ಕಾತ್ಯಾಯನೀ ವ್ರತಾಚರಣೆ

“ವೃಂದಾವನದ ಗೊಲ್ಲಬಾಲೆಯರು ಶ್ರೀಕೃಷ್ಣನನ್ನು ಪತಿಯನ್ನಾಗಿ ಪಡೆಯುವ ಹಂಬಲದಿಂದ ಕಾತ್ಯಾಯನಿಯನ್ನು  ಪೂಜಿಸಿ ವ್ರತಾಚರಣೆ ಮಾಡಿದರು. ಈ ದಿವ್ಯಲೀಲೆಯ ವಿವರಗಳು ಶ್ರೀಮದ್ಭಾಗವತದ ದಶಮಸ್ಕಂಧ 22ನೇ ಅಧ್ಯಾಯದಲ್ಲಿ ದೊರೆಯುತ್ತವೆ.”

ಕಾತ್ಯಾಯನೀ ಮಹಾಮಾಯೈ ಮಹಾಯೋಗಿನ್ಯಧೀಶ್ವರೀ |

 ನಂದಗೋಪ ಸುತಂ ದೇವೀ ಪತಿಂ ವೇ ಕುರು ತೇ ನಮಃ ॥”

ಅತಿ ಮಂತ್ರಮ್ ಜಪಂತ್ಯಸ್ತಾಃ ಪೂಜಾಂ ಚಕ್ರುಃ ಕುಮಾರಿಕಾಃ ||4||

”ಹೇ ದೇವಿ ಕಾತ್ಯಾಯನೀ, ಭಗವಂತನ ಮಹಾಶಕ್ತಿಯೇ, ಮಹಾಯೋಗ ಶಕ್ತಿಯುಳ್ಳವಳೇ, ಸಕಲರ ಮಹಾನಿಯಾಮಕಳೇ, ದಯಮಾಡಿ ನಂದಮಹಾರಾಜನ ಮಗನನ್ನು ನಮ್ಮ ಪತಿಯಾಗುವಂತೆ ಅನುಗ್ರಹಿಸು. ನಾವು ನಿನಗೆ ನಮಸ್ಕರಿಸುತ್ತೇವೆ’ – ಎಂದು ಕುಮಾರಿಯರು ಮಂತ್ರವನ್ನು ಜಪಿಸುತ್ತ ಪೂಜೆಯನ್ನು ನಡೆಸಿದರು.

ವ್ರತದ ವಿವರಣೆ

ಗೋಕುಲದ ಗೋಪ ಸ್ತ್ರೀಯರೆಲ್ಲರೂ ಬಾಲಲೀಲೆ ನಡೆಸುತ್ತಿದ್ದ ದೇವೋತ್ತಮ ಪರಮಪುರುಷ ಶ್ರೀಕೃಷ್ಣನಿಂದ ಆಕರ್ಷಿತರಾಗಿದ್ದರು. ವಿಶೇಷವಾಗಿ ಕುಮಾರಿಯರು (ಅವಿವಾಹಿತ ತರುಣಿಯರು) ಅವನನ್ನು ತಮ್ಮ ಪತಿಯನ್ನಾಗಿ ಪಡೆಯಲು ಹಂಬಲಿಸುತ್ತಿದ್ದರು.

ಇದಕ್ಕಾಗಿ, ಚಳಿಗಾಲದ ಮೊದಲ ಮಾಸದಲ್ಲಿ (ಮಾರ್ಗಶೀರ್ಷಮಾಸ) ಗೋಕುಲದ ತರುಣಿಯರು ತಿಂಗಳು ಪೂರ್ತಿ ಕೇವಲ ಅಕ್ಕಿ ಮತ್ತು ಹೆಸರುಬೇಳೆಯಿಂದ ತಯಾರಿಸಿದ ಖಿಚಡಿ (ಹವಿಷ್ಷಾನ್ನ) ಯನ್ನು ಸೇವಿಸುತ್ತ ಕಟ್ಟುನಿಟ್ಟಿನ ವ್ರತ ಆಚರಿಸಿದರು.

ಮೊದಲು ಅವರು ಯಮುನಾ ನದಿಯಲ್ಲಿ ಸ್ನಾನವನ್ನು ಮಾಡಿ, ಸೂರ್ಯೋದಯವಾದ ಕೂಡಲೇ ದುರ್ಗಾ ದೇವಿಯ ಮಣ್ಣಿನ ಮೂರ್ತಿಯನ್ನು ನಿರ್ಮಿಸಿದರು. ಬಗೆಬಗೆಯ ಸುಗಂಧ ದ್ರವ್ಯ, ಫಲಪುಷ್ಪಗಳಿಂದ ದೇವಿಯನ್ನು ಪೂಜಿಸಿದರು. ಪ್ರತಿನಿತ್ಯವೂ ಹೀಗೆ ದುರ್ಗಾ ಪೂಜೆಗಾಗಿ ಹೊರಡುವಾಗ ದಾರಿಯಲ್ಲಿ ಉಚ್ಛಕಂಠದಿಂದ ಕೃಷ್ಣನ ಮಹಿಮೆಗಳನ್ನು ಹಾಡುತ್ತ ಸಾಗುತ್ತಿದ್ದರು.

ಹೀಗೆ ಒಂದು ತಿಂಗಳಿಡೀ ಅವರು ಯೋಗ್ಯ ರೀತಿಯಲ್ಲಿ ವ್ರತಾಚರಣೆ ನಡೆಸಿ, ತಮ್ಮ ಮನಸ್ಸನ್ನು ಕೃಷ್ಣನಲ್ಲಿ ಪೂರ್ಣವಾಗಿ ಮಗ್ನಗೊಳಿಸಿ, “ನಂದ ಮಹಾರಾಜನ ಮಗನು ಪತಿಯಾಗಲಿ” ಎಂಬ ಧ್ಯಾನದಲ್ಲಿ ನಿರತರಾಗುತ್ತ ಕಾತ್ಯಾಯಿನೀ ವ್ರತವನ್ನು ಪೂರೈಸಿದರು.

ಪಂಚರಾತ್ರದಲ್ಲಿ ಹೇಳಿರುವಂತೆ, ದುರ್ಗಾ ಎಂಬ ಹೆಸರು ಕೆಲವು ವೇಳೆ ಅಂತರಂಗ ಪರಾಶಕ್ತಿಗೆ ಅನ್ವಯವಾಗುವಂತೆ ಬಳಕೆಯಾಗುತ್ತದೆ. “ಕೃಷ್ಣನನ್ನು ಪೂಜಿಸಲು ಬಳಸುವ ಎಲ್ಲ ಮಂತ್ರಗಳ ಆಧಿ ದೇವತೆಯನ್ನು “ದುರ್ಗಾ” ಎಂದು ಕರೆಯುತ್ತಾರೆ.” ಪರಮ ಸತ್ಯನಾದ ಕೃಷ್ಣನನ್ನು ಆರಾಧಿಸುವ ಒಂದು ನಿರ್ದಿಷ್ಟ ಮಂತ್ರದ ಆಧಿದೇವತೆಯೇ ದುರ್ಗಾ.  

ಆದ್ದರಿಂದ ‘ದುರ್ಗಾ’ ಎಂಬ ಹೆಸರು ಭಗವಂತನ ಅಂತರಂಗಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಶುದ್ಧ ದಿವ್ಯ ಅಸ್ತಿತ್ವವನ್ನು ಹೊಂದಿರುವ ವ್ಯಕ್ತಿತ್ವಕ್ಕೆ ಅನ್ವಯವಾಗುತ್ತದೆ. ಈ ಅಂತರಂಗ ಶಕ್ತಿಯನ್ನು ಏಕಾನಂಶಾ ಅಥವಾ ಸುಭದ್ರಾ ಎಂದು ತಿಳಿಯಲಾಗಿರುವ ಕೃಷ್ಣನ ಸಹೋದರಿಯೆಂದು ಭಾವಿಸಲಾಗಿದೆ. ವೃಂದಾವನದಲ್ಲಿ ಗೋಪಿಯರು ಪೂಜಿಸುತ್ತಿದ್ದುದು ಈ ದುರ್ಗಾದೇವಿಯನ್ನೇ ಎಂದು ಕೆಲವು ಆಚಾರ್ಯರು ಗುರುತಿಸಿದ್ದಾರೆ.

ಹೀಗೆ ಒ೦ದು ತಿ೦ಗಳು ದೇವಿಯ ವ್ರತ ಪೂಜೆಯನ್ನು ಸಾಂಗವಾಗಿ ನೆರವೇರಿಸಿದ ತರುಣಿಯರು ಒಂದು ದಿನ ನದಿಯ ದಡಕ್ಕೆ ಬಂದು, ಅಲ್ಲಿ ತಮ್ಮ ವಸ್ತ್ರವನ್ನೆಲ್ಲವನ್ನೂ ಬಿಚ್ಚಿಟ್ಟು, ಕೃಷ್ಣನ ಮಹಿಮೆಗಳನ್ನು ಹಾಡುತ್ತ ಜಲಕ್ರೀಡೆಯಾಡಿದರು. ಯಜ್ಞ ಮುಗಿದ ನಂತರ ಅವಭೃತ ಸ್ನಾನ ಮಾಡುವಂತೆ, ಈ ಗೋಪಿಕೆಯರೂ ತಮ್ಮ ವ್ರತ ಮುಗಿಸಿದ ನಂತರ ವಿವಸ್ತ್ರರಾಗಿ ಸ್ನಾನ ಮಾಡಿದರು.

ಗೋಪ ಬಾಲೆಯರ ಶ್ರದ್ಧಾ ನಿಷ್ಠೆಗಳಿಂದ ಸಂಪ್ರೀತನಾದ ಕೃಷ್ಣನು ಅವರ ಇಚ್ಛೆ ಪೂರೈಸಬೇಕೆಂದು ಬಯಸಿದನು. ಅದರಂತೆ, ಮುಂದೊಂದು ಹುಣ್ಣಿಮೆಯ ದಿನ ಅವರೊಂದಿಗೆ ರಾಸನೃತ್ಯವನ್ನು ಮಾಡಿ ಅವರ ಇಚ್ಛೆಯನ್ನು ನೆರವೇರಿಸಿದನು. ಹೀಗೆ ವೃಂದಾವನದ ತರುಣಿಯರ ಕಾತ್ಯಾಯನೀ ವ್ರತವು ಫಲಪ್ರದವಾಗಿ ಪೂರ್ಣಗೊಂಡಿತು.

ಭೀಷ್ಮ ಪಂಚಕ

ಕಾರ್ತಿಕ ಮಾಸದ (ದಾಮೋದರ) ಕೊನೆಯ ಐದು ದಿನಗಳ ಕಾಲ ಉಪವಾಸವನ್ನಾಚರಿಸುತ್ತ, ಭಗವಂತನ ನಾಮಜಪ, ಭಕ್ತಿಗಾಯನ, ಶ್ರವಣ, ಪಠಣ ಮತ್ತು ಪೂಜೆಗಳಲ್ಲಿ ತಲ್ಲೀನರಾಗಿದ್ದುಕೊಂಡು ಆಚರಿಸುವ ವ್ರತವೇ ‘ಭೀಷ್ಮಪಂಚಕ’.

ಭಗವಾನ್ ಶ್ರೀಕೃಷ್ಣನು ಭೀಷ್ಮ ಪಿತಾಮಹನ ಭಕ್ತಿಯಿಂದ ಸಂಪ್ರೀತನಾಗಿ ಈ ಐದು ದಿನಗಳ ಕಾಲ ಯಾರು ವ್ರತವನ್ನಾಚರಿಸುವರೋ ಅವರಿಗೆ ತನ್ನ ಶುದ್ಧ ಪ್ರೇಮವನ್ನು ನೀಡುವುದಾಗಿ ವಚನವಿತ್ತಿದ್ದನು. ಅದರಂತೆ, ಕಾರ್ತಿಕ ಮಾಸದ ಕೊನೆಯಲ್ಲಿ ಏಕಾದಶಿಯಿಂದಾರಂಭಿಸಿ, ಪೂರ್ಣಿಮೆಯವರೆಗೆ ಐದು ದಿನಗಳ ಕಾಲ ಭೀಷ್ಮ ಪಂಚಕವನ್ನು ಆಚರಿಸಲಾಗುತ್ತದೆ.

ಹರಿಭಕ್ತಿ ವಿಲಾಸದಲ್ಲಿ, ಸಾಧ್ಯವಿರುವ ಶುದ್ಧಭಕ್ತರು ಕೆಲವೊಂದು ಆಹಾರಗಳನ್ನು ವರ್ಜಿಸಿ ಭೀಷ್ಮ ಪಂಚಕವನ್ನು ಆಚರಿಸಬೇಕೆಂದು ಹೇಳಿದೆ.

ಈ ಬಗೆಯ ಆಚರಣೆಗಳು ಭಕ್ತರ ತ್ಯಾಗಗುಣವನ್ನು ಒರೆಗೆ ಹಚ್ಚುತ್ತವೆ. ಚೈತನ್ಯ ಚರಿತಾಮೃತದ ಅಂತ್ಯ ಲೀಲೆಯಲ್ಲಿ (6:220) ಪರಿತ್ಯಾಗದ ಬಗ್ಗೆ ಹೀಗೆ ಹೇಳಿದೆ.

ಮಹಾಪ್ರಭುರ ಭಕ್ತ ಗಣೇರ ವೈರಾಗ್ಯ ಪ್ರಧಾನ |

ಯಾಹಾ ದೇಖಿ’ ಪ್ರೀತ ಹನ ಗೌರ ಭಗವಾನ್ ||

“ಶ್ರೀ ಚೈತನ್ಯ ಮಹಾಪ್ರಭುಗಳ ಭಕ್ತರ ಜೀವನದಲ್ಲಿ ವೈರಾಗ್ಯವೇ ಪ್ರಧಾನವಾದುದು. ಇದರಿಂದ ಮಹಾಪ್ರಭುಗಳು ಸಂತುಷ್ಟರಾಗುವರು” ಎಂಬುದು ಇದರ ಅರ್ಥ. ಭೀಷ್ಮ ಪಂಚಕದಂತಹ ಆಚರಣೆಗಳು ಪರಿತ್ಯಾಗದ ಜೀವನವನ್ನು ಮತ್ತಷ್ಟು ಪುಷ್ಟೀಕರಿಸುತ್ತವೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi