– ಶ್ರೀಮತಿ ಪದ್ಮಿನಿ ಬಾಲು
ಮುಗ್ಧ ಮಗುವಿನ ಮಂದಹಾಸಕ್ಕೆ, ಅದರ ತೊದಲು ಮಾತಿಗೆ, ಅಪ್ಪುಗೆಯ ಅಪ್ಯಾಯತೆಗೆ ಮರುಳಾಗದವರಾರು? ಕೇವಲ ಮಾನವ ಶಿಶುವಿನ ಮುದ್ದು ಮೊಗವೇ ಇಷ್ಟು ಮೋಹಕವಾಗಿರುವಾಗ ಪರಮ ದೇವೋತ್ತಮ ಪುರುಷ ಶ್ಯಾಮಸುಂದರನ ಲೀಲಾ ವಿನೋದಗಳನ್ನು ಕಣ್ಣಾರೆ ಕಂಡು ಮನಸಾರೆ ಅನುಭವಿಸಿದ ವ್ರಜವನಿತೆಯರ ಭಾಗ್ಯಕ್ಕೆ ಎಣೆಯುಂಟೆ? ಅವರು ವ್ರಜ ಭೂಮಿಯಲ್ಲಿ ಶ್ಯಾಮರಾಮರೊಡನೆ ಕಳೆದ ಒಂದು ದಿನವನ್ನು ನಾವೂ ಹಂಚಿಕೊಂಡು ಧನ್ಯರಾಗೋಣ.

ವ್ರಜಭೂಮಿಯಲ್ಲೊಂದು ದಿನ ವ್ರಜಸ್ತ್ರೀಯರೆಲ್ಲರೂ ಯಶೋದಾನಂದ ಗೋಪರ ಮನೆಯಂಗಳದಲ್ಲಿ ನೆರೆದು ಬಾಲಕೃಷ್ಣ ಬಲರಾಮರ ಲೀಲೆಗಳನ್ನು ನೋಡಲು ಕಾತರರಾಗಿ ಅವರಿಬ್ಬರೂ ಬರುವುದನ್ನೇ ಕಾಯುತ್ತಿದ್ದಾರೆ ಮತ್ತು ನಿರೀಕ್ಷಣೆಯಲ್ಲಿ ಅಲೌಕಿಕವಾದ ಆನಂದವನ್ನನುಭವಿಸುತ್ತಿದ್ದಾರೆ ಅವರಲ್ಲೊಬ್ಬಳು ಮುಚ್ಚಿಕೊಳ್ಳುತ್ತಿರುವ ನೀಳ ಕಣ್ಣಿವೆಗಳನ್ನು ತೆರೆದಿಟ್ಟುಕೊಳ್ಳಲು ಬಹಳ ಕಷ್ಟಪಟ್ಟು ಪ್ರಯತ್ನಿಸುತ್ತಿದ್ದಾಳೆ.
ಹಿಂದಿನ ದಿನ ಬಲಭದ್ರ ಮತ್ತು ಅವನ ಅನುಜನನ್ನಗಲಿ ಮನೆಗೆ ಹೋದವಳ ಮನಸ್ಸಿನ ತುಂಬ ಕೃಷ್ಣನೇ ಆವರಿಸಿ ರಾತ್ರಿಯೆಲ್ಲ ಕೃಷ್ಣಲೀಲೆಗಳನ್ನೆ ಅನುಭವಿಸುತ್ತ ಮಲಗಿದವಳಿಗೆ ನಿದ್ರೆ ಬಳಿಯಲ್ಲಿ ಸುಳಿಯಲೇ ಇಲ್ಲ. ರಾತ್ರಿ ಹರಿದು ಬೆಳಗಾದುದೂ ಅರಿವಾಗಲಿಲ್ಲ.
ಆದರೆ ಮುಂಜಾನೆಯನ್ನು ಸೂಚಿಸುವ ಕೋಳಿ ಸುಮ್ಮನಿರಬೇಕಲ್ಲ ಕೊಕ್ಕೊಕೋ ಎಂದು ಕೂಗಿ ನಂದಗೋಕುಲಕ್ಕೆ ಚಿನ್ನದುಕೂಲವನ್ನು ಹೊದಿಸಲು ಉಷೆಯನ್ನು ಆಹ್ವಾನಿಸಿತು. ಹಸುವನ್ನು ಕರೆಯುವ ಹೊತ್ತಾಯಿತೆಂದು ಗೋಪಿ ಗಡಬಡಿಸಿಕೊಂಡೆದ್ದಳು.
ಕೆಚ್ಚಲಿನ ಬೆಚ್ಚಗಿನ ನೊರೆಹಾಲಿಗೆ ಬಾಯಿಡಲು ಕೃಷ್ಣನು ಬಂದಾನೆಂದು ಅವನನ್ನು ಸ್ವಾಗತಿಸಲು ಬಾಗಿಲನ್ನು ಗೋಮಯದಿ೦ದ ಸಾರಿಸಿ ಚೆ೦ದದ ರಂಗವಲ್ಲಿಯಿಂದಲಂಕರಿಸತೊಡಗಿದಳು. ತಾನಿಟ್ಟ ರಂಗವಲ್ಲಿಯನ್ನು ತನ್ನ ಪುಟ್ಟ ಪಾದಗಳಿಂದಳಿಸಲು ಕೃಷ್ಣನು ಬಂದನೆಂದು ಭ್ರಮಿಸಿ ತಾನೇ ಕುಣಿಕುಣಿದು ಎಲ್ಲವನ್ನೂ ಚದುರಿಸಿದಳು.
ಹಸುಕರುಗಳ ಅಂಬಾರವವನ್ನು ಕೇಳಿ ಕೃಷ್ಣನು ಕೊಟ್ಟಿಗೆಯಲ್ಲಿ ಕರುಗಳನ್ನು ಬಿಚ್ಚಲು ಬಂದಿರುವನೆಂದು ಭಾವಿಸಿ ಬಿಂದಿಗೆಯನ್ನೆತ್ತಿಕೊಂಡು ಹಾಲು ಕರೆಯಲು ಓಡಿದಳು. ಅವಳು ಕರುವನ್ನು ಬಿಚ್ಚಿದೊಡನೆ ಅದು ಧಾವಿಸಿ ಬಂದು ಕಚ್ಚಲಿಗೆ ಬಾಯಿ ಹಾಕಿದಾಗ ಹಸು ಆನಂದದಿಂದ ಸೊರಬಿಟ್ಟು ಹಾಲು ಕರೆಯತೊಡಗಿತು.

ಕೃಷ್ಣನ ಬಾಯೊಳಗೆ ಹಾಲು ಕರೆಯುತ್ತಿರುವೆನೆಂಬ ಭ್ರಾಂತಿಯಲ್ಲಿ ಬಿಂದಿಗೆಯು ತುಂಬಿ ಹರಿದು ಕಾಲುಗಳನ್ನು ತೋಯಿಸಿದಾಗಲೇ ಎಚ್ಚರವಾದದ್ದು. ಮುದ್ದು ಬಾಲಕೃಷ್ಣನಿಗಾಗಿ ಕಾಸಿದ ಹಾಲಿಗೆ ಕಲ್ಲು ಸಕ್ಕರೆಯನ್ನು ಬೆರೆಸಿ ಕೊಟ್ಟಾಗ ಅರಳುವ ಕಂಗಳ ರಂಗನ್ನು ಕಾಣಲು ಕಾತರಿಸಿ ಹಾಲು ಕಾಯಿಸಲಿಟ್ಟವಳಿಗೆ ಮತ್ತೆ ಮೈಮೇಲೆ ಎಚ್ಚರವಿಲ್ಲ.
ಉಕ್ಕಿ ಬಂದ ಹಾಲಿನಂತೆ ಅವಳ ಎದೆಯಲ್ಲೂ ಕೃಷ್ಣಪ್ರೇಮವು ಉಕ್ಕಿ ಬಂದು ಅವಳ ಸ್ತನಗಳನ್ನು ನೆನೆಸಿತು. ಆಗತಾನೆ ಎದ್ದು ಬಂದ ಮಕ್ಕಳಿಬ್ಬರ ಮುಖದಲ್ಲೂ ಕೃಷ್ಣ ಬಲರಾಮರ ರೂಪವೇ ಪ್ರತಿಬಿಂಬಿಸಿ ಅವರಿಬ್ಬರನ್ನೂ ಮಣೆಯ ಮೇಲೆ ಕುಳ್ಳಿರಿಸಿ ಸುಖೋಷ್ಣವಾದ ಹಾಲನ್ನು ಸವಿಮಾತಿನೊಡನೆ ಕುಡಿಸಿದಳು.
ಬೆಣ್ಣೆ ಬೇಡಲು ನಂದ ಕುಮಾರರು ಬಂದರೆ ಬೆಣ್ಣೆ ಸಿದ್ಧವಾಗಿಲ್ಲವಲ್ಲ ಎಂದು ಅವಸರಿಸಿ ಬೆಣ್ಣೆ ಕಡೆಯಲು ಕುಳಿತಳು. ಮೇಲೇರಿ ಕೆಳಗಿಳಿಯುತ್ತಿದ್ದ ಕಡಗೋಲಿನಲ್ಲಿ ನರ್ತಿಸುತ್ತಿರುವ ಗೋಪಾಲನೇ ಕಾಣಿಸತೊಡಗಿದ ಸರಭರವೆಂಬ ಸದ್ದು ಅವನ ಕಾಲೆಜ್ಜೆಗಳ ಮಧುರ ನಿನಾದದಂತೆ ಕೇಳಿಸಿ ಗೋಪಿಯ ತಿಳಿವು ತಪ್ಪಿತು.
ಬುಗ್ಗೆಯಾಗಿ ಮೇಲೆದ್ದ ಬೆಣ್ಣೆಯನ್ನು ಮುದ್ದೆ ಮಾಡಿ ಪ್ರೀತಿಯೆಂಬ ಸಕ್ಕರೆಯೊಡನೆ ಬೆರೆಸಿ ಪಕ್ಕದಲ್ಲಿ ಮಲಗಿದ್ದ ಮುದಿ ಅತ್ತೆಯೇ ಕೃಷ್ಣನಂತೆ ಕಂಡು ಬಂದು ಅವಳ ಮುಖಕ್ಕೆ ಬಳಿದಳು. ಅತ್ತೆಯ ಬೈಗಳು ಗಂಡನ ಕೂಗು, ಮೈದುನ ನಾದಿನಿಯರ ಚುಚ್ಚುಮಾತು, ಮಕ್ಕಳ ರಂಪ ಗೋಪಿಯನ್ನು ವಾಸ್ತವಕ್ಕೆಳೆದು ತಂದವು.
ಕೃಷ್ಣಬಲರಾಮರನ್ನು ಯಾವಾಗ ಕಂಡೇನೋ ಎಂಬ ಆತುರದಲ್ಲಿ ಒಲ್ಲದ ಮನಸ್ಸಿನಿಂದ ಮನೆಗೆಲಸಗಳನ್ನೆಲ್ಲ ಮುಗಿಸಿ ನಂದನಂಗಳಕ್ಕೆ ಓಡಿ ಬಂದಿದ್ದಳು. ಗೋಪಿ ರಾಮಕೃಷ್ಣರನ್ನು ಕಾಣದ ಕಣ್ಣುಗಳನ್ನು ತೆರೆದಿಡುವುದರಿಂದ ಪ್ರಯೋಜನವೇನು, ಎಂಬಂತೆ ರೆಪ್ಪೆಗಳು ಅವುಗಳಿಗೆ ತೆರೆಯನ್ನೆಳೆಯುತ್ತಿದ್ದವು.
ಮರುಕ್ಷಣದಲ್ಲಿ ಗೋಪಿ ಜೋರಾಗಿ ಕೂಗಿದಳು ‘ಎವೆಗಳೇ ಹಿಂದೆ ಸರಿಯಿರಿ, ನನ್ನ ಮನ ಮೋಹನ ಮುಕುಂದ ಬಂದ, ನೋಡಬೇಕು ನಾನವನ ಚಂದದ ವದನಾರವಿಂದ’, ಕಣ್ರೆಪ್ಪೆಗಳು ಹೆದರಿ ವಿಸ್ತರಿತ ನೇತ್ರಗಳ ಹಿಂದೆ ಅಡಗಿದವು. ಆಹಾ ಗೋಪಿಯು ಕಂಡ ದೃಶ್ಯವನ್ನು ಬಣ್ಣಿಸಲು ಭಾಷೆಗಳವೇ?

ನೀಲಮಣಿಯಂತೆ ಶೋಭಿಸುವ ಶ್ಯಾಮಸುಂದರನು ಅರುಣ ವರ್ಣದ ಕರಪಲ್ಲವಗಳಲ್ಲಿ ನವನೀತವನ್ನು ಹಿಡಿದು ತನ್ನ ಕೋಮಲವಾದ ಅಂಗಾಂಗಗಳನ್ನು ನೃತ್ಯ ಭಂಗಿಯಲ್ಲಿ ತಿರುಗಿಸುತ್ತ ಅಂಬೆಗಾಲಿಟ್ಟುಕೊಂಡು ಬರುತ್ತಿದ್ದಾನೆ. ಮೇಲೇರಿ ಕೆಳಗಿಳಿಯುತ್ತಿರುವ ನಿತಂಬಗಳು ಗಂಡಕೀ ನದಿಯ ತಿಳಿನೀರಿನಲ್ಲಿ ಹೊಳೆಯುತ್ತಿರುವ ಸಾಲಿಗ್ರಾಮ ಶಿಲೆಗಳಂತಿವೆ.
ಶುಭ್ರ ಸ್ನಾನ ಶ್ಯಾಮಲ ದೇಹಕ್ಕೆ ಅಂಗಳದ ಧೂಳು ಅಲ್ಲಲ್ಲಿ ಮೆತ್ತಿಕೊಂಡಿದೆ. ಧವಳ ಕಾಂತಿಯಿಂದ ಕೂಡಿದ ತುಟಿಗಳಿಗೆ ಕೆನೆ ಮೊಸರು ಅಂಟಿಕೊಂಡು ಹವಳ ಮುತ್ತುಗಳಿಂದಾದ ಆಭರಣದಂತೆ ಶೋಭಿಸುತ್ತಿದೆ. ಸುಂದರ ಕಪೋಲಗಳ ಮೇಲ್ಭಾಗದಲ್ಲಿ ಸೂರ್ಯ ಚಂದ್ರರಂತೆ ಹೊಳೆಯುವ ಕಾರುಣ್ಯ ಸೂಸುವ ಕಣ್ಣುಗಳೆರಡರ ಸೊಬಗೇ ಬೇರೆ.
ಲಲಾಟದಲ್ಲಿ ಗೋರೋಚನದ ತಿಲಕ ಎದ್ದು ಕಾಣುತ್ತಿದೆ. ಮನ್ಮಥನನ್ನು ನಾಚಿಸುವ ಮುದ್ದು ಮುಖದ ಮುಂದೆ ಕಡುಗಪ್ಪಾದ ಗುಂಗುರು ಕೂದಲಿನ ಗುಚ್ಛಗಳು ಕೊನೆಯುತ್ತಿವೆ. ಮುರಳೀ ಮೋಹನನ ಮುಖ ಕಮಲದಿಂದ ಸೂಸುವ ಮಧುಪಾನ ಮತ್ತವಾದ ದುಂಬಿಗಳು ಹಾರುವುದನ್ನು ಮರೆತು ಕುಳಿತಲ್ಲಿಯೇ ಓಲಾಡುತ್ತಿರುವಂತಿದೆ.
ಕಂಠದಲ್ಲಿ ಸುರಭೀಪುಷ್ಪದ ಮಾಲೆಯಿದೆ. ಎದೆಯ ಮೇಲೆ ವ್ಯಾಘ್ರನಖ, ಕವಡೆ, ಮುಂತಾದ ದೃಷ್ಟಿ ದೋಷ ಪರಿಹಾರಕ್ಕಾಗಿ ತಾಯಿ ಯಶೋದೆ ತೊಡಿಸಿದ ಸರವಿದೆ. ಸೊಂಟದಲ್ಲಿ ಬಣ್ಣ ಬಣ್ಣದ ಮಣಿಗಳಿಂದ ಹೆಣೆದ ಕಟಿಬಂಧವು ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿದೆ ಅಂದವಾದ ಕಾಲುಗಳನ್ನಲಂಕರಿಸಿರುವ ಕಾಲು ಬಳೆ, ಗೆಜ್ಜೆಗಳು, ಕೈಗಳಲ್ಲಿರುವ ಕಂಕಣಗಳೊಡನೆ ಸ್ಪರ್ಧಿಸುತ್ತ ಮನೋಹರಿಯ ಮಂಡಿಯೋಟಕ್ಕೆ ಲಯ ಬದ್ಧವಾಗಿ ತಾಳ ಹಾಕುತ್ತಿದೆ.
ನಂದ ರಾಣಿಯು ಎವೆಯಿಕ್ಕದೆ ತನ್ನ ಕಂದನ ಅಂದವನ್ನು ಸಮಿಯುತ್ತ ಮೈ ಮರೆತಿದ್ದಾಳೆ. ತಂದೆ ವ್ರಜರಾಜ ನಂದಗೋಪಾಲನು ತನ್ನ ಧನ್ಯತೆಯನ್ನು ಮನಸಾರೆ ಕೊ೦ಡಾಡುತ್ತ ಅನತಿ ದೂರದಲ್ಲಿಯೇ ನಿಂತಿದ್ದಾರೆ. ಅಣ್ಣ ಬಲಭದ್ರನಾದರೋ ತಮ್ಮನ ಬೆಂಗಾವಲಿನಂತೆ ತಪ್ಪು ಹೆಜ್ಜೆಗಳನ್ನಿಡುತ್ತ ಅವನನ್ನೇ ಹಿಂಬಾಲಿಸುತ್ತಿದ್ದಾನೆ.

ಅನೇಕ ಯುಗಗಳು ತಪಸ್ಸು ಮಾಡಿದ ಋಷಿ ಮುನಿಗಳಿಗೂ ದುರ್ಲಭವಾದ ಈ ನೋಟವನ್ನು ಕಂಡ ಗೋಪಿಯ ದೃಷ್ಟಿಯು ಆನಂದಬಾಷ್ಪಗಳ ಕೆರೆಯಿಂದ ಮಂದವಾಯಿತು. ಕೂಡಲೇ ಅವಳು ಸೀರೆಯ ಸೆರಗಿನಿಂದ ಕಣ್ಣೂರಸಿಕೊಂಡು ಮತ್ತೆ ದಿವ್ಯ ದೃಶ್ಯವನ್ನು ನಯನಗಳಿಂದ ಹೀರಿಕೊಳ್ಳತೊಡಗಿದಳು.
ಸೋದರರಿಬ್ಬರು ಸುತ್ತಲಿನ ಪರಿವೆಯೇ ಇಲ್ಲದೆ ಆನಂದದಿಂದ ಒಬ್ಬರನ್ನೊಬ್ಬರು ಛಾಯೆಯಂತೆ ಅನುಸರಿಸುತ್ತಿದ್ದಾರೆ. ಅವರಿಬ್ಬರೂ ಒಬ್ಬರ ಎದುರಿಗೊಬ್ಬರು ಕುಳಿತರು. ವ್ರಜವಿಹಾರಿಯು ತನ್ನ ಕೈಯ್ಯಲ್ಲಿದ್ದ ಬೆಣ್ಣೆಯನ್ನು ಅಣ್ಣನ ಬಾಯಲ್ಲಿಟ್ಟ.
ಅಣ್ಣನು ಅದನ್ನೇ ತಮ್ಮನ ತುಟಿಗೆ ಬಳಿದ ರಾಮ ಶ್ಯಾಮರಿಬ್ಬರೂ ಅಸ್ಪಷ್ಟವಾದ ಶಬ್ದಗಳನ್ನು ಹೊರಡಿಸುತ್ತ ಯಾವುದೋ ಗಹನವಾದ ವಿಚಾರ ವಿನಿಮಯ ಮಾಡಿಕೊಂಡರು. ಕೆಲಕ್ಷಣಗಳಲ್ಲಿಯೇ ಸೋಜಿಗವೊಂದನ್ನು ಕಂಡಂತೆ ಕಿಲಕಿಲನೆ ನಗತೊಡಗಿದರು.
ಸ್ವಲ್ಪ ದೂರ ನಾಲ್ಕು ಕಾಲುಗಳ ಮೇಲೆ ಸರಸರನೆ ಹರಿದುಕೊಂಡು ಹೋಗುತ್ತ ನೂಪುರಗಳ ಝಣತ್ಕಾರವು ಎಲ್ಲಿಂದ ಕೇಳಿ ಬರುತ್ತಿದೆಯೆಂದು ಚಿಂತನೆಯಲ್ಲಿ ಮುಳುಗಿದರು. ಒಡನೆಯೇ ತಮ್ಮ ಕೈಕಾಲುಗಳನ್ನಾಡಿಸುತ್ತ ಹೊಸದೇನನ್ನೋ ಕಂಡು ಕೊ೦ಡವರಂತೆ ಆಶ್ಚರ್ಯ ಚಕಿತರಾದರು. ತಮ್ಮ ನೆರಳನ್ನು ನೋಡಿ ಅದನ್ನು ಹಿಡಿದುಕೊಳ್ಳಲು ಹಿಂಬಾಲಿಸತೊಡಗಿದರು.
ನೆರಳೂ ಸಹ ಅದೇ ವೇಗದಲ್ಲಿ ಚಲಿಸಿ ಕೈಗೆ ಸಿಗದಾದಾಗ ಜೋರಾಗಿ ಅಳತೊಡಗಿದರು. ಬಾಲರ ಅಮೃತಮಯ ಲೀಲೆಗಳಲ್ಲಿ ಕಳೆದು ಹೋಗಿದ್ದ ನಂದ ಭಾರ್ಯೆ ಯಶೋದೆಯು ಮಕ್ಕಳ ಅಳುವಿನ ದನಿಯನ್ನು ಕೇಳಿದೊಡನೆ ಎಚ್ಚೆತ್ತುಕೊಂಡು ಬಂದು ಇಬ್ಬರನ್ನೂ ಎದೆಗವಚಿಕೊಂಡಳು. ಇದಕ್ಕಾಗಿಯೇ ಕಾಯುತ್ತಿದ್ದ ಬಾಲಕೃಷ್ಣ ಬಲಭದ್ರರು ಸಮಾಧಾನಗೊಂಡು ಮಾತೆಯ ತೊಡೆಯೇರಿ ಕುಳಿತರು.
ರಾಮ ಕೃಷ್ಣರು ಅಂಬೆಗಾಲಿಡುವ ಅಲಭ್ಯಾಲಭ್ಯವಾದ ದೃಶ್ಯವನ್ನನುಭವಿಸಲು ವ್ರಜ ಸ್ತ್ರೀಯರ ದೊಡ್ಡ ಗುಂಪು ನಂದನದಂಗಳದಲ್ಲಿ ನೆರೆದಿತ್ತು. ಭಾಗ್ಯವತಿಯಾದ ವ್ರಜವನಿತೆಯರ ಮನೋಸುಧಾ ಸಾಗರದಲ್ಲಿ ಆನಂದದ ತರಂಗಗಳೇಳುತ್ತಿದ್ದವು. ಒಬ್ಬೊಬ್ಬರ ಹೃದಯದಲ್ಲೂ ಒಂದೊಂದು ಭಾವನೆ, ಅದಕ್ಕನುಸಾರವಾಗಿ ಶ್ಯಾಮ ಸುಂದರನ ಲೀಲಾ ವಿನೋದದಲ್ಲಿ ತಮ್ಮದೇ ಆದ ದಿವ್ಯ ರಸಸ್ವಾದಗಳನ್ನು ಸ್ವಾದಿಸುತ್ತಿದ್ದರು.

ಒಬ್ಬಳು ವ್ರಜಸುಂದರಿಗೆ ಕೃಷ್ಣನ ಜ್ಞಾನವನ್ನು ಪರೀಕ್ಷಿಸುವಾಸೆ. ಅವಳು ಕೃಷ್ಣನ ಮೊಗದ ಮುಂದೆ ತನ್ನ ಮುಖವನ್ನು ಕಂಡು ಕೇಳಿದಳು. “”ಕೃಷ್ಣ ನಿನ್ನ ಮುಖವಲ್ಲಿ?” ಕೃಷ್ಣನು ತನ್ನ ಹಸ್ತಗಳೆರಡನ್ನೂ ಬೊಗಸೆ ಮಾಡಿ ತನ್ನ ಸುಂದರ ಮುಖವನ್ನು ಅದರಲ್ಲಿಟ್ಟು ತೋರಿದ.
ಗೋಪಿಕೆಯರೆಲ್ಲ ಚಪ್ಪಾಳೆ ಹೊಡದರು. “ಬಾಲ, ಕಣ್ಣುಗಳೆಲ್ಲಿ ತೋರಿಸು”, ನಂದ ಕಿಶೋರನು ಕಣ್ರೆಪ್ಪೆಗಳನ್ನು ಪಟಪಟನೆ ಹೊಡೆದು ಲೀಲೆಯಾಡಿದ ಸಂತೋಷ ಹತ್ತಿಕ್ಕಲಾರದೆ ಗೋಕುಲದ ಬಾಲೆಯರು ನರ್ತಿಸತೊಡಗಿದರು. ‘ಮುದ್ದು ಮಗುವೇ, ನಿನ್ನ ಮೂಗೆಲ್ಲಿ ತೋರಿಸಿ ಬಿಡು,’ ಪುರುಷೋತ್ತಮನು ನೀಳವಾದ ಬೆರಳುಗಳಲ್ಲಿ ಮೂಗನ್ನು ಪ್ರಾಣಾಯಾಮದ ಭಂಗಿಯಲ್ಲಿ ಹಿಡಿದುಕೊಂಡ.
ಗೋಪಿಯರ ನಗೆ ಅಲೆ ಅಲೆಯಾಗಿ ಹರಿದು ವ್ರಜ ಭೂಮಿಯಲ್ಲಿ ಪ್ರತಿಧ್ವನಿಸಿತು. ನಿನ್ನ ತಲೆಗೂದಲೆಲ್ಲಿ ಕೃಷ್ಣಯ್ಯಾ?’ ಎಂದಳೊಬ್ಬಳು. ಮುರಾರಿ ಶಿಖೆ ಅಲ್ಲಾಡುವಂತೆ ತನ್ನ ತಲೆಯನ್ನಾಡಿಸಿದ ಪ್ರಜ ನಿವಾಸಿಗಳ ಆನಂದೋದ್ಗಾರ ಮುಗಿಲು ಮುಟ್ಟಿತು.
ವಿಶ್ವವನ್ನೆಲ್ಲ ಮುನ್ನಡೆಸುವ ವಿಶ್ವೇಶ್ವರನ ನಡಿಗೆಯನ್ನು ಕಾಣುವ ಬಯಕೆ ಒಬ್ಬಳಿಗೆ ಅವಳನ್ನೇಕೆ ನಿರಾಸೆ ಪಡಿಸಬೇಕೆಂದು ರಾಮ ಶ್ಯಾಮರಿಬ್ಬರೂ ಎದ್ದು ನಿಂತು ನಾಲ್ಕಾರು ಹೆಜ್ಜೆಗಳನ್ನಿಟ್ಟು ಜಾರಿ ಬಿದ್ದಂತೆ ನಟಿಸಿದರು. ಗಡಬಡಿಸಿ ನಂದಗೋಪಾಲ ಮಕ್ಕಳನ್ನೆತ್ತಿಕೊಂಡು ಮುದ್ದಿಟ್ಟ.
ಯಾರಿಗೂ ಕಾಲ ಸರಿದುದೇ ತಿಳಿಯಲಿಲ್ಲ. ಇದ್ದಕ್ಕಿದ್ದಂತೆ ಮೇವು ಮುಗಿಸಿ ಕರುಗಳನ್ನು ಸೇರುವ ತವಕದಿಂದ ಓಡಿ ಬರುತ್ತಿರುವ ಹಸುಗಳ ಕಾಲ ಸಪ್ಪಳ, ಅವುಗಳನ್ನಟ್ಟಿಕೊಂಡು ಬರುತ್ತಿರುವ ಗೋಪಾಲಕರ ಕಲರವ, ಎಳೆಗರುಗಳ ಅಂಬಾ ಕೂಗು, ಗೋಧೂಳಿ ವೇಳೆಯಾಯಿತೆಂದು, ವ್ರಜಭೂಮಿಯಲ್ಲೊಂದು ದಿನಕಳೆಯಿತೆಂದು ಎಚ್ಚರಿಸಿತು.
ಕೃಷ್ಣನಲ್ಲೇ ಲೀನಳಾಗಿದ್ದ ನಮ್ಮ ಗೋಪಿಗೆ ಇಹದ ಪರಿವೆ ಮರಳಿ, ಮನದಲ್ಲಿ ಕೃಷ್ಣನನ್ನು ಬಚ್ಚಿಟ್ಟುಕೊಂಡು ಗೃಹ ಕೃತ್ಯಕ್ಕೆ ಮರಳಿದಳು.






Leave a Reply