ದ್ರೋಣಾಚಾರ್ಯರ ಅಂತ್ಯ

ಆಪದ್ಬಾಂಧವ ಶ್ರೀಕೃಷ್ಣ-6

– ಡಾ.ಬಿ.ಆರ್. ಸುಹಾಸ್

ಚಂದ್ರೋದಯವಾಗಲು, ಯೋಧರೆಲ್ಲಾ ಎಚ್ಚರಗೊಂಡು ಬೆಳದಿಂಗಳ ಬೆಳಕಿನಲ್ಲಿ ಪುನಃ ಭಯಂಕರವಾದ ಯುದ್ಧವನ್ನು ಆರಂಭಿಸಿದರು! ದುರ್ಯೋಧನನು ಪುನಃ ದ್ರೋಣರನ್ನು ನಿಂದಿಸಿದನು. ದ್ರೋಣರು ಅವನನ್ನು ವ್ಯಂಗ್ಯೋಕ್ತಿಗಳಿಂದ ಬಯ್ಯುತ್ತಾ ರಣರಂಗಕ್ಕೆ ಹೋದರು!

ದುರ್ಯೋಧನನು ತನ್ನ ಸೈನ್ಯವನ್ನು ಎರಡಾಗಿ ವಿಂಗಡಿಸಿದನು. ಸೈನ್ಯದ ಒಂದು ಭಾಗದೊಂದಿಗೆ ದ್ರೋಣರು ದುರ್ಯೋಧನನನ್ನು ಮುಂದಿಟ್ಟುಕೊಂಡು ಕೋಪದಿಂದ ಪಾಂಡವ ಪಾಂಚಾಲರ ಮೇಲೆ ಆಕ್ರಮಣ ನಡೆಸಿದರು! ಅಷ್ಟರಲ್ಲಿ ಸೂರ್ಯೋದಯವಾಗಲು ಯುದ್ಧ ಭಯಂಕರ ರೂಪ ತಾಳಿತು!

ದ್ರೋಣರನ್ನು ಯಾರೂ ತಡೆಯಲಾಗುತ್ತಿರಲಿಲ್ಲ. ಅಂದು ಅವರ ಕೋಪವೆಲ್ಲಾ ಪಾಂಚಾಲರ ಮೇಲೆ ತಿರುಗಿತು! ಅವರೆನ್ನುದುರಿಸಿದ ದ್ರುಪದ, ವಿರಾಟ ಮತ್ತು ದ್ರುಪದನ ಮೂರು ಮಕ್ಕಳನ್ನೂ ಅವರು ಸಂಹರಿಸಿಬಿಟ್ಟರು! ಇದರಿಂದ ದ್ರುಪದಪುತ್ರ ಧೃಷ್ಟದ್ಯುಮ್ನನು ಅತ್ಯಂತ ಕ್ರುದ್ಧನಾಗಿ ಒಂದು ಪ್ರತಿಜ್ಞೆ ಮಾಡಿದನು, “ಇಂದು ನಾನು ದ್ರೋಣರನ್ನು ಕೊಲ್ಲುತ್ತೇನೆ!

ಅವರೇನಾದರೂ ನನ್ನಿಂದ ತಪ್ಪಿಸಿಕೊಂಡರೆ ನಾನು ಕ್ಷತ್ರಿಯ ಮತ್ತು ಬ್ರಾಹ್ಮಣ ಧರ್ಮಗಳಿಂದ ಭ್ರಷ್ಟನಾಗುವೆ!” (ಧೃಷ್ಟದ್ಯುಮ್ನನು ದ್ರುಪದನ ಪುತ್ರನಾದುದರಿಂದ ಕ್ಷತ್ರಿಯನು; ಯಜ್ಞದಿಂದ ಹುಟ್ಟಿದುದರಿಂದ ಬ್ರಾಹ್ಮಣನೂ ಹೌದು) ದ್ರೋಣರಿಗೂ ಅರ್ಜುನನಿಗೂ ಭಯಂಕರ ಯುದ್ಧವು ಮೊದಲಾಯಿತು!

ಇಂಥ ಗುರು ಶಿಷ್ಯರ ಯುದ್ಧ ಅಭೂತಪೂರ್ವವಾಗಿತ್ತು! ಮಾಂಸದ ತುಂಡಿಗಾಗಿ ಎರಡು ಗಿಡುಗಗಳು ಕಚ್ಚಾಡುವಂತೆ, ಜಯಿಸಲೇಬೇಕೆಂದು ಪರಸ್ಪರ ಯುದ್ಧ ಮಾಡುತ್ತಿದ್ದ ಆ ಅಸಮಾನ ಪರಾಕ್ರಮಿಗಳ ಅದ್ಭುತ ಯುದ್ಧವನ್ನು ಉಭಯ ಪಕ್ಷಗಳ ಯೋಧರೂ ಅತ್ಯಂತ ಕುತೂಹಲದಿಂದ ವೀಕ್ಷಿಸತೊಡಗಿದರು!

ದ್ರೋಣರು ಬಿಡುತ್ತಿದ್ದ ಎಲ್ಲಾ ದಿವ್ಯಾಸ್ತ್ರಗಳನ್ನೂ ಅರ್ಜುನನು ಪ್ರತ್ಯಸ್ತ್ರಗಳಿಂದ ನಾಶಪಡಿಸುತ್ತಿದ್ದನು! ತಮ್ಮ ಪ್ರಿಯ ಶಿಷ್ಯನ ಪರಾಕ್ರಮವನ್ನು ದ್ರೋಣರು ಮನಸ್ಸಿನಲ್ಲೇ ಪ್ರಶಂಸಿಸಿದರು! ಈ ಯುದ್ಧವನ್ನು ಆಗಸದಿಂದ ವೀಕ್ಷಿಸುತ್ತಿದ್ದ ಸಿದ್ಧ ಋಷಿಗಳು, ‘ಆಹಾ…! ಇದು ದೇವ, ಗಾಂಧಾರ, ಅಸುರ, ಬ್ರಾಹ್ಮಯುದ್ಧಗಳಾಗಲೀ ಮಾನುಷಯುದ್ಧವಾಗಲೀ ಯಾವುದೂ ಅಲ್ಲ!

ಇಂಥ ವಿಚಿತ್ರಯುದ್ಧ ಹಿ೦ದೆ೦ದೂ ನಡೆದಿರಲಿಲ್ಲ! ರುದ್ರನು ತನ್ನ ದೇಹವನ್ನೇ ಎರಡಾಗಿಸಿಕೊಂಡು ಆ ಎರಡೂ ಭಾಗಗಳು ಪರಸ್ಪರ ಯುದ್ಧ ಮಾಡಿದಂತಿದೆ!” ಎಂದು ಉದ್ಗರಿಸಿದರು!

ಅರ್ಜುನನು ಮಹಾವೀರನೇ ಆದರೂ ದ್ರೋಣರನ್ನು ಸೋಲಿಸಲಾಗಲಿಲ್ಲ. ಇದರಿಂದ ಇತರ ಪಾಂಡವರಿಗೆ ಭಯವಾಯಿತು! ದ್ರೋಣರು ನಿರ್ದಯೆಯಿಂದ ಪಾಂಚಾಲಯೋಧರನ್ನು ಬೆಂಕಿಯಂತೆ ದಹಿಸತೊಡಗಿದರು! ಇದನ್ನು ಕಂಡು ಆಪದ್ಬಾಂಧವ ಶ್ರೀಕೃಷ್ಣನು ಒಂದು ಉಪಾಯ ಮಾಡಿ ಅರ್ಜುನನಿಗೆ ಹೇಳಿದನು,

”ಪಾರ್ಥ! ಧನುರ್ಧಾರಿಗಳಲ್ಲಿ ಶ್ರೇಷ್ಠರಾದ ದ್ರೋಣಾಚಾರ್ಯರು ತಮ್ಮ ಕೈಯಲ್ಲಿ ಧನುಸ್ಸನ್ನು ಹಿಡಿದಿರುವವರೆಗೂ ಇಂದ್ರಸಹಿತರಾದ ದೇವತೆಗಳಿಗೂ ಇವರು ದುರ್ಜಯರಾಗಿರುತ್ತಾರೆ! ಇನ್ನು ಮಾನವರು ಇವರನ್ನು ಸಂಹರಿಸುವುದೆಂತು?! ಇವರು ಶಸ್ತ್ರಸಂನ್ಯಾಸ ಮಾಡಿದರೆ ಮಾತ್ರ ಇವರ ವಧೆ ಸಾಧ್ಯ.

ಆದ್ದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಈಗ ಧರ್ಮವನ್ನು ಬದಿಗೊತ್ತಿ ನಾವೊಂದು ಉಪಾಯ ಮಾಡಬೇಕು! ನನ್ನ ಅಭಿಪ್ರಾಯದಲ್ಲಿ ಇವರಿಗೆ ಅತ್ಯಂತ ಪ್ರೀತಿಪಾತ್ರನಾದ ಇವರ ಪುತ್ರ ಅಶ್ವತ್ಥಾಮನು ಸತ್ತರೆ ಇವರು ಯುದ್ಧವಿಮುಖರಾಗುತ್ತಾರೆ. ಆದ್ದರಿಂದ ಅಶ್ವತ್ಥಾಮನು ಸತ್ತನೆಂದು ಯಾರಾದರೂ ಹೇಳಿ!”

ಶ್ರೀಕೃಷ್ಣನ ಈ ಸಲಹೆ, ಅರ್ಜುನನಿಗೆ ಸ್ವಲ್ಪವೂ ಹಿಡಿಸಲಿಲ್ಲ. ಇತರ ಪಾಂಡವರು ಒಪ್ಪಿದರು. ಯುಧಿಷ್ಠಿರನು ಬಹು ಕಷ್ಟದಿಂದ ಒಪ್ಪಿದನು. ಆಗ ಭೀಮನು, ತನ್ನ ಪಕ್ಷದ್ದೇ ಆದ ಅಶ್ವತ್ಥಾಮ ಎಂಬ ಇಂದ್ರವರ್ಮನ ಆನೆಯನ್ನು ಕೊಂದು, ದ್ರೋಣರ ಬಳಿ ಹೋಗಿ, ‘ಅಶ್ವತ್ಥಾಮ ಸತ್ತ!’ ಎಂದು ಜೋರಾಗಿ ಕಿರುಚಿದನು!

ಅತ್ಯಂತ ಅಪ್ರಿಯವಾದ ಈ ಮಾತನ್ನು ಕೇಳಿ, ನೀರಿನಲ್ಲಿ ಮರಳು ಕರಗುವಂತೆ ದ್ರೋಣರ ಮೈ ಸೋತುಹೋಯಿತು! ಆದರೆ ತಮ್ಮ ಪುತ್ರನು ಮಹಾವೀರನೆಂದು ತಿಳಿದಿದ್ದ ಅವರು ಭೀಮನ ಮಾತನ್ನು ನಂಬದೇ ಪುನಃ ಯುದ್ಧ ಮಾಡತೊಡಗಿದರು!

ಅಷ್ಟರಲ್ಲಿ ಅವರನ್ನು ಸಂಹರಿಸಲು ಧೃಷ್ಟದ್ಯುಮ್ನನು ಬರಲು, ಅವರು ಅವನನ್ನು ಸಾವಿರಾರು ಬಾಣಗಳಿಂದ ಮುಚ್ಚಿಹಾಕಿ, ಪಾಂಚಾಲಸೈನಿಕರ ಮೇಲೆ ಭಯಂಕರ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದರು. ಇದರಿಂದ ಸಾವಿರಾರು ಪಾಂಚಾಲರು ಶಿರಮುರಿದು ನೆಲಕ್ಕುರುಳಿದರು!

ಇದ್ದಕ್ಕಿದ್ದಂತೆ ಆಕಾಶದಲ್ಲಿ ವಿಶ್ವಾಮಿತ್ರ, ಜಮದಗ್ನಿ, ಭರದ್ವಾಜ, ಗೌತಮ, ವಸಿಷ್ಠ, ಕಶ್ಯಪ, ಮೊದಲಾದ ಮಹರ್ಷಿಗಳು ಆಗಮಿಸಿ ದ್ರೋಣರಿಗೆ ಹೇಳಿದರು, ” ದ್ರೋಣ, ಶಸ್ತ್ರಸಂನ್ಯಾಸ ಮಾಡು! ಮೃತ್ಯುವನ್ನು ಸ್ವೀಕರಿಸಲು ನಿನಗಿದು ಸಕಾಲವಾಗಿದೆ. ನಿನ್ನ ಆಯುಷ್ಯ ಮುಗಿಯುತ್ತಾ ಬಂತು!

ಈಗ ನೀನು ಅಸ್ತ್ರಶಸ್ತ್ರಗಳನ್ನು ತಿಳಿಯದಿರುವ ಸಾಧಾರಣ ಸೈನಿಕರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿ ಅಧರ್ಮವನ್ನೆಸಗಿರುವ ವೇದವೇದಾಂಗ ಪಾರಂಗತನಾಗಿರುವ ಬ್ರಾಹ್ಮಣನಾದ ನಿನಗೆ ಈ ಸಂಹಾರಕಾರ್ಯ ಅನುಚಿತವಾದುದು! ಪುನಃ ಹಾಗೆ ಮಾಡದಿರು!”

“ಮೂರು ಲೋಕಗಳ ಐಶ್ವರ್ಯ ಕೊಟ್ಟರೂ ಯುಧಿಷ್ಠಿರನು ಸುಳ್ಳಾಡುವುದಿಲ್ಲ! ಆದ್ದರಿಂದ ಅಶ್ವತ್ಥಾಮನ ವಿಷಯವಾಗಿ ಅವನನ್ನೇ ಕೇಳುವೆ!” ಹೀಗೆಂದು ಯೋಚಿಸಿ ದ್ರೋಣರು ತಮ್ಮ ಪುತ್ರನು ಸತ್ತಿರುವನೇ ಇಲ್ಲವೇ ಎಂದು ಧರ್ಮರಾಜನನ್ನು ಕೇಳಿದನು. ಇದರಿಂದ ಬಹು ದುಃಖಿತನಾದ ಶ್ರೀಕೃಷ್ಣನು ಯುಧಿಷ್ಠಿರನಿಗೆ, ದ್ರೋಣರು ಕೇವಲ ಅರ್ಧದಿನದಲ್ಲೇ ನಿನ್ನ ಇಡೀ ಸೈನ್ಯವನ್ನೇ ನಾಶಮಾಡುತ್ತಾರೆ…!

ಈಗ ನೀನೇ ನಮ್ಮೆಲ್ಲರನ್ನೂ ಅವರಿಂದ ಕಾಪಾಡಬೇಕು ಜೀವವನ್ನುಳಿಸಿಕೊಳ್ಳಲು ಸುಳ್ಳು ಹೇಳಿದರೆ ಪಾಪವುಂಟಾಗುವುದಿಲ್ಲ” ಎಂದು ಹೇಳಿದನು. ಭೀಮನೂ, ”ಅಣ್ಣ! ಶ್ರೀಕೃಷ್ಣನು ಹೇಳಿದಂತೆ ಮಾಡು ನಾನೂ ಅಶ್ವತ್ಥಾಮ ಎಂಬ ಆನೆಯನ್ನು ಕೊಂದಿದ್ದೇನೆ” ಎಂದನು.

ಕೃಷ್ಣ ಭೀಮರ ಮಾತು ಕೇಳಿ ಯುಧಿಷ್ಠಿರನು ಸಂದಿಗ್ಧಮನಸ್ಕನಾಗಿ “ಅಶ್ವತ್ಥಾಮಾ ಹತ’ ಎಂದು ಜೋರಾಗಿ ಕೂಗಿ, ‘ಕುಂಜರಃ’ (ಆನೆ) ಎಂದು ಮೆಲ್ಲನೆ ಹೇಳಿದನು. ಅವನು ಮೊದಲ ಬಾರಿಗೆ ಹೀಗೆ ಸುಳ್ಳಾಡಿದ್ದರಿಂದ, ಸದಾ ಭೂಮಿಯಿಂದ ನಾಲ್ಕು ಅಂಗುಲ ಮೇಲಿರುತ್ತಿದ್ದ ಅವನ ರಥವು ಭೂಮಿಯನ್ನು ಮುಟ್ಟಿತು!

ಯುಧಿಷ್ಠಿರನ ಮಾತನ್ನು ಕೇಳಿ ದ್ರೋಣರು ಜೀವನದಲ್ಲಿ ಜಿಗುಪ್ಸೆ ಹೊಂದಿದರು! ಆಗ ಅವರನ್ನು ಸಂಹರಿಸಲೆಂದು ದೃಷ್ಟದ್ಯುಮ್ನನು ತನ್ನ ಬಿಲ್ಲಿಗೆ ಬಾಣವನ್ನು ಹೂಡಲು, ದ್ರೋಣರು, ಅವನ ಬಿಲ್ಲು, ಧ್ವಜಗಳನ್ನು ಕತ್ತರಿಸಿ ಸಾರಥಿಯನ್ನು ಕೊಂದು ಪುನಃ ಅವನೊಡನೆ ಯುದ್ಧ ಮಾಡತೊಡಗಿದರು!

ಆದರೆ ಮೊದಲಿನಷ್ಟು ರೋಷಾವೇಶದಿಂದ ಯುದ್ಧ ಮಾಡಲಾಗದಿದ್ದ ಅವರಿಗೆ ದಿವ್ಯಾಸ್ತ್ರಗಳ ಸ್ಮರಣೆಯೂ ಆಗಲಿಲ್ಲ. ಆಗ ಭೀಮನು ಅವರ ಬಳಿ ಸಾರಿ, ”ಅಹಿಂಸಾಧರ್ಮಕ್ಕೆ ಬ್ರಾಹ್ಮಣನೇ ಮೂಲ ಎನ್ನುತ್ತಾರೆ! ಅಂಥ ಬ್ರಾಹ್ಮಣಶ್ರೇಷ್ಠರಾದ ನೀವು, ನಿಮ್ಮ ಪತ್ನಿ ಪುತ್ರ ಮಮಕಾರದಿಂದಲೂ ಧನದಾಸೆಗಾಗಿಯೂ ಚಾಂಡಾಲರಂತೆ ಮ್ಲೇಚ್ಛಕರನ್ನೂ ಕ್ಷತ್ರಿಯರನ್ನೂ ಸಂಹರಿಸುತ್ತಿರುವಿರಿ!

ಆದರೆ ಯಾರಿಗಾಗಿ ಇಷ್ಟೆಲ್ಲವನ್ನೂ ಮಾಡಿದಿರೋ, ಆ ನಿಮ್ಮ ಮಗನೇ ಸತ್ತುಬಿದ್ದಿದ್ದಾನೆ! ಕೌರವರು ನಿಮಗೆ ಇದನ್ನು ಹೇಳಿಲ್ಲ! ಯುಧಿಷ್ಠಿರನ ಮಾತಲ್ಲೂ ಸಂದೇಹವೇ?” ಎಂದು ನಿಂದಿಸಿದನು! ಈ ಮಾತುಗಳನ್ನು ಕೇಳಿ ದ್ರೋಣರು ಧನುಸ್ಸನ್ನೆಸೆದು “ಓ ಕರ್ಣ!, ಕೃಪ! ದುರ್ಯೋಧನ!

ನೀವು ಯುದ್ಧ ಮಾಡಿ ವಿಜಯಿಗಳಾಗಲು ಪ್ರಯತ್ನಿಸಿ! ನಾನು ಶಸ್ತ್ರತ್ಯಾಗ ಮಾಡುತ್ತಿದ್ದೇನೆ!’ ಎಂದು ಕೂಗಿಕೊಂಡು, ಅಶ್ವತ್ಥಾಮಾ! ಪ್ರಿಯಪುತ್ರ” ಎಂದು ಅನೇಕ ಬಾರಿ ವಿಲಪಿಸಿ, ಯೋಗಾರೂಢರಾಗಿ ಕುಳಿತು ಸಮಾಧಿಸ್ಥರಾದರು; ಜ್ಯೋತಿಸ್ವರೂಪದ ಅವರ ಆತ್ಮವು ಅವರ ದೇಹದಿಂದ ಹೊರಹೊರಟು ಸೂರ್ಯಾಭಿಮುಖವಾಗಿ ಬ್ರಹ್ಮಲೋಕಕ್ಕೆ ಹೋಯಿತು!

ಧೃಷ್ಟದ್ಯುಮ್ನನು ಒಡನೆಯೇ ಕತ್ತಿ ಗುರಾಣಿಗಳನ್ನು ಹಿಡಿದು ದ್ರೋಣರ ರಥಕ್ಕೆ ಧುಮುಕಿದನು! ‘ಆಚಾರ್ಯರನ್ನು ಕೊಲ್ಲಬೇಡ ಜೀವಂತ ಸೆರೆಹಿಡಿ!’ ಎಂದು ಅರ್ಜುನನು ಕೂಗಿಕೊಳ್ಳುತ್ತಿದ್ದರೂ ಕೇಳದೇ ಅವನು ದ್ರೋಣರ ಪ್ರಾಣರಹಿತವಾದ ಶರೀರದ ಶಿರದ ಶಿಖೆಯನ್ನು ಹಿಡಿದು ಶಿರಚ್ಛೇದನ ಮಾಡಿ ಕೌರವರ ಕಡೆಗೆಸೆದನು! ಅನಂತರ ಅವನು ಹರ್ಷದಿಂದ ಸಿಂಹನಾದ ಮಾಡಲು ಭೀಮನೂ ದನಿಗೂಡಿಸಿ ಅವನನ್ನಾಲಂಗಿಸಿಕೊಂಡನು!

ಕೂದಲು ಸಂಪೂರ್ಣ ನೆರೆತು, ಎಂಬತ್ತೈದು ವರ್ಷದ ವೃದ್ಧರಾಗಿದ್ದ ದ್ರೋಣರು ಹದಿನಾರರ ಪ್ರಾಯದ ಹುಡುಗನಂತೆ ಕಾದಾಡಿ ಹೀಗೆ ಮಡಿದರು!

ದ್ರೋಣಾಚಾರ್ಯರು ಹತರಾಗಲು ಪಾಂಡವ ಸೈನಿಕರು ಹರ್ಷೋದ್ಗಾರ ಮಾಡುತ್ತಿದ್ದಂತೆ ಕೌರವ ಸೈನಿಕರು ಪಲಾಯನ ಮಾಡತೊಡಗಿದರು! ರಣರಂಗದ ಮತ್ತೊಂದು ಭಾಗದಲ್ಲಿ ಯುದ್ಧ ಮಾಡುತ್ತಿದ್ದ ಅಶ್ವತ್ಥಾಮನು ದುರ್ಯೋಧನನನ್ನು ಇದಕ್ಕೆ ಕಾರಣ ಕೇಳಲು ಅವನಿಗೆ ಹೇಳಲಾಗದೇ ಕೃಪಾಚಾರ್ಯರಿಗೆ ಹೇಳಲು ಕೋರಿಕೊಂಡನು.

ಕೃಪರು ವಿಶದವಾಗಿ ಎಲ್ಲವನ್ನೂ ಹೇಳಲು ಅಶ್ವತ್ಥಾಮನು ಕ್ರೋಧಾಭಿಭೂತನಾಗಿ, ”ಅಯ್ಯೋ! ನಾನು ನನ್ನ ತಂದೆಯವರ ಮರಣಕ್ಕಾಗಿ ಶೋಕಿಸುವುದಿಲ್ಲ! ಆದರೆ ಹಾಗೆ ಮೋಸದಿಂದ ಅವರು ಕೊಲ್ಲಲ್ಪಡಬಾರದಿತ್ತು..! ಸುಳ್ಳನ್ನಾಡಿ ಆ ಯುಧಿಷ್ಠಿರನೆಂಥ ಪಾಪ ಮಾಡಿದ! ನಾನು ಬದುಕಿರುವಾಗಲೇ ಆ ದುರಾತ್ಮ ಧೃಷ್ಟದ್ಯುಮ್ನನು ನನ್ನ ತಂದೆಯ ಶಿಖೆಯನ್ನೆಳೆದ…!

ಈಗ ನಾನು ಭೀಕರ ಸ್ವರೂಪದ ನಾರಾಯಣಾಸ್ತ್ರವನ್ನು ಪ್ರಯೋಗಿಸುತ್ತೇನೆ! ನನ್ನ ತಂದೆಯ ಭಕ್ತಿಗೆ ಮೆಚ್ಚಿ ಶ್ರೀಮನ್ನಾರಾಯಣನೇ ಇದನ್ನು ಅವರಿಗೆ ಪ್ರದಾನ ಮಾಡಿದ್ದ. ಅವರಿಂದ ಇದು ನನಗೆ ಬಂದಿದೆ; ಇದು ಯಾರನ್ನೂ ಬಿಡದೇ ಇಡೀ ಪಾಂಡವಸೈನ್ಯವನ್ನೇ ನಾಶಪಡಿಸುತ್ತದೆ!

ಇದರ ಪ್ರತ್ಯಸ್ತ್ರ ರಹಸ್ಯ ನನಗೆ ಮಾತ್ರ ತಿಳಿದಿದೆ!” ಎಂದು ಪಾಂಡವರ ಮೇಲೆ ಮಹಾನಾರಾಯಣಾಸ್ತ್ರವನ್ನು ಪ್ರಯೋಗಿಸಿದ! ಇದರಿಂದ ನೀರಿನ ತುಂತುರುಗಳಿ೦ದ ಬೆರೆತ ಗಾಳಿಯು ಬೀಸತೊಡಗಿತು! ಮೋಡಗಳೇ ಇಲ್ಲದೇ ಗುಡುಗು ಸಿಡಿಲುಗಳ ಗರ್ಜನೆಯಾಯಿತು! ಸಾಗರಗಳು ಉಕ್ಕೇರಿದವು!

ಪರ್ವತಗಳು ಬಿರಿದವು! ಭೂಮಿಯು ಕಂಪಿಸಿತು! ಎಲ್ಲೆಲ್ಲೂ ಕತ್ತಲಾವರಿಸಿತು! ಆಗ ದೇವದಾನವಗಂಧರ್ವರೂ ಇದರ ಪರಿಣಾಮವನ್ನು ಯೋಚಿಸಿ ಭಯಭೀತರಾದರು!

ಕೌರವರು ಸಿಂಹನಾದ ಮಾಡುತ್ತಾ ಪುನಃ ಯುದ್ಧಕ್ಕೆ ಬರುತ್ತಿರುವುದನ್ನು ಕಂಡು ಆಶ್ಚರ್ಯಗೊಂಡ ಯುಧಿಷ್ಠಿರನು ಅರ್ಜುನನನ್ನು ಈ ವಿಷಯವಾಗಿ ವಿಚಾರಿಸಲು ಅರ್ಜುನನು, ತಂದೆಯ ಹತ್ಯೆಯಿಂದ ಕೆರಳಿರುವ ಮಹಾಪರಾಕ್ರಮಿಯಾದ ಅಶ್ವತ್ಥಾಮನು ಸೇನೆಯನ್ನು ನಿಯೋಜಿಸಿಕೊಂಡು ಬರುತ್ತಿದ್ದಾನೆ!

ಗುರುಹಂತಕನನ್ನು ಅವನು ಕ್ಷಮಿಸುವನೇ? ಅಣ್ಣ ನೀನಾದರೂ ದ್ರೋಣರ ವಿಷಯದಲ್ಲಿ ಸುಳ್ಳು ಹೇಳಿ, ನಿನ್ನನ್ನೇ ನಂಬಿದ್ದ ಆಚಾರ್ಯರನ್ನು ವಂಚಿಸಿ ಮಹಾಪರಾಧವೆಸಗಿದೆ! ಬೇಡ ಬೇಡವೆಂದು ನಾನು ಕೂಗುತ್ತಿದ್ದರೂ ಈ ಧೃಷ್ಟದ್ಯುಮ್ನನು ತನ್ನ ಗುರುವನ್ನೇ ಕೊಂದುಬಿಟ್ಟ! ಆಯ್ಯೋ ಕ್ಷಣಿಕವಾದ ರಾಜ್ಯದಾಸೆಗೆ ನಾವು ನಮ್ಮ ನೆಚ್ಚಿನ ಗುರುಗಳನ್ನೇ ವಧಿಸಿದೆವೇ…!” ಎನ್ನುತ್ತಾ ತಲೆಬಾಗಿಸಿ ಶೋಕಾಕುಲನಾದ.

ಅರ್ಜುನನ ಮಾತಿನಿಂದ ಭೀಮನು ಕೆರಳಿ ಹೇಳಿದ, “ಅರಣ್ಯದಲ್ಲಿರುವ ಮುನಿಯಂತೆ ಮಾತನಾಡುತ್ತಿರುವೆಯಲ್ಲಾ..? ಶ್ರೀಕೃಷ್ಣನು ಇಲ್ಲೇ ಇರುವಾಗ ಆ ಅಶ್ವತ್ಥಾಮನನ್ನು ಪ್ರಶಂಸಿಸುತ್ತಿರುವೆಯಲ್ಲಾ? ನಿನ್ನ ದೋಷಗಳನ್ನು ನೀನೇ ಹೇಳಿಕೊಳ್ಳಲು ನಾಚಿಕೆಯಾಗುವುದಿಲ್ಲವೇ? ನಿನ್ನ ಹದಿನಾರನೇ ಒಂದು ಭಾಗಕ್ಕೂ ಅವನು ಸಮನಲ್ಲ!

ನಮ್ಮ ಶತ್ರುಗಳು ನಮಗೆ ಇದುವರೆವಿಗೂ ಮಾಡಿರುವ ಅಧರ್ಮವು ಸಾಲದೇ? ಹದಿಮೂರು ವರ್ಷಗಳು ಸಹನೆಯಿಂದಿದ್ದ ನಮಗೆ ನಮ್ಮ ರಾಜ್ಯವನ್ನು ಕೊಡದಿದ್ದರೆ ನಾವೇನು ಮಾಡಬೇಕು? ಈಗ ನೀನು ಯುದ್ಧ ಮಾಡದಿದ್ದರೆ ನಾನೇ ನನ್ನ ಪರಾಕ್ರಮದಿಂದ ಆ ಅಶ್ವತ್ಥಾಮನೊಡನೆ ಯುದ್ಧ ಮಾಡುತ್ತೇನೆ!”

ಧೃಷ್ಟದ್ಯುಮ್ನನು ತನ್ನ ಕಾರ್ಯವನ್ನು ತಾನು ಸಮರ್ಥಿಸಿಕೊಂಡ, ”ಬ್ರಾಹ್ಮಣನಾದವನು ಮಾಡಬೇಕಾಗಿರುವ ಯಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ, ಪ್ರತಿಗ್ರಹಗಳೆಂಬ ಷಟ್ಕರ್ಮಗಳಾವನ್ನೂ ಮಾಡದೇ ಕ್ಷತ್ರಧರ್ಮವನ್ನವಲಂಬಿಸಿದುದಲ್ಲದೇ ಸಾಮಾನ್ಯ ಸೈನಿಕರ ಮೇಲೆ ಬ್ರಹ್ಮಾಸ್ತ್ರ ಬಿಟ್ಟ ಆ ದ್ರೋಣರು ಯಾವ ಧರ್ಮಪಾಲಿಸುತ್ತಿದ್ದರು? ಅಲ್ಲದೇ ಅವರನ್ನು ಸಂಹರಿಸಲೆಂದೇ ನಾನು ಹುಟ್ಟಿದ್ದು! ಇದರಲ್ಲಿ ನನ್ನ ತಪ್ಪೇನು?”

ಧೃಷ್ಟದ್ಯುಮ್ನನು ಮಾಡಿದ ಗುರುನಿಂದೆಯಿಂದ ಸಿಟ್ಟಿಗೆದ್ದ ಸಾತ್ಯಕಿಯು ಅವನನ್ನು ತೆಗಳಿದನು; ಇಬ್ಬರಿಗೂ ವಾಗ್ವಾದಗಳು ನಡೆದು, ಸಾತ್ಯಕಿಯು ದೃಷ್ಟದ್ಯುಮ್ನನನ್ನೂ, ಭೀಷ್ಮರನ್ನು ಕೊಂದುದಕ್ಕಾಗಿ ಅವನ ಅಣ್ಣ ಶಿಖಂಡಿಯನ್ನೂ ನಿಂದಿಸಲು, ಭೂರಿಶ್ರವಸುವನ್ನು ಕೊಂದುದಕ್ಕಾಗಿ ಸಾತ್ಯಕಿಯನ್ನು ಧೃಷ್ಟದ್ಯುಮ್ನನು ನಿಂದಿಸಿದನು.

ಇದರಿಂದ ಸಾತ್ಯಕಿಯು ಬಹುಕೋಪದಿಂದ ಧೃಷ್ಟದ್ಯುಮ್ನನನ್ನೇ ಕೊಲ್ಲಹೊರಟನು! ಅಷ್ಟರಲ್ಲಿ ಶ್ರೀಕೃಷ್ಣನು ಪ್ರಚೋದಿಸಲು ಭೀಮನು ಇಬ್ಬರನ್ನೂ ತಡೆದನು! ಆನಂತರ, ಕೃಷ್ಣನೂ ಯುಧಿಷ್ಠಿರನೂ ಸೇರಿ ಹಾವುಗಳಂತೆ ಭುಸುಗುಡುತ್ತಿದ್ದ ಇಬ್ಬರನ್ನೂ ಸಮಾಧಾನಪಡಿಸಿದರು! ಹೀಗೆ ತಮ್ಮ ಪಕ್ಷದಲ್ಲೇ ನಡೆಯಬಹುದಾಗಿದ್ದ ಕಲಹವನ್ನು ಶ್ರೀಕೃಷ್ಣನು ತಪ್ಪಿಸಿದನು!

ಅಷ್ಟರಲ್ಲಿ ನಾರಾಯಣಾಸ್ತ್ರವು ತನ್ನ ಭೀಕರ ಪ್ರಭಾವನ್ನಾರಂಭಿಸಿತು! ಸರ್ಪಗಳಂಥ ಸಾವಿರಾರು ಬಾಣಗಳು, ನಕ್ಷತ್ರಗಳಂಥ ಉಕ್ಕಿನ ಚೆಂಡುಗಳು, ಗದೆಗಳು, ಚಕ್ರಗಳು, ಶತಘ್ನಿಗಳು, ಮೊದಲಾದ ವಿಧವಿಧವಾದ ಆಯುಧಗಳು ಆಕಾಶದಿಂದ ಸುರಿಯುತ್ತಾ ಪಾಂಡವ ಸೈನ್ಯವನ್ನು ದಹಿಸತೊಡಗಿತು!

ಪಾಂಡವ ಸೈನಿಕರು ಅದನ್ನು ಎದುರಿಸಿದಷ್ಟೂ ಅದು ಹೆಚ್ಚು ಹೆಚ್ಚು ಉಗ್ರವಾಗತೊಡಗಿತು! ತನ್ನ ಸೈನ್ಯಕ್ಕೆ ಮಹಾ ಆಪತ್ತೊದಗಿದುದನ್ನು ಕಂಡು ಯುಧಿಷ್ಠಿರನು ಭಯಭೀತನಾದನು! ಈಗ ಅರ್ಜುನನೂ ಸುಮ್ಮನೆ ನಿಂತಿದ್ದನು! ಇನ್ನು ಈ ಆಪತ್ತಿನಿಂದ ರಕ್ಷಣೆ ಹೇಗೆ?!

ವಿಶ್ವವನ್ನೇ ರಕ್ಷಿಸುವ ಶ್ರೀಕೃಷ್ಣನು ತನ್ನ ಪಕ್ಷವನ್ನು ರಕ್ಷಿಸನೇ?!

ಶ್ರೀಕೃಷ್ಣನು ಒಡನೆಯೇ ರಥದಿಂದಿಳಿದು ಕೈಗಳನ್ನು ಮೇಲೆತ್ತಿ ಎಲ್ಲಾ ಸೈನಿಕರನ್ನೂ ಉದ್ದೇಶಿಸಿ ಹೇಳಿದನು, “ಎಲ್ಲರೂ ನಿಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ನಿಮ್ಮ ರಥತುರಗಗಜಗಳಿಂದ ಕೆಳಗಿಳಿಯಿರಿ. ಇದೇ ನಾರಾಯಣಾಸ್ತ್ರವನ್ನು ಉಪಶಮನಗೊಳಿಸುವ ವಿಧಾನ! ಇದಕ್ಕೆ ಬೇರೆ ಪ್ರತ್ಯಸ್ತ್ರವಿಲ್ಲ! ಶ್ರೀಮನ್ನಾರಾಯಣನೇ ಇದನ್ನು ವಿಧಿಸಿದ್ದಾನೆ!”

ಎಲ್ಲರೂ ಶ್ರೀಕೃಷ್ಣನು ಹೇಳಿದಂತೆಯೇ ಮಾಡಿದರೂ ಭೀಮಸೇನನು ಮಾತ್ರ ರಥ ಹತ್ತಿ ಯುದ್ಧಕ್ಕೆ ಹೊರಟನು ಅರ್ಜುನನನ್ನೂ ಪ್ರಚೋಧಿಸಿದನು, “ಅರ್ಜುನ! ಹೀಗೆ ಹೆದರಿಕೊಂಡು ಗಾಂಡೀವವನ್ನು ಕೆಳಗಿಡದಿರು! ಅದರಿಂದ ನೀನು ಅಪಕೀರ್ತಿ ಪಡೆಯುವೆ!”

ಅರ್ಜುನನು, “ನಾನು ಗಾಂಡೀವವನ್ನು ಕೆಳಗಿಡುತ್ತಿರುವುದು ಭಯದಿ೦ದಲ್ಲ! ನಾರಾಯಣಾಸ್ತ್ರವು ಎದುರಾದಾಗ ಗಾಂಡೀವವನೆತ್ತುವುದಿಲ್ಲವೆಂಬುದು ನನ್ನ ನಿಯಮ’, ಎಂದನು.

ಆಗ ಭೀಮಸೇನನೊಬ್ಬನೇ ಯುದ್ಧ ಮಾಡಹತ್ತಲು, ನಾರಾಯಣಾಸ್ತ್ರದಿಂದ ಹೊರಟ ಬಾಣಗಳೆಲ್ಲವೂ ಅವನೊಬ್ಬನ ಮೇಲೆಯೇ ಎರಗಿದವು! ಅದು ಹೆಚ್ಚು ಉಗ್ರವಾಗತೊಡಗಿತು! ಆಗವನು ಅಗ್ನಿಯಿಂದ ಸುತ್ತುವರೆಯಲ್ಪಟ್ಟ ಮತ್ತೊಂದು ಅಗ್ನಿಯಂತೆ ಕಾಣುತ್ತಿದ್ದನು!

ಅವನ ಸುತ್ತಲಿನ ಅಗ್ನಿಯನ್ನು ಕಡಿಮೆ ಮಾಡಲು ಅರ್ಜುನನು, ವಾರಣಾಸ್ತ್ರವನ್ನು ಪ್ರಯೋಗಿಸಿದನು! ಅನಂತರ ಅವನೂ ಕೃಷ್ಣನೂ ಸೇರಿ, ಸರ್ಪದಂತೆ ನಿಟ್ಟುಸಿರು ಬಿಡುತ್ತಿದ್ದ ಭೀಮನನ್ನು ರಥದಿಂದ ಹಿಡಿದಳೆದು ಅವನ ಆಯುಧಗಳನ್ನೆಲ್ಲಾ ಕೆಳಗೆ ಹಾಕಿದರು!

“ಭೀಮ ಯುದ್ಧ ಮಾಡುವ ಹಾಗಿದ್ದಿದ್ದರೆ ನಾವೆಲ್ಲ ಮಾಡುತ್ತಿರಲಿಲ್ಲವೇ?” ಎಂದು ಕೃಷ್ಣನು ಅವನನ್ನು ತಡೆದನು. ಆಗ ನಾರಾಯಣಾಸ್ತ್ರವು ಅವನ ತಲೆಯ ಮೇಲೆ ಹಾದು ಹೋಗಿ ಶಾಂತವಾಯಿತು! ಆಗ ಕ್ಷೋಭೆಗೊಂಡಿದ್ದ ಪರಿಸರವು ತಿಳಿಯಾಯಿತು.

ಪರಿಸ್ಥಿತಿಯು ಶಾಂತವಾದ ಬಳಿಕ ಪಾಂಡವರೂ ಪಾಂಚಾಲರೂ ಯುದ್ಧಸನ್ನದ್ಧರಾಗಿ ನಿಂತರು.

“ಅಶ್ವತ್ಥಾಮಾ’, ದುರ್ಯೋಧನನು ಹೇಳಿದನು, ‘ಮತ್ತೊಮ್ಮೆ ಆ ಮಹಾಸ್ತ್ರವನ್ನು ಬೇಗನೆ ಪ್ರಯೋಗಿಸು! ಈಗ ಪಾಂಡವರು ಪುನಃ ಯುದ್ಧಸನ್ನದ್ಧರಾಗಿ ನಿಂತಿದ್ದಾರೆ!”

“ನಾರಾಯಣಾಸ್ತ್ರವನ್ನು ಒಮ್ಮೆ ಮಾತ್ರ ಪ್ರಯೋಗಿಸಬಹುದಷ್ಟೆ! ಇನ್ನೊಮ್ಮೆ ಪ್ರಯೋಗಿಸಿದರೆ ಅದು ಪ್ರೋಕ್ತೃವನ್ನೇ ದಹಿಸಿಬಿಡುತ್ತದೆ! ಶ್ರೀಕೃಷ್ಣನು ಅದರ ರಹಸ್ಯವನ್ನು ಹೊರಗೆಡವದಿದ್ದರೆ ಅದು ಇಡೀ ಪಾಂಡವಸೈನ್ಯವನ್ನೇ ದಹಿಸಿಬಿಡುತ್ತಿತ್ತು! ಈಗಲೂ ಅವರು ಆಯುಧಗಳನ್ನು ಕೆಳಗಿಟ್ಟು ಮೃತಪ್ರಾಯರಾದಂತಾಯಿತು!” ಅಶ್ವತ್ಥಾಮನೆಂದನು.

”ಹಾಗಾದರೆ ನಿನ್ನಲ್ಲಿರುವ ಇತರ ದಿವ್ಯಾಸ್ತ್ರಗಳನ್ನು ಪ್ರಯೋಗಿಸು!” ದುರ್ಯೋಧನನು ಹುರಿದಿಂಬಿಸಿದನು.

ಅಶ್ವತ್ಥಾಮನು ಆಗ ತನಗೆ ಕಾಣುತ್ತಿದ್ದ ಮತ್ತು ಕಾಣದೇ ಪರೋಕ್ಷದಲ್ಲಿದ್ದ ಎಲ್ಲಾ ಶತ್ರುಗಳನ್ನೂ ಉದ್ದೇಶಿಸಿ ಸುರರಿಂದಲೂ ಎದುರಿಸಲಶಕ್ಯವಾದ ಆಗ್ನೇಯಾಸ್ತ್ರವನ್ನು ಪ್ರಯೋಗಿಸಿದನು. ಆಗವನು ಕ್ರೋಧವೇ ಮೂರ್ತಿವೆತ್ತಂತಿದ್ದನು!

ಆಗ್ನೇಯಾಸ್ತ್ರವು ಭಯಂಕರವಾದ ಪರಿಣಾಮವನ್ನುಂಟು ಮಾಡಿತು! ಆಗಸದಿಂದ ನಿಶಿತ ಬಾಣಗಳುದುರಿದವು! ಬೆಂಕಿಯ ಜ್ವಾಲೆಯುಕ್ಕಿ ಅರ್ಜುನನನ್ನು ಆವರಿಸಿತು! ಆಕಾಶದಿಂದ ಉಲ್ಕೆಗಳು ಬೀಳುತ್ತಾ ಬಿಸಿಗಾಳಿಯು ಬೀಸುತ್ತಾ ಎಲ್ಲೆಲ್ಲೂ ಗಾಢಾಂಧಕಾರವನ್ನುಂಟುಮಾಡಿತು!

ಅದರ ಪ್ರಭಾವದಿಂದ ನದಿಸಾಗರಗಳೂ ಕೂತಕೊತನೆ ಕುದಿಯತೊಡಗಿದವು! ಸಕಲ ಪಶುಪಕ್ಷಿಗಳೂ ಭಯಂಕರವಾಗಿ ಚೀರಿದವು! ರಾಕ್ಷಸ ಪಿಶಾಚಿಗಳು ಒಟ್ಟಾಗಿ ಗರ್ಜಿಸಿದರು!

ಅರ್ಜುನನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ಆಗ್ನೇಯಾಸ್ತ್ರದಿಂದುಂಟಾಗಿದ್ದ ಗಾಢಾಂಧಕಾರವನ್ನು ತೊಲಗಿಸಿದನು! ಅಸ್ತ್ರವು ಶಾಂತವಾಗಿ ವಾತಾವರಣವು ತಿಳಿಯಾದಾಗ, ಅದರ ಭೀಕರ ಪರಿಣಾಮ ಕಂಡಿತು! ಪಾಂಡವರ ಒಂದು ಅಕ್ಷೌಹಿಣೀ ಸೈನ್ಯವೀಡಿ ಸುಟ್ಟು ಭಸ್ಮವಾಗಿತ್ತು. ಆದರೆ ಕೃಷ್ಣಾರ್ಜುನರು ಮಾತ್ರ ಕೂದಲೂ ಕೊಂಕದೇ ಪಾರಾಗಿದ್ದರು!

ಆಗ್ನೇಯಾಸ್ತ್ರವು ಅವರ ಮೇಲೆಯೇ ಬಿದ್ದು ಅವರು ಕಾಣದಂತೆ ಕತ್ತಲುಂಟು ಮಾಡಿದ್ದರಿಂದ ಅವರಿಬ್ಬರೂ ಹತರಾಗಿಬಿಟ್ಟರೆಂದೇ ಉಭಯಪಕ್ಷದವರೂ ಭಾವಿಸಿದ್ದರು! ಇದರಿಂದ ಅಶ್ವತ್ಥಾಮನು ಬಹುವಿಸ್ಮಿತನಾಗಿ ರಣರಂಗವನ್ನೇ ಬಿಟ್ಟೋಡಿದನು!

ಅಶ್ವತ್ಥಾಮನು ಹಾಗೆ ಓಡುತ್ತಿದ್ದಾಗ ವೇದವ್ಯಾಸರನ್ನು ಎದುರುಗೊಂಡನು. ಅವರ ಕಾಲಿಗೆ ಬೀಳುತ್ತಾ ಕೇಳಿದನು, ಅಸ್ತ್ರಪ್ರಯೋಗದಲ್ಲಿ ನಾನೇನಾದರೂ ತಪ್ಪಿದೆನೇ?! ಕೃಷ್ಣಾರ್ಜುನರು ಹೇಗೆ ಪಾರಾದರು?!”

”ವತ್ಸ! ಕೃಷ್ಣಾರ್ಜುನರನ್ನು ನೀನು ಯಾರೆಂದು ತಿಳಿದುಕೊಂಡಿರುವೆ?” ವ್ಯಾಸರು ಹೇಳಿದರು, “ಈ ಸೃಷ್ಟಿಗೇ ಮೂಲನಾದ ಶ್ರೀಮನ್ನಾರಾಯಣನ ಅವತಾರಗಳಾದ ನರನಾರಾಯಣ ಋಷಿಗಳೇ ಧರ್ಮಸಂಸ್ಥಾಪನೆಗಾಗಿ ಕೃಷ್ಣಾರ್ಜುನರಾಗಿ ಜನಿಸಿದ್ದಾರೆ!

ಹಿಂದಿನ ಜನ್ಮದಲ್ಲಿ ರುದ್ರದೇವನು ಅವರಿಗೆ ಯಾವ ಅಸ್ತ್ರದಿಂದಲೂ ಹಾನಿಯಾಗದಂತೆ ವರವಿತ್ತಿದ್ದಾನೆ ಕೂಡ! ಆದ್ದರಿಂದ ಕೃಷ್ಣಾರ್ಜುನರು ಯುದ್ಧದಲ್ಲಿ ಅಜೇಯರು!”

ಕೃಷ್ಣಾರ್ಜುನರ ಮಹಿಮೆಯನ್ನು ಕೇಳಿ ಅಶ್ವತ್ಥಾಮನು ವಿಷಣ್ಣನಾಗಿ ಶಿಬಿರಕ್ಕೆ ನಿರ್ಗಮಿಸಿದನು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi