ಕೃಷ್ಣ ಪಾಕಶಾಲೆ
– ಎಸ್.ವಿ.ಗಾಯತ್ರಿ ಶೆಣೈ
ಮಾವು – ಕಿತ್ತಳೆ ಹಣ್ಣಿನ ಸಾಸಿವೆ

ಬೇಕಾಗುವ ಪದಾರ್ಥ:
ಮಾವಿನ ಹಣ್ಣು – 4 (ಹದ ಗಾತ್ರದ್ದು)
ಕಿತ್ತಳೆ ಹಣ್ಣು – 2 (ಹದ ಗಾತ್ರದ್ದು)
ಅನಾನಸ್ – 1 (ಚಿಕ್ಕ ಗಾತ್ರದ್ದು)
ಹಸಿರು ದ್ರಾಕ್ಷಿ (ಬೀಜ ರಹಿತ) – 200 ಗ್ರಾಂ
ಬೆಲ್ಲ – 2 ಅಚ್ಚು (ಚಿಕ್ಕದ್ದು)
ಸಾಸಿವೆ – 2 ಚಿಕ್ಕ ಚಮಚ
ತೆಂಗಿನಕಾಯಿ ತುರಿ – 3 ಬಟ್ಟಲು
ಒಣಮೆಣಸಿನ ಕಾಯಿ – 4 (ಅಥವಾ ರುಚಿಗೆ ತಕ್ಕಷ್ಟು)
ಉಪ್ಪು – ರುಚಿಗೆ ತಕ್ಕಷ್ಟು
ಅಡಿಗೆ ಎಣ್ಣೆ / ತುಪ್ಪ – 1 ದೊಡ್ಡ ಚಮಚ
ಕರಿಬೇವು – 2 ಎಸಳು
ಮಾಡುವ ವಿಧಾನ: ಹಣ್ಣುಗಳನ್ನು ಶುಚಿಗೊಳಿಸಿ, ಸಿಪ್ಪೆ ತೆಗೆದು (ದ್ರಾಕ್ಷಿ ಬಿಟ್ಟು ಉಳಿದ ಹಣ್ಣು) ಕತ್ತರಿಸಿಟ್ಟುಕೊಳ್ಳಿ. ಅನಂತರ ದ್ರಾಕ್ಷಿಯನ್ನು ಎರಡೆರಡು ಹೋಳುಗಾಳಾಗಿ ಬಿಡಿಸಿ ಎಲ್ಲವನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ. ಅನಂತರ ಬೆಲ್ಲ ತುರಿದು ಹಣ್ಣುಗಳೊಂದಿಗೆ ಬೆರೆಸಿ.
ಸುಮಾರು 10-15 ನಿಮಿಷ ಮುಚ್ಚಿಡಿ. ಹಣ್ಣುಗಳಿಗೆ ಬೆಲ್ಲ ಹೀರಿಕೊಳ್ಳುವ ವೇಳೆಯಲ್ಲಿ ತೆಂಗಿನಕಾಯಿ ತುರಿದು ಅದರೊಂದಿಗೆ 1 ಚಮಚ ಹಸಿ ಸಾಸಿವೆ ಹಾಗೂ ಮೆಣಸಿನಕಾಯಿ ಸೇರಿಸಿ ಮಸಾಲೆ ರುಬ್ಬಕೊಳ್ಳಿ. ಈಗ ರುಬ್ಬಿದ ಮಸಾಲೆಯೊಂದಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹಣ್ಣಿನ ಹೋಳಿಗೆ ಬೆರೆಸಿ.
ಉಳಿದ ಸಾಸಿವೆ ಹಾಗು ಕರಿಬೇವಿನ ಒಗ್ಗರಣೆ ಮಾಡಿ ಹಣ್ಣಿನ ಸಾಸಿವೆ ಬೆರೆಸಿ. ಮಾವು – ಕಿತ್ತಳೆ ಹಣ್ಣಿನ ಸಾಸಿವೆ ಸಿದ್ಧ. ಮಾಧವನಿಗರ್ಪಿಸಿ ಸ್ವೀಕರಿಸಿ. ಈ ಹಣ್ಣಿನ ಸಾಸಿವೆಯನ್ನು ಅನ್ನದೊಂದಿಗೆ ಬೆರೆಸಿಕೊಳ್ಳಬಹುದು.
ಇಲ್ಲದಿದ್ದಲ್ಲಿ ಚಪಾತಿ ಅಥವಾ ಪೂರಿಯೊಂದಿಗೆ ತಿನ್ನಬಹುದು. ಉಳಿದ ಹಣ್ಣುಗಳನ್ನು ಬೆರೆಸದೇ ಬರಿ ಮಾವಿನ ಹಣ್ಣನ್ನು ಮಾತ್ರ ಬಳಸಿ ಹಣ್ಣಿನ ಸಾಸಿವೆ ಮಾಡಬಹುದು. ಅದಕ್ಕೆ ಬೇಕಾಗುವಷ್ಟು ಪ್ರಮಾಣದಲ್ಲಿ ಉಳಿದ ಪದಾರ್ಥಗಳನ್ನು ಸೇರಿಸಿ ಮಸಾಲೆ ರುಬ್ಬಿಕೊಳ್ಳಬೇಕು.
ಮಾವು ಮಜ್ಜಿಗೆ ಪಾನಕ (ಮ್ಯಾಂಗೋ ಲಸ್ಸಿ)

ಬೇಕಾಗುವ ಪದಾರ್ಥ:
ಮಾವಿನ ಹಣ್ಣಿನ ರಸ (ಗಟ್ಟಿಯಾಗಿ ತೆಗೆದದ್ದು) – 1 ಬಟ್ಟಲು
ಮೊಸರು – 3 ಬಟ್ಟಲು
ಸಕ್ಕರೆ – ½ ಬಟ್ಟಲು
ನೀರು – 1 ಬಟ್ಟಲು
ಐಸ್ಕ್ಯೂಬ್ಸ್ (ಮಂಜಿನ ಚಿಕ್ಕ ಗಡ್ಡೆ) – 8
ಏಲಕ್ಕಿ ಪುಡಿ – 2 ಚಿಟಿಕೆ
ಪುದಿನ – 2 ಎಸಳು
ಮಾಡುವ ವಿಧಾನ: ಮೊಸರು. ಮಾವಿನ ಹಣ್ಣಿನ ರಸ, ನೀರು , ಸಕ್ಕರೆ, ಏಲಕ್ಕಿಪುಡಿ ಮತ್ತು ಐಸ್ಕ್ಯೂಬ್ಸ್ಗಳನ್ನು ಒಟ್ಟಿಗೆ ಬೆರೆಸಿ ಮಿಕ್ಸಿಯಲ್ಲಿ ಹಾಕಿ ಒಂದಾಗಿ ಬೆರೆಯುವಂತೆ ಕಡೆಯಿರಿ. ಇದರಲ್ಲಿ ಸುಮಾರು 8-9 ಗ್ಲಾಸ್ ಪಾನಕ ಸಿದ್ಧವಾಗುತ್ತದೆ. ಅನಂತರ ಪುದಿನ ಎಲೆಗಳನ್ನು ಮೇಲಿನಿಂದ ಹಾಕಿ ಅಲಂಕರಿಸಿ. ಕುಡಿಯುವ ಮೊದಲು ಶ್ರೀ ಕೃಷ್ಣನಿಗರ್ಪಿಸುವುದನ್ನು ಮರೆಯದಿರಿ.
ಮಾವಿನ ಹಣ್ಣಿನ ಬರ್ಫಿ

ಬೇಕಾಗುವ ಪದಾರ್ಥ:
ಮಾವಿನ ಹಣ್ಣಿನ ರಸ – 4 ಬಟ್ಟಲು
ತುಪ್ಪ – 1 ಬಟ್ಟಲು
ಸಕ್ಕರೆ – 2 ಬಟ್ಟಲು
ಏಲಕ್ಕಿಪುಡಿ – 3 ಚಿಕ್ಕ ಚಮಚ
ಗೋಡಂಬಿ (ಅಲಂಕರಿಸಲು) – 10-15
ಮಾಡುವ ವಿಧಾನ: ಸ್ವಲ್ಪ ತುಪ್ಪವನ್ನು ಚಿಕ್ಕ ಬಾಣಲೆಯಲ್ಲಿ ಬಿಸಿ ಮಾಡಿ. ಅದರಲ್ಲಿ ಗೋಡಂಬಿ ಹುರಿದು ತೆಗೆದಿಡಿ. ಮಾವಿನ ಹಣ್ಣಿನ ರಸ ತೆಗೆದು ಮಿಕ್ಸಿಯಲ್ಲಿ ಹಾಕಿ ಗಂಟುಗಳಿಲ್ಲದಂತೆ ಕಡೆಯಿರಿ.
ಅನಂತರ ದಪ್ಪ ತಳದ ಬಾಣಲೆಯಲ್ಲಿ ಅಥವಾ ಸಾಸ್ಪ್ಯಾನ್ನಲ್ಲಿ ಮಾವಿನ ಹಣ್ಣಿನ ರಸವನ್ನು ಹಾಕಿ ಸಣ್ಣ ಉರಿಯಲ್ಲಿ ಕುದಿಸಿ, ಆಗಾಗ ಕೈಯಾಡಿಸಿ ತಳ ಹತ್ತದಂತೆ ನೋಡಿಕೊಳ್ಳಿ. 2-3 ನಿಮಿಷದ ಅನಂತರ ಸಕ್ಕರೆ ಹಾಕಿ ಚೆನ್ನಾಗಿ ಬೆರೆಸಿ. ಮಾವಿನ ರಸ ಸಕ್ಕರೆಯೊಂದಿಗೆ ಬೆರೆತು ಬಾಣಲೆ ಬದಿಯಿಂದ ಬಿಟ್ಟು ಕೊಳ್ಳುವಾಗ, ಅದಕ್ಕೆ ಏಲಕ್ಕಿ ಪುಡಿ, ಹಾಗೂ 2 ದೊಡ್ಡ ಚಮಚ ತುಪ್ಪ ಹಾಕಿ ಮತ್ತೆ 2-3 ನಿಮಿಷ ಬೇಯಿಸಿ.
ಎಲ್ಲಾ ಪದಾರ್ಥಗಳು ಚೆನ್ನಾಗಿ ಬೆರೆತನಂತರ ಇಳಿಸಿ. ಅನಂತರ ಹುರಿದ ಗೋಡಂಬಿಯನ್ನು ಇದರಲ್ಲಿ ಸೇರಿಸಿ, ಚೆನ್ನಾಗಿ ಕಲೆಸಿ.
ಮತ್ತೊಂದು ಅಗಲವಾದ ಹಚ್ಚಿದ ತಟ್ಟೆಯಲ್ಲಿ ಈಗ ಸಿದ್ಧಗೊಂಡಿರುವ ಮಾವಿನ ಹಣ್ಣಿನ ಮಿಶ್ರವನ್ನು ಸಿರಿದು ಆರಲು ಬಿಡಿ. ಆರಿದನಂತರ ಬೇಕಾದ ಆಕಾರದಲ್ಲಿ ಮಾವಿನ ಹಣ್ಣಿನ ಬರ್ಫಿಯನ್ನು ಕತ್ತರಿಸಿ, ರಾಧಾಮಾಧವರಿಗರ್ಪಿಸಿ ಸೇವಿಸಿ.
ಮಾವಿನ ಕಾಯಿ ಚಟ್ನಿ

ಬೇಕಾಗುವ ಪದಾರ್ಥ:
ಮಾವಿನ ಕಾಯಿ – (ಹದ ಗಾತ್ರದ್ದು)
ಹಸಿಮೆಣಸಿಕಾಯಿ – 2-3 (ಅಥವಾ ರುಚಿಗೆ ತಕ್ಕಷ್ಟು)
ಹಸಿ ಶುಂಠಿ ತುರಿ – ½ ಚಿಕ್ಕ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – 1 ಚಿಕ್ಕ ಚಮಚ (ಬೇಕಾದಲ್ಲಿ)
ಪುದಿನ ಎಲೆ – 2 ದೊಡ್ಡ ಚಮಚ
ಸಾಸಿವೆ – 1 ಚಿಕ್ಕಚಮಚ
ಕರಿಬೇವು – 1 ಎಸಳು
ಅಡಿಗೆ ಎಣ್ಣೆ – 1 ದೊಡ್ಡ ಚಮಚ
ಮಾಡುವ ವಿಧಾನ: ಮಾವಿನ ಕಾಯಿಯನ್ನು ತೊಳೆದು ಸಿಪ್ಪೆ ತೆಗೆದು, ಸಣ್ಣ ಸಣ್ಣ ಚೂರು ಮಾಡಿಟ್ಟುಕೊಳ್ಳಿ. ಮಿಕ್ಕ ಪದಾರ್ಥಗಳನ್ನು ಬೆರೆಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಂಡು ಪಾತ್ರೆಯಲ್ಲಿ ತೆಗೆದಿಡಿ.
ಅನಂತರ ಸಾಸಿವೆ- ಕರಿಬೇವು ಒಗ್ಗರಣೆ ಬೆರೆಸಿ, ಇದನ್ನು ಅನ್ನದೊಂದಿಗೂ ಬೆರೆಸಿ ತಿನ್ನಬಹುದು. ಇಲ್ಲದಿದ್ದಲ್ಲಿ ಅಕ್ಕಿ ರೊಟ್ಟಿ, ಚಪಾತಿ, ಅಥವಾ ಪೂರಿಯೊಂದಿಗೆ ಶ್ರೀರಾಧಾಕೃಷ್ಣರಿಗರ್ಪಿಸಿ, ಸೇವಿಸಿ.






Leave a Reply