ತಪಸ್ಸು

ಸಂಕೀರ್ತನ ಯಶೋಗಾಥೆಗಳು

ಪುಸ್ತಕ ಸಂಕೀರ್ತನೆಯಿಂದ ಕೃಷ್ಣನ ಪ್ರೇಮವನ್ನು ಬಹಳ ಸುಲಭವಾಗಿ ಗಳಿಸಬಹುದು. “”ನನ್ನ ಸಂದೇಶವನ್ನು ಯಾರು ಭಕ್ತರಿಗೆ ವಿತರಿಸುತ್ತಾನೋ ಆತ ನನಗೆ ಬಹಳ ಪ್ರಿಯನಾಗುತ್ತಾನೆ” ಎಂದು ಸ್ವತಃ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ.

ಪುಸ್ತಕ ವಿತರಣೆಯ ಕೆಲಸದಲ್ಲಿ ಉದಾಸೀನತೆ ಸರಿಯಲ್ಲ.  ಸಂಕೀರ್ತನದಲ್ಲಿ ತೊಡಗಿರುವ ಭಕ್ತರು ಎಷ್ಟು ಉತ್ಸಾಹದಿಂದ ನಡೆದುಕೊಳ್ಳುತ್ತಾರೋ ಅಷ್ಟು ಹೆಚ್ಚಿನ ಪ್ರತಿಫಲ ದೊರೆಯುತ್ತದೆ. ಇಂಥದೊಂದು ಅನುಭವ ರೋಹಿಣೀಸುತದಾಸರದು. ಅದನ್ನು ಅವರ ಮಾತುಗಳಲ್ಲೇ ಕೇಳಿ.

“ಭೌತಿಕ ದೃಷ್ಟಿಯಿಂದ ನೋಡಿದರೆ, ಕೈಯಲ್ಲಿರುವ ಇಪ್ಪತ್ತು ಪುಸ್ತಕಗಳು ಬಹಳ ಭಾರವಾಗಿ ತೋರುತ್ತವೆ. ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿದರೆ ಆ ಪುಸ್ತಕವು ಕೃಷ್ಣನಿಗಿಂತ ಬೇರೆ ಎನಿಸುವುದೇ ಇಲ್ಲ, ಮತ್ತು ನೀವು ಆನಂದದಿಂದ ಮೈಮರೆಯುತ್ತೀರಿ. ಇಲ್ಲಿ ನೀವು ಎಷ್ಟು ವಯಸ್ಸಿನವರು ಎಂಬುದು ಮುಖ್ಯವಲ್ಲ.

ನಿಮಗೆ ನಲವತ್ತು ವರ್ಷವಿರಬಹುದು ಅಥವಾ ಐವತ್ತು. ಶ್ರೀಲ ಪ್ರಭುಪಾದರ ಕರುಣೆಯಿಂದ ನೀವು ಹದಿನೈದಿಪ್ಪತ್ತು ಪುಸ್ತಕಗಳನ್ನು ಹಿಡಿದುಕೊಳ್ಳಲು ಶಕ್ತರಾಗಿರುತ್ತಿರಿ. ಅಥವಾ ಜೊತೆಗೊಬ್ಬ ಸಹಾಯಕರನ್ನು ಕರೆದುಕೊಳ್ಳಿ. ಒಟ್ಟಿನಲ್ಲಿ ನೀವು ಸಂಕೀರ್ತನೆಗೆ ಕೊಂಡೊಯ್ಯುವ ಪುಸ್ತಕಗಳ ಸಂಖ್ಯೆ ಹೆಚ್ಚಿನದಾಗಿರಬೇಕು.

ಹೊಸದಾಗಿ ಸೇರ್ಪಡೆಯಾದ ಭಕ್ತರು ಸಂಕೀರ್ತನ ತಂಡದ ಸದಸ್ಯರಿಗೆ ಸಹಾಯಕರಾಗಿ ಕೆಲಸ ಮಾಡಬಹುದು. ಎಷ್ಟೋ ವೇಳೆ ಸಹಾಯಕರಾಗಿ ಬಂದವರು ಪುಸ್ತಕ ವಿತರಣೆಯ ಓಟದಿಂದ ಉತ್ತೇಜಿತರಾಗಿ ತಾವು ಸ೦ಪೂರ್ಣವಾಗಿ ಅದರಲ್ಲಿ ತೊಡಗಿಸಿಕೊಂಡದ್ದೂ ಉಂಟು.

ಒಂದು ಪುಸ್ತಕ ಮ್ಯಾರಥಾನ್ ಸಂದರ್ಭದಲ್ಲಿ ನಾನು ಇಪ್ಪತ್ತೊಂದು ಪುಸ್ತಕಗಳನ್ನು ಕೊಂಡೊಯ್ಯುವ ರಿವಾಜಿನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡೆ. ಅಷ್ಟೊಂದು ಪುಸ್ತಕಗಳನ್ನು ಒಟ್ಟಿಗೆ ಹಿಡಿದುಕೊಂಡು ಹೋಗುವುದು ತ್ರಾಸಿನ ಕೆಲಸ ಎಂದು ಅನಿಸಿ ಬಿಟ್ಟಿತ್ತು. ಬಹಳ ದಿನಗಳಿಂದ ಅಷ್ಟೊಂದು ಪುಸ್ತಕಗಳನ್ನು ಹೊತ್ತು ಸ್ನಾಯುಗಳಲ್ಲಿ ಸೆಳೆತ ಉಂಟಾಗಿಬಿಟ್ಟಿತ್ತು.

ಇದರಿಂದ ಪುಸ್ತಕ ವಿತರಣೆಯಲ್ಲಿ ಮನಸ್ಸನ್ನು ಹಿಡಿದಿಡಲು ಸಾಧ್ಯವಾಗದಾಯಿತು. ಹೀಗಾಗಿ ನಾನು ಕೇವಲ ಅರ್ಧದಷ್ಟು ಪುಸ್ತಕವನ್ನು ಒಯ್ಯಲು ನಿರ್ಧರಿಸಿದೆ. ನನ್ನ ವಾಹನ ಹತ್ತಿರದಲ್ಲೇ ಇದ್ದುದರಿಂದ, ಖಾಲಿಯಾದಾಗ ಬಂದು ತೆಗೆದುಕೊಳ್ಳಬಹುದು ಎಂಬುದು ನನ್ನ ಆಲೋಚನೆಯಾಗಿತ್ತು.

ಆದರೆ ಆ ದಿನವಿಡೀ ನನ್ನಿಂದ ಮಾರಲು ಸಾಧ್ಯವಾಗಿದ್ದು ಹಿಂದೆಂದಿಗಿಂತ ಅತಿ ಕಡಿಮೆ ಪುಸ್ತಕಗಳನ್ನು “ಯಾರು ಅರ್ಧದಷ್ಟು ಪುಸ್ತಕಗಳನ್ನು ಒಯ್ಯುತ್ತಾರೋ, ಅವರು ಅರ್ಧದಷ್ಟನ್ನು ಮಾತ್ರ ಮಾರಲು ಸಮರ್ಥರಾಗಿರುತ್ತಾರೆ!” ಇದು ಆ ಕ್ಷಣದಲ್ಲಿ ನನಗೆ ಹೊಳೆದ ತಿಳುವಳಿಕೆ.

ನಿಮ್ಮಲ್ಲಿ ಹತ್ತು ಪುಸ್ತಕಗಳಿರಬಹುದು ಅಥವಾ ಇಪ್ಪತ್ತು. ಅವುಗಳನ್ನು ವಿತರಿಸಲು ತಗಲುವ ಸಮಯ ಒಂದೇ. ಕೃಷ್ಣ ನಮ್ಮ ಪ್ರಯತ್ನಶೀಲತೆ ಮತ್ತು ಶರಣಾಗತಿ ಭಾವವನ್ನು ನೋಡಬಯಸುತ್ತಾನೆ. ನಾನು ಮತ್ತೆ ಇಪ್ಪತ್ತೊಂದು ಪುಸ್ತಕಗಳನ್ನು ಹಿಡಿದು ಹೊರಟಾಗ, ಜನರು ಪುನಃ ಒಟ್ಟೋಟ್ಟಿಗೆ ಆರೇಳು ಪುಸ್ತಕಗಳನ್ನು ಕೊಳ್ಳಲು ಆರಂಭಿಸಿದರು.

ನಾನು ಹತ್ತು ಪುಸ್ತಕಗಳನ್ನು ಕೊಂಡೊಯ್ದಾಗ ಅವರು ಕೇವಲ ಎರಡು – ಮೂರು ಪುಸ್ತಕ ಕೊಳ್ಳುತ್ತಿದ್ದರು. ನಾನು ಹೆಚ್ಚಿಗೆ ತೆಗೆದುಕೊಂಡು ಹೋದರೆ, ಅವರೂ ಹೆಚ್ಚು ಕೊಳ್ಳುವರು ಎಂಬುದನ್ನು ನಾನು ಕಂಡುಕೊಂಡೆ.

ನಿಜಕ್ಕೂ ಇದೊಂದು ತಪಸ್ಸು. ಇದನ್ನು ಪುಸ್ತಕ ಓಟದ ಉದ್ದಕ್ಕೂ ಅಳವಡಿಸಿಕೊಳ್ಳಬೇಕು. ಇದು ಸಂಕೀರ್ತನ ಕೈಕೊಳ್ಳುವ ಭಕ್ತನ ಮನಃಸ್ಥಿತಿಯ ಮೇಲೆ ಅವಲಂಬಿಸಿದೆ. ಆತ ನಾನು ಹೆಚ್ಚು ಹೆಚ್ಚು ಪುಸ್ತಕಗಳನ್ನು ವಿತರಿಸಬೇಕು ಎಂದು ಬಯಸಿದರೆ, ಹೆಚ್ಚು ಹೆಚ್ಚು ಜನರು ಅವನ್ನು ಕೊಳ್ಳಲು ಬರುತ್ತಾರೆ. ಸೋಮಾರಿತನ ಅಥವಾ ಔದಾಸೀನ್ಯದಿಂದ ಸಂಕೀರ್ತನೆಗೆ ಹೊರಟರೆ ಅದರ ಫಲ ಶೂನ್ಯವೇ ಸರಿ.

ಜನಸಾಮಾನ್ಯರನ್ನು ಮುಕ್ತರಾಗಿಸಲು, ಕೃಷ್ಣಪ್ರಜ್ಞೆಯತ್ತ ಒಲಿಸಲು ದೇವೋತ್ತಮ ಪರಮ ಪುರುಷನು ನಮಗೆ ನೀಡಿರುವ ಅಸ್ತ್ರವನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಂಕೀರ್ತನೆಯ ಆಯುಧ ಹಿಡಿದವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.

ನಾವು ಪುಸ್ತಕ ಮಾರಾಟಕ್ಕೆ ಇತರ ಸಾಮಾನ್ಯ ಮಾರಾಟ ಪ್ರತಿನಿಧಿಗಳು ಅನುಸರಿಸುವ ತಂತ್ರಗಳನ್ನೇ ಅಳವಡಿಸಿಕೊಳ್ಳಬೇಕು. ಆದರೆ ನಮ್ಮಿಬ್ಬರಲ್ಲಿನ ವ್ಯತ್ಯಾಸವೆಂದರೆ – ಅವರು ಅದನ್ನು ಪ್ರತಿಫಲದ ಆಸೆಯಿಂದ ಮಾಡುತ್ತಾರೆ, ನಾವು ಶ್ರೀ ಕೃಷ್ಣ ತೃಪ್ತಿಗಾಗಿ ಮಾಡುತ್ತೇವೆ.”

ಶ್ರೀಲ ಪ್ರಭುಪಾದರು, ಸೆಪ್ಟೆಂಬರ್ 30, 1979ರಲ್ಲಿ ಬರಿಮರ್ದನರಿಗೆ ಬರೆದ ಪತ್ರದಲ್ಲಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi