ಹೌದು ಪ್ರಭುಪಾದರು ಹೇಳಿದಂತೆ ಕೃಷ್ಣ ಸಾಹಿತ್ಯದ ಗ್ರಂಥಗಳ ಪ್ರತಿ ಪುಟವೂ ಆಕರ್ಷಣೀಯವೇ. ಕೃಷ್ಣ ಪ್ರಜ್ಞೆಯ ಸಾಹಿತ್ಯ ಭಂಡಾರ, ಹೀರಿದಷ್ಟು ಬೇಕೆನ್ನಿಸುವ ಮಧುಸಾಗರದಂತೆ! ಈ ಕುರಿತಂತೆ ತಮಗಾದ ಅನುಭವವನ್ನು ಜಯ ಗುರದೇವದಾಸರು ಹೀಗೆ ವಿವರಿಸುತ್ತಾರೆ :
“ಆಸ್ಟ್ರಿಯಾದ ಹಳ್ಳಿಯೊಂದರಲ್ಲಿ ನಾನು ಪುಸ್ತಕ ವಿತರಿಸುತ್ತಿದ್ದೆ. ಅಲ್ಲಿ ಭೇಟಿಯಾದ ಮಹಿಳೆಯೊಬ್ಬಳು ತಾನು ಅದಾಗಲೇ ಎರಡು ಪುಸ್ತಕಗಳನ್ನು ಕೊಂಡಿರುವ ಎಂದು, ತನಗೆ ಅವು ಬಹಳ ಮೆಚ್ಚುಗೆಯಾದವೆಂದೂ ಹೇಳುತ್ತಾ ನನ್ನಿಂದ ಸಂಪೂರ್ಣ ಪುಸ್ತಕಗಳ ಸೆಟ್ ಅನ್ನು ಕೊಂಡುಕೊಂಡಳು. ಅನಂತರ ಆಕೆ, ಅದೇ ಊರಿನಲ್ಲಿದ್ದ ತನ್ನ ಚಿಕ್ಕಪ್ಪನ ಮನೆಗೆ ಭೇಟಿ ಕೊಡುವಂತೆ ಹೇಳಿ ವಿಳಾಸ ನೀಡಿದರು.
ಆಕೆಯ ನಿರ್ದೇಶನದಂತೆ ನಾನು ಆಕೆಯ ಚಿಕ್ಕಪ್ಪನ ಮನೆಗೆ ಹೋದೆ. ಆತ ಅದಾಗಲೇ ಸಾಕಷ್ಟು ದೊಡ್ಡ ಪುಸ್ತಕ ಸಂಗ್ರಹ ಹೊಂದಿದ್ದರು. ಅವರ ಮಗಳು ನನ್ನನ್ನು ಕಳುಹಿಸಿದ್ದಾಳೆಂದು ಕೇಳಿ ಬಹಳ ಸಂತೋಷದಿಂದ ಸ್ವಾಗತಿಸಿದರು. “ಆಕೆ ಎಲ್ಲ ಪುಸ್ತಕಗಳನ್ನೂ ಕೊಂಡಿದ್ದಾಳಲ್ಲವೇ? ಹಾಗಿದ್ದಲ್ಲಿ ನನಗೆ ಒಂದೆರಡು ಪುಸ್ತಕಗಳು ಸಾಕು” ಎನ್ನುತ್ತ ಎರಡನ್ನು ಕೊಂಡರು. ನಾನು ಧನ್ಯವಾದ ಅರ್ಪಿಸಿ ಅಲ್ಲಿಂದ ಹೊರಟೆ.
ಮರುದಿನ ನಾನು ಸಮೀಪದ ಮತ್ತೊಂದು ಹಳ್ಳಿಯಲ್ಲಿ ಪುಸ್ತಕ ವಿತರಣೆಯಲ್ಲಿ ತೊಡಗಿದ್ದೆ. ಯುವಕನೊಬ್ಬನನ್ನಿಂದ ಪೂರ್ಣಸೆಟ್ ಖರೀದಿಸಿದ, ಮತ್ತು “ನಿಮ್ಮಿಂದ ನಿನ್ನೆ ಎರಡು ಪುಸ್ತಕಗಳನ್ನು ಕೊಂಡ ವೃದ್ಧರು ನನಗೆ ಪರಿಚಿತರು, ಅವರೇ ನನಗೆ ಈ ಪುಸ್ತಕಗಳ ಬಗ್ಗೆ ತಿಳಿಸಿದ್ದು. ನೀವೇನಾದರೂ ನನಗೆ ಭೇಟಿಯಾದರೆ, ಪುನಃ ಅವರಲ್ಲಿಗೆ ಹೋಗುವಂತೆ ತಿಳಿಸಲು ಹೇಳಿದ್ದಾರೆ” ಎಂದ.

ನಾನಂತೂ ಕೃಷ್ಣನ ಪವಾಡದಿಂದ ವಿಸ್ಮಿತನಾಗಿ ಹೋದೆ. ಮತ್ತಷ್ಟು ಭಕ್ತಿಯಿಂದ ಆತನನ್ನು ಸ್ಮರಿಸುತ್ತ ಆ ವೃದ್ಧರ ಮನೆಗೆ ಹೋದೆ. ಅವರಂತೂ ತೆರದ ತೋಳುಗಳಿಂದಲೇ ನನ್ನನ್ನು ಬರಮಾಡಿಕೊಂಡರು. ಆದರದಿಂದ ತಮ್ಮ ಕೋಣೆಗೆ ಕರೆದುಕೊಂಡು ಹೋದರು. ಅವರ ಮೇಜಿನ ಮೇಲಿದ್ದ ಭಾಗವತ ಪಂಚಮಸ್ಕಂಧ ಅರ್ಧದಷ್ಟು ತೆರೆದುಕೊಂಡಿತ್ತು. ಅಂದರೆ…. ಅವರಾಗಲೇ ಅಷ್ಟನ್ನು ಓದಿ ಮುಗಿಸಿದ್ದರು!
”ಈ ಪುಸ್ತಕಗಳು ಉತ್ಕೃಷ್ಟವಾಗಿವೆ. ನಾನಂತೂ ಇವುಗಳಷ್ಟು ಉನ್ನತ ವಿಚಾರ ಹೊಂದಿದ ಬೇರಾವ ಪುಸ್ತಕವನ್ನು ನೋಡಿಲ್ಲ” ಎಂದು ಮತ್ತೆ ಮತ್ತೆ ಹೇಳಿದರು. ”ನಿಜಕ್ಕೂ ಸದ್ಯಕ್ಕೆ ಅಗತ್ಯ, ಅತ್ಯಗತ್ಯವಾಗಿ ಬೇಕಾಗಿರುವುದು ಇಂತಹ ಪುಸ್ತಕಗಳೇ. ಎಲ್ಲಿಯವರೆಗೆ ಜನರು ಇಂದ್ರಿಯ ಭೋಗಗಳ ಹಿಂದೆ ಓಡುತ್ತಾರೋ, ಅಲ್ಲಿಯವರೆಗೆ ಜಗತ್ತು ನರಕಸದೃಶವಾಗೇ ಇರುತ್ತದೆ” ಎನ್ನುತ್ತ ಸಂಪೂರ್ಣ ಪುಸ್ತಕಗಳ ಸೆಟ್ ಕೊ೦ಡುಕೊ೦ಡರು.
ಅವರ ‘ಇಂದ್ರಿಯ ಭೋಗ’ ವೆಂಬ ಪದಪ್ರಯೋಗ, ನಮ್ಮ ಪುಸ್ತಕವನ್ನು ಓದಿದುದರ ಪರಿಣಾಮವೇ ಆಗಿತ್ತು! ಅವರು ಮೊದಲನೇ ಪ್ರಯತ್ನದಲ್ಲಿ ಕೃಷ್ಣಪ್ರಜ್ಞೆಗೆ ತೆರೆದುಕೊಂಡಿದ್ದರು. ಇದು ಕೇವಲ ಒಂದು ರಾತ್ರಿಯಲ್ಲಿ ನಡೆದ ಪರಿವರ್ತನೆ!
ಕ್ರಮೇಣ ನಾವು ಪ್ರಸ್ತುತ ಜನಪ್ರಿಯವಾಗಿರುವ ಸಾಹಿತ್ಯದ ಸ್ಥಳವನ್ನು ನಮ್ಮ ಅಧ್ಯಾತ್ಮ ಸಾಹಿತ್ಯದಿಂದ ತುಂಬುತ್ತೇವೆ. ನಾನು ಇದನ್ನು ಪ್ರಯತ್ನಿಸಿದ್ದೇನೆ. ನೀವು ಯಾವ ಪುಟವನ್ನೇ ತೆರೆದರೂ ಅಲ್ಲಿ ಆಸಕ್ತಿದಾಯಕವಾದ ವಿಷಯವನ್ನು ಕಾಣುವಿರಿ. ನಮ್ಮ ಪುಸ್ತಕಗಳಲ್ಲಿ ಯಾವುದೊಂದನ್ನು ಓದಿದರೂ ಸಾಕು. ಅದು ಓದುವವನ ಜೀವನವನ್ನು ಪರಿವರ್ತಿಸುತ್ತದೆ. ನೂರಕ್ಕೆ ಒಬ್ಬನಂತೆ ಬದಲಾದರೂ ಸಾಕು, ಅದು ಜಗತ್ತನ್ನೇ ಬದಲಿಸುತ್ತದೆ.
– ಶ್ರೀಲ ಪ್ರಭುಪಾದರು, 2 ಮೇ, 1972, ಕರಂಧರದಾಸರಿಗೆ ಬರೆದ ಪತ್ರದಲ್ಲಿ.






Leave a Reply