ಘಟೋತ್ಕಚನ ವೀರಮರಣ

ಆಪದ್ಬಾಂಧವ ಶ್ರೀಕೃಷ್ಣ – 5

ಕೃಷ್ಣಕಥೆ

– ಡಾ. ಬಿ.ಆರ್.ಸುಹಾಸ್

ಜಯದ್ರಥನ ವಧೆಯ ಬಳಿಕ ಶ್ರೀಕೃಷ್ಣನು ಅರ್ಜುನನೊಡನೆ ಯುಧಿಷ್ಠಿರನ ಬಳಿಗೆ ವಿಜಯದ ವಿಷಯವನ್ನರುಹಿದನು. ಅದನ್ನು ಕೇಳಿ ಪರಮಹೃಷ್ಟನಾದ ಯುಧಿಷ್ಠಿರನು, ”ಶ್ರೀಕೃಷ್ಣ! ಈ ವಿಜಯಕ್ಕೆ ನೀನೇ ಕಾರಣ! ಈಶ್ವರರಿಗೂ ಈಶ್ವರನಾದ ಸರ್ವ ದೇವೋತ್ತಮ ಪರಮ ಪರುಷನು ನೀನು!

ನಿನ್ನ ಮಹಿಮೆಯ ವಿಚಾರವನ್ನು ಈ ಹಿಂದೆ ವನವಾಸದ ಸಮಯದಲ್ಲಿ ಮಾರ್ಕಂಡೇಯರೂ, ಅಸಿತದೇವಲನಾರದರೂ ವೇದವ್ಯಾಸರೂ ಹೇಳಿದ್ದರು! ಈಗ ಅದನ್ನು ನಾವು ಪ್ರತ್ಯಕ್ಷ ಕಂಡೆವು! ಗೋವಿಂದ, ನೀನಿರುವಲ್ಲೇ ನಿಶ್ಚಿತವಾಗಿಯೂ ವಿಜಯವಿರುತ್ತದೆ” ಎಂದು ಭಗವಂತನನ್ನು ಸ್ತುತಿಸಿದನು.

ಇತ್ತ, ಜಯದ್ರಥವಧೆಯಿಂದ ಮನನೊಂದ ದುರ್ಯೋಧನನು ದ್ರೋಣಾಚಾರ್ಯರನ್ನು ಆಕ್ಷೇಪಿಸಿ ನಿಂದಿಸಿದನು! ಇದರಲ್ಲಿ ದ್ರೋಣರದೇನೂ ತಪ್ಪಿಲ್ಲವೆಂದು ಕರ್ಣನು ಅವನನ್ನು ಸಮಾಧಾನಪಡಿಸಿ ಯುದ್ಧಭೂಮಿಗಿಳಿದನು. ಅನಂತರ ಅವನೂ ದ್ರೋಣರೂ ಪಾಂಡವ ಸೈನ್ಯದೊಡನೆ ಭಯಂಕರವಾಗಿ ಯುದ್ಧ ಮಾಡತೊಡಗಿದರು.

ಅಂದು ಯುದ್ಧನಿಯಮಗಳಿಗೆ ವಿರುದ್ಧವಾಗಿ ಯುದ್ಧವು ರಾತ್ರಿಯಲ್ಲಿಯೂ ಮುಂದುವರಿಯಿತು! ಸೈನಿಕರೆಲ್ಲರೂ ಪಂಜುಗಳನ್ನು ಹಿಡಿದುಕೊಂಡು ಯುದ್ಧಮಾಡಲಾರಂಭಿಸಿದರು! ಕರ್ಣನು ಭಯಂಕರವಾಗಿ ಯುದ್ಧ ಮಾಡುತ್ತಾ ದೃಷ್ಟದ್ಯುಮ್ನನನ್ನೂ ಪಾಂಚಾಲರನ್ನೂ ಪರಾಜಯಗೊಳಿಸಿ ಅವನನ್ನೆದುರಿಸಲು ಬಂದ ಸಹದೇವನನ್ನೂ ಸೋಲಿಸಿದನು!

ಅವನನ್ನು ತನ್ನ ಧನುಸ್ಸಿನ ತುದಿಯಿಂದ ತಿವಿದು ನಿಂದಿಸಿ ಓಡಿಸಿಬಿಟ್ಟನು! ಆದರೆ ತಾಯಿ ಕುಂತಿಗೆ ಅರ್ಜುನನೊಬ್ಬನನ್ನು ಬಿಟ್ಟು ಇನ್ನಾರನ್ನೂ ಕೊಲ್ಲುವುದಿಲ್ಲವೆಂದು ಮಾತು ಕೊಟ್ಟಿದ್ದನಾದ್ದರಿಂದ ಅವನನ್ನು ಕೊಲ್ಲಲಿಲ್ಲ. ಇದೇ ರೀತಿ ಕರ್ಣನು ಭೀಮನನ್ನು ಪರಾಜಯಗೊಳಿಸಿದರೂ ಅವನನ್ನು ಕೊಲ್ಲಲಿಲ್ಲ. ಭೀಮನೂ ಕರ್ಣನನ್ನು ಪರಾಜಯಗೊಳಿಸಿದರೂ ಅರ್ಜುನನ ಪ್ರತಿಜ್ಞೆಯನ್ನು ಸ್ಮರಿಸಿ ಅವನನ್ನು ಕೊಲ್ಲಲಿಲ್ಲ.

ಕರ್ಣನು ಅಸಮಾನ ಪರಾಕ್ರಮದಿಂದ ಮೆರೆಯುತ್ತಿರಲು ಪಾಂಡವಸೇನೆ ತತ್ತರಿಸಿ ಹೋಯಿತು! ಆಗ ಅರ್ಜುನನು ಕರ್ಣನೊಡನೆ ಯುದ್ಧ ಮಾಡುವುದಾಗಿ ಶ್ರೀಕೃಷ್ಣನಿಗೆ ಹೇಳಲು ಕೃಷ್ಣನು “ಈಗ ಬೇಡ ಪಾರ್ಥ! ಕರ್ಣನ ಬಳಿ ಇಂದ್ರದತ್ತವಾದ ಅಮೋಘ ಶಕ್ತ್ಯಾಸ್ತ್ರವಿದೆ! ಅವನು ಅದನ್ನು ನಿನ್ನ ಮೇಲೆಯೇ ಪ್ರಯೋಗಿಸಬೇಕೆಂದಿದ್ದಾನೆ.

ಆದ್ದರಿಂದ ಈಗ ಭೀಮಪುತ್ರ ಘಟೋತ್ಕಚನು ಅವನನ್ನೆದುರಿಸಲಿ! ಮಹಾಪರಾಕ್ರಮಿಯಾದ ಅವನು ಖಂಡಿತವಾಗಿಯೂ ಕರ್ಣನನ್ನು ಸೋಲಿಸುವನು!” ಎನ್ನುತ್ತಾ ಘಟೋತ್ಕಚನಿಗೆ ಹೇಳಿ ಕಳಿಸಿ ಅವನನ್ನು ಚೆನ್ನಾಗಿ ಶ್ಲಾಘಿಸಿ ಕರ್ಣನ ಮೇಲೆ ಯುದ್ಧಕ್ಕೆ ಕಳಿಸಿದನು.

ಮಹಾಕಾಯನ, ಭಯಂಕರ ಕಂಗಳುಳ್ಳವನೂ ಹಸಿರಾದ ಗಡ್ಡಮೀಸೆಗಳುಳ್ಳವನೂ ಗಡಿಗೆಯಂಥ ತಲೆಯುಳ್ಳವನೂ ಆದ ಘಟೋತ್ಕಚನು, ಕರಡಿಯ ಚರ್ಮ ಹೊದ್ದಿಸಿದ್ದ ರಣಹದ್ದುವಿನ ಧ್ವಜವಿದ್ದ ನೂರು ಕುದುರೆಗಳನ್ನು ಹೂಡಿದ್ದ, ಎಲ್ಲ ವಿಧದ ಆಯುಧಗಳಿಂದಲೂ ತುಂಬಿದ್ದ ಭಯಂಕರ ರಥದಲ್ಲಿ ಕುಳಿತು ಯುದ್ಧಕ್ಕೆ ಹೊರಟನು!

ಅವನಿಗೂ ಕರ್ಣನಿಗೂ ಘನಘೋರ ಯುದ್ಧ ನಡೆಯಿತು! ಅವನು ಕರ್ಣನೆಡೆಗೆ ಭಯಂಕರ ಆಯುಧಗಳನ್ನೆಸೆಯುತ್ತಿದ್ದರೂ ಕರ್ಣನು ಹೆದರದೇ ದಿವ್ಯಾಸ್ತ್ರಗಳಿಂದ ಅವನ್ನೆಲ್ಲಾ ನಾಶಪಡಿಸಿದನು! ಆಗ ಘಟೋತ್ಕಚನು ಮಾಯಾಯುದ್ಧವನ್ನಾರಂಭಿಸಿದನು. ಇದ್ದಕ್ಕಿದ್ದಂತೆ ಮಾಯವಾಗಿ ಅದೃಶ್ಯನಾಗಿದ್ದುಕೊಂಡೇ ಅಂತರಿಕ್ಷದಿಂದ ಆಯುಧಗಳನ್ನು ವರ್ಷಿಸತೊಡಗಿದನು!

ಕೌರವ ಸೈನ್ಯವನ್ನು ಧೂಳೀಪಟ ಮಾಡತೊಡಗಿದನು! ಆದರೂ ಕರ್ಣನು ತನ್ನ ದಿವ್ಯಾಸ್ತ್ರಗಳಿಂದ ಅವನ್ನೆದುರಿಸುತ್ತಿರಲು, ಇದ್ದಕ್ಕಿದ್ದಂತೆ ಅವನು ಹತನಾದಂತೆ ಕೆಳಗೆ ಬಿದ್ದು ಕೌರವರಿಗೆ ಭ್ರಮೆಯುಂಟುಮಾಡಿ ಪುನಃ ಎಲ್ಲಿಂದಲೋ ಬಾಣ ಪ್ರಹರ್ಷಣ ಮಾಡತೊಡಗಿದನು! ರಣರಂಗದಲ್ಲೇ ನದಿಯನ್ನುಂಟು ಮಾಡಿ ಒಂದು ಕಡೆ ಮುಳುಗಿ ಇನ್ನೆಲ್ಲೋ ಏಳುತ್ತಿದ್ದನು!

ಇದ್ದಕ್ಕಿದ್ದಂತೆ ಆಕಾಶಗಾತ್ರವಾಗಿ ಥಟ್ಟನೆ ಅಂಗುಷ್ಠಗಾತ್ರವಾಗುತ್ತಿದ್ದನು! ಕೌರವ ಸೈನ್ಯದಲ್ಲಿ ವಕ್ರವಕ್ರವಾಗಿ ಸಂಚರಿಸುತ್ತಿದ್ದನು! ನೂರಾರು ಘಟೋತ್ಕಚರಿರುವಂತೆ ಭ್ರಮೆಯುಂಟುಮಾಡಿ, ಕರ್ಣನು ಪ್ರಯೋಗಿಸುತ್ತಿದ್ದ ಅಸ್ತ್ರಗಳನ್ನೆಲ್ಲಾ ನುಂಗಿಹಾಕುತ್ತಿದ್ದನು! ಹೀಗೆ ಅವನು ನಾನಾವಿಧದ ಮಾಯಾಪ್ರಯೋಗಳನ್ನು ಮಾಡತೊಡಗಿದನು!

ಈ ಮಧ್ಯೆ ಘಟೋತ್ಕಚನು ಜಟಾಸುರನೆಂಬ ರಾಕ್ಷಸನ ಮಗನಾದ ಅಲಂಬುಷನನ್ನು ಸಂಹರಿಸಿ ಅವನ ತಲೆಯನ್ನು ಕಾಣಿಕೆಯೆಂಬಂತೆ ದುರ್ಯೋಧನನ ರಥದೊಳಗೆಸೆದನು! ಅನಂತರ, ಬಕಾಸುರನ ಜ್ಞಾತಿಯಾದ ಅಲಾಯುಧನೆಂಬ ರಾಕ್ಷಸನು ದುರ್ಯೋಧನನ ಆಣತಿಯಂತೆ ಅವನನ್ನು ಆಕ್ರಮಿಸಿದನು!

ಘಟೋತ್ಕಚನಿಗೂ ಅಲಾಯುಧನಿಗೂ ಯುದ್ಧವಾಗಲು, ಮಗನನ್ನು ರಕ್ಷಿಸಲು ಭೀಮನು ಬಂದನು! ಆಗ ಅಲಾಯುಧನು ಘಟೋತ್ಕಚನನ್ನು ಬಿಟ್ಟು ಭೀಮನೊಡನೆ ಯುದ್ಧಕ್ಕೆ ತೊಡಗಿದನು! ಇಬ್ಬರೂ ಸಲಗಗಳಂತೆ ಯುದ್ಧ ಮಾಡಿದರು! ಘಟೋತ್ಕಚನು ಪುನಃ ಕರ್ಣನೊಂದಿಗೆ ಯುದ್ಧಕ್ಕೆ ತೊಡಗಲು, ಭೀಮನು ಅಲಾಯುಧನ ಹಿಡಿತಕ್ಕೆ ಸಿಕ್ಕಿ ಬಿದ್ದನ್ನು!

ಇದನ್ನು ಶ್ರೀಕೃಷ್ಣನು ಘಟೋತ್ಕಚನಿಗೆ ತೋರಿಸಿ ಬೇಗನೆ ಅಲಾಯುಧನನ್ನು ಸಂಹರಿಸಲು ಹೇಳಿದನು. ಆಗ ಘಟೋತ್ಕಚನು ಅಲಾಯುಧನ ಮೇಲೆರಗಿ ತಂದೆಯನ್ನು ಬಿಡಿಸಿ, ಅವನೊಡನೆ ಅತಿಘೋರ ಯುದ್ಧದಲ್ಲಿ ತೊಡಗಿದನು! ಇಬ್ಬರೂ ರಾಕ್ಷಸರು ಮಾಯಾಯುದ್ಧ ಮಾಡತೊಡಗಿದರು! ಕಡೆಗೆ ಘಟೋತ್ಕಚನು ಅಲಾಯುಧನನ್ನು ಸಂಹರಿಸಿದನು!

ಘಟೋತ್ಕಚನ ಹಾವಳಿಯಿಂದ ಕೌರವ ಸೈನ್ಯದಲ್ಲಿ ಹಾಹಾಕಾರವೆದ್ದಿತು! ಇಡೀ ಸೈನ್ಯವನ್ನು ಅಂದು ಅವನೊಬ್ಬನೇ ಸಂಹರಿಸುವಂತೆ ಕಾಣುತ್ತಿತ್ತು! ರಾತ್ರಿಯ ಹೊತ್ತಿನಲ್ಲಿ ರಾಕ್ಷಸರಿಗೆ ಬಲವೂ ಹೆಚ್ಚು…! ಕೌರವರೆಲ್ಲರೂ ಒಕ್ಕೊರಲಿನಿಂದ ಶಸ್ತ್ರಾಸ್ತ್ರವನ್ನು ಪ್ರಯೋಗಿಸುವಂತೆ ಕರ್ಣನಲ್ಲಿ ಮೊರೆಯಿಟ್ಟರು!

ಈಗ ಕೌರವ ಸೈನ್ಯವನ್ನು ಕಾಪಾಡಲು ಕರ್ಣನಿಗೆ ಶಕ್ತಿಯನ್ನು ಬಳಸದೇ ಗತ್ಯಂತರವಿರಲಿಲ್ಲ! ಅವನು ಅದನ್ನು ಅನೇಕ ವರ್ಷಗಳಿಂದ ಪೂಜಿಸುತ್ತಾ ಅರ್ಜುನನ ಸಂಹಾರಕ್ಕೆಂದೇ ಇರಿಸಿಕೊಂಡಿದ್ದನು. ಈಗ ಕೌರವರನ್ನು ಕಾಪಾಡಲು ಬೇರೆ ದಾರಿಯಿಲ್ಲದೇ ಅದನ್ನು ಘಟೋತ್ಕಚನ ಮೇಲೆ ಪ್ರಯೋಗಿಸಿದನು!

ಈ ಅಸ್ತ್ರವನ್ನೆದುರಿಸಲು ತನಗಾಗದೆಂದರಿತ ಘಟೋತ್ಕಚನು ತನ್ನ ದೇಹವನ್ನು ವಿಂಧ್ಯಪರ್ವತದಂತೆ ಬೃಹದಾಕಾರವಾಗಿ ಬೆಳೆಸಿ ಶಕ್ತ್ಯಸ್ತ್ರಕ್ಕೆ ಮೈಯೊಡ್ಡಿದನು! ಆಗ ಪ್ರಾಣ ಕಳೆದುಕೊಂಡ ಅವನ ಅಗಾಧ ದೇಹ ಕೆಳಗೆ ಬೀಳುತ್ತಾ ಕೌರವರ ಒಂದು ಅಕ್ಷೌಹಿಣೀ ಸೈನ್ಯವನ್ನೇ ನಾಶಮಾಡಿತು!

ಘಟೋತ್ಕಚನು ಸಾಯಲು, ಪಾಂಡವರು ಶೋಕಾಕುಲರಾದರು. ಆದರೆ ಶ್ರೀಕೃಷ್ಣನು ಮಾತ್ರ ನಗುತ್ತಾ ರಥದಲ್ಲೇ ಕುಣಿಯುತ್ತಾ ಸಿಂಹನಾದ ಮಾಡಿದನು! ಅರ್ಜುನನನ್ನು ಮತ್ತೆ ಮತ್ತೆ ಆಲಿಂಗಿಸಿದನು! ಅವನ ವಿಚಿತ್ರ ವರ್ತನೆ ಅರ್ಥವಾಗದೇ ಅರ್ಜುನನು ಪ್ರಶ್ನಿಸಿದನು “ಇದೇನು ಕೃಷ್ಣ! ಶೋಕಿಸುವ ಸಮಯದಲ್ಲಿ ನೀನು ಇಷ್ಟು ಸಂತೋಷದಿಂದಿರವೆ..?”

“ಪಾರ್ಥ! ಇದು  ನಿಜವಾಗಿ ಅತ್ಯಂತ ಸಂತೋಷಪಡಬೇಕಾದ ವಿಷಯ! ನಿನ್ನ ಪ್ರಾಣ ಉಳಿದಿದೆ! ಹಿಂದೆ, ನಿನ್ನ ಸಲುವಾಗಿಯೇ ಇಂದ್ರನು ಬ್ರಾಹ್ಮಣವೇಷದಲ್ಲಿ ಬಂದು ಕರ್ಣನ ಬಳಿ ಅವನ ಸಹಜ ಕವಚಕುಂಡಲಗಳನ್ನು ಯಾಚಿಸಿದನು; ದಾನಶೂರನಾದ ಕರ್ಣನು ಅವನ್ನು ಇಂದ್ರನಿಗೆ ನೀಡಿ ಅವಕ್ಕೆ ಪ್ರತಿಯಾಗಿ ಇಂದ್ರನಿಂದ ಶಕ್ತಿ ಎಂಬ ಅಮೋಘ ಅಸ್ತ್ರವನ್ನು ಪಡೆದನು.

ಆ ಶಕ್ತಿಯನ್ನು ಒಮ್ಮೆ ಮಾತ್ರ ಪ್ರಯೋಗಿಸಬಹುದಿತ್ತು! ಯಾರ ಮೇಲೆ ಪ್ರಯೋಗಿಸಿದರೂ ಸರಿ, ಅದು ಅವನನ್ನು ಕೊಂದು ಇಂದ್ರನ ಬಳಿಗೆ ಹಿಂದಿರುಗಿ ಬಿಡುತ್ತಿತ್ತು! ಕರ್ಣನು ಅದನ್ನು ನಿನ್ನ ವಿನಾಶಕ್ಕಾಗಿಯೇ ಇಟ್ಟುಕೊಂಡಿದ್ದನು…! ಈಗ ಘಟೋತ್ಕಚನ ಮೇಲೆ ಪ್ರಯೋಗಿಸಿ ಕಳೆದುಕೊಂಡನು! ನಿನ್ನ ಪ್ರಾಣ ಉಳಿಯಿತು!

ಇದಕ್ಕಾಗಿಯೇ ನಾನು ಬಹಳ ಶ್ರಮಿಸಿದೆನು! ಪಾರ್ಥ, ಕರ್ಣನು ಸಾಮಾನ್ಯನಲ್ಲ…! ದೈವಾಂಶಸಂಭೂತ, ಬ್ರಾಹ್ಮಣಭಕ್ತ, ದಾನಶೂರ! ಆದರೆ ಅವನು ದುಷ್ಟ! ಅವನ ಬಳಿ ಕವಚಕುಂಡಲಗಳಾಗಲೀ ಈ ಶಕ್ತಿಯಾಗಲೀ ಇದ್ದಿದ್ದರೆ ಮೂರು ಲೋಕಗಳಲ್ಲೂ ಅಜೇಯನಾಗುತ್ತಿದ್ದನು! ಆದರೆ ಇವೆಲ್ಲಾ ಇಲ್ಲವಾಗಿ ಅವನೀಗ ಹಲ್ಲು ಕಿತ್ತ ಹಾವಿನಂತೆ! ಸಾಮಾನ್ಯ ವೀರನಾಗಿರುವ ಅವನನ್ನು ನೀನಿನ್ನು ಸುಲಭವಾಗಿ ಸಂಹರಿಸಬಹುದು!” ಕೃಷ್ಣನು ವಿವರಿಸಿದ.

“ನಿಜವಾಗಿ ನನ್ನ ಪ್ರಾಣ ಉಳಿಸಿದ ಕೇಶವ! ಆದರೆ ಘಟೋತ್ಕಚ ಸತ್ತದ್ದು ಶೋಕವಲ್ಲವೇ…?” ಅರ್ಜುನ ಕೇಳಿದ.

“ಅಲ್ಲೇ ಮರ್ಮವಿರುವುದು!” ನಗುತ್ತಾ ಕೃಷ್ಣ ಹೇಳಿದ, ”ಈ ಘಟೋತ್ಕಜನು ಬ್ರಹ್ಮದ್ವೇಷಿಯೂ ಪಾಪಿಷ್ಠನೂ ಯಜ್ಞದ್ವೇಷಿಯೂ ಅಧರ್ಮಿಯೂ ಆದ ರಾಕ್ಷಸ! ಹೀಗೆ ಉಪಾಯವಾಗಿ ಇವನನ್ನು ಸಂಹರಿಸುವುದೇ ನನ್ನ ಉದ್ದೇಶವಾಗಿತ್ತು! ಇವನು ನಿಮಗೆಲ್ಲಾ ಪ್ರಿಯನಾಗಿದ್ದುರಿಂದ ಇವನನ್ನು ನಾನೇ ಕೊಲ್ಲದೇ ಹೀಗೆ ಕರ್ಣನ ಮೂಲಕ ಕೂಲ್ಲಿಸಿದೆ!

ಒಂದು ವೇಳೆ ಕರ್ಣನು ಇವನನ್ನು ಕೊಲ್ಲದಿದ್ದರೆ ನಾನು ಮುಂದೆ ಕೊಲ್ಲಬೇಕಾಗುತಿತ್ತು! ಅರ್ಜುನ, ಇದೇ ರೀತಿ ನಾನು ಜರಾಸಂಧ, ತಿಶುಪಾಲ, ನಿಷಾದ ರಾಜನಾದ ಏಕಲವ್ಯ, ಬಕ, ಕಿರ್ಮೀರ ಮೊದಲಾದವರನ್ನು ಉಪಾಯಾಂತರಗಳಿಂದ ಮುಗಿಸಿಬಿಟ್ಟೆ! ಕೆಲವರನ್ನು ಸ್ವಯಂ ನಾನು ಮತ್ತು ಕೆಲವರನ್ನು ಇತರರ ಮೂಲಕ ಸಂಹರಿಸಿದೆ! ಇದೆಲ್ಲವನ್ನೂ ನಿನಗಾಗಿಯೇ ನಾನು ಮಾಡಿದ್ದು!”

“ಅದು ಹೇಗೆ…?’ ಅರ್ಜುನ ಬೆರಗಾಗಿ ಕೇಳಿದ.

ಪಾರ್ಥ! ಇವರೆಲ್ಲರೂ ನಿಜವಾಗಿ ರಾಕ್ಷಸಾಂಶಗಳಿಂದ ಹುಟ್ಟಿದ ದೈವದ್ವೇಷಿಗಳು! ಈಗ ಇವರೆಲ್ಲರೂ ಬದುಕಿರುತ್ತಿದ್ದರೆ ದುರ್ಯೋಧನನ ಪಕ್ಷ ಸೇರಿ ಒಟ್ಟಾಗಿ ನಿನ್ನ ಮೇಲೆ ಬೀಳುತ್ತಿದ್ದರು. ಇವರು ಎಂಥ ವೀರರೆಂದರೆ ಲೋಕಪಾಲಕರೆಲ್ಲರೂ ಒಟ್ಟಾಗಿ ಬಂದರೂ ಇವರನ್ನು ಜಯಿಸಲಾರರು!

ಮಹಾಪರಾಕ್ರಮಿಯಾದ ಜರಾಸಂಧನು ಹುಟ್ಟಿದ್ದೇ ವಿಚಿತ್ರವಾಗಿ! ಮಹರ್ಷಿಗಳ ಪ್ರಸಾದರೂಪದ ಫಲವೊಂದನ್ನು ರಾಜನೊಬ್ಬನ ಇಬ್ಬರು ರಾಣಿಯರು ಅರ್ಧಧ್ರ ತಿಂದುದರಿಂದ ಇಬ್ಬರಿಗೂ ಅರ್ಧರ್ಧ ಶಿಶುಗಳಾಗಿ ಹುಟ್ಟಿದನು! ಆಗ ಜರೆಯೆಂಬ ರಾಕ್ಷಸಿಯು, ತೊರೆಯಲ್ಪಟ್ಟಿದ್ದ ಆ ಶಿಶುವಿನ ಅರ್ಧರ್ಧ ದೇಹಗಳನ್ನು ಸೇರಿಸಿ ಇವನಿಗೆ ಜೀವ ತುಂಬಿದಳು! ಆದ್ದರಿಂದಲೇ ಇವನಿಗೆ ಜರಾಸಂಧನೆಂಬ ಹೆಸರು ಬಂತು!

ಇವನು, ನಾನು ಇವನ ಅಳಿಯ ಕಂಸನನ್ನು ಕೊಂದ ಕೋಪಕ್ಕೆ ನಮ್ಮ ಮಥುರೆಯ ಮೇಲೆ ಹದಿನೇಳು ಬಾರಿ ಅನೇಕಾನೇಕ ಅಕ್ಷೌಹಿಣಿ ಸೈನ್ಯಗಳನ್ನು ಸಂಗ್ರಹಿಸಿ ದಾಳಿ ಮಾಡಿದನು! ಇವನ ಸೇನಾಬಲವನ್ನೂ ತನ್ಮೂಲಕ ಭೂಭಾರವನ್ನೂ ನಾಶಮಾಡಲು ನಾನು ಕೂಡಲೇ ಇವನನ್ನು ಸಂಹರಿಸಲಿಲ್ಲ!

ಒಂದು ವೇಳೆ ಹಾಗೆ ಸಂಹರಿಸಿದರೆ, ಆ ಜರೆಯು ಇವನನ್ನು ಪುನಃ ಬದುಕಿಸಿಬಿಡುತ್ತಿದ್ದಳು! ಕಡೆಗೆ ನಾನು ನಮ್ಮವರನ್ನು ದ್ವಾರಕೆಗೆ ಸಾಗಿಸಿದಾಗ ಇವನು ಒಂದು ಮಹಾಗದೆಯನ್ನು ನಮ್ಮ ಮೇಲೆ ಎಸೆದ! ಆಗ ಬಲರಾಮನು ಸ್ಥೂರ್ಣಾಕರ್ಣವೆಂಬ ಅಸ್ತ್ರವನ್ನು ಪ್ರಯೋಗಿಸಲು ಆ ಗದೆಯು ಕೆಳಗೆ ಬೀಳುತ್ತಾ ಬೆಟ್ಟದ ಕೆಳಗಿದ್ದ ಜರೆಯ ತಲೆಯನ್ನೊಡೆಯಿತು!

ಆ ಗದೆಯೂ ಚೂರುಚೂರಾಯಿತು! ನಾನೂ ಬಲರಾಮನೂ ಬೆಟ್ಟದಿಂದ ಕೆಳಗೆ ಧುಮುಕಲು, ನಾವು ಸತ್ತವೆಂದು ಭಾವಿಸಿ ಜರಾಸಂಧ ಹೊರಟುಹೋದ! ಹೀಗೆ ಸೇನಾಬಲ, ಗದೆ, ಜೀವವಾದ ಜರೆ ಎಲ್ಲವನ್ನೂ ಕಳೆದುಕೊಂಡರೂ ನರಬಲಿ ಕೊಡಲೆಂದು ಅನೇಕ ರಾಜರನ್ನು ಸೆರೆಹಿಡಿದಿದ್ದ ಈ ದುಷ್ಟನನ್ನು ನಿಮ್ಮ ರಾಜಸೂಯಯಾಗ ಸಂದರ್ಭದಲ್ಲಿ ನಿನ್ನ ಮತ್ತು ಭೀಮರೊಂದಿಗೆ ಬ್ರಾಹ್ಮಣರಂತೆ ವೇಷಮರೆಸಿ ಯುದ್ಧಭಿಕ್ಷೆ ಬೇಡಿ ಭೀಮನಿಂದ ದ್ವಂದ್ವಯುದ್ಧದಲ್ಲಿ ಕೊಲ್ಲಿಸಿದೆ!

‘ಆ ಶಿಶುಪಾಲನು ಹೇಗೆ ಸತ್ತನೆಂದು ನೀನೇ ನೋಡಿರುವೆ! ನನಗೆ ಅತ್ತೆಯ ಮಗನಾದರೂ ಅವನು ದುಷ್ಟರೊಂದಿಗೆ ಸೇರಿಕೊಂಡು ನನ್ನ ವಿರುದ್ಧ ತಪ್ಪುಗಳನ್ನು ಮಾಡುತ್ತಲೇ ಬಂದ! ನೂರು ತಪ್ಪುಗಳನ್ನು ಸಹಿಸಿಕೊಳ್ಳುವೆನೆಂದು ಅವನ ತಾಯಿಗೆ ಮಾತುಕೊಟ್ಟಿದ್ದೆ ನಾನು, ನಿಮ್ಮ ರಾಜಸೂಯಯಾಗದ ಸಂದರ್ಭದಲ್ಲಿ ನೂರೊಂದನೆಯ ತಪ್ಪಾಗಿ ನನ್ನನ್ನು ನಿಂದಿಸಿದಾಗ ಕೂಡಲೇ ಕೊಂದುಬಿಟ್ಟೆ!

ಇನ್ನು ಆ ನಿಷಾದ ಏಕಲವ್ಯ! ಬಾಲ್ಯದಲ್ಲಿ ನಿನ್ನನ್ನು ಮೀರಿಸಲು ಆಸೆಪಟ್ಟು, ದ್ರೋಣರು ವಿದ್ಯೆ ಕಲಿಸಲು ನಿರಾಕರಿಸಿದರೂ ತಾನೇ ಅವರ ಪ್ರತಿಮೆ ಮಾಡಿಕೊಂಡು ಕಲಿತ! ಇವನ ಇಂಥ ಗುರುಭಕ್ತಿಯನ್ನು ಬಳಸಿಕೊಂಡು ನಿನ್ನ ಹಿತಾರ್ಥವಾಗಿಯೇ ನಾನು ಇವನ ಹೆಬ್ಬೆರಳನ್ನು ಕೇಳಲು ಅಂತರ್ಯಾಮಿಯಾಗಿ ದ್ರೋಣರನ್ನು ಪ್ರಚೋದಿಸಿದೆ!

ಇದರಿಂದ ಅರ್ಧಸತ್ತ ಈ ದುಷ್ಟನನ್ನು ನಾನೇ ಒಮ್ಮೆ ಸಂಹರಿಸಿದೆ! ಅರ್ಜುನ, ಧರ್ಮ ಸಂಸ್ಥಾಪನೆಗಾಗಿಯೇ ನಾನು ಅವತರಿಸಿಸುವೆನೆಂದು ಯುದ್ಧಾರಂಭವಾದಾಗ ಹೇಳಿದೆನಷ್ಟೆ? ಪಾಪಿಗಳನ್ನು ಹೇಗಾದರೂ ಸರಿ, ನಿಗ್ರಹಿಸಬೇಕೆಂದು ನನ್ನ ಮತ! ವೇದಾಧ್ಯಯನ, ಸತ್ಯ, ಇಂದ್ರಿಯ ನಿಗ್ರಹ, ಶೌಚ, ಧರ್ಮ, ಪಾಪಕಾರ್ಯದಲ್ಲಿ ಲಜ್ಜೆ, ಸಾತ್ತ್ವಿಕತೆ, ಧೈರ್ಯ, ಕ್ಷಮೆ, ಇವು ಇರುವಲ್ಲಿ ನಾನಿರುತ್ತೇನೆ; ಇಲ್ಲವಾದಲ್ಲಿ ಇಲ್ಲ! ಇವೆಲ್ಲಾ ಇಲ್ಲದ್ದರಿಂದಲೇ ಘಟೋತ್ಕಚನನ್ನು ನಿಷ್ಪಕ್ಷಪಾತದಿಂದ ಕೊಲ್ಲಿಸಬೇಕಾಯಿತು!”

ಭಗವಂತನ ಕಾರ್ಯಗಳ ಹಿಂದಿನ ಧರ್ಮಸಂಸ್ಥಾಪನಾರಹಸ್ಯವನ್ನು ಕೇಳಿ ಅರ್ಜುನ ನಿಬ್ಬೆರಗಾದ! ಪಾಂಡವವೀರರೆಲ್ಲರೂ ಆಶ್ಚರ್ಯಚಕಿತರಾದರು!

ಈ ವಿವರಣೆಯನ್ನು ಕೇಳಿ ಧೃತರಾಷ್ಟ್ರನು ದುಃಖವಿಹ್ವಲನಾಗಿ ಸಂಜಯನನ್ನು ಕೇಳಿದನು, “ಈ ಕರ್ಣನು ಮೊದಲೇ ಏಕೆ ಶಕ್ತ್ಯಸ್ತ್ರವನ್ನು ಅರ್ಜುನನ ಮೇಲೆ ಪ್ರಯೋಗಿಸಲಿಲ್ಲ? ಅಥವಾ ಅದನ್ನು ಶ್ರೀಕೃಷ್ಣನ ಮೇಲಾದರೂ ಪ್ರಯೋಗಿಸಿದ್ದರೆ ಈ ಯುದ್ಧದಲ್ಲಿ ಖಂಡಿತವಾಗಿಯೂ ದುರ್ಯೋಧನನಿಗೇ ಜಯವಾಗುತ್ತಿತ್ತು! ಆದರೆ ಅವನೇಕೆ ಹಾಗೆ ಮಾಡಲಿಲ್ಲ?!”

”ಮಹಾರಾಜ!” ಸ೦ಜಯ ಹೇಳಿದ, “ಇದೇ ಪ್ರಶ್ನೆಯನ್ನೇ ಸಾತ್ಯಕಿಯು ಕೃಷ್ಣನನ್ನೇ ಕೇಳಿದ. ಅದಕ್ಕೆ ಕೃಷ್ಣ ಹೇಳಿದ, ‘ಪ್ರತಿದಿನವೂ ಕೌರವವೀರರು ಶಕ್ತಿಯನ್ನು ಪಾರ್ಥನ ಮೇಲಾಗಲೀ ನನ್ನ ಮೇಲಾಗಲಿ ಪ್ರಯೋಗಿಸುವಂತೆ ಕರ್ಣನನ್ನು ಪ್ರೋತ್ಸಾಹಿಸುತ್ತಿದ್ದರು. ಆದರೆ ನಾನು ಉಪಾಯವಾಗಿ ಕರ್ಣಾರ್ಜುನರ ಯುದ್ಧವನ್ನು ತಪ್ಪಿಸಿ, ಅವನೊಡನೆ ಹೋರಾಡಲು ಬೇರಾರನ್ನೂ ಕಳಿಸುತ್ತಿದ್ದೆ!

ಅಲ್ಲದೇ ಕರ್ಣನು ನಮ್ಮ ಮುಂದೆ ಬಂದಕೂಡಲೇ ಶಕ್ತಿಯನ್ನು ಮರೆಯುವಂತೆ ಅವನ ಮನವನ್ನು ವಿಮೋಹಗೊಳಿಸುತ್ತಿದ್ದೆ! ನನ್ನಿಂದಲೇ ಸ್ಮೃತಿ, ಮೋಹ, ಮರೆವು ಬರುತ್ತದೆಂದು ಈಗಾಗಲೇ ಯುದ್ಧಾರಂಭದಲ್ಲಿ ಅರ್ಜುನನಿಗೆ ಹೇಳಿದ್ದೇನೆ!’

‘ಪ್ರಭು! ನೀನೇ ಸರ್ವದೇವೋತ್ತಮಪುರುಷನೆಂಬುದರಲ್ಲಿ ಇನ್ನಾವ ಸಂದೇಹವೂ ಇಲ್ಲ! ಆದರೆ… ಇದೇ ರೀತಿ ದುರ್ಯೋಧನನಿಗೂ ಮೋಹವುಂಟುಮಾಡಿ ಈ ಯುದ್ಧವನ್ನೇ ತಪ್ಪಿಸಬಹುದಿತ್ತಲ್ಲಾ..? ಆಗ ಅಭಿಮನ್ಯುವಿನಂಥ ನಿರಪರಾಧಿಗಳಾದರೂ ಉಳಿಯುತ್ತಿದ್ದರಲ್ಲಾ..?’ ಸಾತ್ಯಕಿ ಕೇಳಿದ.

‘ಆಗ ನನ್ನ ಅವತಾರದ ಅವಶ್ಯಕತೆಯೇ ಇರುತ್ತಿರಲ್ಲಿಲ್ಲವಲ್ಲ?!’ ಶ್ರೀಕೃಷ್ಣ ಹೇಳಿದ, ‘ನನ್ನ ವಾಕ್ಯಗಳ ಒಳಅರ್ಥ ಬೇರೆಯೇ ಇದೆ! ಕೆಟ್ಟದ್ದನ್ನೂ ಒಳ್ಳೆಯದನ್ನೂ ಆರಿಸಿಕೊಳ್ಳಲು ನಾನು ಜೀವಿಗಳಿಗೆ ಸ್ವಾತಂತ್ರ್ಯ ಕೊಡುತ್ತೇನೆ! ಆದರೆ ಯಾವುದು ಒಳ್ಳೆಯದೆಂದು ಶಾಸ್ತ್ರಗಳ, ನನ್ನ ವಾಕ್ಯಗಳ ಮೂಲಕವೂ ಅಂತರ್ಯಾಮಿಯಾಗಿಯೂ ಹೇಳುತ್ತೇನೆ.

ಒಳ್ಳೆಯದನ್ನು ಆರಿಸಿಕೊಂಡವರನ್ನು ಉದ್ಧರಿಸುತ್ತೇನೆ; ಕೆಟ್ಟದ್ದನ್ನು ಆರಿಸಿಕೊಂಡವರನ್ನು ಕೆಳಕ್ಕೆ ತಳ್ಳುತ್ತೇನೆ! ದುರ್ಯೋಧನನಿಗೆ ನಾನೆಷ್ಟು ಅವಕಾಶ ಕೊಡಲಿಲ್ಲ? ಆದರೂ ಅವನು ತನ್ನ ಮೊಂಡುತನ ಬಿಡುತ್ತಿಲ್ಲ! ಅದರ ಫಲವನ್ನು ಅವನು ಅನುಭವಿಸಬೇಡವೇ? ಇದನ್ನು ಜನರಿಗೆ ತಿಳಿಸಲೆಂದೇ ಈ ಯುದ್ಧ!

ಇನ್ನು ಅಭಿಮನ್ಯುವಿಗಾಗಿ ನೀನು ಶೋಕಿಸಬೇಕಿಲ್ಲ! ನನ್ನ ನಿಮಿತ್ತ ಅವನು ಬಲಿದಾನ ಮಾಡಿ ಶಾಶ್ವತ ಕೀರ್ತಿ ಪಡೆದನಲ್ಲದೇ ವೀರಸ್ವರ್ಗ ಪಡೆದ! ನನ್ನ ಸಲುವಾಗಿ ಅವತರಿಸಿದ ಚಂದ್ರನ ಮಗನಾದ ಅವನು ಬೇಗ ಹಿಂದಿರುಗಬೇಕೆಂಬುದು ಚಂದ್ರನ ಆಸೆ! ಆದ್ದರಿಂದ ಅವನು ನನಗೆ ಅತ್ಯಂತ ಪ್ರಿಯನಾಗಿದ್ದರೂ ನಾನು ದೈವರೀತಿಯಿಂದ ಅವನ ಸಾವನ್ನು ತಡೆಯಲ್ಲಿಲ್ಲ!

ಇಷ್ಟಲ್ಲದೇ, ನಾನು ರಾಕ್ಷಸರನ್ನು ಕೊಂದರೂ ಅವರಿಗೆ ಮೋಕ್ಷನೀಡುತ್ತೇನೆ! ಇನ್ನು ನನ್ನ ಭಕ್ತರನ್ನು ಬಿಡುವೆನೇ? ಅವರವರ ತಪ್ಪುಗಳಿಗೆ ಶಿಕ್ಷೆ ವಿಧಿಸುತ್ತೇನಷ್ಟೆ! ನಿನ್ನನ್ನು ಕೊಲ್ಲಹೊರಟಿದ್ದ ಭೂರಿಶ್ರವಸುವಿಗೆ ಶಿಕ್ಷೆ ನೀಡಿದರೂ ಅವನ ಭಕ್ತಿಗೆ ಮೆಚ್ಚಿ ವೈಕುಂಠಲೋಕವನ್ನೇ ಕೊಟ್ಟೆನಲ್ಲ! ಮುಂದೆ, ಭೀಷ್ಮ ದ್ರೋಣರಿಗೂ ಇಂಥ ಸದ್ಗತಿಯೇ ದೊರೆಯುತ್ತದೆ! ನನ್ನ ಸೃಷ್ಟಿಯನ್ನು ಸುವ್ಯವಸ್ಥಿತವಾಗಿ ನಡೆಸಲೆಂದೇ ನಾನು ಅವತರಿಸುತ್ತೇನೆ!’

“ಪ್ರಭು! ನಿನ್ನ ಲೀಲೆಗಳನ್ನರಿಯುವುದು ಕಷ್ಟ! ಭಗವಂತನೇ ಆದರೂ ನೀನು ಮಾನವನಂತೆ ತೋರಿಸಿಕೊಳ್ಳುವೆ! ನಿನ್ನ ಭಕ್ತರಷ್ಟೇ ನಿನ್ನನ್ನು ಅರಿಯಬಲ್ಲರು!’ ಸಾತ್ಯಕಿ, ಪಾರ್ಥರು ಹೇಳಿದರು.

ಇಷ್ಟಾದರೂ, ಶೋಕಾಕುಲನಾದ ಯುಧಿಷ್ಠಿರ, ತಾನೇ ಕರ್ಣನನ್ನು ಕೊಲ್ಲುವೆನೆಂದು ಹೊರಟುಬಿಟ್ಟ! ಕೃಷ್ಣಾರ್ಜುನರು ಅವನನ್ನು ತಡೆಯಲೆಂದು ಹಿಂಬಾಲಿಸಿದರು! ಅಷ್ಟರಲ್ಲಿ ವೇದವ್ಯಾಸರು ಪ್ರತ್ಯಕ್ಷರಾಗಿ ಅವನನ್ನು ತಡೆದು, ”ಇಂದಿನಿಂದ ಐದನೆಯ ದಿನಕ್ಕೆ ಈ ಭೂಮಂಡಲ ನಿನ್ನದಾಗುತ್ತದೆ” ಎಂದು ಸಮಾಧಾನಪಡಿಸಿದರು.

ಅನಂತರ, ಅರ್ಜುನನು ಎರಡೂ ಸೈನ್ಯಗಳನ್ನುದ್ದೇಶಿಸಿ ಹೇಳಿದನು, ಎಲ್ಲರೂ ಯುದ್ಧ ಮಾಡಿ ಬಹಳ ಬಳಲಿರುವುದರಿಂದ ಕೊಂಚಕಾಲ ಈ ರಣಾಂಗಣದಲ್ಲೇ ವಿಶ್ರಮಿಸಿ ಅನಂತರ ಯುದ್ಧ ಮಾಡಬಹುದು.”

ಎಲ್ಲರಿಗೂ ಇದು ಸರಿದೋರಿ, ಎಲ್ಲರೂ ರಣಾಂಗಣದಲ್ಲೇ ನಿದ್ರೆ ಹೋದರು!

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi