ಪುನರ್ಜನ್ಮ
– ಆಂಗ್ಲಮೂಲ: ಪವನೇಶಣ ದಾಸ, ಅನುವಾದ: ಎಂ.ಕೆ. ಗೋಪಿನಾಥ್
ವೈದಿಕ ಸಂಸ್ಕೃತಿ ಹಾಗೂ ಕೃಷ್ಣಪ್ರಜ್ಞಾ ಚಳವಳಿಗಳಿಗೆ ಅಡಿಪಾಯವಾಗಿ ನಿಂತಿರುವ ತತ್ತ್ವಶಾಸ್ತ್ರೀಯ ಗ್ರಹಿಕೆಗಳ ಬಗೆಗೆ ಈ ಲೇಖನಮಾಲೆ ಕ್ರಮಬದ್ಧ ವಿವರಣೆ ನೀಡುತ್ತಿದೆ.

ಭಾಗ 1: ಪುನರ್ಜನ್ಮ ಎಂಬ ಪದವು ಇತ್ತೀಚೆಗೆ ಜನಪ್ರಿಯತೆ ಗಳಿಸಿದೆ, ಬಹುತೇಕ ಎಲ್ಲ ಜನರಿಗೆ ಈ ಶಬ್ದವು ನಿಗೂಢತೆಯ ಹಾಗೂ ಪರಕೀಯತೆಯ ಭಾವವನ್ನು ಮುಟ್ಟಿಸುತ್ತದೆ. ಹಿಪ್ಪಿಗಳಿಂದ ಹಿಡಿದು ಭಾರತೀಯ ಯೋಗಿಗಳವರೆಗೆ ಹಾಗೂ ಸ್ವಾಮಿಗಳಿಂದ ಹಿಡಿದು ಆಧುನಿಕ ಚಿಂತಕರವರೆಗೆ ಎಲ್ಲರೂ ಪುನರ್ಜನ್ಮದ ಕಲ್ಪನೆಯನ್ನು ಮುಂದು ಮಾಡಿದ್ದಾರೆ.
ಬಹುತೇಕ ಕ್ರೈಸ್ತ ಇಗರ್ಜಿಗಳು ಪುನರ್ಜನ್ಮದಲ್ಲಿನ ನಂಬಿಕೆಯನ್ನು ತಿರಸ್ಕರಿಸಿವೆಯಾದರೂ ಇತ್ತೀಚಿನ ಅಭಿಪ್ರಾಯ ಸಮೀಕ್ಷೆಗಳು ತೋರಿಸುವಂತೆ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ದಶಲಕ್ಷಗಟ್ಟಲೆ ಜನರು ಪುನರ್ಜನ್ಮವು ಒಂದು ವಾಸ್ತವ ಸಂಗತಿ ಎಂದು ಒಪ್ಪಿಕೊಳ್ಳುತ್ತಾರೆ.
ಪುನರ್ಜನ್ಮದ ಕಲ್ಪನೆಯ ಜನಪ್ರಿಯತೆ ಹೆಚ್ಚೇ ಆಗಿದ್ದರೂ ಬಹುಜನರ ಪಾಲಿಗೆ ಅದೊಂದು ಅಸ್ಪಷ್ಟ ಗ್ರಹಿಕೆಯೇ ಆಗುಳಿದಿದೆ; ಪುನರ್ಜನ್ಮದಲ್ಲಿ ನಂಬಿಕೆಯುಳ್ಳ ಜನರ ಜೀವನದ ಮೇಲೂ ಅಂಥ ಪ್ರಭಾವವನ್ನು ಈ ನಂಬಿಕೆ ಬೀರಿಲ್ಲ. ಪೂರ್ವಜನ್ಮ ಎಂದರೆ (ಸತ್ತ ಬಳಿಕ) ಇನ್ನಾರೋ ಆಗಿ ಪುನಃ ಜನಿಸುವುದು ಎನ್ನುವ ಸಾಮಾನ್ಯ ನಂಬಿಕೆಗೆ ಅರ್ಥ ಸ್ಪಷ್ಟತೆ ಸಾಲದಿದೆ. ಅಲ್ಲದೆ ಈ ನಂಬಿಕೆ ಅನೇಕ ಹುಸಿ ಅಭಿಪ್ರಾಯಗಳಿಗೆ ಎಡೆ ಮಾಡಿಕೊಡುತ್ತದೆ.
ನಮ್ಮ ನೈಜ ಅನನ್ಯತೆ ಯಾವುದು ಹಾಗೂ ಜಡ – ಚೇತನಗಳಿಗೆ ಇರುವ ವ್ಯತ್ಯಾಸ ಏನು ಎಂಬ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳದೆ ಪುನರ್ಜನ್ಮದ ನಿಜವಾದ ಅರ್ಥವನ್ನು ಗ್ರಹಿಸುವುದು ಸಾಧ್ಯವಿಲ್ಲ. ಪ್ರತಿ ಜೀವಿಯೂ ಒಂದು ಚೇತನಾತ್ಮ ಹಾಗೂ ಆ ಜೀವಿಯು ತನ್ನ ದೇಹಕ್ಕಿಂತ ಬೇರೆಯಾದವನು ಅಥವಾ ಆದದ್ದು.
ದೇಹ ಹಾಗೂ ಆತ್ಮಗಳ ನಡುವೆ ಇರುವ ಸಂಬಂಧವು ಒಂದು ಕಾರ್ ಮತ್ತು ಅದರ ಚಾಲಕನ ನಡುವೆ ಇರುವ ಸ೦ಬ೦ಧದಂತೆಯೇ ಇರುತ್ತದೆ. ಕಾರಿನ ಚಾಲಕನು ನಿರ್ಧರಿಸಿಕೊಳ್ಳುವ ಒಂದು ಗುರಿಯನ್ನು ಪೂರೈಸಲು ಕಾರ್ ಒಂದು ಉಪಕರಣ. ಕಾರ್‌ಗೆ ಸಂಬಂಧವಿಲ್ಲದಂತೆಯೇ ಅದರ ಚಾಲಕ ಸ್ವತಂತ್ರವಾಗಿರುತ್ತಾನೆ. ಆದರೆ ಚಾಲಕನಿಲ್ಲದ ಕಾರ್ ಕೇವಲ ಲೋಹದ ಒಂದು ತುಂಡಷ್ಟೆ.
ಈ ನಿರ್ಣಯವು ಆಧ್ಯಾತ್ಮಿಕ ಜೀವನದ ಮೊದಲ ಮೆಟ್ಟಿಲು, ಮತ್ತು ಇಲ್ಲಿಂದ ಆರಂಭಿಸಿ ನಾವು ಪುನರ್ಜನ್ಮವನ್ನು ಪರೀಕ್ಷಿಸಬಹುದು. ಮೊದಲಿಗೆ ನಾವು ಪುನರ್ಜನ್ಮದ ಬಗೆಗೆ ಮೇಲಿಂದ ಮೇಲೆ ಕೇಳಲಾಗುವ ಕೆಲವು ಪ್ರಶ್ನೆಗಳನ್ನು ವಿಮರ್ಶೆಗೆ ಎತ್ತಿಕೊಳ್ಳೋಣ.
ಪ್ರಶ್ನೆ: ಇನ್ನೊಬ್ಬ ವ್ಯಕ್ತಿಯಾಗಿ ನಾನು ಪುನಃ ಹುಟ್ಟಬಹುದೆ?
ಉತ್ತರ: ‘ನಾನು” ಎಂಬ ಶಬ್ದಕ್ಕೆ ನೀವು ಏನು ಅರ್ಥ ಹಚ್ಚುತ್ತೀರಿ ಎಂಬುದರ ಮೇಲೆ ನೀವು ಪುನಃ ಹುಟ್ಟುವುದು ನಿ೦ತಿದೆ. ನಿಜವಾದ “ನಾನು” ನಿಮ್ಮ ಆತ್ಮ. ಅವನು ನಿಜವಾದ ವ್ಯಕ್ತಿ ಮತ್ತು ಆತ ಎಂದಿಗೂ ಬದಲಾಗುವುದಿಲ್ಲ. ಆದರೆ ಆತ್ಮವು ದೇಹಗಳನ್ನು ಬದಲಾಯಿಸಿಕೊಳ್ಳುತ್ತಾ ಹೋಗುತ್ತದೆ ಮತ್ತು ಆತ್ಮವು ಈ ದೇಹಗಳ ಜೊತೆ ತನ್ನನ್ನು ಗುರುತಿಸಿಕೊಳ್ಳುತ್ತದೆಯಾದ್ದರಿಂದ ಲೌಕಿಕ ದೃಷ್ಟಿಯಲ್ಲಿ ಆತ್ಮವು ಹೊಸ ವ್ಯಕ್ತಿಯಾಗುತ್ತದೆ.
ಪ್ರಶ್ನೆ : ನಾನು ಮುಂದಿನ ಜನ್ಮದಲ್ಲಿ ಏನಾಗಿ ಹುಟ್ಟುತ್ತೇನೆ ಎನ್ನುವುದನ್ನು ಹೇಗೆ ನಿರ್ಧರಿಸಲಾಗುತ್ತದೆ?
ಉತ್ತರ : ಅದನ್ನು ನಿಮ್ಮ ಕಾರ್ಯಗಳಿಂದ ನೀವೇ ನಿರ್ಧರಿಸುತ್ತೀರಿ. ಈ ಮಾತನ್ನು ಭಗವದ್ಗೀತೆಯಲ್ಲಿ (8.6) ಸ್ಪಷ್ಟವಾಗಿ ವಿವರಿಸಲಾಗಿದೆ.
ಓ ಕುಂತೀಪುತ್ರ, ವ್ಯಕ್ತಿಯು ದೇಹ ತೊರೆಯುವ ಹೊತ್ತಿನಲ್ಲಿ ಯಾವ ಭಾವಾವಸ್ಥೆಯನ್ನು ಸ್ಮರಿಸಿಕೊಳ್ಳುವನೋ ಮರಣಾನಂತರ ಅದೇ ಅವಸ್ಥೆಯನ್ನು ಹೊಂದುವನು. ಇದು ತಪ್ಪದು.
ಮರಣ ಕಾಲದಲ್ಲಿ ನೀವೇನು ಸ್ಮರಿಸುತ್ತೀರಿ ಎಂಬುದು ನಿಮ್ಮ ಇಡೀ ಜೀವಿತದ ಕಾಲದಲ್ಲಿ ನೀವು ಮಾಡಿದ ಕಾರ್ಯಗಳು, ನೀವು ಆಲೋಚಿಸಿದ ವಿಚಾರಗಳು ಹಾಗೂ ಮನಸ್ಸಿಗೆ ತಂದುಕೊಂಡ ಅಪೇಕ್ಷೆಗಳು – ಈ ಮೂರರ ಫಲರೂಪವಾಗಿರುತ್ತದೆ. ವೈದಿಕ ಸಾಹಿತ್ಯದ ಪ್ರಕಾರ ಸೃಷ್ಟಿಯಲ್ಲಿ 84,00,000 ಬಗೆಯ ಜೀವಜಾತಿಗಳಿವೆ. ಚೇತನಾತ್ಮರಾದ ನೀವು ನಿಮ್ಮ ಈಗಿನ ಬದುಕಿನ ಕಾರ್ಯಚಟುವಟಿಕೆಗಳು ಹಾಗೂ ಅಪೇಕ್ಷೆಗಳನುಸಾರ ಒಂದು ನಿರ್ದಿಷ್ಟ ಜೀವ ಜಾತಿಯ ದೇಹವನ್ನು ಸ್ವೀಕರಿಸಬೇಕಾಗುತ್ತದೆ.
ಪ್ರಶ್ನೆ: ನಾನು ಪ್ರಾಣಿದೇಹವನ್ನು ಧರಿಸಬೇಕಾಗಿಲ್ಲವಷ್ಟೆ!
ಉತ್ತರ : ಏಕಿಲ್ಲ? ಪುನರ್ಜನ್ಮ ಪ್ರಾಣಿವರ್ಗಕ್ಕಷ್ಟೆ ಸೀಮಿತವಲ್ಲ. ಒಬ್ಬ ಮನುಷ್ಯ ಹಾಗೂ ಒಂದು ಪ್ರಾಣಿಗೆ ಇರುವ ವ್ಯತ್ಯಾಸ ಬರೀ ದೇಹಕ್ಕೆ ಸಂಬಂಧಿಸಿದ್ದು, ಆದರೆ ಮನುಷ್ಯನ ದೇಹದಲ್ಲಿರುವ ಆತ್ಮಕ್ಕೂ, ನಾಯಿಯ ದೇಹದಲ್ಲಿರುವ ಆತ್ಮಕ್ಕೂ ಏನು ವ್ಯತ್ಯಾಸವಿಲ್ಲ.
ಡಾರ್ವಿನ್ ಹೇಳುವ ಪ್ರಕಾರ ಮನುಷ್ಯನ ರೂಪಕ್ಕೆ ಬರುವತನಕ ಜೀವಿಗಳ ಭೌತ ಶರೀರಗಳು ವಿಕಸನಗೊಂಡವು. ಆದರೆ ಎಲ್ಲ ರೂಪದ ಜೀವಿಗಳು ಸದಾ ಇದ್ದಿವೆ ಮತ್ತು ಆತ್ಮವು ಕೆಳಗಣ ಹಂತದ ಜೀವಜಾತಿಗಳಿಂದ ವಿಕಸಿತ ಜೀವವರ್ಗಗಳ ಹಂತಕ್ಕೆ ವಿಕಸಿಸುತ್ತದೆ ಇಲ್ಲವೆ ಸ್ಥಾನಾಂತರಗೊಳ್ಳುತ್ತಿದೆ, ಅಲ್ಲದೆ ಈ ಪ್ರಕ್ರಿಯೆಯು ಆತ್ಮವು ಮನುಷ್ಯ ದೇಹವನ್ನು ಪ್ರವೇಶಿಸುವ ತನಕ ಮುಂದುವರಿಯುತ್ತದೆಂದು ವೈದಿಕ ಸಾಹಿತ್ಯವು ಹೇಳುತ್ತದೆ.
ನೂರಾರು ಅಥವಾ ಸಾವಿರಾರು ವರ್ಷಗಳ ಹಿಂದೆ ಒಂದು ಉರಗದ್ದೊ, ಮೀನಿನದೊ ಅಥವಾ ಪಕ್ಷಿಯದೋ ದೇಹದಲ್ಲಿದ್ದ ಅದೇ ಆತ್ಮವು (ಅಥವಾ ವ್ಯಕ್ತಿಯು) ಈಗ ನನ್ನ ಅಥವಾ ನಿಮ್ಮ ಮನುಷ್ಯ ದೇಹಗಳಲ್ಲಿ ಜೀವಿಸುತ್ತಿದೆ ಅಥವಾ ಜೀವಿಸುತ್ತಿದ್ದಾನೆ.

ಬರೇ ದೇಹರೂಪವನ್ನು ಲೆಕ್ಕಕ್ಕೆ ಹಿಡಿದರೆ ಪ್ರಾಣಿಗಳಿಗೂ ಮನುಷ್ಯರಿಗೂ ಬಹಳವೇನೂ ವ್ಯತ್ಯಾಸವಿಲ್ಲ. ಪ್ರಾಣಿ ಆಹಾರ ಸೇವಿಸುತ್ತದೆ, ನಾವು ಸೇವಿಸುತ್ತೇವೆ. ಅವು ನಿದ್ರಿಸುತ್ತವೆ, ನಾವೂ ನಿದ್ರಿಸುತ್ತೇವೆ, ಅವು ಮೈಥುನದಲ್ಲಿ ತೊಡಗುತ್ತವೆ, ನಾವೂ ಹಾಗೆಯೇ. ಅವು ತಮ್ಮನ್ನು ರಕ್ಷಿಸಿಕೊಳ್ಳುತ್ತವೆ, ನಾವೂ ನಮ್ಮನ್ನು ರಕ್ಷಣೆ ಮಾಡಿಕೊಳ್ಳುತ್ತೇವೆ.
ಒಬ್ಬ ವ್ಯಕ್ತಿ ನಾಯಿಯಂತೆಯೋ, ಹ೦ದಿಯಂತೆಯೋ ವರ್ತಿಸುತ್ತಿದ್ದಾನೆಂದರೆ ಅವನು ಅವನ ಮುಂದಿನ ಜನ್ಮದಲ್ಲಿ ನಿಶ್ಚಯವಾಗಿ ಆ ಪ್ರಾಣಿಗಳ ರೂಪ ಧರಿಸಬಹುದು.
ಪ್ರಶ್ನೆ: ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಆತ್ಮವು ಪರಕಾಯ ಪ್ರವೇಶ ಮಾಡುತ್ತದೆಯಲ್ಲ, ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಉತ್ತರ: ಅಸ್ತಿತ್ವ ಮೂರು ಸ್ತರಗಳಲ್ಲಿದೆ; ಆತ್ಮ ,ಸೂಕ್ಷ್ಮ ದೇಹ ಹಾಗೂ ಸ್ಥೂಲದೇಹ, ಸೂಕ್ಷ್ಮ ಶರೀರವು ಸ್ಥೂಲ ಶರೀರದೊಳಗಿದೆ ಕೈಗವಸಿನಲ್ಲಿ (ಹ್ಯಾಂಡ್ ಗ್ಲವ್) ಕೈ ಹೇಗೆ ಇರುತ್ತದೋ ಹಾಗೆ.
ಮರಣ ಸಮಯದಲ್ಲಿ ಆತ್ಮ ಹಾಗೂ ಸೂಕ್ಷ್ಮ ಶರೀರ (ಮನಸ್ಸು ಬುದ್ಧಿ ಹಾಗೂ ಮಿಥ್ಯಾಹಂಕಾರ – ಈ ಮೂರು ಸೇರಿ ಸೂಕ್ಷ್ಮಶರೀರ ಆಗಿದೆ) ಸ್ಥೂಲ ದೇಹವನ್ನು (ಇದು ಆಗಿರುವುದು ಭೂಮಿ, ನೀರು, ಅಗ್ನಿ ವಾಯು ಹಾಗೂ ಆಕಾಶ ಇವೆಲ್ಲ ಸೇರಿ) ತ್ಯಜಿಸುತ್ತದೆ. ಸ್ಥೂಲದೇಹದಲ್ಲಿ ಒಟ್ಟು ಸೇರಿದ್ದ ಪಂಚಭೂತಗಳು ಬಳಿಕ ಬೇರಾಗುತ್ತವೆ.
ದೇಹವನ್ನು ತ್ಯಜಿಸಿದ ಬಳಿಕ ಆತ್ಮವು ಸೂಕ್ಷ್ಮಶರೀರದಿಂದ ಹೊತ್ತೊಯ್ಯಲ್ಪಟ್ಟು ಗಂಡಸಿನ ರೇತಸ್ಸಿನ ಒಂದು ಕಣದೊಳಗೆ ಪ್ರವೇಶಿಸಿ ತನ್ನ ಮುಂದಿನ ತಾಯಿಯ ಗರ್ಭವನ್ನು ಪ್ರವೇಶಿಸುತ್ತದೆ.
ಪ್ರಶ್ನೆ : ಈ ಹೊಸ ಬದುಕು ನಿಜವಾಗಿ ಪ್ರಾರಂಭವಾಗುವುದು ಯಾವಾಗ? ಗರ್ಭಪಾತದ ಬಗೆಗಿನ ವಿವಾದ ನನ್ನ ನಿರ್ದಿಷ್ಟ ಲಕ್ಷ್ಯವಾಗಿದೆ.
ಉತ್ತರ: ಮೊದಲಿಗೆ ಆತ್ಮ ಸಾಯಲೇ ಇಲ್ಲ. ಆದ್ದರಿಂದ (ಬದುಕು) ಪ್ರಾರಂಭವಾಗುವ ಪ್ರಶ್ನೆಯೇ ಬರುವುದಿಲ್ಲ. ಆದರೆ ಈ ಬಗೆಗೆ ವೇದಗಳು ಸ್ಪಷ್ಟ ವಿವರಣೆ ನೀಡುತ್ತವೆ.
ಆತ್ಮದ ಹೊಸ ಬದುಕು ಅಥವಾ ಆತ್ಮದ ಹೊಸ ದೈಹಿಕ ಹೊದಿಕೆಯ ಪ್ರಗತಿಯು ಸ್ತ್ರೀ ಗರ್ಭ ಧರಿಸಿದ ಸಮಯದಿಂದ ಆಗುತ್ತದೆಂದು ವೇದಗಳು ತಿಳಿಸಿಕೊಡುತ್ತವೆ. ಆತ್ಮವನ್ನು ಕೊಲ್ಲುವುದು ಅಸಾಧ್ಯ. ಆದರೆ ಲೌಕಿಕ ಜಗತ್ತಿನಲ್ಲಿ ಕೊಲ್ಲುವುದು ಲೌಕಿಕ ದೇಹವನ್ನು ನಾಶಪಡಿಸುವ ಕ್ರಿಯೆಯನ್ನು ಸೂಚಿಸುತ್ತದೆ. ಆದ್ದರಿಂದ ಯಾವುದೇ ಹಂತದಲ್ಲಾಗಲಿ ಗರ್ಭಪಾತವು ನಿಶ್ಚಯವಾಗಿ ಕೊಲೆಯೇ ಹೌದು.
ಪ್ರಶ್ನೆ: ನಾನು ಸಾಯುವ ಸಮಯದಲ್ಲಿ ಇದ್ದಂಥ ಪರಿಸರದಲ್ಲೇ ನಾನು ಪುನಃ ಹುಟ್ಟುತ್ತೇನೆಯೇ?
ಉತ್ತರ : ನೀವು ಯಾವುದೇ ಗ್ರಹಲೋಕದಲ್ಲಾದರೂ ಹುಟ್ಟಬಹುದು.
ಪ್ರಶ್ನೆ: ಆದರೆ ಬೇರೆ ಲೋಕಗಳಲ್ಲಿ ಜೀವಿಗಳೇ ಇಲ್ಲ.
ಉತ್ತರ : ಇದು ನಿಮಗೆ ಶಾಲೆಗಳಲ್ಲಿ ಕಲಿಸಲಾಗಿರುವ ವಿಚಾರ ಆಗಿರಬಹುದು. ಆದರೆ ಈ ಕುರಿತು ಆಲೋಚಿಸಿ: ನೀವು ನೀರಿನಲ್ಲಿ ವಾಸಿಸಲಾರಿರಿ, ಮೀನು ನಿಶ್ಚಯವಾಗಿ ವಾಸಿಸಬಲ್ಲದು. ನೀವು ಭೂಮಿಯ ಒಳಭಾಗದಲ್ಲಿ ಬದುಕಲಾರಿರಿ, ಆದರೆ ಎರೆಹುಳು ಬದುಕಬಲ್ಲದು, ನೀವು ಗಾಳಿಯಲ್ಲಿ ಬದುಕಲಾರಿರಿ, ಪಕ್ಷಿ ಬದುಕಬಲ್ಲದು.
ನಾವು ಬೇರೆ ಲೋಕಗಳಲ್ಲಿ ಬದುಕಲಾರವು ಎಂಬ ಕಾರಣ ಹಿಡಿದು ಅನ್ಯಲೋಕಗಳಲ್ಲಿ ಜೀವಿಗಳಿಲ್ಲ ಎಂದು ಹೇಳುವುದು ‘ನೀರಿನಲ್ಲಿ ಅಥವಾ ಭೂಮಿಯಲ್ಲಿ ಜೀವಿಗಳಿಲ್ಲ, ಯಾಕೆಂದರೆ ನಾವು ಅಲ್ಲಿ ಬದುಕಲಾರೆವು’ ಎಂದು ಹೇಳಿದಂತಾಗುತ್ತದೆ.
ಎಲ್ಲ ಗ್ರಹಗಳಲ್ಲಿಯೂ, ಎಲ್ಲ ಬ್ರಹ್ಮಾಂಡಗಳಲ್ಲೂ ಎಲ್ಲೆಲ್ಲೂ ಜೀವರು ಇದ್ದಾರೆಂದು ವೇದಗಳು ವಿವರಿಸುತ್ತವೆ. ಯಾವುದೋ ಒಂದು ಜೀವಿ ಒಂದು ನಿರ್ದಿಷ್ಟ ಗ್ರಹದಲ್ಲಿದೆ ಎಂದರೆ ಆ ಗ್ರಹದ ಪರಿಸರಕ್ಕೆ ಆ ಜೀವಿ ಹೊಂದಿಕೊಂಡಿದೆ ಎಂಬುದು ಸ್ಪಷ್ಟ. ಒಂದು ನಿರ್ದಿಷ್ಟ ಗ್ರಹಲೋಕದಲ್ಲಿ ಇರಲು ಬೇಕಾದಂಥ ದೇಹವನ್ನು ಪ್ರಕೃತಿಯು ನೀಡುತ್ತದೆ.
ಪ್ರಶ್ನೆ : ಸರಿ ನಾನು ಎಷ್ಟು ಸಲ ಪುನರ್ಜನ್ಮ ತಾಳಬೇಕು ?

ಉತ್ತರ : ಅದು ನಿಮಗೆ ಬಿಟ್ಟದ್ದು ನೀವು ಬಯಸಿದರೆ ಈ ಲೌಕಿಕ ಜಗತ್ತಿನಲ್ಲಿ ನೀವು ಕೊನೆಯಿಲ್ಲದ ಚಕ್ರಾವರ್ತದಲ್ಲಿ ಎಷ್ಟು ಸಲ ಬೇಕಾದರೂ ಪುನರ್ಜನ್ಮ ತಾಳಬಹುದು. ಆದರೆ ಈ ತ್ರಾಸದಾಯಕ ವ್ಯಾಪಾರದಿಂದ ಪಾರಾಗುವ ಅವಕಾಶವನ್ನು ನಮಗೆ ಮಾನವ ಜನ್ಮವು ನೀಡುತ್ತದೆ.
ಪ್ರಶ್ನೆ : ಯಾರೋ ಒಬ್ಬ ಮನುಷ್ಯ ಜೀವಿ ಪುನಃ ಪ್ರಾಣಿಯಾಗಿ ಹುಟ್ಟಿದಾಗ ಏನಾಗುತ್ತದೆ?
ಉತ್ತರ : ಆಗ ಆತ್ಮವು ಉನ್ನತ ಜೀವವರ್ಗಗಳಲ್ಲಿ ವಿಕಸಿತವಾಗುತ್ತಾ ಹೋಗುತ್ತದೆ. ಆತ್ಮ ಮನುಷ್ಯ ರೂಪ ತಾಳುವತನಕ ಈ ವಿಕಸನ ಪ್ರಕ್ರಿಯೆ ಮುಂದುವರಿಯುತ್ತದೆ. ಒಂದು ಪ್ರಾಣಿಯು ತನ್ನ ಕಾರ್ಯಚಟುವಟಿಕೆಗಳಿಗೆ ಹೊಣೆಗಾರಿಕೆ ಉಳ್ಳದ್ದಲ್ಲ. ನೀಚ ಅಥವಾ ಅಧಮ ಜೀವವರ್ಗಕ್ಕೆ ಅದು ತನ್ನನ್ನು ಇಳಿಸಿಕೊಳ್ಳಲಾರದು. ಬೇರೆ ಮಾತುಗಳಲ್ಲಿ ಹೇಳಿದರೆ, ಒಂದು ಹುಲಿ ನಿಮ್ಮನ್ನು ಕೊಂದರೆ ಈ ಕೊಲೆಗೆ ಅದು ಯಾವ ಪ್ರತಿಫಲವನ್ನೂ ಪಡೆಯುವುದಿಲ್ಲ. ಏಕೆಂದರೆ ಕೊಲ್ಲುವುದು ಅದರ ಸ್ವಭಾವ.
ಆದರೆ ಆತ್ಮವು ಮನುಷ್ಯ ರೂಪವನ್ನು ಪಡೆದ ಕೂಡಲೆ, ಆ ಆತ್ಮ ಅಥವಾ ವ್ಯಕ್ತಿಯು ತನ್ನೆಲ್ಲ ಕಾರ್ಯಚಟುವಟಿಕೆಗಳಿಗೆ ತಾನೇ ಹೊಣೆಯಾಗಬೇಕಾಗುತ್ತದೆ. ಬೇರೆ ಮಾತುಗಳಲ್ಲಿ ಹೇಳಿದರೆ, ನೀವು ಆ ಹುಲಿಯನ್ನು ವಿನಾಕಾರಣ ಕೊಂದರೆ, ಅದನ್ನು ಕೊಂದದ್ದಕ್ಕೆ ನೀವು ಪ್ರತಿಫಲ ಪಡೆಯುತ್ತೀರಿ. ಹೀಗೆ ಮನುಷ್ಯ ತನ್ನ ಕಾರ್ಯಗಳಿಂದ ತನ್ನನ್ನು ಹೀನತೆಗೆ ಇಳಿಸಿಕೊಳ್ಳಬಲ್ಲ. ಅದೇ ಒಂದು ಪ್ರಾಣಿಯು ತನಗೆ ತಾನೇ ವಿಕಸಿಸುತ್ತ ಹೋಗುತ್ತದೆ.
ಪ್ರಶ್ನೆ : ಮನುಷ್ಯನನ್ನು ಅವನ ಎಲ್ಲ ಕಾರ್ಯಚಟುವಟಿಕೆಗಳಿಗೆ ಹೊಣೆಗಾರನನ್ನಾಗಿ ಮಾಡುವುದು ಅನುಚಿತ ಎಂದು ತೋರುತ್ತದೆ. ತಮ್ಮ ಕಾರ್ಯಗಳಿಗೆ ತಕ್ಕ ಪ್ರತಿಕ್ರಿಯಾ ರೂಪದ ಫಲಗಳನ್ನು ನಿರ್ಧರಿಸುವ ಸಾರ್ವತ್ರಿಕ ನಿಯಮಗಳು ಬಹುತೇಕ ಜನರಿಗೆ ತಿಳಿದೇ ಇಲ್ಲ.
ಉತ್ತರ : ಅದು ತಿಳಿಯಬೇಕಾದರೆ ಒಂದು ವಿದ್ಯಾವಂತ ಅಥವಾ ಬಲ್ಲಿದ ಸಮಾಜವು ದೇವರು ಮಾಡಿರುವ ನಿಯಮಗಳನ್ನು ಅರಿಯಬೇಕು. ಈ ಬಗೆಗೆ ಸಂಪೂರ್ಣ ಜ್ಞಾನವನ್ನು ಧರ್ಮಗ್ರಂಥಗಳ ರೂಪದಲ್ಲಿ ನೀಡಲಾಗಿದೆ. ಮನುಷ್ಯನಿಗೆ ಮಾರ್ಗತೋರಲೆಂದೇ ವೇದಗಳು ಉದ್ದಿಷ್ಟವಾಗಿವೆ. ನಮ್ಮೆಲ್ಲರನ್ನು ನಿಯಂತ್ರಿಸುವ ಸರ್ವಮಾನ್ಯ ನಿಯಮಗಳನ್ನು ನಾವು ಉಲ್ಲಂಘಿಸಬಾರದೆಂಬುದು ವೇದಗಳ ಗುರಿ.
ದುರ್ದೈವವಶಾತ್ ಈ ಹೊತ್ತು ಮನುಷ್ಯ ಸಮಾಜವು ಎಲ್ಲ ಆಧ್ಯಾತ್ಮಿಕ ಜ್ಞಾನವನ್ನು ತಿರಸ್ಕರಿಸುತ್ತಾ ವಿಜ್ಞಾನ ಹಾಗೂ ತಾಂತ್ರಿಕ ಕ್ಷೇತ್ರಗಳಲ್ಲಿ ಮನುಷ್ಯ ಸಾಧಿಸಿರುವ ಪ್ರಗತಿ ಎಂದು ಕರೆಸಿಕೊಳ್ಳುತ್ತಿರುವ ವಿಚಾರದಲ್ಲಿ ಹೆಮ್ಮೆ ಮೆರೆಯುತ್ತಿದೆ. ಜನ ತಮ್ಮ ಮುಂದಿನ ಜನ್ಮದಲ್ಲಿ ಪ್ರಾಣಿಜೀವನಕ್ಕೆ ಬೀಳುವಂಥ ಸ್ಥಿತಿಗೆ ತರುವ ಪ್ರಗತಿ ಅದೆಂಥದ್ದು?
ವೈದಿಕ ಸಮಾಜದಲ್ಲಿ ಜನಕ್ಕೆ ಆಧ್ಯಾತ್ಮಿಕ ವಿಜ್ಞಾನದಲ್ಲಿ ಶಿಕ್ಷಣ ಕೊಡುವ ಹೊಣೆ ಸಮಾಜದ ಮುಂದಾಳುಗಳ ಮೇಲಿತ್ತು. ಆದರೆ ಆಧುನಿಕ ನಾಯಕರು ಅಂಥದೊಂದು ವಿಜ್ಞಾನ ಇದೆ ಎಂಬುದನ್ನೇ ಅರಿಯರು. ಆದ್ದರಿಂದ ಕೃಷ್ಣಪ್ರಜ್ಞಾ ಚಳವಳಿಯು ವೈದಿಕ ಸಾಹಿತ್ಯವನ್ನು ಪ್ರಕಟಿಸುವ ಮೂಲಕ ಆಧ್ಯಾತ್ಮಿಕ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ.
ಪ್ರಶ್ನೆ: ತಮ್ಮ ಮುಂದಿನ ಜನ್ಮವನ್ನು ನಿರ್ಧರಿಸುವ ನಿಯಮಗಳಿವೆ ಎಂಬುದು ಜನಕ್ಕೆ ತಿಳಿಯದು ಎಂದಾದರೆ, ಹೇಗೂ ಅವರೇ ನಷ್ಟಕ್ಕೆ ಒಳಗಾಗುವುದು ಸರಿಯಲ್ಲ, ಅಲ್ಲವೆ?
ಉತ್ತರ : ಅಜ್ಞಾನ ಇದಕ್ಕೊಂದು ಕಾರಣವಲ್ಲ. ಉದಾಹರಣೆಗೆ ಮಗವೊಂದು ಬೆಂಕಿಯನ್ನು ಮುಟ್ಟಿದರೆ ಆ ಬೆಂಕಿಯು, ”ಓ ನಾನು ಬಿಸಿ ಎಂಬುದು ಈ ಮಗುವಿಗೆ ತಿಳಿಯದು, ನಾನು ಮಗುವಿಗೆ ಬಿಸಿ ತಾಕಿಸುವುದಿಲ್ಲ” ಎಂದು ಆಲೋಚಿಸುವುದಿಲ್ಲ, ಬೆಂಕಿ ಸುಡುತ್ತದೆ ಎಂಬುದು ನಿಮಗೆ ಗೊತ್ತಿರಲಿ, ಗೊತ್ತಿಲ್ಲದಿರಲಿ ಅದಂತೂ ಸುಡುತ್ತದೆ. ಆದ್ದರಿಂದ ಯಾತನೆಯಿಂದ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗವೆಂದರೆ ಅದು ಆಧ್ಯಾತ್ಮಿಕ ಶಿಕ್ಷಣದ ಮೂಲಕ.
ಪ್ರಶ್ನೆ : ಆದರೂ ಈ ಇಡೀ (ಪುನರ್ಜನ್ಮ ಕ್ರಿಯೆಯೆ) ರೀತಿಯೇ ಕ್ರೂರವಾಗಿದೆ ಎಂದು ನನಗೆ ತೋರುತ್ತದೆ. ಅಲ್ಲದೆ ಪುನರ್ಜನ್ಮದ ಈ ಕೊನೆಯಿಲ್ಲದ ಚಕ್ರಾವರ್ತದಲ್ಲಿ ನನಗೆ ಅರ್ಥ ಕಾಣುತ್ತಿಲ್ಲ.
ಉತ್ತರ : ಇಲ್ಲ ಈ ವ್ಯವಸ್ಥೆ ಕ್ರೂರವಾಗಿಲ್ಲ. ಜೀವಿಯು ತನಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯಾತನೆ ಒಂದು ಪ್ರೇರಕಶಕ್ತಿ. ಐಹಿಕ ಜಗತ್ತು ಯಾತನೆಯ ಸ್ಥಳ.
ಲೌಕಿಕ ಜಗತ್ತಿನಲ್ಲಿನ ಅತ್ಯಂತ ಉನ್ನತ ಗ್ರಹಲೋಕದಿಂದ ಹಿಡಿದು ಅತ್ಯಂತ ಕೆಳಗಿನ ಲೋಕದವರೆಗೆ ಎಲ್ಲವೂ ದುಃಖದ ಸ್ಥಳಗಳೇ, ಅಲ್ಲೆಲ್ಲ ಮೇಲಿಂದ ಮೇಲೆ ಹುಟ್ಟು ಸಾವುಗಳು ಸಂಭವಿಸುತ್ತಿರುತ್ತವೆ. ಆದರೆ ಓ ಕುಂತೀಪುತ್ರ, ಯಾವ ವ್ಯಕ್ತಿಯು ನನ್ನ ಧಾಮಕ್ಕೆ ಬರುತ್ತಾನೋ ಅವನು ಎಂದಿಗೂ ಪುನಃ ಹುಟ್ಟುವುದಿಲ್ಲ. (ಭಗವದ್ಗೀತೆ. 8.16)
ಲೌಕಿಕ ಜಗತ್ತು ಸ್ವಭಾವತಃ ಸಂತೋಷಕರ ಸ್ಥಳವಲ್ಲ ಎಂಬುದನ್ನು ಮೇಲಿನ ಶ್ಲೋಕ ವರ್ಣಿಸುತ್ತದೆ. ಇಲ್ಲಿ ಸುಖವಿದ್ದರೂ ಕೂಡ ಅದು ತತ್ಕಾಲದ್ದು; ಬಹುಕಾಲ ಇರುವಂಥದಲ್ಲ. ಅಲ್ಲದೆ ನಮ್ಮ ದುಃಖವನ್ನು ನಾವೇ ತಂದುಕೊಳ್ಳುತ್ತೇವೆ. ತಮ್ಮ ದುಃಖಕ್ಕೆ ದೇವರನ್ನು ದೂಷಿಸಲು ಬಹಳ ಜನ ಇಷ್ಟಪಡುತ್ತಾರೆ. ಆದರೆ ದುಃಖವಿಲ್ಲದ ಆಧ್ಯಾತ್ಮಿಕ ಜಗತ್ತಿಗೆ ನಾವು ಹಿ೦ತಿರುಗಬೇಕೆಂದು ದೇವರು ಬಯಸುತ್ತಾನೆ.
ಈ ಲೌಕಿಕ ಜಗತ್ತು ನಮ್ಮ ಮನೆಯಲ್ಲ, ಭೂಮಿಯ ಮೇಲೆ ಬದುಕುತ್ತಿರುವ ಮೀನಿನಂತೆ ನಮ್ಮ ಅವಸ್ಥೆ ಆಗಿದೆ. ಆ ಮೀನಿಗೆ ನೀವು ಟಿ.ವಿ. ನೀಡಬಹುದು, ಕೆಡಿಲಾಕ್ ಕಾರ್ ಕೊಡಬಹುದು, ಚಿತ್ರವಿಚಿತ್ರ ಮನೆ ನೀಡಬಹುದು. ಆದರೆ ಮೀನಿಗೆ ಬೇಕಾದ್ದು ನೀರು. ಭೂಮಿಯ ಮೇಲೆ ಸಿಗುವ ಸಕಲ ಸೌಲಭ್ಯಗಳಿಗೂ ಮೀನು ಲಕ್ಷ್ಯ ನೀಡುವುದಿಲ್ಲ. ಅದೇ ರೀತಿ ಲೌಕಿಕ ಜಗತ್ತಿನಲ್ಲಿ ಸಿಗುವ ತತ್ಕಾಲದ ಸುಖ ನಮಗೆ ಎಂದಿಗೂ ತೃಪ್ತಿ ನೀಡುವುದಿಲ್ಲ. ದುಃಖಕ್ಕೆ ಗುರಿಯಾಗುವುದು ಬದುಕಿನ ಗುರಿ ಸಾಧಿಸಲು ಭಗವದ್ಧಾಮಕ್ಕೆ ಹಿಂತಿರುಗುವುದು – ಪ್ರೇರಣೆ ನೀಡುತ್ತದೆ.
ವ್ಯಕ್ತಿಯೊಬ್ಬನು ಲೌಕಿಕ ಸುಖವನ್ನು ಅನುಭವಿಸುತ್ತಿದ್ದರೆ ಆತನಿಗೆ ಸಾಮಾನ್ಯವಾಗಿ ದೇವರ ಕಡೆ ಮುಖ ಮಾಡಲು ಕಾರಣ ಕಾಣಿಸುವುದಿಲ್ಲ ದುರ್ದೈವವಶಾತ್ ಅವನ ಸುಖ ಬಹುದೂರ ನಡೆಯದೆಂಬುದು ಅವನಿಗೆ ತಿಳಿಯದು. ಅವನ ಪುಣ್ಯ ಕರ್ಮಗಳ ಫಲವು ಮುಗಿದೊಡನೆ ದುಃಖವು ಮತ್ತೆ ಬರುವುದು ಅದು ಅವನಿಗೆ ಬೇಕಾಗಿಲ್ಲ. ಆದರೂ ಬರುವುದು – ನಿಜವಾದ ಸುಖವನ್ನು ಲೌಕಿಕ ಇಂದ್ರಿಯಗಳ ಮೂಲಕ ಎಂದಿಗೂ ಸಂಪಾದಿಸಲಿಕ್ಕಾಗದು. ಅದನ್ನು ಆಧ್ಯಾತ್ಮಿಕ ರೀತಿಯಲ್ಲಿ ಮಾತ್ರ ಸಾಧಿಸಬಹುದು.

ಪ್ರಶ್ನೆ: ಮೊಟ್ಟ ಮೊದಲಿಗೆ ನಾವು ಈ ಪುನರ್ಜನ್ಮದ ಚಕ್ರಕ್ಕೆ ಹೇಗೆ ಸಿಲುಕಿದೆವು ?
ಉತ್ತರ : ಮೂಲತಃ ಎಲ್ಲ ಜೀವಿಗಳೂ ಆಧ್ಯಾತ್ಮಿಕ ಜಗತ್ತಿನ ಪ್ರಜೆಗಳು. ಅವರಿಗೆ ಒಂದು ಮಟ್ಟದ ಸ್ವಾತಂತ್ರ್ಯವಿದೆ. ಆದರೆ ದೇವರನ್ನು ಬಿಟ್ಟು ತಾವೇ ಎಲ್ಲವನ್ನೂ ಸವಿಯಲು ಪ್ರಯತ್ನಿಸಿದರೆ, ಇಂಥ ಪ್ರಯತ್ನವನ್ನು ಮಾಡಲು ಅವರಿಗೆ ಲೌಕಿಕ ಜಗತ್ತನ್ನು ಸ್ಥಳವನ್ನಾಗಿ ನೀಡಲಾಗುತ್ತದೆ.
ಪ್ರಶ್ನೆ: ದೇವರು ಸರ್ವಶಕ್ತನಾದರೆ ಹೀಗೆ ಮಾಡದಂತೆ ಅವರನ್ನು ತಡೆಯಬಹುದಲ್ಲ! ಅವರನ್ನು ಹೋದ ದಾರಿಗೆ ಬಿಟ್ಟು ಅವರು ದುಃಖಭಾಜನರಾಗುವಂತೆ ಮಾಡುವುದೇಕೆ?
ಉತ್ತರ : ಜೀವಿಗಳಿಗೂ ಕೃಷ್ಣನಿಗೂ ಇರುವ ಸಹಜ ನಂಟೆಂದರೆ ಪ್ರೇಮ. ಪ್ರೇಮವನ್ನು ಹೇರಲಾಗದು. ಅದು ಸ್ವಯಂಪ್ರೇರಣೆಯಿಂದ ನೀಡಬೇಕಾದ್ದು. ಆದ್ದರಿಂದ ಜೀವಿಗಳು ತನ್ನನ್ನು ಪ್ರೇಮಿಸಬೇಕೆಂದು ಬಲವಂತಪಡಿಸಿದರೆ, ಪ್ರೇಮ ಎನ್ನುವ ಶಬ್ದಕ್ಕೆ ಅರ್ಥವಿಲ್ಲದೆ ಹೋಗುತ್ತದೆ.
ಅಥವಾ ಬೇರೆ ಇನ್ನೊಂದು ಉದಾಹರಣೆ ತೆಗೆದುಕೊಳ್ಳೋಣ. ತಾಯಿ-ತಂದೆಯರು ತಮ್ಮ ಮಗುವನ್ನು ಪ್ರೀತಿಸುತ್ತಾರೆ. ಆದರೆ ಅಜ್ಞಾನವಶದಿಂದ ಮಗುವು ಕೆಲವು ಸಲ ಬೆಂಕಿಯನ್ನು ಮುಟ್ಟಬಯಸುತ್ತದೆ. ಮಗುವಿಗೆ ನೀಡಲಾಗುವ ಒಳ್ಳೆಯ ಸಲಹೆಯನ್ನು ಮೀರಿ ಮಗುವು ಬೆಂಕಿಯ ತಂಟೆಗೆ ಹೋದರೆ, ತಾಯಿ ತಂದೆಯರು ಮಗು ಬೆಂಕಿಯನ್ನು ಒಂದು ಸಲ ಮುಟ್ಟಲು ಬಿಡಬಹುದು.
ಈ ಅನುಭವ ಆದ ಅನಂತರ ಮಗುವಿಗೆ ಬೆಂಕಿಯ ವಿಷಯ ಮನದಟ್ಟಾಗಿರುತ್ತದೆ. ಬೆಂಕಿಯನ್ನು ಮುಟ್ಟಲು ಮಗುವನ್ನು ಬಿಡಲು ತಾಯಿತಂದೆಯರು ಬಯಸುವುದಿಲ್ಲ. ಏಕೆಂದರೆ ತಮ್ಮ ಮಗು ಯಾತನೆಗೆ ಸಿಕ್ಕುವುದು ಅವರಿಗೆ ಬೇಡ. ಆದರೆ ಕೆಲವು ಸಲ ಕಲಿಯಲು ಇರುವ ಮಾರ್ಗ ಇದೊಂದೇ.
ಇದೇ ರೀತಿ ಕೃಷ್ಣನು ಅಚ್ಯುತ ಹಾಗೂ ಜೀವಿಗಳು ಚ್ಯುತರು (ತಪ್ಪು ಮಾಡುವವರು) ಆದ್ದರಿಂದ ಕೆಲವು ಜೀವಾತ್ಮರು ಕಲಿಯಲು ಈ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ. ನಮಗೆ ಲೌಕಿಕ ಜಗತ್ತಿನಲ್ಲಿ ಲಕ್ಷಗಟ್ಟಲೆ ಸಲ ಹುಟ್ಟುವುದು ಬಹು ದೀರ್ಘಕಾಲದ ವ್ಯಾಪಾರವಾಗಿ ಕಾಣುತ್ತದೆ. ಆದರೆ ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದರೆ ನಾವು ಇಲ್ಲಿರುವ ಅವಧಿ ಕೇವಲ ಒಂದು ಮೋಡ ಸರಿದು ಹೋದ ಹಾಗೆ.
ನಾವು ನಿರಂತರ ದುಃಖಿಗಳಾಗಿರಲೆಂದು ಕೃಷ್ಣನು ನಮ್ಮನ್ನು ಇಲ್ಲಿಗೆ ಎಸೆಯುವುದಿಲ್ಲ. ಅನಂತ ನರಕ ಎಂಬುದು ಯಾವುದೂ ಇಲ್ಲ. ಇದಕ್ಕೆ ಬದಲಾಗಿ ಸದಾಕಾಲಕ್ಕೂ ಮಹಾಭಕ್ತರಿದ್ದಾರೆ, ಪ್ರವಾದಿಗಳು ಇದ್ದಾರೆ ಹಾಗೂ ದೇವರ ಮಕ್ಕಳು ಇದ್ದಾರೆ; ಇವರೆಲ್ಲ ನಮಗೆ ಮಾರ್ಗದರ್ಶನ ಮಾಡಲು ಇದ್ದಾರೆ ಮತ್ತು ಸ್ವಯಂ ಕೃಷ್ಣನೇ ನಮ್ಮನ್ನು ಪುನರಪಿ ಅವನಲ್ಲಿಗೆ ಕರೆಸಿಕೊಳ್ಳಲು ಮೇಲಿಂದ ಮೇಲೆ ಅವತರಿಸುತ್ತಿರುತ್ತಾನೆ.
ಓ ಭರತಪುತ್ರನೆ, ಎಲ್ಲೆಲ್ಲಿ ಮತ್ತು ಯಾವ ಯಾವ ಸಮಯದಲ್ಲಿ ಧರ್ಮಕ್ಕೆ ಚ್ಯುತಿ ಬರುತ್ತದೋ ಹಾಗೂ ಅಧರ್ಮವು ಪ್ರಮುಖವಾಗಿ ರಾರಾಜಿಸುತ್ತದೆಯೋ ಆ ಹೊತ್ತಿನಲ್ಲಿ ನಾನು ಅವತರಿಸುತ್ತೇನೆ. ಶಿಷ್ಟರನ್ನು ರಕ್ಷಿಸಲು ಹಾಗೂ ದುಷ್ಟರನ್ನು ಶಿಕ್ಷಿಸಲು ಅದರ ಜೊತೆಗೆ ಧರ್ಮತತ್ತ್ವಗಳನ್ನು ಪುನರ್ ಸ್ಥಾಪಿಸಲು ನಾನು ಯುಗ ಯುಗಗಳಲ್ಲಿಯೂ ಹುಟ್ಟಿ ಬರುತ್ತಿರುತ್ತೇನೆ. (ಭಗವದ್ಗೀತೆ, 4.7-8)
ಸ್ವಯಂ ಕೃಷ್ಣನೇ ಈ ಲೋಕದಲ್ಲಿ ಸದಾ ಇರುವುದಿಲ್ಲವಾದರೂ, ಅವನು ವೈದಿಕ ಹಾಗೂ ಇತರ ಅಕೃತಕ ಧರ್ಮಗ್ರಂಥಗಳನ್ನು ನಮಗೆ ಮಾರ್ಗದರ್ಶನ ಮಾಡಲು ಬಿಟ್ಟು ಹೋಗುತ್ತಾನೆ. ಶ್ರೀಮದ್ಭಾಗವತವು (1.3.43) ಹೀಗೆಂದು ಹೇಳುತ್ತದೆ.
ಭಾಗವತ ಪುರಾಣವು ಸೂರ್ಯನಷ್ಟೇ ಪ್ರಖರವಾದದ್ದು. ಭಗವಾನ್ ಕೃಷ್ಣನು ಧರ್ಮಜ್ಞಾನ ಇತ್ಯಾದಿಯ ಜೊತೆ ಸ್ವಧಾಮಕ್ಕೆ ತೆರಳಿದ ಸಮಯದಲ್ಲಿ ಈ ಪುರಾಣ ಹುಟ್ಟಿತು. ಕಲಿಯುಗದಲ್ಲೇ ಅಜ್ಞಾನವೆಂಬ ಕಗ್ಗತ್ತಲೆಯಿಂದಾಗಿ ತಮ್ಮ ದೃಷ್ಟಿಯನ್ನು ಕಳೆದುಕೊಂಡಿರುವ ಜನರು ಈ ಪುರಾಣದಿಂದ ಬೆಳಕು ಪಡೆಯುತ್ತಾರೆ.
ಪ್ರಶ್ನೆ : ಈ ಪುನರ್ಜನ್ಮ ಚಕ್ರದ ಅಂತ್ಯವನ್ನು ಕೊಂಚ ವಿಸ್ತಾರವಾಗಿ ತಿಳಿಸುವಿರಾ?
ಉತ್ತರ : ಈ ಚಕ್ರಾವರ್ತ ನಿಲ್ಲಿಸಲು ಸಾಧ್ಯವಾಗಿಸುವ ಏಕಮಾತ್ರ ಜೀವರೂಪವೆಂದರೆ ಮನುಷ್ಯ ದೇಹ. ಜಡ ಹಾಗೂ ಚೇತನಗಳ ನಡುವಣ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳುವ ಮಟ್ಟಕ್ಕೆ ಪ್ರಜ್ಞೆಯು ಬಂದಿರುವುದು ಮಾನವ ರೂಪ ಒಂದರಲ್ಲಿ ಮಾತ್ರ. ಪ್ರಾಣಿಗಳು ಇದನ್ನು ( ಜಡ – ಚೇತನ ವಿಚಾರ) ಅರ್ಥ ಮಾಡಿಕೊಳ್ಳಲಾರವು. ಪ್ರಾಣಿಗಳ ಬದುಕೇನಿದ್ದರೂ ತಿನ್ನುವುದು, ನಿದ್ರಿಸುವುದು, (ಹೆಣ್ಣು- ಗಂಡು) ಕೂಡುವುದು ಹಾಗೂ ಸ್ವರಕ್ಷಣೆ. ಜೀವನದ ಗುರಿ ಏನೆಂಬುದು ಅವುಗಳಿಗೆ ತಿಳಿಯದು.
ಆದರೆ ಮನುಷ್ಯನು ತಾನು ಮನುಷ್ಯನಾಗಿರುವುದರ ಲಾಭ ಪಡೆಯದೆ, ಅವಕಾಶ ಬಳಕೆ ಮಾಡಿಕೊಳ್ಳದೆ ಆಹಾರ, ನಿದ್ದೆ, ಮೈಥುನ ಹಾಗೂ ಸ್ವರಕ್ಷಣೆಗಳಲ್ಲಿ ನವೀನ ರೀತಿಗಳಲ್ಲಿ ತೊಡಗಿಕೊಂಡರೆ ಅವನು ನವೀನ ರೀತಿಯ ಪ್ರಾಣಿಗಿಂತ ಹೆಚ್ಚಿನವನೇನೂ ಅಲ್ಲ. ಮನುಷ್ಯ ಜೀವನದ ಏಕೈಕ ಗುರಿ ಯಾವುದೆಂದರೆ ವ್ಯಕ್ತಿಯು ತನ್ನ ಮೂಲ ದೈವಪ್ರಜ್ಞೆಯನ್ನು ವರ್ಧಿಸಿಕೊಳ್ಳುವುದು ಹಾಗೂ ಜನನ ಮರಣಗಳ ಚಕ್ರಾವರ್ತದಿಂದ ಹೊರಬಂದು ಭಗವದ್ಧಾಮಕ್ಕೆ ಮರಳುವುದು.
ಈ ಗುರಿಸಾಧನೆಯ ಪ್ರಕ್ರಿಯೆಗೆ ಭಕ್ತಿಯೋಗ ಎಂದು ಹೆಸರು. ಇದು (ಭಕ್ತಿ ಸೇವಾ ಪ್ರಕ್ರಿಯೆ) ವೈದಿಕ ಧರ್ಮಗ್ರಂಥಗಳ ಹಾಗೂ ಸದ್ಗುರು ನೀಡುವ ಆಣತಿಗಳ ಪ್ರಕಾರ ಆಧ್ಯಾತ್ಮಿಕತೆಯ ಹಾದಿಯಲ್ಲಿ ನಡೆವುದನ್ನು ಸಾಧ್ಯವಾಗಿಸುತ್ತದೆ.
ಹೀಗೆ ಮಾಡುವುದರಿಂದ ಲೌಕಿಕ ಪ್ರಕೃತಿಯ ನಿಯಮಗಳಿಗೆ ವ್ಯಕ್ತಿಯು ಬದ್ಧನಾಗಿರಬೇಕಾಗಿರುವುದಿಲ್ಲ. ಲೌಕಿಕ ಪ್ರಕೃತಿಯ ನಿಯಮಗಳು ಲೌಕಿಕ ಜಗತ್ತಿನಲ್ಲಿ ವ್ಯಕ್ತಿಯು ಪರದೇಹ ಪ್ರವೇಶ ಮಾಡುವಂತೆ (ಎಂದರೆ ಪುನರ್ಜನ್ಮದ ಬಾಧೆಗೆ ಒಳಗಾಗುವಂತೆ) ಬಲವಂತಪಡಿಸುತ್ತದೆ






Leave a Reply