ಹಲಸಿನ ಹಣ್ಣಿನ ವಿಶೇಷ ಭಕ್ಷ್ಯಗಳು

ಕೃಷ್ಣ ಪಾಕಶಾಲೆ

– ಎಸ್‌.ವಿ.ಗಾಯತ್ರಿ ಶೆಣೈ

ಹಲಸಿನ ಹಣ್ಣಿನ ಇಡ್ಲಿ (ಪೊಣಸಾ ಮುದ್ದೊ)

ಬೇಕಾಗುವ ಪದಾರ್ಥ:

ಹಲಸಿನ ಹಣ್ಣಿನ ತೊಳೆಗಳು – 20-25

ಅಕ್ಕಿ ರವೆ – 1 1/2 ಬಟ್ಟಲು

ತೆಂಗಿನ ತುರಿ – 1 1/2 ಬಟ್ಟಲು

ಬೆಲ್ಲದ ಪುಡಿ – 1 ಬಟ್ಟಲು

ಏಲಕ್ಕಿ ಪುಡಿ – 1 1/2 ಚಿಕ್ಕ ಚಮಚ

ತುಪ್ಪ – 2 ದೊಡ್ಡ ಚಮಚ

ಗೋಡಂಬಿ – 10-15

ಮಾಡುವ ವಿಧಾನ : ಅಕ್ಕಿಯನ್ನು 2-3 ಬಾರಿ ತೊಳೆದು ಬಸಿಯಿರಿ. ನೀರೆಲ್ಲಾ ಆರಿದನಂತರ ಮಿಕ್ಸಿಯಲ್ಲಿ ಅಥವಾ ಒರಳಲ್ಲಿ ತರಿತರಿಯಾದ ರವೆ ಮಾಡಿಟ್ಟುಕೊಳ್ಳಿ. ಬೆಲ್ಲವನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ.

ಅನಂತರ ಮಿಕ್ಸಿಯಲ್ಲಿ ಬೆಲ್ಲದ ಪುಡಿ ತೆಂಗಿನಕಾಯಿ ತುರಿ ಮತ್ತು ಏಲಕ್ಕಿ ಪುಡಿಯನ್ನು ರುಬ್ಬಿ, ತೆಂಗಿನ ತುರಿ ನುಣ್ಣಗಾಗುವ ಮೊದಲು ಬೀಜ ತೆಗೆದ ಹಲಸಿನ ತೊಳೆಗಳನ್ನು ಹಾಕಿ ಚೆನ್ನಾಗಿ ರುಬ್ಬಿ. ರುಬ್ಬಿದ ಹಲಸಿನ ತಿರುಳನ್ನು ಅಕ್ಕಿ ರವೆಯೊಂದಿಗೆ ಬೆರೆಸಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ.

ಈ ಇಡ್ಲಿ ಹೂರಣವನ್ನು ಸಾಮಾನ್ಯವಾಗಿ ಅರಿಶಿನ ಎಲೆಯ ಮೇಲೆ ಹಾಕಿ, ಸುತ್ತಿ ಕಡುಬಿನಂತೆ ಬೇಯಿಸುತ್ತಾರೆ. ಇಲ್ಲದಿದ್ದಲ್ಲಿ ಇಡ್ಲಿ ತಟ್ಟೆಗೆ ತುಪ್ಪ ಸವರಿ ಹಿಟ್ಟನ್ನು ಹಾಕಿ, ಅನಂತರ ಅದರ ಮೇಲೆ ಒಂದೊಂದು ಗೋಡಂಬಿಯನ್ನಿಟ್ಟು 20-25 ನಿಮಿಷ ಹಬೆಯಲ್ಲಿ ಬೇಯಿಸಿ. ಇಡ್ಲಿ ಸಂಪೂರ್ಣವಾಗಿ ಬೆಂದಿದೆ ಎಂದಾಗ ಹಲಸಿನ ಹಣ್ಣಿನ ಪರಿಮಳ ಬರುವುದು.

ಹಲಸಿನ ಹಣ್ಣಿನ ದೋಸೆ

ಬೇಕಾಗುವ ಪದಾರ್ಥ:

ಹಲಸಿನ ಹಣ್ಣಿನ ತೊಳೆ – 15

ಬೆಲ್ಲದ ಪುಡಿ / ಸಕ್ಕರೆ – 1 ಚಿಕ್ಕ ಬಟ್ಟಲು

ಅಕ್ಕಿ – 1 ಬಟ್ಟಲು

ಏಲಕ್ಕಿ – 2-3

ತುಪ್ಪ – ದೋಸೆ ತೆಗೆಯಲು ಅಗತ್ಯವಿರುವಷ್ಟು

ಮಾಡುವ ವಿಧಾನ: ಅಕ್ಕಿಯನ್ನು ಸುಮಾರು ಒಂದು ತಾಸು ನೆನೆಹಾಕಿ. ಅಕ್ಕಿ ಏಲಕ್ಕಿ ಹಾಗೂ ಬೆಲ್ಲದ ಪುಡಿಯನ್ನು ಒಟ್ಟಿಗೆ ಹಾಕಿ ರುಬ್ಬಿ, ಅದು ನುಣ್ಣಗಾಗುವ ಮೊದಲು ಹಲಸಿನ ಹಣ್ಣಿನ ತೊಳೆಗಳನ್ನು (ಸಿಹಿಯಾಗಿದ್ದಲ್ಲಿ 12-15 ಹಾಕಬಹುದು. ಇಲ್ಲದಿದ್ದಲ್ಲಿ 15-20 ತೊಳೆಗಳನ್ನು ಹಾಕಿ) ಸೇರಿಸಿ ಚೆನ್ನಾಗಿ ರುಬ್ಬಿ ದೋಸೆ ಹಿಟ್ಟಿನ ಹದಕ್ಕೆ ಮಾಡಿ.

ಅನಂತರ ದೋಸೆ ಕಾವಲಿಯನ್ನು ಬಿಸಿಮಾಡಿ ತುಪ್ಪ ಹಚ್ಚಿ ಅದರ ಮೇಲೆ ದೋಸೆಹೊಯ್ದು ಎರಡು ಕಡೆ ಮಗುಚಿ ತುಪ್ಪ ಹಾಕಿ ಬೇಯಿಸಿ. ಇದನ್ನು ಜೇನು ತುಪ್ಪ ಹಚ್ಚಿ ತಿನ್ನಬಹುದು. ಅದಕ್ಕೂ ಮೊದಲು ಶ್ರೀರಾಧಾ ಕೃಷ್ಣರಿಗರ್ಪಿಸಿ ಸೇವಿಸಿ.

ಹಲಸಿನ ಬೀಜದ ಕಟ್ಲೇಟ್

ಬೇಕಾಗುವ ಪದಾರ್ಥ :

ಹಲಸಿನಕಾಯಿ ಬೀಜ – 20-25

ಆಲೂಗಡ್ಡೆ – 100 ಗ್ರಾಂ

ಹಸಿಮೆಣಸಿನ ಕಾಯಿ – 3-4/ರುಚಿಗೆ ತಕ್ಕಷ್ಟು

ಕರಿಬೇವು – 2 ಎಸಳು

ಧನಿಯಾ ಪುಡಿ – 1 ದೊಡ್ಡ ಚಮಚ

ಅರಿಶಿನ ಪುಡಿ – 1/2 ಚಿಕ್ಕ ಚಮಚ

ಶುಂಠಿ ರಸ – I ಚಿಕ್ಕ ಚಮಚ

ಅಚ್ಚ ಮೆಣಸಿನಕಾಯಿ ಪುಡಿ – 1/2 ಚಿಕ್ಕ ಚಮಚ (ರುಚಿಗೆ ತಕ್ಕಷ್ಟು)

ಗರಂ ಮಸಾಲೆ ಪುಡಿ – 1/4 ಚಿಕ್ಕ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಕಡಲೆ ಹಿಟ್ಟು – 1 1/2 ಬಟ್ಟಲು

ಅಕ್ಕಿ ಹಿಟ್ಟು -1/4 ಬಟ್ಟಲು

ಬ್ರೆಡ್ ತುಂಡುಗಳು – ಅಗತ್ಯವಿರುವಷ್ಟು (ಮೊಟ್ಟೆಯನ್ನು ಉಪಯೋಗಿಸಿಲ್ಲದ್ದು)

ಅಡಿಗೆ ಎಣ್ಣೆ- ಒಗ್ಗರಣೆಗೆ ಮತ್ತು ಕರಿಯಲು ಬೇಕಾಗುವಷ್ಟು

ಮಾಡುವ ವಿಧಾನ : ಹಲಸಿನ ಬೀಜ ಹಾಗೂ ಆಲೂಗಡ್ಡೆಯ ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಬೇಯಿಸಿ, ಆರಿದನಂತರ ಮಿಕ್ಸಿಯಲ್ಲಿ ಹೆಚ್ಚು ನೀರು ಸೇರಿಸದೇ ರುಬ್ಬಿಕೊಳ್ಳಿ.

ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ, ಸಣ್ಣ ಉರಿಯಲ್ಲಿ ಹಸಿಮೆಣಸಿನಕಾಯಿ ಚೂರು, ಕರಿಬೇವು ಒಗ್ಗರಣೆ ಮಾಡಿಕೊಂಡು, ಅದಕ್ಕೆ ಗರಂಮಸಾಲೆ ಪುಡಿ, ಧನಿಯಾ ಪುಡಿ, ಅರಿಶಿನ ಪುಡಿ, ಅಚ್ಚ ಮೆಣಸಿನಪುಡಿ ಹಾಕಿ ಹುರಿದು, ಸ್ವಲ್ಪ ಪರಿಮಳ ಬಂದಕೂಡಲೇ ಶುಂಠಿರಸ ಸೇರಿಸಿ, ಜೊತೆಗೆ ರುಬ್ಬಿಟ್ಟ ಆಲೂ ಹಲಸಿನ ಬೀಜದ ಹೂರಣವನ್ನು ಎಣ್ಣೆಯಲ್ಲಿ 5-6 ನಿಮಿಷ ಹುರಿಯಿರಿ.

ಅನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಸಣ್ಣ ಕಟ್ಲೇಟ್ ಗಳನ್ನಾಗಿ ಮಾಡಿ (ಬಿಲ್ಲೆಯಾಕಾರದಲ್ಲಿ ಕಟ್ಲೇಟ್ ತೆಳುವಾಗಿರದೇ ಸ್ವಲ್ಪ ದಪ್ಪವಾಗಿರಲಿ)

ಮತ್ತೊಂದು ಪಾತ್ರೆಯಲ್ಲಿ ಜರಡಿ ಹಿಡಿದ ಕಡ್ಲೆ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಇಂಗಿನಪುಡಿ ಹಾಕಿ ಬೋಂಡದ ಹಿಟ್ಟಿನ ಹದಕ್ಕೆ ಬರುವಷ್ಟು ನೀರು ಸೇರಿಸಿ ಕಲಸಿ ಹಾಗೂ ಬ್ರೆಡ್‌ ಚೂರುಗಳನ್ನು ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿಟ್ಟುಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅನಂತರ ಒಂದೊಂದೇ ಕಟ್ಲೇಟ್ಟನ್ನು ಕಡಲೆ ಹಿಟ್ಟಿನ ದ್ರಾವಣದಲ್ಲಿ ಹೊರಳಿಸಿ ತೆಗೆದು ಅದರ ಮೇಲೆ ಬ್ರೆಡ್ ಪುಡಿ ಉದುರಿಸಿ ಕರಿದು ತೆಗೆಯಿರಿ.

ಬೇಕಾದರೆ ಕಟ್ಲೇಟನ್ನು ಚಪಾತಿಯ ತವೆಯ ಮೇಲೆ (ಕಡಲೆ ಹಿಟ್ಟಿನ ದ್ರಾವಣದಲ್ಲಿ ಹಾಕದೇ) ಬರಿಯ ಬ್ರೆಡ್‌ ಪುಡಿಯಲ್ಲಿ ಹೊರಳಿಸಿ ತೆಗೆದು ಸ್ವಲ್ಪ ಸ್ವಲ್ಪ ಎಣ್ಣೆಯನ್ನು ಎರಡೂ ಬದಿಗೂ ಹಚ್ಚಿ ಹುರಿಯಬಹುದು. ಶ್ರೀರಾಧಾಕೃಷ್ಣರಿಗರ್ಪಿಸಿ ನೀವೂ ಸ್ವಲ್ಪ ಬಿಸಿಯಾಗಿರುವಾಗಲೇ ಸ್ವೀಕರಿಸಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi