ಜನರ ಅಂಧಾನುಕರಣೆಯನ್ನು ಹಾಸ್ಯ ಮಾಡುತ್ತ ಶ್ರೀಲ ಪ್ರಭುಪಾದರು ಹೇಳಿದ ಕಥೆ ಇದು.
ಒಂದು ರಾಜ್ಯದಲ್ಲಿ ಒಬ್ಬ ವ್ಯಾಪಾರಿ ತಾನು ಅತಿಯಾಗಿ ಪ್ರೀತಿಸುತ್ತಿದ್ದ ಸರಗಲ್ ಸಿಂಗ್ ಸತ್ತಾಗ, ತಲೆಬೋಳಿಸಿ, ಕಪ್ಪು ಬಟ್ಟೆ ತೊಟ್ಟು ಶೋಕಾಚರಣೆ ಮಾಡಿದ. ಅಂಗಡಿಗೆ ಬಂದ ಗಿರಾಕಿ, ವ್ಯಾಪಾರಿ ಯಾರಿಗಾಗಿ ಶೋಕಾಚರಣೆ ಮಾಡುತ್ತಿದ್ದಾನೆ ಎಂದು ವಿಚಾರಿಸಿದ, “ಸರಗಲ್ ಸಿಂಗ್ ಸತ್ತುಹೋದ!” ವ್ಯಾಪಾರಿಯಿಂದ ಉತ್ತರ ಹೊರಟಿತು. ವ್ಯಾಪಾರಿಯ ದುಃಖ ಕಂಡ ಗಿರಾಕಿಗೆ, ಆತ ಯಾರೋ ಮಹತ್ವದ ವ್ಯಕ್ತಿಯಿರಬಹುದೆನ್ನಿಸಿತು.
ತಾನು ಸರಗಲ್ ಸಿಂಗ್‌ನನ್ನು ಅರಿಯೆನೆ೦ದು ತೋರಿಸಿಕೊಳ್ಳುವ ಮನಸ್ಸಾಗಲಿಲ್ಲ. ಹೀಗಾಗಿ ಅವನು ‘ಸರಗಲ್ ಸಿಂಗ್ ಯಾರು?’ ಎಂದು ಕೇಳುವ ಗೋಜಿಗೆ ಹೋಗಲಿಲ್ಲ. ಬದಲಿಗೆ ತಾನೂ ತಲೆಬೋಳಿಸಿ, ಕಪ್ಪು ಉಡುಗೆ ತೊಟ್ಟ.
ಅವನನ್ನು ನೋಡಿದ ಇತರ ಕೆಲವರೂ ಸರಗಲ್ ಸಿಂಗ್ ಯಾರೆಂದು ತಿಳಿದುಕೊಳ್ಳುವ ಕೆಲಸಕ್ಕೆ ಕೈ ಹಾಕದೆ, ಅವನನ್ನೇ ಅನುಸರಿಸಿದರು. ಹೀಗೆ, ಊರಿನ ಬಹುಪಾಲು ಜನ ಶೋಕಾಚರಣೆಯಲ್ಲಿ ತೊಡಗಿದರು. ಯಾರಾದರೂ ಕೇಳಿದರೆ, ”ಸರಗಲ್ ಸಿಂಗ್ ಸತ್ತು ಹೋದ!” ಎನ್ನುವ ಉತ್ತರ ಮಾತ್ರ ಬರುತ್ತಿತ್ತು.

ನಗರದ ಅರ್ಧಕ್ಕರ್ಧ ಮಂದಿ ತಲೆಬೋಳಿಸಿ, ಕಪ್ಪು ಬಟ್ಟೆ ತೊಟ್ಟು ಶೋಕಿಸುತ್ತಿರುವುದನ್ನು ಕಂಡ ಮಂತ್ರಿಗೆ ಅಚ್ಚರಿಯಾಯ್ತು. ತನಗೇನೂ ಅರಿಯದು ಎಂದರೆ ಜನ ನಕ್ಕಾರು ಎಂದು ಭಾವಿಸಿ, ಆತನೂ ಏನೊಂದೂ ವಿಚಾರಿಸದೆ ತಲೆಬೋಳಿಸಿ, ಕಪ್ಪು ಬಟ್ಟೆ ಉಟ್ಟ.
ಮಂತ್ರಿಯನ್ನು ಶೋಕದ ಉಡುಗೆಯಲ್ಲಿ ಕಂಡ ರಾಜ ವಿಷಯವೇನೆಂದು ವಿಚಾರಿಸಿದ. ಮಂತ್ರಿಯಿಂದ “ಸರಗಲ್ ಸಿಂಗ್ ಸತ್ತ” ಎನ್ನುವ ಉತ್ತರ ಬಂತು! “ಯಾರು ಸರಗಲ್ ಸಿಂಗ್!?’ ರಾಜನ ಪ್ರಶ್ನೆ. ಮಂತ್ರಿಗೆ ಅದು ತಿಳಿಯದು. ರಾಜ, ”ಈ ಕೂಡಲೇ ಸರಗಲ್ ಸಿಂಗ್ ಯಾರೆಂದು ಪತ್ತೆ ಹಚ್ಚಿ” ಎಂದು ಆದೇಶಿಸಿದ.
‘ಸರಗಲ್ ಸಿಂಗ್ ಯಾರು?’ ಎಂದು ವಿಚಾರಿಸುತ್ತ ಹೊರಟ ಮಂತ್ರಿ, ಕೊನೆಗೆ ವ್ಯಾಪಾರಿಯ ಬಾಗಿಲಿಗೆ ಬಂದು, “ಸರಗಲ್ ಸಿಂಗ್ ಯಾರು?” ಎಂದು ಕೇಳಿದ. ವ್ಯಾಪಾರಿ ಇನ್ನೂ ದುಃಖಿತನಾಗಿಯೇ ಇದ್ದ. “ಸರಗಲ್ ಸಿಂಗ್ ನನ್ನ ಪ್ರೀತಿಯ ಕತ್ತೆ, ಅದು ಸತ್ತು ಹೋಯಿತು” ಎಂದು ಆಲಾಪಿಸತೊಡಗಿದ!
ನೀತಿ: ಅಂಧಾನುಕರಣೆ ಒಳ್ಳೆಯದಲ್ಲ.






Leave a Reply