ಪುಟ್ಟ ಭಕ್ತರ ಸಾಹಸ…

ಸಂಕೀರ್ತನ ಯಶೋಗಾಥೆಗಳು

– ಆಧಾರ: ಮುರಳೀವಾದಕ ದಾಸರ ‘ಸಬ್‌ ವೇ ಸೇವಿಯ‌ರ್ಸ್‌ʼ ಲೇಖನ

ಪುಸ್ತಕ ವಿತರಣೆ ಮಾಡಲು ವಿಶೇಷ ಅರ್ಹತೆಗಳೇನೂ ಬೇಕಿಲ್ಲ. ಅದಕ್ಕೆ ಅನುಭವ ವಯಸ್ಸು, ತಿಳುವಳಿಕೆಗಳ ನಿರ್ಬಂಧವಿಲ್ಲ. ಇಲ್ಲಿ ಕೆಲಸ ಮಾಡುವುದು ಭಕ್ತರೊಳಗಿನ ಶ್ರದ್ಧೆ ಮತ್ತು ಕೃಷ್ಣನೆಡೆಗಿನ ಅಪರಿಮಿತ ಪ್ರೇಮ.

ನ್ಯೂಯಾರ್ಕ್ನಲ್ಲಿ ಒಂಬತ್ತರಿಂದ ಹದಿನಾರರವರೆಗಿನ ಮಕ್ಕಳು ಕ್ರಿಸ್‌ ಮಸ್ ರಜಾ ದಿನಗಳನ್ನು ಸಂಕೀರ್ತನೆಯ ಮೂಲಕ ಸದ್ಭಳಕೆ ಮಾಡಿಕೊಳ್ಳುವ ರೂಢಿ ಆರಂಭವಾಗಿತ್ತು. ವರ್ಷಂಪ್ರತಿ ನಡೆದು ಬರುತ್ತಿದ್ದ ಈ ಕಾಯಕದಲ್ಲಿ ಮಕ್ಕಳದು ವಿಭಿನ್ನ ಅನುಭವ. ಅವರ ಅನುಭವ, ದೊಡ್ಡವರಿಗೊಂದು ಪಾಠ.

ಧನಾತ್ಮಕ – ಋಣಾತ್ಮಕ ಪರಿಣಾಮಗಳನ್ನು ಎದುರಿಸುವ ಈ ಪುಟ್ಟ ಭಕ್ತರಿಗೆ ಎಳವೆಯಲ್ಲೇ ಸಂಕೀರ್ತನದ ಮೂಲಕ ಫಲಾಪೇಕ್ಷೆಯಿಂದ ಮುಕ್ತರಾಗುವ ತರಬೇತಿ ಮಧ್ಯೆ ಎಲ್ಲೋ ಒಂದಷ್ಟು ಪ್ರಕರಣಗಳಲ್ಲಿ ಮಸುಕಾದಂತೆ ಕಂಡರೂ ಕೊನೆಗೆ ಸಂಕೀರ್ತನೆಗೆ ಜಯವೇ. ಇದು ಸಂಕೀರ್ತನ ಯಶೋಗಾಥೆ!

ಮುರಳೀವಾದಕದಾಸರು ಎಂಟು ವರ್ಷಗಳಿಂದ ಪುಸ್ತಕ ವಿತರಣೆಗಾಗಿ ಮಕ್ಕಳನ್ನು ತರಬೇತುಗೊಳಿಸುವ ಅವರೊಂದಿಗೆ ಪುಸ್ತಕ ವಿತರಣೆಗೆ ತೆರಳುವ ಜವಾಬ್ದಾರಿ ವಹಿಸಿಕೊಂಡಿದ್ದರು. ಎಂಟನೇ ವರ್ಷದ ಕ್ರಿಸ್‌ಮಸ್ ರಜಾದಿನಗಳ ಪುಸ್ತಕ ಮ್ಯಾರಾಥಾನ್ ಅನುಭವವನ್ನು ಅವರು ಹೀಗೆ ದಾಖಲಿಸಿದ್ದಾರೆ;

ಅದೊಂದು ಅಂಡರ್ ರೌಂಡ್ ರಸ್ತೆ. ಅಲ್ಲಿಯೇ ನಾವು ಪುಸ್ತಕ ವಿತರಣೆಗೆ ತೊಡಗಬೇಕಿದ್ದದ್ದು. ಅಲ್ಲಿಗೆ ಹೋಗಲು ನಾವು ಹತ್ತಿದ್ದ ವಾಹನ ಹೆರಾಲ್ಡ್‌ ಸ್ಕ್ವೇರ್‌ ಮ್ಯಾಕಿಯ 34ನೇ ರಸ್ತೆಯಲ್ಲಿ ನಿಂತಿತು. “ಬ್ಯಾಕ್ ಟು ಗಾಡ್ ಹೆಡ್’ ಪತ್ರಿಕೆಗಳು ತುಂಬಿದ್ದ ಬಾಕ್ಸನ್ನು ಕೆಳಗಿಳಿಸುತ್ತ” ಮಹಾಶಯ, ಇದೀಗ ಬಂತು!” ಎಂದೆ.

“ನಾವು ಪುಸ್ತಕ ವಿತರಿಸಬೇಕಿರುವುದು ಈ ಸ್ಥಳದಲ್ಲಿಯೇ?” ನಮ್ಮ ಸಂಕೀರ್ತನ ತಂಡದ ಅತಿ ಹಿರಿಯ ಸದಸ್ಯ ಒಂಬತ್ತು ವರ್ಷದ ಜಯಶಚಿ ಕೇಳಿದ.

“ಇಲ್ಲ ನಾವು ಮೆಟ್ಟಿಲು ಹತ್ತಿ ಮೇಲೆ ಹೋಗೋಣ, ಅಲ್ಲಿ ಒಳ್ಳೆಯ ಫಲಿತಾಂಶ ದೊರೆಯುವುದು!’ ಈ ಉತ್ತರ ಹೊರಬಿದ್ದುದು ಹದಿನಾಲ್ಕು ವರ್ಷದ ಕೀರ್ತನನಿಂದ. ಅವನು ಹಾದಿಬದಿಯ ಪುಸ್ತಕ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುತ್ತಿರುವುದು ಇದು ನಾಲ್ಕನೇ ಬಾರಿ.

ಅವನೊಬ್ಬ ಪುಟಾಣಿಗಳ ಸಂಕೀರ್ತನ ತಂಡದ ಹಿರಿಯ ವ್ಯಕ್ತಿ ಮಾತ್ರವಲ್ಲ ಶ್ರಮಿಕ ಮತ್ತು ಬಹಳ ಆಸಕ್ತಿಯಿಂದ ಕೆಲಸ ಮಾಡುವವನೂ ಆಗಿದ್ದ. ಈ ಬಾರಿಯ ಪುಸ್ತಕ ವಿತರಣೆಗೆ ಅವನು ಬರುವ ಕಾರ್ಯಕ್ರಮವೇನೂ ಇರಲಿಲ್ಲ. ಆದರೆ ಅವನು ತನ್ನ ಪೋಷಕರು ಮತ್ತು ಉಪಾಧ್ಯಾಯರನ್ನು ಬೇಡಿಕೊಂಡು ನನ್ನನ್ನೂ ಒಪ್ಪಿಸಿ ತ೦ಡದಲ್ಲಿ ಸೇರಿಕೊಂಡಿದ್ದ.

ಸಬ್‌ ವೇಯ ವಾಹನಗಳ ದಟ್ಟಣೆ, ಗಿಜಿಗುಡುವ ಜನಜಂಗುಳಿಗಳ ನಡುವೆ ನನಗೆ ಕಳೆದ ವರ್ಷ ಮ್ಯಾರಾಥಾನ್ ನೆನಪಾಯಿತು. ನಾವು ಇದೇ ಸ್ಥಳಕ್ಕೆ ಬಂದಿದ್ದೆವು. ಇಲ್ಲಿ ಕಾಲಿಡುತ್ತಿದ್ದ ಹಾಗೆಯೇ, ಒಬ್ಬ ನ್ಯೂಯಾರ್ಕ್ ಸಿಟಿ ಪೊಲೀಸನು ನಮ್ಮತ್ತಲೇ ದಿಟ್ಟಿಸತೊಡಗಿದ.

ಇತ್ತ ಬೊಟ್ಟು ಮಾಡಿ ಕೈ ಬೀಸಿದ, ಅದನ್ನು ನೋಡಿ ಅವನು ನಮ್ಮಲ್ಲಿ ಯಾರಾದರೊಬ್ಬನ್ನು ಕರೆಯುತ್ತಿರುವನೆಂದುಕೊಂಡು ಅತ್ತ ಹೊರಟೆ. ಆದರೆ ಆತನ ಸನ್ನೆಗಳಿಂದ ಅವನು ನನ್ನ ಹೊರತಾಗಿ ಬೇರೆ ಯಾರನ್ನೋ ನಿರ್ದೇಶಿಸುತ್ತಿರುವನೆಂದು ತಿಳಿಯಿತು. ಅವನು “ನೀನು ! ನೀನು ! ” ಎಂದು ಕರೆಯುತ್ತಿದ್ದ, ಅವನು ಕರೆಯುತ್ತಿದ್ದುದು ಪುಟ್ಟ ಕೀರ್ತನನನ್ನು!

ಅನುಮತಿಗಾಗಿ ನನ್ನತ್ತ ನೋಡಿದ ಕೀರ್ತನ, ನಾನು ತಲೆಯಾಡಿಸುತ್ತಲೇ ಆಫೀಸರನೆಡೆಗೆ ಹೊರಟ. ನಾವೆಲ್ಲರೂ ಏನಾಗಲಿದೆಯೋ ಎಂಬ ಆತಂಕದಿಂದ ಮೆಲ್ಲನೆ ಆತ್ತಲೇ ನೋಡುತ್ತಿದ್ದೆವು. ಪೊಲೀಸ್‌ ಮತ್ತು ಕೀರ್ತನ ನಡುವೆ ಅತಿ ಚಿಕ್ಕ ಸಂಭಾಷಣೆ ನಡೆದಂತೆ ಕಂಡಿತು. ಆತ ಇದ್ದಕ್ಕಿದ್ದ ಹಾಗೇ ಕೀರ್ತನನನ್ನು ತೋಳುಗಳಿಂದ ಬಳಸಿ ತಬ್ಬಿಕೊಂಡು ಕೈ ಕುಲುಕಿದ. ಇಬ್ಬರೂ ದೊಡ್ಡ ಮುಗುಳಗೆಯೊಂದಿಗೆ ಬೀಳ್ಕೊಂಡರು.

ಓಡಿ ಬಂದ ಕೀರ್ತನ ಉಲ್ಲಾಸದಿಂದ, “ಮುರಳೀವಾದಕ ಪ್ರಭು, ಏನಾಯ್ತು ಗೊತ್ತೆ? ನಾನು ಅಲ್ಲಿ ಹೋದಾಗ ಪೊಲೀಸ್ ನವರು “ “ನನಗೆ ನೀನು ಗೊತ್ತು ನಿನ್ನ ಹೆಸರು ಕೀರ್ತನಾ ಅಲ್ಲವೇ? ಕಳೆದ ವರ್ಷದಿಂದ ನಾನು ನಿನ್ನನ್ನು ಬಲ್ಲೆ” ಎಂದರು. ಮತ್ತು ನನ್ನ ಕೈ ಕುಲುಕಿ, ಇದೊಂದು ಒಳ್ಳೆಯ ಕೆಲಸ, ಮುಂದುವರಿಸಿಕೊಂಡು ಹೋಗು ಮಗೂ !” ಎಂದರು ಎಂದು ವರದಿ ಒಪ್ಪಿಸಿದ.

34ನೇ ರಸ್ತೆಯ ನಿಲ್ದಾಣದಲ್ಲಿ ಪೊಲೀಸ್ ವ್ಯವಸ್ಥೆ ಅಚ್ಚುಕಟ್ಟಾಗಿತ್ತು ಮಾತ್ರವಲ್ಲ. ಅವರು ನಮ್ಮ ಸಮಾಜದ ಸಾಹಿತ್ಯವನ್ನು ಪ್ರತಿ ಕ್ರಿಸ್‌ಮಸ್ ವೇಳೆಯಲ್ಲಿ ವಿತರಿಸುವ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದರು. ಇದು ನಾನು ಈ ಹುಡುಗರನ್ನು ಮತ್ತೆ ಇದೇ ಸ್ಥಳಕ್ಕೆ ಕರೆತರಲು ನಿರ್ಧರಿಸುವಂತೆ ಮಾಡಿತು. ಅಲ್ಲದೆ ಈ ನಿಲ್ದಾಣವು ಅಂಡ‌ರ್‌ ಗ್ರೌಂಡ್‌ನಲ್ಲಿರುವುದರಿಂದ ಮಕ್ಕಳಿಗೆ ಹವಾಮಾನ ಏರುಪೇರುಗಳಿಂದ ರಕ್ಷಣೆಯೂ ದೊರೆಯುತ್ತದೆ ಎನ್ನುವುದು ನನ್ನ ಮತ್ತೊಂದು ಆಲೋಚನೆ.

ಮೆಟ್ಟಿಲೇರಿ ಹೋಗುತ್ತಿದ್ದಂತೆಯೇ ನಮ್ಮನ್ನು ಮೂತ್ರ, ತ್ಯಾಜ್ಯಗಳ ಗಬ್ಬು ವಾಸನೆ ಸ್ವಾಗತಿಸಿತು.

“ಅಲ್ಲಿ ನೋಡಿ ! ನೋಡಿ |’ ಜಯಶಚೀ ಅಲ್ಲಲ್ಲಿ ಮೂಲೆ ಹಿಡಿದು ಮಲಗಿದ್ದವರತ್ತ ಬೊಟ್ಟು ಮಾಡಿದ. “ಅವರು ಇಲ್ಲಿ ಬದುಕುವರೇನು?” ಅವನ ಮುಗ್ಧ ಮನಸ್ಸಿಗೆ ಬೇರೇನೂ ತೋಚಲಿಲ್ಲ. ನ್ಯೂಯಾರ್ಕ್ ಪಟ್ಟಣದಲ್ಲಿ ಅಂತಹ ದೃಶ್ಯಗಳ ಪರಿಚಯ ಅವನಿಗೆ ಸಾಧ್ಯವಿರಲಿಲ್ಲ.

“ಅದೇನೂ ಹೆಚ್ಚಿನದಲ್ಲ!’ ಕ್ರಿಸ್‌ಮಸ್‌ ದಿನದಂದು ಹನ್ನೆರಡು ತುಂಬಲಿರುವ ಗೋವಿಂದ ದಾಸ ನುಡಿದ ! ಇದು ಅವನ ಮೂರನೇ ಮ್ಯಾರಥಾನ್, ಮತ್ತು ಅವನು ಅದಾಗಲೇ ಸಾಕಷ್ಟು ಆತ್ಮವಿಶ್ವಾಸ ಗಳಿಸಿಕೊಂಡಿದ್ದ. ‘ಇಲ್ಲಿಗೆ ಬರುವುದೆಂದರೆ, ಶ್ರೀಮದ್ಭಾಗವತದ ಐದನೇ ಸ್ಕಂದದಲ್ಲಿ ವಿವರಿಸಿರುವ ನರಕಸದೃಶ ಗ್ರಹಗಳಿಗೆ ಹೋದಹಾಗೆ ಮುಂದೆ ನೀನು ಇನ್ನೂ ಚಿತ್ರವಿಚಿತ್ರವಾದವನ್ನು ಕಾಣಲಿರುವೆ” ಎಂದ.

ಹನ್ನೆರಡು ವರ್ಷದ ಫೋರನೂ ಸಂಕೀರ್ತನದ ಸಹವಾಸದಿಂದ ಅದಾಗಲೇ ಭಾಗವತವನ್ನು ಉದಾಹರಿಸಿ ಮಾತನಾಡತೊಡಗಿದ್ದ ಇದಲ್ಲವೇ ಸಂಕೀರ್ತನೆಯ ಮಹಿಮೆ ?

ಅಲ್ಲಿಂದ ನಾವು ಮುಂದುವರಿದಾಗ ಪೆರುದೇಶದ ಸಂಗೀತಗಾರರ ತಂಡವೊಂದು ಕಂಡಿತು. ”ಅವರು ಯಾರು ?’ ಸೀತಾರಾಮ ಕೇಳಿದ. ಆದರೆ ನನಗೆ ಪುಸ್ತಕಗಳನ್ನಿಡಲು ಸೂಕ್ತ ಸ್ಥಳ ಹೊಂದಿಸಿಕೊಳ್ಳುವ ಗಡಿಬಿಡಿ. ಈ ಸೀತಾರಾಮ ಹನ್ನೊಂದು ವರ್ಷದ ಹುಡುಗ ಎಲ್ಲರೂ ಅವನನ್ನು ಪ್ರೀತಿಯಿಂದ ‘ಪಂಡಿತ್‌’ ಎಂದು ಕರೆಯುತ್ತಿದ್ದರು.

ಅವನಿಗೆ ತನ್ನ ವಯಸ್ಸಿಗಿಂತ ನಾಲ್ಕೈದು ಪಟ್ಟು ಹೆಚ್ಚು ಜ್ಞಾನ ಮತ್ತು ತಾತ್ತ್ವಿಕ ವಿಷಯಗಳ ಬಗ್ಗೆ ಮಾತನಾಡಲು ಆಸಕ್ತಿ ಇತ್ತು. ಈ ಎಂಟು ದಿನಗಳ ಕಾಲ ಅವನು ಅದರಲ್ಲೇ ಕಳೆಯುವವನಿದ್ದ. ಹೀಗೆ ನಮ್ಮ ತಂಡದ ಎಲ್ಲ ಪುಟ್ಟ ಭಕ್ತರೂ ಉತ್ಸಾಹದಿಂದ ಸಂಕೀರ್ತನ ಜಯಭೇರಿ, ಬಾರಿಸಲು ಸಿದ್ಧರಾಗಿದ್ದರು.

” ಒಂದು ನಿಮಿಷ, ಎಲ್ಲರೂ ಇಲ್ಲಿ ಬನ್ನಿ” ನಾನು ಮಕ್ಕಳನ್ನು ಕರೆದೆ. ಎಂಟು ವರ್ಷಗಳ ನನ್ನ ಅನುಭವ ಮಕ್ಕಳನ್ನು ಹೇಗೆ ನಿಭಾಯಿಸಬೇಕು ಎಂದು ಕಲಿಸಿಕೊಟ್ಟಿತ್ತು. ಅವರಿಗೆ ಕೊನೆ ಘಳಿಗೆಯಲ್ಲಿ ಹೇಳಬೇಕಾದುದೆಲ್ಲವನ್ನು ಹೇಳಿದೆ. ನನ್ನೊಂದಿಗಿದ್ದ ಏಳೂ ಪುಟಾಣಿಗಳ ಮುಖಗಳು ಆತ್ಮವಿಶ್ವಾಸದಿಂದ ಬೆಳಗುತ್ತಿದ್ದವು.

” ಎಷ್ಟು ಜನರನ್ನು ಸಂಧಿಸಲು ಸಾಧ್ಯವಾಗುತ್ತದೆಯೋ ಅಷ್ಟು ಪ್ರಯತ್ನಿಸಿ, ಅವರು ನಿಜವಾಗಿಯೂ ಬಯಸಿದರೆ ನೀವು ಪತ್ರಿಕೆಯನ್ನು ಉಚಿತವಾಗಿ ಕೊಡಬಹುದು. ಆದರೆ ಪ್ರತಿಯೊಬ್ಬರಲ್ಲಿಯೂ ದೇಣಿಗೆ ಕೇಳಿ ಪಡೆಯಿರಿ. ಹೆಚ್ಚಿನದಾಗಿ ಅವರು ಪತ್ರಿಕೆಯನ್ನು ಓದಲು ಬಯಸುವರು. ಸರಿ ತಾನೆ? ಸಿದ್ಧರಾಗಿದ್ದೀರಲ್ಲ?’ ಅವರೆಲ್ಲ ತಲೆಯಾಡಿಸಿದರು.

ಅವರೆಲ್ಲರೂ ಚೆನ್ನಾಗಿ ತರಬೇತುಗೊಂಡ ಫುಟ್ ಬಾಲ್ ಆಟಗಾರರ ಹಾಗೆ ಅಲ್ಲಿಂದ ಹೊರಟು ಆ ಸ್ಥಳದ ತುಂಬೆಲ್ಲ ಚದುರಿದರು. ”ಕ್ಷಮಿಸಿ, ಸರ್ ನಿಮಗಾಗಿ ಇಲ್ಲೊಂದು ಉಡುಗೊರೆಯಿದೆ”

“ರಜಾದಿನದ ಉಡುಗೊರೆ ಮೇಡಮ್ ಇದು ನಿಮಗಾಗಿ’.

 “ನಿಮ್ಮ ಕ್ರಿಸ್‌ಮಸ್ ಉಡುಗೊರೆ ಕೊಳ್ಳುವುದಿಲ್ಲವೇನು?’ ಇತ್ಯಾದಿಯಾಗಿ ಆ ಪುಟ್ಟ ಭಕ್ತರು ಚಟಪಟನೆ ಸುಳಿದಾಡುತ್ತಿದ್ದರು. ನಾನು ಕೃಷ್ಣದಾಸನತ್ತ ಗಮನ ಹರಿಸಿದೆ. ಅವನಿಗೆ ಕೇವಲ ಒಂಬತ್ತು ವರ್ಷ. ಅಲ್ಲದೆ ನ್ಯೂಯಾರ್ಕ್ ನಗರದಲ್ಲಿನ ಈ ಸಂಕೀರ್ತನ ಅವನ ಮೊದಲ ಅನುಭವ. ಆದರೆ ಅವನು ಅದು ತನ್ನದೇ ಪರಿಚಿತ ಸ್ಥಳವೆಂಬಂತೆ ಚುರುಕಾಗಿ ವರ್ತಿಸುತ್ತಿದ್ದ.

“ ನಿಮ್ಮ ಉಡುಗೊರೆ ಇಲ್ಲಿದೆ” ಮೂವತ್ತರ ಆಸುಪಾಸಿನ ಒಳ್ಳೆಯ ಉಡುಗೆ ತೊಟ್ಟ ವ್ಯಕ್ತಿಯ ಬಳಿ ಸಾರಿದ. ಆ ವ್ಯಕ್ತಿ ಕೆಳಗೆ ಬಗ್ಗಿ ಪುಸ್ತಕ ಪಡೆದುಕೊಂಡು ಕೃಷ್ಣದಾಸನತ್ತ ದಿಟ್ಟಿಸಿದ. ”ಇದು ನನಗೇನು? ಇದು ಉಚಿತವೇ?” ಆತ ತುಸು ಅಚ್ಚರಿಯಿಂದ ತಲೆಬೋಳಿಸಿ ಧೋತಿ ತೊಟ್ಟ, ತನ್ನ ಸೊಂಟದಷ್ಟೆತ್ತರಕ್ಕೂ ಬಾರದ ಆ ಚೋಟು ಹುಡುಗನನ್ನು ಕುರಿತು ಕೇಳಿದ.

“ನೀವು ಅದನ್ನು ಉಚಿತವಾಗೇ ಪಡೆಯಬಹುದು” ಕೃಷ್ಣದಾಸ ತತ್‌ ಕ್ಷಣ ಉತ್ತರಿಸಿದ, ” ಆದರೆ ನೀವು ಇದನ್ನು ಖಂಡಿತವಾಗಿಯೂ ಓದುವಿರೆಂದು ನನಗೆ ಪ್ರಮಾಣ ಮಾಡಬೇಕು. ಜೊತೆಗೆ ಕೊಂಚ ದೇಣಿಗೆ ನೀಡಿದರೆ ಚೆನ್ನಾಗಿರುತ್ತದೆ’ ಆಧುನಿಕತೆಯ ಪ್ರತಿರೂಪವಾಗಿದ್ದ ಆ ವ್ಯಕ್ತಿ ಕೃಷ್ಣದಾಸನ ಮೋಡಿಗೆ ಒಳಗಾದ. ದೊಡ್ಡದಾಗಿ ನಕ್ಕು ತನ್ನ ಜೇಬಿನಿಂದ ಹಣವನ್ನು ತೆಗೆದು ಕೊಡುತ್ತಾ, ಸರಿ ತಾನೆ?” ಎಂದು ಕೇಳಿದೆ.

ಕೃಷ್ಣದಾಸ ಅಷ್ಟೇ ಗಂಭೀರವಾಗಿ ಅದನ್ನು ಪಡೆದು, “ಸರಿ, ಧನ್ಯವಾದಗಳು, ಹರೇ ಕೃಷ್ಣ’ ಎಂದು ಬೀಳ್ಕೊಟ್ಟು, ಹಣವನ್ನು ಭದ್ರಪಡಿಸಿ, ಮತ್ತೊಂದು ಪತ್ರಿಕೆ ಕೈಯಲ್ಲಿ ತೆಗೆದುಕೊಂಡು, “ಎಕ್ಸ್‌ಕ್ಯೂಸ್ ಮಿ ಮೇಡಮ್, ಇಲ್ಲಿ ನಿಮಗಾಗಿ ಉಡುಗೊರೆಯಿದೆ’ ಎನ್ನುತ್ತಾ ಹೊರಟ!

ಈ ಹುಡುಗರು ಅದೆಷ್ಟು ಸರಾಗವಾಗಿ ಪುಸ್ತಕ ವಿತರಣೆಯ ಕಾರ್ಯವನ್ನು ನಿರ್ವಹಿಸುತ್ತಿದ್ದರೆಂದರೆ, ಸ್ವತಃ ನನಗೇ ಅದು ಅಚ್ಚರಿ ತರಿಸಿತ್ತು. ಹಾದಿಯ ಮಧ್ಯದಲ್ಲಿ ನಿಂತುಕೊಂಡು ಅಲ್ಲಿ ಓಡಾಡುವ ಪ್ರತಿಯೊಬ್ಬರ ಎದುರಿಗೂ ಪುಸ್ತಕವನ್ನು ಚಾಚಿ ಅವರ ಗಮನ ಸೆಳೆಯಲು ಯತ್ನಿಸುತ್ತಿದ್ದರು.

ಯಾರಾದರೊಬ್ಬರು ನಿಲ್ಲುವವರೆಗೂ ನಿರಂತರವಾಗಿ ಅವರು ಈ ಪ್ರಯತ್ನದಲ್ಲಿ ತೊಡಗುತ್ತಿದ್ದರು. ಅವರು ಎಲ್ಲಗಾತ್ರದ, ಆಕಾರದ, ತತ್ತ್ವಗಳ – ಎಲ್ಲ ರೀತಿಯ ಜನರನ್ನು ಅಡ್ಡಗಟ್ಟಿ, “ಬ್ಯಾಕ್ ಟು ಗಾಡ್ ಹೆಡ್’ ಪತ್ರಿಕೆ ಕೊಳ್ಳುವಂತೆ ಮತ್ತು ದೇಣಿಗೆ ನೀಡುವಂತೆ ಮನ ಒಲಿಸುತ್ತಿದ್ದರು.

“ಮತ್ತಷ್ಟು ಪತ್ರಿಕೆಗಳು ಬೇಕು !” ಹದಿನಾರು ವರ್ಷದ ಪವನ್ ಕುಮಾರ್ ಓಡುತ್ತಾ ಬಂದ. ಪವನಕುಮಾರನ ತಂದೆ ಏಳನೇ ತಲೆಮಾರಿನ ಆಯುರ್ವೇದ ತಜ್ಞ. ಪವನ್ ಕೂಡ ಆಯುರ್ವೇದದ ಅಧ್ಯಯನದ ಹಾದಿಯಲ್ಲಿದ್ದು, ಒಂದೂವರೆ ವರ್ಷದ ಹಿಂದೆ ನಮ್ಮೊಂದಿಗೆ ಸೇರಿಕೊಂಡಿದ್ದ. ಕಳೆದ ವರ್ಷದ ಮ್ಯಾರಥಾನ್ ಅವನ ಮೊದಲ ಅನುಭವ. ಲಕ್ನೋದ ಸ್ನೇಹಮಯ ಸುರಕ್ಷಿತ ವಾತಾವರಣದಿಂದ ನ್ಯೂಯಾರ್ಕಿಗೆ ಬಂದಿದ್ದ ಅವನು ಸಾಂಸ್ಕೃತಿಕ ಆಘಾತವನ್ನು ಅನುಭವಿಸಿದ್ದ. ಈ ವರ್ಷ ಅದು ಬೇರೆಯೇ ಕಥೆ.

“ನಾನು ಕೊನೆಯದಾಗಿ ಭೇಟಿಯಾದ ವ್ಯಕ್ತಿ ಮುಸ್ಲಿಮರಾಗಿದ್ದರು.” ನಾನು ಪುಸ್ತಕಗಳನ್ನು ಸಿದ್ಧಪಡಿಸುತ್ತಿದ್ದಾಗ ಆತ ಹೇಳಿದ. “ಅವರು ಬಹಳ ಒಳ್ಳೆಯವರು, ನಾನು ಅವರಿಗೆ ನಾವೆಲ್ಲರೂ ಒಬ್ಬರೇ ದೇವರನ್ನು ಪೂಜಿಸುವುದಾಗಿ ಹೇಳಿದೆ. ನಿಮಗೆ ಹೇಗೆ ಬೇರೆ ಬೇರೆ ಹೆಸರುಗಳಿಂದ ಜನ ಕರೆಯುತ್ತಾರೋ, ಹಾಗೆ ದೇವರನ್ನೂ. ನಿಮಗೆ ಸಾಕಷ್ಟು ಹೆಸರುಗಳಿವೆಯಾದರೆ, ಭಗವಂತನಿಗೆ ಯಾಕಿರಬಾರದು? ಎಂದು ಕೇಳಿದೆ. ಅವರು ಅದರಿಂದ ಉತ್ತೇಜಿತರಾದರು ಮತ್ತು ಪತ್ರಿಕೆಯನ್ನು ಕೊಂಡು ಒಂದು ಡಾಲರ್ ಹಣವನ್ನು ಕೊಟ್ಟರು.”

ಖಂಡಿತ. ಎಲ್ಲರೂ ಕೆಟ್ಟವರೇ ಇರುವುದಿಲ್ಲ. ಟ್ರಿನಿಡಾಡ್‌ನ ಹದಿಮೂರು ವರ್ಷದ ಉದ್ಧವನ ಅನುಭವ ಇದಕ್ಕೆ ತದ್ವಿರುದ್ಧ. ಅವನು ಹತಾಶೆಯಿಂದ ಭಾರವಾದ ಹೆಜ್ಜೆಗಳನ್ನಿಡುತ್ತ ನನ್ನ ಬಳಿ ಬಂದ. “ನಾನು ಇದನ್ನು ಬಿಟ್ಟು ಬಿಡುತ್ತೇನೆ! ಯಾರೂ ನಿಲ್ಲುವುದೂ ಇಲ್ಲ. ಒಂದು ಪುಸ್ತಕವನ್ನೂ ಕೊಳ್ಳುವುದಿಲ್ಲ. ಅದಿರಲಿ, ಯಾರೂ ನನ್ನತ್ತ ನೋಡಿ, ಮಾತಾಡುವುದೂ ಇಲ್ಲ!

“ಅವನು ಪತ್ರಿಕೆಯನ್ನು ತೆಗೆದುಕೊಂಡು, ಇದು ನನಗಾಗಿ ಇರುವ ಉಡುಗೊರೆ ತಾನೆ? ಎಂದು ಪ್ರಶ್ನಿಸಿದ. ನಾನು ಹೌದು ಎಂದ ಕೂಡಲೇ ವಿಕಾರವಾಗಿ ನಗುತ್ತ ನನ್ನೆದುರೇ ಅದನ್ನು ಹರಿದು ಚೂರು ಚೂರು ಮಾಡಿದ!”

ನಾನು ಅಲ್ಲಿ ಇಲ್ಲವೇ ಇಲ್ಲ ಎಂಬಂತೆ ವರ್ತಿಸುತ್ತಾರೆ. ಕೊನೆಗೊಬ್ಬ ಮನುಷ್ಯ ಅಂತೂ ನಿಂತುಕೊಂಡ. ಅದೇ ಅವನು…..” ಉದ್ಧವ ದೂರದಲ್ಲಿ ನಿಂತಿದ್ದ ನಲವತ್ತರ ವ್ಯಕ್ತಿಯೆಡೆಗೆ ಬೊಟ್ಟು ಮಾಡಿದ. ನೀಟಾದ ಸೂಟು-ಬೂಟುಗಳನ್ನು ಧರಿಸಿ ಬಿಗುಮಾನದಿಂದ ನಿಂತಿದ್ದ ಅವನ ನೋಟ ನಮ್ಮನ್ನು ಸುಟ್ಟು ಬಿಡುವಂತಿತ್ತು.

ಉದ್ಧವನನ್ನು ಆ ಕಹಿ ಅನುಭವದಿಂದ ಹೊರತರುವ ಜವಾಬ್ದಾರಿ ನನ್ನ ಹೆಗಲೇರಿತು. ನಾನು ಅವನಿಗೆ, ಜನರನ್ನು ದೇವರ ಸಂದೇಶ ಕೇಳುವತ್ತ ಸೆಳೆಯುವಲ್ಲಿ ಎಷ್ಟೆಲ್ಲ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ವಿವರಿಸಿದೆ. ”ಕೇವಲ ನಮಗೆ ಮಾತ್ರವಲ್ಲ, ಎಲ್ಲ ಧಾರ್ಮಿಕ ಪರಂಪರೆಯ ಶ್ರೇಷ್ಠ ಆತ್ಮರುಗಳೂ ಈ ಕಾಠಿಣ್ಯವನ್ನು ಎದುರಿಸುತ್ತಾರೆ. ಕ್ರಿಸ್‌ಮಸ್‌ ಆಚರಣೆಯು ತನ್ನ ಬೋಧನೆಗೆ ಪ್ರತಿಯಾಗಿ ಹಿಂಸೆಯನ್ನು ಪಡೆದ ಅಂತಹ ಶ್ರೇಷ್ಠಾತ್ಮರ ಜನ್ಮದಿನದ ನೆನಪಿಗಾಗಿ ಆಚರಿಸುವಂಥದ್ದು.”

ಈ ಕಿರು ಸಂಭಾಷಣೆಯ ಆನಂತರ ಉದ್ಧವನ ಉತ್ಸಾಹ ಮರುಕಳಿಸಿತು. ಅವನು ಅಲ್ಲಿಂದ ಕುಣಿಯುತ್ತಾ ಹೊರಟ.

ವೇದಗಳು, ಈ ಭೌತಿಕ ವಿಶ್ವವು – ಜನರು ದೇವರನ್ನು ಮರೆಯಲೆಂದೇ ಇರುವ ವೇದಿಕೆಯಾಗಿದೆ ಎಂದು ಹೇಳಿದ. ಮತ್ತು ನಮ್ಮ ಈ ಹುಡುಗರು ಇದರ ಮೊದಲ ಅನುಭವವನ್ನು ಪಡೆಯುತ್ತಿದ್ದರು. ಪುಸ್ತಕ ವಿತರಣೆಯ ಕೆಲಸಕ್ಕೆ ಕೈ ಹಾಕಿದಾಗ ಪ್ರತಿಯೊಂದೂ ಅವರಿಗೆ ಪ್ರತ್ಯಕ್ಷ ಅನುಭವವಾಗತೊಡಗಿತು. ಅವರ ಪಾಲಿಗೆ ಇದೊಂದು ರೀತಿಯ ಸಹಜ ಶಿಕ್ಷಣವೇ ಸರಿ.

ದಿನ ಕಳೆದಂತೆ ಹುಡುಗರು ಮ್ಯಾರಥಾನ್ ಓಟದಲ್ಲಿ ಹೆಚ್ಚು ಹೆಚ್ಚು ತಲ್ಲೀನರಾಗುತ್ತ ಸಾಗಿದರು. ಪುಸ್ತಕ ವಿತರಣೆ ಅವರ ಪಾಲಿಗೆ ಹೊಸ ಸಾಹಸವಾಗಿ ಕಂಡಿತು. ಅವರು ನನ್ನನ್ನು ಕುರಿತು, ನಾವು ಮುಂಜಾನೆ ಇನ್ನೂ ಮುಂಚಿತವಾಗಿ ಹೊರಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಮುಂಜಾನೆಯ ಉಪಹಾರವನ್ನು ಎರಡು ಗಂಟೆಯ ಮೊದಲೇ ಮುಗಿಸಿಕೊಂಡು ಹೊರಟು, ರಾತ್ರಿ ಎಲ್ಲರ ಕೆಲಸ ಕಾರ್ಯಗಳು ಮುಗಿಯುವ ವೇಳೆಗೆ ಹಿಂದಿರುಗುವುದೆಂದು ಅವರ ಯೋಜನೆ.

ಇದರ ಪರಿಣಾಮವಾಗಿ ‘ ವಿಶೇಷ ಪಡೆ’ ಗಳ ಉದ್ಘಾಟನೆಯಾಯಿತು. ಬ್ರೂಕಲಿನ್‌ ದೇವಾಲಯದಲ್ಲಿ ಉಪಾಹಾರ ಮುಗಿಸಿ ಮೂರು ಹುಡುಗರೊಂದಿಗೆ ನಾನು ಹೊರಟೆ. ಅಷ್ಟು ಹೊತ್ತಿಗೆ ನಾವು ಬೀದಿಗಳಲ್ಲಿ ಪುಸ್ತಕ ವಿತರಿಸುವುದು ಲಾಭದಾಯಕವಲ್ಲ ಎನಿಸಿ, ವಾಹನಗಳನ್ನು ಅದಕ್ಕಾಗಿ ಬಳಸಿದೆವು.

ದೇವಾಲಯದಿಂದ ಹೊರಟು ಟ್ರೇನ್ ಏರುವುದು, ಅಲ್ಲಿಯೇ ಓಡಾಡುತ್ತ ಪ್ರಯಾಣಿಕರನ್ನು ಸಂಪರ್ಕಿಸುವುದು, ಮುಂದಿನ ನಿಲ್ದಾಣದಲ್ಲಿ ಕೆಳಗಿಳಿದು ಮತ್ತೊಂದು ಟ್ರೇನ್ ಹಿಡಿಯುವುದು.

ಹುಡುಗರು ಸಾಮಾನ್ಯವಾಗಿ ಪ್ರಯಾಣಿಕರ ಬಳಿಯಲ್ಲೇ ಕುಳಿತು ಅವರೊಂದಿಗೆ ಮಾತಿಗಿಳಿಯುತ್ತಿದ್ದರು. ಮತ್ತು ಪತ್ರಿಕೆ ಕೊಟ್ಟು ದೇಣಿಗೆ ಪಡೆಯುತ್ತಿದ್ದರು. ಆದರೂ ನಮ್ಮ ಪುಸ್ತಕ ವಿತರಣೆಯ ಮುಖ್ಯ ತಾಣ 34ನೆಯ ರಸ್ತೆಯೇ ಆಗಿತ್ತು. ಅಲ್ಲಿ ನಮ್ಮ ಹುಡುಗರು ವಿವಿಧ ರೀತಿಯ ಅನುಭವಗಳಿಗೆ ಒಳಗಾಗುತ್ತಿದ್ದರು.

ಗೋವಿಂದ ತನ್ನ ಅನುಭವವನ್ನು ನನ್ನೊಂದಿಗೆ ಹಂಚಿಕೊಂಡ; ಅವನು ಒಬ್ಬ ವ್ಯಕ್ತಿಯೊಡನೆ ಕೃಷ್ಣಪ್ರಜ್ಞೆಯ ಕುರಿತು ಮಾತನಾಡುತ್ತಿದ್ದ ಆಗ ಮಹಿಳೆಯೊಬ್ಬಳು ಅವರತ್ತ ಧಾವಿಸಿ, “ಓ ಇದು ಭಯಂಕರವಾಗಿದೆ. ಅಸಹನೀಯವಾಗಿದೆ. ಕೊಡದೇ ನಿಲ್ಲಿಸು !!” ಎಂದು ಅರಚುತ್ತ ಮಾತಿಗೆ ಅಡ್ಡಿಪಡಿಸಿದಳು.

ಅವಳು ಹಾಗೆ ಹೇಳುತ್ತಿರುವಾಗಲೇ ಅಲ್ಲಿಗೆ ಬಂದ ಮತ್ತೋರ್ವ ಮಹಿಳೆ – ಇದು ಬಹಳ ವಿಸ್ಮಯವಾಗಿದೆ, ನೀನು ಮಾಡುತ್ತಿರುವ ಕೆಲಸ ನನಗೆ ಮೆಚ್ಚುಗೆಯಾಗಿದೆ. ದಯವಿಟ್ಟು ಮುಂದುವರಿಸು” ಎಂದಳು. ಈ ಅನಿರೀಕ್ಷಿತ ತಿರುವಿನಿಂದ ಸ್ತಬ್ಧಳಾದ ಮೊದಲನೆ ಮಹಿಳೆ, ಅಲ್ಲಿಂದ ಕಾಲ್ಕಿತ್ತಳು. ಅನಂತರ ಎರಡನೆ ಮಹಿಳೆ ಗೋವಿಂದ ಯಾರೊಡನೆ ಮಾತನಾಡುತ್ತಿದ್ದನೋ ಅವನತ್ತ ತಿರುಗಿ, ”ಈತನ ಈ ಪತ್ರಿಕೆಯನ್ನು ತೆಗೆದುಕೊಂಡು ದೇಣಿಗೆ ನೀಡಿ” ಎಂದಳು.

ಒಬ್ಬ ಬಾಕ್ಸರ್‌ಗೆ ಪತ್ರಿಕೆ ನೀಡಿದರೆ, ಮತ್ತೊಬ್ಬ ಟ್ರೇನಿನೊಡನೆ ಓಡುತ್ತಾ ಕಿಟಕಿಯಿಂದ ಕಂಡಕ್ಟರ್ ಗೆ ಪತ್ರಿಕೆ ನೀಡಿ ಡೊನೇಷನ್ ಪಡೆಯುವ. ಮತ್ತೊಬ್ಬನಿಗೆ ಹಿಂದೊಮ್ಮೆ ಶ್ರೀಲ ಪ್ರಭುಪಾದರನ್ನು ಭೇಟಿಯಾಗಿದ್ದ ವ್ಯಕ್ತಿ ಸಿಗುವರು. ಇವರೆಲ್ಲರೂ ಸದಾ ಚಟುವಟಿಕೆಯಿಂದ ಒಬ್ಬರ ಮೇಲೊಬ್ಬರನ್ನು ಸೆಳೆಯುತ್ತಲೇ ಸಾಗುವರು.

ಈ ನಡುವೆ ನಮ್ಮ ಹರೇ ಕೃಷ್ಣ ಪಂಥದ ಮಕ್ಕಳಿಗೆ, ಆ ಕುರಿತು ಚಿತ್ರ – ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತ ಗೊಂದಲಕ್ಕೆ ಸಿಲುಕಿಸಲು ಯತ್ನಿಸುವವರೂ ಇರುತ್ತಿದ್ದರು. ಅದಕ್ಕೆ ನಮ್ಮ ಹುಡುಗರ ಉತ್ತರವೂ ಸರಿಯಾಗಿರುತ್ತಿತ್ತು.

“ನೀನು ಮಾಡುತ್ತಿರುವ ಕೆಲಸ ನಿನ್ನ ತಂದೆಗೆ ಗೊತ್ತಿದೆಯೇನು?” ”ಹೌದು, ಆ ಬಗ್ಗೆ ಅವರಿಗೆ ಹೆಮ್ಮೆ ಇದೆ. ನೀವು ಅವರಿಗೆ ಕರೆಮಾಡಿ ಖಚಿತಪಡಿಸಿಕೊಳ್ಳಬೇಕೇನು?”

“ನೀನು ಶಾಲೆಗೆ ಯಾಕೆ ಹೋಗಿಲ್ಲ?”

”ನಾವು ಹೋಗುತ್ತಿದ್ದೇವೆ, ಅಲ್ಲಿ ಇರುವವರೇ ನಮ್ಮ ಉಪಾಧ್ಯಾಯರು. ನಾವು ಜನರಿಗೆ ದೇವರನ್ನು ಅರಿಯಲು ಅರ್ಥ ಮಾಡಿಸುವುದು ಹೇಗೆ ಎನ್ನುವುದನ್ನು ಕಲಿಯುತ್ತಿದ್ದೇವೆ. ಇದೇ ಅಲ್ಲವೇ ಕ್ರಿಸ್‌ಮಸ್ ಸಾರ್?”

“ಓಹ್ ! ಇದನ್ನು ಮಾಡಲು ನೀವು ಬಲಾತ್ಕರಿಸಲ್ಪಟ್ಟಿದ್ದೀರಿ!??

“ಬಲತ್ಕಾರ? ಇದೊಳ್ಳೆ ತಮಾಷೆ! ಈ ಕೆಲಸಕ್ಕೆ ಹೊರಡಲು ಕ್ರಿಸ್‌ಮಸ್ ಗಾಗಿ ಕಾಯುವ ವ್ಯವಧಾನವೂ ನಮಗಿರುವುದಿಲ್ಲ.”

“ನೀವು ಹುಡುಗರು ಶೋಷಣೆಗೆ ಗುರಿಯಾಗಿದ್ದೀರಿ. ಹಣ ಸಂಗ್ರಹಿಸಲು ನೀವದೆಷ್ಟು ಕಷ್ಟ ಪಡುತ್ತಿದ್ದೀರಿ ಮತ್ತು ಬೇರೆ ಯಾರೋ ಇದರ ಲಾಭ ಪಡೆಯುತ್ತಿದ್ದಾರೆ !”

ಕೀರ್ತನ ಸಹನೆಯಿಂದ ವಿವರಿಸಿದ “ನಾವು ಸಂಗ್ರಹಿಸುವ ಹಣ ಮೊದಲು ನಮ್ಮ ಅಗತ್ಯದ ಖರ್ಚುಗಳನ್ನು ಭರಿಸುತ್ತದೆ. ಉಳಿದಿದ್ದು ಶಾಲೆಯ ಯೋಜನೆಗಳಿಗೆ ಸಂದಾಯವಾಗುತ್ತದೆ. ಕಳೆದ ವರ್ಷ ಮ್ಯಾರಥಾನ್‌ ನಲ್ಲಿ ಸಂಗ್ರಹಗೊಂಡ ಹಣ ಅಮೆರಿಕದಲ್ಲಿ ನಮ್ಮ ನಾಲ್ಕು ತಿಂಗಳ ಶಾಲಾ ಪ್ರವಾಸವನ್ನು ಸರಿದೂಗಿಸಿತು.”

ದೇವಾಲಯಕ್ಕೆ ಮರಳಿದ ಅನಂತರ ಹುಡುಗರು ಊಟ ಮಾಡುವಾಗ ಪರಸ್ಪರ ತಮ್ಮ ಅನುಭವಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು.

“ಒಬ್ಬರು ವೃದ್ಧೆ ನನ್ನ ಬಳಿ ಬಂದು, ನಾನು ಅತ್ಯಂತ ಮುದ್ದಾದ ಹುಡುಗಿಯೆಂದು ಹೊಗಳಿದರು. ನಾನು ನನ್ನ ಟೊಪ್ಪಿ ತೆಗೆದು ಬಕ್ಕ ತಲೆ ತೋರಿಸಿದೆ. ನಾನು ಹುಡುಗ ಎಂದು ತಿಳಿದಾಗ ಆಕೆ ಆತೀವ ಅಚ್ಚರಿಗೆ ಒಳಗಾದಳು!” ಈ ಮಾತಿಗೆ ಎಲ್ಲ ಹುಡುಗರೂ ಬಿದ್ದು ಬಿದ್ದು ನಕ್ಕರು.

ಮಧ್ಯೆ ಮಧ್ಯೆ ಒಂದಷ್ಟು ಅಡ್ಡಿ, ಆತಂಕಗಳೂ ಇರುತ್ತಿದ್ದವು. ”ಯಾರೂ ನನ್ನೆದುರು ನಿಲ್ಲುವುದೇ ಇಲ್ಲ, ನನ್ನೆದುರೇ ಹಾದು ಹೋಗಿ ನನ್ನನ್ನು ಶಪಿಸುತ್ತಾರೆ.” “ಒಬ್ಬ ಮನುಷ್ಯ ನನಗೆ, ನಾನೇನಾದರೂ ನಿನ್ನ ತಂದೆಯಾಗಿದ್ದರೆ, ಈ ಕೆಲಸಕ್ಕಾಗಿ ನಾಲ್ಕು ಬಾರಿಸುತ್ತಿದ್ದೆ ಎಂದ!”

“ಒಬ್ಬ ಹೆಂಗಸು ನನ್ನನ್ನು ನಾನು ಅಲ್ಲಿಂದ ಕಾಲ್ತೆಗೆಯದೆ ಇದ್ದರೆ ಪೊಲೀಸರನ್ನು ಕರೆಯುವುದಾಗಿ ಬೆದರಿಸಿದಳು. ನಾನು ಆಕೆಗೆ ನಾನೇ ಬೇಕಿದ್ದರೆ ಪೊಲೀಸರ ಬಳಿ ತೆರಳಿ ಆಕೆಯನ್ನು ಪರಿಚಯಿಸುವುದಾಗಿ ಹೇಳಿದಾಗ, ಮರುಮಾತಿಲ್ಲದೆ ಅಲ್ಲಿಂದ ಕಾಲ್ಕಿತ್ತಳು.” ಹೀಗೆ ದೂರುಗಳ ಪಟ್ಟಿ ಬೆಳೆಯುತ್ತಿತ್ತು.

ಕೆಲವೊಮ್ಮೆ ಹುಡುಗರ ಬಳಿ ಹುಡುಗಿಯರ ಕುರಿತು ಪ್ರಶ್ನಿಸಲಾಗುತ್ತಿತ್ತು. ಅವರು ಹೆಮ್ಮೆಯಿಂದ, ಹುಡುಗಿಯರ ತ೦ಡ ಫ್ಲೋರಿಡಾದ ದಕ್ಷಿಣ ಭಾಗಕ್ಕೆ ಪುಸ್ತಕ ವಿತರಣೆಗಾಗಿ ತೆರಳಿದೆ ಎಂದು ಉತ್ತರಿಸುತ್ತಿದ್ದರು.

34ನೇ ರಸ್ತೆಯ ನಿಲ್ದಾಣದಲ್ಲಿ ನಿಂತಿದ್ದಾಗ ಒಬ್ಬ ಅರ್ಚಕ ನನ್ನ ಬಳಿ ಬಂದು, ಕೈ ಕುಲುಕಿ, ಪುಟ್ಟ ಭಕ್ತರನ್ನು ಹೊಗಳಿದ. ”ಈ ಕೆಲಸವನ್ನು ಮುಂದುವರಿಸಿಕೊಂಡು ಹೋಗಿ, ಬಹಳ ಒಳ್ಳೆಯದನ್ನೇ ಮಾಡುತ್ತಿದ್ದೀರಿ. ದೇವರು ನಿಮ್ಮನ್ನು ಹರಸಲಿ” ಎಂದು ಹೇಳಿ ನಮಸ್ಕರಿಸಿ ಹೊರಟು ಹೋದ. ಒಂದು ಘಳಿಗೆಯ ಅನಂತರ ಉದ್ಧವ ಓಡಿ ಬಂದು, ಏನು ನಡೆಯಿತು ಎಂದು ವಿವರಿಸಿದ :

ಕೃಷ್ಣದಾಸ ಈ ಅರ್ಚಕನ ಬಳಿ ಮಾತನಾಡುತ್ತಿದ್ದ. ಮಧ್ಯೆ ಉದ್ಧವನ ಪ್ರವೇಶವಾಯ್ತು.

”ಆತ ತಾನು ಕ್ರಿಸ್ತನ ಅನುಯಾಯಿ ಎಂದಾಗ, ನಾನು ‘ತಾವು ಮಾಂಸ ತಿನ್ನುವಿರೇನು?’ ಎಂದು ಕೇಳಿದೆ. ಅವರು ‘ಹೌದು’ ಎಂದರು. ಮತ್ತು ನಾನು, “ಏಕೆ? ಏಸುಕ್ರಿಸ್ತನು – ನೀನು ಕೊಲ್ಲಬೇಡ – ಎಂದು ಹೇಳಿಲ್ಲವೇನು? ಮತ್ತೇಕೆ ನೀವು ಹಸುವನ್ನು ಕೊಲ್ಲುವಿರಿ’ ಎಂದು ಪ್ರಶ್ನಿಸಿದೆ.

ಆತ, ಹಸುಗಳಿಗೆ ಆತ್ಮ ಇಲ್ಲವೆಂದು ವಿವರಿಸಲು ಯತ್ನಿಸಿದರು. ನಾನು ಹೇಳಿದೆ, ‘ವೇದಗಳಲ್ಲಿ ಎಲ್ಲ ಜೀವಿಗಳೂ ಆಧ್ಯಾತ್ಮಿಕವಾಗಿ ಒಂದೇ ಆಗಿದ್ದು, ಬೇರೆ ಬೇರೆ ದೇಹಗಳನ್ನು ಹೊಂದಿವೆ ಎಂದು ಹೇಳಿದೆ. ಹಸುಗಳು ನಮ್ಮ ಹಾಗೆಯೇ ಜೀವಿಗಳು ನಾನು ಇದನ್ನು ನಮ್ಮ ಕೊಟ್ಟಿಗೆಯಲ್ಲಿ ದಿನಂಪ್ರತಿ ಹಸುಗಳ ಉಸ್ತುವಾರಿ ನೋಡಿಕೊಳ್ಳುವ ಹಾಲು ಕರೆಯುವ, ಹುಲ್ಲು ಹಾಕುವ ಇವೆ ಮೊದಲಾದ ಕೆಲಸಗಳ ಮೂಲಕ ಕಂಡುಕೊಂಡಿದ್ದೇನೆ.

‘ ನನ್ನ ಮಾತಿನಿಂದ ಪ್ರೇರಿತನಾಗಿ ಅವರು ತಮ್ಮ ವಾದ ನಿಲ್ಲಿಸಿದರು. ಪತ್ರಿಕೆಯನ್ನು ಕೊಂಡು, ದೇಣಿಗೆ ನೀಡಿದರು.”

ಸೀತಾರಾಮನದೂ ಇಂಥದೇ ಯಶಸ್ಸು. ಆತ ಕ್ರೈಸ್ತ ವ್ಯಕ್ತಿಯೊಬ್ಬರ ಜೊತ 45 ನಿಮಿಷಗಳ ಕಾಲ ಮಾತನಾಡಿ ಅವರು ಪತ್ರಿಕೆ ಪಡೆದು ದೇಣಿಗೆ ನೀಡುವಂತೆ ಒಲಿಸಿದ.

ಈ ಪುಟ್ಟ ಭಕ್ತರು ತಮ್ಮನ್ನು ತಾವು ಸಾಬೀತುಗೊಳಿಸಿಕೊಳ್ಳುವ ಭರದ ಹೆಚ್ಚು ಸತ್ತ್ವಶಾಲಿಗಳಾಗಿ ರೂಪುಗೊಳ್ಳುತ್ತಿದ್ದರು. ಅವರ ನಂಬಿಕೆ ಬಲಗೊಳ್ಳುತ್ತಿತ್ತು. ವೈದಿಕ ತತ್ತ್ವಶಾಸ್ತ್ರದ ಸತ್ಯ ಮತ್ತು ಸೌಂದರ್ಯಗಳು ಅಲ್ಲಿ ಅರ್ಥಗರ್ಭಿತವಾಗಿ ಘನೀಭವಿಸುತ್ತಿದ್ದವು.

ಕ್ರಿಸ್‌ಮಸ್ ಹಿಂದಿನ ಸಂಜೆ ನಮ್ಮ 8 ದಿನಗಳ ಪುಸ್ತಕ ಮ್ಯಾರಥಾನ್‌ ಗೆ ಮುಕ್ತಾಯ ಹಾಡಿ ಹೊರಟೆವು. ದಾರಿಯಲ್ಲಿ ಒಂದು ಮಳಿಗೆಯನ್ನು ಹಾದು ಹೋಗಬೇಕಾಯಿತು. ”ನಾವು ಅಲ್ಲೊಮ್ಮೆ ಪ್ರಯತ್ನಿಸಬಹುದೇ?” ಗೋವಿಂದ ಮತ್ತು ಉದ್ಧವ ತುದಿಗಾಲಲ್ಲಿ ನಿಂತು ಕೇಳಿದರು. ನಾನು ತಲೆಯಾಡಿಸಿದ ಕೂಡಲೇ ಓಡಿ ಹೋದರು. ಅವರು ಕೆಲವೇ ನಿಮಿಷಗಳಲ್ಲಿ ಮುಖದಲ್ಲಿ ಸಂತೋಷ ತುಳುಕಿಸುತ್ತಾ ಹೊರಬಂದರು.

ಗೋವಿಂದ ಹೇಳಿದ – ” ನಾನು ಭೇಟಿಯಾದ ವ್ಯಕ್ತಿ ಪತ್ರಿಕೆಯನ್ನು ಓದುತ್ತಿದ್ದರು. ನಾನು ಅವರ ಬಳಿ ಸಾರಿ, ‘ಇಲ್ಲಿ ನಿಮಗೆ ಓದಲು ಇನ್ನೂ ಉತ್ತಮವಾದ ವಸ್ತುವಿದೆ’ ಎಂದು ಹೇಳಿದೆ, ಪತ್ರಿಕೆಯನ್ನು ಕೈಗೆತ್ತಿಕೊಂಡ ಆತ ಅದರ ಹಾಳೆಗಳನ್ನೊಮ್ಮೆ ತಿರುವಿ ಹಾಕಿ, ಹತ್ತು ಡಾಲರ್‌ ಗಳನ್ನು ತೆಗೆದು ನನ್ನ ಕೈಲಿಟ್ಟರು.

ನೀವು ಮಾಡುತ್ತಿರುವ ಕೆಲಸ ಮಹತ್ತರವಾದುದು ಎಂದು ನನಗನ್ನಿಸುತ್ತದೆ ಎ೦ದರು. “ಇಬ್ಬರು ಹುಡುಗರು ಇನ್ನೂ ನಗುತ್ತಲೇ ಇದ್ದರು, ‘ನನಗನ್ನಿಸುತ್ತೆ, ಇದು ಮತ್ತೂ ಮಹತ್ತರ ಘಟನೆ. ಮಹತ್ವದ ಮ್ಯಾರಥಾನ್ ಮುಕ್ತಾಯ ಹೀಗೆ ನಡೆದದ್ದು ನಿಜಕ್ಕೂ ದೊಡ್ಡದೇ!”

ವೇದಗಳು, ಕೃಷ್ಣನು ಪ್ರತಿಯೊಬ್ಬರ ಹೃದಯದಲ್ಲೂ ನೆಲೆಗೊಂಡಿದ್ದು, ಪ್ರತಿಯೊಂದು ಚರ್ಯೆಯನ್ನು ಸಾಕ್ಷೀಕರಿಸುತ್ತಿರುತ್ತಾನೆ ಎಂದು ಹೇಳಿವೆ. ಈ ಮಕ್ಕಳು, ತಮ್ಮ ಅವಿರತ ಪ್ರಯತ್ನದಿಂದ ಕೃಷ್ಣ ಸಂಬಂಧ ಪುಸ್ತಕಗಳನ್ನು ಜನರಿಗೆ ಮುಟ್ಟಿಸಿದರು. ಕೃಷ್ಣನಿಂದ ಹರಿದುಬಂದ ಪ್ರೇಮದ ಕಾಣಿಕೆಯನ್ನು ಜನರಿಗೆ ಹಂಚುವುದು ಹೇಗೆ ಎಂದು ಈ ಕಾರ್ಯಕ್ರಮವು ಅವರಿಗೆ ತೋರಿಸಿಕೊಟ್ಟಿತು.

“ಇತರರ ಹಣೆಗೆ ಗಂಧವನ್ನಿಟ್ಟರೆ, ಅದು ಹಚ್ಚಿಸಿಕೊಳ್ಳುವವರಿಗೆ ಭೂಷಣವೇನೋ ಸರಿ, ಜೊತೆಗೆ ಹೆಚ್ಚುವವರ ಬೆರಳುಗಳೂ ಘಮಘಮಿಸುತ್ತವೆ.” ಎನ್ನುವ ಮಾತಿದೆ.

ಸಂಕೀರ್ತನೆಯ ವಿಷಯದಲ್ಲೂ ಅದು ಹಾಗೆಯೇ…..

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi