ಆತ್ಮದ ಸ್ವಾಭಾವಿಕ ಕ್ರಿಯೆ

ಸ್ಥಳ: ಸೀಟಲ್, ವಾಷಿಂಗ್‌ಟನ್, ದಿನಾಂಕ 10ನೇ ಅಕ್ಟೋಬರ್, 1968

ಶ್ರೀಲ ಪ್ರಭುಪಾದರು ಮತ್ತು ಅವರ ಕೆಲವು ಶಿಷ್ಯರುಗಳೊಂದಿಗೆ ನಡೆದ ಸಂವಾದ

– ಅನುವಾದ: ಡಾ.ಕೆ.ವೈ.ಬಾಲರಾಜ್‌

ಶ್ರೀಲ ಪ್ರಭುಪಾದ : ದೇಹವು ಹೇಗೆ ಬೆಳೆಯುತ್ತದೆ? ಅದರಲ್ಲಿರುವ ಚಿಕ್ಕ ಕಣವಾದ ಆತ್ಮದ ಅಸ್ತಿತ್ವದಿಂದ. ಉದಾಹರಣೆಗೆ ಈ ಹುಡುಗನಿಗೆ ನೋಡಿ, ಈ ಹುಡುಗನಿಗೆ ಒಂದು ಸಣ್ಣ ಎತ್ತರವಿರುವ ದೇಹವಿದೆ.

ಈಗ ಈ ಹುಡುಗ ಬೆಳೆದು ತನ್ನ 24ನೇ ವಯಸ್ಸಿನಲ್ಲಿ ಬಲಿಷ್ಠ ಹಾಗೂ ಸದೃಢವಾದ ದೇಹವನ್ನು ಹೊಂದಿ ಯೌವನದಲ್ಲಿರುವನು. ಯಾವಾಗ ಈ ಯುವಕನ ಯೌವನ ಹೋಗುತ್ತದೋ, ಆಗ ಈ ದೇಹವು ಹೋಗಿ ಇನ್ನೊಂದು ದೇಹ ಬರುತ್ತದೆ.

ಇದೆಲ್ಲ ಹೇಗೆ ಸಾಧ್ಯವಾಗುತ್ತಿದೆ? ಆ ಚಿಕ್ಕ ಕಣವಾದ ಆತ್ಮದ ಅಸ್ತಿತ್ವದಿಂದ. ಒಂದು ವೇಳೆ ಈ ದೇಹದಿಂದ ಆತ್ಮವನ್ನು ಹೊರತೆಗೆದರೆ, ಈ ದೇಹವು ಬೆಳೆಯುವುದಿಲ್ಲ ಮತ್ತು ಬದಲಾವಣೆ ಹೊಂದುವುದಿಲ್ಲ.

ಇವು ಧ್ಯಾನದ ವಿಷಯ ವಸ್ತುಗಳಾಗಿವೆ. ನೀವು ಯಾವಾಗ ‘ನಾನು ಈ ದೇಹವಲ್ಲ ನಾನು ಚೇತನಾತ್ಮ’ ಎಂದು ಅರ್ಥಮಾಡಿಕೊಳ್ಳುತ್ತೀರೋ ಆಗ ಮುಂದಿನ ಹಂತ ಆತ್ಮದ ಸ್ವಾಭಾವಿಕ ಕ್ರಿಯೆ ಏನು? ಎಂದು ಅರ್ಥಮಾಡಿಕೊಳ್ಳುವುದಾಗಿದೆ.

ಆತ್ಮದ ಸ್ವಾಭಾವಿಕ ಕ್ರಿಯೆಯು ಕೃಷ್ಣ ಪ್ರಜ್ಞೆಯಲ್ಲಿ ಕೆಲಸ ಮಾಡುವುದು. ಆದ್ದರಿಂದ ಈ ಪ್ರಸ್ತುತ ಯುಗದಲ್ಲಿ ನಾವು ಈ ಆತ್ಮದ ಸ್ವಾಭಾವಿಕ ಕ್ರಿಯೆಯನ್ನು ನೇರವಾಗಿ ತೆಗೆದುಕೊಳ್ಳಬೇಕು. ಅನಂತರ ಬೇರೆ ತಿಳುವಳಿಕೆಗಳು ತನ್ನಿಂದ ತಾನೇ ಅರ್ಥವಾಗುತ್ತವೆ.

ಈಗಿನ ಯುಗದಲ್ಲಿ ನೀವು ಏಕಾಂತ ಸ್ಥಳಕ್ಕೆ ಹೋಗಿ, ಶಾಂತವಾಗಿ ಕುಳಿತು ಧ್ಯಾನ ಮಾಡಲು ಸಾಧ್ಯವಾಗುವುದಿಲ್ಲ. ಅದು ಸಾಧ್ಯವೇ ಇಲ್ಲ. ಒಂದು ವೇಳೆ ಕೃತಕವಾಗಿ ಪ್ರಯತ್ನಪಡಲು ಹೋದರೆ ಅದು ಅಸಫಲವಾಗುತ್ತದೆ.

ಆದ್ದರಿಂದ ನೀವು ಈ ಪ್ರಕ್ರಿಯೆಯನ್ನು ತೆಗೆದುಕೊಳ್ಳಬೇಕು. ಹರೇರ್‌‌ ನಾಮ ಹರೇರ್ ನಾಮ ಹರೇರ್ ನಾಮೈವ ಕೇವಲಮ್, ಕಲೌ ನಾಸ್ತಿ ಏವ ನಾಸ್ತಿ ಏವ ನಾಸ್ತಿ ಏವ ಗತಿ‌ರ್‌ ಅನ್ಯಥಾ – ”ಈ ಕಲಿಯುಗದಲ್ಲಿ ನೀವು ಭಗವಂತನ ಪವಿತ್ರನಾಮವಾದ ಹರೇ ಕೃಷ್ಣ ಜಪಿಸದೇ ಹೋದರೆ ಆತ್ಮ ಸಾಕ್ಷಾತ್ಕಾರಕ್ಕೆ ಅನ್ಯ ಮಾರ್ಗವಿಲ್ಲ”. ಇದುವೇ ನಿಜವಾದ ಸತ್ಯ.

ಶಿಷ್ಯ : ಶ್ರೀಲ ಪ್ರಭುಪಾದರೇ, ಕ್ರಿಶ್ಚಿಯನ್ನರು ಆಧ್ಯಾತ್ಮಿಕ ಗುರುವಿನ ಸಹಾಯವಿಲ್ಲದೇ ಬೈಬಲ್ ನಲ್ಲಿರುವ ಕ್ರಿಸ್ತನ ವಾಣಿಯನ್ನು ಓದಿ ಮತ್ತು ಅವನ ಬೋಧನೆಗಳನ್ನು ಅನುಸರಿಸುವುದರ ಮೂಲಕ ಆಧ್ಯಾತ್ಮಿಕ ಆಕಾಶವನ್ನು ತಲಪಬಹುದೇ?

ಶ್ರೀಲ ಪ್ರಭುಪಾದ : ನೀವು ಯಾವಾಗ ಬೈಬಲ್ ಓದುತ್ತೀರಿ ಆಗ ಆಧ್ಯಾತ್ಮಿಕ ಗುರುವನ್ನು ಅನುಸರಿಸುತ್ತೀರಿ. ಹೇಗೆ ನೀವು “ಆಧ್ಯಾತ್ಮಿಕ ಗುರುವಿಲ್ಲದೆ ‘ ಎಂದು ಹೇಳುತ್ತೀರಿ? ನೀವು ಬೈಬಲ್ ಓದುತ್ತೀರಿ ಎಂದರೆ ಜೀಸಸ್ ಕ್ರಿಸ್ತನನ್ನು ನೀವು ಅನುಸರಿಸುತ್ತೀರಿ, ನೀವು ಆಧ್ಯಾತ್ಮಿಕ ಗುರುವನ್ನು ಅನುಸರಿಸುತ್ತೀರಿ ಎಂದು ಅರ್ಥ. ಹಾಗಾದರೆ ಆಧ್ಯಾತ್ಮಿಕ ಗುರುವಿಲ್ಲದಿರುವ ಅವಕಾಶ ಎಲ್ಲಿ ಬರುತ್ತದೆ?

ಶಿಷ್ಯ:  ನಾನು ಜೀವಂತ ಆಧ್ಯಾತ್ಮಿಕ ಗುರುವಿಗೆ ಸಂಬಂಧಪಟ್ಟ ಹಾಗೆ ಹೇಳುತ್ತಿದ್ದೆ.

ಶ್ರೀಲ ಪ್ರಭುಪಾದ : ಆಧ್ಯಾತ್ಮಿಕ ಗುರು ಜೀವಂತನಾಗಿರುವುದರ ಬಗ್ಗೆ ಪ್ರಶ್ನೆಯೇ ಏಳುವುದಿಲ್ಲ. ಆಧ್ಯಾತ್ಮಿಕ ಗುರು ಶಾಶ್ವತವಾಗಿದ್ದಾನೆ.

ಈಗ ನಿಮ್ಮ ಪ್ರಶ್ನೆ ಆಧ್ಯಾತ್ಮಿಕ ಗುರುವಿಲ್ಲದೆ ಏನೂ ಮಾಡಲಾಗುವುದಿಲ್ಲವೆಂದು. ಆಧ್ಯಾತ್ಮಿಕ ಗುರುವಿಲ್ಲದೇ ನೀವು ಜೀವನದ ಯಾವುದೇ ಹಂತದಲ್ಲಿಯೂ ಇರಲಾರಿರಿ. ನೀವು ಯಾವುದೇ ಆಧ್ಯಾತ್ಮಿಕ ಗುರುವನ್ನು ಸ್ವೀಕರಿಸಬಹುದು. ಅದು ಬೇರೆ ವಿಷಯ. ಆದರೆ ನೀವು ಯಾರನ್ನಾದರೂ ಸ್ವೀಕರಿಸಲೇಬೇಕು.

ನೀವು ಯಾವಾಗ ‘ಬೈಬಲ್ ನ್ನು ಓದುತ್ತೇನೆ” ಎಂದು ಹೇಳುತ್ತೀರಿ. ಇದರ ಅರ್ಥ, ಆಧ್ಯಾತ್ಮಿಕ ಗುರುವಿನ ಪ್ರತಿನಿಧಿಯಾಗಿರುವ ಮತ್ತು ಜೀಸಸ್ ಕ್ರಿಸ್ತನ ಮಾರ್ಗದಲ್ಲಿರುವ ಯಾವುದೇ ಪಾದ್ರಿ ಅಥವಾ ಪುರೋಹಿತನನ್ನು ಅನುಸರಿಸುತ್ತಿರುವಿರೆಂದು ಗೊತ್ತಾಗುತ್ತದೆ.

ಆದ್ದರಿಂದ ಯಾವುದೇ ರೀತಿಯಲ್ಲಾದರೂ ನೀವು ಆಧ್ಯಾತ್ಮಿಕ ಗುರುವನ್ನು ಅನುಸರಿಸಲೇಬೇಕು. ”ಆಧ್ಯಾತ್ಮಿಕ ಗುರುವಿಲ್ಲದೆ” ಎನ್ನುವ ಪ್ರಶ್ನೆಯೇ ಬರುವುದಿಲ್ಲ ಅರ್ಥ ಆಯಿತಾ?

ಶಿಷ್ಯ : ಶ್ರೀಲ ಪ್ರಭುಪಾದರೆ, ನನ್ನ ಅರ್ಥ ಉದಾಹರಣೆಗೆ, ನಿಮ್ಮ ಸಹಾಯವಿಲ್ಲದೇ ಮತ್ತು ನಿಮ್ಮ ನಿರೂಪಣೆಯಿಲ್ಲದೆ ನಮಗೆ ಭಗವದ್ಗೀತೆಯ ಬೋಧನೆಯು ಅರ್ಥವಾಗುವುದಿಲ್ಲ.

ಶ್ರೀಲ ಪ್ರಭುಪಾದ : ಅದೇ ರೀತಿಯಾಗಿ ಕ್ರೈಸ್ತನ ಸಹಾಯದಿಂದ ಮತ್ತು ಚರ್ಚ್‌ನಲ್ಲಿರುವ ಪುರೋಹಿತರ ಸಹಾಯದಿಂದ ಬೈಬಲ್ ಅರ್ಥಮಾಡಿಕೊಳ್ಳಬೇಕು.

ಶಿಷ್ಯ : ಹೌದು, ಆದರೆ ಪುರೋಹಿತನು ತನ್ನ ಗುರುಪರಂಪರೆ ಅಥವಾ ಕೈಸ್ತಗುರುಗಳಿಂದ ಉತ್ತಮವಾದ ವ್ಯಾಖ್ಯಾನ ಪಡೆಯುತ್ತಿದ್ದಾನೆಯೇ? ಏಕೆಂದರೆ ಬೈಬಲ್‌ ನ ವ್ಯಾಖ್ಯಾನದಲ್ಲಿ ಒಂದು ರೀತಿಯ ಭಿನ್ನವಾದವಿದೆ. ಬೈಬಲ್ ನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸುವ ಕ್ರೈಸ್ತಧರ್ಮದಲ್ಲಿ ಅನೇಕ ಪಂಗಡಗಳಿವೆ.

ಶ್ರೀಲ ಪ್ರಭುಪಾದ : ಇರಬಹುದು, ಆದರೆ ಬೈಬಲ್‌ಗೆ ಯಾವುದೇ ವ್ಯಾಖ್ಯಾನ ಇರಲು ಸಾಧ್ಯವಿಲ್ಲ. ಸ್ವತಃ ಬೈಬಲ್‌ಗೆ ಪ್ರಮಾಣೀಕೃತರಿಲ್ಲ. ಇದು “ಗುದ್ದಲಿಯನ್ನು ಗುದ್ದಲಿಯೆಂದೇ ಕರೆಯಿರಿ” ಎನ್ನುವ ಹಳೇ ಗಾದೆ ಹಾಗೆ ಇದೆ. ಈಗ ಒಂದು ವೇಳೆ ಅದನ್ನು ಯಾರಾದರೂ ಬೇರೆ ಏನಾದರೂ ಅಂದರೆ ಅದು ಬೇರೆ ವಿಷಯ. ಅವನು ಆಧ್ಯಾತ್ಮಿಕ ಗುರುವಲ್ಲ.

ಉದಾಹರಣೆಗೆ ಈ ಕೈಗಡಿಯಾರ ತೆಗೆದುಕೊಳ್ಳಿ. ಎಲ್ಲರೂ ಇದಕ್ಕೆ ಕೈಗಡಿಯಾರ ಎಂದೇ ಕರೆಯುತ್ತಾರೆ. ಒಂದು ವೇಳೆ ನಾನು ಇದನ್ನು ‘ಕನ್ನಡಕ’ ಎಂದು ಕರೆದರೆ, ಆಧ್ಯಾತ್ಮಿಕ ಗುರು ಎನಿಸಿಕೊಂಡಿರುವ ನನಗೆ ಬೆಲೆ ಏನಿದೆ? ನಾನು ಮಾರ್ಗ ತಪ್ಪಿಸುತ್ತಿದ್ದೇನೆ. (ನಗು). ನಾನು ”ಇದು ಕೈಗಡಿಯಾರ” ಎಂದೇ ಹೇಳಬೇಕು.

ಯಾರಾದರೂ ತಪ್ಪು ವ್ಯಾಖ್ಯಾನ ಮಾಡಿದರೆ ಅವನು ಪ್ರಾಮಾಣಿಕ ಗುರುವಾಗುವುದಿಲ್ಲ. ಕೂಡಲೇ ಅಂತಹ ಆಧ್ಯಾತ್ಮಿಕ ಗುರುವನ್ನು ತಿರಸ್ಕರಿಸಿ.

ಯಾರು ನಿಜವಾದ ಗುರು ಮತ್ತು ಯಾರು ಸುಳ್ಳು ಗುರು ಎನ್ನುವ ಜ್ಞಾನ ನಿಮ್ಮಲ್ಲಿರಬೇಕು. ಇಲ್ಲದಿದ್ದರೆ ನೀವು ಮೋಸ ಹೋಗುತ್ತೀರಿ. ಎಲ್ಲರೂ ತಮ್ಮ ತಮ್ಮ ಮಾರ್ಗದಲ್ಲಿಯೇ ವ್ಯಾಖ್ಯಾನಿಸುತ್ತಿದ್ದಾರೆ.

ಭಗವದ್ಗೀತೆಯ ಅನೇಕ ಸಂಪುಟಗಳಿವೆ. ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಅದನ್ನು ವ್ಯಾಖ್ಯಾನಿಸಲು ಪ್ರಯತ್ನಿಸಿದ್ದಾರೆ. ಅವೆಲ್ಲ ಮೂರ್ಖರವಾದಗಳು. ಅವುಗಳನ್ನೆಲ್ಲ ಎಸೆಯಬೇಕು. ನೀವು ಸುಮ್ಮನೆ ಭಗವದ್ಗೀತೆಯ ಯಥಾರೂಪವನ್ನು ಓದಬೇಕು. ಆಗಲೇ ಅದು ಏನೆಂದು ನಿಮಗೆ ಅರ್ಥವಾಗುವುದು.

ಇಲ್ಲಿ ವ್ಯಾಖ್ಯಾನ ಮಾಡುವ ಪ್ರಶ್ನೆಯೇ ಇಲ್ಲ. ಯಾವಾಗ ನೀವು ವ್ಯಾಖ್ಯಾನ ಮಾಡುತ್ತೀರಿ. ಆಗ ಅದು ಪ್ರಮಾಣೀಕೃತವಾಗುವುದಿಲ್ಲ.

ಕಾನೂನಿನ ಪುಸ್ತಕವನ್ನು ತೆಗೆದುಕೊಳ್ಳಿ ಒಂದು ವೇಳೆ ನೀವು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ‘ಓ ನ್ಯಾಯಾಧೀಶರೇ, ಈ ಭಾಗವನ್ನು ನಾನು ಈ ರೀತಿಯಾಗಿ ವ್ಯಾಖ್ಯಾನಿಸುತ್ತೇನೆ” ಎಂದು ಹೇಳಿದರೆ, ಅದನ್ನು ಸ್ವೀಕರಿಸಲಾಗುತ್ತದೆಯೇ?

ನ್ಯಾಯಾಧೀಶರು ಕೂಡಲೇ ಹೇಳುತ್ತಾರೆ “ವ್ಯಾಖ್ಯಾನಿಸಲು ನೀನು ಯಾರು’? ನಿನಗೆ ಅದರ ಮೇಲೆ ಅಧಿಕಾರವಿಲ್ಲ.

ಅಷ್ಟರ ಮೇಲೆ ಎಲ್ಲರೂ ಬಂದು ಆ ಕಾನೂನಿನ ಪುಸ್ತಕವನ್ನು “ನಾನು ವ್ಯಾಖ್ಯಾನಿಸುತ್ತೇನೆ”, ಎಂದು ಹೇಳಿದರೆ ಆ ಪುಸ್ತಕದ ಪ್ರಮಾಣ ಏನಾಗಬೇಕು? ಯಾವ ವಿಷಯ ಅರ್ಥವಾಗುವುದಿಲ್ಲವೋ ಆಗ ವ್ಯಾಖ್ಯಾನದ ಅವಶ್ಯಕತೆ ಇರುತ್ತದೆ. ಒಂದು ವೇಳೆ ಕೈ ಗಡಿಯಾರಕ್ಕೆ ನಾನು ವಾಚ್ ಎಂದರೆ ಎಲ್ಲರಿಗೂ ಅರ್ಥವಾಗುತ್ತದೆ. ಅದನ್ನು ಕನ್ನಡಕ ಎಂದು ವ್ಯಾಖ್ಯಾನಿಸುವ ಅವಕಾಶವಾದರೂ ಎಲ್ಲಿರುತ್ತದೆ?

ಆದ್ದರಿಂದ ಅನಾವಶ್ಯಕ ವ್ಯಾಖ್ಯಾನದ ಅವಶ್ಯಕತೆ ಇಲ್ಲ. ಯಾರಾದರೂ ಅನಾವಶ್ಯಕವಾಗಿ ವ್ಯಾಖ್ಯಾನಿಸುತ್ತಿದ್ದರೆ ಅಂಥವರು ಪ್ರಮಾಣೀಕೃತ ಗುರುವಲ್ಲ. ಮತ್ತು ಕೂಡಲೇ ಯಾವುದೇ ಪರಿಗಣನೆ ಮಾಡದೆ ಅಂತಹವನನ್ನು ತಿರಸ್ಕರಿಸಬೇಕು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi