ವನಿತಾ: ಕೃಷ್ಣ ಪಾಕಶಾಲೆ
ಬೀಟ್‌ರೂಟ್ ಸ್ವಾದಿಷ್ಟವಷ್ಟೇ ಅಲ್ಲ, ಅದರಲ್ಲಿ ವಿಟಮಿನ್ ಮತ್ತು ಪೌಷ್ಟಿಕಾಂಶಗಳ ಕಣಜವೇ ಅಡಗಿದೆ. ಅವುಗಳ ಈ ಸಮೃದ್ಧ ಪೋಷಕಾಂಶಗಳೇ ಅವುಗಳನ್ನು ಅನೇಕ ಲಾಭದಾಯಕ ಗುಣಗಳ, ಶಕ್ತಿಶಾಲಿಯಾದ ಆರೋಗ್ಯಕರ ಆಹಾರವಾಗಿ ಮಾಡಿದೆ. ದೇಹದ ಪ್ರತಿಯೊಂದು ಅಂಗಕ್ಕೂ ವಿಸ್ಮಯಕಾರಿಯಾದ ಆರೋಗ್ಯಲಾಭವನ್ನು ನೀಡುವುದಕ್ಕೆ ಬೀಟ್‌ರೂಟ್ ದೀರ್ಘ ಕಾಲದಿಂದಲೂ ಹೆಸರುವಾಸಿಯಾಗಿದೆ.
ಆದರೂ ಕೆಲವೇ ಮಂದಿ ಮಾತ್ರ ಇದನ್ನು ತಮ್ಮ ಆಹಾರದಲ್ಲಿ ಬಳಸುತ್ತಾರೆ. ಬೀಟ್‌ರೂಟ್ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮತ್ತು ಸಂಧಿನೋವು, ಕಾಲುಗಳು ಊದಿಕೊಳ್ಳುವುದನ್ನು ತಡೆಯುತ್ತದೆ. ರಕ್ತಹೀನತೆಯಿಂದ ನರಳುವವರು ಕಡ್ಡಾಯವಾಗಿ ಬೀಟ್‌ರೂಟನ್ನು ತಿನ್ನಬೇಕೆನ್ನುತ್ತಾರೆ.
ಇದು ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಬೀಟ್‌ರೂಟ್‌ನಲ್ಲಿ ಹೆಚ್ಚಾಗಿ ಐರನ್, ಪೋಲಿಕ್ ಆಮ್ಲ, ಫೈಬರ್, ಪೋಟಾಷಿಯಂ ಇರುತ್ತದೆ. ಈ ಸಂಚಿಕೆಯಲ್ಲಿ ಬೀಟ್‌ರೂಟ್‌ನಿಂದ ತಯಾರಿಸಬಹುದಾದ ಅಡುಗೆಗಳನ್ನು ಪರಿಚಯಿಸಲಾಗಿದೆ. ಈ ಎಲ್ಲವನ್ನೂ ಶ್ರದ್ಧೆಯಿಂದ ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ಬೀಟ್‌ರೂಟ್ ಕಟ್ಲೆಟ್

ಬೇಕಾಗುವ ಪದಾರ್ಥಗಳು
ತುರಿದ ಬೀಟ್ ರೂಟ್ – 1 ಕಪ್
ಬೇಯಿಸಿದ ಆಲೂಗಡ್ಡೆ – 2
ಕ್ಯಾರೆಟ್ ತುರಿ – 1 ಕಪ್
ಬ್ರೆಡ್‌ಕ್ರಮ್ಬ್ – 1 ಕಪ್
ಹಸಿಮೆಣಸಿನಕಾಯಿ – 6
ಕಡ್ಲೆಹಿಟ್ಟು – 2 ಚಮಚ
ಅಕ್ಕಿಹಿಟ್ಟು – 1 ಚಮಚ
ಮೈದಾ – 1 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯವಿದ್ದಷ್ಟು
ಮಾಡುವ ವಿಧಾನ : ಒಂದು ಪಾತ್ರೆಗೆ ತುರಿದ ಬೀಟ್ ರೂಟ್, ಬೇಯಿಸಿ ಹಿಸುಕಿದ ಆಲೂಗಡ್ಡೆ, ಕ್ಯಾರೆಟ್‌ತುರಿ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಮೈದಾ, ಬ್ರೆಡ್‌ಕ್ರಮ್ಬ್, ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ. ತವಾದ ಮೇಲೆ ಎಣ್ಣೆ ಸವರಿ ಕಾದ ಬಳಿಕ ಈ ಮಿಶ್ರಣವನ್ನು ಗುಂಡಗೆ ತಟ್ಟಿ ತವಾದ ಮೇಲೆ ಎಣ್ಣೆಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿದರೆ ಬೀಟ್‌ರೂಟ್ ಕಟ್ಲೆಟ್ ಸಿದ್ಧ. ಇದನ್ನು ಬಿಸಿಯಾಗಿ ಟೊಮೆಟೊ ಸಾಸ್ ಜೊತೆ ಸವಿಯಿರಿ.
ಬೀಟ್‌ರೂಟ್ ಆಲೂಗಡ್ಡೆ ಪ್ಯೂರಿ

ಬೇಕಾಗುವ ಪದಾರ್ಥಗಳು
ಬೀಟ್‌ರೂಟ್ – 1
ಆಲೂಗಡ್ಡೆ – 1
ತುಪ್ಪ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಬೀಟ್ ರೂಟ್ ಮತ್ತು ಆಲೂಗಡ್ಡೆಯ ಸಿಪ್ಪೆ ತೆಗೆದು ತೊಳೆದು ತೆಳ್ಳಗೆ ಕತ್ತರಿಸಿ. ಇದನ್ನು ಕುಕ್ಕರಿನಲ್ಲಿ ನೀರು ಹಾಕದೆ ಹಬೆಯಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಅನಂತರ ಇದನ್ನು ಮಿಕ್ಸಿ ಜಾರಿನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಉಪ್ಪು, ತುಪ್ಪವನ್ನು ಹಾಕಿ ಬಿಸಿಯಾಗಿರುವಾಗಲೇ ತಿನ್ನಲು ಕೊಡಿ. ಬೇಕಿದ್ದರೆ ಸ್ವಲ್ಪ ಕರಿಮೆಣಸು ಪುಡಿಯನ್ನು ಸೇರಿಸಬಹುದು.
ಬೀಟ್‌ರೂಟ್ ಹಲ್ವ

ಬೇಕಾಗುವ ಪದಾರ್ಥಗಳು
ಬೀಟ್‌ರೂಟ್ ತುರಿ – 2 ಕಪ್
ಹಾಲು – 2 ಕಪ್
ಕೋವಾ – 100 ಗ್ರಾಂ
ಸಕ್ಕರೆ – 1 1/2 ಕಪ್
ತುಪ್ಪ – 1/2 ಕಪ್
ಏಲಕ್ಕಿಪುಡಿ – 1 ಚಮಚ
ಗೋಡಂಬಿ ಚೂರು – ಸ್ವಲ್ಪ
ಮಾಡುವ ವಿಧಾನ : ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಇದರಲ್ಲಿ ಗೋಡಂಬಿ ಚೂರುಗಳನ್ನು ಹಾಕಿ ಹುರಿಯಿರಿ. ಅನಂತರ ಇದಕ್ಕೆ ತುರಿದ ಬೀಟ್‌ರೂಟ್ ಅನ್ನು ಹಾಕಿ ಹಸಿವಾಸನೆ ಹೋಗುವವರೆಗೂ ಹುರಿಯಿರಿ. ಇದಕ್ಕೆ ಹಾಲು ಹಾಕಿ ಬೇಯಿಸಿ, ಅನಂತರ ಕೋವಾ, ಸಕ್ಕರೆ, ಏಲಕ್ಕಿಪುಡಿಯನ್ನು ಹಾಕಿ ಹಾಲು ಇಂಗುವವರೆಗೂ ಬೇಯಿಸಿದರೆ ರುಚಿಯಾದ ಬಿಟ್‌ರೂಟ್ ಹಲ್ವ ಸವಿಯಲು ಸಿದ್ಧ.
ಬೀಟ್‌ರೂಟ್ ಪಲ್ಯ

ಬೇಕಾಗುವ ಪದಾರ್ಥಗಳು
ಬೀಟ್ ರೂಟ್ -1
ನೀರಿನಲ್ಲಿ ನೆನೆಸಿದ ಹೆಸರುಬೇಳೆ- 1/4 ಕಪ್
ಹಸಿ ತೆಂಗಿನತುರಿ – 1/2 ಕಪ್
ಹಸಿಮೆಣಸಿನಕಾಯಿ – 5
ಎಣ್ಣೆ – 2 ಚಮಚ
ಸಾಸಿವ – 1 ಚಮಚ
ಜೀರಿಗೆ – 1/2 ಚಮಚ
ಕಡಲೆಬೇಳೆ – 1 ಚಮಚ
ಅರಿಶಿನ – 1/4 ಚಮಚ
ಕರಿಬೇವು – 2 ಎಸಳು
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತ೦ಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ : ಮೊದಲು ಹೆಸರುಬೇಳೆಯನ್ನು ತೊಳೆದು 2 ಗಂಟೆಗಳ ಕಾಲ ನೆನೆಸಿಡಿ. ಬೀಟ್ ರೂಟ್ ಅನ್ನು ಸಿಪ್ಪೆ ತೆಗೆದು ದಪ್ಪಗೆ ತುರಿದುಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ. ಕಾದ ಎಣ್ಣೆಗೆ ಸಾಸಿವೆ, ಜೀರಿಗೆ, ಕಡಲೆಬೇಳೆ, ಕರಿಬೇವು ಹಾಕಿ ಬಾಡಿಸಿ.
ಅನಂತರ ಇದಕ್ಕೆ ತುರಿದ ಬೀಟ್‌ರೂಟ್ ಮತ್ತು ಅರಿಶಿನ, ಉಪ್ಪು, ನೆನೆಸಿದ ಹೆಸರುಬೇಳೆಯನ್ನು ಹಾಕಿ ಮಂದ ಉರಿಯಲ್ಲಿ ಸ್ವಲ್ಪ ನೀರನ್ನು ಹಾಕಿ ಬೀಟ್‌ರೂಟ್ ಮೆತ್ತಗಾಗುವವರೆಗೂ ಬೇಯಿಸಿ, ಕೊನೆಯದಾಗಿ ಹಸಿತೆ೦ಗಿನತುರಿ, ಕೊತ್ತಂಬರಿ ಸೊಪ್ಪನ್ನು ಹಾಕಿ 5 ನಿಮಿಷ ಬೇಯಿಸಿದರೆ ರುಚಿಯಾದ ಬೀಟ್‌ರೂಟ್ ಪಲ್ಯ ಸಿದ್ಧ. ಇದನ್ನು ಚಪಾತಿ, ಅನ್ನದ ಜೊತೆ ತಿನ್ನಲು ರುಚಿಯಾಗಿರುತ್ತದೆ.






Leave a Reply