ಕೃಷ್ಣ ಪಾಕಶಾಲೆ
– ಎಸ್.ವಿಜಯಾ ಗುರುರಾಜ, ಬೆಂಗಳೂರು
ಗೋಧಿಹಲ್ವ

ಬೇಕಾಗುವ ಪದಾರ್ಥ:
ಗೋಧಿ ನುಚ್ಚು – 1 ಕಪ್
ಸಕ್ಕರೆ – 3/4 ಕಪ್
ಹಾಲು – 1/2 ಲೀಟರ್
ಏಲಕ್ಕಿ – 4
ಪಚ್ಚಕರ್ಪೂರ – ಸ್ವಲ್ಪ
ತುಪ್ಪ – 1/2 ಬಟ್ಟಲು
ಸಣ್ಣಗೆ ಹೆಚ್ಚಿದ ಗೋಡಂಬಿ, ದ್ರಾಕ್ಷಿ, ಬಾದಾಮಿ
ಮಾಡುವ ವಿಧಾನ :
ಗೋಧಿ ನುಚ್ಚನ್ನು ತೊಳೆದು ಸ್ವಲ್ಪ ಹಾಲು ಸ್ವಲ್ಪ ನೀರು ಸೇರಿಸಿ ಕುಕ್ಕರಿನಲ್ಲಿಟ್ಟು ಬೇಯಿಸಿಕೊಳ್ಳಿ. ನಂತರ ಬಾಣಲೆಗೆ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ, ಬಾದಾಮಿ ಚೂರುಗಳನ್ನು ಹುರಿದು ತೆಗೆದಿಡಿ.
ಅದೇ ಬಾಣಲೆಗೆ ಹಾಲು ಹಾಕಿ ಬೇಯಿಸಿಟ್ಟ ಗೋಧಿ ತರಿಯನ್ನು ಹಾಕಿ ಸಕ್ಕರೆ ಮತ್ತು ಉಳಿದ ತುಪ್ಪವನ್ನೂ ಹಾಕಿ ಮ೦ದಾಗ್ನಿಯಲ್ಲಿ ಬೇಯಿಸಿ. ಅದು ಗಟ್ಟಿಯಾಗತೊಡಗಿದಾಗ ಏಲಕ್ಕಿ, ಪಚ್ಚ ಕರ್ಪೂರ ಹಾಗೂ ದ್ರಾಕ್ಷಿ ಗೋಡಂಬಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೆಳಗಿಳಿಸಿ. ಈಗ ರುಚಿ ರುಚಿಯಾದ ಗೋಧಿ ಹಲ್ವವನ್ನು ಶ್ರೀಕೃಷ್ಣನಿಗರ್ಪಿಸಿ ನಂತರ ಮಧುರವಾದ ಪ್ರಸಾದವನ್ನು ಸೇವಿಸಿ.
ಗೋಧಿ ಗುಳಪಾವಟೆ

ಬೇಕಾಗುವ ಪದಾರ್ಥ:
ಗೋಧಿ ಹಿಟ್ಟು – 1 ಪಾವು
ಬೆಲ್ಲ – 2 ಅಚ್ಚು
ಕಡಲೆಬೀಜ – 1/2 ಕಪ್
ಹುರಿಗಡಲೆ – 1/4 ಕಪ್
ಒಣಕೊಬ್ಬರಿ – 1/2 ಕಪ್
ಗಸಗಸೆ – 2 ಚಮಚ
ತುಪ್ಪ – 1/2 ಬಟ್ಟಲು
ಮಾಡುವ ವಿಧಾನ :
ಬಾಣಲೆಗೆ 2 ಚಮಚ ತುಪ್ಪಹಾಕಿ ಗೋಧಿ ಹಿಟ್ಟನ್ನು ಘಂ ಎಂದು ವಾಸನೆ ಬರುವ ತನಕ ಹುರಿದು ತೆಗೆದಿಡಿ. ಕಡಲೆಬೀಜ ಹುರಿದು ಹುರಿಗಡಲೆಯೊಂದಿಗೆ ಮಿಕ್ಸಿಗೆ ಹಾಕಿ ತರಿತರಿಯಾಗಿ ಮಾಡಿಕೊಳ್ಳಿ. ಗಸಗಸೆಯನ್ನೂ ಹುರಿದು ತೆಗೆದಿಡಿ.
ಈ ಬಾಣಲೆಗೆ ಸಣ್ಣಗೆ ಪುಡಿಮಾಡಿದ ಬೆಲ್ಲವನ್ನು ಹಾಕಿ ಅರ್ಧ ಕಪ್ ನೀರು ಹಾಕಿ ಅದು ಚೆನ್ನಾಗಿ ಕರಗಿದೊಡನೆ ಹುರಿದ ಗೋಧಿಹಿಟ್ಟು ಮತ್ತು ಉಳಿದೆಲ್ಲ ಪದಾರ್ಥವನ್ನೂ ಹಾಕಿ ಅರ್ಧ ತುಪ್ಪವನ್ನೂ ಹಾಕಿ ಒಲೆಯಿಂದ ಕೆಳಗಿಳಿಸಿ ಚೆನ್ನಾಗಿ ಗೊಟಾಯಿಸಿ. ತುಪ್ಪದ ಕೈ ಮಾಡಿಕೊಂಡು ನಿಂಬೆ ಗಾತ್ರದ ಉಂಡೆ ಕಟ್ಟಿ ತಟ್ಟೆಯಲ್ಲಿ ಜೋಡಿಸಿ. ಈ ರುಚಿ ಹಾಗೂ ಪುಷ್ಟಿಕರವಾದ ಗುಳವಾವಟಿಯನ್ನು ಶ್ರೀ ರಾಧಾಕೃಷ್ಣನಿಗರ್ಪಿಸಿ ಅನಂತರ ಸೇವಿಸಿ.
ಗೋಧಿ ಗಂಟು ಚಕ್ಕುಲಿ

ಬೇಕಾಗುವ ಪದಾರ್ಥ:
ಗೋಧಿ ಹಿಟ್ಟು – 1 ದೊಡ್ಡ ಲೋಟ
ಎಳ್ಳು – 4 ಚಮಚ
ಜೀರಿಗೆ -2 ಚಮಚ
ಅಜವಾನ – 1 ಚಮಚ
ಬೆಣ್ಣೆ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ
ಮಾಡುವ ವಿಧಾನ :
ಗೋಧಿ ಹಿಟ್ಟನ್ನು ಒಂದು ತೆಳುವಾದ ಬಟ್ಟೆಯಲ್ಲಿ ಹಾಕಿ ಗಂಟು ಕಟ್ಟಿ ಕುಕ್ಕರಿನಲ್ಲಿಟ್ಟು 2 ವಿಶಲ್ ಕೂಗಿಸಿ. ಆರಿದ ನಂತರ ಹಿಟ್ಟನ್ನು ಬಟ್ಟೆಯಿಂದ ಬಿಡಿಸಿ ಪುಡಿ ಮಾಡಿಕೊಂಡು ಅದಕ್ಕೆ ಬಿಸಿಮಾಡಿದ ಬೆಣ್ಣೆ ಮತ್ತು ಉಳಿದ ಎಲ್ಲ ಪದಾರ್ಥವನ್ನೂ ಸೇರಿಸಿ. ಚಕ್ಕುಲಿ ಹಿಟ್ಟಿನ ಹದಕ್ಕೆ ಕಲಸಿ.
ಚಕ್ಕುಲಿ ಒರಳಿಗೆ ಎಣ್ಣೆ ಸವರಿ ಹಿಟ್ಟು ತುಂಬಿ ಗುಂಡನೆ ಚಕ್ಕುಲಿ ಮಾಡಿ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಈ ಗರಿ ಗರಿ ಗೋಧಿ ಚಕ್ಕುಲಿಯನ್ನು ಪರಮಾತ್ಮನ ಮುಂದಿರಿಸಿ ಧ್ಯಾನಿಸಿ, ನಂತರ ಸೇವಿಸಿ.
ಗೋಧಿ ಕೋಡುಬಳೆ

ಬೇಕಾಗುವ ಪದಾರ್ಥ:
ಚಕ್ಕುಲಿಗೆ ಸಿದ್ಧಪಡಿಸಿದ ಗೋಧಿಹಿಟ್ಟು – 1 ಲೋಟ
ಉಪ್ಪು – ರುಚಿಗೆ ತಕ್ಕಷ್ಟು
ಒಣಕೊಬ್ಬರಿ ತುರಿ – 1/2 ಬಟ್ಟಲು
ಹಸಿಮೆಣಸಿನಕಾಯಿ -6
ಕರಿಬೇವು -4 ಎಸಳು
ಜೀರಿಗೆ -1 ಚಮಚ
ಇಂಗು – ಸ್ವಲ್ಪ
ಕರಿಯಲು ಎಣ್ಣೆ
ಮಾಡುವ ವಿಧಾನ :
ಹಸಿಮೆಣಸು, ಜೀರಿಗೆ, ಕರಿಬೇವನ್ನು ಮಿಕ್ಸಿಯಲ್ಲಿ ಪುಡಿಮಾಡಿ. ಒಣಕೊಬ್ಬರಿ, ಇಂಗು, ಉಪ್ಪು ಮತ್ತು ಸಿದ್ಧಗೊಳಿಸಿದ ಗೋಧಿ ಹಿಟ್ಟನ್ನು ಸೇರಿಸಿ 2 ಚಮಚ ಎಣ್ಣೆ ಬಿಸಿಮಾಡಿ ಅದಕ್ಕೆ ಹಾಕಿ ನೀರಿನೊಂದಿಗೆ ಕೋಡುಬಳೆ ಹಿಟ್ಟಿನ ಹದಕ್ಕೆ ಕಲಸಿ. ಕೈಗೆ ಎಣ್ಣೆಯನ್ನು ಹಚ್ಚಿಕೊಂಡು ಪ್ಲಾಸ್ಟಿಕ್ ಹಾಳೆಯ ಮೇಲೆ ಕೋಡುಬಳೆ ಸುತ್ತಿ ಕಾದ ಎಣ್ಣೆಯಲ್ಲಿ ಕರಿಯಿರಿ. ರುಚಿಯಾದ ಕೋಡುಬಳೆಯನ್ನು ಶ್ರೀಕೃಷ್ಣನಿಗರ್ಪಿಸಿ ಎಲ್ಲರಿಗೂ ಹಂಚಿ.






Leave a Reply