ಒಮ್ಮೆ ಸಿಂಹದ ಮರಿಯೊಂದು ಕಾಡಿನಲ್ಲಿ ಹಾದಿತಪ್ಪಿತು. ಹಸಿವಿನಿಂದ ಕಂಗಾಲಾಗಿದ್ದ ಅದಕ್ಕೆ, ಸಿಂಹಣಿಯ ಮಡಿಲು ಸೇರುವ ಕಾತರ. ಆದರೆ ದಾರಿಯೇ ತಿಳಿಯುತ್ತಿಲ್ಲ.

ಕಾಡಿನಲ್ಲಿ ಅಲೆದೂ ಅಲೆದೂ ಸುಸ್ತಾಗಿ ನಿಂತಿದ್ದಾಗ, ಅದಕ್ಕೊಂದು ಹೆಜ್ಜೆಯ ಜಾಡು ಕಂಡಿತು. ಅದನ್ನು ಅನುಸರಿಸಲು ನಿರ್ಧರಿಸಿದ ಮರಿಸಿಂಹ, ಆ ಹೆಜ್ಜೆ ಗುರುತನ್ನೇ ಹಿಂಬಾಲಿಸಿತು. ದುರದೃಷ್ಟ! ಅಲ್ಲಿ ಕಾಡೆಮ್ಮೆಗಳ ಹಿಂಡೊಂದು ಮೆಲುಕು ಹಾಕುತ್ತ ಮಲಗಿದ್ದನ್ನು ಕಂಡಿತು.
ಅಲ್ಲಿಂದ ಹೊರಟ ಮರಿಗೆ ಮತ್ತೊಂದು ಹೆಜ್ಜೆಜಾಡು ಕಂಡಿತು. ಸರಿ, ಅದರ ಮೇಲೆ ಹೆಜ್ಜೆ ಇಡುತ್ತಾ ಅದು ಅಮ್ಮನನ್ನು ನೋಡುವ ಸಂಭ್ರಮದಲ್ಲಿ ಬೇಗ ಬೇಗ ನಡೆಯಿತು. ಆದರೇನು? ಆ ಹೆಜ್ಜೆ ಜಾಡು ಮುಗಿದ ಜಾಗದಲ್ಲಿ ಕಂಡಿದ್ದು ಒಂದು ಠೊಣಪ ತೋಳ! ನಾಲಗೆ ಹೊರಚಾಚಿ, ಸಂಗಡಿಗರಿಗಾಗಿ ಕಾಯುತ್ತ ಬಿದ್ದುಕೊಂಡಿತ್ತು.
ಪಟ್ಟು ಬಿಡದ ಪುಟ್ಟ ಮರಿ, ಮತ್ತೆ ಕಣ್ಣಿಗೆ ಕಂಡ ಹೆಜ್ಜೆ ಗುರುತು ಹಿಡಿದು ನಡೆಯಿತು. ಅದಾಗಲೇ ಕತ್ತಲಾಗುತ್ತಿತ್ತು. ದಾರಿ ತಪ್ಪಿದ ಮರಿಸಿಂಹಕ್ಕೆ ಈಗ ತನ್ನ ಅಸಾಯಕತೆಗೆ ಕೋಪ ಬಂದು ಹೋಗಿತ್ತು. ಅದು ಮತ್ತೂ ಹೆಚ್ಚಾಗುವಂತೆ, ಹೆಜ್ಜೆ ಗುರುತು ಮುಗಿದಲ್ಲಿಗೆ ಆನೆಹಿಂಡು ನಿಂತಿತ್ತು. ಈಗಂತೂ ಅದಕ್ಕೆ ಅಳುವೇ ಬಂದುಹೋಯ್ತು.
ಮರದ ಕೆಳಗೆ ಮುದುಡಿ ಮಲಗಿ ಬಿಕ್ಕಳಿಸುತ್ತಿತ್ತು. ಆ ಹೊತ್ತಿಗೆ, ಅದೇ ಮರದ ಮೇಲೆ ಕುಳಿತಿದ್ದ ಗೂಬೆಯೊಂದಕ್ಕೆ ಸಿಂಹದ ಮರಿಯ ಅಳು ಕೇಳಿಸಿತು. ಕೂಡಲೇ ಹಾರಿ ಮರಿಯ ಬಳಿ ಕುಳಿತು ವಿಚಾರಿಸಿತು.

ಮರಿ ಸಿಂಹದ ಕಥೆ ಕೇಳಿದ ಗೂಬೆ ನಗುತ್ತ, ಅದರ ತಲೆ ಸವರಿ, ನೀನು ತಲಪಬೇಕಾದ ಗುರಿ, ನೀನು ಆಯ್ದುಕೊಳ್ಳುವ ಹೆಜ್ಜೆ ಗುರುತಿನ ಮೇಲೆ ಅವಲಂಬಿತವಾಗಿದೆ. ನೀನು ಸಿಂಹದ ಹೆಜ್ಜೆಯನ್ನೇ ಅನುಸರಿಸಿದರೆ, ಸಿಂಹದ ಗುಹೆಯನ್ನೇ ಸೇರುವೆ” ಎಂದು ಹಿತ ನುಡಿಯತು.
ಮರು ಮುಂಜಾನೆ ಸಿಂಹದ ಮರಿ, ಉಳಿದೆಲ್ಲವನ್ನು ನಿರ್ಲಕ್ಷಿಸಿ, ಕೇವಲ ಸಿಂಹದ ಹೆಜ್ಜೆ ಜಾಡನ್ನೇ ಹುಡುಕಿ ತೆಗೆಯಿತು. ಮತ್ತು ಅದನ್ನು ಹಿಂಬಾಲಿಸಿ ನಡೆಯಿತು. ಬಿಸಿಲು ಏರುವುದರೊಳಗಾಗಿ ಅದು ತನ್ನ ಗುಹೆಯ ಮುಂದೆ ನಿಂತಿತ್ತು!
ನೀತಿ: ನಿರ್ದಿಷ್ಟ ಗುರಿಯನ್ನು ತಲಪಲು, ನಿರ್ದಿಷ್ಟ ಹೆಜ್ಜೆ ಜಾಡನ್ನೇ ಅನುಸರಿಸಬೇಕು.






Leave a Reply