– ಆಂಗ್ಲಮೂಲ: ರವಿಗುಪ್ತಾ
ಹರೇಕೃಷ್ಣಾಂದೋಲನದ ಕೃಷ್ಣಪ್ರಜ್ಞಾವಂತ ಭಕ್ತರಿಗೆ ಮತ್ತೆ ಮತ್ತೆ ಎದುರಾಗುವ ಒಂದು ಪ್ರಶ್ನೆ, ನೀವೇಕೆ ಸದಾ ಕೃಷ್ಣಭಕ್ತಿ ಕುರಿತಾಗಿ ಮಾತ್ರ ಮಾತನಾಡುವಿರಿ?” ಎಂಬುದು. ಮತ್ತೂ ಕೇಳುವರು, ನಮ್ಮ ಸಂಪ್ರದಾಯ ಅದೆಷ್ಟು ಸಂಪದ್ಭರಿತವಾಗಿದೆ! ಜ್ಞಾನಯೋಗ, ಧ್ಯಾನಯೋಗ, ಕರ್ಮಯೋಗ, ಹಠಯೋಗ, ರಾಜಯೋಗ, ಬುದ್ಧಿಯೋಗ, ಕುಂಡಿಲಿನಿ ಯೋಗ ಹೀಗ ಹಲವಾರು ಯೋಗಮಾರ್ಗಗಳಿವೆ.

ನಿವೇಕೆ ಹಿಂದೂಧರ್ಮವನ್ನು ಭಕ್ತಿಯೋಗಕ್ಕೆ ಮಾತ್ರ ಸೀಮಿತಗೊಳಿಸುವಿರಿ? “ಗುರಿ ತಲಪಲು ಒಂದೇ ದಾರಿ” ಎನ್ನುವ ಇತರರಂತಲ್ಲದೆ, ನಮ್ಮ ಸಂಸ್ಕೃತಿಯ ಸೌಂದರ್ಯ – ಯಾವುದೇ ದಾರಿ, ಯಾವುದೇ ದೈವದ ಮೂಲಕ ಸಾಧನೆ ಮಾಡಿದರೂ ಅವೆಲ್ಲ ಮಾರ್ಗಗಳು ಒಂದೇ ಗುರಿಯತ್ತ ಕೊಂಡೊಯ್ಯುತ್ತವೆ’ ಎನ್ನುವುದರಲ್ಲಿ ಅಡಗಿದೆ’ ಎಂದು.
ಬಹುತೇಕ ಹಿ೦ದೂಧರ್ಮಿಯರು ಇಂತಹದೇ ವಾದವನ್ನು ನಮ್ಮ ಮುಂದಿಡುತ್ತಾರೆ. ಅವರೆಲ್ಲರೂ ಭಗವದ್ಗೀತೆಯ (4.11) ಶ್ಲೋಕವೊಂದರ ಆಧಾರವನ್ನು ತೋರಿಸಿ ಇದನ್ನು ಹೇಳುತ್ತಾರೆ. ಆದರೆ, ವಾಸ್ತವ ಬೇರೆಯೇ ಇದೆ. ಅವರು ಭಗವಾನ್ ಶ್ರೀಕೃಷ್ಣನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆ ಶ್ಲೋಕ ಹೀಗಿದೆ.
ಯೇ ಯಥಾ ಮಾಂ ಪ್ರಪದ್ಯನ್ತೇ ತಾಂಸ್ತದೈವ ಭಜಾಮ್ಯಹಮ್ |
ಮಮ ವರ್ತ್ಮಾನುವರ್ತನ್ತೇ ಮನುಷ್ಯಾಃ ಪಾರ್ಥ ಸರ್ವಶಃ ||

“ಯಾರು ನನಗೆ ಹೇಗೆ ಶರಣಾಗತರಾಗುತ್ತಾರೋ ಹಾಗೆ ನಾನು ಅವರಿಗೆ ಅನುಗ್ರಹಿಸುತ್ತೇನೆ. ಪಾರ್ಥನೇ, ಎಲ್ಲರೂ ಎಲ್ಲ ರೀತಿಗಳಲ್ಲೂ ನನ್ನ ಮಾರ್ಗವನ್ನೇ ಅನುಸರಿಸುತ್ತಾರೆ.”
ಇಲ್ಲಿ ಭಗವಾನ್ ಶ್ರೀಕೃಷ್ಣನು “ ನನ್ನ” ಎನ್ನುವ ಪದವನ್ನು ಉಪಯೋಗಿಸಿದ್ದಾನೆ. ಮತ್ತು “ವರ್ತ್ಮ” ಅಂದರೆ ‘ದಾರಿ’ ಎನ್ನುವ ಏಕವಚನ ಪ್ರಯೋಗ ಮಾಡಿದ್ದಾನೆ. ಇದು ಅತ್ಯಂತ ಸರಳವಾಗಿ ‘ಇರುವುದೊಂದೇ – ಕೃಷ್ಣನ ದಾರಿ’ ಎಂಬ ಅರ್ಥ ಸೂಸುತ್ತದೆ.
ನಾವೆಲ್ಲರೂ ಕೃಷ್ಣನ ದಾರಿಯಲ್ಲಿರುವವೆಂದರೆ, ನಾವು ಏನೇ ಮಾಡಿದರೂ ಅದು ಕೃಷ್ಣನತ್ತ ಕೊಂಡೊಯ್ಯುತ್ತದೆ ಎಂದು ಅರ್ಥವಲ್ಲ. ಆಧ್ಯಾತ್ಮಿಕ ಮಾರ್ಗವನ್ನು ಒಂದು ಹೆದ್ದಾರಿಯಂತೆ ಕಲ್ಪಿಸಿಕೊಳ್ಳಿ. ಅದರಲ್ಲಿ ನಾವು ಎಷ್ಟು ವೇಗವಾಗಿ ಅಭಿವೃದ್ಧಿ ಸಾಧಿಸುತ್ತೇವೆಯೋ, ಅದಕ್ಕೆ ತಕ್ಕಂತೆ ಕೃಷ್ಣನನ್ನು ಹೊಂದುತ್ತೇವೆ. ಆದರೆ ಭಗವಂತನ ಹೊರತಾಗಿ, ಸ್ಟೇಚ್ಛೆಯ ಬಯಕೆಯಿಂದ ಹೆದ್ದಾರಿಗೆ ವಿಮುಖರಾಗಿ ಇತರ ದಿಕ್ಕಿನಲ್ಲಿ ನಡೆದರೆ, ನಾವು ಮೌಢ್ಯದತ್ತ ಸಾಗುತ್ತಿದ್ದೇವೆಂದೇ ಅರ್ಥ.
ಮತ್ತು ಈ ದಾರಿಯಲ್ಲಿ ನಾವು ಯಾರನ್ನು ಆರಾಧಿಸುತ್ತೇನೆ ಎನ್ನುವುದು ಕೂಡ ಮುಖ್ಯ. ಕೃಷ್ಣನು ಭಗವದ್ಗೀತೆಯಲ್ಲಿ ಉಪದೇಶಿಸಿರುವಂತೆ (9.25) “ದೇವತೆಗಳನ್ನು ಪೂಜಿಸುವವರು ದೇವತೆಗಳ ನಡುವೆ ಹುಟ್ಟುವರು. ಪಿತೃ ಪೂಜಕರು ಪಿತೃಗಳ ಬಳಿ ಸಾಗುವರು. ಭೂತಾರಾಧಕರು ಭೂತಗಳ ಮಧ್ಯೆ ಜನಿಸುವರು. ನನ್ನನ್ನು ಪೂಜಿಸುವವರು ನನ್ನ ಬಳಿ ಬರುವರು, ನನ್ನೊಡನೆ ಇರುವರು.”

ಎಲ್ಲ ಬಗೆಯ ಆರಾಧನೆಯೂ ಒಂದೇ ಎನ್ನುವುದಾದರೆ ಭಿನ್ನ ಭಿನ್ನ ಅಂತ್ಯಗಳು ಹೇಗೆ ಒದಗುವವು? ಈ ಎಲ್ಲ ಪಥಗಳು ಆಧ್ಯಾತ್ಮಿಕ ಹೆದ್ದಾರಿಯ ಆಚೀಚೆಯ ಕವಲು ದಾರಿಗಳಂತೆ ಅವು ನಮ್ಮನ್ನು ನಮ್ಮ ಅಂತಿಮ ಗುರಿಯಿಂದ ವಿಮುಖಗೊಳಿಸಲೆಂದೇ ಇವೆ.
ಹಾಗಾದರೆ, ಭಗವದ್ಗೀತೆಯಲ್ಲಿ ವಿವರಿಸಿರುವ ಜ್ಞಾನಯೋಗ, ಧ್ಯಾನಯೋಗ, ಕರ್ಮಯೋಗ ಮೊದಲಾದ ಆಧ್ಯಾತ್ಮಿಕ ಮಾರ್ಗಗಳು ಅಂತಿಮ ಗುರಿಯತ್ತ ಕರೆದೊಯ್ಯುವುದಿಲ್ಲವೇ?
ಭಿನ್ನ ಭಿನ್ನ ಆಧ್ಯಾತ್ಮಿಕ ವಿಧಾನಗಳು ಹೆದ್ದಾರಿಯ ಮೇಲಿನ ಕಿರು ಹಾದಿಗಳಿದ್ದಂತೆ. ಅವೆಲ್ಲವೂ ಅಂತಿಮ ಗುರಿಯತ್ತಲೇ ಸಾಗುವುದಾದರೂ ಅವುಗಳ ಮೇಲಿನ ಪಯಣ ಅತ್ಯಂತ ಮಂದಗತಿಯಲ್ಲಿ ಸಾಗುವುದಷ್ಟೇ ಅಲ್ಲ. ನಮ್ಮ ಜೀವಿತಾವಧಿಯಲ್ಲಿ ಅವುಗಳಿಂದ ನಮ್ಮ ಗುರಿ ಮುಟ್ಟಲು ಸಾಧ್ಯವಾಗದು ಕೂಡ. ಆ ಪಥಗಳೆಲ್ಲವೂ ಅಂತಿಮ ಗುರಿಯ ಬಳಿ ಬರುವಾಗ ಒಂದಕ್ಕೊಂದು ವಿಲೀನಗೊಂಡು ಶ್ರೀಕೃಷ್ಣನಿಗೆ ಭಕ್ತಿಸೇವೆ ಸಲ್ಲಿಸುವ ‘ಭಕ್ತಿಯೋಗ’ದಲ್ಲಿ ಒಂದಾಗಿ ಹೋಗುವವು.
ಎಲ್ಲಾ ಆಧ್ಯಾತ್ಮಿಕ ಕ್ರಿಯೆಗಳ ಅಂತಿಮ ಗುರಿ ತಾನೇ ಎಂಬುದಾಗಿ ಸ್ವತಃ ಶ್ರೀಕೃಷ್ಣನೇ ಘೋಷಿಸಿಕೊಂಡಿದ್ದಾನೆ. ಧ್ಯಾನಯೋಗ ಮಾಡುವವರನ್ನು ಕುರಿತು ಆತನು, ಪ್ರತಿಯೊಬ್ಬನು ನನ್ನನ್ನೇ ಕುರಿತು ಧ್ಯಾನ ಮಾಡಬೇಕು ಮತ್ತು ನನ್ನನ್ನೇ ಜೀವನದ ಅಂತಿಮ ಗುರಿಯನ್ನಾಗಿ ಸ್ವೀಕರಿಸಬೇಕು ಎಂದು ಹೇಳಿದ್ದಾನೆ. ಕರ್ಮಯೋಗಿಗಳಿಗೆ, “ಓ ಕುಂತೀಪುತ್ರ, ನೀನು ಏನೇ ಮಾಡಿದರೂ, ಏನನ್ನೆ ತಿಂದರೂ, ದಾನ ಮಾಡಿದರೂ, ಯಾವ ಯಜ್ಞವನ್ನೇ ಮಾಡಿದರೂ ಅವೆಲ್ಲವನ್ನು ನನಗೆ ಸಮರ್ಪಿಸಿಯೇ ಮಾಡು” ಎಂದಿರುವನು.
ಜ್ಞಾನಯೋಗವನ್ನು ಅನುಸರಿಸುವವರಿಗೆ, ‘ಜನ್ಮಜನ್ಮಾಂತರ ಕಳೆದ ಬಳಿಕ, ಜ್ಞಾನಿಯಾದವನು ಸಕಲ ಕಾರಣ ಕಾರಣನು ನಾನೇ ಎಂಬುದನ್ನರಿತು ನನಗೆ ಶರಣಾಗುತ್ತಾನೆ” ಎಂದು ಹೇಳಿದ್ದಾನೆ. ಅಲ್ಲದೆ, ಯಾರು ವೈದಿಕ ಯಾಗಯಜ್ಞಗಳನ್ನು ನಡೆಸಬಯಸುವರೋ, ಅವರೆಲ್ಲರಿಗೂ ತಾನೇ ಅಂತಿಮ ಗುರಿಯೆಂದೂ ಯಜ್ಞಫಲಗಳನ್ನು ಕರುಣಿಸುವವನೂ ತಾನೇ ಎಂದೂ ಸ್ಪಷ್ಟ ಪಡಿಸಿದ್ದಾನೆ.

ಕೃಷ್ಣನು ಎಲ್ಲ ಆಧ್ಯಾತ್ಮಿಕ ಪ್ರಕ್ರಿಯೆಗಳ ಗುರಿ ತಾನೇ ಎಂದು ದೃಢೀಕರಿಸಿದ್ದರೂ ತನ್ನನ್ನು ಭಕ್ತಿಯೋಗ ದಿಂದ ಮಾತ್ರ ಹೊಂದಲು ಸಾಧ್ಯ ಎಂದು ಸ್ಪಷ್ಟಪಡಿಸಿದ್ದಾನೆ.
“ನನ್ನನ್ನು ನಾನು ಇರುವಂತೆಯೇ – ದೇವೋತ್ತಮ ಪರಮ ಪುರುಷನೆಂದೇ ಭಕ್ತಿಸೇವೆಯ ಮೂಲಕ ಅರ್ಥೈಸಿಕೊಳ್ಳಬೇಕು. ಈ ಬಗೆಯ ಭಕ್ತಿಯಿಂದ ಯಾರು ಪರಿಪೂರ್ಣ ಪ್ರಜ್ಞೆಯನ್ನು ಹೊಂದುವರೋ ಅವರು ನನ್ನ ಲೋಕಕ್ಕೆ ಪ್ರವೇಶ ಪಡೆಯುವರು.’ (ಭ.ಗೀ.18:54)
ಜೊತೆಗೆ ಶ್ರೀಕೃಷ್ಣನು ನಾನಾ ವಿಧದಲ್ಲಿ ಆಧ್ಯಾತ್ಮಿಕ ಜ್ಞಾನ ಪಡೆಯುವ ಪ್ರಕ್ರಿಯೆಯಲ್ಲಿ ತೊಡಗಿರುವ ಯೋಗಿಗಳೆಲ್ಲರಿಗಿಂತ ಭಕ್ತನಾದವನು ತನಗೆ ಹೆಚ್ಚು ಹತ್ತಿರವೆ೦ದೂ, ಪ್ರಿಯವೆಂದೂ ಹೇಳಿಕೊಂಡಿದ್ದಾನೆ. ಇದನ್ನು ನಾವು ಭಗವದ್ಗೀತೆಯ 6ನೇ ಅಧ್ಯಾಯದ ಅಂತ್ಯದಲ್ಲಿ ಕಾಣಬಹುದು.
ಸ್ವತಃ ಪರಮಪ್ರಭು ಶ್ರೀಕೃಷ್ಣನೇ ಎಲ್ಲ ಆಧ್ಯಾತ್ಮಿಕ ಮಾರ್ಗಗಳ ಗುರಿ ತಾನೇ ಆಗಿದ್ದರೂ ತನ್ನನ್ನು ಭಕ್ತಿಸೇವೆಯ ಮೂಲಕ ಮಾತ್ರ ಪಡೆಯಬಹುದೆಂದು ಹೇಳಿರುವುದರಿಂದ, ಉಳಿದೆಲ್ಲ ಮಾರ್ಗಗಳು ಭಕ್ತಿಸೇವೆಯ ಉನ್ನತ ಹಂತಕ್ಕೆ ವ್ಯಕ್ತಿಯನ್ನು ಕರೆದೊಯ್ಯಬೇಕು.
ಭಕ್ತಿಮಾರ್ಗವು ಇಂತಹ ವ್ಯಕ್ತಿಯನ್ನು ಕೃಷ್ಣನೆಡೆಗೆ ಆತ್ಯಂತಿಕ ಆಧ್ಯಾತ್ಮಿಕ ಗುರಿಯೆಡೆಗೆ ಮುನ್ನಡೆಸುತ್ತದೆ. ಯೋಗದ ಇತರ ರೀತಿಗಳು ವ್ಯಕ್ತಿಯನ್ನು ಭಗವತ್ಸೇವೆಗೆ ತೊಡಗಿಸಿದರೆ ಮಾತ್ರ ಅದು ಸಾರ್ಥಕವಾಗುತ್ತದೆ.






Leave a Reply