪ್ರತಿಯೊಂದೂ – ಮರ, ಗಿಡ, ಪೊದೆ, ವಸತಿಗಳು ಎಲ್ಲವೂ ಬಿಳಿಯ ಬಣ್ಣದ್ದಾಗಿವೆ.
5. ಶ್ರೀಚಂಪಕಲತಾದೇವೀ ಕುಂಜ: ದಕ್ಷಿಣ ದಿಕ್ಕಿನಲ್ಲಿದೆ. ಇದು ಸ್ವರ್ಣವರ್ಣದ್ದಾಗಿದೆ.
6. ಶ್ರೀರಂಗಾದೇವೀ ಕುಂಜ: ನೈಋತ್ಯ ದಿಕ್ಕಿನಲ್ಲಿದೆ. ಇದರ ಬಣ್ಣ ರಾಧಾರಾಣಿಗೆ ಅತ್ಯಂತ ಪ್ರಿಯವಾದ ನೀಲವರ್ಣ. ನೀಲಿಬಣ್ಣದ ಪ್ರತಿಯೊಂದೂ ಆಕೆಗೆ ಕೃಷ್ಣನನ್ನೇ ನೆನಪಿಸುತ್ತಿದ್ದವು.
7. ಶ್ರೀತುಂಗವಿದ್ಯಾದೇವೀ ಕುಂಜ: ಪಶ್ಚಿಮ ದಿಕ್ಕಿನಲ್ಲಿದೆ. ಈ ಕುಂಜದಲ್ಲಿ ಪ್ರತಿಯೊಂದೂ ಇಟ್ಟಿಗೆ ಕೆಂಪು ಬಣ್ಣದ್ದು.
8. ಶ್ರೀ ಸುದೇವಿದೇವೀ ಕುಂಜ: ವಾಯುವ್ಯ ದಿಕ್ಕಿನಲ್ಲಿದೆ. ಈ ಕುಂಜ ಹಚ್ಚಹಸಿರು, ಪಚ್ಚೆ ಹೊದಿಸಿದ ಹಾಗೆ ತೋರುತ್ತದೆ.
ರಾಧಾಕುಂಡದ ಮಧ್ಯಭಾಗದಲ್ಲಿರುವ ಅನಂಗ ಮಂಜರೀ ಕುಂಜವು ರಾಧಾಕುಂಡದೊಡನೆ ಹರಳಿನ ಸೇತುವೆಯಿಂದ ಬೆಸೆಯಲ್ಪಟ್ಟಿದೆ. ಈ ಕುಂಜದ ಮಧ್ಯದಲ್ಲಿ ಸ್ವರ್ಣಖಚಿತ ದೇವಾಲಯವೂ, ಉತ್ತರ ತೀರದಲ್ಲಿ ಜಾಹ್ನವಾದೇವಿಯ ಬೈಠಕ್ಕೂ ಇವೆ.
ಅಷ್ಟಸಖ ಕುಂಜಗಳು
ರಾಧಾಕುಂಡವು ಅಷ್ಟಸಖೀ ಕುಂಜಗಳಿಂದ ಆವೃತವಾಗಿರುವಂತೆ, ಶಾಮಕುಂಡವು ಅಷ್ಟಸಖ ಕುಂಜಗಳಿಂದ ಆವೃತವಾಗಿದೆ. ಈ ಕುಂಜಗಳು ಅಷ್ಟಗೋಪಿಯರಿಂದ ಪಾಲಿಸಲ್ಪಡುತ್ತಿದ್ದವು.

1. ಸುಬಲ ಕುಂಜ: ಈಶಾನ್ಯ ದಿಕ್ಕು – ರಾಧಾರಾಣಿಯ ನಿರ್ವಹಣೆ, ಇಲ್ಲಿನ ಮಾನಸ ಪವನ ಘಟ್ಟದಲ್ಲಿ ಪ್ರತಿದಿನ ಮಧ್ಯಾಹ್ನ 12ರ ವೇಳೆಗೆ ರಾಧಾರಾಣಿ ತನ್ನ ಸಖಿಯರೊಂದಿಗೆ ಸ್ನಾನ ಮಾಡುತ್ತಿದ್ದಳು.
2. ಮಧು ಮಂಗಳ ಕುಂಜ: ಉತ್ತರದಿಕ್ಕು – ಲಲಿತಾದೇವಿಯ ನಿರ್ವಹಣೆ.
3. ಉಜ್ವಲ ಕುಂಜ: ವಾಯುವ್ಯ ದಿಕ್ಕು – ವಿಶಾಖಾದೇವಿಯ ನಿರ್ವಹಣೆ.
4. ಅರ್ಜುನ ಕುಂಜ: ಪೂರ್ವದಿಕ್ಕು – ಚಿತ್ರಾದೇವಿಯ ನಿರ್ವಹಣೆ.
5. ಗಂಧರ್ವ ಕುಂಜ: ಆಗ್ನೇಯ ದಿಕ್ಕು – ಇಂದುಲೇಖಾ ದೇವಿಯ ನಿರ್ವಹಣೆ.
6. ವಿದಗ್ಧ ಕುಂಜ: ದಕ್ಷಿಣ ದಿಕ್ಕು – ಚಂಪಕಲತಾದೇವಿಯ ನಿರ್ವಹಣೆ.
7. ಕೋಕಿಲ ಕುಂಜ: ನೈಋತ್ಯ ದಿಕ್ಕು – ರಂಗಾದೇವಿಯ ನಿರ್ವಹಣೆ.
8. ಸನಂದನಂದ ಕುಂಜ: ತುಂಗವಿದ್ಯಾ ದೇವಿಯ ನಿರ್ವಹಣೆ.






Leave a Reply