ಶ್ರೀನಿತ್ಯಾನಂದ ಪ್ರಭುಗಳ ಪರಮಭಕ್ತರಾಗಿದ್ದ ಶ್ರೀಲ ಅಭಿರಾಮದಾಸ ಠಾಕುರರನ್ನು ಶ್ರೀರಾಮದಾಸ ಎಂದೂ ಕರೆಯಲಾಗುತ್ತಿತ್ತು. ಶ್ರೀ ನಿತ್ಯಾನಂದ ಪ್ರಭುಗಳ ಆದೇಶದ ಮೇರೆಗೆ ಅಭಿರಾಮಠಾಕುರರು ಗೌಡೀಯ ವೈಷ್ಣವ ಪಂಥದ ಪ್ರಮುಖ ಆಚಾರ್ಯ ಮತ್ತು ಭೋದಕರಲ್ಲೊಬ್ಬರಾದರು.
ಅತ್ಯುನ್ನತ ಪ್ರಭಾವಶಾಲಿಯಾಗಿದ್ದ ಠಾಕುರರ ಬಳಿ ಸುಳಿಯಲು ನಾಸ್ತಿಕರು ಭಯಪಡುತ್ತಿದ್ದರು ಮಾತ್ರವಲ್ಲ. ಅವರ ಆಕರ್ಷಣೆಗೆ ಸಿಲುಕಿ, ತಮ್ಮ ಪೊಳ್ಳು ವಾದವನ್ನು ಬಿಟ್ಟುಕೊಟ್ಟು ಆಸ್ತಕರಾಗಿ ಮಾರ್ಪಾಡಾಗುತ್ತಿದ್ದರು. ನಿತ್ಯಾನಂದ ಪ್ರಭುಗಳಿಂದ ಪ್ರೇರಿತರಾಗಿ ಸದಾ ಆನಂದಾನುಭೂತಿಯಲ್ಲಿಯೇ ತಲ್ಲೀನರಾಗಿರುತ್ತಿದ್ದ ಅಭಿರಾಮಠಾಕುರರು ಪತಿತಾತ್ಮಗಳ ಮೇಲೆ ವಿಶೇಷ ಕರುಣೆಯುಳ್ಳವರಾಗಿದ್ದರು.
ಶ್ರೀಲ ಅಭಿರಾಮಠಾಕುರರು ಜೀವಿಸಿದ್ದು ಖಾನಕುಲ ಕೃಷ್ಣನಗರದಲ್ಲಿ ಅವರ ಪತ್ನಿಯ ಹೆಸರು ಶ್ರೀಮತಿ ಮಾಲಿನಿದೇವಿ. ಅವರದು ಭಕ್ತ ವೈಷ್ಣವ ಕುಟುಂಬ. ಒಮ್ಮೆ ಗೋಪಿನಾಥದೇವರು ಅಭಿರಾಮರ ಕನಸಿನಲ್ಲಿ ಬಂದು ತಾನು ಖಾನಕುಲ ಪ್ರಾಂತ್ಯದ ಭೂಗರ್ಭದಲ್ಲಿರುವುದಾಗಿಯೂ, ತನ್ನನ್ನು ಮೇಲೆತ್ತಿ ಪ್ರತಿಷ್ಠಾಪಿಸಬೇಕೆಂದೂ ಹೇಳಿದನು.

ಇದು ತನ್ನ ಭಾಗ್ಯವೆಂದು ಹರ್ಷಿಸಿದ ಠಾಕುರರು ಗೋಪಿನಾಥನು ನಿರ್ದೇಶಿಸಿದ ಸ್ಥಳದಲ್ಲಿ ಉತ್ಖನನ ನಡೆಸಿದನು. ಅಲ್ಲಿ ಅವನಿಗೊಂದು ಸುಮನೋಹರವಾದ ಗೋಪಿನಾಥ ಮೂರ್ತಿಯು ದೊರೆಯಿತು. ಈ ಉತ್ಖನನ ನಡೆದ ಸ್ಥಳದಲ್ಲೀಗ “ರಾಮಕುಂಡ” ಹೆಸರಿನ ಚಿಕ್ಕ ಕೊಳವಿದೆ. ಈ ಕುಂಡದಲ್ಲಿ ಸ್ನಾನ ಮಾಡುವವರು ಜನನ-ಮರಣಗಳಿಂದ ನಿರಂತರ ಚಕ್ರದಿಂದ ಮುಕ್ತರಾಗುವರೆಂದು “ಭಕ್ತಿರತ್ನಾಕರ”ದಲ್ಲಿ ಹೇಳಿದೆ.
ಶ್ರೀ ಅಭಿರಾಮ ಠಾಕುರರು ಸಖ್ಯಭಾವದಲ್ಲಿ ಪರಮಪ್ರಭುವಿನ ಭಕ್ತಿಸೇವೆ ಮಾಡುತ್ತಿದ್ದರು. ಅವರ ಬಳಿ ಒಂದು ಬಾರುಕೋಲಿತ್ತು. ಅದರ ಹೆಸರು “ಜಯಮಂಗಳ” ಎಂದು. ಅದನ್ನು ಸ್ಪರ್ಶಿಸಿದವರು ವಿಶೇಷ ಕೃಷ್ಣಪ್ರೇಮದಿಂದ ಮತ್ತರಾಗಿ ಹೋಗುತ್ತಿದ್ದರು. ಠಾಕುರರು ಉತ್ತಮ ವಿದ್ವಾಂಸರು, ಶಾಸ್ತ್ರಾರ್ಥಗಳನ್ನು ಬಲ್ಲವರೂ ಆಗಿದ್ದರು.
ಶ್ರೀಲ ಅಭಿರಾಮಠಾಕುರರು ವಿಷ್ಣು (ಚೈತ್ರ) ಮಾಸದ ಕೃಷ್ಣಪಕ್ಷದ ಸಪ್ತಮಿ ತಿಥಿಯಂದು ಭಗವದ್ಧಾಮಕ್ಕೆ ತೆರಳಿದರು. ಈ ನಿಮಿತ್ತ ಖಾನಕುಲದ ಕೃಷ್ಣನಗರದಲ್ಲಿ ಇಂದಿಗೂ ಉತ್ಸವವನ್ನು ಆಚರಿಸಲಾಗುತ್ತದೆ.






Leave a Reply