– ಆಧಾರ : ಸೀತಾರಾಮ್ ಗುರುಮೂರ್ತಿಯವರ, ಸಂಗ್ರಹಾನುವಾದ : ಚೇತನಾ ತೀರ್ಥಹಳ್ಳಿ
“ವನವಾಸಕ್ಕೆ ಸೀತಾಲಕ್ಷ್ಮಣರ ಸಹಿತ ಹೊರಟ ಶ್ರೀರಾಮ ತನ್ನ ಪಾದಸ್ಪರ್ಶದಿಂದ ಪವಿತ್ರಗೊಳಿಸಿದ ಭೂಭಾಗಗಳಲ್ಲೆಲ್ಲ ಅದರ ಸ್ಮರಣಾರ್ಥ ರಾಮಲಕ್ಷ್ಮಣರು ಸೀತಾ ಶೋಧಕ್ಕೆ ತೆರಳುವ ಮುನ್ನ ದೇವಾಲಯಗಳನ್ನು ನಿರ್ಮಿಸಲಾಗಿದೆ. ಅವುಗಳ ಪರಿಚಯ ಮಾಡಿಸುವ ಅಲ್ಪ ಪ್ರಯತ್ನವಿದು.”
ತಮಿಳುನಾಡು
ಶ್ರೀರಾಮ ಲಕ್ಷ್ಮಣ ಸೀತಾದೇವಿಯರ ವನವಾಸ ಘಟ್ಟದಲ್ಲಿ ದಕ್ಷಿಣ ಪ್ರಸ್ಥಭೂಮಿಯ ಪ್ರದೇಶಗಳು ಸಾಕಷ್ಟು ಮಹತ್ತ್ವ ಪಡೆಯುತ್ತವೆ. ಸೀತಾಪಹರಣದ ಅನಂತರವಂತೂ, ಪತ್ನಿಯ ಶೋಧದಲ್ಲಿ ರಾಮ, ಇಲ್ಲಿನ ಕಾಡುಮೇಡುಗಳಲ್ಲಿ ಇನ್ನಿಲ್ಲದಂತೆ ಅಲೆಯುತ್ತಾನೆ, ದಕ್ಷಿಣಭಾರತದ ಈ ಪ್ರದೇಶಗಳು ಶ್ರೀರಾಮನ ವಿರಹವಿಲಾಪಕ್ಕೆ ಸಾಕ್ಷಿಯಾಗಿವೆ.
ಪೂವಿಝಂತ ನಲ್ಲೂರ್

ಪೂವಿಝಂತ ನಲ್ಲೂರ್, ಕಡೈಲೂರು ಜಿಲ್ಲೆಯ ಚಿದಂಬರಮ್ ಬಳಿ ಇರುವ ಚಿಕ್ಕ ಹಳ್ಳಿ. ಸೀತಾದೇವಿಗಾಗಿ ಹುಡುಕಾಟ ನಡೆಸಿದ್ದ ರಾಮಲಕ್ಷ್ಮಣರು ಈ ಪ್ರದೇಶದಲ್ಲಿ ಆಕೆ ಯಾವಾಗಲೂ ಮುಡಿಯುತ್ತಿದ್ದ ಬಿಳಿ – ಕೆಂಪು ಮಿಶ್ರ ಬಣ್ಣದ ಹೂಗಳು ಬಿದ್ದಿರುವುದನ್ನು ಕಂಡರು. ಈ ಬಗೆಯ ಹೂವುಗಳು ಆ ಪ್ರದೇಶದಲ್ಲಿ ಇಲ್ಲದೇ ಇದ್ದ ಕಾರಣ, ಅವು ಸೀತಾದೇವಿಯದೇ ಎಂದು ತೀರ್ಮಾನಿಸಿದರು, ಮತ್ತು ಆ ದಿಕ್ಕಿನಲ್ಲಿಯೇ ಮುಂದುವರಿಯಲು ನಿರ್ಧರಿಸಿದರು.
ಇಲ್ಲಿ ಶಿವದೇವಾಲಯವೊಂದಿದ್ದು, ರಾಮಲಕ್ಷ್ಮಣರು ಸೀತಾ ಶೋಧಕ್ಕೆ ಮುನ್ನ ಪೂಜೆ ನಡೆಸಿದರೆಂದು ಹೇಳಲಾಗುತ್ತದೆ.
ಉಮಾಯಲ್ ಪುರಮ್

ಉಮಾಯಲ್ ಪುರಮ್, ಕುಂಭಕೋಣಮ್- ನಿಂದ ಕೇವಲ 12ಕಿ.ಮಿ. ದೂರದಲ್ಲಿದೆ. ಕಾವೇರಿ ತೀರದಲ್ಲಿರುವ ಈ ಕ್ಷೇತ್ರವು, ತಂಜಾವೂರಿನಿಂದ ತಿರುವೈಯಾರು ಮಾರ್ಗವಾಗಿ ಕುಂಭಕೋಣಮ್ ನತ್ತ ಸಾಗುವ ಹಾದಿಯಲ್ಲಿದೆ. ಉಮಾಯಲ್ ಪುರಮ್ ಬಳಿ, ‘ಪುಲ್ಲಭೂತಂಗುಡಿ’ ಎನ್ನುವ ದೇಗುಲವೊಂದಿದೆ. ಇದು ಜಟಾಯುವಿನ ಸ್ಮಾರಕ.
ಸೀತೆಯನ್ನು ಹೊತ್ತೊಯ್ಯುತ್ತಿದ್ದಾಗ ಅವಳನ್ನು ರಕ್ಷಿಸುವ ಸಲುವಾಗಿ ಗೃಧ್ರರಾಜ ಜಟಾಯು, ರಾವಣನೊಡನೆ ಹೋರಾಡಿದ. ದುಷ್ಟ ರಕ್ಕಸನ ಖಡ್ಗ ಪ್ರಹಾರಕ್ಕೆ ಅವನ ರೆಕ್ಕೆಗಳು ಕತ್ತರಿಸಿಹೋದವು. ಗಾಯಗೊಂಡ ಜಟಾಯು ರಕ್ತದ ಮಡುವಲ್ಲಿ ಬಿದ್ದ. ಆದರೂ ರಾಮನಾಮ ಜಪಿಸುತ್ತ ಸೀತೆಯ ಸಂಗತಿಯನ್ನು ಅರುಹಲು, ರಾಮಲಕ್ಷ್ಮಣರ ಬರುವಿಕೆಯನ್ನೇ ಕಾಯುತ್ತ ಜೀವ ಹಿಡಿದುಕೊಂಡಿದ್ದ. ಮಾತನಾಡಲೂ ಆಗದ ಸ್ಥಿತಿಯಲ್ಲಿ ಬಿದ್ದಿದ್ದ ಜಟಾಯು, ರಾಮಲಕ್ಷ್ಮಣರನ್ನು ನೋಡುತ್ತಲೇ ದಕ್ಷಿಣ ದಿಕ್ಕಿನತ್ತ ಕೈ ತೋರಿ, ಕೊನೆಯುಸಿರೆಳೆದ.
ಪುಲ್ಲಭೂತಂಗುಡಿಯಲ್ಲಿರುವ ಪೆರುಮಾಳ್ ದೇವಾಲಯವು ಪ್ರಮುಖ 108 ವೈಷ್ಣವ ದೇವಾಲಯಗಳಲ್ಲೊಂದು. ಇಲ್ಲಿ ಶ್ರೀರಾಮ, ‘ಏಲ್ವಿಲ್ ರಾಮನ’ ಎಂದು ಕರೆಯಲ್ಪಡುತ್ತಾನೆ. ಪೆರುಮಾಳದ ಮೂಲವಿಗ್ರಹದಲ್ಲಿ ಜಟಾಯುವಿಗೆ ಮೋಕ್ಷ ಕರುಣಿಸಿದ ಅನಂತರ ಶ್ರೀರಾಮ ಕೈಯಲ್ಲಿ ದರ್ಬೆ ಹಿಡಿದು ಶುಚಿಯಾಗುತ್ತಿರುವಂತೆ ನಿಂತಿದ್ದಾನೆ.
ಉಮಾಯಲಪುರಮ್ನ ಪೂರ್ವ ಗಡಿಭಾಗದಲ್ಲಿ ಶ್ರೀ ಮಂಗಳಮೂರ್ತಿ ವಿನಾಯಕನ ದೇವಾಲಯವಿದೆ. ಈತ, ಇಲ್ಲಿನ ಸ್ಮಶಾನದ ಕಾವಲು ಕಾಯುವ ದೇವತೆ. ಇಲ್ಲಿನ ಸ್ಮಶಾನ ಭೂಮಿ, ಕಾಶಿಯದಕ್ಕಿಂತ ಪವಿತ್ರ ಎಂದು ಪರಿಗಣಿತವಾಗಿದೆ. ಭಕ್ತ ಜಟಾಯುವಿನ ಅಂತ್ಯಕ್ರಿಯೆಯನ್ನು ಸ್ವತಃ ಶ್ರೀರಾಮನೇ ಇಲ್ಲಿ ನೆರವೇರಿಸಿದ್ದರಿಂದಲೇ ಇದಕ್ಕೆ ಇಷ್ಟೊಂದು ಮಹತ್ತ್ವ.
ತಿರುಪುಕುಜಿ

ತಿರುಪುಕುಜಿ, ಗೃಧ್ರ ಸಹೋದರರಾದ ಸಂಪಾತಿ ಮತ್ತು ಜಟಾಯುವಿನ ಜನ್ಮಸ್ಥಾನ. ಇಲ್ಲಿನ ಪ್ರಮುಖ ದೇವತೆ, ಶ್ರೀವಿಜಯರಾಘವ ಪೆರುಮಾಳ್. ಇದು, ಚೆನ್ನೈ- ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆನ್ನೈನಿಂದ 80ಕಿ.ಮೀ ದೂರದಲ್ಲಿದೆ. ಕಾಂಚೀಪುರಮ್ ರೈಲು ನಿಲ್ದಾಣಕ್ಕೆ, ಇಲ್ಲಿಂದ ಕೇವಲ 12ಕಿ.ಮೀ. ಅಷ್ಟೇ.
ಸೀತಾ ಪರಿಶೋಧನೆಗೆ ಹೊರಟಿದ್ದ ರಾಮಲಕ್ಷ್ಮಣರು ತಿರುಪುಕುಜಿಯಲ್ಲಿ ಕೆಲಕಾಲ ನೆಲೆಸಿದ್ದರೆಂದು ಐತಿಹ್ಯವಿದೆ. ಜಟಾಯುವಿನ ಮೋಕ್ಷಾರ್ಥವಾಗಿ, ಶ್ರೀರಾಮ ಈ ಕ್ಷೇತ್ರದಲ್ಲಿ “ಜಟಾಯು ಕೊಳ’ವನ್ನು ನಿರ್ಮಿಸಿದ್ದನೆಂದು ಹೇಳಲಾಗುತ್ತದೆ. ಜಟಾಯುವಿನ ಮಂದಿರ, ಮುಖ್ಯ ದೇವಾಲಯದ ಎದುರು ದಿಕ್ಕಿನಲ್ಲಿದೆ.
ಈ ದೇವಾಲಯವು ಸುಂದರ ಪಾಂಡ್ಯನ್ ಎಂಬ ರಾಜನ ಕಾಲದಲ್ಲಿ ನಿರ್ಮಿಸಲ್ಪಟ್ಟಿತು. ಇದು, 108 ವೈಷ್ಣವ ಕೇಂದ್ರಗಳಲ್ಲಿ ಒಂದಾಗಿದೆ. ಶ್ರೀ ರಾಮಾನುಜಾಚಾರ್ಯರು, ಶ್ರೀಯಾದವ ಪ್ರಕಾಶರ ಬಳಿ ವಿದ್ಯಾಭ್ಯಾಸ ನಡೆಸಿದ ಕ್ಷೇತ್ರವಿದು.
ಕುಂಭಕೋಣಮ್

ಕುಂಭಕೋಣಮ್, ತಂಜಾವೂರು ಜಿಲ್ಲೆಯಲ್ಲಿರುವ ಅತಿ ದೊಡ್ಡ ಪಟ್ಟಣ. ಸುಮಾರು 300ಕ್ಕೂ ಹೆಚ್ಚಿನ ದೇವಾಲಯಗಳು ಇಲ್ಲಿವೆ. ಇಲ್ಲಿನ “ಮಹಾಮಗಮ್’ ಕೊಳದಲ್ಲಿ ಜನರು ಹನ್ನೆರಡು ವರ್ಷಗಳಿಗೊಮ್ಮೆ ಪವಿತ್ರ ಸ್ನಾನ ಮಾಡುತ್ತಾರೆ. ರಾಮಾಯಣಕ್ಕೆ ಸಂಬಂಧಿಸಿದ 2 ಪ್ರಮುಖ ದೇವಾಲಯಗಳು ಕುಂಭಕೋಣಮ್ನಲ್ಲಿವೆ.
ಮಹಾಮಗಮ್ ಕೊಳದ ಉತ್ತರಕ್ಕೆ ಶ್ರೀ ಕಾಶೀ ವಿಶ್ವನಾಥ ದೇವಾಲಯವಿದೆ. ರಾವಣ ಸಂಹಾರಕ್ಕಾಗಿ, ಶ್ರೀರಾಮನು ರುದ್ರಾಂಶವನ್ನು ಹೊಂದಲೆಂದು ಆಗಸ್ತ್ಯ ಮಹರ್ಷಿಗಳನ್ನು ವಿನಂತಿಸಿದಾಗ, ಅವರು ಕುಂಭಕೋಣಮ್ ಗೆ ತೆರಳಿ, ಅಲ್ಲಿ ಕಾಶಿವಿಶ್ವನಾಥನನ್ನು ಪ್ರಾರ್ಥಿಸುವಂತೆ ತಿಳಿಸುತ್ತಾರೆ. ಅದರಂತೆ ಶ್ರೀರಾಮ, ಶಿವನನ್ನು ಪ್ರಾರ್ಥಿಸಿ, ರುದ್ರಾಂಶವನ್ನು ಹೊಂದುತ್ತಾನೆ. ಅಂತೆಯೇ, ಈ ಕ್ಷೇತ್ರವು ಕರೋಣಮ್ (ಕಾಯ ಮತ್ತು ಆರೋಹಣಮ್) ಎಂದು ಕರೆಯಲ್ಪಡುತ್ತದೆ.
ಕುಂಭಕೋಣಮ್ನಲ್ಲಿರುವ ಮತ್ತೊಂದು ದೇವಾಲಯ, ರಾಮಸ್ವಾಮಿ ದೇವಾಲಯ. ಇದು ನಾಯಕ್ಕರ್ ಸಾಮ್ರಾಜ್ಯದ ಉಚ್ಛಾಯ ಕಾಲದಲ್ಲಿ ನಿರ್ಮಾಣಗೊ೦ಡಿತು. ಇಲ್ಲಿ ಶ್ರೀರಾಮ ಸಪರಿವಾರ ಸಮೇತನಾಗಿ ಪೂಜೆಗೊಳ್ಳುತ್ತಾನೆ. ರಾಮಸೀತೆಯರು ಒಂದೇ ಆಸನದಲ್ಲಿ ಮಂಡಿಸಿದ್ದಾರೆ. ಭರತ ಛತ್ರಿಯನ್ನು ಹಿಡಿದಿದ್ದಾನೆ.
ಶತ್ರುಘ್ನ ಚಾಮರ ಬೀಸುತ್ತಿದ್ದಾನೆ. ಲಕ್ಷ್ಮಣ ಕೋದಂಡಪಾಣಿಯಾಗಿ ನಿಂತಿದ್ದಾನೆ. ಎದುರಲ್ಲಿ ಹನುಮಂತ, ಕೈಯಲ್ಲಿ ವೀಣೆ ಹಿಡಿದು, ರಾಮಾಯಣವನ್ನು ಹಾಡುತ್ತ ಕುಳಿತಿದ್ದಾನೆ. ಮೂಲತಃ ಇದು, ಶ್ರೀರಾಮ ಪಟ್ಟಾಭಿಷೇಕದ ಒಂದು ದೃಶ್ಯ.
ರಾಮಸ್ವಾಮಿ ದೇವಾಲಯ ನಿರ್ಮಾಣವಾಗಿದ್ದು ನಾಯಕ್ಕರ್ ಆಡಳಿತ ಅವಧಿಯಲ್ಲಾದರೂ, ಈ ಕ್ಷೇತ್ರಕ್ಕೆ ರಾಮಾಯಣ ಕಾಲದ ಚರಿತ್ರೆಯಿದೆ. ಸೇತುಕ್ಕರೈನಲ್ಲಿ ಸಮುದ್ರಕ್ಕೆ ಸೇತುವೆ ನಿರ್ಮಿಸಲು ವಿಫಲನಾದ ಶ್ರೀರಾಮ ಕೋಪಾವಿಷ್ಟಗೊಂಡು ತನ್ನೆಲ್ಲ ಅಸ್ತ್ರಗಳನ್ನು ಆಹ್ವಾನಿಸಿದ್ದು, ರಾಮಸ್ವಾಮಿ ದೇವಾಲಯವಿರುವ ಸ್ಥಳದಲ್ಲಿಯೇ ಎಂದು ಹೇಳಲಾಗುತ್ತದೆ.
ಪುನ್ನೈ ನಲ್ಲೂರ್

ಪುನ್ನೈ ನಲ್ಲೂರಿನಲ್ಲಿ ಅತಿ ಸುಂದರವಾದ ಶ್ರೀರಾಮ ದೇಗುಲವಿದೆ. ಈ ದೇವಾಲಯ, ರಾಮಾಯಣಕಾಲದ ರಾಮ ಮಂಟಪಕ್ಕೆ ಅತಿ ಸಮೀಪದಲ್ಲಿದೆ. ಈ ಮಂಟಪದಲ್ಲಿ ಶ್ರೀರಾಮನ ಹೆಜ್ಜೆ ಗುರುತುಗಳು ಸಂರಕ್ಷಿತವಾಗಿವೆ. ದೇವಾಲಯದ ಪವಿತ್ರ ಆವರಣದಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತದ ವಿಗ್ರಹಗಳಿವೆ. ಸಾಕಷ್ಟು ಸಂಖ್ಯೆಯ ವೈಷ್ಣವ ಕವಿಗಳು ಇಲ್ಲಿ ಶ್ರೀರಾಮನ ದರ್ಶನ ಪಡೆದಿದ್ದಾರೆ. ವಿವಿಧ ರಾಜ್ಯಗಳ ರಾಜರು ಇಲ್ಲಿಗೆ ಭೇಟಿ ನೀಡಿ, ದೇವಾಲಯದ ಅಭಿವೃದ್ಧಿಗೆ ದೇಣಿಗೆ ನೀಡಿ ಕೃತಾರ್ಥರಾಗಿದ್ದಾರೆ.
ದೇವೀಪಟ್ನಮ್ (ನವಪಾಷಾಣಮ್)

ಉಪ್ಪೂರಿನ ಗಣಪತಿ ದೇವಾಲಯದಲ್ಲಿ ವಿಘ್ನ ನಿವಾರಣೆಗಾಗಿ ಪೂಜೆಸಲ್ಲಿಸಿದ ಶ್ರೀರಾಮ, ನವಗ್ರಹ ಪೂಜೆ ನಡೆಸಿದ್ದು ದೇವೀಪಟ್ಟಣದಲ್ಲಿ. ನವಗ್ರಹಗಳಿಗೆ ಸಂಕೇತವಾಗಿ ಇಲ್ಲಿ ಕಡಲ ತಡಿಯಲ್ಲಿ ಒಂಬತ್ತು ಕಲ್ಲುಗಳು ನಿಂತಿವೆ. ತೀರದಿಂದ ಸಮುದ್ರ ನೀರಿನಲ್ಲಿ ನಿಂತಿರುವ ನವಪಾಷಾಣಮ್ ಗೆ ನಡೆದೇ ಹೋಗಬಹುದು.
ಉಕ್ಕೇರುತ್ತಿದ್ದ ಸಮುದ್ರದ ಅಲೆಗಳನ್ನು ಶ್ರೀರಾಮ ತಡೆದು ನಿಲ್ಲಿಸಿದ್ದು ಇಲ್ಲಿಯೇ. ಹೀಗಾಗಿ, ಇಲ್ಲಿ ಆತ ಕಡಲ್ ಅದ್ವೈತ ಪೆರುಮಾಳ್ (ಸಾಗರವನ್ನು ತಡೆದ ಶ್ರೀವಿಷ್ಣು) ಎಂದು ಪೂಜಿಸಲ್ಪಡುತ್ತಾನೆ. ಅಚ್ಚರಿಯ ವಿಷಯವೆಂದರೆ, ಇಲ್ಲಿ ಸಮುದ್ರದ ತೀರದಲ್ಲಿ ಬಹಳ ದೂರದವರೆಗೂ ನವಪಾಷಾಣಮ್ ಸುತ್ತಮುತ್ತ ಅಲೆಗಳ ಆರ್ಭಟವೇ ಕಾಣದು. ಚಂಡ ಮಾರುತವೇ ಬೀಸಿದರೂ, ಸಮುದ್ರದ ಅಲೆಗಳು ನವಪಾಷಾಣಮ್ ಅನ್ನು ಮುಳುಗಿಸುವ ಸಾಹಸ ಮಾಡಲಾರವು. ಇದು, ಮಹಾವಿಷ್ಣುವಿನ ಮಹಿಮೆ!
ತಿರುಪುಲ್ಲನಿ (ದರ್ಭಾಶಯನಮ್)
ತಿರುಪುಲ್ಲನಿ ಇರುವುದು ರಾಮನಾಥಪುರದಿಂದ 12 ಕಿ.ಮಿ. ದೂರದಲ್ಲಿ. ಶ್ರೀರಾಮನು ಸಮುದ್ರಕ್ಕೆ ಸೇತುವೆ ನಿರ್ಮಿಸಲು ತೆರಳಿದಾಗ, ತನ್ನ ದಿವ್ಯ ಧನುಸ್ಸನ್ನು ಕಣ್ವ ಮಹರ್ಷಿಗಳಿಗೆ ಕೊಟ್ಟು ಹೋದ ಸ್ಥಳ “ದೈವಶಿಲೈಯಾರ್” ಎಂದು ಕರೆಯಲ್ಪಡುತ್ತದೆ. ಇಲ್ಲಿನ ಸ್ನಾನ ಘಟ್ಟಕ್ಕೆ “ಅಧಿಸೇತು” ಎಂದು ಹೆಸರು. ಇದು ತಿರುಪುಲ್ಲನಿಯಿಂದ 2 ಕಿ.ಮೀ. ದೂರದಲ್ಲಿದೆ.
ರಾಮಲಕ್ಷ್ಮಣರು ಸೇತುಬಂಧ ಆರಂಭಿಸಿದಾಗ, ಮೊದಲ ಯತ್ನಗಳಲ್ಲಿ ಸಮುದ್ರರಾಜನ ಅಸಹಕಾರದಿಂದಾಗಿ ವಿಫಲರಾಗಬೇಕಾಯ್ತು. ಇದರಿಂದ ಹತಾಶನಾದ ಶ್ರೀರಾಮ ಅಲ್ಲೇ ಸಮುದ್ರ ತೀರದಲ್ಲಿ ದರ್ಭೆಯ ಚಾಪೆಯ ಮೇಲೆ ಮಲಗಿಬಿಟ್ಟ. ಆಗ ವಿಚಲಿತನಾದ ಸಮುದ್ರರಾಜ ಪ್ರಕಟಗೊಂಡು, ಕೈ ಮುಗಿಯುತ್ತ ತಾನು ಶ್ರೀರಾಮನಿಗೆ ಸಹಕರಿಸುವುದಾಗಿ ಬಿನ್ನವಿಸಿಕೊಂಡ. ಈ ಪ್ರದೇಶವೇ ತಿರುಪುಲ್ಲನಿ.
ಸುಗ್ರೀವನ ಸೈನಿಕರಾದ ವಿಶ್ವಕರ್ಮನ ವಿದ್ಯಾರ್ಥಿ ನಳ ಮತ್ತು ನೀಲರ ಸಹಕಾರದಿಂದ ಸೇತುವೆ ನಿರ್ಮಾಣ ಸಾಧ್ಯವಾಯಿತು.
ಸೇತುಕ್ಕರೈ (ಅಧಿಸೇತು)

ಸೇತುಕ್ಕರೈ, ರಾಮನಾಥಪುರದ ದಕ್ಷಿಣಕ್ಕೆ 13 ಕಿ.ಮೀ. ದೂರದಲ್ಲಿದೆ. ರಾಮ, ಸೇತುವೆ ನಿರ್ಮಿಸಿರುವುದು ಇಲ್ಲೇ. ಸಮುದ್ರದ ಒಳಗಿನ ಈ ಸೇತುವೆಯು ಇಂದಿಗೂ ಬರಿಗಣ್ಣಿಗೆ ಕಾಣುತ್ತದೆ. ಅಲೆಗಳು ಸೇತುವೆ ಗೋಡೆಗಳಿಗೆ ಬಡಿದು ಹಿಂತಿರುಗುವುದನ್ನೂ ಇಲ್ಲಿ ಕಾಣಬಹುದು.
ಬಿಳಿಯ ಕಲ್ಲಿನಿಂದ ಮಾಡಿದ ಅಗಸ್ತ್ಯ ಮಹರ್ಷಿಗಳ ಪುರಾತನ ವಿಗ್ರಹವೊಂದು ಇಲ್ಲಿದೆ. ಸೇತುಕ್ಕರೆ ಮತ್ತು ತಿರುವುಲ್ಲನಿ ಪ್ರದೇಶಗಳು ಮನ್ನಾರ್ ಕೊಲ್ಲಿ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಸೇತುವೆಯ ಮೇಲೆ ಕೊಂಚ ದೂರ ನಡೆದಾಡಲೂಬಹುದು. ಈ ಸೇತುವೆಯ ದಕ್ಷಿಣ ಕರಾವಳಿಯ ಧನುಷ್ಕೋಟಿ ಮತ್ತು ಉತ್ತರ ಶ್ರೀಲಂಕೆಯ ಮನ್ನಾರ್ ನಡುವೆ ಕಟ್ಟಲ್ಪಟ್ಟಿದೆ.
ಇದು ಮನ್ನಾ ಕೊಲ್ಲಿಯಲ್ಲಿ 35 ಕಿ.ಮೀ. ಗಳುದ್ದಕ್ಕೆ ಹರಡಿಕೊಂಡಿದೆ. ಸಮುದ್ರ ತೀರದಲ್ಲಿ ಶುಷ್ಕತೆಯಿದ್ದು, ಎಲ್ಲಿಯೂ 4 ಅಡಿಗಳಿಗಿಂತ ಹೆಚ್ಚಿನ ಆಳ ಕಂಡುಬರುವುದಿಲ್ಲ.
2002ನೇ ಇಸವಿಯ ಅಕ್ಟೋಬರ್ 10ರ “ದ ಹಿಂದೂ ಬಿಸಿನೆಸ್ ಲೈನ್” ಪತ್ರಿಕೆಯಲ್ಲಿ, ರಾಮಸೇತುವಿನ ಪ್ರಾಚೀನತೆಯನ್ನು ಮತ್ತು ಸತ್ಯತೆಯನ್ನು ಪುಷ್ಟೀಕರಿಸುವ ಸುದ್ದಿ ಬಿತ್ತರಗೊಂಡಿತ್ತು. ಅದು ಹೀಗಿದೆ:-
ಇತ್ತೀಚೆಗೆ ನಾಸಾ ಷೆಟಲ್ ನೌಕೆಯು ರಾಮಾಯಣದಲ್ಲಿ ಉಲ್ಲೇಖಿಸಲಾಗಿರುವ ನಿಗೂಢವೂ ಪುರಾತನವೂ ಆದ, ಭಾರತ-ಶ್ರೀಲಂಕಾ ನಡುವಣ ಸೇತುವೆಯೊಂದನ್ನು ಪತ್ತೆ ಹಚ್ಚಿದ. ತಜ್ಞರು, ಇದಕ್ಕೆ ಡಿಜಿಟಲ್ ಇಮೇಜ್ ಸಂಗ್ರಹದಲ್ಲಿ ಸ್ಪಷ್ಟ ಪುರಾವೆ ಇರುವುದಾಗಿ ಹೇಳಿದ್ದಾರೆ. ಈ ಸೇತುವೆಯನ್ನು ‘ಆಡಮ್ಸ್ ಬ್ರಿಜ್’ ಎಂದು ಕರೆಯಲಾಗಿದೆ.
ಇದು, ಭಾರತ- ಲಂಕಾ ನಡುವಿನ ಪಾಕ್ ಜಲಸಂಧಿಯಲ್ಲಿ 30 ಕಿ.ಮೀಗಳುದ್ದಕ್ಕೂ ಬಂಡೆಕಲ್ಲುಗಳ ಜೋಡಣೆಯಿಂದ ಮಾಡಲ್ಪಟ್ಟಿದುದಾಗಿದೆ. ವಿವಿಧ ಪರೀಕ್ಷೆಗಳು ಈ ಸೇತುವೆಯು ಮಾನವ ನಿರ್ಮಿತವೆಂದು ದೃಢಪಡಿಸಿವೆ.
ಪ್ರಚಲಿತವಿರುವ ಕಥೆಗಳು ಮತ್ತು ಭೂಗರ್ಭಶಾಸ್ತ್ರ ಅಧ್ಯಯನಗಳ ಪ್ರಕಾರ, ಶ್ರೀಲಂಕೆಯಲ್ಲಿ 17,50,000 ವರ್ಷಗಳ ಹಿಂದೆಯೇ ಪೂರ್ವಯುಗದ ಮಾನವ ಕಾಣಿಸಿಕೊಂಡಿದ್ದು ದೃಢಪಡುತ್ತದೆ. ಈ ಅಂಶವು ರಹಸ್ಯ ಚರಿತ್ರೆಯಾದ ರಾಮಾಯಣದ ಕಾಲಕ್ಕೆ, ಅಂದರೆ ತ್ರೇತಾಯುಗಕ್ಕೆ ಸರಿಹೊಂದುತ್ತದೆ. (ತ್ರೇತಾಯುಗದ ಕಾಲ – 17 ಲಕ್ಷ ವರ್ಷಗಳಿಗೂ ಹಿಂದೆ)
ರಾಮಾಯಣದಲ್ಲಿ ಶ್ರೀರಾಮನೇ ಮುಂದೆ ನಿಂತು ಭಾರತ ಲಂಕಾನಡುವೆ ಸೇತುವೆ ಕಟ್ಟಿಸಿದುದರ ಸ್ಪಷ್ಟ ಉಲ್ಲೇಖವಿದೆ. ಶ್ರೀರಾಮನನ್ನು ದೇವೋತ್ತಮ ಪರಮ ಪುರುಷನ ಅವತಾರವೆಂದು ಪರಿಗಣಿಸಲಾಗಿದೆ.
(ಮುಂದುವರಿಯುವುದು)






Leave a Reply