ಶ್ರೀರಾಮ ಪಥ ದರ್ಶನ

ವನವಾಸಕ್ಕೆ ಸೀತಾಲಕ್ಷ್ಮಣರ ಸಹಿತ ಹೊರಟ ಶ್ರೀರಾಮ ತನ್ನ ಪಾದಸ್ಪರ್ಶದಿಂದ ಪವಿತ್ರಗೊಳಿಸಿದ ಭೂಭಾಗಗಳಲ್ಲೆಲ್ಲ ಅದರ ಸ್ಮರಣಾರ್ಥ ದೇವಾಲಯಗಳನ್ನು ನಿರ್ಮಿಸಲಾಗಿದೆ. ಅವುಗಳ ಪರಿಚಯ ಮಾಡಿಸುವ ಅಲ್ಪ ಪ್ರಯತ್ನವಿದು.

ಆಧಾರ : ಸೀತಾರಾಮ್ ಗುರುಮೂರ್ತಿಯವರ  “The Ramayana Temples”

ಸಂಗ್ರಹಾನುವಾದ: ಚೇತನಾ ತೀರ್ಥಹಳ್ಳಿ

ರಾಮೇಶ್ವರಮ್

ಪಾಕ್‌ ಜಲಸಂಧಿಯಲ್ಲಿರುವ ಪುಟ್ಟ ದ್ವೀಪ ರಾಮೇಶ್ವರಮ್, ಶೈವ-ವೈಷ್ಣವರಿಬ್ಬರಿಗೂ ಪವಿತ್ರಕ್ಷೇತ್ರ. ಇದು ಮಧುರೈ ಪಟ್ಟಣದಿಂದ 160 ಕಿ. ಮೀ. ದೂರದಲ್ಲಿದೆ. ರಾಮೇಶ್ವರಮ್‌, ದ್ವಾದಶ ಜ್ಯೋತಿರ್ಲಿಂಗಗಳಲ್ಲೊಂದು.

ರಾಮೇಶ್ವರದ ಈ ಜ್ಯೋತಿರ್ಲಿಂಗವು ವಿಭೀಷಣನಿಂದ ಪ್ರತಿಷ್ಠಾಪಿಸಲ್ಪಟ್ಟಿತು.

ರಾಮೇಶ್ವರ ದ್ವೀಪವಾದರೂ ಇಲ್ಲಿಗೆ ಪ್ರಯಾಣ ಕಷ್ಟವೇನಲ್ಲ. ರೈಲು ಮತ್ತು ರಸ್ತೆ ಸೇತುವೆ ಮಾರ್ಗಗಳು ಮುಖ್ಯ ಭೂಭಾಗಕ್ಕೆ ಮತ್ತು ರಾಮೇಶ್ವರಕ್ಕೆ ಸುಲಭ ಸಂಪರ್ಕ ಕಲ್ಪಿಸುತ್ತವೆ. ರಾಮೇಶ್ವರ ದ್ವೀಪವು ಶಂಖುವಿನ ಆಕೃತಿಯಲ್ಲಿದೆ.

ಇಡಿಯ ರಾಮೇಶ್ವರಂನ ಭೂಮಿ ಪವಿತ್ರ ಕ್ಷೇತ್ರವಾಗಿರುವುದರಿಂದ, ಇಲ್ಲಿ ಉಳುಮೆಯನ್ನಾಗಲೀ, ತೈಲ ತೆಗೆಯುವುದನ್ನಾಗಲೀ ಮಾಡುವಂತಿಲ್ಲ. ಕಾಶಿಯಾತ್ರೆ ಮಾಡಿಬಂದವರು, ರಾಮೇಶ್ವರವನ್ನು ಸಂದರ್ಶಿಸದಿದ್ದರೆ, ಯಾತ್ರೆ ಪೂರ್ಣಗೊಂಡಂತಾಗುವುದಿಲ್ಲ.

ಇಲ್ಲಿಗೆ ಬಂದು, ಧನುಷ್ಕೋಟಿಯಲ್ಲಿ ಪುಣ್ಯ ಸ್ನಾನ ಮಾಡದೆ, ಮಹೋದಧಿ ( ಬಂಗಾಳ ಕೊಲ್ಲಿ) ಮತ್ತು ರತ್ನಾಕರ (ಹಿಂದೂ ಮಹಾಸಾಗರ) ದಲ್ಲಿ ಮೀಯದೆ ತೀರ್ಥಯಾತ್ರೆಯ ಪುಣ್ಯ ಲಾಭವಿಲ್ಲ.

ಸೇತುವೆ ನಿರ್ಮಾಣಕ್ಕಾಗಿ ಶ್ರೀರಾಮ, ತನ್ನ ಬಿಲ್ಲಿನ ಒಂದು ತುದಿಯಿಂದ ಗುರುತು ಮಾಡಿದ. ಆದ್ದರಿಂದಲೇ ಇದಕ್ಕೆ ʼಧನುಷ್ಕೋಟಿ’ ಎಂದು ಹೆಸರು, ರಾಮೇಶ್ವರಕ್ಕೆ ತೆರಳುವ ಮುನ್ನ ಹಿಂದೂ ಮಹಾಸಾಗರ ಮತ್ತು ಮಹೋದಧಿಗಳ ಪವಿತ್ರ ಸಂಗಮದಲ್ಲಿ ಮಿಂದು ಹೊರಡುವ ಪರಿಪಾಠವಿದೆ.

ಈ ಕ್ಷೇತ್ರದಲ್ಲಿ ಅಪರ ಕರ್ಮಗಳು, ಅಸ್ಥಿ ವಿಸರ್ಜನೆಯ ವಿಧಿಗಳನ್ನು ನಡೆಸುವುದುಂಟು. ಇದರಿಂದ ಮೃತರ ಆತ್ಮಗಳಿಗೆ ಮುಕ್ತಿ ಲಭಿಸುವುದೆಂಬುದೊಂದು ನಂಬಿಕೆಯಿದೆ. 1964ರ ತೀವ್ರ ಚಂಡಮಾರುತಕ್ಕೆ ಸಿಕ್ಕಿ, ಧನುಷ್ಕೋಟಿ ಮರೆಯಾಗಿ ಹೋಗಿದೆ.

ರಾಮೇಶ್ವರದಲ್ಲಿರುವ ಮುಖ್ಯ ಅರ್ಚವಿಗ್ರಹವಾದ ಶಿವಲಿಂಗವು ಶ್ರೀರಾಮನಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದು, ಆದ್ದರಿಂದಲೇ ಇದಕ್ಕೆ ರಾಮಲಿಂಗ ಅಥವಾ ರಾಮನಾಥ ಎಂದು ಹೆಸರು.

ಬ್ರಾಹ್ಮಣನಾದ ರಾವಣನನ್ನು ಕೊಂದು, ಬ್ರಹ್ಮಹತ್ಯಾ ದೋಷ ನಿವಾರಣೆಗಾಗಿ ಶ್ರೀರಾಮ, ಇಲ್ಲಿ ಶಿವಪೂಜೆ ನಡೆಸಿದ. ಪೂಜೆಗಾಗಿ ಹನುಮಂತ ಕಾಶಿಯಿಂದಲೇ ಶಿವಲಿಂಗ ತರುವುದಾಗಿ ತೆರಳಿದ್ದ. ಆದರೆ ಆತ ಸಮಯಕ್ಕೆ ಸರಿಯಾಗಿ ಬಾರದ ಕಾರಣ, ಸೀತೆ ಸಮುದ್ರ ತೀರದ ಮರಳಿನಿಂದಲೇ ಲಿಂಗ ತಯಾರಿಸಿದಳು.

ಹನುಮಂತ ಹಿಂದಿರುಗುವ ವೇಳೆಗೆ ಪೂಜಾವಿಧಿಗಳು ನೆರವೇರಿದ್ದವು. ಬೇಸರಗೊಂಡ ರಾಮಭಂಟ ಆ ಮರಳಿನ ಲಿಂಗವನ್ನು ಬುಡಸಹಿತ ಕಿತ್ತುಹಾಕಲು ಹೊರಟ, ಅದು ತತ್ ಕ್ಷಣ ಕಲ್ಲಾಗಿ ಮಾರ್ಪಾಟು ಹೊಂದಿತು.

ಪ್ರೀತಿಯ ಭಕ್ತನನ್ನು ಸಮಾಧಾನಪಡಿಸಿದ ಶ್ರೀರಾಮ, ಅವನು ತಂದ ಲಿಂಗವನ್ನು ಮರಳಿನ ಲಿಂಗದ ಬಳಿಯಲ್ಲಿಯೇ ಪ್ರತಿಷ್ಠಾಪಿಸಿದ, ಮತ್ತು ಮೊದಲ ಪೂಜೆ ಪುನಸ್ಕಾರಗಳು ಹನುಮಂತನ ಲಿಂಗಕ್ಕೇ ಸಲ್ಲಬೇಕೆಂದು ಆದೇಶಿಸಿದ.

ಸೀತೆ ಮಾಡಿದ ಲಿಂಗ ರಾಮಲಿಂಗವೆಂದು ಕರೆಯಲ್ಪಟ್ಟರೆ, ಹನುಮಂತ ತಂದ ಲಿಂಗಕ್ಕೆ ವಿಶ್ವಲಿಂಗವೆಂದು ಹೆಸರಾಯ್ತು.

ಕೋದಂಡರಾಮನ ದೇವಾಲಯ

ಇದು ರಾಮೇಶ್ವರದಿಂದ 8 ಕಿ.ಮೀ. ದೂರದಲ್ಲಿರುವ ಶ್ರೀರಾಮ ದೇವಾಲಯ. ವಿಭೀಷಣ ಶ್ರೀರಾಮನಿಗೆ ಶರಣಾಗಿದ್ದು ಇದೇ ಸ್ಥಳದಲ್ಲಿ ಮತ್ತು ಲಕ್ಷ್ಮಣನಿಂದ ವಿಭೀಷಣನ ಪಟ್ಟಾಭಿಷೇಕ ನಡೆದಿದ್ದೂ ಇಲ್ಲೇ.

ಜೂನ್ – ಜುಲೈ ತಿಂಗಳಲ್ಲಿ ಬರುವ ಶ್ರೀರಾಮಲಿಂಗ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಮುನ್ನಾದಿನ, ರಾಮನ ಉತ್ಸವ ಮೂರ್ತಿಯನ್ನು ರಾಮೇಶ್ವರದಿಂದ ಇಲ್ಲಿಗೆ ಚಿನ್ನದ ಪಲ್ಲಕ್ಕಿಯಲ್ಲಿ ತರಲಾಗುತ್ತದೆ.

ರಾಮೇಶ್ವರದಲ್ಲಿನ ದೇವಾಲಯಗಳಲ್ಲಿ, ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಲೆಕ್ಕವಿಲ್ಲದಷ್ಟು ಪುಣ್ಯತೀರ್ಥಗಳಿವೆ.

ಅವುಗಳಲ್ಲಿ ಮಹಾಲಕ್ಷ್ಮಿ ತೀರ್ಥ, ಸಾವಿತ್ರಿ ತೀರ್ಥ, ಗಾಯತ್ರಿ ತೀರ್ಥ, ಸರಸ್ವತಿ ತೀರ್ಥ, ಸೇತುಮಾಧವ ತೀರ್ಥ, ಗಂಧಮಾದನ ತೀರ್ಥ, ಕವಚ ತೀರ್ಥ, ಗವಯ ತೀರ್ಥ, ನಳ ತೀರ್ಥ, ನೀಲ ತೀರ್ಥ, ಸಂಗು ತೀರ್ಥ, ಸತ್ಕರ ತೀರ್ಥ, ಬ್ರಹ್ಮಹತ್ಯಾ ವಿಮೋಚನ ತೀರ್ಥ, ಸೂರ್ಯ ತೀರ್ಥ, ಚಂದ್ರ ತೀರ್ಥ, ಗಂಗಾತೀರ್ಥ, ಯಮುನಾ ತೀರ್ಥ, ಗಯಾ ತೀರ್ಥ, ಶಿವ ತೀರ್ಥ, ಸತ್ಯಾಮೃತ ತೀರ್ಥ, ಸರ್ವ ತೀರ್ಥ, ಕೋಡಿ ತೀರ್ಥ – ಇವು ಪ್ರಮುಖವಾದವು.

ಶ್ರೀರಂಗಮ್ ಮತ್ತು ತಿರುಚನಾಪಳ್ಳಿ

ತಿರುಚನಾಪಳ್ಳಿಯಿಂದ 8ಕಿ.ಮೀ. ದೂರದಲ್ಲಿದೆ ಶ್ರೀರಂಗಮ್ ಪಟ್ಟಣ. ಇದೊಂದು ಕಾವೇರಿ ಮತ್ತು ಕೊಲ್ಲಿದಮ್ ಗಳಿಂದಾವೃತವಾಗಿರುವ ದ್ವೀಪ. ಶ್ರೀರಂಗಮ್‌ನಲ್ಲಿರುವ ಶ್ರೀರಂಗನಾಥಸ್ವಾಮಿ ಮೂರ್ತಿಯು ಬ್ರಹ್ಮದೇವನಿಂದ ಪೂಜಿಸಲ್ಪಡುತ್ತಿದ್ದು, ಅನಂತರ ಸೂರ್ಯದೇವನಿಗೆ ಕೊಡಲ್ಪಟ್ಟಿತು.

ಸೂರ್ಯ ವಂಶಜನಾದ ಇಕ್ಷ್ವಾಕುನಿಗೆ ಪರಂಪರಾನುಗತವಾಗಿ ಬಂದ ಮೂರ್ತಿ, ಆತನ ಮೂಲಕ ಅಯೋಧ್ಯೆ ಸೇರುವಂತಾಯಿತು, ಶ್ರೀರಾಮನವರೆಗೂ ಹಸ್ತಾಂತರಗೊಳ್ಳುತ್ತ ಬಂತು.

ಶ್ರೀರಾಮ ಪಟ್ಟಾಭಿಷೇಕಕ್ಕೆ ಆಗಮಿಸಿದ್ದ ವಿಭೀಷಣನಿಗೆ, ರಾಮ ರಂಗನಾಥ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ. ಆದರೆ, ಇದನ್ನು ಯಾವ ಕಾರಣಕ್ಕೂ ನೆಲದ ಮೇಲೆ ಇಡಬಾರದೆಂದು ಷರತ್ತು ಹಾಕಿದ.

ದೇವ ಬಳಗಕ್ಕೆ, ಈ ಮೂರ್ತಿಯನ್ನು ಭರತವರ್ಷದಲ್ಲಿಯೇ ಉಳಿಸಿಕೊಳ್ಳಬೇಕೆಂಬ ಬಯಕೆಯಿತ್ತು. ಹೀಗಾಗಿ ಅವರೆಲ್ಲರೂ ವಿಘ್ನೇಶನ ಸಹಾಯ ಪಡೆಯಲು ನಿರ್ಧರಿಸಿದರು. ಇತ್ತ ಶ್ರೀರಂಗ ಮೂರ್ತಿಯನ್ನು ತಲೆಯಮೇಲೆ ಹೊತ್ತು ವಿಭೀಷಣ ಲಂಕೆಯತ್ತ ಹೊರಟ. ದಕ್ಷಿಣ ಪ್ರಸ್ಥಭೂಮಿಯಲ್ಲಿ ಕಾವೇರಿಯ ಬಳಿ ಬರುವ ವೇಳೆಗೆ ಸಂಜೆಯಾಗಿತ್ತು.

ಅದು ಆತ ಸಂಧ್ಯಾವಂದನೆ ಮಾಡುವ ಹೊತ್ತು. ಆದರೆ, ಮೂರ್ತಿಯನ್ನು ನೆಲದ ಮೇಲಿಡುವಂತಿಲ್ಲ. ಯಾರಾದರೂ ಅದನ್ನು ಹಿಡಿದುಕೊಳ್ಳಲು ಸಿಗುತ್ತಾರೆಯೋ ಎಂದು ನಿರೀಕ್ಷಿಸತೊಡಗಿದ ವಿಭೀಷಣ. ಆ ಸಮಯಕ್ಕೆ ಸರಿಯಾಗಿ, ಬಾಲಕನ ವೇಷಧರಿಸಿದ ವಿಘ್ನೇಶ್ವರ, ಅವನೆದುರು ಕಾಣಿಸಿಕೊಂಡ.

ವಿಭೀಷಣನ ಕೋರಿಕೆಗೆ “ನನಗೆ ಭಾರವಾಗತೊಡಗಿದಾಗ ನಾನು ಕರೆಯುತ್ತೇನೆ. ಆಗ ಬಂದು ಇದನ್ನು ಹಿಂತೆಗೆದುಕೊಳ್ಳುವಿಯಾದರೆ ಮಾತ್ರ ಈಗ ಹಿಡಿದುಕೊಳ್ಳುವೆ’ ಎಂದು ಕರಾರು ಹಾಕಿ ಮೂರ್ತಿಯನ್ನು ಹಿಡಿದು ನಿಂತ. ವಿಭೀಷಣ ಸಂಧ್ಯಾವಂದನೆಗಾಗಿ ನದಿಗೆ ಇಳಿಯುತ್ತಿದ್ದಂತೆಯೇ ಗಣಪತಿ ದೂರ ದೂರ ಹೋಗಲಾರಂಭಿಸಿದ.

ಇನ್ನೇನು ವಿಭೀಷಣ ಅರ್ಘ್ಯ ನೀಡಿ ಹಿಂದಿರುಗಬೇಕು, ಆಗ ಗಣಪತಿ ‘ನನ್ನಿಂದ ಇದನ್ನು ಹಿಡಿಯಲಾಗುತ್ತಿಲ್ಲ. ಭಾರವಾಗುತ್ತಿದೆ” ಎಂದು ಕೂಗಿಕೊಳ್ಳಲಾರಂಭಿಸಿದ. ವಿಭೀಷಣ ಮರಳಿ ಬರುವ ಹೊತ್ತಿಗಾಗಲೇ ಅವನು ಶ್ರೀರಂಗ ಮೂರ್ತಿಯನ್ನು ನೆಲದ ಮೇಲಿಟ್ಟು ಬಿಟ್ಟಿದ್ದ. ಹತಾಶೆಯಿಂದ ವಿಭೀಷಣ ಕುಸಿದು ಕುಳಿತ.

ಮೂರ್ತಿಯನ್ನು ನೆಲದ ಮೇಲೆ ಇರಿಸಿದ ಗಣೇಶ ಓಡಲಾರಂಭಿಸಿದ. ಕೋಪದಿಂದ ವಿಭೀಷಣನೂ ಅವನನ್ನು ಹಿಂಬಾಲಿಸಿದ. ಓಡುತ್ತ ಓಡುತ್ತ ಗಣೇಶ, ಬೆಟ್ಟದ ತುದಿಗೆ ಹೋಗಿ ಕುಳಿತ. ಅಲ್ಲಿಗೆ ತಲಪಿದ ವಿಭೀಷಣ, ಸಿಟ್ಟಿನಿಂದ ಅವನ ತಲೆಗೆ ಬಲವಾಗಿ ಮೊಟಕಿದ. ಇಂದಿಗೂ, ಬೆಟ್ಟದ ಮೇಲಿನ ಗಣಪತಿ ದೇವಾಲಯದಲ್ಲಿ ಗಣೇಶ ಮೂರ್ತಿಯ ಹಣೆಯ ಮೇಲಿನ ಗುಬುಟನ್ನು ಕಾಣಬಹುದು.

ಇತ್ತ ನೆಲಕ್ಕೆ ಸೋ೦ಕಿದ್ದ ರಂಗನಾಥ ಮೂರ್ತಿ ಅಲ್ಲೇ ನೆಲೆಗೊಂಡಿತು. ದುಃಖತಪ್ತನಾದ ವಿಭೀಷಣ ತನ್ನ ದುರದೃಷ್ಟವನ್ನು ಹಳಿಯುತ್ತ ಕುಳಿತ. ಆಗ ಅಲ್ಲಿಗೆ ಬಂದ ಚೋಳರಾಜ ಧರ್ಮವರ್ಮನು ಅವನನ್ನು ಸಮಾಧಾನ ಪಡಿಸಿ, ಶ್ರೀರಂಗಸ್ವಾಮಿಯ ಮೂರ್ತಿಯನ್ನು ದಕ್ಷಿಣಾಭಿಮುಖವಾಗಿಯೇ ಪ್ರತಿಷ್ಠಾಪಿಸುವುದಾಗಿ ಭರವಸೆಯಿತ್ತ. ಹೀಗೆ, ದಕ್ಷಿಣದಿಂದ ಉತ್ತರಕ್ಕೆ ತೆರಳಿದ್ದ ಶ್ರೀರಂಗನಾಥಸ್ವಾಮಿ, ಮರಳಿ ದಕ್ಷಿಣದಲ್ಲಿಯೇ ನೆಲೆ ನಿಲ್ಲುವಂತಾಯ್ತು.

ಮಧುರಾಂತಕಮ್

ಚೆನ್ನೈ – ದಿಂಡಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆನ್ನೈನಿಂದ ಸುಮಾರು 80ಕಿ. ಮೀ ದೂರದಲ್ಲಿದೆ ಮಧುರಾಂತಕಮ್. ಈ ಚಿಕ್ಕ ಪಟ್ಟಣದಲ್ಲಿರುವ ಶ್ರೀರಾಮದೇಗುಲ, ಮಧುರಾಂತಕಮ್ ರೈಲುನಿಲ್ದಾಣದಿಂದ ಕೇವಲ ಒಂದು ಮೈಲು ದೂರದಲ್ಲಿದೆ. ಈ ದೇವಾಲಯವು ರಾಮಾಯಣದ ಕಾಲದೊಂದಿಗೆ ಬೆಸೆದುಕೊಂಡಿದೆ. ದ್ವಾಪರಯುಗದಲ್ಲಿ ಶ್ರೀಕೃಷ್ಣ ಬಲರಾಮರು ಇಲ್ಲಿನ ಶ್ರೀರಾಮನನ್ನು ಪೂಜಿಸಿದ್ದರೆಂದು ಪ್ರತೀತಿ.

ಲಂಕೆಯಿಂದ ಪುಷ್ಪಕ ವಿಮಾನದಲ್ಲಿ ಹಿಂದಿರುಗುತ್ತಿದ್ದ ಶ್ರೀರಾಮನು, ವಿಭಾಂಡಕ ಮಹರ್ಷಿಗಳನ್ನು ಭೇಟಿಯಾಗುವ ಸಲುವಾಗಿ, ಈ ಸ್ಥಳದಲ್ಲಿ ಇಳಿದಿದ್ದನು.

ಈ ನೆನಪಿಗಾಗಿ ನಿರ್ಮಾಣಗೊಂಡಿರುವ ದೇವಾಲಯದ ಒಂದು ಬದಿಯಲ್ಲಿ ಸೀತೆಯ ಕೈ ಹಿಡಿದುನಿಂತಿರುವ ಶ್ರೀರಾಮನ ಹಾಗೂ ಮತ್ತೊಂದು ಬದಿಯಲ್ಲಿ ವಿಭಾಂಡಕ ಮಹರ್ಷಿಗಳ ಶಿಲ್ಪಗಳಿವೆ. ಇಲ್ಲಿನ ಮುಖ್ಯ ಅರ್ಚ ವಿಗ್ರಹಗಳು ಶ್ರೀಕೋದಂಡರಾಮ (ರಾಮ) ಮತ್ತು ಶ್ರೀ ಜಾನಕವಲ್ಲಿ ತಾಯಿ (ಸೀತೆ) ಯರದ್ದಾಗಿವೆ.

ಕಾಂಚೀಪುರಮ್

ಕಾಂಚೀಪುರಮ್ ಶೈವ-ವೈಷ್ಣವರಿಬ್ಬರಿಗೂ ಸಮಾನ ಮಹತ್ತ್ವದ ತೀರ್ಥಕ್ಷೇತ್ರ. ಇದು ಚೆನ್ನೈನಿಂದ 75 ಕಿ.ಮಿ. ದೂರದಲ್ಲಿದೆ, ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿದೆ. ಶ್ರೀರಾಮನು ಕಾಂಚೀಪುರದ ಏಕಾಂಬರೇಶ್ವರ ಸ್ವಾಮಿ ಮತ್ತು ರಾಮನಾಥಸ್ವಾಮಿ ದೇವಾಲಯಗಳಲ್ಲಿ ಶಿವಪೂಜೆ ಸಲ್ಲಿಸಿದ್ದನೆಂದು ಐತಿಹ್ಯವಿದೆ.

ತಿರುಕಲುಕುಂದ್ರಮ್

ಪಕ್ಷಿತೀರ್ಥಮ್‌, ರುದ್ರಕೋಟಿ, ಆದಿ ನಾರಾಯಣಪುರ, ವೇದಗಿರಿ – ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ತಿರುಕಲುಕುಂದ್ರಮ್, ಚೆನ್ನೈನಿಂದ 90ಕಿ.ಮಿ ದೂರದಲ್ಲಿದೆ. ಪ್ರಸಿದ್ಧ ಪ್ರವಾಸೀ ತಾಣ ಮಾಮಲ್ಲಪುರ ಇರುವುದು ಇದರ ಬಳಿಯೇ.

ಗೃಧ್ರ ಸಹೋದರರಾದ ಸಂಪಾತಿ, ಜಟಾಯುಗಳು ಪ್ರತಿನಿತ್ಯ ಮಧ್ಯಾಹ್ನ ಇಲ್ಲಿನ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದವೆಂದು ಪ್ರತೀತಿ. ಸದಾ ರಣಹದ್ದುಗಳಿಂದ ಆವೃತವಾಗಿರುತ್ತಿದ್ದ ಈ ಸ್ಥಳಕ್ಕೆ ಕಳೆದ ಹತ್ತು ವರ್ಷಗಳಿಂದ ಈ ಹಕ್ಕಿಗಳು ಭೇಟಿ ನೀಡದೇ ಇರುವುದೊಂದು ಅಚ್ಚರಿ.

ನಾಮಕ್ಕಲ್

ಸೇಲಮ್ ಪಟ್ಟಣದ ದಕ್ಷಿಣಕ್ಕೆ, 50 ಕಿ.ಮೀ ದೂರದಲ್ಲಿದೆ ನಾಮಕ್ಕಲ್ ಜಿಲ್ಲಾಕೇಂದ್ರ. ನಾಮಕ್ಕಲ್‌, ಪೌರಾಣಿಕ ಐತಿಹಾಸಿಕ ಪ್ರಾಮುಖ್ಯದ ಪ್ರದೇಶ. ಇಲ್ಲಿನ ಗುಹಾ ದೇವಾಲಯಗಳು, ಹನುಮಂತನ ವಿಗ್ರಹ ಮತ್ತು ಕೋಟೆಕೊತ್ತಲುಗಳು ಪ್ರಮುಖ ಪ್ರೇಕ್ಷಣೀಯ ಸ್ಥಳಗಳು.

ನಾಮಕ್ಕಲ್‌ನಲ್ಲಿರುವ ಬೆಟ್ಟದಲ್ಲಿ ನರಸಿಂಹಸ್ವಾಮಿಯ ಗುಹಾಂತರ್ಗತ ದೇಗುಲವಿದೆ. ಇಲ್ಲಿ ಶ್ರೀ ನರಸಿಂಹದೇವ, ‘ನಾಮಗಿರಿಯಮ್ಮ’ ಎಂದು ಕರೆಸಿಕೊಳ್ಳುವ ತನ್ನ ಪತ್ನಿ ಲಕ್ಷ್ಮೀದೇವಿಯೊಂದಿಗೆ ಪೂಜಿಸಲ್ಪಡುತ್ತಾನೆ. ಈ ಗುಹಾದೇವಾಲಯ ಬೆಟ್ಟದ ಮೇಲೆ, ಪಶ್ಚಿಮ ಭಾಗದಲ್ಲಿದೆ.

ಬೆಟ್ಟದ ಪೂರ್ವದ ಇಳಿಜಾರಿನಲ್ಲಿ ಶ್ರೀರಂಗನಾಥ ದೇವಾಲಯವಿದೆ. ಇಲ್ಲಿ ಅನಂತಪದ್ಮನಾಭನಾದ ಮಹಾವಿಷ್ಣುವು, ಶೇಷಶಾಯಿಯಾಗಿ ಅರ್ಚಿಸಲ್ಪಡುತ್ತಾನೆ. ಈ ಎರಡು ದೇವಾಲಯಗಳಲ್ಲದೆ, ನಾಮಕ್ಕಲ್ ಬೆಟ್ಟದಲ್ಲಿ ಪುಟ್ಟದಾದ ಮತ್ತೊಂದು ವಿಷ್ಣು ದೇಗುಲವಿದೆ.

ಅಯೋಧ್ಯಾ ಪಟ್ಟಣ

ಅಯೋಧ್ಯಾ ಪಟ್ಟಣವು ಹೆಚ್ಚು ಕಡಿಮೆ ಸೇಲಮ್‌ಗೆ ಹೊಂದಿಕೊಂಡಂತಿರುವ ಉಪನಗರವಾಗಿದೆ. ರಾವಣಸಂಹಾರದ ಬಳಿಕ, ಅಯೋಧ್ಯೆಗೆ ಹಿಂದಿರುಗುವ ದಾರಿಯಲ್ಲಿ ಶ್ರೀರಾಮನು ಒಂದು ದಿನದ ಮಟ್ಟಿಗೆ ಇಲ್ಲಿ ತಂಗಿದ್ದನೆಂದು ಹೇಳಲಾಗುತ್ತದೆ.

ಇಲ್ಲಿರುವ ಸುಪ್ರಸಿದ್ಧ ದೇಗುಲದಲ್ಲಿ ಶ್ರೀ ಕೋದಂಡರಾಮನ ಅರ್ಚವಿಗ್ರಹಕ್ಕೆ ಪೂಜೆ ಸಲ್ಲುತ್ತದೆ. ಶ್ರೀರಾಮನೊಡನೆ ಸೀತಾಲಕ್ಷ್ಮಿ ಎಂಬ ಹೆಸರಿನಿಂದ ಸೀತೆಯು ಇಲ್ಲಿ ಪೂಜೆ ಪಡೆಯುತ್ತಾಳೆ. ಈ ದೇವಾಲಯವು 150 ಅಡಿ ಎತ್ತರದ ಐದು ಗೋಪುರಗಳನ್ನು ಹೊಂದಿದೆ. ಮುಂಭಾಗದ ಮಹಾ ಮಂಟಪದಲ್ಲಿನ ಮೂರು ಕಂಬಗಳು ವಿಶಿಷ್ಟವಾಗಿದ್ದು, ಇದನ್ನು ಕುಟ್ಟಿದಾಗ ಸಂಗೀತ ತರಂಗಗಳೇಳುತ್ತವೆ.

ದೇವಾಲಯದ ಕಲಾನೈಪುಣ್ಯವು ಮನೋಹರವಾಗಿದ್ದು, ಕೆತ್ತನೆಗಳು ಗಮನ ಸೆಳೆಯುವಂತಿವೆ.

ಮಧುರೈ

ಮಧುರೈ ಮೀನಾಕ್ಷಿ ದೇವಾಲಯ ಪುರಾಣ ಪ್ರಸಿದ್ಧವಾದುದು. ಲಂಕೆಗೆ ಹೊರಡುವ ಮುನ್ನ ಶ್ರೀರಾಮ-ಲಕ್ಷ್ಮಣ, ಹನುಮಂತರು ಈ ದೇವಾಲಯಕ್ಕೆ ತೆರಳಿ ಶಿವನಿಗೆ ಪೂಜೆ ಸಲ್ಲಿಸಿದ್ದರೆಂದು ಹೇಳಲಾಗುತ್ತದೆ. ಮಧುರೈನಿಂದ ರಾಮನಾಥಪುರ, ಅಲ್ಲಿಂದ ಧನುಷ್ಕೋಟಿಗೆ ಶ್ರೀರಾಮ ಪರಿವಾರ ಪ್ರಯಾಣ ಬೆಳೆಸಿತು.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi