ಸ್ಥಳ: ಲಾಸ್ ಏಂಜಲೀಸ್, ದಿನಾಂಕ 30ನೇ ಡಿಸೆಂಬರ್, 1968 ಶ್ರೀಲ ಪ್ರಭುಪಾದರು ಮತ್ತು ಒಬ್ಬ ಪತ್ರಿಕೋದ್ಯಮಿ ಮಧ್ಯೆ ನಡೆದ ಸಂವಾದ ರೂಪ
– ಅನುವಾದ : ಡಾ.ಕೆ. ವೈ. ಬಾಲರಾಜ್
ಪತ್ರಿಕೋದ್ಯಮಿ : ಇಂದಿನ ಯುವ ಪೀಳಿಗೆ ಪೂರ್ವದಿಕ್ಕಿನ ರಾಷ್ಟ್ರಗಳತ್ತ ವಾಲುತ್ತಿದ್ದಾರೆ ಎಂದು ನಿಮಗೇಕೆ ಅನಿಸುತ್ತಿದೆ?

ಶ್ರೀಲ ಪ್ರಭುಪಾದ : ಏಕೆಂದರೆ ಅವರನ್ನು ತೃಪ್ತಿಪಡಿಸುವುದರಲ್ಲಿ ನೀವು ವಿಫಲರಾಗಿದ್ದೀರಿ. ನಿಮ್ಮ ಲೌಕಿಕ ರೀತಿಯ ಜೀವನ ಅವರನ್ನು ತೃಪ್ತಿಪಡಿಸುವುದಿಲ್ಲ. ಯಾವಾಗ ಒಬ್ಬ ವ್ಯಕ್ತಿಗೆ ಜೀವನದಲ್ಲಿ ಬಡತನ ಬಂದು ಎರಗುತ್ತದೋ ಆಗ ಅವನು “ಹಣ, ಸ್ತ್ರೀ, ಒಳ್ಳೆಯ ಮನೆ, ಕಾರು ನನಗೆ ತೃಪ್ತಿ ಕೊಡುತ್ತದೆ” ಎಂದು ಯೋಚಿಸುತ್ತಾನೆ ಮತ್ತು ಅದರ ಹಿಂದೆ ಬೀಳುತ್ತಾನೆ. ಆದರೆ ಆ ಸುಖ ಸಿಕ್ಕರೂ ಅವನಿಗೆ ತೃಪ್ತಿ ಸಿಗುವುದಿಲ್ಲ. ಏಕೆಂದರೆ ಭೌತ ವಸ್ತುವು ತೃಪ್ತಿ ಪಡಿಸುವುದಿಲ್ಲ.
ವಿಶೇಷವಾಗಿ ಅಮೆರಿಕದಲ್ಲಿ ನಿಮಗೆ ಸಾಕಷ್ಟು ಸುಖ ಇದೆ. ನಿಮಗೆ ಸಾಕಷ್ಟು ಆಹಾರ, ಸ್ತ್ರೀಯರು, ಮದ್ಯ, ಮನೆಗಳು ಎಲ್ಲವೂ ಇವೆ. ಇಷ್ಟೆಲ್ಲ ಇದ್ದರೂ, ಭೌತಿಕ ಪ್ರಗತಿ ತೃಪ್ತಿ ಕೊಡುವುದಿಲ್ಲವೆಂದು ತೋರಿಸುತ್ತಿದೆ.
ಬಡ ರಾಷ್ಟ್ರವಾದ ಭಾರತಕ್ಕಿಂತಲೂ ನಿಮ್ಮ ರಾಷ್ಟ್ರದಲ್ಲಿ ಬಹಳ ಗೊಂದಲ ಮತ್ತು ಅತೃಪ್ತಿ ಇದೆ. ಭಾರತದಲ್ಲಿ ಜನರು ತಮ್ಮ ಹಳೆಯ ಸಂಸ್ಕೃತಿಯನ್ನು ಪಾಲಿಸುತ್ತಿದ್ದಾರೆ ಮತ್ತು ಅವರಲ್ಲಿ ಸ್ವಲ್ಪವಾದರೂ ಆಧ್ಯಾತ್ಮಿಕ ಛಾಯೆ ಇದೆ. ಆದ್ದರಿಂದ ಜನರಿಗೆ ಸಂತೋಷವಾಗಿರಲು ಆಧ್ಯಾತ್ಮಿಕ ಜೀವನವನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ.
ಪತ್ರಿಕೋದ್ಯಮಿ : ಪಾಶ್ಚಿಮಾತ್ಯ ಧರ್ಮದ ಸಂದೇಶವು ಸುಸಂಬದ್ಧವಾಗಿಲ್ಲ ಅಥವಾ ಅವರು ತಮ್ಮ ಸಂದೇಶವನ್ನು ಸರಿಯಾದ ರೀತಿಯಲ್ಲಿ ಪ್ರಸ್ತುತಪಡಿಸುವುದರಲ್ಲಿ ವಿಫಲರಾಗಿದ್ದಾರೆ ಎಂದು ನೀವು ಹೇಳುತ್ತೀರಾ?
ಶ್ರೀಲ ಪ್ರಭುಪಾದ : ಕ್ರೈಸ್ತಧರ್ಮದಲ್ಲಿ ಬಹಳ ಹಿಂದೆಯೇ ಸುವಾರ್ತೆಗಳನ್ನು (ಗಾಸ್ಪೆಲ್ಸ್) ಹೇಳಲಾಗಿದೆ. ಬೈಬಲ್ ಮತ್ತು ಹಳೆಯ ಒಡಂಬಡಿಕೆಯಲ್ಲಿ (ಓಲ್ಡ್ ಟೆಸ್ಟಮೆಂಟ್ಸ್) ಭಗವಂತನ ವಿಚಾರವನ್ನು ಹೇಳಲಾಗಿದೆ. ಅದೆಲ್ಲವೂ ಒಳ್ಳೆಯದೆ. ಬೈಬಲಿನಲ್ಲಿ ”ಭಗವಂತ ಜಗತ್ತನ್ನು ಸೃಷ್ಟಿಸಿದ’ ಎನ್ನುವ ವಾಕ್ಯ ಇದೆ.
ಅದು ಸತ್ಯ. ಆದರೆ ಈಗಿನ ಕಾಲದ ಜನರು ವೈಜ್ಞಾನಿಕವಾಗಿ ಅಭಿವೃದ್ಧಿಯನ್ನು ಹೊಂದಿರುವುದರಿಂದ ಸೃಷ್ಟಿಯ ಕ್ರಿಯೆ ಹೇಗೆ ನಡೆಯಿತು? ಎಂದು ತಿಳಿದುಕೊಳ್ಳಲು ಬಯಸುತ್ತಾರೆ. ಆದರೆ ಇದರ ಬಗ್ಗೆ ಬೈಬಲ್ಲಿನಲ್ಲಿ ವಿವರಣೆ ಇಲ್ಲ ಮತ್ತು ಚರ್ಚ್ ಕೂಡ ಅದರ ಬಗ್ಗೆ ವಿವರಣೆ ಕೊಡುವುದಿಲ್ಲ. ಆದ್ದರಿಂದ ಜನರಿಗೆ ತೃಪ್ತಿಯಿಲ್ಲ. ಸುಮ್ಮನೆ ಚರ್ಚ್ಗೆ ಹೋಗಿ ಪ್ರಾರ್ಥನೆ ಸಲ್ಲಿಸುವುದು ಅವರಿಗೆ ರುಚಿಸುವುದಿಲ್ಲ.

ಇದಲ್ಲದೆ ಅವರು ಧಾರ್ಮಿಕ ಸಿದ್ಧಾಂತಗಳನ್ನು ಕಾರ್ಯ ರೀತಿಯಲ್ಲಿ ಅನುಸರಿಸುವುದಿಲ್ಲ. ಉದಾಹರಣೆಗೆ “ನೀವು ಕೊಲ್ಲಬಾರದು” ಎಂಬ ಒಂದು ಒಡಂಬಡಿಕೆ ಇದೆ. ಅದರ ಕ್ರೈಸ್ತರ ಜಗತ್ತಿನಲ್ಲಿ ಕೊಲ್ಲುವುದು ಪ್ರಾಮುಖ್ಯವಾಗಿದೆ. ಅಷ್ಟೇ ಅಲ್ಲ ಅವರು ಸಾಕಷ್ಟು ಕಸಾಯಿಖಾನೆಗಳನ್ನು ತೆರೆದಿದ್ದಾರೆ.
ಅವರು ಹೇಳುತ್ತಾರೆ. ಪ್ರಾಣಿಗಳಿಗೆ ಆತ್ಮವಿಲ್ಲ ಮತ್ತು ಭಾವನೆಗಳಿಲ್ಲ. ಆದ್ದರಿಂದ ಅವುಗಳನ್ನು ಕೊಲ್ಲಬಹುದು. ಪ್ರಾಣಿಗಳಿಗೆ ಭಾವನೆಗಳಿಲ್ಲ ಎಂದು ಏಕೆ ಅವರು ಹೇಳುತ್ತಾರೆ? ಏಕೆ ಅವರು ಈ ಪಾಪಕಾರ್ಯಗಳನ್ನು ಮಾಡುತ್ತಿದ್ದಾರೆ?
ಪುರೋಹಿತ ವರ್ಗದವರು ಕೂಡ ಏನೂ ಹೇಳುವುದಿಲ್ಲ ಮತ್ತು ಆ ವಿಚಾರವಾಗಿ ಏನೂ ಚರ್ಚಿಸುವುದಿಲ್ಲ. ಪ್ರತಿಯೊಬ್ಬರೂ ಮೌನವಾಗಿದ್ದಾರೆ. ಅವರು ಬೇಕೆಂತಲೇ ಹತ್ತು ಆಜ್ಞಾವಿಧಿಗಳನ್ನು (ಟೆನ್ ಕಮ್ಯಾಂಡ್ ಮೆಂಟ್ಸ್) ಮೀರುತ್ತಿದ್ದಾರೆ. ಒಂದು ವೇಳೆ ನಿಮ್ಮ ಶಾಸ್ತ್ರದ ಆಜ್ಞಾವಿಧಿಗಳನ್ನು ನೀವು ಅನುಸರಿಸದಿದ್ದರೆ, ಹೇಗೆ ನೀವು ನಿಮ್ಮ ಧರ್ಮವನ್ನು ಅನುಸರಿಸುತ್ತಿದ್ದೀರಿ ಎಂದು ಹೇಳಲಾಗುವುದು?
ಯಾವುದನ್ನು ನೀವು ಸೃಷ್ಟಿಸಲಾರಿರಿ ಅದನ್ನು ಹೇಗೆ ನೀವು ಕೊಲ್ಲುವಿರಿ? “ನೀವು ಕೊಲ್ಲಬಾರದು” ಎಂದು ನಿಮ್ಮ ಧರ್ಮದಲ್ಲಿ ಹೇಳಲಾಗಿದ್ದರೂ ಅವರು ಏಕೆ ಕೊಲ್ಲುತ್ತಿದ್ದಾರೆ? ಇದಕ್ಕೇನು ಉತ್ತರಿಸುವಿರಿ?
ಪತ್ರಿಕೋದ್ಯಮಿ : ನೀವು ನನ್ನನ್ನು ಕೇಳುತ್ತಿದ್ದೀರಾ?
ಶ್ರೀಲ ಪ್ರಭುಪಾದ : ಹೌದು

ಪತ್ರಿಕೋದ್ಯಮಿ : ಹೌದು, ನಿಸ್ಸಂಶಯವಾಗಿ “”ನೀವು ಕೊಲ್ಲಬಾರದು” ಎನ್ನುವುದು ನೀತಿಶಾಸ್ತ್ರವಾಗಿದೆ ಮತ್ತು ಅದು ಕಾಲಾತೀತ ಹಾಗೂ ಸಮರ್ಪಕವಾಗಿದೆ. ಆದರೆ ಜನರಿಗೆ ಅದರಲ್ಲಿ ಆಸಕ್ತಿ ಇಲ್ಲ.
ಶ್ರೀಲ ಪ್ರಭುಪಾದ : ಅವರಿಗೆ ಧರ್ಮದಲ್ಲಿ ಆಸಕ್ತಿಯಿಲ್ಲವೇ? ಇದು ಕೇವಲ ತೋರಿಕೆಯಾಗಿದೆ. ಹಾಗಾದರೆ ಅವರಿಗೆ ಸಂತೋಷವಾಗಿರಲು ಹೇಗೆ ಸಾಧ್ಯ? ನೀವು ನಿಯಂತ್ರಕ ತತ್ತ್ವಗಳನ್ನು ಅನುಸರಿಸದಿದ್ದರೆ ಎಲ್ಲಿದೆ ನಿಮ್ಮ ಧರ್ಮ?
ಪತ್ರಿಕೋದ್ಯಮಿ : ನಾನು ನಿಮ್ಮ ಜೊತೆ ವಾದಿಸುತ್ತಿಲ್ಲ. ನಾನು ನಿಮ್ಮ ವಾದವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. “ನೀವು ಕೊಲ್ಲಬಾರದು”, ‘ನೀವು ನನ್ನ ಮುಂದೆ ಬೇರೆ ದೇವರನ್ನು ಪೂಜಿಸಬಾರದು”, ”ನೀವು ನಿಮ್ಮ ನೆರೆಯವನ ಮನೆಯ ಹೆಂಡತಿಯನ್ನು ಬಯಸಬಾರದು, ” ನೀವು ನಿಮ್ಮ ತಂದೆ ತಾಯಿಯರನ್ನು ಗೌರವಿಸಬೇಕು.” ಇವೆಲ್ಲ ಸುಂದರವಾದ ನೀತಿಶಾಸ್ತ್ರವಾಗಿದೆ. ಆದರೆ ಯಾರೂ ಇದನ್ನು ಆಚರಿಸುತ್ತಿಲ್ಲ.
ಶ್ರೀಲ ಪ್ರಭುಪಾದ : “”ನೀವು ನಿಮ್ಮ ನೆರೆಯವನ ಹೆಂಡತಿಯನ್ನು ಬಯಸಬಾರದು.’” ಇದು ಯಾರು ಅನುಸರಿಸುತ್ತಿದ್ದಾರೆ?
ಪತ್ರಿಕೋದ್ಯಮಿ : ಎಲ್ಲರೂ ಅಲ್ಲ ಬಹಳ ಕಡಮೆ ಜನರು.
ಶ್ರೀಲ ಪ್ರಭುಪಾದ : ಆದ್ದರಿಂದ ಹೇಗೆ ನೀವು ಅವರೆಲ್ಲ ಧಾರ್ಮಿಕರಾಗುತ್ತಾರೆ ಎಂದು ಅಪೇಕ್ಷಿಸುತ್ತೀರಿ? ಧರ್ಮವಿಲ್ಲದ ಮಾನವ ಸಮಾಜವು ಪ್ರಾಣಿ ಸಮಾಜವಾಗಿದೆ.

ಪತ್ರಿಕೋದ್ಯಮಿ : ಕೈಸ್ತರ ಹತ್ತು ಆಜ್ಞಾವಿಧಿಗಳ ನೀತಿ ಶಾಸ್ತ್ರಕ್ಕಿಂತ ನಿಮ್ಮ ನೀತಿ ಶಾಸ್ತ್ರ ಹೇಗೆ ವಿಭಿನ್ನವಾಗಿದೆ?
ಶ್ರೀಲ ಪ್ರಭುಪಾದ : ಏನೂ ಭಿನ್ನತೆ ಇಲ್ಲ.
ಪತ್ರಿಕೋದ್ಯಮಿ: ಹಾಗಾದರೆ ಕ್ರೈಸ್ತರ ಅಥವಾ ಯಹೂದಿಗಳ ನೀತಿಶಾಸ್ತ್ರಕ್ಕಿಂತ ಭಿನ್ನವಾದದ್ದು ನಿಮ್ಮಲ್ಲಿ ಏನಿದೆ?
ಶ್ರೀಲ ಪ್ರಭುಪಾದ : ಅವರ್ಯಾರೂ ಭಗವಂತನ ಆಜ್ಞಾವಿಧಿಗಳನ್ನು ಕಠಿಣವಾಗಿ ಅನುಸರಿಸುತ್ತಿಲ್ಲ ಎಂದು ಹೇಳುವೆ. ”ಸುಮ್ಮನೆ ನಿಮ್ಮ ಭಗವಂತನ ಆಜ್ಞಾವಿಧಿಗಳನ್ನು ಅನುಸರಿಸಿ’. ಆದರೂ ಸರಳವಾಗಿ ಇದನ್ನೇ ಹೇಳುವೆ ಇದುವೆ ನನ್ನ ಸಂದೇಶ.
ಪತ್ರಿಕೋದ್ಯಮಿ : ಆ ಸಿದ್ಧಾಂತಗಳನ್ನು ಅನುಸರಿಸಿ ಎಂದು ಹೇಳುವಿರಾ?
ಶೀಲ ಪ್ರಭುಪಾದ : “ಕ್ರೈಸ್ತರಾಗಿರುವ ನೀವು ಹಿಂದೂಗಳಾಗಿ” ಎಂದು ನಾನು ಹೇಳುತ್ತಿಲ್ಲ. ‘ಕೇವಲ ನಿಮ್ಮ ಹತ್ತು ಆಜ್ಞಾ ವಿಧಿಗಳಿಗೆ ವಿಧೇಯರಾಗಿರಿ” ಎಂದು ಹೇಳುವೆ. ಆಗ ನೀವು ಉತ್ತಮ ಕ್ರೈಸ್ತರಾಗುತ್ತೀರಿ. ಇದೇ ನನ್ನ ಧ್ಯೇಯ. ‘ಭಗವಂತ ಅಲ್ಲಿಲ್ಲ, ಇಲ್ಲಿದ್ದಾನೆ” ಎಂದು ನಾನು ಹೇಳುವುದಿಲ್ಲ.
ಇಲ್ಲಿ ಬಂದು ಕೃಷ್ಣನನ್ನು ಭಗವಂತನಾಗಿ ಸ್ವೀಕರಿಸಿ ಎಂದು ಹೇಳುವುದಿಲ್ಲ. ‘ಭಗವಂತನಿಗೆ ವಿಧೇಯರಾಗಿರಿ ಮತ್ತು ಅವನನ್ನು ಪ್ರೀತಿಸಲು ಪ್ರಯತ್ನಿಸಿ’ ಎಂದು ಹೇಳುವೆ. ಭಗವಂತನನ್ನು ಸುಲಭವಾಗಿ ಹೇಗೆ ಪ್ರೀತಿಸಬಹುದು ಎಂದು ನಾನು ನಿಮಗೆ ದಾರಿ ತೋರಿಸುವೆ. ನೀವು ಒಪ್ಪಿಕೊಂಡರೆ ನಾನು ಕಲಿಸುವೆ.
(ಮುಂದುವರಿಯುವುದು)






Leave a Reply