ದಧಿ ಭಾಂಡ

(ಕಿರು ನಾಟಕ)

ಆಧಾರ: ಶ್ರೀಮದ್ಭಾಗವತ

– ಬರೆದವರು: ಪದ್ಮಿನಿ ಬಾಲು

ದೃಶ್ಯ – 1

(ನಂದಗೋಕುಲ, ನಂದ ಗೋಪಾಲನ ಮನೆಯ ಹಜಾರ, ಯಶೋದೆ ಮೊಸರು ಕಡೆಯುತ್ತಾ ಹಾಡಿಕೊಳ್ಳುತ್ತಿದ್ದಾಳೆ. ಕೃಷ್ಣ ಓಡಿ ಬರುತ್ತಾನೆ)

ಕೃಷ್ಣ: ಅಮ್ಮಾ, ನನಗೆ ಬಹಳ ಹಸಿವು, ಬೇಗ ಹಾಲು ಕೊಡು (ಯಶೋದೆಯ ಬೆನ್ನಿಗೆ ಜೋತು ಬೀಳುತ್ತಾನೆ.)

ಯಶೋದೆ : ಬಾ ಕಂದ, ಕಲ್ಲು ಸಕ್ಕರೆ ಕೇಸರಿ ಹಾಕಿ ಹಾಲು ಕಾಸಿಟ್ಟಿದ್ದೇನೆ. ಕೊಡುತ್ತೇನೆ, ಕುಳಿತುಕೋ.

ಕೃಷ್ಣ: ನನ್ನ ಅಮ್ಮ, ಒಳ್ಳೆಯ ಅಮ್ಮ (ಮುದ್ದುಗರೆಯುತ್ತಾನೆ) ( ಯಶೋದೆ ಮೊಸರು ಕಡೆಯುವುದನ್ನು ನಿಲ್ಲಿಸಿ ಕೃಷ್ಣನನ್ನು ಎತ್ತಿಕೊಂಡು ಹೋಗಿ ಚಾಪೆಯ ಮೇಲೆ ಕೂರಿಸುತ್ತಾಳೆ, ಒಳಗೆ ಹೋಗಿ ಹಾಲಿನ ತಂಬಿಗೆ ಮತ್ತು ಲೋಟ ಹಿಡಿದು ಬರುತ್ತಾಳೆ)

ಯಶೋದೆ : ಹಾಲು ಬಹಳ ಬಿಸಿಯಾಗಿದೆ. ಆರಿಸಿ ಕೊಡುತ್ತೇನೆ ಮಗೂ.

ಕಷ್ಣ: ಬೇಗ ಕೊಡು, ನನಗೆ ಹಸಿವು ಎಂದರೆ ಹಸಿವು.

ಯಶೋದೆ : ಇದೋ, ಈಗಲೇ ಕೊಡುತ್ತೇನೆ. (ಹಾಲನ್ನು ಆರಿಸುತ್ತಾಳೆ, ಇದ್ದಕ್ಕಿದ್ದಂತೆ ಜ್ಞಾಪಿಸಿಕೊಂಡು), ಅಯ್ಯೋ, ಮತ್ತೊಂದು ಪಾತ್ರೆಯಲ್ಲಿ ಒಲೆಯ ಮೇಲೆ ಹಾಲಿಟ್ಟಿರುವುದನ್ನೇ ಮರೆತು ಬಿಟ್ಟೆನಲ್ಲಾ ಉಕ್ಕಿ ಹರಿಯಿತೋ, ಏನೋ, ಇರು, ಈಗಲೇ ಬರುತ್ತೇನೆ, ಕೃಷ್ಣ (ಅವಸರದಿಂದ ಒಳಗೆ ಹೋಗುತ್ತಾಳೆ)

ಕೃಷ್ಣ: (ಜೋರಾಗಿ) ಅಮ್ಮಾ, ನನಗೆ ಹಸಿವು ಎಂದು ಹೇಳಿದರೂ ತಡ ಮಾಡುತ್ತಿದ್ದೀಯ. ನನಗೆ ಕೋಪ ಬರುತ್ತಿದೆ …. (ಕೋಲಿನಿಂದ ಮೊಸರಿನ ಗಡಿಗೆಗೆ ಹೊಡೆಯುವನು, ಗಡಿಗೆ ಒಡೆದು ಮೊಸರು ಚೆಲ್ಲುವುದು)

ಯಶೋದೆ : ಕೃಷ್ಣ ಏನದು ಸದ್ದು (ಎನ್ನುತ್ತಲೇ ಬರುವಳು, ಒಡೆದ ಗಡಿಗೆಯನ್ನು ನೋಡಿ, ಹೆದರಿದವನಂತೆ ನಿಂತಿರುವ ಕೃಷ್ಣನ ಕಡೆ ತಿರುಗಿ) ನಿನ್ನ ತುಂಟತನ ಮಿತಿ ಮೀರುತ್ತಿದೆ. ಮೊಸರು ಬೆಣ್ಣೆಯನ್ನೆಲ್ಲ ಹಾಳು ಮಾಡಿದ್ದೀಯ ನಿನಗಿಂದು ಶಿಕ್ಷೆಯಾಗಲೇಬೇಕು. (ಅಲ್ಲೇ ಇರುವ ಕೋಲನ್ನು ಕೈಗೆತ್ತಿಕೊಳ್ಳುತ್ತಾಳೆ ಕೃಷ್ಣ ಓಡಿ ಹೋಗುತ್ತಾನೆ. ಯಶೋದೆ ಹಿಂಬಾಲಿಸುತ್ತಾಳೆ.)

ದೃಶ್ಯ-2

(ಮರದ ಕೆಳಗೆ ಮುದುಕನೊಬ್ಬ ಮಲಗಿದ್ದಾನೆ. ಅವನ ಪಕ್ಕದಲ್ಲಿ ದೊಡ್ಡ ಮಡಕೆಯೊಂದಿದೆ. ಕೃಷ್ಣ ಓಡುತ್ತ ಬರುತ್ತಾನೆ. )

ಕೃಷ್ಣ: ಅಜ್ಜಾ, ಅಜ್ಜಾ, ಎದ್ದೇಳು, ಈ ಗಡಿಗೆಯಲ್ಲಿ ಏನಿದೆ?

ಮುದುಕ: ಯಾರಪ್ಪಾನೀನು? ಸ್ವಲ್ಪ ಹೊತ್ತು ಮಲಗೋಣವೆಂದರೂ ಬಿಡಲಾರೆಯಲ್ಲ.

ಕೃಷ್ಣ: ಅಜ್ಜಾ, ನನ್ನ ಮಾತು ಕೇಳು, ಮೊದಲು ಆ ಗಡಿಗೆಯಲ್ಲಿ ಏನಿದೆಯೆಂದು ಹೇಳು.

ಮುದುಕ: ಅದು ಖಾಲಿ ಗಡಿಗೆ, ಬೆಳಗ್ಗೆ ಅದರಲ್ಲಿ ಮೊಸರು ಮಾರಲು ರಾಜಧಾನಿಗೆ ತೆಗೆದುಕೊಂಡು ಹೋಗಿದ್ದೆ. ಎಲ್ಲವನ್ನೂ ಮಾರಿ ಈಗ ನನ್ನ ಊರಿಗೆ ಹೋಗುತ್ತಿದ್ದೇನೆ. ಆಯಾಸವಾಯಿತೆಂದು ಮಲಗಿಕೊಂಡೆ.

ಕೃಷ್ಣ: ಅಜ್ಜಾ, ನೀನೇ ನನ್ನನ್ನು ಕಾಪಾಡಬೇಕು. ನನ್ನ ಅಮ್ಮ ನನ್ನನ್ನು ಹೊಡೆಯಲು ಅಟ್ಟಿಸಿಕೊಂಡು ಬರುತ್ತಿದ್ದಾಳೆ. ಅಜ್ಜಾ ಅದನ್ನೆಲ್ಲ ಆಮೇಲೆ ಹೇಳುತ್ತೇನೆ. ನನ್ನ ಅಮ್ಮ ಬಹಳ ಕೋಪದಲ್ಲಿದ್ದಾಳೆ. ನನಗೆ ನೀನು ಸಹಾಯ ಮಾಡದಿದ್ದರೆ ನಾನು ಏಟು ತಿನ್ನ ಬೇಕಾಗುವುದು.

ಮುದುಕ : ನಾನೇನು ಮಾಡಬೇಕು, ಹೇಳು.

ಕೃಷ್ಣ: ನಾನು ಇಲ್ಲಿ ಕುಳಿತುಕೊಳ್ಳುತ್ತೇನೆ. ನನ್ನ ಮೇಲೆ ಗಡಿಗೆಯನ್ನು ಬೋರಲು ಹಾಕಿ ನೀನು ಅದರ ಮೇಲೆ ಕುಳಿತು ಬಿಡು. ನನ್ನ ಅಮ್ಮ ಬಂದರೆ ನಾನು ಇಲ್ಲಿ ಬರಲೇ ಇಲ್ಲವೆಂದು ಹೇಳಿ ಬಿಡು. ಸ್ವಲ್ಪ ಹೊತ್ತಿನ ಅನಂತರ ನಾನು ಮನೆಗೆ ಹೋಗುವಷ್ಟರಲ್ಲಿ ಅವಳ ಕೋಪ ಮಾಯವಾಗಿರುತ್ತದೆ.

ಮುದುಕ: ನಾನು ಹಾಗೆ ಮಾಡಲಾರೆ, ಸುಳ್ಳು ಹೇಳುವುದು ತಪ್ಪು.

ಕೃಷ್ಣ: ಹಾಗೆನ್ನಬೇಡ ತಾತ, ನನ್ನಂತಹ ಚಿಕ್ಕ ಹುಡುಗ ಏಟು ತಿಂದರೆ ನಿನಗೆ ಅಯ್ಯೋ ಪಾಪ ಎನಿಸುವುದಿಲ್ಲವೇ? ಕಾಪಾಡು ಎಂದು ಕೇಳಿಕೊಂಡರೆ ಪ್ರಾಣ ಕೊಟ್ಟಾದರೂ ಕಾಪಾಡಬೇಕು ಎಂದು ನೀನು ಕೇಳಿಲ್ಲವೇ? ನನಗಾಗಿ ಒಂದು ಚಿಕ್ಕ ಸುಳ್ಳನ್ನು ಹೇಳಲಾರೆಯಾ?

ಮುದುಕ: ಮೂರ್ತಿ ಚಿಕ್ಕದಾದರೂ ಮಾತು ದೊಡ್ಡದು. ಒಳ್ಳೆಯದು, ನಿನಗೆ ಸಹಾಯ ಮಾಡುತ್ತೇನೆ ಬಾ. (ಕೃಷ್ಣ ಕುಳಿತುಕೊಳ್ಳುತ್ತಾನೆ, ಮುದುಕ ಬಾನೆಯನ್ನು ಬೋರಲು ಹಾಕಿ ಅದರ ಮೇಲೆ ಕೂಡುತ್ತಾನೆ. ಯಶೋದ ಕೈಯ್ಯಲ್ಲಿ ಕೋಲು ಹಿಡಿದು ಬಹಳ ಬಳಲಿದವಳಂತೆ ಬರುತ್ತಾಳೆ).

ಯಶೋದೆ : ಅಯ್ಯಾ, ಇತ್ತ ಕಡೆ ಒಬ್ಬಸುಂದರ ಬಾಲಕ ಓಡಿ ಬಂದುದನ್ನು ಕಂಡೆಯಾ?

ಮುದುಕ : ಬಾಲಕ ನೋಡಲು ಹೇಗಿರುವನಮ್ಮಾ?

ಯಶೋದೆ : ಕಸ್ತೂರಿ ತಿಲಕಂ ಲಲಾಟ ಫಲಕೇ ವಕ್ಷಃಸ್ಥಲೇ ಕೌಸ್ತುಭಂ,

ನಾಸಾಗ್ರೆ ನವ ಮೌಕ್ತಿಕಂ ಕರತಲೇ ವೇಣುಂ ಕರೇ ಕಂಕಣಂ

ಸರ್ವಾಂಗೇ ಹರಿಚಂದನಂ ಕಲಯನ್ ಕಂಠೇ ಮುಕ್ತಾವಲಿ೦

ಅವನೇ ನನ್ನ ಕಂದ ಕೃಷ್ಣ.

ಮುದುಕ : ಆಹಾ, ಯೋಗಿಗಳನ್ನೂ ಮೋಹಕ್ಕೆಳೆಸುವ ಮನೋಹರಮೂರ್ತಿಯನ್ನು ಕುರಿತು ಹೇಳುತ್ತಿರುವೆಯಮ್ಮ ಅವನನ್ನು ಹಡೆದನಿನ್ನ ಹೊಟ್ಟೆ ಪುಣ್ಯಕ್ಕೆ ಎಣೆಯುಂಟೆ? ಅವನು ಖಂಡಿತ ಇಲ್ಲಿಂದ ಓಡಿ ಹೋಗಲಿಲ್ಲ. ತಾಯೀ.

ಯಶೋದೆ : ಹಾಗಾದರೆ ಎಲ್ಲಿ ಹೊರಟು ಹೋದ, ನನ್ನ ಮಗು? ಅವನ ಮೇಲೆ ಕೋಪಿಸಿಕೊಳ್ಳುವ ಸೋಗನ್ನೇಕೆ ನಾನು ಹಾಕಿದೆ? ಅವನೆಷ್ಟು ಹೆದರಿದನೋ? ಓಡಿ ಅವನ ಕಾಲುಗಳೆಷ್ಟು ನೊಂದವೋ? ಗೋಮಾತೆ, ನನ್ನಕಂದನು ಸುರಕ್ಷಿತವಾಗಿ ಮನೆ ತಲಪುವಂತೆ ಅನುಗ್ರಹಿಸು ನಿನಗೊಂದು ಹೊಸ ವಸ್ತ್ರವನ್ನು ಹೊದಿಸುವೆ. ( ಚಿಂತಾಕ್ರಾಂತಳಾಗಿ ಮರೆಯಾಗುವಳು).

ಕೃಷ್ಣ: (ಗಡಿಗೆಯೊಳಗಿಂದ) ನೋಡಿದೆಯಾ, ತಾತ, ಒಂದೆರಡು ಕ್ಷಣ ನನ್ನನ್ನು ಕಾಣದಿದ್ದರೆ ನನ್ನಮ್ಮ ಎಷ್ಟು ನೊಂದು ಕೊಳ್ಳುತ್ತಾಳೆ. ಈಗ ಅವಳ ಕೋಪ ಹೋಗಿದೆ. ನನ್ನನ್ನು ಬಾನೆಯಿಂದ ಹೊರಗೆ ಬಿಡು. ಎದ್ದೇಳು, ನಾನು ಮನೆಗೆ ಹೋಗುತ್ತೇನೆ. ನನಗೆ ಮೋಕ್ಷವನ್ನು ಕರುಣಿಸಿದ ಹೊರತು ನಿನ್ನನ್ನು ಬಿಡಲಾರೆ

ಮುದುಕ: ನನಗೆ ಮೋಕ್ಷವನ್ನು ಕರುಣಿಸಿದ ಹೊರತು ನಿನ್ನನ್ನು ಬಿಡಲಾರೆ ಕೃಷ್ಣ.

ಕೃಷ್ಣ: ಮೋಕ್ಷವೇ! ಹಾಗೆಂದರೇನೆಂದೇ ನನಗೆ ತಿಳಿಯದಲ್ಲ. ಜಾಣ ಅಜ್ಜನ ಹಾಗೆ ಎದ್ದು ನನ್ನನ್ನು ಇಲ್ಲಿಂದ ಹೊರಗೆ …..

ಮುದುಕ: ಇಲ್ಲವಪ್ಪ, ನನಗೆ ಮೋಕ್ಷವನ್ನು ಕೊಟ್ಟರೇನೇ ನಿನ್ನನ್ನು ಇಲ್ಲಿಂದ ಕಳಿಸುವುದು.

ಕೃಷ್ಣ: ನೀನೊಳ್ಳೆ ಹಠಮಾರಿ ಅಜ್ಜನಾದೆಯಲ್ಲ, ನಿನ್ನ ಬಾನೆಯಲ್ಲಿ ಸಿಕ್ಕಿ ಹಾಕಿಕೊಂಡು ಉಸಿರುಗಟ್ಟಿ ಒದ್ದಾಡುವಂತಾಯಿತಲ್ಲ. ಇದಕ್ಕೆ ಬದಲು ನನ್ನ ಅಮ್ಮನಿಂದ ಎರಡೇಟು ತಿನ್ನುವುದೇ ವಾಸಿಯಾಗಿತ್ತು.

ಮುದುಕ: ಕೃಷ್ಣಾ, ಕಪಟ ನಾಟಕ ಸೂತ್ರಧಾರಿ, ನಿನ್ನ ದರ್ಶನ ಮಾತ್ರದಿಂದಲೇ ನನಗೆ ದಿವ್ಯಜ್ಞಾನವನ್ನು ಕರುಣಿಸಿದವನು ನೀನೇ ಅಲ್ಲವೇ? ಪೂರ್ವ ಜನ್ಮದ ಸ್ಮರಣೆಯನ್ನು ಕೊಟ್ಟವನೇ ನೀನಲ್ಲವೇ? ನೀನು ರಾಮಾವತಾರ ಧರಿಸಿದ್ದಾಗ ನಾನು ಗುಹನಾಗಿ ನಿನ್ನನ್ನು ಸರಯೂ ನದಿ ದಾಟಿಸಿದೆ. ಮುಂದೆ ಕೃಷ್ಣಾವತಾರ ಧರಿಸಿ ನನ್ನನ್ನು ಭವಸಾಗರ ದಾಟಿಸುವೆನೆಂದು ನನಗೆ ಕೊಟ್ಟ ಮಾತು ನೆನಪಿನಲ್ಲಿಲ್ಲವೇ ಸ್ವಾಮಿ?

ಕೃಷ್ಣ: ಮಿತ್ರಾ, ನಿನಗೆ ಮೋಕ್ಷ ಪ್ರದಾನ ಮಾಡಿದ್ದೇನೆ. ನನ್ನನ್ನು ಬಂಧ ಮುಕ್ತಗೊಳಿಸು.

ಮುದುಕ: ನನ್ನ ಬಾಂಧವರೆಲ್ಲರಿಗೂ ಮೋಕ್ಷ ನೀಡದ ಹೊರತು ಅದು ಸಾಧ್ಯವಿಲ್ಲ ಸ್ವಾಮಿ.

ಕೃಷ್ಣ: ಭಕ್ತವರೇಣ್ಯ, ನಿನ್ನ ಸ೦ಗಡ ಸಕಲ ಜೀವರಾಶಿಯನ್ನು ಮುಕ್ತಗೊಳಿಸಬೇಕೆ೦ಬ ನಿನ್ನ ಆದರ್ಶ ಎಂತಹ ಉದಾತ್ತವಾದುದು. ತಥಾಸ್ತು ಈಗಲಾದರೂ ಈ ಗಡಿಗೆಯ ಮೇಲಿಂದೇಳು.

ಮುದುಕ: ನನಗೆ ಮೋಕ್ಷ ಕೊಡಿಸಿದ ಈ ಮೊಸರಿನ ಗಡಿಗೆಗೂ ಮೋಕ್ಷಕೊಟ್ಟರೇನೇ ನಿನ್ನನ್ನು ಬಿಡುವುದು. (ರಂಗ ಮಂಟಪವು ಇದ್ದಕ್ಕಿದ್ದಂತೆ ಪ್ರಕಾಶಮಾನವಾಗುತ್ತದೆ. ಶ್ರೀ ಕೃಷ್ಣನು ಮುರಳೀ ಲೋಲನಾಗಿ ಪ್ರತ್ಯಕ್ಷನಾಗುತ್ತಾನೆ. ಗುಹನು ಕೈ ಮುಗಿದು ಎದ್ದು ನಿಲ್ಲುತ್ತಾನೆ).

ಕೃಷ್ಣ: ಸಾಧು, ಸಾಧು, ನಿಜವಾದ ಭಾಗವತ್ತೋಮನೆಂದರೆ ನೀನೇ, ಸಕಲ ಚರಾಚರ ವಸ್ತುಗಳೂ ಪರಮ ಪುರುಷನಲ್ಲಿಗೆ ಮರಳಬೇಕೆಂದು ಆಶಿಸುವ ನೀನೇ ಧನ್ಯ. ನಿನ್ನ ಬಯಕೆಗಳೆಲ್ಲವೂ ಈಡೇರುತ್ತವೆ. ನಿನ್ನ ಹೆಸರು ದಧಿ ಭಾಂಡ ಎಂದರೆ ಮೊಸರಿನ ಮಡಕೆಯವನು ಎಂದು ಪ್ರಪಂಚದಲ್ಲಿ ಪ್ರಖ್ಯಾತವಾಗಲಿ. (ಮುದುಕ ಸಾಷ್ಟಾಂಗ ಪ್ರಣಾಮ ಮಾಡುವನು) (ತೆರೆ ಬೀಳುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi