ಶ್ರೀ ಮುಕುಂದ ದತ್ತರು ಗಂಗಾದಾಸರ ಪಾಠಶಾಲೆಯಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳ ಸಹಪಾಠಿಗಳಾಗಿದ್ದರು. ಅತ್ಯಂತ ಮಧುರವಾದ ಸ್ವರವನ್ನು ಹೊಂದಿದ್ದ ಅವರು ಸಂಗೀತದ ಸ್ವರ ಪ್ರಸ್ತಾರಗಳನ್ನು ಬಲ್ಲ ವಿದ್ವಾಂಸರೂ ಆಗಿದ್ದರು.

ನವದ್ವೀಪದ ವೈಷ್ಣವರಿಗೆ ಮುಕುಂದದತ್ತರ ಕಂಠದಿಂದ ಕೀರ್ತನೆಗಳನ್ನು ಕೇಳುವುದೊಂದು ಹಬ್ಬ! ಅವರು ಸದಾ ಶ್ರೀ ಚೈತನ್ಯ ಮಹಾಪ್ರಭುಗಳ ಹೃದಯವನ್ನರಿತು ಅವರ ಭಾವಕ್ಕೆ ಹೊಂದುವಂತಹ ಗೀತೆಗಳನ್ನು ಹಾಡಿ ಮಹಾಪ್ರಭುಗಳ ಮನಸ್ಸಂತೋಷಪಡಿಸುತ್ತಿದ್ದರು.
ಮಹಾಪ್ರಭುಗಳು ಸಂನ್ಯಾಸ ಸ್ವೀಕರಿಸಿದ್ದೂ ಮುಕುಂದ ದತ್ತರ ಇಂಪಾದ ಕೀರ್ತನೆಯ ನಡುವೆಯೇ.
ಮುಕುಂದ ದತ್ತರು ಭಕ್ತಿಯನ್ನು ಕರ್ಮ-ಜ್ಞಾನಗಳ ಮಟ್ಟಕ್ಕಿಳಿಸಿ ಮಾಯಾವಾದಿಗಳೊಡನೆ ಚರ್ಚಿಸುತ್ತಿದ್ದರು. ಇದರಿಂದ ಮಹಾಪ್ರಭುಗಳ ಭಕ್ತಿಸೇವೆಗೆ ಅಪರಾಧವೆಸಗಿದ ಮುಕುಂದರನ್ನು ದಂಡಿಸುವ ಸಲುವಾಗಿ ಅವರ ಹೊರತು ಉಳಿದೆಲ್ಲರನ್ನೂ ಆಶೀರ್ವದಿಸಿದರು.
ಇದರಿಂದ ನೊಂದ ಮುಕುಂದ ದತ್ತ, ಆತ್ಮಹತ್ಯೆಗೆ ಸಿದ್ಧರಾಗಿ ನಿಂತು, ಅದಕ್ಕೂ ಮುನ್ನ ಮಹಾಪ್ರಭುಗಳನ್ನು ಕುರಿತು ಎಂದಾದರೂ ತಮಗೆ ಅವರ ಕಾರುಣ್ಯ ದೊರೆಯುವುದೇ ಎಂದು ಕೇಳಿಕೊಂಡರು.

ಇದಕ್ಕೆ ಮಹಾಪ್ರಭುಗಳು ಒಂದು ಲಕ್ಷ ಜನ್ಮಗಳ ಅನಂತರ ತಮ್ಮ ಕರುಣೆ ದೊರೆಯುವುದಾಗಿ ಹೇಳಿದರು. ಈ ಮಾತಿನಿಂದ ಸಂತಸಗೊಂಡ ಮುಕುಂದ ದತ್ತರು ಉನ್ಮಾದದಿಂದ “ಕೇವಲ ಒಂದು ಲಕ್ಷ ಜನ್ಮಗಳು! ಕೇವಲ ಒಂದು ಲಕ್ಷ ಜನ್ಮಗಳು!!” ಎಂದು ಕೂಗಲಾರಂಭಿಸಿದರು.
ಅವರ ಭಕ್ತಿ ಮತ್ತು ದೃಢಚಿತ್ತವನ್ನು ಕಂಡ ಮಹಾಪ್ರಭುಗಳು ಸಂತೋಷಗೊಂಡು ಆ ಕೂಡಲೇ ಅವರೆಲ್ಲ ಅಪರಾಧಗಳನ್ನು ಮನ್ನಿಸಿ, ಆಶೀರ್ವದಿಸಿದರು.
ಶುದ್ಧ ಭಕ್ತರಾಗಿ ಬಾಳಿದ ಶ್ರೀ ಮುಕುಂದ ದತ್ತರು ಮಹಾಪ್ರಭುಗಳು ಪುರಿಯಲ್ಲಿ ನೆಲೆಸಿದ್ದಾಗ ಅತ್ಯಂತ ವಿನಮ್ರತೆಯಿಂದ ಬಹಳ ಕಾಲದವರೆಗೆ ಅವರ ಸೇವೆ ಸಲ್ಲಿಸಿದರು.






Leave a Reply