ಪುರುಷೋತ್ತಮದಾಸ ಠಾಕುರರು ಶ್ರೀ ನಿತ್ಯಾನಂದ ಪ್ರಭುಗಳ ಪರಮಭಕ್ತರಾಗಿದ್ದರು. ಬಾಲ್ಯದಲ್ಲೇ ಅವರು ತಮ್ಮನ್ನು ತಾವು ಶ್ರೀನಿತ್ಯಾನಂದರ ಚರಣ ಕಮಲಗಳಿಗೆ ಸಮರ್ಪಿಸಿಕೊಂಡಿದ್ದರು. ಅವರ ತಂದೆ ಶ್ರೀ ಸದಾಶಿವ ಕವಿರಾಜರು ಕೂಡ ಒಬ್ಬ ಶ್ರೇಷ್ಠ ಭಕ್ತರಾಗಿದ್ದರು. ವ್ರಜಲೀಲೆಯಲ್ಲಿ ಪುರುಷೋತ್ತಮದಾಸ ಠಾಕುರರು ಹತ್ತನೆಯ ಗೋಪಾಲನಾಗಿದ್ದರೆಂದು ಹೇಳಲಾಗಿದೆ.

ಪುರುಷೋತ್ತಮದಾಸ ಠಾಕುರರು ಮತ್ತು ಅವರ ತಂದೆ ಸದಾಶಿವ ಕವಿರಾಜರು ಮಹಾಭಾಗ್ಯವಂತರು ಎಂದು ಚೈತನ್ಯ ಭಾಗವತದಲ್ಲಿ ವರ್ಣಿಸಲ್ಪಟ್ಟಿದ್ದಾರೆ. ಅವರು ಮೂಲತಃ ವೈದ್ಯ ಕುಲಕ್ಕೆ ಸೇರಿದವರು. ಆದರೆ ತಮ್ಮ ಭಕ್ತಿ ಪರಾಕಾಷ್ಠೆಯಿಂದ ಮಹಾ ವೈಷ್ಣವರಾಗಿ ಬಾಳಿದರು.
ಪುರುಷೋತ್ತಮ ಠಾಕುರರು ಕೆಲಸಮಯ ಸುಖಸಾಗರ ಎಂಬಲ್ಲಿ ನೆಲೆಸಿದ್ದರು. ಅವರು ಹಿಂದೆ ಬೆಲೆಡಂಗ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ದೇವತಾಮೂರ್ತಿಗಳನ್ನು ಅಲ್ಲಿನ ದೇವಾಲಯ ನಾಶವಾದ ಕಾಲಕ್ಕೆ ತಾವಿದ್ದ ಸುಖಸಾಗರ ಗ್ರಾಮದಲ್ಲಿ ಪುನರ್ ಪ್ರತಿಷ್ಠಾಪಿಸಿದರು. ಅಲ್ಲಿನ ದೇವಾಲಯವು ಗಂಗಾ ಪ್ರವಾಹದಲ್ಲಿ ಮುಳುಗಿದಾಗ ಜಾಹ್ನವ ಮಾತಾರ ಅರ್ಚಾಮೂರ್ತಿಗಳೊಂದಿಗೆ ಅವನ್ನೂ ಸಾಹೇಬಸಂಗಬೇಡಿ ಎಂಬ ಗ್ರಾಮದಲ್ಲಿ ಪ್ರತಿಷ್ಠಾಪಿಸಿದರು.

ಆದರೆ, ಅದು ಕೂಡ ಆಕ್ರಮಣಕಾರರಿಂದ ಭಗ್ನಗೊಂಡಾಗ ಚಂದುಡೇ ಗ್ರಾಮಕ್ಕೆ ವರ್ಗಾಯಿಸಿದರು. ಈ ಪ್ರದೇಶವು ಪಲಪಾದದಿಂದ ಒಂದು ಮೈಲು ಅಂತರದಲ್ಲಿದೆ. ಪ್ರಸ್ತುತ ಈ ಅರ್ಚಾಮೂರ್ತಿಗಳು ಇರುವುದು ಇಲ್ಲಿಯೇ.
ಪುರುಷೋತ್ತಮದಾಸ ಠಾಕುರರ ಪತ್ನಿಯ ಹೆಸರು ಜಾಹ್ನವ ದೇವಿ. ಅವರ ಪುತ್ರ ಕನಾಯ್ ಠಾಕುರರು ಕೂಡ ಶ್ರೇಷ್ಠ ಭಕ್ತರಾಗಿದ್ದರು. ಜಾಹ್ನವದೇವಿ ಪರಂಧಾಮಕ್ಕೆ ತೆರಳಿದ ಬಳಿಕ ಶ್ರೀ ನಿತ್ಯಾನಂದ ಪ್ರಭುಗಳ ಪತ್ನಿ ಜಾಹ್ನವ ಮಾತಾ, ಕನಾಯ್ ಠಾಕುರರ ಪಾಲನೆ ಮಾಡಿದರು.
ಸದಾಶಿವ ಕವಿರಾಜ, ಪುರುಷೋತ್ತಮ ಠಾಕುರ ಮತ್ತು ಕನಾಯ್ ಠಾಕುರ ಒಂದೇ ಕುಟುಂಬದ ಮೂರು ತಲೆಮಾರಿನ ಇವರು ಸಂಪೂರ್ಣವಾಗಿ ತಮ್ಮನ್ನು ಪರಮಪ್ರಭುವಿಗೆ, ಆಚಾರ್ಯರ ಪಾದಪದ್ಮಗಳಿಗೆ ಸಮರ್ಪಿಸಿಕೊಂಡು, ಇತರೆಲ್ಲ ಕುಟುಂಬಗಳಿಗೆ ಮಾದರಿಯಾಗಿದ್ದಾರೆ.






Leave a Reply