ಆಪತ್ಬಾಂಧವ ಶ್ರೀಕೃಷ್ಣ-9
– ಡಾ. ಬಿ.ಆರ್.ಸುಹಾಸ್
ಕುರುಕ್ಷೇತ್ರ ಯುದ್ಧ ಅಂತಿಮ ಹಂತಕ್ಕೆ ಬಂದು ನಿಂತಿತ್ತು. ಇನ್ನೇನು, ಮುಗಿದೇ ಹೋಗಿತ್ತು. ಉಳಿದಿದ್ದು ಭೀಮ-ದುರ್ಯೋಧನರ ಮುಖಾಮುಖಿ ಮಾತ್ರ. ಶ್ರೀಕೃಷ್ಣ ಆಪದ್ಬಾಂಧವನಾಗಿ ಆವರೆಗೂ ಪಾಂಡವರನ್ನು ಕಾಪಾಡಿಕೊಂಡು ಬಂದ. ದುರ್ಯೋಧನನ ಅಂತ್ಯಕ್ಕೂ ನಿಮಿತ್ತನಾದ. ಪ್ರತಿಯಾಗಿ ಗಾಂಧಾರಿಯ ಶಾಪ ತಿಂದ !

ಗದಾಯುದ್ಧ ಆರಂಭವಾಯಿತು. ಭೀಮ, ದುರ್ಯೋಧನರಿಬ್ಬರೂ ಮದ್ದಾನೆಗಳಂತೆ ಒಬ್ಬರ ಮೇಲೊಬ್ಬರು ಎರಗುತ್ತಾ ಚಿತ್ರವಿಚಿತ್ರವಾದ ನಡಿಗೆಗಳನ್ನನುಸರಿಸುತ್ತಾ ವಿವಿಧ ಮಂಡಲಗಳನ್ನು ಪ್ರದರ್ಶಿಸುತ್ತಾ ಭಯಂಕರವಾಗಿ ಯುದ್ಧ ಮಾಡಿದರು! ಅವರ ಗದಾಘಾತಗಳಿಂದ ಬೆಂಕಿಯ ಜ್ವಾಲೆಗಳೇ ಹೊರಟವು! ಒಬ್ಬರನ್ನೊಬ್ಬರು ಬಹುವಾಗಿ ಪೀಡಿಸಿ ಗಾಯಗೊಳಿಸಿದರವರು. ದುರ್ಯೋಧನನ ಒಂದು ಏಟಿಗೆ ಭೀಮನು ಮೂರ್ಛೇಹೋದನು ಕೂಡ!
ಸುತ್ತಲೂ ಎಲ್ಲರೂ ಗದಾಯುದ್ಧವನ್ನು ವೀಕ್ಷಿಸುತ್ತಿರಲು, ಕೃಷ್ಣನು ಮೆಲ್ಲನೆ ಅರ್ಜುನನಿಗೆ, ”ಭೀಮನು ನ್ಯಾಯಮಾರ್ಗದಲ್ಲಿ ಯುದ್ಧ ಮಾಡುತ್ತಿದ್ದರೆ ಖಂಡಿತವಾಗಿಯೂ ದುರ್ಯೋಧನನನ್ನು ಸಂಹರಿಸಲಾರ! ದುರ್ಯೋಧನನು ಗದಾಯುದ್ಧದಲ್ಲಿ ಮಹಾಕುಶಲಿ. ಆದ್ದರಿಂದ ಈ ವಂಚಕನನ್ನು ವಂಚನೆಯಿಂದಲೇ ಕೊಲ್ಲಬೇಕು!
ದ್ಯೂತದ ಸಮಯದಲ್ಲಿ ಭೀಮನು ದುರ್ಯೋಧನನ ತೊಡೆಗಳನ್ನು ಮುರಿಯುವೆನೆಂದು ಪ್ರತಿಜ್ಞೆ ಮಾಡಿದ್ದ. ಅವನಿಗದು ನೆನಪಿದೆಯೇ?” ಎಂದು ಹೇಳಿದನು. ಆಗ ಅರ್ಜುನನು ಭೀಮನ ಗಮನ ಸೆಳೆಯುತ್ತಾ ತನ್ನ ತೊಡೆ ತಟ್ಟಿಕೊಂಡನು.
ಅರ್ಜುನನ ಸೂಚನೆಯನ್ನು ಗ್ರಹಿಸಿದ ಭೀಮನು ಸಮಯ ಕಾಯುತ್ತಾ ತನ್ನ ಏಟನ್ನು ತಪ್ಪಿಸಿಕೊಳ್ಳಲು ದುರ್ಯೋಧನನು ಭೂಮಿಯನ್ನೇ ನಡುಗಿಸುತ್ತಾ ಕೆಳಗೆ ಬಿದ್ದ! ಸಿಡಿಲು, ಗುಡುಗು, ಚಂಡಮಾರುತ, ಧೂಳಿನ ಮಳೆ, ಉಲ್ಕಾಪಾತ, ಮೊದಲಾದ ಉತ್ಪಾತಗಳಾದವು!
ಅತ್ಯಂತ ಕುಪಿತನಾಗಿದ್ದ ಭೀಮಸೇನನು ದುರ್ಯೋಧನನ ಕಿರೀಟವನ್ನು ಕಾಲಿನಿಂದ ಒದ್ದು ಅವನ ತಲೆಯನ್ನು ಮೆಟ್ಟಿ, “ಪಾಪಿಷ್ಠವೇ ಕಪಟಿ! ತುಂಬಿದ ಸಭೆಯಲ್ಲಿ ನಮ್ಮನ್ನು ಹಸು! ಹಸು! ಎಂದು ಅವಮಾನಿಸಿದೆ! ದ್ರೌಪದಿಯನ್ನು ಎಳೆದಾಡಿ ವಸ್ತ್ರಾಪಹರಣ ಮಾಡಿಸಿದೆ! ಅದರ ಫಲವನ್ನು ಈಗ ಅನುಭವಿಸು!” ಎಂದನು!
ಆಗ ಯುಧಿಷ್ಠಿರನು, ‘ಸಾಕು ಭೀಮ! ಹನ್ನೊಂದು ಅಕ್ಷೌಹಿಣಿ ಪತಿಯಾಗಿದ್ದ ರಾಜನನ್ನು ಹಾಗೆ ಅವಮಾನಿಸಬಾರದು,” ಎಂದು ಭೀಮನಿಗೆ ಹೇಳಿ ಅನಂತರ ದುರ್ಯೋಧನನಿಗೆ, ”ಇದಕ್ಕಾಗಿ ಶೋಕಿಸಬೇಡಪ್ಪಾ..! ಇದು ಪೂರ್ವಾರ್ಜಿತ ಫಲ! ನಿನಗೆ ಖಂಡಿತವಾಗಿಯೂ ಸ್ವರ್ಗದಲ್ಲೊಂದು ಸ್ಥಾನವಿದೆ!” ಎಂದು ಕಂಬನಿ ತುಂಬಿ ಹೇಳಿದನು.
ಭೀಮನ ಕಾರ್ಯದಿಂದ ಅತ್ಯಂತ ಕುಪಿತನಾದ ಬಲರಾಮನು, “ಭೀಮ! ನಿನಗೆ ಧಿಕ್ಕಾರ! ನಾಭಿಯ ಕೆಳಗೆ ಹೊಡೆಯುವುದು ಗದಾಯುದ್ಧ ಶಾಸ್ತ್ರಕ್ಕೆ ವಿರುದ್ಧವಾಗಿದೆ! ಹೀಗೆ ಶಾಸ್ತ್ರವನ್ನು ಮೀರಿ ಅಧರ್ಮಾಚರಣೆ ನಡೆಸಿದ ಭೀಮನು ಗುರುವಾದ ನನ್ನನ್ನೂ ಧಿಕ್ಕರಿಸಿದ್ದಾನೆ!’ ಎಂದು ಹೇಳುತ್ತಾ ತನ್ನ ಹಲಾಯುಧವನ್ನೆತ್ತಿ ಭೀಮನನ್ನು ಸಂಹರಿಸಲು ಹೊರಟು ಬಿಟ್ಟನು!
ಅಷ್ಟರಲ್ಲಿ ಕೃಷ್ಣನು ಬಲರಾಮನನ್ನು ತನ್ನೆರಡೂ ಬಾಹುಗಳಿಂದ ತಡೆಯುತ್ತಾ ”ಅಣ್ಣ! ಶಾಂತನಾಗು! ಪಾಂಡವರು ನಮಗೆ ಸಹಜಮಿತ್ರರೂ ಅತ್ತೆಯ ಮಕ್ಕಳೂ ಹೌದು! ಅವರ ವೃದ್ಧಿಯಿಂದ ನಮ್ಮ ವೃದ್ಧಿಯೂ ಆಗುತ್ತದೆ! ಕ್ಷತ್ರಿಯನಿಗೆ ಪ್ರತಿಜ್ಞಾಪಾಲನೆ ಬಹಳ ಮುಖ್ಯ!

ಭೀಮನು ದುರ್ಯೋಧನನ ತೊಡೆ ಮುರಿಯುವೆನೆಂದು ಪ್ರತಿಜ್ಞೆ ಮಾಡಿದ್ದ! ಮೈತ್ರೇಯ ಮಹರ್ಷಿಗಳೂ ಅಂತೆಯೇ ಕೌರವನಿಗೆ ಶಾಪವಿತ್ತಿದ್ದರು. ಆದ್ದರಿಂದ ಇದು ತಪ್ಪಲ್ಲ!” ಎಂದನು. ಆದರೆ ಬಲರಾಮನು ಅವನ ಮಾತನ್ನೊಪ್ಪದೇ ಕೋಪದಿಂದ ರಥ ಹತ್ತಿ ಹೊರಟು ಹೋದನು.
ಶ್ರೀಕೃಷ್ಣನು ಭೀಮನನ್ನು ಕಾಪಾಡಿ ಆಪದ್ಬಾಂಧವನಾಗಿದ್ದನು. ಭೀಮನು ಈಗ ಪರಮಹೃಷ್ಟನಾಗಿ ಯುಧಿಷ್ಠಿರನಿಗೆ, ” ಅಣ್ಣ ಇಲ್ಲಿಗೆ ನಾವು ಎಲ್ಲಾ ಶತ್ರುಗಳನ್ನೂ ಜಯಿಸಿಯಾಯಿತು! ಈ ಇಡೀ ಭೂಮಂಡಲವು ನಿನ್ನದಾಯಿತು! ನಿರಾತಂಕವಾಗಿ ಆಳು!” ಎಂದನು.
ಎಲ್ಲರೂ ಭೀಮನಿಗೆ ಜಯಕಾರ ಮಾಡತೊಡಗಲು ಕೃಷ್ಣನು, “ಸಾಕು ಸಾಕು! ನಾವಿನ್ನು ಹೊರಡೋಣ! ಶತ್ರುವನ್ನು ಹೆಚ್ಚು ಅಪಮಾನಗೊಳಿಸಬಾರದು,” ಎಂದನು. ಈ ಮಾತು ಕೇಳಿ ಬಹಳ ಕ್ರುದ್ಧನಾದ ದುರ್ಯೋಧನನು, “ಎಲವೋ ಕಂಸನ ದಾಸನ ಮಗನೇ! ಇಷ್ಟೆಲ್ಲಕೂ ನೀನಲ್ಲವೇ ಕಾರಣ?
ಭೀಮನಿಗೆ ನನ್ನ ತೊಡೆ ಮುರಿಯುವುದನ್ನು ಸೂಚಿಸಿದ್ದನ್ನು ನಾನು ನೋಡಲಿಲ್ಲ ಎಂದು ಭಾವಿಸಿದೆಯಾ? ಇದೇ ರೀತಿ ಭೀಷ್ಮ ದ್ರೋಣ, ಕರ್ಣಾದಿಗಳನ್ನೂ ವಿವಿಧ ಮೋಸಗಳಿಂದ ಕೊಲ್ಲಿಸಿದವನು ನೀನೇ! ನಮ್ಮೊಡನೆ ಧರ್ಮಯುದ್ಧ ಮಾಡಿದ್ದಿದ್ದರೆ ನೀವು ಖಂಡಿತ ಗೆಲ್ಲುತ್ತಿರಲಿಲ್ಲ! ಇರಲಿ…! ವೀರಕ್ಷತ್ರಿಯನಂತೆ ಹೋರಾಡಿ ಸಾಯುತ್ತಿರುವ ನಾನು ಸ್ವರ್ಗಕ್ಕೆ ಹೋಗುತ್ತೇನೆ! ಬಂಧುಬಾಂಧವರಿಲ್ಲದೇ ಶೂನ್ಯವಾಗಿರುವ ಈ ರಾಜ್ಯವನ್ನು ಪಾಂಡವರೇ ಆಳಿಕೊಂಡಿರಲಿ!” ಎಂದು ಛೇಡಿಸಿದ.
ಶ್ರೀಕೃಷ್ಣನು ನಗುತ್ತಾ “ಬಾಲ್ಯದಿಂದಲೂ ಪಾಂಡವರ ವಿಷಯದಲ್ಲಿ ನಿಷ್ಕಾರಣವಾಗಿ ಕುಕೃತ್ಯಗಳನ್ನು ಮಾಡುತ್ತಾ ಬಂದಿರುವ ನೀನು ಅನುಭವಿಸುತ್ತಿರುವ ಪಾಪದ ಫಲಕ್ಕೆ ನನ್ನನ್ನು ಹೊಣೆ ಮಾಡುತ್ತಿರುವ ತಿಳಿಗೇಡಿ ನೀನು!
ವಂಚಕರನ್ನು ಅಂಥ ವಂಚನೆಯಿಂದಲಾದರೂ ಸರಿ, ಕೊಲ್ಲಬೇಕೆಂಬ ಶುಕ್ರನೀತಿಯನ್ನು ನಾನು ಅನುಸರಿಸಿದ್ದೇನಷ್ಟೆ!” ಎನ್ನುತ್ತಾ, ಲಜ್ಜಿತರಾಗಿದ್ದ ಪಾಂಡವ ಪಾಂಚಾಲರತ್ತ ತಿರುಗಿ, ಈ ಶತ್ರುಗಳನ್ನು ಋಜುಮಾರ್ಗದಿಂದ ಸ೦ಹರಿಸಲು ಎಂದೆಂದೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಧರ್ಮದ ಉಳಿವಿಗಾಗಿ ಮೋಸದಿಂದ ಕೊಂದುದು ತಪ್ಪೇನಲ್ಲ! ಇದು ನನ್ನ ಹೊಸಮಾರ್ಗವೇನಲ್ಲ! ದೇವತೆಗಳೂ ಹೀಗೆ ಮಾಡುವುದು ಹಿಂದಿನಿಂದಲೂ ನಡೆದು ಬಂದಿದೆ!” ಎಂದನು.
ಅನಂತರ ಶ್ರೀಕೃಷ್ಣನು ಪಾಂಡವ ಪಾಂಚಾಲರೊಂದಿಗೆ ಹೊರಟು ಹೋದನು. ಶಿಬಿರವನ್ನು ತಲಪುತ್ತಲೇ ಶ್ರೀಕೃಷ್ಣನು ಅರ್ಜುನನಿಗೆ ಮೊದಲು ಕೆಳಗಿಳಿಯುಂತೆ ಹೇಳಿದನು. ಅರ್ಜುನನು ಅಂತೆಯೇ ಮಾಡಿದನು. ಅನಂತರ ಶ್ರೀಕೃಷ್ಣನು ಕೆಳಗಿಳಿಯಲು, ಧ್ವಜದಲ್ಲಿದ್ದ ಕಪಿಶ್ರೇಷ್ಠನು ಅದೃಶ್ಯನಾದನು! ಆಗ ರಥವು ಇದ್ದಕ್ಕಿದ್ದಂತೆ ಬೆಂಕಿಯಿಂದ ಹೊತ್ತಿಕೊಂಡು ಧಗಧಗನೆ ಉರಿಯತೊಡಗಿತು!
ಬಹಳ ವಿಸ್ಮಿತನಾದ ಅರ್ಜುನನು ಇದಕ್ಕೆ ಕಾರಣವನ್ನು ಕೇಳಲು, ಶ್ರೀಕೃಷ್ಣನು, “ಅರ್ಜುನ, ಭೀಷ್ಮ ದ್ರೋಣ ಕರ್ಣಾದಿಗಳ ದಿವ್ಯಾಸ್ತ್ರಗಳಿಂದ ಈ ರಥವು ಈಗಾಗಲೇ ದಗ್ಧವಾಗಿ ಹೋಗಿತ್ತು! ಆದರೆ ನಾನು ಅದರಲ್ಲಿ ಕುಳಿತಿದ್ದರಿಂದ ಅದು ಉರಿದು ಹೋಗಿರಲಿಲ್ಲ. ಈಗ ನಾನು ಹೊರಬಂದುದರಿ೦ದ ಅದು ಉರಿದುಹೋಯಿತು!” ಎನ್ನುತ್ತಾ ಯುಧಿಷ್ಟಿರನ ಕಡೆ ತಿರುಗಿ, “ಧರ್ಮಜ! ಸೌಭಾಗ್ಯವಶಾತ್ ನೀನಿಂದು ವಿಜಯಶಾಲಿಯಾದೆ! ಎಲ್ಲಾ ಆಪತ್ತುಗಳಿಂದಲೂ ಅರ್ಜುನನನ್ನು ರಕ್ಷಿಸಬೇಕೆಂದು ಹೇಳಿದ್ದೆಯಲ್ಲವೇ? ಆ ಮಾತನ್ನು ಅಂತೆಯೇ ನಾನು ನಡೆಸಿದ್ದೇನೆ!”

‘ ಕೃಷ್ಣ! ಈ ವಿಜಯ ನಿಜವಾಗಿ ಪ್ರಾಪ್ತವಾಗಿರುವುದು ನಿನ್ನಿಂದ! ನೀನು ನಿಜಕ್ಕೂ ಆಪದ್ಬಾಂಧವ” ಯುಧಿಷ್ಠಿರನು ಕಣ್ತುಂಬಿ ಹೇಳಿದ.
ಹದಿನೆಂಟು ದಿನಗಳ ಮಹಾಸಂಗ್ರಾಮ ಅಂತೂ ಮುಗಿದಿತ್ತು. ಆದರೆ ಇಷ್ಟರಿಂದಲೇ ಎಲ್ಲವೂ ಮುಗಿದಂತಾಗಲಿಲ್ಲ. ಶ್ರೀಕೃಷ್ಣನು ಇನ್ನೂ ಪಾಂಡವರನ್ನು ರಕ್ಷಿಸುವುದಿತ್ತು. ಆಪತ್ತು ಯಾವಾಗ, ಹೇಗೆ ಸಂಭವಿಸೀತೆಂದು ಯಾರು ಹೇಳಬಲ್ಲರು?!
ಶ್ರೀಕೃಷ್ಣನು ಯುಧಿಷ್ಠಿರನೊಡನೆ ಸಮಾಲೋಚಿಸಿ, ಹಸ್ತಿನಾವತಿಗೆ ಹೋಗಿ, ದುಃಖಿಸುತ್ತಿದ್ದ ಧೃತರಾಷ್ಟ್ರ, ಗಾಂಧಾರಿಯರನ್ನು ಸಮಾಧಾನಪಡಿಸಿದನು. ಪಾಂಡವರಿಗೆ ಶಾಪ ಕೊಡಬೇಕೆಂದು ಯೋಚಿಸಿದ್ದ ಗಾಂಧಾರಿಯ ಮನಸ್ಸನ್ನು ತಿರುಗಿಸಿದನು. ಆ ಸಮಯದಲ್ಲಿ, ಅಶ್ವತ್ಥಾಮನು ಪಾಂಡವನಾಶದ ಬಗ್ಗೆ ಯೋಚಿಸಿದುದನ್ನು ಊಹಿಸಿ, ಬೇಗನೆ ಹಿಂದಿರುಗಿ ಪಾಂಡವರನ್ನು ಶಿಬಿರದಿಂದ ದೂರ ಬೇರೆಡೆಗೆ ಕರೆದೊಯ್ದನು!
ಸಾಯುತ್ತಿದ್ದ ದುರ್ಯೋಧನನ ದುಃಸ್ಥಿತಿಯನ್ನು ಕಂಡು ದುಃಖಿತನಾದ ಅಶ್ವತ್ಥಾಮನು ಪಾಂಡವರೆಲ್ಲರನ್ನೂ ಕೊಲ್ಲುವುದಾಗಿ ಪ್ರತಿಜ್ಞೆ ಮಾಡಿದನು! ಆ ಸಮಯದಲ್ಲೂ ಧುರ್ಯೋದನನು ಅಶ್ವತ್ಥಾಮನಿಗೆ ಸೇನಾಪತಿ ಪಟ್ಟ ಗಟ್ಟಿದನು!
ಅಶ್ವತ್ಥಾಮನು ಅಂದು ರಾತ್ರಿಯೇ ಕೃಷ್ಣ, ಕೃತವರ್ಮರೊಂದಿಗೆ ಪಾಂಡವಶಿಬಿರಕ್ಕೆ ನುಗ್ಗಿ ಮಲಗಿದ್ದ ಪಾಂಡವಪುತ್ರರನ್ನೂ ಶಿಖಂಡಿ, ಧೃಷ್ಟದ್ಯುಮ್ನಾದಿ ಪಾಂಚಾಲರನ್ನು ಕೊಂದು ಶಿಬಿರಕ್ಕೆ ಬೆಂಕಿ ಹಚ್ಚಿ ಓಡಿ ಹೋದನು!
ಶ್ರೀಕೃಷ್ಣನು ಪುನಃ ಪಾಂಡವರನ್ನು ಕಾಪಾಡಿದ್ದನು.
ಮರುದಿನ, ವಿಷಯ ತಿಳಿದ ಪಾಂಡವರು ಅತ್ಯಂತ ಕ್ರುದ್ಧರಾಗಿ ಅಶ್ವತ್ಥಾಮನನ್ನು ಎದುರಿಸಹೋಗಲು, ಹೆದರಿದ ಅವನು, ಒಂದು ಹುಲ್ಲಕಡ್ಡಿಯನ್ನೇ ಬ್ರಹ್ಮಶಿರಸ್ ಎಂಬ ಭೀಕರ ಅಸ್ತ್ರದಿಂದ ಅಭಿಮಂತ್ರಿಸಿ ಪಾಂಡವರ ಮೇಲೆಸೆದನು! ಸ್ವರಕ್ಷಣೆಗಾಗಿ ಅರ್ಜುನನೂ ಅದೇ ಅಸ್ತ್ರವನ್ನು ಪ್ರಯೋಗಿಸಲು, ಬೆಂಕಿಯ ಜ್ವಾಲೆಗಳೊಂದಿಗೆ ಮಹಾಸದ್ದಾಯಿತು!
ಅಷ್ಟರಲ್ಲಿ ನಾರದ, ವೇದವ್ಯಾಸರು, “ಅಯ್ಯೋ! ಈ ಅಸ್ತ್ರಪ್ರಯೋಗ ಈ ಹಿಂದೆ ಯಾರಿಂದಲೂ ಆಗಿರಲಿಲ್ಲ! ಲೋಕವಿನಾಶಕಾರಿಯಾದ ಇದನ್ನು ಬೇಗನೆ ಉಪಸಂಹರಿಸಿ!” ಎಂದರು! ಅರ್ಜುನನು ಅದನ್ನು ಉಪಸಂಹರಿಸಿದನೆ ಹೊರತು, ಉಪಸಂಹರಿಸಲು ಬಾರದ ಅಶ್ವತ್ಥಾಮನು, ಅದು ಪಾಂಡವವಂಶವೊಂದೇ ಆದ ಉತ್ತರೆಯ (ಅಭಿಮನ್ಯುವಿನ ಪತ್ನಿ) ಗರ್ಭವನ್ನು ನಾಶಪಡಿಸುವುದೆಂದು ಹೇಳಿದನು.

ಇದರಿಂದ ಕುಪಿತನಾದ ಶ್ರೀಕೃಷ್ಣನು, ”ಆ ಶಿಶುವನ್ನು ನಾನೇ ಕಾಪಾಡುತ್ತೇನೆ! ಅದು ಸತ್ತು ಹುಟ್ಟಿದರೂ ಪುನಃ ಬದುಕುತ್ತದೆ! ಈಗ ನೀನು ಮಾಡಿದ ಪಾಪಕ್ಕೆ ಮೂರು ಸಾವಿರ ವರ್ಷಗಳ ಕಾಲ ಯಾರೊಂದಿಗೂ ಮಾತು ಕತೆಯಾಡದೇ ಏಕಾಂಗಿಯಾಗಿ ಕೀವು, ರಕ್ತಗಳನ್ನು ಸುರಿಸುವ ಚರ್ಮರೋಗಗಳಿ೦ದ ನರಳುತ್ತಾ ಅಲೆಯುತ್ತಿರು!’ ಎಂದು ಶಪಿಸಿಬಿಟ್ಟ!
ಅನಂತರ ವ್ಯಾಸ, ಕೃಷ್ಣರು ಹೇಳಲು, ತನ್ನ ತಲೆಯಲ್ಲಿ ಆಜನ್ಮಪರ್ಯಂತ ಇದ್ದ ಮಣಿಯನ್ನು ಪಾಂಡವರಿಗಿತ್ತು ಅಶ್ವತ್ಥಾಮನು ಅರಣ್ಯಕ್ಕೆ ಹೊರಟುಹೋದನು! ಪಾಂಡವರು ಅದನ್ನು ದ್ರೌಪದಿಗೆ ತೋರಿಸಿ ಅವಳನ್ನು ಸಮಾಧಾನಪಡಿಸಿದರು. ಅವಳ ಕೋರಿಕೆಯಂತೆ ಆ ಮಣಿಯನ್ನು ಯುಧಿಷ್ಠಿರನು ತನ್ನ ತಲೆಯಲ್ಲಿ ಧರಿಸಿದ.
***
ಭಗವಂತನು ಪಾಂಡವರನ್ನು ಮತ್ತೊಂದು ಅಪಾಯದಿಂದಲೂ ಕಾಪಾಡಿದ. ಪಾಂಡವರು ರಣಾಂಗಣಕ್ಕೆ ಆಗಮಿಸಿದ ಧೃತರಾಷ್ಟ್ರ ಗಾಂಧಾರಿಯರನ್ನು ಭೇಟಿಯಾದಾಗ, ಧೃತರಾಷ್ಟ್ರನು ”ಭೀಮನೆಲ್ಲಿ? ನಾನು ಅವನೊಡನೆ ಮಾತಾಡಬೇಕು! ಮುಂದೆ ಬರಲಿ!” ಎಂದನು.
ಭೀಮನು ಮುಂದೆ ಹೋಗುವವನಿದ್ದಾಗ ಶ್ರೀಕೃಷ್ಣನು ಅವನನ್ನು ತಡೆದು ದುರ್ಯೋಧನನು ಗದಾಭ್ಯಾಸಕ್ಕಾಗಿ ಇಟ್ಟು ಕೊಂಡಿದ್ದ ಭೀಮನ ಲೋಹದ ಪ್ರತಿಮೆಯನ್ನು ಅವನ ಮುಂದೆ ತಳ್ಳಿದನು. ಧೃತರಾಷ್ಟ್ರನು ಅದನ್ನು ಗಟ್ಟಿಯಾಗಿ ಅಪ್ಪಿಕೊಳ್ಳಲು, ಆ ಪ್ರತಿಮೆ ಒಡೆದು ಚೂರು ಚೂರಾಯಿತು! ಇದನ್ನು ನೋಡಿ ಭೀಮನೂ ಇತರ ಪಾಂಡವರೂ ವಿಸ್ಮಿತರಾದರು! ಭೀಮನಿಗಾಗಬೇಕಿದ್ದ ಆಪತ್ತನ್ನು ಕೃಷ್ಣನು ಹೀಗೆ ತಪ್ಪಿಸಿದನು!
ಅನಂತರ, ಕುರುಡುದೊರೆಯು ಬಾಯಿಂದ ರಕ್ತ ಸುರಿಸುತ್ತಾ ತಾನು ನಿಜವಾಗಿ ಭೀಮನನ್ನು ಕೊಂದುಬಿಟ್ಟೆನೆಂದು ಭಾವಿಸಿ ಅಳತೊಡಗಿದನು! ಆಗ ಕೃಷ್ಣನು ನಿಜಸಂಗತಿಯನ್ನು ಹೇಳಿ ಅವನನ್ನು ಸಮಾಧಾನಪಡಿಸಿದನು.
ರಣಾಂಗಣಕ್ಕೆ ತೆರಳಿದ ಗಾಂಧಾರಿ, ಹೆಣಗಳ ಸುತ್ತ ರೋದಿಸುತ್ತಿದ್ದ ಸ್ತ್ರೀಯರ ವಿಲಾಪವನ್ನು ಕೇಳಿ, ಬಹಳ ದುಃಖಿಸುತ್ತಾ ಒಂದೊಂದು ಹೆಣವನ್ನೂ ಸಮೀಪಿಸಿ ಅಳುತ್ತಾ ಕಡೆಗೆ ಬಹಳ ಸಂಕಟದಿಂದ ಕೃಷ್ಣನನ್ನೇ ಶಪಿಸಿಬಿಟ್ಟಳು! “ಕೃಷ್ಣ! ಸರ್ವಶಕ್ತನಾಗಿದ್ದ ನೀನು ಈ ಯುದ್ಧವನ್ನು ತಡೆಯಬಹುದಿತ್ತು!
ಆದರೆ ನೀನು ಹಾಗೆ ಮಾಡಲಿಲ್ಲ! ಎಲ್ಲವನ್ನೂ ಉಪೇಕ್ಷಿಸಿದೆ! ಇಂದಿಗೆ ಮೂವತ್ತಾರು ವರ್ಷಗಳ ಬಳಿಕ, ನಿನ್ನ ಯಾದವರೂ ತಮ್ಮ ತಮ್ಮಲ್ಲೇ ಕಚ್ಚಾಡಿಕೊಂಡು ಸಾಯಲಿ! ನೀನು ಅನಾಥನಂತೆ ಅಲೆಯುತ್ತಾ ಕೆಟ್ಟ ರೀತಿಯಲ್ಲಿ ಸಾಯುವೆ! ನಿಮ್ಮ ಸ್ತ್ರೀಯರೂ ಈ ನಮ್ಮ ಸ್ತ್ರೀಯರಂತೆ ಅಳುತ್ತಾರೆ!”
ಗಾಂಧಾರಿಯು ಸರ್ವದೇವೋತ್ತಮ ಪುರುಷನನ್ನೇ ಶಪಿಸಿದಳು! ಆದರೆ ಅವನು ಮುಗುಳ್ನಗುತ್ತಲೇ, “ಕ್ಷತ್ರಿಯಾಣಿ! ಇದು ಹೀಗಾಗುವುದೆಂಬುದನ್ನು ನಾನು ಮೊದಲೇ ಬಲ್ಲೆ! ಇತರರಿಂದ ಅವಧ್ಯರಾದ ಯಾದವರು ತಮ್ಮ ತಮ್ಮಲ್ಲೇ ಹೋರಾಡಿ ಸಾಯಬೇಕಾದುದು ದೈವೇಚ್ಛೆ! ಅದಿರಲಿ! ಆದರೆ ನಿನ್ನ ಮಗನ ತಪ್ಪಿಗೆ ನನ್ನನ್ನು ಹೊಣೆಮಾಡಿದೆಯಲ್ಲಾ..?

ಅದು ಬಹಳ ಆಶ್ಚರ್ಯಕರವಾಗಿದೆ! ಹೀಗೆಯೇ ನನ್ನ ಬಗ್ಗೆ ಎಷ್ಟು ಜನರು ತಪ್ಪು ತಿಳಿಯುವರೋ… ಅವಜಾನಂತಿ ಮಾ ಮೂಢಾ ಎಂದು ಅದಕ್ಕಾಗಿಯೇ ನಾನು ಹೇಳಿದೆ! ನಾನು ಯುದ್ಧಾಕಾಂಕ್ಷಿಯೇ? ಪಕ್ಷಪಾತಿಯೇ? ನಿನ್ನ ಮಗನಿಗೆ ಎಷ್ಟೊಂದು ಅವಕಾಶ ಕೊಡಲಿಲ್ಲವೆ? ಹೇಳಮ್ಮಾ!
ಮೃತನಾದವನ ಬಗ್ಗೆ, ಮಿಂಚಿಹೋದ ಕಾರ್ಯದ ಬಗ್ಗೆ ಚಿಂತಿಸುವವನು ಮತ್ತೊಂದು ದುಃಖ ಪಡೆಯುತ್ತಾನೆ! ಮಾಡುವ ದುಷ್ಕರ್ಮಗಳನ್ನು ಮಾಡಿ, ದೈವದ ಮೇಲೆ ದೋಷಾರೋಪಣೆ ಮಾಡಬೇಡ!” ಎಂದು ಹೇಳಿದನು.
ಗಾಂಧಾರಿಯು ನಿರುತ್ತರಳಾದಳು.
ಭೀಷ್ಮದ್ರೋಣತಟಾ ಜಯದ್ರಥಜಲಾ ಗಾಂಧಾರ ನೀಲೋಪಲಾ
ಶಲ್ಯಗ್ರಾಹವತೀ ಕೃಪೇಣ ವಹನೀ ಕರ್ಣೇನ ವೇಲಾಕುಲಾ |
ಅಶ್ವತ್ಥಾಮವಿಕರ್ಣ ಘೋರಮಕರಾ ದುರ್ಯೋಧನಾವರ್ತಿನೀ
ಸೋತ್ತೀರ್ಣಾ ಖಲು ಪಾಂಡವೈಃ ರಣನದೀ ಕೈವರ್ತಕ: ಕೇಶವಃ ||
ಭೀಷ್ಮ ದ್ರೋಣರಿಬ್ಬರೂ ಎರಡು ದಡಗಳು! ಜಯದ್ರಥನು ಜಲ! ಗಾಂಧಾರ ಶಕುನಿ ನೀಲ ಕಲ್ಲು! ಶಲ್ಯನು ಮೊಸಳೆ! ಕೃಪರು ಸಳವು! ಕರ್ಣನು ಅಪ್ಪಳಿಸುವ ಅಲೆ! ಅಶ್ವತ್ಥಾಮ, ವಿಕರ್ಣರಿಬ್ಬರೂ ಭಯಂಕರ ಮಕರಗಳು! ದುರ್ಯೋಧನನು ಸುಳಿ! ಇಂತಹ ಭಯಂಕರ ರಣನದಿಯನ್ನು ಪಾಂಡವರು ದಾಟಿದರು! ದಾಟಿಸಿದ ಅಂಬಿಗನೇ ಶ್ರೀಕೃಷ್ಣ!
ಯತಃ ಕೃಷ್ಣಸ್ತತೋ ಧರ್ಮಃ ಯತೋ ಧರ್ಮಸ್ತತೋ ಜಯಃ ।
ಎಲ್ಲಿ ಶ್ರೀಕೃಷ್ಣನಿರುವನೋ ಅಲ್ಲಿ ಧರ್ಮವಿದೆ; ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ.






Leave a Reply