ರಾಮು – ಸೋಮು

ರಾಮು ಮತ್ತು ಸೋಮು ತುಂಬಾ ತುಂಟ ಹುಡುಗರು. ಅವರು ಏನನ್ನೂ ಕಲಿಯಲಿಕ್ಕೆ ಸಿದ್ಧರಿರಲಿಲ್ಲ. ಅವರ ತಂದೆ ಎಲ್ಲೆಲ್ಲಿಂದಲೋ ಶಿಕ್ಷಕರನ್ನು ಕರೆ ತಂದರು. ಆದರೆ ರಾಮು, ಸೋಮು ಸೇರಿಕೊಂಡು ಏನಾದರೂ ತಂಟೆ ಮಾಡಿ ಅವರನ್ನು ಓಡಿಸುತ್ತಿದ್ದರು.

ಈ ಹುಡುಗರ ತಂದೆ ದೊಡ್ಡ ಶ್ರೀಮಂತರು. ಅವರಿಗೆ ಯಾವಾಗಲೂ ಈ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಹೇಗೇಂಬುದೇ ದೊಡ್ಡ ಚಿಂತೆಯಾಗಿತ್ತು. ಒಂದು ದಿನ ಅವರು, “ನನ್ನ ಮಕ್ಕಳಿಗೆ ಯಾರಾದರೂ ಕಡೆಪಕ್ಷ ಅಂಕಗಣಿತ ಕಲಿಸಿದರೂ ಸಾಕು, ನನ್ನ ಆಸ್ತಿಯಲ್ಲಿ ಅರ್ಧಪಾಲು ಕೊಡುವೆ ಎಂದು ಘೋಷಿಸಿದರು.

ಕೂಡುವುದು – ಕಳೆಯುವುದು ಇವೇ ಮೊದಲಾದ ಸರಳ ಲೆಕ್ಕಾಚಾರವನ್ನಾದರೂ ಕಲಿತರೆ, ಮುಂದಿನ ಜೀವನಕ್ಕೆ ಆಧಾರವಾಗುವುದು ಎಂಬುದು ಅವರ ಯೋಚನೆ.

ಶ್ರೀಮಂತನ ಘೋಷಣೆ ಕೇಳಿದ ವೃದ್ಧ ಶಿಕ್ಷಕರೊಬ್ಬರು ತಾವೇಕೆ ಪ್ರಯತ್ನಿಸಬಾರದು ಎಂದು ಚಿಂತಿಸಿದರು. ಅವರು ತಮ್ಮ ಶಿಕ್ಷಕ ವೃತ್ತಿಯಲ್ಲಿ ಇಂತಹಾ ಸಾಕಷ್ಟು ಪುಂಡ ಹುಡುಗರನ್ನು ದಾರಿಗೆ ತಂದಿದ್ದರು. ಇದರಿಂದಾಗಿ, ಈ ಹುಡುಗರನ್ನು ಸರಿಮಾಡಬಹುದು ಎಂಬ ವಿಶ್ವಾಸ ಅವರದು.

ವೃದ್ಧ ಶಿಕ್ಷಕ ಆ ಮಕ್ಕಳ ಬಳಿ ಬಂದರು. ಅವರೊಡನೆ ಶಿಕ್ಷಕನಂತೆ ಬಿರುಸಾಗಿ ವರ್ತಿಸದೆ ಸ್ನೇಹದಿಂದ ನಡೆದುಕೊಳ್ಳಲು ಅವರು ನಿರ್ಧರಿಸಿದ್ದರು. ಹೀಗಾಗಿ ಅವರು ಹುಡುಗರನ್ನು ಕರೆದುಕೊಂಡು ತೋಟದಲ್ಲಿ ಸುತ್ತಾಡಲು ಹೊರಟರು. ಶಿಕ್ಷಕರು ತೋಟದಲ್ಲಿ ಮೇಯುತ್ತಿದ್ದ ಹಸುವೊಂದನ್ನು ತೋರಿಸುತ್ತಾ “ಸೋಮು, ಆ ಹಸುವಿಗೆ ಕಾಲುಗಳೆಷ್ಟು ಹೇಳು ನೋಡೋಣ” ಎಂದು ಮುದ್ದಿನಿಂದ ಕೇಳಿದರು.

ಸೋಮು ಉತ್ಸಾಹದಿಂದ ಎಣಿಸಲಾರಂಭಿಸಿದ, “ಒಂದು… ಎರಡು…” ಎಂದು ಹೇಳತೊಡಗಿದ. ಶಿಕ್ಷಕರಿಗೆ ತಮ್ಮ ಪ್ರಯತ್ನ ಫಲಿಸಿತು ಎನಿಸಿತು. ಆದರೆ, ಅವರು ಶುರುಮಾಡುವಷ್ಟರಲ್ಲೇ ರಾಮು, ಸೋಮುವಿನ ಬಾಯಿ ಮುಚ್ಚುತ್ತಾ, “ಮುಂದೆ ಹೇಳಬೇಡ! ಅವರು ನಮಗೆ ಎಣಿಸುವುದು ಹೇಗೆಂದು ಕಲಿಸಲು ಹೊರಟಿದ್ದಾರೆ” ಎಂದ!! ಸೋಮು, ತುಟಿ ಬಿಗಿಹಿಡಿದು ನಿಂತ.

ಹೀಗೆಯೇ, ಶ್ರೀಕೃಷ್ಣ ಕೂಡ ನೂರೆಂಟು ರೀತಿಯಿಂದ ನಮಗೆ ಶಿಕ್ಷಣ ನೀಡಲು ಪ್ರಯತ್ನಿಸುತ್ತಾನೆ. ಕೆಲವೊಮ್ಮೆ ತಾನೇ ನೇರವಾಗಿ ಬಂದು ಭಗವದ್ಗೀತೆಯನ್ನು ಬೋಧಿಸುತ್ತಾನೆ. ಮತ್ತೆ ಕೆಲವೊಮ್ಮೆ ಶ್ರೀ ಚೈತನ್ಯ ಮಹಾಪ್ರಭುಗಳಾಗಿ ಅವತರಿಸಿ ನಮಗೆ ಬೋಧಿಸುತ್ತಾನೆ. ಕೆಲವೊಮ್ಮೆ ತನ್ನ ಪ್ರತಿನಿಧಿಗಳನ್ನು ನಮ್ಮ ಬಳಿ ಕಳುಹಿಸುತ್ತಾನೆ. ಆದರೆ ನಾವು ರಾಮು, ಸೋಮುವಿಗಿಂತಾ ಬುದ್ಧವಂತರು. ಈ ಶಿಕ್ಷಣ ಹೊಂದುವುದರಿಂದ ಬಹಳ ಚೆನ್ನಾಗಿ ತಪ್ಪಿಸಿಕೊಳ್ಳುತ್ತೇವೆ.

“ಯಾರು ಅಸೂಯೆಯಿಂದ ಈ ಬೋಧನೆಗಳನ್ನು ಅಲಕ್ಷಿಸುವರೋ ಮತ್ತು ಅವನ್ನು ಅನುಸರಿಸುವುದಿಲ್ಲವೋ ಅವರು ಯಾವ ತಿಳುವಳಿಕೆಯೂ ಇಲ್ಲದವರು. ವಿಮೂಢರು ಎಂದು ಭಾವಿಸಬೇಕು. ಪರಿಪೂರ್ಣತೆಗಾಗಿ ಅವರು ಪಡುವ ಶ್ರಮವೆಲ್ಲ ನಾಶವಾಗುವವು.” (ಭಗವದ್ಗೀತಾ:3-32)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi