ಓಡಣ ಷಷ್ಠಿ

ಭಗವಂತನ ಮೂರ್ತಿ ಕೇವಲ ಕಣ್ಣಿನ ಮರದ ವಿಗ್ರಹವಲ್ಲ. ಅದರಲ್ಲಿ ಸಾಕ್ಷಾತ್ ದೇವನೇ ಆವಿರ್ಭಾವಗೊಂಡಿರುತ್ತಾನೆ. ನಾಸ್ತಿಕರ ಪಾಲಿಗೆ ಈ ಮೂರ್ತಿಗಳು ಬರಿಯ ಗೊಂಬೆಗಳಷ್ಟೆ. ಅವರು ದೇವರು ವಿಗ್ರಹಗಳಲ್ಲಿ ಇರುವುದಿಲ್ಲ. ಅವನು ನಿರಾಕಾರ ಎಂದೆಲ್ಲ ವಾದ ಹೂಡುತ್ತಾರೆ.

ನಿಜವಾದ ವೈಷ್ಣವ ಭಕ್ತರು ಅರ್ಚ ವಿಗ್ರಹಗಳಲ್ಲಿ ಸಾಕ್ಷಾತ್ ದೇವೋತ್ತಮನನ್ನೇ ಕಾಣುತ್ತಾರೆ. ಅಂತೆಯೇ ಅತ್ಯಂತ ಪ್ರೇಮಪೂರ್ವಕ ಭಕ್ತಿಸೇವೆಯನ್ನು ಸಲ್ಲಿಸುತ್ತಾರೆ. ಬಗೆ ಬಗೆಯ ಅಲಂಕಾರಗಳಿಂದ ಮನದಣಿಯೆ ಸಿಂಗರಿಸುತ್ತಾರೆ. ಸೃಷ್ಟಿಯ ಎಲ್ಲ ವೈಭವಗಳ ಒಡೆಯನಾದ ಪರಮಪುರುಷನನ್ನು ಅವನದೇ ವಸ್ತು ವೈವಿಧ್ಯಗಳಿಂದ ಪೂಜಿಸುವುದು ಭಕ್ತನ ಕರ್ತವ್ಯವಲ್ಲವೇ?

ಭಗವಂತನೊಡನೆ ಭಕ್ತರು ಮಾಧುರ್ಯ, ವಾತ್ಸಲ್ಯ, ಸಖ್ಯವೇ ಮೊದಲಾದ ಭಾವಗಳನ್ನು ವ್ಯಕ್ತಪಡಿಸುತ್ತಾರೆ. ಅದರಂತೆ ಪೂಜಿಸುತ್ತಾರೆ. ಬೇಸಿಗೆಯ ಆರಂಭದ ದಿನಗಳಲ್ಲಿ ಅರ್ಚವಿಗ್ರಹಕ್ಕೆ ಗಂಧ ಸವರಿ ‘ಚಂದನಯಾತ್ರೆ’ ನಡೆಸುವುದು ರೂಢಿಯಷ್ಟೆ? ಆಗ ವಿಪರೀತ ಸೆಖೆಯಿದ್ದು ಭಗವಂತನಿಗೆ ತಂಪಾಗಲಿ ಎಂದು ಈ ಸೇವೆ. ಅದು ಭಕ್ತರ ಕಾಳಜಿ! ಅದರಂತೆ ಮತ್ತೊಂದು ವಿಶಿಷ್ಟ ಆಚರಣೆ, ‘ಓಡಣ ಷಷ್ಠಿ.ʼ

ಓಡಣ ಅಂದರೆ ಹೊದಿಕೆ. ಚಳಿಗಾಲದ ಸಂದರ್ಭದಲ್ಲಿ ಭಗವಂತನಿಗೆ ಉಣ್ಣೆಯ ಹೊದಿಕೆಯನ್ನು ಅರ್ಪಿಸುವ ಉತ್ಸವ ಇದು. “ಭಗವಂತನಿಗೆ ಛಳಿಯಾಗುತ್ತದೆ!” ಇದು ಭಕ್ತನ ವಾತ್ಸಲ್ಯ ಭಾವ. ಈ ವಿಶಿಷ್ಟ ಆಚರಣೆಯಿರುವುದು ಭಕ್ತಿ ಸೇವೆಯ ಉಚ್ಫ್ರಾಯ ಕಂಡ ಪುರಿ ಕ್ಷೇತ್ರದಲ್ಲಿ, ಶ್ರೀ ಜಗನ್ನಾಥ ಸ್ವಾಮಿ ದೇಗುಲದಲ್ಲಿ.

ಓಡಣ ಷಷ್ಠಿಯಂದು (15 ಡಿಸೆಂಬರ್) ಶ್ರೀ ಜಗನ್ನಾಥನನ್ನು ಗಾಢ ವರ್ಣಗಳ ಉಣ್ಣೆ ಬಟ್ಟೆಯಿಂದ (ಬಿಳಿ, ಗುಲಾಬಿ, ಹಸಿರು ಬಣ್ಣಗಳು) ಅಲಂಕರಿಸಲಾಗುತ್ತದೆ. ಈ ಉಡುಗೆಯನ್ನು ನೇರವಾಗಿ ನೇಕಾರರಿಂದ ಕೊಂಡು ತರಲಾಗಿರುತ್ತದೆ.

ಶ್ರೀ ಚೈತನ್ಯ ಚರಿತಾಮೃತದಲ್ಲಿ ಓಡಣ ಷಷ್ಠಿಯ ಕುರಿತು ಮಧ್ಯಲೀಲೆ (16.78)ಯಲ್ಲಿ ಉಲ್ಲೇಖವಿದೆ.

ಕುಲೀನ ಗ್ರಾಮದ ವೈಷ್ಣವರು ಶ್ರೀ ಚೈತನ್ಯ ಮಹಾಪ್ರಭುಗಳ ದರ್ಶನಾರ್ಥಿಗಳಾಗಿ ಪುರಿಗೆ ಬರುತ್ತಾರೆ. ಅವರ ಕೋರಿಕೆಯ೦ತೆ ಮಹಾಪ್ರಭುಗಳು ಅವರಿಗೆ ವೈಷ್ಣವ, ವೈಷ್ಣವತರ ಮತ್ತು ವೈಷ್ಣವತಮ ಎಂಬ ಮೂರು ವಿಭಿನ್ನ ಬಗೆಗಳ ಕುರಿತು ಹೇಳುತ್ತಾರೆ.

ಅಂತಿಮವಾಗಿ ಆ ಬ್ರಾಹ್ಮಣರೆಲ್ಲರು ಹಿಂದಿರುಗಲು, ಪುಂಡರೀಕ ವಿದ್ಯಾನಿಧಿಯೆಂಬ ಭಕ್ತರು ಮಾತ್ರ ಪುರಿಯಲ್ಲೇ ಉಳಿದುಕೊಳ್ಳುತ್ತಾರೆ. ಸ್ವರೂಪ ದಾಮೋದರ ಗೋಸ್ವಾಮಿ ಮತ್ತು ಪುಂಡರೀಕ ವಿದ್ಯಾನಿಧಿ ಇಬ್ಬರ ನಡುವೆ ಗಾಢ ಸ್ನೇಹವೇರ್ಪಟ್ಟು, ಅವರು ಕೃಷ್ಣನ ಕುರಿತ ಮಾತುಕತೆಗಳಲ್ಲಿ ತಲ್ಲೀನರಾಗಿರುತ್ತ, ಸಮಾನ ಆಸಕ್ತಿಯಿಂದ ಭಕ್ತಿರಸಾ ಸ್ವಾದನೆ ಮಾಡುತ್ತಿರುತ್ತಾರೆ.

ಪುಂಡರೀಕ ವಿದ್ಯಾನಿಧಿಯವರಿಂದ ಗದಾಧರ ಪಂಡಿತರು ಎರಡನೇ ಬಾರಿಗೆ ದೀಕ್ಷೆ ಪಡೆಯುತ್ತಾರೆ, ಮತ್ತು ಅವರು ಪುರಿಯಲ್ಲಿ ಇದ್ದಾಗಲೇ ಓಡಣಷಷ್ಠಿಯ ಉತ್ಸವವೇರ್ಪಡುತ್ತದೆ.

ಪುಂಡರೀಕ ವಿದ್ಯಾನಿಧಿಯು ಉತ್ಸವದ ದಿನದಂದು ಪೂಜಾರಿಗಳು ಬಟ್ಟೆಯನ್ನು ಹಾಗೆಯೇ ಜಗನ್ನಾಥನಿಗೆ ಅರ್ಪಿಸುವುದನ್ನು ನೋಡಿ, ಮನಸ್ಸಿನಲ್ಲಿಯೇ ಅವರನ್ನು ದೂಷಿಸಿಕೊಳ್ಳುತ್ತಾರೆ. ಈ ಅರ್ಚಕರು ಒಗೆಯದ ಮತ್ತು ಪವಿತ್ರವಲ್ಲದ ಬಟ್ಟೆಯನ್ನೇಕೆ ಅರ್ಪಿಸುತ್ತಿದ್ದಾರೆ ಎಂದುಕೊಳ್ಳುತ್ತಾರೆ. ಭಕ್ತರ ಕುರಿತು ಇಂಥ ಟೀಕೆಯನ್ನು ಮಾಡಿಕೊಂಡಿದ್ದರಿಂದ ಅವರ ಮನಸ್ಸು ಕಲುಷಿತವಾಗುತ್ತದೆ.

ಅಂದಿನ ರಾತ್ರಿ ಪುಂಡರೀಕ ವಿದ್ಯಾನಿಧಿಯು ಮಲಗಿದ್ದಾಗ ಅವರ ಸ್ವಪ್ನದಲ್ಲಿ ಜಗನ್ನಾಥ- ಬಲರಾಮರು ಕಾಣಿಸಿಕೊಳ್ಳುತ್ತಾರೆ. ಮತ್ತು ನಗುತ್ತ ನಗುತ್ತ ಅವರ ಕೆನ್ನೆಗೆ ಹೊಡೆದು ದಂಡಿಸುತ್ತಾರೆ. ನೋವಿನಿಂದ ಕೆನ್ನೆ ಊದಿಕೊಂಡರೂ ವಿದ್ಯಾನಿಧಿಯು ಒಳಗೊಳಗೆ ಆನಂದಿತನಾಗುತ್ತಾರೆ. ತನ್ನನ್ನು ಶಿಕ್ಷಿಸಲು ಸ್ವತಃ ಜಗನ್ನಾಥನು ಬಂದಿದ್ದರಿಂದ ಅವನ ಸ್ಪರ್ಶದಿಂದ ಧನ್ಯನಾದೆ ಎಂದುಕೊಳ್ಳುತ್ತಾರೆ.

ಇದು ಚೈತನ್ಯ ಚರಿತಾಮೃತದಲ್ಲಿ ಹೇಳಲಾಗಿರುವ ಘಟನೆ. ಚೈತನ್ಯ ಭಾಗವತದ ಅಂತ್ಯಲೀಲಾ ಭಾಗದಲ್ಲಿ ಓಡಣ ಷಷ್ಠಿಯ ಬಗ್ಗೆ ಇನ್ನೂ ವಿಸ್ತಾರವಾಗಿ ಹೇಳಲಾಗಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi