ಶ್ರೀಮದ್ಭಾಗವತದ ನವಮಸ್ಕಂಧ, ಒಂಬತ್ತನೇ ಅಧ್ಯಾಯದಲ್ಲಿ ಶ್ರೀರಾಮಚಂದ್ರನ ಲೀಲೆಗಳನ್ನು ವರ್ಣಿಸಲಾಗಿದೆ. ಈ ಅಧ್ಯಾಯದಲ್ಲಿ ಶ್ರೀರಾಮಚಂದ್ರನ ಪೂರ್ವಜರ ಹೆಸರುಗಳನ್ನು ಹೇಳಲಾಗಿದೆ. ಶ್ರೀರಾಮನ ಜನನ, ಬಾಲ್ಯ, ವಿವಾಹ, ಸೀತಾವಿಯೋಗ, ಲಂಕಾಗಮನ, ರಾವಣ ಸಂಹಾರ ಮತ್ತು ಅಯೋಧ್ಯೆಯ ರಾಜನಾಗಿ ಪಟ್ಟಾಭಿಷಿಕ್ತನಾಗುವವರೆಗಿನ ವಿವರಗಳಿವೆ. ಹತ್ತನೇ ಅಧ್ಯಾಯದಲ್ಲಿ ಶ್ರೀರಾಮಚಂದ್ರನ ಆಡಳಿತದ ವರ್ಣನೆಯಿದೆ. ಅವುಗಳನ್ನು ಸಂಗ್ರಹಿಸಿ ಭಕ್ತಿವೇದಾಂತ ದರ್ಶನದ ಓದುಗರಿಗಾಗಿ ಪುನರ್ನಿರೂಪಿಸಲಾಗಿದೆ.

ತ್ರೇತಾಯುಗ, ಭಗವಾನ್ ಶ್ರೀರಾಮಚಂದ್ರನ ಅವತಾರ ಯುಗ. ಭಗವಂತನು ತನ್ನ ಪೂರ್ಣ ಚತುರ್ಭಾಗ ವಿಸ್ತರಣವಾಗಿ ಶ್ರೀರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನರಾಗಿ ಅವತರಿಸಿ ದುಷ್ಟ ಶಿಕ್ಷಣ, ಶಿಷ್ಟ ರಕ್ಷಣದ ಪಾಠ ಹೇಳಿದನು. ಶ್ರೀರಾಮಾವತಾರದ ಮೌಲ್ಯಗಳು ಹತ್ತು ಹಲವು. ದಶರಥ ಮಹಾರಾಜನ ಕೋರಿಕೆಯ೦ತೆ ವನವಾಸಕ್ಕೆ ತೆರಳುವ ಶ್ರೀರಾಮ ಪಿತೃವಾಕ್ಯ ಪರಿಪಾಲಕನಾಗುತ್ತಾನೆ.
ಸೀತಾದೇವಿಯೊಡನೆ ಆತನ ವ್ಯವಹಾರಗಳು ಆದರ್ಶ ಪತಿಯನ್ನು ಬಿಂಬಿಸುತ್ತವೆ. ಲಕ್ಷ್ಮಣನನ್ನು ವಾತ್ಸಲ್ಯದಿಂದ, ಸಲಹಿ ಭಾತೃ ಪ್ರೇಮ ಮೆರೆದರೆ, ಲಕ್ಷ್ಮಣ, ಭರತ-ಶತ್ರುಘ್ನರು ಶ್ರೀರಾಮನ ಮೇಲಿನ ಭಕ್ತಿ ಗೌರವಗಳಿಂದ ಹಿರಿಯರೊಡನೆ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಮಾದರಿಯಾಗುತ್ತಾರೆ. ಸೀತಾದೇವಿಯಂತೂ ಪರಮಾದರ್ಶ ಪತಿವ್ರತೆಯಾಗಿ ಇಂದಿಗೂ ಪೂಜಿಸಲ್ಪಡುತ್ತಾಳೆ.
ವನವಾಸದುದ್ದಕ್ಕೂ ಶ್ರೀರಾಮ ದುಷ್ಟ ರಾಕ್ಷಸರನ್ನು ಸಂಹರಿಸುತ್ತ, ಭಕ್ತರನ್ನು ಉದ್ಧರಿಸುತ್ತ ಶಾಪಗ್ರಸ್ತರನ್ನು ಮುಕ್ತಗೊಳಿಸುತ್ತ ಸಾಗುತ್ತಾನೆ. ಈ ಸಂದರ್ಭದಲ್ಲಿ ಎದುರಾದ ಹನುಮಂತನಂತೂ ಅಪ್ರತಿಮ ರಾಮಭಕ್ತನಾಗಿ ಜನಪ್ರಿಯನಾಗಿದ್ದಾನೆ.
ಶ್ರೀರಾಮನ ಪೂರ್ವಜರು :
ಸೂರ್ಯವಂಶದ ಅರಸ ಖಟ್ವಾಂಗನ ವಂಶದಲ್ಲಿ ಶ್ರೀರಾಮನ ಅವತಾರವಾಗುತ್ತದೆ. ಖಟ್ವಾಂಗನ ಮಗ ದೀರ್ಘಬಾಹು. ಅವನ ಮಗ, ರಘು, ಹೀಗಾಗಿ ರಾಮನಿಗೆ ರಘುರಾಮ, ರಘುಪತಿ, ರಘುಕುಲತಿಲಕ, ರಾಘವ ಎಂಬ ಹೆಸರುಗಳೂ ಇವೆ. ರಘುವಿನ ಮಗ ಅಜ. ಅವನ ಮಗ ದಶರಥನೇ ಶ್ರೀರಾಮನ ತಂದೆ.
ಬಾಲ್ಯದಿಂದ ಪಟ್ಟಾಭಿಷೇಕದವರೆಗೆ :
ಬಾಲ್ಯದಿಂದಲೂ ಪ್ರಭು ಶ್ರೀರಾಮಚಂದ್ರನು ಅಯೋಧ್ಯೆಯ ಕಣ್ಮಣಿಯಾಗಿ ಬೆಳೆಯುತ್ತಾನೆ. ತನ್ನ ಮೂವರು ಸಹೋದರರೊಂದಿಗೆ ಅತ್ಯಂತ ವಿಶ್ವಾಸದಿಂದ ನಡೆದುಕೊಳ್ಳುತ್ತ ಗುರುಹಿರಿಯಲ್ಲಿ ಗೌರವಾದರ ತೋರುತ್ತ ಹುಣ್ಣಿಮೆ ಚಂದಿರನಂತೆ ವೃದ್ಧಿಸುತ್ತಾನೆ.

ಯೌವನಕ್ಕೆ ಕಾಲಿಟ್ಟ ಶ್ರೀರಾಮ ಲಕ್ಷ್ಮಣರನ್ನು ವಿಶ್ವಾಮಿತ್ರನು ಯಜ್ಞ ಸಂರಕ್ಷಣೆಗೆ ಕರೆದೊಯ್ಯುತ್ತಾನೆ. ಆಗ ರಾಮನು ತಾಟಕಿ, ಸುಬಾಹು ಮೊದಲಾದ ರಕ್ಕಸರನ್ನು ಕೊಲ್ಲುತ್ತಾನೆ. ಅಲ್ಲಿಂದ ವಿಶ್ವಾಮಿತ್ರರೊಡನೆ ಮಿಥಿಲೆಗೆ ತೆರಳಿ, ಹರಧನುವನ್ನು ಮುರಿದು ಸೀತಾದೇವಿಯನ್ನು ವರಿಸುತ್ತಾನೆ.
ಪಟ್ಟಾಭಿಷಿಕ್ತನಾಗಬೇಕಿದ್ದ ಶ್ರೀರಾಮನು ಚಿಕ್ಕ ತಾಯಿ ಕೈಕೇಯಿಯ ಬಯಕೆಯಂತೆ ದಶರಥನ ವಾಗ್ದಾನವನ್ನುಳಿಸುವ ಸಲುವಾಗಿ ವನವಾಸಕ್ಕೆ ಹೊರಡುತ್ತಾನೆ. ಸೀತೆ, ಲಕ್ಷ್ಮಣರು ಅವನನ್ನು ಹಿಂಬಾಲಿಸುತ್ತಾರೆ. ವನವಾಸ ಸಂದರ್ಭದಲ್ಲಿ ಲಂಕೆಯ ದುಷ್ಟ ರಾವಣನು ಸೀತಾದೇವಿಯನ್ನು ಅವಹರಿಸುತ್ತಾನೆ. ಶ್ರೀರಾಮನು ವಾನರರ ನೆರವಿನಿಂದ ಸಮುದ್ರಕ್ಕೆ ಸೇತುವೆ (ರಾಮಸೇತು) ನಿರ್ಮಿಸಿ, ರಾವಣನನ್ನು ಸಂಹರಿಸಿ ಸೀತಾದೇವಿಯನ್ನು ಮರಳಿ ಕರೆತರುತ್ತಾನೆ.
ಪುಷ್ಪಕ ವಿಮಾನದಲ್ಲಿ ಸೀತಾ ಲಕ್ಷ್ಮಣರೊಂದಿಗೆ ಮತ್ತು ಪ್ರಮುಖ ವಾನರರೊಂದಿಗೆ ಆಗಮಿಸುವ ಶ್ರೀರಾಮನಿಗೆ ವಸಿಷ್ಠ ಮಹರ್ಷಿಗಳು ಪಟ್ಟಾಭಿಷೇಕ ಮಾಡುತ್ತಾರೆ. ಇದು ಬಾಲ್ಯದಿಂದ ಪಟ್ಟಾಭಿಷೇಕದವರೆಗಿನ ಶ್ರೀರಾಮನ ಜೀವನದ ಅತ್ಯಂತ ಸಂಕ್ಷಿಪ್ತ ನಿರೂಪಣೆ. ಇಲ್ಲಿಂದ ಮುಂದೆ, ಶ್ರೀರಾಮಚಂದ್ರರ ಆಡಳಿತ ವೈಖರಿಯನ್ನು ನೋಡೋಣ.
ಪ್ರಭು ಶ್ರೀರಾಮಚಂದ್ರನ ಆಡಳಿತ
ರಾವಣಾಸುರನನ್ನು ಸಂಹರಿಸಿ, ವನವಾಸದಿಂದ ದಿಗ್ವಿಜಯದೊಂದಿಗೆ ಮರಳಿದ ಶ್ರೀರಾಮನಿಗೆ ಕುಲಗುರುಗಳಾದ ವಸಿಷ್ಠರು ಪಟ್ಟಾಭಿಷೇಕ ಮಾಡುತ್ತಾರಷ್ಟೆ? ಈ ಪಟ್ಟಾಭಿಷೇಕ ಮಹೋತ್ಸವವು ದೇವೇಂದ್ರನಿಗಾಗಿ ನಡೆಸುವ ಉತ್ಸವದಂತೆ ಅತ್ಯಂತ ವೈಭವೋಪೇತವಾಗಿ ನಡೆಯಿತು.
ನಾಲ್ಕು ಸಮುದ್ರಗಳ ನೀರಿನಿಂದ, ಪುಣ್ಯ ನದಿಗಳಿಂದ ಮತ್ತಿತರ ದ್ರವ್ಯಗಳಿಂದ ಅಭಿಷೇಕೋತ್ಸವ ನೆರವೇರಿತು. ಸಾಲಂಕೃತನಾಗಿದ್ದ ಶ್ರೀರಾಮನು ಸುಂದರಿಯಾದ ಪತ್ನಿ ಸೀತಾದೇವಿ ಮತ್ತು ತನ್ನಂತೆಯೇ ಭೂಷಿತರಾಗಿದ್ದ ಸಹೋದರರಿಂದೊಡಗೂಡಿ ಕಂಗೊಳಿಸುತ್ತಿದ್ದನು.
ಪ್ರಭು ಶ್ರೀರಾಮಚಂದ್ರನು ರಾಜ್ಯವಾಳುತ್ತಿದ್ದಾಗ ವನ ನದಿ ಗಿರಿಶಿಖರಗಳೂ ಸೇರಿದಂತೆ ಸಪ್ತದ್ವೀಪಗಳು ಮತ್ತು ಸಪ್ತಸಾಗರಗಳ ಸಕಲ ಜೀವಿಗಳೂ ಜೀವನಾವಶ್ಯಕ ಸೌಲಭ್ಯಗಳನ್ನು ಪಡೆದು ಸಂತೃಪ್ತರಾಗಿದ್ದರು. ಅವನ ವಿಶೇಷ ಕರುಣೆಯಿಂದಾಗಿ ಎಲ್ಲ ಬಗೆಯ ದೈಹಿಕ ಮತ್ತು ಮಾನಸಿಕ ಯಾತನೆಗಳಿಂದ ಪ್ರಜೆಗಳು ಮುಕ್ತರಾಗಿದ್ದರು.

ಏಕಪತ್ನೀವ್ರತಸ್ಥನೆಂದು ಖ್ಯಾತನಾಗಿರುವ ಶ್ರೀರಾಮನು ತಾನೊಬ್ಬ ಆದರ್ಶಪತಿಯಾಗಿ ಪ್ರಜೆಗಳಿಗೆ ಮಾದರಿಯಾಗಿದ್ದನು. “ಒಬ್ಬ ನಿಷ್ಕಲ್ಮಷ ವ್ಯಕ್ತಿಯಾಗಿ ಬಾಳುವುದು ಹೇಗೆಂದು ತೋರಿಸಿಕೊಟ್ಟಿರುವ ಪ್ರಭು ಶ್ರೀರಾಮಚ೦ದ್ರನ ಮಾದರಿಗೆ ಅನುಸಾರವಾಗಿ, ಗೃಹಸ್ಥಾಶ್ರಮಿಯು ಜೀವಿಸಬೇಕು. ಗೃಹಸ್ಥಾಶ್ರಮಿಯಾಗಿರುವುದು ಎಂದಿಗೂ ನಿಂದ್ಯವಲ್ಲ, ಆದರೆ, ಆ ವ್ಯಕ್ತಿಯು ವರ್ಣಾಶ್ರಮ ಧರ್ಮದ ನಿಯಂತ್ರಣ ತತ್ತ್ವಗಳಿಗೆ ಅನುಸಾರವಾಗಿ ಜೀವಿಸುತ್ತಿರಬೇಕು.” ಎಂದು ಶ್ರೀಲಪ್ರಭುಪಾದರು ಹೇಳಿದ್ದಾರೆ.
ಶ್ರೀರಾಮನು ಓರ್ವ ರಾಜರ್ಷಿಯಾಗಿದ್ದನು. ಅವನ ನಡತೆಯಲ್ಲಿ ಕ್ರೋಧ ಇತ್ಯಾದಿಗಳ ಛಾಯೆಯೂ ಇರಲಿಲ್ಲ. ಅವನು ತನ್ನ ವೈಯಕ್ತಿಕ ಆಚರಣೆಗಳ ಮೂಲಕ ಸಾಮಾನ್ಯ ಸಾರ್ವಜನಿಕರಿಗೆ ಶಿಕ್ಷಣ ನೀಡುತ್ತಿದ್ದನು.
‘ಯದ್ಯದಾಚರತಿ ಶ್ರೇಷ್ಠಃ ತತ್ತದೇವೇತರೋ ಜನಃ’ ಎನ್ನುವ ಮಾತಿದೆ. ಒಬ್ಬ ಶ್ರೇಷ್ಠ ವ್ಯಕ್ತಿಯು ಯಾವ ದೃಷ್ಟಾಂತವನ್ನು ಒದಗಿಸುತ್ತಾನೋ, ಅದನ್ನು ಜನಸಾಮಾನ್ಯರು ಅನುಸರಿಸುತ್ತಾರೆ. ಪ್ರಭು ರಾಮಚಂದ್ರನು ಆದರ್ಶ ಪತಿಯಾಗಿದ್ದಂತೆ ಸೀತಾದೇವಿಯು ಆದರ್ಶ ಪತ್ನಿಯಾಗಿದ್ದಳು.
ಅವರಿಬ್ಬರೂ ತಮ್ಮ ನಡೆ-ನುಡಿಗಳಿಂದ ಪ್ರಜೆಗಳಿಗೆ ಗೃಹಸ್ಥಧರ್ಮವನ್ನು ಹೇಗೆ ಪರಿಪಾಲಿಸಬೇಕೆಂಬುದನ್ನು ತೋರಿಸಿಕೊಟ್ಟರು. ರಾಜನಾದವನು ಯಜ್ಞ ಯಾಗಾದಿಗಳನ್ನು ಮಾಡಿ ದೇವೋತ್ತಮ ಪರಮ ಪುರುಷನ ಆಜ್ಞಾನುವರ್ತಿಗಳಾದ ದೇವತೆಗಳನ್ನು ತೃಪ್ತಿಪಡಿಸಬೇಕು ಮತ್ತು ಅವರಿಂದ ತನ್ನ ರಾಜ್ಯಾಡಳಿತ ಸುಗಮಗೊಳ್ಳುವಂತೆ ಅಭಯ ಪಡೆಯಬೇಕು.
ಶ್ರೀರಾಮನು ಕೂಡ ಇಂತಹ ಯಜ್ಞಗಳನ್ನು ಮಾಡಿ ಇತರ ರಾಜರಿಗೆ ಮೇಲ್ಪಂಕ್ತಿಯಾದನು. ಪ್ರಭು ರಾಮಚಂದ್ರನು ಸ್ವತಃ ದೇವೋತ್ತಮ ಪುರುಷನು. ಆದ್ದರಿಂದ ಅವನು ತನ್ನನ್ನು ತಾನು ತೃಪ್ತಿಗೊಳಿಸಿಕೊಳ್ಳಲು ಯಜ್ಞಗಳನ್ನು ನೆರವೇರಿಸುತ್ತಿದ್ದನು. ಈ ಯಜ್ಞದಲ್ಲಿ ಯಥೇಚ್ಛವಾಗಿ ದಾನಧರ್ಮಗಳನ್ನು ಮಾಡಿದನು.
ಆತನು ತನ್ನ ರಾಜ್ಯದ ಪೂರ್ವ ದಿಕ್ಕಿನ ಇಡಿಯ ಪ್ರಾಂತವನ್ನು ‘ಹೋತಾ’ ಋತ್ವಿಜನಿಗೆ ನೀಡಿದನು. ದಕ್ಷಿಣ ಪ್ರಾಂತವನ್ನು ಬ್ರಹ್ಮ ಋತ್ವಿಜನಿಗೂ, ಪಶ್ಚಿಮ ಪ್ರಾಂತವನ್ನು ʼಅಧ್ವರ್ಯ’ ಋತ್ವಿಜನಿಗೂ ಮತ್ತು ಉತ್ತರ ಪ್ರಾಂತವನ್ನು ಸಾಮವೇದ ಪಾಠಕನಾದ ಉದ್ಗಾತಾ ಋತ್ವಿಜನಿಗೂ ನೀಡಿದನು.
ಹೀಗೆ ಭೂಮಂಡಲದ ವಿವಿಧ ಭಾಗಗಳನ್ನು ದಾನ ಮಾಡಿ, ನಡುಭಾಗವನ್ನು ಆಚಾರ್ಯರಿಗೆ ನೀಡಿದನು. ಅನಂತರ ತನ್ನ ನಿತ್ಯ ಬಳಕೆಯ ವಸ್ತ್ರ ಮತ್ತು ಆಭರಣಗಳನ್ನುಳಿದು ಮಿಕ್ಕೆಲ್ಲ ಸಂಪತ್ತನ್ನೂ ದಾನಮಾಡಿದನು. ಸೀತಾದೇವಿ ಕೂಡ ತನ್ನ ಮೂಗುತಿ ಮೊದಲಾದ ಸೌಭಾಗ್ಯ ಚಿಹ್ನೆಗಳ ಹೊರತಾಗಿ ಉಳಿದೆಲ್ಲವನ್ನೂ ದಾನಮಾಡಿದಳು.

ಆದರೆ ಪ್ರಭು ಶ್ರೀರಾಮಚಂದ್ರನ ಹೃದಯದ ಉದಾರತೆಯಿಂದ ಮನತುಂಬಿದ ಬ್ರಾಹ್ಮಣರು ತಾವು ಪಡೆದ ದಾನವನ್ನೆಲ್ಲ ಮರಳಿಸಿಬಿಟ್ಟರು. ಹೀಗೆ ದಾನ ನೀಡುವ ಮೂಲಕ ಶ್ರೀರಾಮಚ೦ದ್ರನು ಕ್ಷತ್ರಿಯಧರ್ಮವನ್ನು ಪಾಲಿಸಿದರೆ, ಮಿತಿಮೀರಿದ ಸಂಪತ್ತನ್ನು ಮರಳಿಸುವ ಮೂಲಕ ಬ್ರಾಹ್ಮಣರು ತಮ್ಮ ಹದಿನಾಲ್ಕು ವರ್ಷಗಳ ಕಾಲ ಅನಾಥರಂತಿದ್ದ ಪ್ರಜೆಗಳು ಪ್ರಭು ಶ್ರೀರಾಮಚಂದ್ರನನ್ನು ಅತ್ಯಂತ ಸಂತುಷ್ಟರಾಗಿ ದೊರೆಯೆಂದು ಸ್ವೀಕರಿಸಿದರು.
ಅದಕ್ಕೆ ಪ್ರತಿಯಾಗಿ ಶ್ರೀರಾಮನು ಪ್ರತಿಯೊಬ್ಬ ಪ್ರಜೆಯನ್ನು ಮಕ್ಕಳಂತೆ ಕಂಡು, ಅವರ ಅಭಿವೃದ್ಧಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡುವ ಪಣತೊಟ್ಟನು. ಅದಕ್ಕೆ ಪೂರಕವಾಗಿ ಪ್ರಜೆಗಳು ಕೂಡ ತಮ್ಮ ತಮ್ಮ ವರ್ಣಾಶ್ರಮ ಧರ್ಮಗಳನ್ನು ಕರ್ತವ್ಯಲೋಪವಾಗದಂತೆ ಆಚರಿಸುತ್ತ ತಮ್ಮ ಪಾಲಿನ ಕಾಣಿಕೆಯನ್ನು ಸಲ್ಲಿಸುತ್ತಿದ್ದರು.
ಶ್ರೀರಾಮ ಮತ್ತು ಪ್ರಜೆಗಳ ಈ ಪರಸ್ಪರ ಅರಿವು ಮತ್ತು ಸಂಬಂಧವನ್ನು ಕುರಿತು ಶ್ರೀಲ ಪ್ರಭುಪಾದರು ತಮ್ಮ ಭಾವಾರ್ಥದಲ್ಲಿ ವಿಸ್ತೃತವಾಗಿ ಹೇಳಿದ್ದಾರೆ. (9:10:50) ಅವರು ಪ್ರಜೆಗಳು ಮತ್ತು ಸರ್ಕಾರ – ಇವುಗಳ ನಡುವಣ ಸಂಬಂಧವು ಪ್ರಭು ರಾಮಚಂದ್ರ ಮತ್ತು ಅವನ ಜನಗಳ ಸಂಬಂಧದಂತಿದ್ದರೆ ಒಳ್ಳೆಯದೆಂದು ಅಭಿಪ್ರಾಯ ಪಡುತ್ತ ಹೀಗೆ ಹೇಳಿದ್ದಾರೆ;
“ಒಬ್ಬ ತಂದೆಯು ತನ್ನ ಮಕ್ಕಳಲ್ಲಿ ಎಚ್ಚರಿಕೆ ವಹಿಸುವ ಹಾಗೆಯೇ ಪ್ರಭು ರಾಮಚಂದ್ರನು ತನ್ನ ಸಾಮ್ರಾಜ್ಯವನ್ನು ಆಳಿದನು. ಪ್ರಜೆಗಳು ಕೂಡ ಪ್ರಭು ರಾಮಚಂದ್ರನ ಉತ್ತಮವಾದ ಆಳ್ವಿಕೆಗೆ ಆಭಾರಿಗಳಾಗಿ, ಭಗವಂತನನ್ನು ತಮ್ಮ ತಂದೆಯೆಂತಲೇ ಅಂಗೀಕರಿಸಿದರು. ಹೀಗೆ, ಪ್ರಜೆಗಳ ಮತ್ತು ಸರಕಾರದ ನಡುವಣ ಸಂಬಂಧವು ತಂದೆ ಮತ್ತು ಮಗನ ನಡುವಣ ಸಂಬಂಧದ ಹಾಗೆಯೇ ಇರಬೇಕು.
ಒಂದು ಕುಟುಂಬದಲ್ಲಿರುವ ಪುತ್ರರು ಸುಶಿಕ್ಷಿತರಾಗಿದ್ದರೆ, ಅವರು ತಂದೆ-ತಾಯಿಗಳಿಗೆ ವಿಧೇಯರಾಗಿ ಇರುತ್ತಾರೆ. ಆ ತಂದೆಯು ಒಳ್ಳೆಯ ಅರ್ಹತೆಯುಳ್ಳವನಾಗಿದ್ದರೆ, ಅವನು ಮಕ್ಕಳ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳುವನು. ಇಲ್ಲಿ ಹೇಳಲಾದ “ಸ್ವಧರ್ಮ ನಿರತಾ ವರ್ಣಾಶ್ರಮ ಗುಣಾನ್ವಿತಾಃ” ಎಂಬ ಮಾತಿನ ಪ್ರಕಾರ, ಜನರು ಉತ್ತಮ ಪ್ರಜೆಗಳಾಗಿದ್ದರು. ಏಕೆಂದರೆ, ಅವರು ವರ್ಣದ ಮತ್ತು ಆಶ್ರಮದ ಪದ್ಧತಿಯನ್ನು ಅಂಗೀಕರಿಸಿದ್ದರು.
ಈ ಪದ್ಧತಿಯು ಸಮಾಜವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ವರ್ಣ ವಿಭಾಗಗಳಲ್ಲಿ ಮತ್ತು ಬ್ರಹ್ಮಚರ್ಯ, ಗೃಹಸ್ಥ ವಾನಪ್ರಸ್ಥ ಮತ್ತು ಸಂನ್ಯಾಸ ಎಂಬ ಆಶ್ರಮ ವಿಭಾಗಗಳಲ್ಲಿ ವ್ಯವಸ್ಥೆಗೊಳಿಸುತ್ತದೆ. ಇದು ವಾಸ್ತವಿಕವಾದ ಮಾನವ ನಾಗರಿಕತೆಯಾಗಿರುತ್ತದೆ.
ಜನರು ಬೇರೆ ಬೇರೆಯಾದ ವರ್ಣಾಶ್ರಮ ವೃತ್ತಿಯ ಕರ್ತವ್ಯಗಳಿಗೆ ಅನುಸಾರವಾಗಿ ಶಿಕ್ಷಣ ಪಡೆದವರಾಗಿ ಇರಬೇಕು. ಭಗವದ್ಗೀತೆಯಲ್ಲಿ (4.13) ದೃಢಪಡಿಸಿರುವುದು ಹೀಗಿದೆ – ‘ಚಾತುರ್ವಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ’ – ನಾಲ್ಕು ವರ್ಣಗಳನ್ನು ಆಯಾ ಗುಣಗಳಿಗೆ ಮತ್ತು ಕರ್ಮಕ್ಕೆ ಅನುಸಾರವಾಗಿ ಸ್ಥಾಪಿಸಿಕೊಳ್ಳಬೇಕು.

ಒಂದು ಒಳ್ಳೆಯ ಸರಕಾರದ ಮೊತ್ತ ಮೊದಲ ಸಿದ್ಧಾಂತವೆಂದರೆ – ಅದು ಈ ವರ್ಣಾಶ್ರಮ ಪದ್ಧತಿಯನ್ನು ಸ್ಥಾಪಿಸಬೇಕು. ವರ್ಣಾಶ್ರಮ ಧರ್ಮದ ಉದ್ದೇಶವು, ಜನರನ್ನು ಅಪರಿಗ್ರಹ ವ್ರತ ಪಾಲಿಸಿದರು. ಅವರು ಶ್ರೀರಾಮ ನೀಡಿದ ದಾನವನ್ನು ನಿರಾಕರಿಸಲಿಲ್ಲ. ಬದಲಿಗೆ ಅದನ್ನು ಸ್ವೀಕರಿಸಿ, ಅನಂತರ ರಾಜ್ಯಕ್ಕೆ ಮರಳಿಸಿದರು.
ಶ್ರೀರಾಮನು ‘ಪ್ರಜಾರಂಜಕ’ ನೆಂದು ಖ್ಯಾತನು. ಅವನು ನಿತ್ಯವೂ ಮಾರುವೇಷದಲ್ಲಿ ಸಂಚರಿಸುತ್ತ ಜನಾಭಿಪ್ರಾಯವನ್ನು ಸಂಗ್ರಹಿಸುತ್ತಿದ್ದನು. ಒಮ್ಮೆ ರಾಮಚಂದ್ರನು ಹೀಗೆ ಅಜ್ಞಾತವಾಗಿ ಸಂಚರಿಸುತ್ತಿದ್ದಾಗ ವ್ಯಕ್ತಿಯೊಬ್ಬನು ತನ್ನ ಪತ್ನಿಯನ್ನು ಕುರಿತು “”ನೀನು ಪರಪುರುಷನ ಮನೆಗೆ ಹೋಗಿ ಅಸತಿಯಾಗಿರುವೆ.
ನಿನ್ನನ್ನು ನಾನು ಸ್ವೀಕರಿಸಲಾರೆ. ಶ್ರೀರಾಮನಂತಹ ಪತ್ನೀದಾಸನು ಮಾತ್ರವೆ ಇಂತಹ ಸತಿಯನ್ನು ಸ್ವೀಕರಿಸಿ ಸಹಬಾಳ್ವೆ ಮಾಡಬಲ್ಲನು. ನಾನು ಅಂತಹ ಸ್ತ್ರೀ ವಿಧೇಯನಲ್ಲ’ ಇತ್ಯಾದಿಯಾಗಿ ನಿಂದಿಸುತ್ತಿದ್ದನು. ಇದು ಶ್ರೀರಾಮನ ಮನಸ್ಸನ್ನೇ ಬಹುವಾಗಿ ಕಲಕಿತು. ಪ್ರಜೆಗಳ ಮನಸ್ಸಿನಲ್ಲಿ ತನ್ನ ವೈಯಕ್ತಿಕ ಜೀವನದ ಕುರಿತು ಈ ಬಗೆಯ ಚಿಂತನೆಗಳಿರುವುದು ರಾಜ್ಯದ ಹಿತಕ್ಕೆ ಕ್ಷೇಮವಲ್ಲ ಎಂದು ರಾಮನು ಸೀತಾ ದೇವಿಯನ್ನು ವಾಲ್ಮೀಕಿ ಋಷಿಗಳ ಆಶ್ರಮಕ್ಕೆ ಕಳುಹಿಸಿಕೊಟ್ಟನು.
ಶ್ರೀರಾಮನು ತನ್ನ ಸುಖಕ್ಕಿಂತಲೂ ಪ್ರಜೆಗಳ ಶ್ರೇಯೋಭಿಲಾಷೆಗೆ ಆದ್ಯತೆ ನೀಡುತ್ತಿದ್ದನೆನ್ನುವುದು ತನ್ನ ಅತ್ಯಂತ ಪ್ರೀತಿಪಾತ್ರಳಾದ ಪತ್ನಿಯನ್ನು ಆತ ತೊರೆದ ಇದೊಂದು ನಿದರ್ಶನದಿಂದಲೇ ಸುಸ್ಪಷ್ಟವಾಗುತ್ತದೆ.
ಈವರೆಗೂ ನಾವು ಶ್ರೀರಾಮಚಂದ್ರನ ಆಡಳಿತ ವೈಭವದ ಒಂದಂಶದ ಸಂಕ್ಷೇಪವನ್ನು ತಿಳಿದಿರುವವಷ್ಟೆ? ಇನ್ನೀಗ ಪ್ರಭುವಿನ ಚಕ್ರಾಧಿಪತ್ಯದ ವೈಭವದೊಂದು ತುಣುಕನ್ನು ನೋಡೋಣ.
ಅಯೋಧ್ಯೆಯ ಬೀದಿಗಳು ಸ್ವಚ್ಛವಾಗಿದ್ದುವಷ್ಟೇ ಅಲ್ಲ ಅವುಗಳನ್ನು ಪರಿಮಳ ದ್ರವ್ಯಗಳಿಂದ ಹಾಗೂ ಸುಗಂಧ ಜಲದಿಂದ ಸಿಂಪಡಿಸಲಾಗುತ್ತಿತ್ತು. ಪರಿಮಳ ದ್ರವ್ಯಗಳನ್ನು ಸಿಂಪಡಿಸಲು ಆನೆಗಳ ಸೊಂಡಿಲುಗಳನ್ನು ಉಪಯೋಗಿಸಲಾಯಿತು; ಸಿಂಪಡಿಸುವ ಯಂತ್ರಗಳು ಬೇಕಾಗಿರಲಿಲ್ಲ ಸೊಂಡಿಲಿನಿಂದ ಜಲವನ್ನು ಹೀರಿ ಪುನಃ ಅದನ್ನು ಕಾರಂಜಿಯಂತೆ ಹೊರಚೆಲ್ಲುವ ಸಹಜ ಶಕ್ತಿಯು ಆನೆಗಿದೆ.
ಆಯೋಧ್ಯೆಯ ವೈಭವವನ್ನು ಈ ಒಂದು ಉದಾಹರಣೆಯಿಂದ ಅರಿಯಬಹುದಾಗಿದೆ: ಬೀದಿಗಳಿಗೆ ಸಿಂಪಡಿಸಲು ಉಪಯೋಗಿಸಲಾದದ್ದು ಪರಿಮಳ ದ್ರವ್ಯಗಳು. ಇದಲ್ಲದೆ ಸ್ವತಃ ಶ್ರೀ ರಾಮಚಂದ್ರನೇ ನಗರಾಡಳಿತದ ಮೇಲ್ವಿಚಾರಣೆ ಮಾಡುತ್ತಿದ್ದುದನ್ನು ನೋಡುವ ಅವಕಾಶವು ಪ್ರಜೆಗಳಿತ್ತು.

ರಾಜಧಾನಿಯ ಹೊರಗೆ ಹೋಗಿ ಅಲ್ಲಿನ ಆಡಳಿತವನ್ನು ಪರಿಶೀಲಿಸಿ ಚಕ್ರವರ್ತಿಯ ಆಜ್ಞೆಯನ್ನು ಉಲ್ಲಂಘಿಸುವ ಪ್ರತಿಯೊಬ್ಬನನ್ನೂ ದಂಡಿಸುವಂತೆ ಪ್ರಭುವು ಆಜ್ಞಾಪಿಸಿದ್ದನು. ಇದರಿಂದ ಪ್ರಭುವು ಜಡನಾದ ಸರ್ವಾಧಿಕಾರಿಯಾಗಿರಲಿಲ್ಲವೆಂಬುದು ಅರ್ಥವಾಗುತ್ತದೆ. ಇದನ್ನು ದಿಗ್ವಿಜಯ ಎಂದು ಕರೆಯುತ್ತಾರೆ.
ಶಾಂತಿಯುತವಾದ ಬಾಳ್ವೆಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಪ್ರಜೆಗಳಿಗೆ ಒದಗಿಸಲಾಗಿತ್ತು. ಪ್ರಜೆಗಳು ಕೂಡ ವರ್ಣಾಶ್ರಮ ಧರ್ಮಕ್ಕೆ ಉಚಿತವಾದ ಗುಣಗಳಿಂದ ಅರ್ಹರಾಗಿದ್ದರು. ಹಿಂದಿನ ಅಧ್ಯಾಯದಲ್ಲಿ ನಾವು ನೋಡಿರುವಂತೆ ವರ್ಣಾಶ್ರಮಗುಣಾನ್ವಿತಾಃ, ವರ್ಣಾಶ್ರಮ ಪದ್ಧತಿಯ ಮೇರೆಗೆ ಪುರಜನರ ಶಿಕ್ಷಣವಾಗಿತ್ತು.
ಒಂದು ವರ್ಗದ ಜನರು ಬ್ರಾಹ್ಮಣರು. ಒಂದು ವರ್ಗದ ಜನರು ಕ್ಷತ್ರಿಯರು. ಒಂದು ವರ್ಗದ ಜನರು ವೈಶ್ಯರು ಮತ್ತು ಒಂದು ವರ್ಗದ ಜನರು ಶೂದ್ರರು. ಈ ವೈಜ್ಞಾನಿಕ ವಿಭಾಗವಿಲ್ಲದೆ ಒಳ್ಳೆಯ ಪೌರತ್ವ ಸಿದ್ಧಿಸುವ ಪ್ರಶ್ನೆಯೇ ಇಲ್ಲ. ರಾಜನು ಉದಾತ್ತನೂ ಕಾರ್ಯ ಪರಿಪೂರ್ಣನೂ ಆಗಿದ್ದು ವಿವಿಧ ಯಜ್ಞಗಳನ್ನಾಚರಿಸಿದನು.
ಪ್ರಜೆಗಳನ್ನು ತನ್ನ ಪುತ್ರರಂತೆ ಕಂಡನು. ಪೌರರು ವರ್ಣಾಶ್ರಮ ಪದ್ಧತಿಯಂತೆ ಶಿಕ್ಷಣ ಪಡೆದವರಾಗಿದ್ದು ವಿಧೇಯರೂ ಪರಿಪೂರ್ಣ ಶಿಸ್ತುಪಾಲಕರೂ ಆಗಿದ್ದರು. ಇಡೀ ರಾಜ್ಯಪದ್ಧತಿಯು ಎಷ್ಟು ಶಾಂತವೂ ಶ್ರೀಮಂತವೂ ಆಗಿತ್ತೆಂದರೆ ಸರಕಾರವು ಬೀದಿಗಳಿಗೆ ಪರಿಮಳಯುಕ್ತ ಜಲವನ್ನು ಸಿಂಪಡಿಸಲು ಕೂಡ ಶಕ್ತವಾಗಿತ್ತು. ಇನ್ನು ಇತರ ವ್ಯವಸ್ಥೆಗಳನ್ನು ಕುರಿತು ಹೇಳಬೇಕಾದ್ದೇನಿದೆ?
ನಗರಕ್ಕೆ ಸುಗಂಧಯುಕ್ತ ಜಲವನ್ನು ಸಿಂಪಡಿಸಲಾಗಿತ್ತೆಂದ ಮೇಲೆ ಇನ್ನಿತರ ಅಂಶಗಳಲ್ಲಿ ಅದರ ವೈಭವವಷ್ಟಿದ್ದೀತೆಂದು ನಾವು ಬರಿದೆ ಊಹಿಸಿಕೊಳ್ಳಬಹುದು, ಅಷ್ಟೆ. ಹೀಗಿರುವಾಗ ಶ್ರೀರಾಮಚಂದ್ರನ ಆಳ್ವಿಕೆಯ ಕಾಲದಲ್ಲಿ ನಾಡ ಜನರು ಅದೆಷ್ಟು ಸಂತೃಪ್ತಿಯ ಜೀವನವನ್ನು ನಡೆಸುತ್ತಿದ್ದರೆನ್ನುವುದನ್ನು ಮಾತಲ್ಲಿ ವಿವರಿಸಲು ಸಾಧ್ಯವೇ?
ಭಗವತ್ ಪ್ರಜ್ಞೆಯುಳ್ಳವರಾಗಲು ಸಮರ್ಥರನ್ನಾಗಿ ಮಾಡುವುದಾಗಿರುತ್ತದೆ. “ವರ್ಣಾಶ್ರಮಾಚಾರವತಾ ಪುರುಷೇಣ ಪರಃ ಪುಮಾನ್ ವಿಷ್ಣುರಾರಾಧ್ಯತೇ” ಇಡೀ ವರ್ಣಾಶ್ರಮ ಯೋಜನೆಯು ಜನರನ್ನು ವೈಷ್ಣವರನ್ನಾಗಿ ಮಾಡುವ ಉದ್ದೇಶವುಳ್ಳದಾಗಿದೆ.
ವಿಷ್ಣುರಸ್ಯ ದೇವತಾ. ಜನರು ಭಗವಾನ್ ವಿಷ್ಣುವನ್ನು ಪರಮ ಪ್ರಭುವೆಂದು ಆರಾಧಿಸಿದಾಗ, ಅವರು ವೈಷ್ಣವರಾಗುವರು. ಪ್ರಭು ರಾಮಚಂದ್ರನ ಆಳ್ವಿಕೆಯ ಕಾಲದಲ್ಲಿ ಪ್ರತಿಯೊಬ್ಬನೂ ವರ್ಣಾಶ್ರಮ ತತ್ತ್ವಗಳನ್ನು ಅನುಸರಿಸಲು ಪೂರ್ಣವಾಗಿ ಶಿಕ್ಷಿತನಾಗುತ್ತಿದ್ದ ಹಾಗೆ, ಜನರು ವರ್ಣಾಶ್ರಮ ಪದ್ಧತಿಯ ಮೂಲಕ ವೈಷ್ಣವರಾಗಲು ಶಿಕ್ಷಣ ಪಡೆಯುವವರಾಗಬೇಕು.

ಕಾಯಿದೆಗಳನ್ನು ಮತ್ತು ಶಾಸನಗಳನ್ನು ಕೇವಲ ಜಾರಿಗೊಳಿಸಿ, ಪ್ರಜೆಗಳನ್ನು ವಿಧೇಯರನ್ನಾಗಿ ಮತ್ತು ಕಾಯಿದೆಬದ್ಧರನ್ನಾಗಿ ಮಾಡಲು ಸಾಧ್ಯವಿಲ್ಲ. ಅದು ಅಸಾಧ್ಯವೇ ಸರಿ. ಇಡೀ ಜಗತ್ತಿನ ಎಲ್ಲೆಡೆಯೂ ಎಷ್ಟೋ ರಾಜ್ಯಗಳಿವೆ, ಶಾಸನ ಸಭೆಗಳಿವೆ ಮತ್ತು ಸಂಸತ್ತಿದೆ. ಆದರೂ ಕೂಡ, ಪ್ರಜೆಗಳು ಧೂರ್ತರೂ ಕಳ್ಳರೂ ಆಗಿದ್ದಾರೆ.
ಆದುದರಿಂದ ಒಳ್ಳೆಯ ನಾಗರಿಕ ಪದ್ಧತಿಯನ್ನು ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ; ನಾಗರಿಕರು ತರಬೇತಿ ಪಡೆದಿರಬೇಕು. ವಿದ್ಯಾರ್ಥಿಗಳಿಗೆ ರಾಸಾಯನಿಕ ಇಂಜಿನಿಯರುಗಳು, ನ್ಯಾಯವಾದಿಗಳು ಅಥವಾ ಜ್ಞಾನದ ಇತರ ಅನೇಕ ವಿಭಾಗಗಳಲ್ಲಿ ವಿಶೇಷಜ್ಞರಾಗುವಂತಹ ಶಿಕ್ಷಣ ನೀಡಲು ಶಾಲೆಗಳು ಮತ್ತು ಕಾಲೇಜುಗಳು ಇರುವ ಹಾಗೆ, ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರು, ಬ್ರಹ್ಮಚಾರಿಗಳು, ಗೃಹಸ್ಥರು, ವಾನಪ್ರಸ್ಥರು ಮತ್ತು ಸಂನ್ಯಾಸಿಗಳಾಗಲು ವಿದ್ಯಾರ್ಥಿಗಳಿಗೆ ತರಬೇತಿಯನ್ನು ಕೊಡತಕ್ಕ ಶಾಲೆಗಳು ಮತ್ತು ಕಾಲೇಜುಗಳು ಇರಬೇಕು.
ಇದು ಒಳ್ಳೆಯ ನಾಗರಿಕತೆಯ ಸ್ಥಿತಿಗೆ ಪ್ರಾಥಮಿಕ ಅನುಕೂಲತೆಯನ್ನು ಒದಗಿಸುವುದು (ವರ್ಣಾಶ್ರಮ ಗುಣಾನ್ವಿತಾಃ). ಸಾಮಾನ್ಯವಾಗಿ ಹೇಳುವುದಾದರೆ – ರಾಜನು ಅಥವಾ ರಾಷ್ಟ್ರಾಧ್ಯಕ್ಷನು ರಾಜರ್ಷಿಯಾಗಿರಬೇಕು. ಹಾಗಿದ್ದರೆ, ಪ್ರಜೆಗಳ ಮತ್ತು ಮುಖ್ಯ ಆಡಳಿತಗಾರರ ನಡುವಣ ಸಂಬಂಧವು ನಿಶ್ಚಲವಾಗುವುದು ಮತ್ತು ರಾಜ್ಯದಲ್ಲಿ ಕೆಡುಕಿಗೆ ಸಾಧ್ಯತೆಯಿರದು.
ಏಕೆಂದರೆ – ಕಳ್ಳರ ಮತ್ತು ಧೂರ್ತರ ಸಂಖ್ಯೆ ಕಡಮೆಯಾಗುವುದು. ಕಲಿಯುಗದಲ್ಲಿ ಹೇಗೂ ವರ್ಣಾಶ್ರಮ ಪದ್ಧತಿಯು ನಿರ್ಲಕ್ಷ್ಯಕ್ಕೆ ಒಳಗಾಗುವುದರಿಂದ, ಜನರು ಸಾಮಾನ್ಯವಾಗಿ ಕಳ್ಳರು ಮತ್ತು ಧೂರ್ತರು ಆಗಿರುತ್ತಾರೆ. ಪ್ರಜಾಪ್ರಭುತ್ವದ ಪದ್ಧತಿಯಲ್ಲಿ ಅಂತಹ ಕಳ್ಳರು ಮತ್ತು ಧೂರ್ತರು ಸ್ವಾಭಾವಿಕವಾಗಿ ಇತರ ಕಳ್ಳರಿಂದ ಮತ್ತು ಧೂರ್ತರಿಂದ ಧನ ಸಂಗ್ರಹ ಮಾಡುವರು.
ಇದರಿಂದಾಗಿ, ಪ್ರತಿಯೊಂದು ಸರಕಾರದಲ್ಲಿಯೂ ಅವ್ಯವಸ್ಥೆ ಇರುತ್ತದೆ; ಯಾವನೊಬ್ಬನೂ ಸುಖಿಯಾಗಿರುವುದಿಲ್ಲ. ಆದರೆ, ಇಲ್ಲಿ ಒಳ್ಳೆಯ ಸರಕಾರದ ಉದಾಹರಣೆಯನ್ನು ಭಗವಾನ್ ರಾಮಚಂದ್ರನ ಆಳ್ವಿಕೆಯಲ್ಲಿ ಕಾಣಬಹುದು. ಜನರು ಈ ಉದಾಹರಣೆಯನ್ನು ಅನುಸರಿಸಿದರೆ, ಲೋಕದ ಎಲ್ಲ ಕಡೆಯೂ ಉತ್ತಮ ಸರಕಾರವಿರುವುದು.”






Leave a Reply