ಶ್ರೀ ರಾಮಚಂದ್ರ ಕವಿರಾಜ

ಶ್ರೀರಾಮಚಂದ್ರ ಕವಿರಾಜರು ಮತ್ತೋರ್ವ ಶ್ರೇಷ್ಠ ಭಕ್ತರು. ಶ್ರೀ ನರೋತ್ತಮ ದಾಸ ಠಾಕುರರ ಅಂತರಂಗದ ಸಹಚರರು. ಅವರಿಬ್ಬರು ಒಬ್ಬರನ್ನೊಬ್ಬರು ಬೇರ್ಪಡುವುದು ಅಸಾಧ್ಯವೆಂಬಷ್ಟು ಅನ್ಯೋನ್ಯವಾಗಿದ್ದರು. ಅವರು ಶ್ರೀ ಶ್ರೀನಿವಾಸ ಆಚಾರ್ಯರ ಶಿಷ್ಯರಾಗಿದ್ದರು.

ರಾಮಚಂದ್ರ ಕವಿರಾಜರ ತಂದೆ ಶ್ರೀ ಚಿರಂಜೀವ, ಮಹಾಭಾಗವತರಾಗಿದ್ದರು. ಅವರು ನೆಲೆಸಿದ್ದ ಶ್ರೀಖಂಡದ ಜನತೆ ಅವರನ್ನು ಬಹಳ ಪ್ರೀತಿಯಾದರಗಳಿಂದ ಕಾಣುತ್ತಿದ್ದರು. ಕವಿರಾಜರ ತಾಯಿ ಶ್ರೀಮತಿ ಸುನಂದಾದೇವಿಯು ಶ್ರೇಷ್ಠ ಭಕ್ತೆಯಾಗಿದ್ದರು.

ರಾಮಚಂದ್ರ ಕವಿರಾಜರದು ವೈದ್ಯರ ವಂಶ. ಅವರು ಕೂಡ ವೈದ್ಯರಾಗಿದ್ದು, ಮುಂದಿನ ದಿನಗಳಲ್ಲಿ ಮಹಾಕವಿಗಳಾಗಿ ಹೆಸರಾದರು.

ಕವಿರಾಜರ ತಂದೆ ಮಹಾಭಾಗವತರಾಗಿದ್ದರೂ ಕೂಡ ರಾಮಚಂದ್ರ ಮತ್ತು ಅವರ ಸಹೋದರ ಗೋವಿಂದ, ತಮ್ಮ ಅಜ್ಜ ದಾಮೋದರ ಕವಿರಾಜರ ಪ್ರಭಾವದಿಂದಾಗಿ ಶಾಕ್ತ ಪಂಥದತ್ತ ತಮ್ಮ ಹಾದಿ ಹೊರಳಿಸಿದ್ದರು. ಆದರೆ ಶ್ರೀನಿವಾಸಚಾರ್ಯರ ಅಪಾರ ಕರುಣೆಯಿಂದಾಗಿ ಅವರು ಮತ್ತೆ ಭಕ್ತಿಸೇವೆಯ ಪರಮ ಧರ್ಮವನ್ನು ಅಪ್ಪಿಕೊಂಡರು. ಆಚಾರ್ಯರು ರಾಮಚಂದ್ರರಿಗೆ ರಾಧಾಕೃಷ್ಣ ದಿವ್ಯ ಮಂತ್ರೋಪದೇಶವನ್ನು ನೀಡಿದರು.

ಶ್ರೀನಿವಾಸ ಆಚಾರ್ಯರಿಂದ ವೈಷ್ಣವ ದೀಕ್ಷೆ ಪಡೆದು ಸ್ವಗ್ರಾಮಕ್ಕೆ ತೆರಳಿದ ಕವಿ ರಾಜರು, ಆರಂಭದಲ್ಲಿ ಗ್ರಾಮಸ್ಥ ಸ್ಮಾರ್ತರ ಪ್ರತಿರೋಧವನ್ನು ಎದುರಿಸಬೇಕಾಯಿತು. ಆದರೆ ಅವರು ಶುದ್ಧ ವೈಷ್ಣವ ಭಕ್ತರಂತೆ ಕೊಂಚವೂ ಅಳುಕಿಲ್ಲದೆ ಸೂಕ್ತ ಉತ್ತರಗಳನ್ನು ನೀಡಿ ವಿರೋಧಿಗಳ ಬಾಯಿ ಮುಚ್ಚಿಸಿದರು.

ಶ್ರೀರಾಮಚಂದ್ರ ಕವಿರಾಜರು ತಮ್ಮ ಅಪಾರ ಕರುಣೆಯಿಂದ ನಾಸ್ತಿಕ ಬುದ್ಧಿಯ ಪಾಪಿಗಳನ್ನು ಉದ್ಧರಿಸಿ, ಭಕ್ತಿಸೇವೆಯ ಜ್ಞಾನವನ್ನು ನೀಡಿದರು. ಮುಂದೆ, ಶ್ರೀನಿವಾಸ ಆಚಾರ್ಯರ ಅಣತಿಯ ಮೇರೆಗೆ ಎರಡನೇ ಬಾರಿ ವೃಂದಾವನಕ್ಕೆ ತೆರಳಿದರು. ಆದರೆ ಈ ಬಾರಿ ಹಿರಿಯ ಗೋಸ್ವಾಮಿಗಳೆಲ್ಲರು ಭಗವದ್ಧಾಮವನ್ನು ಸೇರಿಯಾಗಿತ್ತು.

ಅವರೆಲ್ಲರ ಅಗಲಿಕೆಯ ವಿರಹ ಕವಿರಾಜರನ್ನು ಬಹುವಾಗಿ ಕಾಡಿತು. ಅವರು ವೃಂದಾವನದಲ್ಲಿಯೇ ವಿರಮಿಸಿ, ಶ್ರೀರಾಧಾಗೋವಿಂದರ ಪಾದ ಪದ್ಮಗಳನ್ನು ಧ್ಯಾನಿಸುತ್ತ ತಮ್ಮ ಸಹಚಾರಿಗಳನ್ನು ಸೇರುವ ಬಯಕೆಯಿಂದ ತಾವು ಕೂಡ ಭಗವದ್ಧಾಮದ ಹಾದಿ ಹಿಡಿದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi