ಆಂಗ್ಲ ಮೂಲ: ಸತ್ ಸ್ವರೂಪ ದಾಸ, ಅನುವಾದ: ಎಂ.ಕೆ. ಬದರಿನಾಥ್
ಎಲ್ಲ ಊಹಾಪೋಹಗಳಾಚೆ ಧರ್ಮದ ಶಾಶ್ವತ ಸತ್ಯಗಳು ಹೊರ ಹೊಮ್ಮುವುದು, ಮೂರು, ಕೇವಲ ಮೂರು ತತ್ತ್ವಗಳಿಂದ ಮಾತ್ರ ಎಂದು ಧಾರ್ಮಿಕ ಪಂಡಿತರ ಸಮೂಹವೊಂದಕ್ಕೆ ಚೈತನ್ಯ ಮಹಾಪ್ರಭುಗಳು ಮನವರಿಕೆ ಮಾಡಿಕೊಟ್ಟರು.

ವೇದ ಗ್ರಂಥಗಳ ಪ್ರಕಾರ, ದೇವೋತ್ತಮ ಪರಮ ಪುರುಷನಾದ ಕೃಷ್ಣನ ಅವತಾರವೆಂದೇ ಹೇಳಲಾದ ಶ್ರೀ ಚೈತನ್ಯ ಮಹಾಪ್ರಭುಗಳು ವಾರಣಾಸಿಯಲ್ಲಿ ಐದು ನೂರು ವರ್ಷಗಳ ಹಿಂದೆ ತತ್ತ್ವಜ್ಞಾನಿಗಳ ಮತ್ತು ಪಂಡಿತರ ಸಭೆಯೊಂದನ್ನು ಉದ್ದೇಶಿಸಿ ಉಪನ್ಯಾಸ ಮಾಡಿದರು.
ಈಗ ಬನಾರಸ್ ಎಂದು ಕರೆಯಲ್ಪಡುವ ಈ ಸ್ಥಳವು ಬಹಳ ಕಾಲದಿಂದ ಪರಮ ಸತ್ಯವೆಂಬುದು ನಿರಾಕಾರ ಎಂದು ಪ್ರತಿಪಾದಿಸುವ ತತ್ತ್ವಜ್ಞಾನಿಗಳ ಕೆಂದ್ರವೆಂದೇ ಪ್ರಸಿದ್ಧವಾಗಿದೆ.
ಸದರಿ ತತ್ತ್ವಜ್ಞಾನಿಗಳು ಚೈತನ್ಯ ಪ್ರಭುಗಳಿಗೆ ಸವಾಲು ಹಾಕಿದ್ದು, ತತ್ವ – ಸಿದ್ಧಾಂತಗಳ ಬಗ್ಗೆ ಚರ್ಚಿಸಲು ಅವರು ಏರ್ಪಡಿಸಿದ್ದ ಸಭೆಗೆ ಹಾಜರಾಗಲು ಪ್ರಭುಗಳು ಒಪ್ಪಿದರು. ಸದರಿ ಪಂಡಿತರ ಬಣದ ಸಂಸ್ಥಾಪಕರು ಆಚಾರ್ಯ ಶಂಕರರಾಗಿದ್ದು, ವೇದ ಗ್ರಂಥದ ನೇರ ಅರ್ಥವನ್ನು ಮಾತ್ರ ಗ್ರಹಿಸಿ, ತಮಗೆ ಅನುಕೂಲವಾಗುವ ರೀತಿಯಲ್ಲಿ ಅದನ್ನು ವ್ಯಾಖ್ಯಾನಿಸಿದ್ದಾರೆ೦ಬುದನ್ನು ಅವರು ಎತ್ತಿತೋರಿಸಿದರು.
ಚೈತನ್ಯ ಪ್ರಭುಗಳ ವಿಷಯ ಮಂಡನೆ ಅತ್ಯಂತ ಪ್ರಭಾವಶಾಲಿ ಹಾಗೂ ವಿದ್ವತ್ತಿನಿಂದ ಕೂಡಿತ್ತಾದ್ದರಿ೦ದ ನಿರಾಕಾರವಾದಿಗಳಲ್ಲಿ ಸಂಚಲನ ಉಂಟಾಯಿತು ಮತ್ತು ಅವರು ಅದನ್ನು ಒಪ್ಪಿಕೊಂಡರು.
ಆಗ ಸದರಿ ಪಂಡಿತರ ನಾಯಕರೊಬ್ಬರು ”ಪ್ರಭುಗಳೇ, ನಾವು ವೇದಾಂತವನ್ನು ತಪ್ಪಾಗಿ ಗ್ರಹಿಸಿರುವುದನ್ನು ಎತ್ತಿತೋರಿಸಿದ್ದೀರಿ. ವೇದಾ೦ತದ ಸರಿಯಾದ ಅರ್ಥವನ್ನು ತಾವು ಗ್ರಹಿಸಿರುವ ರೀತಿಯಲ್ಲಿ ದಯವಿಟ್ಟು ನಮಗೆ ಹೇಳುತ್ತೀರಾ?” ಎಂದು ಕೇಳಿದರು.
ಆಗ ಚೈತನ್ಯ ಪ್ರಭುಗಳು ವೇದಾಂತವನ್ನು ಮು೦ದಿನಂತೆ ವಿವರಿಸಿದರು.
ಸಂಬಂಧ, ಅಭಿಧೇಯ, ಪ್ರಯೋಜನ ನಾಮ |
ಏಇ, ತೀನ ಅರ್ಥ ಸರ್ವ ಸೂರೇ ಪರ್ಯವಸಾನ ||
ಎಂದರೆ, ”ದೇವೋತ್ತಮ ಪರಮ ಪುರುಷನೊಡನೆ ವ್ಯಕ್ತಿಯೊಬ್ಬನ ಸಂಬಂಧ, ಆ ಸಂಬಂಧದ ಪೂರಕ ಚಟುವಟಿಕೆಗಳು ಮತ್ತು ಜೀವನದ ಅಂತಿಮ ಗುರಿಯಾದ ಭಗವತ್ಪ್ರೇಮವನ್ನು ವೃದ್ಧಿಸಿಕೊಳ್ಳುವುದು – ಈ ಮೂರು ಅಂಶಗಳೇ ವೇದಾಂತ ತತ್ತ್ವಕ್ಕೆ ಅಂತಿಮ ರೂಪ ಕೊಡುವುದಾಗಿರುವುದರಿಂದ, ಇವುಗಳನ್ನು ವೇದಾಂತ ತತ್ತ್ವದ ಪ್ರತಿ ಹಂತದಲ್ಲೂ ವಿವರಿಸಲಾಗಿದೆ” (ಚೈತನ್ಯ ಚರಿತಾಮೃತ ಆದಿ 146).
ದೇವೋತ್ತಮ ಪರಮ ಪುರುಷನನ್ನು ಅರಿಯುವುದು, ಆತನಿಗೆ ಹೇಗೆ ಸೇವೆ ಸಲ್ಲಿಸಬೇಕೆ೦ದು ತಿಳಿದುಕೊಳ್ಳುವುದು ಮತ್ತು ಆತನ ಬಗ್ಗೆ ಪ್ರೀತಿ ಬೆಳೆಸಿಕೊಳ್ಳುವುದು, ಈ ಮೂರು ತತ್ತ್ವಗಳೇ (ಅಂಶಗಳೇ) ಎಲ್ಲ ಧರ್ಮಗಳ ಕೇಂದ್ರ ಬಿಂದುವಾಗಿದೆ.

ಚೈತನ್ಯ ಮಹಾಪ್ರಭುಗಳು ವಿಶ್ಲೇಷಿಸಿರುವಂತೆ ಅವುಗಳು ಸರಳವಾಗಿ, ಸ್ವಮತಾಭಿಮಾನವಿಲ್ಲದೆ ಸಮಗ್ರವಾಗಿದೆ. ಆದರೆ ದುರದೃಷ್ಟಾವಶಾತ್, ಹೆಚ್ಚಿನ ಜನರು ದೇವೋತ್ತಮ ಪರಮ ಪುರುಷನೊಡನೆ ನಮ್ಮ ಸಂಬಂಧ ಎಂತಹುದು ಎಂದು ಅರಿತುಕೊಳ್ಳುವ ಮೊದಲ ಹೆಜ್ಜೆಯನ್ನೇ ಇಡುವುದಿಲ್ಲ.
ಖ್ಯಾತ ವೇದಾಂತ ಪಂಡಿತರಾದ ಶಂಕರರು ಗಮನಿಸಿರುವಂತೆ, ಯುವಕರು ಕ್ರೀಡೆ ಇತ್ಯಾದಿಗಳಲ್ಲಿ, ವಯಸ್ಕರು ಹೆಣ್ಣು-ಹಣ ಹಾಗೂ ವೃದ್ಧರು ತಮ್ಮ ಗತ ವೈಭವದ ದಿನಗಳನ್ನು ಮೆಲುಕು ಹಾಕುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಪರಮ ಸತ್ಯದ ಬಗ್ಗೆ ಯಾರೂ ಗಂಭೀರವಾಗಿ ಪ್ರಶ್ನಿಸುತ್ತಲೇ ಇಲ್ಲ ಎಂಬ ಸ್ಥಿತಿ ಉಂಟಾಗಿದೆ.
ನಮ್ಮ ಇಂದ್ರಿಯಗಳು ಗ್ರಹಿಸುವ ವಿಷಯಗಳಾಚೆ ಬೇರೆ ಯಾವುದೇ ಸತ್ಯವಿಲ್ಲ ಎಂದು ಭೌತಿಕ ವಾದಿಗಳು ಹೇಳುತ್ತಾರಾದರೂ, ಪರಮ ಸತ್ಯದ ಬಗೆಗಿನ ಪ್ರಶ್ನೆಗಳು ನಿಜವಾಗಿ ಮನುಷ್ಯನ ಹೃದಯದಾಳದಲ್ಲೇ ಉದ್ಭವಿಸಬೇಕಾಗಿದೆ. ಇಂತಹ ವ್ಯಕ್ತಿ ಇಡಿ ಜಗತ್ತು ಮತ್ತು ಅಲ್ಲಿನ ವ್ಯವಸ್ಥೆಗಳು ಕೇವಲ ಆಕಸ್ಮಿಕದಿಂದ ಉಂಟಾದದ್ದು ಎಂಬ ಉತ್ತರಕ್ಕೆ ತೃಪ್ತನಾಗುವುದಿಲ್ಲ.
ಈ ನಶ್ವರ ಜಗತ್ತಿನಲ್ಲಿ ಹುಟ್ಟು-ಸಾವುಗಳ ಆಚೆ ಬೇರೇನೋ ಇದೆ ಎಂಬುದನ್ನು ಆತ ತಿಳಿಯಲು ಇಚ್ಛಿಸುತ್ತಾನೆ. ಐಹಿಕ ಸ್ಥಿತಿಗತಿಗಳು ತರುವ ನೋವು ನೋಡಿದ ಆತ “ಇದರಿಂದ ನಮಗೆ ಬಿಡುಗಡೆ ಇದೆಯೇ? ನಾನು ನೋವನ್ನು ಅನುಭವಿಸಲೇಬೇಕೆ? ನಾನು ಸಾಯಬೇಕೆ?” ಎಂಬ ಪ್ರಶ್ನೆಗಳನ್ನು ಕೇಳಲು ಪ್ರೇರಿತನಾಗುತ್ತಾನೆ.
ಭೌತಿಕ ಪ್ರಜ್ಞೆಗಿಂತ ಹೆಚ್ಚಿನದಾದ ಯಾವುದಾದರೂ ಜ್ಞಾನ ಅಥವಾ ಪ್ರಜ್ಞೆ ಇದೆಯೇ ಎಂದು ಕೇಳುವ ತುಡಿತ ವ್ಯಕ್ತಿಯೊಬ್ಬನಿಗೆ ಇದ್ದಲ್ಲಿ ಹಾಗೂ ಆತ ಅದೃಷ್ಟವಂತನಾಗಿದ್ದಲ್ಲಿ, ಉತ್ತರಕ್ಕಾಗಿ ಆತ ಅರ್ಹ ಬೋಧಕರ ಬಳಿ ಹೋಗುತ್ತಾನೆ.
ಮೊದಲ ಹೆಜ್ಜೆ:
ಸಾಕಷ್ಟು ಮಾಹಿತಿ, ಅದರಲ್ಲೂ ವಿಶೇಷವಾಗಿ ಜಗತ್ತಿನ ಅತ್ಯಂತ ಹಳೆಯ ಜ್ಞಾನ ಭಂಡಾರವಾದ ವೇದ ಸಾಹಿತ್ಯ ಲಭ್ಯವಿದ್ದರೂ, ಪರಮ ಸತ್ಯದ ಬಗ್ಗೆ ನಮಗೆ ಮಾಹಿತಿ ನೀಡಲು ಎಲ್ಲರೂ ಅರ್ಹರಲ್ಲ.
ಭಗವದ್ಗೀತೆಯಂತಹ ಶ್ರೇಷ್ಠ ಗುಣಮಟ್ಟದ ಪುಸ್ತಕಗಳಿಂದ ಮಾಹಿತಿ ಪಡೆಯಬೇಕಾದಲ್ಲಿ, ಸ್ವಲ್ಪ ಶ್ರದ್ಧೆಯೂ ಇರಬೇಕು. ಅದು ಬರೀ ಅಂಧಶ್ರದ್ಧೆಯಾಗಿರದೆ, ತನಗೆ ತಾನೆ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಾ ಪ್ರಯತ್ನಪಟ್ಟು ಕಲಿಯುವಷ್ಟು ಶ್ರದ್ಧೆ ಇರಬೇಕು.
ಹೀಗಾಗಿ ಇದೇ ಮೊದಲ ಹೆಜ್ಜೆ; ಸ್ವಯಂ ಶೋಧನೆ ಅಥವಾ ತಾನೇ ಪ್ರಶ್ನೆ ಕೇಳಿಕೊಳ್ಳುವುದು. ಈ ಜಗತ್ತಿನಲ್ಲಿ ಎಲ್ಲ ಜೀವಿಗಳಿಗೂ ಸ್ಪಷ್ಟವಾದ ಮೂಲವೊ೦ದಿದೆ ಎಂಬುದನ್ನು ನಾವು ತಿಳಿದಿದ್ದೇವೆ. ಪರಮೋಚ್ಚ ಜ್ಞಾನಿಯಾದ ದೇವೋತ್ತಮ ಪರಮ ಪುರುಷನೊಬ್ಬನಿದ್ದು, ಆತನಿಂದಲೇ ಇವೆಲ್ಲವೂ ಬಂದಿದೆ.

ಈ ಘಟ್ಟವನ್ನು ದೈವಪ್ರಜ್ಞೆ ಜಾಗೃತಗೊಳ್ಳುವ ಕಾಲ ಎಂದು ಕರೆಯಬಹುದು. ದೇವರನ್ನು ಅರಿಯಲು ವ್ಯಕ್ತಿಯೊಬ್ಬ ತಾನು ಏನು ಎಂಬುದನ್ನು ತಿಳಿದುಕೊಳ್ಳಲೇಬೇಕು. ನೀವು ದೇಹವಲ್ಲ; ದೇಹವು ಚೇತನಾತ್ಮದ ಮೇಲಿನ ಆಚ್ಛಾದನೆ. ನೀವೆ ಚೇತನಾತ್ಮ. ಈ ಆತ್ಮವು ಪರಮೋಚ್ಚಶಕ್ತಿಯಾದ ದೇವರು ಅಥವಾ ಕೃಷ್ಣನ ಜೊತೆ ನಿರಂತರ ಸಂಬಂಧ ಹೊಂದಿರುವಂತಹುದು.
ಹೆಜ್ಜೆ ಎರಡು : ಸಂಬಂಧ ಸಾಧನೆ
“ದೇವರಿದ್ದಾನೆ ಮತ್ತು ಆತನೊಡನೆ ನನಗೆ ನಿರಂತರ ಸಂಬಂಧವಿದೆ ಎಂದು ಪ್ರಜ್ಞಾಪೂರ್ವಕವಾಗಿ ಅಥವಾ ತತ್ತ್ವಶಾಸ್ತ್ರ ರೀತಿಯಲ್ಲಿ ”ದೇವರಿದ್ದಾನೆ ಮತ್ತು ಆತನೊಡನೆ ನನಗೆ ನಿರಂತರ ಸಂಬಂಧವಿದೆ ತಿಳಿಯುವುದರಿ೦ದ ನನಗೆ ಏನು ಒಳ್ಳೆಯದಾಗುತ್ತದೆ?” ಎಂದು ವ್ಯಕ್ತಿಯೊಬ್ಬ ಕೇಳಬಹುದು.
ಆದ್ದರಿಂದ ಆ ವ್ಯಕ್ತಿಯು, ಸದರಿ ಸಂಬ೦ಧದ ಚಟುವಟಿಕೆಗಳಿಂದ ಮುಂದಿನ ಘಟ್ಟಕ್ಕೆ ತಲಪುವುದೇ ಆಗಿದೆ. ಇಲ್ಲದಿದ್ದಲ್ಲಿ, ದೇವರ ಬಗೆಗಿನ ನಮ್ಮ ಜ್ಞಾನ ಕೇವಲ ಸೈದ್ಧಾಂತಿಕವಾಗುತ್ತದೆ.
ಉದಾಹರಣೆಗೆ ಹೇಳುವುದಾದರೆ, ವ್ಯಕ್ತಿಯೊಬ್ಬತನ್ನ ದೇಶದೊಡನೆ ತನಗೆ ಸಂಬಂಧವಿದೆ ಎಂದು ಹೇಳಿಕೊಳ್ಳಬಹುದು ಮತ್ತು ನಾಗರಿಕನಾಗಿ ಆತನ ಚಟುವಟಿಕೆಗಳೇನು (ಕರ್ತವ್ಯಗಳೇನು) ಎಂದು ನಾವು ಕೇಳಬಹುದು. ಆತ ಮತ ಚಲಾಯಿಸುತ್ತಿದ್ದಾನೆಯೇ? ತೆರಿಗೆ ಪಾವತಿಸುತ್ತಿದ್ದಾನೆಯೇ?
ಸರ್ಕಾರಕ್ಕೆ ಸಂಬಂಧಿಸಿದಂತೆ ಅವನ ನಿಲುವೇನು? ಮುಂತಾದವು. ಅಥವಾ ವ್ಯಕ್ತಿಯೊಬ್ಬ ಮಹಿಳೆಯೊಬ್ಬಳನ್ನು ತನ್ನ ಪತ್ನಿ ಎಂದು ಹೇಳಿಕೊಳ್ಳಬಹುದು. ಆದರೆ ಆ ಸಂಬಂಧದಲ್ಲಿ ಅವನು ಯಾವುದೇ ವಿಧದ ಚಟುವಟಿಕೆ ಹೊಂದದಿದ್ದಲ್ಲಿ ಅವನು ಹೇಗೆ ಪತಿ ಎನ್ನಿಸಿಕೊಳ್ಳುತ್ತಾನೆ?
ಹೀಗಾಗಿ ಪ್ರತಿ ಸಂಬಂಧದಲ್ಲಿಯೂ, ಆ ಸಂಬಂಧವನ್ನು ವಿವರಿಸುವ ನಿರ್ದಿಷ್ಟ ಚಟುವಟಿಕೆಗಳು ಇದ್ದೇ ಇರುತ್ತವೆ, ಮತ್ತು ದೇವರಿಗೆ ಸಂಬಂಧಿಸಿದಂತೆ ಇದೇನೂ ಭಿನ್ನವಲ್ಲ. ಕೃಷ್ಣ ಅಥವಾ ದೇವೋತ್ತಮ ಪರಮ ಪುರುಷನೊಡಗಿನ ಸಂಬಂಧಿತ ಚಟುವಟಿಕೆಗಳನ್ನು ಭಕ್ತಿ- ಯೋಗ ಅಥವಾ ಭಕ್ತಿಸೇವೆ ಎಂದು ಕರೆಯಲಾಗಿದೆ.
ಸದರಿ ಸೇವೆ ಆತನ ಬಗ್ಗೆ ಕೇಳಿಸಿಕೊಳ್ಳುತ್ತಾ, ಅದರಲ್ಲೂ ವಿಶೇಷವಾಗಿ ಆತನ ನಾಮವನ್ನು ಪಠಿಸುವುದರ ಮೂಲಕ ಪ್ರಾರಂಭವಾಗುತ್ತದೆ.
ಇಂದು ಕೃಷ್ಣಮಂತ್ರವನ್ನು ಪಠಿಸಲು ಧರ್ಮ ಗ್ರಂಥಗಳು ಈ ಮುಂದಿನ ಮಂತ್ರವನ್ನು ಶಿಫಾರಸ್ಸು ಮಾಡುತ್ತವೆ: ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ/ ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ. ಈ ಮಂತ್ರದ ಪಠಣೆಯು ದೇವರೊಡನೆ ನಾವು ನೇರ ಸಂಬಂಧ ಸಾಧಿಸಲು ನೆರವಾಗುವುದಲ್ಲದೆ, ನಾವು ಆತನ ಸಾನ್ನಿಧ್ಯ ಸಾಧಿಸಿ ಪರಿಶುದ್ಧರಾಗುತ್ತೇವೆ.

ದೇವೋತ್ತಮ ಪರಮ ಪುರುಷನಿಗೆ ನಾವು ಹೇಗೆ ಸೇವೆ ಸಲ್ಲಿಸಬಹುದು ಎ೦ಬುದನ್ನು ಆಧ್ಯಾತ್ಮಿಕ ಗುರುಗಳೊಬ್ಬರ ಮಾರ್ಗದರ್ಶನದಲ್ಲಿ ಕಲಿಯಬಹುದಾಗಿದೆ. ಅನಂತರ ನಮ್ಮ ಭಕ್ತಿಯ ಕಾರ್ಯ ಪರಿಶುದ್ಧ ಎನ್ನಿಸಿಕೊಳ್ಳುತ್ತದೆ. ನಮ್ಮ ಅನುಮಾನಗಳು ಮತ್ತು ತಪ್ಪು ಕಲ್ಪನೆಗಳನ್ನು ಪರಿಹರಿಸಿಕೊಳ್ಳುವುದರ ಮೂಲಕ ಇದು ನಮ್ಮ ಮೇಲೆ ಪರಿವರ್ತನೆಯ ಪರಿಣಾಮ ಬೀರುತ್ತದೆ.
ಕ್ರಮೇಣ ನಾವು ಸಲ್ಲಿಸಿದ ಸೇವಾ ಚಟುವಟಿಕೆಗಳ ಮೂಲಕ ದೇವರ ಸಾಕ್ಷಾತ್ಕಾರವಾಗುತ್ತದೆ ಹಾಗೂ ನಾವು ದೇವರ ಸಾಮೀಪ್ಯ ಸೇರಿದಂತೆ ಮುಕ್ತಿ ಹೊಂದುತ್ತೇವೆ.
ಭಗವದ್ಗೀತೆಯಲ್ಲಿ (3.9) ಶ್ರೀ ಕೃಷ್ಣನು – ಯಜ್ಞಾರ್ಥಾತ್ ಕರ್ಮಣೋ಼s, ನ್ಯತ್ರ – ದೇವರಿಗೆ ನೀನು ಸೇವೆಯನ್ನು ತ್ಯಾಗ ಮನೋಭಾವದಿಂದ ಮಾಡಬೇಕು. ಇಲ್ಲದಿದ್ದಲ್ಲಿ ನೀನು ಭೌತಿಕ ಜಗತ್ತಿನ ಕಟ್ಟಳೆಗಳಿಗೆ ಒಳಗಾಗುವ ಸಂಭವವಿದೆ ಎಂದು ಹೇಳಿದ್ದಾನೆ. ಆದ್ದರಿಂದ “ನಿನ್ನ ಕರ್ತವ್ಯವನ್ನು ಬಿಡದೆ ತ್ಯಾಗ ಮನೋಭಾವದಿಂದ ಕರ್ತವ್ಯ ಮಾಡು” ಎಂದು ಹೇಳಿದ್ದಾನೆ.
ಅಂತೆಯೇ ನಮ್ಮ ಆಧ್ಯಾತ್ಮಿಕ ಗುರುಗಳಾದ ಶ್ರೀಲ ಪ್ರಭುಪಾದರು, ಅವರನ್ನು ಭೇಟಿಯಾದವರಿಗೆ, ಪ್ರಸಕ್ತ ಅವರು ಯಾವ ರೀತಿ ಸೇವೆ ಸಲ್ಲಿಸುತ್ತಿದ್ದಾರೋ ಅದೇ ರೀತಿ ಸೇವೆ ಮುಂದುವರಿಸಲಿ ಎಂದು ಸಲಹೆ ನೀಡುವುದಲ್ಲದೆ, ಆ ಸೇವೆಯನ್ನು ಕೃಷ್ಣನಿಗೇ ಮುಡುಪಾಗಿಡಲಿ ಎಂದು ಉಪದೇಶಿಸುತ್ತಾರೆ.
ಶ್ರೀಮದ್ ಭಾಗವತದಲ್ಲಿ “ಸಾಮಾಜಿಕವಾಗಿ ನೀವಿರುವ ಸ್ಥಿತಿಯಲ್ಲೇ ಇರಿ, ಆದರೆ ದೇವರ ಬಗ್ಗೆ ಊಹಾಪೋಹ ಮಾಡುವುದನ್ನು ನಿಲ್ಲಿಸಿ” ಎಂದು ನಮಗೆ ಸಲಹೆ ಮಾಡಲಾಗಿದೆ. ”ವಿಶ್ವಸನೀಯ ಮೂಲಗಳಿಂದ ನೀವು ಕೃಷ್ಣನ ಬಗ್ಗೆ ಅರಿವು ಬೆಳೆಸಿಕೊಂಡಲ್ಲಿ ಮುಂದಿನ ಜೀವನದಲ್ಲಿ ನೀವು ಪರಿಪೂರ್ಣತೆ ಸಾಧಿಸಬಲ್ಲಿರಿ.”
ಯಾವುದೇ ಸ್ಥಿತಿಯಲ್ಲಿರುವ ಎಲ್ಲರಿಗೂ ಇದು ಅನ್ವಯವಾಗುತ್ತದೆ. ನಿಜಾಂಶವೆಂದರೆ, ನಾವು ಭೌತಿಕವಾಗಿ ಮಾಡುವ ಯಾವುದೇ ಚಟುವಟಿಕೆಯನ್ನು (ಕ್ರಿಯೆಯನ್ನು) ಕೃಷ್ಣನಿಗೆ ಮಾಡುವ ಭಕ್ತಿಸೇವೆ ಎಂದೇ ಭಾವಿಸಿ ಮಾಡಬಹುದು. ಇಷ್ಟಲ್ಲದೆ, ಕೃಷ್ಣನೊಡನೆ ಸಂಬಂಧ ಸಾಧಿಸುವ ಅತ್ಯಂತ ಸುಲಭದ ಮಾರ್ಗವೆಂದರೆ, ನಮ್ಮ ದೈನ೦ದಿನ ಚಟುವಟಿಕೆಗಳಲ್ಲಿ ಹರೇ ಕೃಷ್ಣ ಮಂತ್ರ ಪಠಣೆಯನ್ನು ಸೇರಿಸಿಕೊಳ್ಳುವುದು.
ವ್ಯಕ್ತಿಯೊಬ್ಬ ತನ್ನ ಸಾಮಾಜಿಕ ಸ್ಥಿತಿಯನ್ನು ತ್ಯಜಿಸದೆ, ಯೋಗದ (ಭಕ್ತಿಯೋಗದ) ಬೇರೆ ಬೇರೆ ರೂಪಗಳನ್ನು ಗಂಭೀರವಾಗಿ ಹಾಗೂ ಸಮರ್ಪಕವಾಗಿ ಅಭ್ಯಾಸ ಮಾಡಲಾರ. ಆತ ಹೀಗೆ ಮಾಡಬೇಕಾದಲ್ಲಿ ನಾಗರಿಕ ಜೀವನದ ಚಟುವಟಿಕೆಗಳ ಸಂಬಂಧವನ್ನು ತ್ಯಜಿಸಿ, ಏಕಾಂತ ಜೀವನ ನಡೆಸಬೇಕಾಗುತ್ತದೆ.
ಭಗವಂತ ಕೃಷ್ಣನ ಅತ್ಯಂತ ಮುಖ್ಯ ಶಿಷ್ಯನಾದ ಅರ್ಜುನನು ಸಹ ಇದನ್ನು ಮಾಡಲಾಗದೆಂದು ತಿಳಿಸಿದ. ಹೀಗಾಗಿ ವ್ಯಕ್ತಿಯೊಬ್ಬ ಭೌತಿಕ ಜಗತ್ತಿನಲ್ಲಿದ್ದೂ, ಉತ್ತಮ ಯೋಗಿಯಾಗಬಹುದಾದ ‘ಭಕ್ತಿ- ಯೋಗ’ವನ್ನು ಕೃಷ್ಣನು ಬೋಧಿಸಿದ್ದಾನೆ.
ಹೆಜ್ಜೆ ಮೂರು : ಭಗವತ್ಪ್ರೇಮ ಪ್ರಸರಣ ಗುರಿ
ಜೀವನದಲ್ಲಿ ಪರಿಪೂರ್ಣತೆಯನ್ನು ಸಾಧಿಸುವ ಗುರಿಯನ್ನು ಮೂರನೇ ಘಟ್ಟವನ್ನಾಗಿ ಭಗವಾನ್ ಚೈತನ್ಯರು ಎತ್ತಿ ಹಿಡಿದಿದ್ದಾರೆ. ನಿಯಮ – ನಿಬಂಧನೆಗಳನುಸಾರ (ನಿಯಮ ನಿಷ್ಠೆ) ಭಕ್ತಿಸೇವೆಯನ್ನು ಸಲ್ಲಿಸಿದಲ್ಲಿ ಕ್ರಮೇಣ ವ್ಯಕ್ತಿಯೊಬ್ಬ ಸ್ವಯಂ ಪ್ರೇರಿತ ಭಗವತ್ಪ್ರೇಮದ ಘಟ್ಟವನ್ನು ತಲಪುತ್ತಾನೆ.

ಪ್ರಾಥಮಿಕ ಹಂತದಲ್ಲಿ ವ್ಯಕ್ತಿಯೊಬ್ಬ ಅಧ್ಯಾತ್ಮಿಕ ಗುರುಗಳ ಆದೇಶದಂತೆ ನಡೆಯಲು ಒಪ್ಪುತ್ತಾನೆ ಮತ್ತು ಅದನ್ನು ಆತ ಪರಿಪಾಲಿಸಲೇಬೇಕಾದ ಕರ್ತವ್ಯವನ್ನಾಗಿ ಕಾಣುತ್ತಾನೆ. ಆದರೆ ದೇವರ ಸೇವೆ ಮಾಡಿದಂತೆಲ್ಲ, ಅವನೊಳಗೆ ಹುದುಗಿರುವ ಭಗವತ್ಪ್ರೇಮ ತಂತಾನೇ ಹೊರಗೆ ಬರುತ್ತದೆ.
ಭಕ್ತಿಯೋಗದ ಚಟುವಟಿಕೆಗಳನ್ನು ಹಾಲಿನಿಂದ ಬೆಣ್ಣೆಯನ್ನು ತೆಗೆಯುವ ಕಾರ್ಯಕ್ಕೆ ಹೋಲಿಸಬಹುದಾಗಿದೆ. ಹಾಲಿನಲ್ಲಿ ಬೆಣ್ಣೆ ಈಗಾಗಲೇ ಇದ್ದರೂ, ಸೂಕ್ತ ಪರಿಷ್ಕರಣೆಯ ಅನಂತರವೇ ಅದು ಹೊರ ಬರುತ್ತದೆ.
ಅಂತೆಯೇ ನಾವೆಲ್ಲರೂ ಚೇತನಾತ್ಮಗಳಾಗಿದ್ದು, ಭಗವಂತನೊಡನೆ ಪ್ರೇಮಪೂರ್ವಕ ಸಂಬಂಧ ಹೊಂದಿದ್ದೇವೆ. ಭಕ್ತಿಸೇವೆಯಿಂದ ಭಗವತ್ಪ್ರೇಮವು ಜಾಗೃತವಾಗುತ್ತದೆ. ಅವಿರತ ಭಕ್ತಿಸೇವೆಯಿಂದ ಭಗವತ್ಪ್ರೇಮದಲ್ಲಿ ಪ್ರಗತಿ ಕಾಣುತ್ತೇವೆ. ಈ ರೀತಿ ಭಕ್ತಿ ಸೇವೆಯನ್ನು ಮುಂದುವರಿಸುವುದರಿಂದ, ಪ್ರತಿಯೊಬ್ಬರಲ್ಲೂ ಹಾಗೂ ಪ್ರತಿ ವಸ್ತುವಿನಲ್ಲೂ ಕೃಷ್ಣ ಅಥವಾ ದೇವರನ್ನು ಕಾಣುತ್ತೇವೆ.
ಕೃಷ್ಣನು ಬರಿದೇ ನಿರಾಕಾರ ಚೇತನವಲ್ಲ. ಆತ ನಮ್ಮ ನಿಮ್ಮಂತೆಯೇ ಓರ್ವ ವ್ಯಕ್ತಿ. ಭಕ್ತನೊಬ್ಬ ಎಲ್ಲ ವಸ್ತುಗಳಲ್ಲಿಯೂ ಪ್ರತ್ಯೇಕ ವ್ಯಕ್ತಿಯಾಗಿ ಕೃಷ್ಣನನ್ನು ಕಾಣುತ್ತಾನೆ. ಆತ ಸೂರ್ಯ, ಮರ-ಗಿಡಗಳನ್ನು ನೋಡಿದಾಗ, ಅವುಗಳು ದೇವರ ಶಕ್ತಿಯ ರೂಪವೆಂದು ಅರ್ಥ ಮಾಡಿಕೊಳ್ಳುತ್ತಾನೆ.
ಈಗಾಗಲೇ ಆತ ಸ್ವಯಂ ಸ್ಫೂರ್ತಿಯಿಂದ ದೇವರನ್ನು ಪ್ರೀತಿಸುತ್ತಿರುವ ಕಾರಣದಿಂದ, ದೇವರ ಶಕ್ತಿಯನ್ನು ಕಂಡಕೂಡಲೇ ಅವನು ದೇವರ ಬಗ್ಗೆಯೇ ಯೋಚಿಸಲು ಪ್ರಾರಂಭಿಸುತ್ತಾನೆ. ಅದೇ ರೀತಿ ಅವನು ದೇವೋತ್ತಮ ಪರಮ ಪುರುಷನನ್ನು ನಿರ್ದಿಷ್ಟವಾಗಿ ಆತನ ಹೆಸರಿನಲ್ಲಿ ಅಥವಾ ರೂಪದಲ್ಲಿ ಕಲ್ಪಿಸಿಕೊಂಡಾಗ, ಜಗತ್ತಿನ ಎಲ್ಲಕ್ಕೂ ಕೃಷ್ಣನೇ ಮೂಲ ಎಂಬುದನ್ನು ಅರಿತುಕೊಂಡು, ದೇವರನ್ನು ಅವನು ಕ೦ಡ ರೂಪದಲ್ಲೇ ಸ್ವೀಕರಿಸಿ ಪೂಜಿಸುತ್ತಾನೆ.
ನಿರಾಕಾರವಾದಿ ವೇದಾಂತಿಗಳ ಜೊತೆ ಮಾತನಾಡುವಾಗ ಶ್ರೀ ಚೈತನ್ಯ ಮಹಾಪ್ರಭುಗಳು ಹೇಳಿದ ಶ್ಲೋಕಕ್ಕೆ ತಾತ್ಪರ್ಯ ಬರೆದಿರುವ ಶ್ರೀಲ ಪ್ರಭುಪಾದರು, ಪರಮ ಸತ್ಯವೆಂಬುದು ನಿರಾಕಾರ ಎಂದು ಯಾರಾದರೂ ಊಹಾಪೋಹಕ್ಕೆ ಇಳಿದಲ್ಲಿ, ಶ್ರೀ ಚೈತನ್ಯ ಮಹಾಪ್ರಭುಗಳ ಎಲ್ಲ ಪ್ರಯತ್ನಗಳೂ ನಿಷ್ಪಲವಾದಂತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಶ್ರೀ ಚೈತನ್ಯ ಮಹಾಪ್ರಭುಗಳ ಮೂರು ಅಂಶಗಳ ವಿವರಣೆಯೇ ವೇದ ಶಾಸ್ತ್ರದ ಎಲ್ಲ ಶಾಖೆಗಳ ವಸ್ತು ವಿಷಯವಾಗಿದೆ.
ಯೋಗ ಅಥವಾ ಕರ್ಮ ಅಥವಾ ವೇದಾಂತ ಮುಂತಾದ ಯಾವುದರ ಬಗ್ಗೆ ಅಲ್ಲಿ ಚರ್ಚೆ ನಡೆದಿದ್ದರೂ – ಅದು ದೇವರೊಡನೆ ನಮ್ಮ ಸಂಬಂಧವನ್ನು ವೃದ್ಧಿಸಿಕೊಳ್ಳುವುದು, ಆ ಸಂಬಂಧದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಹಾಗೂ ನಮ್ಮ ಬದುಕಿನ ಶ್ರೇಷ್ಠ (ಬಹು ಮುಖ್ಯ) ಹಂತವಾದ ನಿರಂತರ ಭಗವತ್ಪ್ರೇಮದ ಫಲವನ್ನು ಅನುಭವಿಸುವುದು – ಈ ಮೂರು ಅಂಶಗಳ ಪರಿಧಿಯಲ್ಲೇ ನಡೆದಿವೆ.
ದೇವರನ್ನು ತಲಪುವ ಮೂರು ಹೆಜ್ಜೆಗಳ ಸೂತ್ರದೊಂದಿಗೆ ಶ್ರೀ ಚೈತನ್ಯ ಮಹಾಪ್ರಭುಗಳ ವೇದಾಂತ ಸೂತ್ರದ ವಿವರಣೆಯನ್ನು ಕೇಳಿದ ನಿರಾಕಾರವಾದಿ ಪ್ರಾಜ್ಞರು ಸಂಪೂರ್ಣ ತೃಪ್ತರಾಗಿ ಅವರ ಅಭಿಪ್ರಾಯಗಳನ್ನು ಬದಲಿಸಿಕೊಂಡರು.
ಕೃಷ್ಣ ಪ್ರಜ್ಞಾ ಚಳವಳಿಯ ಮೂಲಕ ಶ್ರೀಲ ಪ್ರಭುವಾದರು, ಚೈತನ್ಯ ಮಹಾಪ್ರಭುಗಳ ಬೋಧನೆಗಳನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರಚುರ ಪಡಿಸಿದರು ಮತ್ತು ಈ ಮೂಲಕ ಚೈತನ್ಯ ಮಹಾಪ್ರಭುಗಳು ವಿವರಿಸುವ ‘ಮೂರು ಹೆಜ್ಜೆಗಳು’ ಎಲ್ಲರಿಗೂ ಲಭ್ಯವಾಗುವಂತೆ ನೋಡಿಕೊ೦ಡಿದ್ದಾರೆ.






Leave a Reply