ಬ್ರಹ್ಮೋತ್ಸವ ಅತ್ಯಂತ ಪ್ರಮುಖ ಉತ್ಸವ. ಸಾಕ್ಷಾತ್ ಬ್ರಹ್ಮನೇ ಮೊತ್ತ ಮೊದಲ ಬಾರಿಗೆ ತಿರುಪತಿಯಲ್ಲಿ ಉತ್ಸವ ನಡೆಸಿ ಶ್ರೀಮದ್ವೇಂಕಟ ರಮಣನನ್ನು ಅರ್ಚಿಸುವ ಮೂಲಕ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಿದನು. ಅಂದಿನಿಂದ ಎಲ್ಲ ವೈಷ್ಣವ ದೇವಾಲಯಗಳಲ್ಲಿಯೂ ಇದು ನಿಯಮಿತವಾಗಿ ಆಚರಿಸಲ್ಪಡುತ್ತಿದೆ.

ಭಾರತ, ದೇವಾಲಯಗಳ ನಾಡು. ಜಗತ್ತಿನ ಇನ್ಯಾವ ದೇಶಗಳಲ್ಲೂ ಇಲ್ಲಿರುವ ಹಾಗೆ ಆಧ್ಯಾತ್ಮಿಕತೆ ಜೀವನದ ಒಂದು ಭಾಗವೆನ್ನುವಂತೆ ಹಾಸು ಹೊಕ್ಕಾಗಿಲ್ಲ. ಭಾರತದಲ್ಲಿ ದೇವೋತ್ತಮ ಪರಮಪುರುಷ ಶ್ರೀಕೃಷ್ಣ ಮನೆ ಮನೆಗೂ ಚಿರಪರಿಚಿತ. ಇಲ್ಲಿ ಭಗವಂತನು ಅತ್ಯಂತ ಸಹಜವಾಗಿ ನಿತ್ಯವೂ ಪೂಜೆಗೊಳ್ಳುತ್ತಾನೆ.
ನಮ್ಮ ವೈದಿಕ ಶಾಸ್ತ್ರದ ನಿರ್ದೇಶನಗಳನ್ನನುಸರಿಸಿ ಭಗವಂತನ ಅರ್ಚನೆಯನ್ನು ನಡೆಸಿಕೊಂಡು ಬರುತ್ತಿರುವ ಭವ್ಯ ದೇಗುಲಗಳು ದಕ್ಷಿಣ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಇಲ್ಲಿ ಶ್ರೀ ಕೃಷ್ಣನಿಗೆ ಸಂಬಂಧಿಸಿದ ಉತ್ಸವಗಳು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತವೆ. ಆಗಮ ಶಾಸ್ತ್ರದಲ್ಲಿ ಹೇಳಲಾಗಿರುವ ‘ಬ್ರಹ್ಮೋತ್ಸವ’, ಇಂತಹ ವೈಭವದ ಉತ್ಸವಗಳಲ್ಲೊಂದು.
ಸ್ವತಃ ಬ್ರಹ್ಮನೇ ಮೊತ್ತ ಮೊದಲ ಬಾರಿಗೆ ತಿರುಪತಿಯಲ್ಲಿ ಭಗವಾನ್ ಮಹಾವಿಷ್ಣುವಿನ ಉತ್ಸವವನ್ನು ನಡೆಸಿ ‘ಬ್ರಹ್ಮೋತ್ಸವ’ಕ್ಕೆ ಚಾಲನೆ ನೀಡಿದನೆಂದು ಹೇಳಲಾಗುತ್ತದೆ. ಬ್ರಹ್ಮೋತ್ಸವದ ಪ್ರಮುಖ ಅ೦ಗವಾಗಿ, ಇತರ ಪ್ರಮುಖ ದೇವತೆಗಳಾದ ಶಿವ, ಬ್ರಹ್ಮ, ಇ೦ದ್ರ ಮೊದಲಾದವರನ್ನು ಆಹ್ವಾನಿಸಲಾಗುತ್ತದೆ. ಅನಂತರ ಇದು ಏಳರಿಂದ ಹನ್ನೊಂದು ದಿನಗಳ ಕಾಲ ನಡೆಯುತ್ತದೆ.

ವೈದಿಕ ಸಂಸ್ಕೃತಿಯನ್ನು ಅನುಸರಿಸಿ ಬೆಂಗಳೂರು ಇಸ್ಕಾನ್ ದೇವಾಲಯ ಕೂಡ ಪ್ರತಿ ಬೇಸಿಗೆಯಲ್ಲಿ ಬ್ರಹ್ಮೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತದೆ.
ಇಸ್ಕಾನ್ ಸಂಸ್ಥಾಪಕ ಶ್ರೀಲಪಭುಪಾದರು ತಮ್ಮ ದೇವಾಲಯಗಳಲ್ಲಿ ವೈಭವದ ಉತ್ಸವಗಳು ನಡೆಯಬೇಕೆಂದು ಆಶಿಸಿದ್ದರು. ತಮ್ಮ ಶಿಷ್ಯರೊಬ್ಬರಿಗೆ ಬರೆದ ಪತ್ರದಲ್ಲಿ ಅವರು, “ಹಬ್ಬಗಳನ್ನು ಕುರಿತು ಹೇಳುವುದಾದರೆ, ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಹೆಚ್ಚು ಉತ್ಸವಗಳನ್ನು ಹಮ್ಮಿಕೊಳ್ಳಿ” ಎಂದು ಸೂಚಿಸಿದ್ದರು.
ಇನ್ನೂ ಮುಂದುವರಿದು, “ನೀವು ಈ ಬಗೆಯ ಉತ್ಸವಗಳನ್ನು ದಿನವೂ ಹಮ್ಮಿಕೊಳ್ಳುವುದಾದಲ್ಲಿ, ಅದೂ ಇನ್ನೂ ಉತ್ತಮ. ನಮ್ಮ ಚಳವಳಿ ಇರುವುದೇ ಆನ೦ದದ ಅನುಭೂತಿಗಾಗಿ, ಕೇವಲ ಆನಂದಕ್ಕಾಗಿ’ ಎಂದು ತಮ್ಮ ಆಶಯ ವ್ಯಕ್ತಪಡಿಸಿದ್ದರು.

ತಮ್ಮ ಮತ್ತೊಬ್ಬ ಶಿಷ್ಯರಿಗೆ ಬರೆದ ಪತ್ರದಲ್ಲಿ, ” ಉತ್ಸಾಹವನ್ನು ಕಾಯ್ದಿಡಲು ಅತ್ಯುತ್ತಮ ವಿಧಾನವೆಂದರೆ, ಉತ್ಸವಗಳನ್ನು ನಡೆಸುವುದು. ಆಚರಿಸುವುದಾದರೆ ಎಷ್ಟು ಉತ್ಸವಗಳಿವೆಯೆ೦ದರೆ, ನಾನು ನಿಮಗೆ ಪ್ರತಿನಿತ್ಯ ಒಂದನ್ನು ಸೂಚಿಸಬಲ್ಲೆ” ಎಂದು ಅಭಿಪ್ರಾಯಪಟ್ಟಿದ್ದರು.
ಬ್ರಹ್ಮೋತ್ಸವ ಎಂದರೆ, ದೇಗುಲದ ಅತ್ಯಂತ ವೈಭವೋಪೇತ ಮತ್ತು ಅತಿದೊಡ್ಡ ಉತ್ಸವವೆಂದು. ಈ ಉತ್ಸವ ಸಂದರ್ಭದಲ್ಲಿ ಮೂಲ ವಿಗ್ರಹಗಳಿಗೆ ವಿಶೇಷ ಪೂಜೆ ಅರ್ಚನೆ ನಡೆಸಲಾಗುತ್ತದೆ. ಬೆಂಗಳೂರು ಇಸ್ಕಾನ್ ದೇವಾಲಯದಲ್ಲಿ ಬ್ರಹ್ಮೋತ್ಸವ ಸಂದರ್ಭದಲ್ಲಿ ಶ್ರೀ ಶ್ರೀರಾಧಾಕೃಷ್ಣ ಚಂದ್ರರನ್ನು ಪ್ರತಿದಿನವೂ ಬಗೆ ಬಗೆಯ ಅಲಂಕಾರ, ಆಭರಣಗಳಿಂದ ಸಿಂಗರಿಸಿ, ಸುವಾಸನಾಭರಿತ ಪುಷ್ಪಗಳಿ೦ದ ಅರ್ಚಿಸಲಾಗುತ್ತದೆ.
ಬ್ರಹ್ಮೋತ್ಸವ ಆರಂಭವಾಗುವುದು, ಭಗವಂತನ ನಮ್ರ ಭಕ್ತ – ಸೇವಕ ಗರುಡನ ಪೂಜೆಯಿಂದ. ವಿಷ್ಣು ವಾಹನ ಗರುಡನ ಹೆಸರಿನಲ್ಲಿ ನಡೆಯುವ ‘ಗರುಡಯಜ್ಞ’ದಿಂದ ಕಾರ್ಯಕ್ರಮಗಳು ಆರಂಭವಾಗುತ್ತವೆ. ಅದರ ಮುಂದಿನ ಹಂತ, ಉತ್ಸವಕ್ಕಾಗಿ ವಿವಿಧ ದೇವತೆಗಳ ಆವಾಹನೆ, ಪ್ರತಿಯೊಂದು ದೇವತೆಗೂ ನಿರ್ದಿಷ್ಟ ರಾಗ, ಮಂತ್ರಗಳಿಂದ ಆಹ್ವಾನ ನೀಡಲಾಗುತ್ತದೆ.

ಜೊತೆಗೆ ದೇವತೆಗಳಿಗೆ ಶ್ರೀಕೃಷ್ಣ ಪ್ರಸಾದವನ್ನು ಅರ್ಪಿಸಲಾಗುತ್ತದೆ. ಇದರ ಅನಂತರದ ಹೆಜ್ಜೆ, ಗರುಡಧ್ವಜ ಆರೋಹಣ. ಹೀಗೆ ಗರುಡ ಧ್ವಜ ಸ್ತಂಭಕ್ಕೆ ಏರಿತೆಂದರೆ, ಉತ್ಸವ ನಡೆಯುವ ಪ್ರದೇಶದ ಎಲ್ಲರೂ ತಮ್ಮ ಕಾರ್ಯಗಳನ್ನು ನಿಲ್ಲಿಸಿ ಉತ್ಸವಕ್ಕೆ ಬರಬೇಕೆಂದು ಸೂಚನೆ. ಶ್ರೀಕೃಷ್ಣನ ಉತ್ಸವದಲ್ಲಿ ಪಾಲ್ಗೊಳ್ಳುವುದಕ್ಕಿಂತ ಮುಖ್ಯ ಕಾರ್ಯ ಯಾವುದಿದೆ?
ಬ್ರಹ್ಮೋತ್ಸವದ ದಿನಗಳಲ್ಲಿ ಬೆಳಗಿನ ವೇಳೆ ಭಗವ೦ತನಿಗೆ ಯಾವ ಅಲಂಕಾರ ಮಾಡಲಾಗಿರುತ್ತದೆಯೋ, ಸಂಜೆ ಅದಕ್ಕೆ ಸೂಕ್ತವಾದ ವಾಹನದ ಮೇಲೆ ಪ್ರತಿಷ್ಠಾಪಿಸಿ ರಥೋತ್ಸವ ನಡೆಸುವುದು ವಾಡಿಕೆ. ಹೀಗೆ ಸೂರ್ಯ ಪ್ರಭಾ ವಾಹನ, ಗರುಡ ವಾಹನ, ಹನಮದ್ವಾಹನ, ಹಂಸವಾಹನ, ಶ್ವೇತಾಶ್ವ, ಗಜಾರೂಢ, ಅನಂತಶೇಷ, ಕಲ್ಪವೃಕ್ಷ, ಬ್ರಹ್ಮರಥ, ಇತ್ಯಾದಿ ವಾಹನಗಳಲ್ಲಿ ಉತ್ಸವ ನಡೆಸಲಾಗುತ್ತದೆ.
ಇವಲ್ಲದೆ ನವನೀತ ಚೋರ ಅಲಂಕಾರ, ಕಾಳಿಂಗ ಮರ್ದನ ಅಲಂಕಾರ ಮೊದಲಾದವುಗಳನ್ನು ಕೂಡ ಮಾಡಲಾಗುತ್ತದೆ. ಬ್ರಹ್ಮೋತ್ಸವದ ಅಂತಿಮ ದಿನಗಳಲ್ಲಿ ತೆಪ್ಪೋತ್ಸವ ಮತ್ತು ಪುಷ್ಪ ಪಲ್ಲಕ್ಕಿ ಉತ್ಸವಗಳು ನಡೆಯುತ್ತವೆ.

ಬ್ರಹ್ಮೋತ್ಸವದ ಪ್ರಯುಕ್ತ ಅಲಂಕಾರಗಳಲ್ಲಿ ಸೂರ್ಯನಾರಾಯಣ ಅಲಂಕಾರವೂ ಒಂದು. ಶ್ರೀ ಶ್ರೀರಾಧಾಕೃಷ್ಣ ಚಂದ್ರರನ್ನು ಸೂರ್ಯಪ್ರಭಾ ವಾಹನದಲ್ಲಿ ಸ್ಥಾಪಿಸಿ ಮೆರವಣಿಗೆ ನಡೆಸಲಾಗುತ್ತದೆ. ಅಂದು ಭಗವ೦ತನನ್ನು ಸೂರ್ಯನಾರಾಯಣ ರೂಪದಲ್ಲಿ ಸಿಂಗರಿಸಲಾಗಿರುತ್ತದೆ. ಉತ್ಸವದ ವೇಳೆ ಭಕ್ತರು ರಥವನ್ನು ಎಳೆದು ಸೇವೆ ಸಲ್ಲಿಸುವ ಮೂಲಕ ಪಾವನರಾಗುತ್ತಾರೆ.
ಮೆರವಣಿಗೆಯುದ್ದಕ್ಕೂ ಭಜನೆ ಕೀರ್ತನೆಗಳು ಸಾಗಿರುತ್ತವೆ. ಸಂಜೆಯ ರಥೋತ್ಸವದ ಬಳಿಕ ಉತ್ಸವ ಮೂರ್ತಿಗಳಿಗೆ ಕಲಾಸೇವೆ ಅರ್ಪಿಸಲಾಗುತ್ತದೆ. ಬ್ರಹ್ಮೋತ್ಸವದ ಅಷ್ಟೂ ದಿನವೂ ಖ್ಯಾತ ಕಲಾವಿದರು ವಿವಿಧ ಬಗೆಯ ಸಂಗೀತ-ನರ್ತನ ಸೇವೆಗಳಿಂದ ಭಗವಂತನ ಕೃಪಾಶೀರ್ವಾದ ಪಡೆಯುತ್ತಾರೆ.
ಭಗವಾನ್ ಶ್ರೀಕೃಷ್ಣನ ವಿಸ್ತರಣೆಯಾದ ನಾರಾಯಣ ಮತ್ತು ಶ್ರೀಮತಿ ರಾಧಾರಾಣಿಯ ವಿಸ್ತರಣೆಯಾದ ಮಹಾಲಕ್ಷ್ಮಿಯರ ಅಲಂಕಾರ ತೊಡಿಸಿ, ಅಷ್ಟಭುಜ ನಾರಾಯಣ ಅಲಂಕಾರವನ್ನು ಗರುಡ ವಾಹನದ ಮೇಲೆ ಕುಳ್ಳಿರಿಸಿ ಉತ್ಸವ ನಡೆಸಲಾಗುತ್ತದೆ. ಇದು ಬ್ರಹ್ಮೋತ್ಸವದ ವೈಶಿಷ್ಟ್ಯ.

ಭಗವಾನ್ ಶ್ರೀಕೃಷ್ಣನು ತ್ರೇತಾಯುಗದಲ್ಲಿ ಶ್ರೀರಾಮಚಂದ್ರನಾಗಿ ಅವತರಿಸಿದ್ದನು. ಆತನ ಪತ್ನಿ ಶ್ರೀಮತಿ ಸೀತಾದೇವಿ, ಪರಮ ಪ್ರಭುವಿನ ಅವತಾರ ಲೀಲೆಗಳನ್ನು ಸ್ಮರಿಸಿ, ಆನಂದಿಸುವುದು ಭಕ್ತರ ಅತ್ಯಂತ ಪ್ರೀತಿ ಪಾತ್ರ ಕೆಲಸ. ಆದರಂತೆ, ಉತ್ಸವದ ಭಾಗವಾಗಿ ನಡೆಸುವ ಶ್ರೀ ಶ್ರೀ ಸೀತಾರಾಮಚಂದ್ರರ ಅಲಂಕಾರದಲ್ಲಿ ಶ್ರೀರಾಮನ ಮಹಾಭಕ್ತ ಹನುಮಂತನ ಮೇಲೆ ಸ್ಥಾಪಿತರಾಗುತ್ತಾರೆ. ‘ಹನುಮದ್ ವಾಹನ’ದ ಮೇಲೆ ಅಂದಿನ ರಥೋತ್ಸವ ನಡೆಯುತ್ತದೆ.
ಭಗವಾನ್ ಶ್ರೀಕೃಷ್ಣನ ಮತ್ತೊಂದು ಅವತಾರ – ಮೋಹಿನಿ ಅವತಾರ. ಇದು ಭಗವಂತನು ಸಮುದ್ರ ಮಂಥನಾನಂತರದಲ್ಲಿ ದೇವತೆಗಳಿಗೆ ಅಮೃತ ದಕ್ಕಿಸಿಕೊಡಲೆಂದೇ ಎತ್ತಿದ ಅವತಾರ. ಅತ್ಯಂತ ಮೋಹಕ ಸೌಂದರ್ಯದ ಮೋಹಿನಿ ಅಲಂಕಾರದೊಂದಿಗೆ ಶ್ರೀಕೃಷ್ಣನು ಕಂಗೊಳಿಸುತ್ತಾನೆ.
ಸರ್ವಾಲಂಕೃತ ಮೋಹಿನಿ ಮೂರ್ತಿಗೆ ಅಂದು `ಹಂಸವಾಹನ’ದ ಮೇಲೆ ರಥೋತ್ಸವ ನಡೆಯುತ್ತದೆ.
ಕಲಿಯುಗದಲ್ಲಿ ಅಧರ್ಮ ಮಿತಿಮೀರಿದಾಗ ಭಗವಂತನು ಸ್ವತಃ ತಾನೇ ‘ಕಲ್ಕಿ’ ಅವತಾರ ತಳೆದುಬರುವೆನೆಂದು ಹೇಳಿರುವನು. ಭಗವಂತನು ಕಲ್ಕಿಯಾಗಿ ಅವತರಿಸಿ, ದುಷ್ಟರನ್ನು ಸಂಹರಿಸಿ ಶಿಷ್ಟರ ರಕ್ಷಣೆ ಮಾಡಿ ಮತ್ತೆ ‘ಸತ್ಯಯುಗ’ವನ್ನು ಸ್ಥಾಪಿಸುವನು.

ಇದರ ಸಂಸ್ಮರಣೆಯಲ್ಲಿ ಭಗವಾನ್ ಶ್ರೀಕೃಷ್ಣನನ್ನು ‘ಕಲ್ಕಿ’ಯಾಗಿ ಸಿಂಗರಿಸಿ, ‘ಬಿಳಿ ಕುದುರೆ’ ಯ ಮೇಲೆ ಪ್ರತಿಷ್ಠಾಪಿಸಿ ಉತ್ಸವ ನಡೆಸುವರು.
ಬ್ರಹ್ಮೋತ್ಸವದ ಮತ್ತೊಂದು ಅಲಂಕಾರ ರಾಜಾರಾಣಿ ಅಲಂಕಾರ. ಶ್ರೀ ಶ್ರೀ ರಾಧಾಕೃಷ್ಣ ಚಂದ್ರರನ್ನು ‘ರಾಜ ರಾಣಿ ಅಲಂಕಾರ’ ದಿಂದ ಸಿಂಗರಿಸಿ ಗಜವಾಹನದ ಮೇಲೆ ಉತ್ಸವ ನಡೆಸಲಾಗುವುದು. ವಿಶ್ವದ ಅಧಿಪತಿಯಾದ ಶ್ರೀಕೃಷ್ಣನು ತನ್ನ ರಾಣಿ ರಾಧೆಯೊಂದಿಗೆ ಆನೆಯ ಮೇಲೆ ವಿಹರಿಸುವನು.
ಉತ್ಸವದ ಮತ್ತೊಂದು ದಿನ ಶ್ರೀಕೃಷ್ಣನು ಅನಂತ ಶೇಷನಾಗಿಯೂ ರಾಧಾರಾಣಿಯು ಲಕ್ಷ್ಮೀದೇವಿಯಾಗಿಯೂ ಸಿಂಗಾರಗೊಳ್ಳುತ್ತಾರೆ. ಸಂಜೆ ಈ ಲಕ್ಷ್ಮೀನಾರಾಯಣ ಆಲಂಕಾರ ಉತ್ಸವವು ಅನಂತಶೇಷ ವಾಹನದ ಮೇಲೆ ನಡೆಯುತ್ತದೆ. ಅಂದು ಶ್ರೀಕೃಷ್ಣನು ವೈಕುಂಠನಾಥ ಎಂದು ಕರೆಸಿಕೊಳ್ಳುತ್ತಾನೆ.

ಬ್ರಹ್ಮೋತ್ಸವದ ಪ್ರಮುಖ ಕಾರ್ಯಕ್ರಮಗಳಲ್ಲಿ ಕಲ್ಯಾಣೋತ್ಸವ ಕೂಡ ಒಂದು. ವೈದಿಕ ಪದ್ಧತಿಗಳ ಪ್ರಕಾರ ಸಾಂಗೋಪಂಗವಾಗಿ, ಶಾಸ್ರೋಕ್ತವಾಗಿ ಶ್ರೀಕೃಷ್ಣ-ರುಕ್ಮಿಣಿ- ಸತ್ಯಭಾಮೆಯರ ವಿವಾಹವನ್ನು ಆಚರಿಸಲಾಗುತ್ತದೆ. ಬ್ರಹ್ಮೋತ್ಸವದ ಅಷ್ಟು ದಿನ ಶ್ರೀ ಶ್ರೀ ರಾಧಾಕೃಷ್ಣರನ್ನು ಜೋಕಾಲಿಯಲ್ಲಿ ಕುಳ್ಳಿರಿಸಿ ‘ಡೋಲೋತ್ಸವ’ ನಡೆಸಲಾಗುತ್ತದೆ.
ಬ್ರಹ್ಮೋತ್ಸವದ ಕೊನೆಯ ದಿನ ದೇವಾಲಯದ ಮುಖ್ಯ ಅರ್ಚಾ ಮೂರ್ತಿಗಳಾದ ಶ್ರೀ ಶ್ರೀ ರಾಧಾಕೃಷ್ಣರನ್ನು ವಿಶೇಷವಾಗಿ ಅಲಂಕರಿಸಿ ಅರ್ಚಿಸಲಾಗುತ್ತದೆ.
ಅಂದಿನ ಸಂಜೆ ಗರುಡ ಧ್ವಜ ಅವರೋಹಣ ಮಾಡಿ ಉತ್ಸವಕ್ಕೆ ಆವಾಹಿತರಾಗಿದ್ದ ಬ್ರಹ್ಮ ಇತ್ಯಾದಿ ದೇವತೆಗಳನ್ನು ಬೀಳ್ಕೊಡಲಾಗುತ್ತದೆ. ಈ ಸಂದರ್ಭದಲ್ಲಿ ದೇವತೆಗಳಿಗೆ ಕೃಷ್ಣ ಪ್ರಸಾದವನ್ನು ಅರ್ಪಿಸಲಾಗುವುದು. ಅಂದಿನ ರಾತ್ರಿ ಬಗೆ ಬಗೆಯ ಪಟಾಕಿಗಳನ್ನು ಸಿಡಿಸುತ್ತಾರೆ. ದೇವಾಲಯದ ಆವರಣವು ಭಕ್ತರ ಹರ್ಷೋದ್ಗಾರಗಳಿಂದ ತುಂಬಿ ಹೋಗಿರುತ್ತದೆ.







Leave a Reply