ಆಧುನಿಕ ಸಮಾಜದ ಆರ್ಥಿಕತೆಗೊಂದು ಆಧ್ಯಾತ್ಮಿಕ ದೃಷ್ಟಿಕೋನ
– ಆಂಗ್ಲಮೂಲ : ಹರೇಕೃಷ್ಣ ದೇವಿ ದಾಸಿ
ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಪ್ರಮುಖವಾಗಿ ದೇಹ ಮತ್ತು ಆತ್ಮಗಳ ನಡುವಿನ ವ್ಯತ್ಯಾಸವನ್ನು ಕುರಿತು ಹೇಳಿರುವನು. “ಐಹಿಕ ದೇಹದ ನಾಶವು ಸ್ವಭಾವ ಸಿದ್ಧವಾದದ್ದು, ಅದನ್ನು ಅನಿಶ್ಚಿತ ಕಾಲದವರೆಗೆ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಆತ್ಮವು ಜನ್ಮರಹಿತವಾದದ್ದು ನಿತ್ಯವಾದದ್ದು, ಶಾಶ್ವತವಾದದ್ದು ಮತ್ತು ಪುರಾತನವಾದದ್ದು” (ಭ.ಗೀ.2.18,2.20) ಎಂದು ಶ್ರೀ ಕೃಷ್ಣನು ಭಗವದ್ಗೀತೆಯುದ್ದಕ್ಕೂ ಸಾರಿರುವನು.

ಭಗವದ್ಗೀತೆಯಿಂದ ನಾವು ಶರೀರವು (ಸ್ಥೂಲ-ಸೂಕ್ಷ್ಮ) ತಾತ್ಕಾಲಿಕವೂ, ಭೌತಿಕ ಶಕ್ತಿಯಿಂದಗೂಡಿರುವಂಥದ್ದೂ ಆಗಿದೆ ಎಂದೂ; ಆತ್ಮವು ಪಾರಮಾರ್ಥಿಕ – ಆಧ್ಯಾತ್ಮಿಕ ಶಕ್ತಿಯಿಂದೊಡಗೂಡಿದೆ ಎಂದೂ ಅರಿತಿರುವೆವು. ‘ನಾವೆಲ್ಲರೂ ಪರಮಪ್ರಭುವಿನ ಪ್ರೀತಿಪಾತ್ರ ಸೇವಕರು’ ಎಂಬ ನಮ್ಮ ಅಸ್ತಿತ್ವವನ್ನು ನಾವು ಮನಗಂಡಷ್ಟೂ ಆಧ್ಯಾತ್ಮಿಕ ಸ್ತರದಲ್ಲಿ ಬಡ್ತಿಯನ್ನು ಪಡೆಯುತ್ತ ಹೋಗುವೆವು.
ಆಧ್ಯಾತ್ಮಿಕ ಪ್ರಗತಿಗೆ ಬಹು ಮುಖ್ಯವಾಗಿ ಬೇಕಾಗಿರುವ ಮತ್ತೊಂದು ಅಂಶವೆಂದರೆ, ಅದು – ನಮ್ಮ ದೈಹಿಕ ಬಯಕೆಗಳನ್ನು ಕಡಿಮೆ ಮಾಡಿಕೊಳ್ಳುವುದು. ಏಕೆಂದರೆ ಈ ಬಯಕೆಗಳು ನಮ್ಮ ಭೌತಿಕ ಅಸ್ತಿತ್ವವನ್ನು ಹೆಚ್ಚು ಪ್ರಕಟಗೊಳ್ಳುವಂತೆ ಮಾಡಿ, ನಮ್ಮನ್ನು ನಮ್ಮ ನೈಜ- ಆಧ್ಯಾತ್ಮಿಕ ಅಸ್ತಿತ್ವದಿಂದ ದೂರೀಕರಿಸುತ್ತವೆ.
ಹೀಗೆ ಆಧ್ಯಾತ್ಮಿಕ ಪ್ರಗತಿ ಪಥದಲ್ಲಿ ದೈಹಿಕ ಬಯಕೆಗಳನ್ನು ಕಡಿಮೆ ಮಾಡಿಕೊಳ್ಳಬೇಕೆಂಬ ಸೂಚನೆಯನ್ನು ಬಹುತೇಕ ಎಲ್ಲ ಪ್ರಮುಖ ಧರ್ಮಗಳೂ ಬೋಧಿಸುತ್ತವೆ. ಹೀಗೆ ನಮ್ಮ ಆಧ್ಯಾತ್ಮಿಕ ಬೋಧನೆಗಳು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ದೈಹಿಕ ಬಯಕೆಗಳನ್ನು ತಗ್ಗಿಸಿಕೊಳ್ಳುವಂತೆ ಹೇಳಿದರೂ, ನಮ್ಮ ಈಗಿನ ಜೀವನದ ಅಭ್ಯಾಸಗಳು ಇದಕ್ಕಿಂತ ಸಂಪೂರ್ಣ ವಿರುದ್ಧವಾದ ಮತ್ತೊಂದನ್ನು ಸಾರುತ್ತ ಬಂದಿವೆ.
ಅದರಂತೆ, ನಾವು ಐಹಿಕ ಸಂಪತ್ತನ್ನು ಹೆಚ್ಚು ಹೆಚ್ಚು ಹೊಂದಿರುವಷ್ಟೂ ಹೆಚ್ಚು ಯಶಸ್ವಿ ಮನುಷ್ಯರಾಗಿ ಗುರುತಿಸಲ್ಪಡುತ್ತೇವೆ! ಇದು ಜಗತ್ತಿನ ಬಹುತೇಕ ಭಾಗಗಳಲ್ಲಿ ಚಾಲ್ತಿಯಲ್ಲಿರುವ ಸಮಾಜೋ ಆರ್ಥಿಕ ಪರಿಸ್ಥಿತಿ ಎಂದರೆ ತಪ್ಪಾಗಲಾರದು.
ಆಧುನಿಕ ಆರ್ಥಿಕತೆಯ ಮೂಲ ಅಂಶಗಳು :
ಆರ್ಥಿಕ ತಜ್ಞರು ಆರ್ಥಿಕತೆಯನ್ನು ಸಾಮಾಜಿಕ ಜೀವನದೊಂದಿಗೆ ತಳಕು ಹಾಕುವ ಸೂತ್ರವನ್ನು ವಿವರಿಸುತ್ತಲೇ ಬಂದಿದ್ದಾರೆ. ಅವರು ಹೇಳುವಂತೆ, ”ಅರ್ಥ ಶಾಸ್ತ್ರವು ಜಗತ್ತಿನ ಅನಿಯಮಿತ ಬಯಕೆಗಳನ್ನು ಹೇಗೆ ಪೂರೈಸಬೇಕು ಎನ್ನುವುದರ ಕುರಿತಾದ ಅಧ್ಯಯನವಾಗಿದೆ.”
“ಅನಿಯಮಿತ ಬಯಕೆ!” ಅವರು ಅನಿಯಮಿತ ಬಯಕೆಗಳ ಬಗ್ಗೆ ಮಾತನಾಡುತ್ತಾರೆ. ಹೌದು, ಮಾನವನ ಬಯಕೆಗಳಿಗೆ, ದೈಹಿಕ ಬಯಕೆಗಳಿಗೆ ಮಿತಿಯೆಂಬುದಿಲ್ಲ. ಸಾಮಾಜಿಕ ವ್ಯವಸ್ಥೆಯು ತನ್ನ ಸದಸ್ಯರ ಮಿತಿಯಿಲ್ಲದ ಬಯಕೆಗಳನ್ನು ಪೂರೈಸುವುದರಲ್ಲಿ ತಲ್ಲೀನವಾಗಿ ಹೋದರೆ, ಇನ್ನು ಆಧ್ಯಾತ್ಮಿಕ ಪ್ರಗತಿಯ ಬಗ್ಗೆ ಹೇಳಲೇನಿದೆ? ಇದಕ್ಕೆ ಉತ್ತರ, ‘ಆಧ್ಯಾತ್ಮಿಕ ಪ್ರಗತಿ’ ಯ ಚಿಂತನೆಯನ್ನೇ ಕೈಬಿಡಬೇಕಾದೀತು ಎಂಬುದಷ್ಟೆ!
ಶ್ರೀಲ ಪ್ರಭುಪಾದರ ಬೋಧನೆಗಳಲ್ಲಿ ಆರ್ಥಿಕತೆಗೆ ಸಂಬಂಧಿಸಿದಂತೆ ನಮಗೆ ಹಲವು ಸ್ಪಷ್ಟ ನಿರ್ದೇಶನಗಳು ದೊರಕುತ್ತವೆ. ಉದಾಹರಣೆಗೆ, ಅರ್ಥಶಾಸ್ತ್ರಜ್ಞರು ವಸ್ತುಗಳ ಬೇಡಿಕೆ ಮತ್ತು ದರ ಏರಿಕೆಗಳ ಸಂಬಂಧ ಕಲ್ಪಿಸುವ ಗ್ರಾಫ್ ಅನ್ನು ರಚಿಸುತ್ತಾರೆ. ಅದರಂತೆ, ದರವು ‘0’ ಯಾಗಿದ್ದಾಗ ಪೂರೈಕೆಯೂ ಸೊನ್ನೆಯೇ ಆಗಿರುತ್ತದೆ.
ದರವು ಹೆಚ್ಚಿದಂತೆಲ್ಲ ಹಚ್ಚು ಹೆಚ್ಚು ಉತ್ಪಾದಕರು ಪೂರೈಕೆಗೆ ಮುಂದಾಗುತ್ತಾರೆ. ಆದರೆ ಮಾರಾಟ ದರವು ಮಿತಿ ಮೀರಿದರೆ ಬೇಡಿಕೆಯು ಕುಗ್ಗುತ್ತ ಹೋಗುತ್ತದೆ. ಮತ್ತೆ ದರದಲ್ಲಿನ ಇಳಿಕೆ, ಬೇಡಿಕೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಉತ್ಪಾದಕರು (ಅಥವಾ ಸರ್ಕಾರ) ಬೇಡಿಕೆಯ ಗ್ರಾಫ್ ಕೆಳಮುಖವಾಗಿ ಚಲಿಸುವುದನ್ನು ತಡೆಗಟ್ಟಲು ಹೆಚ್ಚು ಹೆಚ್ಚು ಪ್ರಮಾಣದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುತ್ತಾರೆ ಮತ್ತು ಅತಿಹೆಚ್ಚಿನ ಲಾಭವನ್ನು ಗಳಿಸುತ್ತಾರೆ.
ಉತ್ಪಾದಕನ ಪಾಲಿಗೆ ಆತನು ತನ್ನ ಉತ್ಪನ್ನವನ್ನು ಹೆಚ್ಚು ಪ್ರಮಾಣದಲ್ಲಿ ಮಾರಾಟ ಮಾಡಿದರೆ ಲಾಭವಾಗುತ್ತದೆ. ಸರ್ಕಾರದ GDP (Gross Domestic Product) ಏರಿಕೆಯು ತನ್ನ ಪ್ರಜೆಗಳ ಭೌತಿಕ ಜೀವನ ಮಟ್ಟವನ್ನು ಸೂಚಿಸುತ್ತದೆ.
ಆದರೆ ಆಧ್ಯಾತ್ಮದ ಪರಿಣತರು ಈ ಬಗ್ಗೆ ಹೇಳುವುದೇನು? ಈ ಏರಿಕೆಯನ್ನು ಕುರಿತು ಅವರು, ದೈಹಿಕ ಬಯಕೆಗಳು ಏರಿದಂತೆಲ್ಲ ಆಧ್ಯಾತ್ಮ ಪ್ರಗತಿ ಕುಂಠಿತಗೊಳ್ಳುತ್ತ ಸಾಗುತ್ತದೆ ಎಂದು ವ್ಯಾಖ್ಯಾನಿಸುತ್ತಾರೆ. ಏಕೆಂದರೆ ಬೇಡಿಕೆಯ ಗ್ರಾಫ್ ಕುಗ್ಗದಿರುವಂತೆ ಮಾಡುವುದು ದೈಹಿಕ ಬೇಡಿಕೆಗಳನ್ನು ಸೃಷ್ಟಿಸುವುದರಿಂದ ಮಾತ್ರ ಸಾಧ್ಯ. ಈ ಬಗೆಯ ಅನಗತ್ಯ ಭೌತಿಕ ಬೇಡಿಕೆಗಳು ಹೆಚ್ಚಿದಷ್ಟೂ ಆಧ್ಯಾತ್ಮಿಕ ಪ್ರಗತಿ ಹಿಮ್ಮುಖವಾಗಿ ಚಲಿಸುತ್ತ ಹೋಗುತ್ತದೆಯಲ್ಲವೆ?

ಶ್ರೀ ಪ್ರಭುಪಾದರ ವ್ಯಾಖ್ಯಾನ :
ತಾನು ಪಡೆಯಬೇಕಾದ್ದು ಏನೂ ಇಲ್ಲವೆಂಬ ಭಾವನೆ ಬಂದೊಡನೆಯೇ ಜೀವಿ ಮುಗಿದಂತೆಯೇ ಸರಿ. ನಿಜವಾದ ಅರ್ಥದಲ್ಲಿ ಮಾನವ ಜೀವಿ ಪರಿತ್ಯಾಗಿಯಾಗಲಾರ. ಮತ್ತೊಂದು ಅಮೂಲ್ಯವಾದದ್ದನ್ನು ಪಡೆಯಲೆಂದೇ ಅವನು ಇರುವ ಒಂದನ್ನು ತ್ಯಜಿಸುತ್ತಾನೆ. ಒಬ್ಬ ವಿದ್ಯಾರ್ಥಿ ಒಳ್ಳೆಯ ಶಿಕ್ಷಣವನ್ನು ಪಡೆಯುವ ಸಲುವಾಗಿ ತನ್ನ ಬಾಲಿಶ ಆಸಕ್ತಿಗಳನ್ನು ತೊರೆದುಬಿಡುತ್ತಾನೆ.
ಒಬ್ಬ ಚಾಕರ ಈಗಿರುವುದಕ್ಕಿಂತ ಉತ್ತಮವಾದ ಕೆಲಸವನ್ನು ಪಡೆಯುವ ಸಲುವಾಗಿ ಈಗಿರುವ ಕೆಲಸವನ್ನು ಬಿಟ್ಟು ಬಿಡುತ್ತಾನೆ. ಹೀಗೆಯೇ ಒಬ್ಬ ಭಕ್ತ ಆಧ್ಯಾತ್ಮಿಕ ಮೌಲ್ಯದಲ್ಲಿ ಹಿಡಿತಕ್ಕೆ ಸಿಕ್ಕುವುದನ್ನು ಪಡೆಯುವ ಸಲುವಾಗಿಯಲ್ಲದೆ ಸುಮ್ಮನೆ ಐಹಿಕ ಜಗತ್ತನ್ನು ಪರಿತ್ಯಜಿಸುವುದಿಲ್ಲ. ಶ್ರೀಲ ರೂಪಗೋಸ್ವಾಮಿ, ಸನಾತನಗೋಸ್ವಾಮಿ ಮತ್ತು ಶ್ರೀಲ ರಘುನಾಥ ದಾಸ ಮೊದಲಾದವರು ಭಗವತ್ ಸೇವೆಗಾಗಿ ತಮ್ಮ ಐಹಿಕ ಸುಖ ಸಂಪತ್ತುಗಳನ್ನು ತ್ಯಾಗ ಮಾಡಿದರು.
ಲೌಕಿಕ ಅರ್ಥದಲ್ಲಿ ಅವರು ದೊಡ್ಡ ಮನುಷ್ಯರಾಗಿದ್ದರು. ಗೋಸ್ವಾಮಿಗಳು ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಮಂತ್ರಿಗಳಾಗಿದ್ದರು. ಶ್ರೀಲ ರಘುನಾಥದಾಸ ಗೋಸ್ವಾಮಿಯವರು ಆ ಕಾಲದ ಒಬ್ಬ ಬಹುದೊಡ್ಡ ಜಮೀನ್ದಾರರ ಮಗನಾಗಿದ್ದರು. ಆದರೆ ಅವರು ತಾವು ಹಿಂದೆ ಪಡೆದದ್ದಕ್ಕಿಂತ ಮಿಗಿಲಾದದ್ದನ್ನು ಪಡೆಯುವ ಸಲುವಾಗಿ ಎಲ್ಲವನ್ನೂ ತ್ಯಾಗ ಮಾಡಿದರು.
ಭಕ್ತರು ಸಾಮಾನ್ಯವಾಗಿ ಐಹಿಕ ಸಂಪತ್ತುಳ್ಳವರಾಗಿರುವುದಿಲ್ಲ. ಆದರೆ ಆ ಭಗವಂತನ ಪಾದಕಮಲಗಳಲ್ಲಿ ತುಂಬ ರಹಸ್ಯವಾದ ಕೋಶಾಗಾರ ಉಳ್ಳವರಾಗಿರುತ್ತಾರೆ. ಶ್ರೀಲ ಸನಾತನ ಗೋಸ್ವಾಮಿಯವರ ಬಗ್ಗೆ ಒಂದು ಸ್ವಾರಸ್ಯವಾದ ಕತೆ ಇದೆ. ಅವರ ಬಳಿ ಒಂದು ಸ್ಪರ್ಶಶಿಲೆ ಇತ್ತು. ಅದನ್ನು ಕಸದ ತಿಪ್ಪೆಯಲ್ಲಿ ಬಿಟ್ಟು ಬಿಟ್ಟಿದ್ದರು. ಒಬ್ಬ ಬಡವ ಅದನ್ನು ಕೈಗೆತ್ತಿಕೊಂಡ.
ಇಂತಹ ಅಮೂಲ್ಯವಾದ ಶಿಲೆಯನ್ನು ಇಂತಹ ಉಪೇಕ್ಷಿತ ಸ್ಥಳದಲ್ಲಿ ಏಕೆ ಬಿಟ್ಟಿದ್ದಾರೆ ಎಂದು ಅವನು ಆಶ್ಚರ್ಯ ಪಟ್ಟ. ಅವನು ಸನಾತನ ಗೋಸ್ವಾಮಿಗಳನ್ನು ಒಂದು ಅತ್ಯಮೂಲ್ಯ ವಸ್ತುವನ್ನು ಕೊಡಬೇಕೆಂದು ಬೇಡಿದನು. ಆಗ ಅವನಿಗೆ ಭಗವಂತನ ಪುಣ್ಯ ನಾಮವನ್ನು ಉಪದೇಶಿಸಲಾಯಿತು. ಅಕಿಂಚನ ಎಂದರೆ ಐಹಿಕವಾಗಿ ಏನನ್ನೂ ಕೊಡಲಾರದವನು ಎಂದರ್ಥ.
ಒಬ್ಬ ಮಹಾತ್ಮ ಅಥವಾ ವಾಸ್ತವಿಕ ಭಕ್ತ ಐಹಿಕವಾದದ್ದೇನನ್ನೂ ಭಕ್ತರಿಗೆ ಕೊಡುವುದಿಲ್ಲ. ಏಕೆಂದರೆ ಅವನೇ ಎಲ್ಲ ಐಹಿಕ ಸಂಪತ್ತನ್ನು ಪರಿತ್ಯಾಗ ಮಾಡಿರುತ್ತಾನೆ. ಆದರೆ ಅವನು ಅಮೂಲ್ಯವಾದ ನಿಧಿಯನ್ನು ಕೊಡಬಲ್ಲ ಎಂದರೆ ಪರಮ ಪುರುಷನನ್ನೇ ಕೊಡಬಲ್ಲ. ಏಕೆಂದರೆ ಭಗವಂತನೇ ಒಬ್ಬನಿಜವಾದ ಭಕ್ತನ ಅಮೂಲ್ಯವಾದ ಆಸ್ತಿ.
ಸನಾತನ ಗೋಸ್ವಾಮಿಯವರು ಕಸದ ತೊಟ್ಟಿಯಲ್ಲಿ ಎಸೆದ ಸ್ಪರ್ಶಶಿಲೆ ಅವರ ಸ್ವಂತ ಆಸ್ತಿಯಾಗಿರಲಿಲ್ಲ. ಹಾಗಿದ್ದಲ್ಲಿ ಅವರು ಅದನ್ನು ಕಸದ ತೊಟ್ಟಿಯಲ್ಲಿ ಎಸೆಯುತ್ತಿರಲಿಲ್ಲ. ಈ ನಿರ್ದಿಷ್ಟ ಉದಾಹರಣೆಯನ್ನು ಒಬ್ಬ ಅನನುಭವಿ ಭಕ್ತನಿಗೆ ಏಕೆ ಕೊಡಲಾಗಿದೆಯೆಂದರೆ, ಐಹಿಕತೃಷೆ ಮತ್ತು ಆಧ್ಯಾತ್ಮಿಕ ಮುನ್ನಡೆ ಇವೆರಡೂ ಒಟ್ಟಿಗೆ ಎಂದಿಗೂ ಇರಲಾರವು ಎಂಬುದನ್ನು ಇದು ಸಮರ್ಥಿಸುತ್ತದೆ.
ಪರಮ ಪುರುಷನೊಂದಿಗೆ ಎಲ್ಲದರಲ್ಲೂ ಆಧ್ಯಾತ್ಮಿಕ ಸಂಬಂಧವನ್ನು ಕಾಣುವವರೆಗೆ ಒಬ್ಬ ವ್ಯಕ್ತಿ ಜಡ ಮತ್ತು ಚೈತನ್ಯಗಳ ನಡುವೆ ಅಂತರವನ್ನು ಕಾಣಲೇಬೇಕು. ಶ್ರೀಲ ಸನಾತನ ಗೋಸ್ವಾಮಿಯವರಂತಹ ಗುರು, ಎಲ್ಲವನ್ನು ಆಧ್ಯಾತ್ಮಿಕವಾಗಿ ನೋಡಬಲ್ಲ ಸಾಮರ್ಥ್ಯವನ್ನು ವೈಯಕ್ತಿಕವಾಗಿ ಉಳ್ಳವರು. ಅವರಿಗಿರುವಂತಹ ಆಧ್ಯಾತ್ಮಿಕ ದರ್ಶನ ನಮಗಿಲ್ಲದ್ದರಿಂದ, ಅವರು ಈ ದೃಷ್ಟಾಂತವನ್ನು ನೀಡಿದ್ದಾರೆ.
ಐಹಿಕ ದೃಷ್ಟಿ ಅಥವಾ ಲೌಕಿಕ ನಾಗರಿಕತೆಯ ಮುನ್ನಡೆಯು ಆಧ್ಯಾತ್ಮಿಕ ಉನ್ನತಿಯ ಹಾದಿಯಲ್ಲಿ ಒಂದು ದೊಡ್ಡ ತೊಡಕಾಗಿದೆ. ಅಂತಹ ಐಹಿಕ ಮುನ್ನಡೆ ಜೀವಿಗಳನ್ನು ಐಹಿಕ ಶರೀರ ಬಂಧನಗಳಲ್ಲಿ ಸಿಲುಕಿಸುತ್ತದೆ. ಇದರಿಂದ ಎಲ್ಲ ಬಗೆಯ ಐಹಿಕ ಕ್ಲೇಶಗಳಿಗೆ ನಾವು ತುತ್ತಾಗುತ್ತೇವೆ. ಅಂತಹ ಐಹಿಕ ಮುನ್ನಡೆಯನ್ನು ʼಅನರ್ಥ’ ಅಥವಾ ಅನಪೇಕ್ಷಿತ ವಸ್ತು ಎಂದು ಕರೆಯಲಾಗಿದೆ.
ಇದು ಇರುವುದೂ ಹಾಗೆಯೇ. ಇಂದಿನ ಐಹಿಕ ಮುನ್ನಡೆಯ ಸಂದರ್ಭದಲ್ಲಿ ಐವತ್ತು ಸೆಂಟುಗಳ ಬೆಲೆ ತೆತ್ತು ತುಟಿಯ ರಂಗನ್ನು ಉಪಯೋಗಿಸುತ್ತಾರೆ. ಇಂತಹ ಅನೇಕ ಅನಪೇಕ್ಷಿತ ವಸ್ತುಗಳು ನಮ್ಮ ಬದುಕಿನ ಐಹಿಕ ಕಲ್ಪನೆಯ ಉತ್ಪನ್ನಗಳಾಗಿವೆ. ನಮ್ಮ ಗಮನವನ್ನು ಇಂತಹ ಅನಪೇಕ್ಷಿತ ವಸ್ತುಗಳ ಕಡೆಗೆ ಹರಿಸುವುದರಿಂದ, ಮಾನವ ಬದುಕಿನ ಪ್ರಧಾನ ಉದ್ದೇಶವಾದ ಆಧ್ಯಾತ್ಮಿಕ ಸತ್ಯವನ್ನು ಸಾಧಿಸಲು ಸಾಧ್ಯವಾಗದೆ, ಮಾನವ ಶಕ್ತಿಯ ದುರ್ವ್ಯಯವಾಗುತ್ತಿದೆ.

ಚಂದ್ರಲೋಕವನ್ನು ಪ್ರವೇಶಿಸುವ ಮಾನವ ಪ್ರಯತ್ನ ಕೂಡ ಇಂತಹ ಮಾನವಶಕ್ತಿಯ ದುರ್ವ್ಯಯದ ಮತ್ತೊಂದು ಉದಾಹರಣೆಯಾಗಿದೆ. ಏಕೆಂದರೆ ಚಂದ್ರಲೋಕವನ್ನು ಮುಟ್ಟಿದರೂ ಕೂಡ, ಬದುಕಿನ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದಂತಾಗುವುದಿಲ್ಲ. ಭಗವದ್ಭಕ್ತರನ್ನು ಅಕಿಂಚನರು ಎಂದು ಕರೆಯಲಾಗಿದೆ.
ಏಕೆಂದರೆ ಅವರ ಬಳಿ ವಸ್ತುತಃ ಯಾವ ಐಹಿಕ ಸಂಪತ್ತೂ ಇಲ್ಲ. ಅಂತಹ ಐಹಿಕ ಸಂಪತ್ತು ಮೂರು ಪ್ರಕೃತಿ ಗುಣಗಳ ಉತ್ಪನ್ನಗಳಾಗಿವೆ. ಅವು ನಮ್ಮ ಆಧ್ಯಾತ್ಮಿಕ ಶಕ್ತಿಯನ್ನು ನಾಶ ಮಾಡುತ್ತವೆ. ಅಂತಹ ಐಹಿಕ ವಸ್ತುಗಳನ್ನು ನಾವು ಕಡಿಮೆ ಹೊಂದಿದಷ್ಟು, ಆಧ್ಯಾತ್ಮಿಕ ಮುನ್ನಡೆಗೆ ಒಳ್ಳೆಯ ಅವಕಾಶ ಹೆಚ್ಚು ಲಭಿಸುತ್ತದೆ.
ಪರಮ ಪುರುಷನಿಗೂ, ಈ ಐಹಿಕ ಚಟುವಟಿಕೆಗಳಿಗೂ ನೇರವಾಗಿ ಯಾವ ಸಂಬಂಧವೂ ಇಲ್ಲ. ಅವನ ಎಲ್ಲ ಕಾರ್ಯ ಚಟುವಟಿಕೆಗಳೂ, ಈ ಲೌಕಿಕ ಜಗತ್ತಿನಲ್ಲಿ ಕಾಣಿಸಿಕೊಳ್ಳುವಂತಹವು ಕೂಡ, ಆಧ್ಯಾತ್ಮಿಕವಾಗಿವೆ. ಅವುಗಳಿಗೆ ಐಹಿಕ ಗುಣಗಳೊಂದಿಗೆ ಯಾವ ಸಂಬಂಧವೂ ಇಲ್ಲ. ತನ್ನ ಎಲ್ಲ ಕಾರ್ಯಗಳ, ಈ ಐಹಿಕ ಜಗತ್ತಿನಲ್ಲಿ ಅವನ ಆವಿರ್ಭಾವ ಮತ್ತು ಅಂತರ್ಧಾನಗಳು ಸಹ ಅಲೌಕಿಕವಾದವು ಎಂದು ಭಗವಂತನೇ ಭಗವದ್ಗೀತೆಯಲ್ಲಿ ಹೇಳಿದ್ದಾನೆ.
ಈ ಸತ್ಯವನ್ನು ಯಾರು ಪರಿಪೂರ್ಣವಾಗಿ ತಿಳಿಯುತ್ತಾನೋ ಅಂತಹವನ್ನು ಮತ್ತೆ ಈ ಐಹಿಕ ಜಗತ್ತಿನಲ್ಲಿ ಹುಟ್ಟಲಾರ. ಅವನು ಭಗವದ್ಧಾಮಕ್ಕೆ ಹಿಂದಿರುಗುತ್ತಾನೆ.
ಐಹಿಕ ಪ್ರಕೃತಿಯ ಬಗ್ಗೆ ಇರುವ ಹಂಬಲ ಮತ್ತು ಅಧಿಕಾರ ಚಲಾವಣೆಗಳು, ಲೌಕಿಕ ರೋಗಕ್ಕೆ ಕಾರಣವಾಗಿವೆ. ಈ ಹಂಬಲಕ್ಕೆ ಮೂರು ಪ್ರಕೃತಿ ಗುಣಗಳ ಪರಸ್ಪರ ಕ್ರಿಯೆಯೇ ಕಾರಣ. ಭಗವಂತನಿಗಾಗಲೀ, ಅವನ ಭಕ್ತರಿಗಾಗಲೀ ಅಂತಹ ಮಿಥ್ಯಾಭೋಗದ ಬಗ್ಗೆ ಒಲವು ಇಲ್ಲ. ಆದ್ದರಿಂದಲೇ ಭಗವಂತನನ್ನೂ, ಅವನ ಭಕ್ತರನ್ನೂ ನಿವೃತ್ತ ಗುಣವೃತ್ತಿ ಎಂದು ಕರೆಯುವುದು.
ಪರಿಪೂರ್ಣ ನಿವೃತ್ತ ಗುಣವೃತ್ತಿ ಭಗವಂತನೇ ಆಗಿದ್ದಾನೆ. ಏಕೆಂದರೆ ಅವನು ಎಂದಿಗೂ ಪ್ರಕೃತಿ ಗುಣಗಳಿಂದ ಆಕರ್ಷಿತನಾಗುವುದಿಲ್ಲ. ಇತರ ಜೀವಿಗಳಾದರೋ ಇಂತಹ ಪ್ರವೃತ್ತಿಗೆ ಒಳಗಾಗುವವರು. ಅವರಲ್ಲಿ ಕೆಲವರು ಪ್ರಕೃತಿ ಗುಣಗಳ ಭ್ರಮಾತ್ಮಕ ಆಕರ್ಷಣೆಯ ಬಲೆಗೆ ಬೀಳುತ್ತಾರೆ.
ಭಗವಂತ ಭಕ್ತರ ಆಸ್ತಿ, ಹಾಗೆಯೇ ಭಕ್ತರು ಭಗವಂತನ ಆಸ್ತಿ.
ಇದು ಅನ್ಯೋನ್ಯ ಸಂಬಂಧ. ಆದ್ದರಿಂದ ಭಕ್ತರು ಪ್ರಕೃತಿ ಗುಣಗಳಿಗೆ ಖಂಡಿತವಾಗಿ ಅತೀತರಾಗಿರುತ್ತಾರೆ. ಅದು ಒಂದು ಸಹಜವಾದ ನಿರ್ಣಯ, ಅಂತಹ ಶುದ್ಧ ಭಕ್ತರು ಮಿಶ್ರ ಭಕ್ತರಿಗಿಂತ ಭಿನ್ನರಾಗಿರುತ್ತಾರೆ. ಮಿಶ್ರಭಕ್ತರು ಸಂಕಟಶಮನಕ್ಕಾಗಿ, ಬಡತನ ನಿವಾರಣೆಗಾಗಿ, ಶೋಧನೆಗಾಗಿ ಮತ್ತು ಊಹಾತ್ಮಕ ಚಿಂತನೆಗಳಿಗಾಗಿ ಭಗವಂತನನ್ನು ಆಶ್ರಯಿಸುತ್ತಾರೆ.
ಶುದ್ಧ ಭಕ್ತರು ಮತ್ತು ಭಗವಂತ ಇವರಿಬ್ಬರೂ ಅಲೌಕಿಕ ಸಂಬಂಧದಲ್ಲಿ ಸೇರಿಕೊಂಡವರು. ಉಳಿದವರಿಗೆ ಭಗವಂತ ಅನ್ಯೋನ್ಯವಾಗಿರಬೇಕಾಗಿಲ್ಲ. ಆದ್ದರಿಂದಲೇ ಅವನನ್ನು ಆತ್ಮಾರಾಮ ಅಥವಾ ಆತ್ಮತೃಪ್ತಿ ಎಂದು ಕರೆದಿರುವುದು. ಅವನು ಆತ್ಮತೃಪ್ತನಾಗಿರುವುದರಿಂದ ಭಗವಂತನ ಅಸ್ತಿತ್ವದೊಂದಿಗೆ ಐಕ್ಯವಾಗಬಯಸುವ ಎಲ್ಲ ಅದ್ವೈತಿಗಳ ಪ್ರಭು.
ಅಂತಹ ಅದ್ವೈತಿಗಳು ಭಗವಂತನ ಆತ್ಮಪ್ರಭೆಯಲ್ಲಿ ಐಕ್ಯವಾಗುತ್ತಾರೆ. ಇದನ್ನೇಬ್ರಹ್ಮಜ್ಯೋತಿ ಎನ್ನುವುದು. ಭಕ್ತರು ಮಾತ್ರ ಭಗವಂತನ ದಿವ್ಯ ಲೀಲೆಯೊಳಗೆ ಪ್ರವೇಶಿಸುತ್ತಾರೆ. ಇದನ್ನು ಎಂದಿಗೂ ಐಹಿಕವೆಂದು ತಪ್ಪು ತಿಳಿಯಬಾರದು. (ಭಾಗವತಮ್ – 1 :8:27)
ಶ್ರೀಲ ಪ್ರಭುಪಾದರು ತಮ್ಮ ಶಿಷ್ಯರಿಗೆ ತಮ್ಮ ಜೀವನದ ನೈಜ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಲ್ಲಂತಹ ಸಮಾಜವನ್ನು ಅಭಿವೃದ್ಧಿ ಮಾಡುವಂತೆ ಒತ್ತಾಯ ಪಡಿಸುತ್ತಿದ್ದರು. ಮಾರುಕಟ್ಟೆಗೆಂದೇ ಉತ್ಪಾದನೆ ಮಾಡುವ ಬದಲಾಗಿ ತಮ್ಮ ಅಗತ್ಯಕ್ಕೆ ತಕ್ಕಷ್ಟು ಪ್ರಮಾಣವನ್ನು ಉತ್ಪಾದಿಸುವಂತೆ ಅವರು ಹೇಳುತ್ತಿದ್ದರು.
1975 ರಲ್ಲಿ ಮಾರಿಷಸ್ ಗೆ ಭೇಟಿ ನೀಡಿದ್ದಾಗ ಅವರು ಹೇಳಿದ್ದರು. ”ನೀವಿಲ್ಲಿ ಆಹಾರ ಧಾನ್ಯದ ಉತ್ಪಾದನೆಗೆ ಸಾಕಷ್ಟು ಭೂಮಿಯನ್ನು ಹೊಂದಿರುವಿರಿ. ಆದರೆ ನೀವು ಧಾನ್ಯದ ಬದಲಾಗಿ, ರಫ್ತು ಮಾಡುವ ಉದ್ದೇಶದಿಂದ ಹೆಚ್ಚು ಪ್ರಮಾಣದಲ್ಲಿ ಕಬ್ಬನ್ನು ಬೆಳೆಯುತ್ತಿರುವಿರಿ, ಏಕೆ?

ನೀವು ಅಕ್ಕಿ, ಬೇಳೆ, ಗೋಧಿ ಮೊದಲಾದ ಧಾನ್ಯಗಳಿಗಾಗಿ ಇತರರ ಮೇಲೇಕೆ ಅವಲಂಬಿತರಾಗಬೇಕು? ಮೊದಲು ನೀವು ನಿಮ್ಮ ಅಗತ್ಯಕ್ಕೆ ಬೇಕಾಗುವಷ್ಟು ನಿಮ್ಮ ಆಹಾರ ಧಾನ್ಯಗಳನ್ನು ಬೆಳೆದುಕೊಳ್ಳಿ. ಮೊದಲ ಅವಶ್ಯಕತೆಯೆಂದರೆ – ನಾವು ಸ್ವಾವಲಂಬಿಗಳಾಗಿರುವುದು – ಅದು ಭಗವಂತನು ರೂಪಿಸಿರುವ ವ್ಯವಸ್ಥೆ.
ಬೇಡಿಕೆಯಲ್ಲಿನ ಹೆಚ್ಚಳ :
ಮೊಟ್ಟ ಮೊದಲನೆಯದಾಗಿ, ಸಮಾಜವು ಕುಟುಂಬಗಳು ತಮ್ಮ, ಅಗತ್ಯವನ್ನು ತಾವೇ ಪೂರೈಸಿಕೊಳ್ಳುವಂತಹ ವ್ಯವಸ್ಥೆಯನ್ನು ಹೊಂದಿರಬೇಕು. ಹೆಚ್ಚಿನ ಉತ್ಪನ್ನವನ್ನು ಅನಂತರದಲ್ಲಿ ಮಾರುಕಟ್ಟೆಗೆ ಬಿಡಬಹುದು. ಅದನ್ನೂ ಮೀರಿ ಹೆಚ್ಚಿನ ದೈಹಿಕ ಶ್ರಮದಿಂದ ಅವರು ಹೆಚ್ಚು ಉತ್ಪಾದನೆಯನ್ನು ಗಳಿಸಿ ಮಾರುಕಟ್ಟೆಗೆ ಕೊಂಡೊಯ್ಯುವುದು.
ಆದರೆ ಸಮಾಜದ ಆರ್ಥಿಕ ವ್ಯವಸ್ಥೆಯು ಮಾರುಕಟ್ಟೆ ಆಧರಿತ ಉತ್ಪಾದನೆಯ ಪ್ರಮಾಣದ ಮೇಲೆ ಅವಲಂಬಿತವಾದರೆ ಸಮಸ್ಯೆಗಳು ತಪ್ಪಿದ್ದಲ್ಲ. ಮಾರುಕಟ್ಟೆಯಲ್ಲಿ ಉತ್ಪನ್ನದ ಪ್ರಮಾಣ ಹೆಚ್ಚಿದಷ್ಟೂ ಬೆಲೆಯಲ್ಲಿ ಇಳಿಕೆಯಾಗುತ್ತದೆ. ಹೆಚ್ಚಿನ ಲಾಭಕ್ಕಾಗಿ ಉತ್ಪಾದಕರು ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುತ್ತ ಹೋಗುತ್ತಾರೆ ಮತ್ತು ಕೃತಕ ಬೇಡಿಕೆಯನ್ನು ಸೃಷ್ಟಿಸುತ್ತಾರೆ.
ಇದನ್ನು ಸುಲಭವಾಗಿ ಅರ್ಥೈಸಿಕೊಳ್ಳಬೇಕೆಂದರೆ ಈ ಉದಾಹರಣೆ ನೋಡಬಹುದು.
ನಾನೊಬ್ಬಸಕ್ಕರೆ ಉತ್ಪಾದಕ ಎಂದಿಟ್ಟುಕೊಳ್ಳಿ. ಸರಳವಾದ ಸಮಾಜ ನನ್ನ ಮಾರುಕಟ್ಟೆ. ಇಲ್ಲಿಯವರೆಗೆ ಸಕ್ಕರೆ ಕೇವಲ ದೈನಂದಿನ ಆಹಾರ ತಯಾರಿಕೆಗೆ ಬಳಸಲ್ಪಡುತ್ತಿದ್ದು, ಸೀಮಿತವಾಗಿದೆ. ಆದ್ದರಿಂದ ನಾನು ನನ್ನ ಉತ್ಪಾದನೆಯಲ್ಲಿನ ಹೆಚ್ಚಳದಿಂದ ಹೆಚ್ಚು ಲಾಭ ಗಳಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ, ಸಮಾಜದ ಸರಳ ಸದಸ್ಯರಿಗೆ ಹೆಚ್ಚಿನ ಸಕ್ಕರೆಯ ಅಗತ್ಯವೇ ಇಲ್ಲ.
ಈಗ ನಾನೊಬ್ಬ ವ್ಯಾಪಾರಿಯಂತೆ ಚಿಂತಿಸುತ್ತೇನೆ. ಮಾರುಕಟ್ಟೆಯಲ್ಲಿ ನನ್ನ ಉತ್ಪನ್ನದ ಮಾರಾಟದಲ್ಲಿ ಹೆಚ್ಚಳ ಮತ್ತು ಹೆಚ್ಚಿನ ಲಾಭಕ್ಕಾಗಿ ನಾನು ಸಕ್ಕರೆ ಆಧಾರಿತ ಉತ್ಪನ್ನಗಳ – ಅಂದರೆ ಚಾಕಲೇಟ್, ಕ್ಯಾಂಡಿ, ಪಾನೀಯ ಮೊದಲಾದವುಗಳ ತಯಾರಿಕೆಗೆ ತೊಡಗುತ್ತೇನೆ. ನನ್ನ ಉತ್ಪನ್ನಗಳನ್ನು ಜನರಿಗೆ ತಲಪಿಸುವ ಸಲುವಾಗಿ ಜಾಹೀರಾತುಗಳ ಮೊರೆ ಹೋಗುತ್ತೇನೆ.
ಇದರಿಂದ ಸಹಜವಾಗಿ ಅವರು ನನ್ನ ಉತ್ಪನ್ನಗಳತ್ತ ಆಕರ್ಷಿತರಾಗುತ್ತಾರೆ. ಅಗತ್ಯವಿಲ್ಲದಿದ್ದರೂ ಅವುಗಳನ್ನು ಕೊಳ್ಳುತ್ತಾರೆ. ನಾನು ನನ್ನ ಲಾಭಕ್ಕಾಗಿ ಕೃತಕ ಬೇಡಿಕೆಯನ್ನು ಸೃಷ್ಟಿಸಿದರೂ ವಾಸ್ತವವಾಗಿ ನನ್ನ ಗ್ರಾಹಕರ ಭೌತಿಕ ಬಯಕೆಯನ್ನು ಹೆಚ್ಚಿಸಿ, ಅವರನ್ನು ಆಧ್ಯಾತ್ಮಿಕ ಪ್ರಗತಿಯಿಂದ ವಿಮುಖಗೊಳಿಸುತ್ತಿರುತ್ತೇನೆ.
ಇದೊಂದು ಅತ್ಯಂತ ಸರಳ ಉದಾಹರಣೆ. ಇಂದಿನ ನಮ್ಮ ಆಧುನಿಕ ಜೀವನದ ಸನ್ನಿವೇಶದಲ್ಲಿ ಗ್ರಾಹಕರ ಬೇಡಿಕೆಯನ್ನು ಹೆಚ್ಚಿಸುವುದು ಬಹಳ ಸಂಕೀರ್ಣ ಸಂಗತಿ. ಈ ನಿಟ್ಟಿನಲ್ಲಿ ಶೀಲ ಪ್ರಭುಪಾದರು ಹೇಳುವ ಮಾತು ಸಾರ್ವಕಾಲಿಕ ಸತ್ಯವಾಗಿದೆ. ಅವರು ಹೇಳುವಂತೆ, ”ಸಮಾಜದ ಭೌತಿಕ ಪ್ರಗತಿಯು ವಾಸ್ತವವಾಗಿ ನಮಗೆ ಅಗತ್ಯವೇ ಇಲ್ಲದ ವಸ್ತುಗಳೆಡೆಗಿನ ನಮ್ಮ ಬಯಕೆಗಳ ಮೇಲೆ ನಿಂತಿದೆ.
ಮತ್ತು ನಾವು ಅಗತ್ಯ ಆಧಾರಿತ ಆರ್ಥಿಕತೆಯಿಂದ ಬಯಕೆ ಆಧಾರಿತ ಆರ್ಥಿಕತೆಯತ್ತ ಚಲಿಸಿದಷ್ಟೂ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುವುದು ದುಸ್ತರವಾಗುತ್ತ ಹೋಗುತ್ತದೆ.
ಶ್ರೀಲ ಪ್ರಭುಪಾದರು ಮಾದರಿ ಸಮಾಜವೊಂದನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದರು. ಅಲ್ಲಿ ಸಾಮಾನ್ಯ ಮನುಷ್ಯನೊಬ್ಬ ಆಧ್ಯಾತ್ಮಿಕ ಜೀವನದಲ್ಲಿ ಸ್ಥಿರವಾಗಿ ನಿಲ್ಲಲು ಸಾಧ್ಯವಾಗಬೇಕು ಎನ್ನುವುದು ಅವರ ಆಶಯವಾಗಿತ್ತು.
ಮಾದರಿ ಸಮಾಜದ ಆರ್ಥಿಕ ವ್ಯವಸ್ಥೆಯು ಕೃತಕ ಬೇಡಿಕೆಯನ್ನು ಹೆಚ್ಚಿಸದೆ, ಅಗತ್ಯವನ್ನು ಪೂರೈಸಿಕೊಳ್ಳುವಂಥದ್ದಾಗಿರಬೇಕು; ಮಾನವ ಜೀವನದ ನೈಜ ಉದ್ದೇಶವಾಗಿರುವ ಕೃಷ್ಣಪ್ರಜ್ಞೆಯ ಸಾಧನೆಗೆ ಹೆಚ್ಚು ಸಮಯ ಮತ್ತು ಬಲ ನೀಡುವಂತಿರಬೇಕು ಎಂದು ಅವರು ಬಯಸಿದ್ದರು. ಮಾದರಿ ಸಮಾಜವನ್ನು ಕುರಿತು ಅವರು, “ನಮ್ಮ ಯೋಜನೆಯು ‘ಕೃಷ್ಣಪ್ರಜ್ಞೆಯನ್ನು ಹೊಂದುವುದಕ್ಕೆಂದೇ ಇದೆ. ಇಲ್ಲಿ ಬನ್ನಿ, ಶಾಂತಿಯಿಂದಿರಿ.
ನಿಮ್ಮ ದೇಹಾರೋಗ್ಯವನ್ನು ಕಾಪಾಡಿಕೊಂಡು ನಿಮಗಾಗಿ ದುಡಿಯಿರಿ. ನಿಮ್ಮ ಆಹಾರವನ್ನು ನೀವೇ ಬೆಳೆಯಿರಿ. ನಿಮ್ಮ ಬಟ್ಟೆಗಳನ್ನು ನೇಯ್ದುಕೊಳ್ಳಿ, ಕೃತಕ ಅಗತ್ಯಗಳತ್ತ ಎಂದೂ ಮುಖ ಮಾಡಬೇಡಿ. ನಿಮ್ಮ ಸಮಯವನ್ನು ಉಳಿಸಿಕೊಂಡು ಆಧ್ಯಾತ್ಮಿಕ ಪ್ರಗತಿಗಾಗಿ ವಿನಿಯೋಗಿಸಿ ಎಂದು ಹೇಳುತ್ತಿದ್ದರು.
ಶ್ರೀಲ ಪ್ರಭುಪಾದರ ಕಾಳಜಿಯು ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವುದಕ್ಕಾಗಿತ್ತೆ ಹೊರತು ಆಧ್ಯಾತ್ಮಿಕ ಪ್ರಗತಿಯಿಂದ ದೂರವುಳಿಸುವ ಬಯಕೆಗಳನ್ನು ಹೆಚ್ಚಿಸುವುದಕ್ಕಾಗಿಯಲ್ಲ.






Leave a Reply