ನಾರದಮುನಿಗಳ ಬೋಧನೆ

ಆಕರ : ಶ್ರೀಧಾಮ ಕೃಷ್ಣ ದಾಸರ ಆಂಗ್ಲ ಉಪನ್ಯಾಸ, ಅನುವಾದ : ಚೇತನಾ ತೀರ್ಥಹಳ್ಳಿ

ಆಧಾರ: ಶ್ರೀಮದ್ಭಾಗವತ 1.13,49

ಕುರುಕ್ಷೇತ್ರ ಯುದ್ಧದ ಅನಂತರ ಮಹಾತ್ಮ ವಿದುರನಿಂದ ಬೋಧಿಸಲ್ಪಟ್ಟವನಾದ ಧೃತರಾಷ್ಟ್ರನು ಅರಮನೆಯನ್ನು ತ್ಯಜಿಸಿ ವಾನಪ್ರಸ್ಥಕ್ಕೆ ತೆರಳುತ್ತಾನೆ. ಅವನೊಡನೆ ಗಾಂಧಾರಿ, ವಿದುರರೂ ತೆರಳುತ್ತಾರೆ. ಅರಮನೆಯಲ್ಲಿ ಅವರನ್ನು ಕಾಣದಾದ ಧರ್ಮರಾಜನು ಸಂಜಯನನ್ನು ಕುರಿತು ಪ್ರಶ್ನೆಗಳನ್ನು ಕೇಳುತ್ತಾ ಉದ್ವೇಗಕ್ಕೊಳಗಾಗುತ್ತಾನೆ.

ಆ ಸಂದರ್ಭದಲ್ಲಿ ಅವನನ್ನು ಸಮಾಧಾನ ಪಡಿಸುತ್ತ ದೇವರ್ಷಿ ನಾರದರು ಯುಧಿಷ್ಟಿರನಿಗೆ ಉಪದೇಶ ನೀಡುತ್ತಾರೆ. ನಾರದರು ಯುಧಿಷ್ಠಿರನಿಗೆ ನೀಡಿದ ಉಪದೇಶಗಳು ಭಾಗವತ ಪ್ರಥಮ ಸ್ಕಂಧ ಹದಿಮೂರನೇ ಅಧ್ಯಾಯ 41ನೇ ಶ್ಲೋಕದಿಂದ 57ನೆಯ ಶ್ಲೋಕದವರೆಗೂ ದಾಖಲಿಸಲಟ್ಟಿವೆ.

ದೊಡ್ಡಪ್ಪನನ್ನು ಕಾಣದೆ ಕಳವಳಪಡುತ್ತಿದ್ದ ಧರ್ಮರಾಜನನ್ನು ಸಮಾಧಾನಪಡಿಸುತ್ತ ನಾರದರು ಹೇಳುತ್ತಾರೆ,

ಸೋಽಯಮದ್ಯ ಮಹಾರಾಜ

ಭಗವಾನ್‌ ಭೂತಭಾವನಃ |

ಕಾಲರೂಪೋಽವತೀರ್ಣೋಽ

ಸ್ಯಾಮಭಾವಾಯ ಸುರದ್ವಿಷಾಮ್ ||

ದೇವೋತ್ತಮ ಪರಮ ಪುರುಷನಾದ ಭಗವಾನ್ ಶ್ರೀಕೃಷ್ಣನು ಜಗತ್ತಿನಿಂದ ಮತ್ಸರಿಗಳನ್ನು ಹೊರಹಾಕಲು ಈಗ ಕಾಲರೂಪನಾಗಿ ಧರೆಗವತರಿಸಿದ್ದಾನೆ. ಭಾಗವತ: 1.13.49

ಈ ಅಧ್ಯಾಯದಲ್ಲಿ ನಾವು ಧೃತರಾಷ್ಟ್ರನು ಅದೆಷ್ಟು ಗಾಢವಾಗಿ ಸಾಂಸಾರಿಕ ಜೀವನಕ್ಕೆ ಅಂಟಿಕೊಂಡಿದ್ದ, ಯುದ್ಧದ ಅನಂತರವೂ ಅವನೆಷ್ಟು ವ್ಯಾಮೋಹಿಯಾಗಿದ್ದ ಮತ್ತು ಹೇಗೆ ತನ್ನೆಲ್ಲ ಮಕ್ಕಳು ನಿಧನರಾಗಿದ್ದರೂ ಯುಧಿಷ್ಠಿರನ ಕಟಾಕ್ಷದಲ್ಲಿ ಜೀವಿಸಿದ್ದ ಎಂಬುದನ್ನು ನೋಡುತ್ತೇವೆ. ಈ ಸಂದರ್ಭದಲ್ಲಿ ಅವನ ಶೂದ್ರ ಸಹೋದರ – ಮಹಾಭಕ್ತಜ್ಞಾನಿಯಾದ ವಿದುರನು ಧೃತರಾಷ್ಟ್ರನಿಗೆ ಉಪದೇಶ ನೀಡುತ್ತಾನೆ.

ಅವನು ತನ್ನ ಸಹೋದರನಿಗೆ ಆತ್ಮಜ್ಞಾನವನ್ನು ಕುರಿತು ಪಾರಮಾರ್ಥಿಕ ಬೋಧನೆಯನ್ನು ನೀಡುತ್ತಾನೆ. ಅವನ ಆತ್ಯಂತಿಕ ಕರ್ತವ್ಯಗಳ ಕುರಿತು ಎಚ್ಚರಿಸುತ್ತಾನೆ. ಇದರಿಂದ ಪ್ರಭಾವಿತನಾದ ಧೃತರಾಷ್ಟ್ರನು ತನ್ನ ಪತ್ನಿ ಗಾಂಧಾರಿ ಮತ್ತು ಸಹೋದರ ವಿದುರರೊಂದಿಗೆ ಯುಧಿಷ್ಠಿರನಿಗೆ ತಿಳಿಸದೆ ಅರಮನೆಯಿಂದ ಹೊರಟುಬಿಡುತ್ತಾನೆ.

ಇದರಿಂದ ಯುಧಿಷ್ಠಿರನ ಮನಸ್ಸಿಗೆ ಅತೀವ ವೇದನೆ ಉಂಟಾಗುತ್ತದೆ. ತನ್ನ ದೊಡ್ಡಪ್ಪ-ಚಿಕ್ಕಪ್ಪಂದಿರ ವಿಷಯವಾಗಿ ಅವನಿಗೆ ಯಾವ ಸಮಾಚಾರವೂ ತಿಳಿಯುವುದಿಲ್ಲ. ಅದನ್ನೇ ಚಿಂತಿಸುತ್ತಾ ಅವನು ದುಃಖಿಸುತ್ತಿದ್ದ ಸಮಯದಲ್ಲಿ ನಾರದರು ಅಲ್ಲಿಗೆ ಬರುತ್ತಾರೆ. ಅವರು ಯುಧಿಷ್ಟಿರನಿಗೆ ಬೋಧಿಸುತ್ತಾ ಭಗವಂತನ ವಿವಿಧ ರೂಪಗಳ, ಅಸ್ತಿತ್ವಗಳ ಬಗ್ಗೆ ವಿವರಿಸುತ್ತಾರೆ.

ನಾರದರ ಬೋಧನೆಗಳಲ್ಲಿ ನಾವು ಈ ಬಗೆಯ ಅಗಲಿಕೆಗಳಿಂದ ವಿಚಲಿತರಾಗಬಾರದೆಂಬುದನ್ನು ಅರಿಯುತ್ತೇವೆ. ಈ ಜಗತ್ತಿನಲ್ಲಿ ಪ್ರತಿಯೊಂದೂ ತಾತ್ಕಾಲಿಕ. ನಾವೆಲ್ಲರೂ ಇಲ್ಲಿ ಅರೆಕಾಲಿಕ ಬದುಕಿಗಾಗಿ ಬಂದಿದ್ದೇವೆ, ಮತ್ತು ಒಂದೊಮ್ಮೆ ಅಗತ್ಯವಾಗಿ ಇಲ್ಲಿಂದ ತೆರಳುತ್ತೇವೆ.

ಈ ಮೇಲಿನ ಶ್ಲೋಕದಲ್ಲಿ ನಾವು, ಪರಮಪ್ರಭು ಶ್ರೀಕೃಷ್ಣನು ಕಾಲರೂಪನಾಗಿರುವನು ಎಂಬ ವಾಕ್ಯವನ್ನು ನೋಡುತ್ತೇವೆ. ಭಗವಂತನು ಯಾವುದು ಈ ಜಗತ್ತನ್ನು ವ್ಯಾಪಿಸಿಕೊಂಡಿದೆಯೋ ಆ ಕಾಲ ಸ್ವರೂಪನಾಗಿ ಇರುತ್ತಾನೆ. ಈಗ್ಗೆ ಒಂದು ಹತ್ತಿಪ್ಪತ್ತು ವರ್ಷಗಳ ಹಿಂದೆ ನಮ್ಮ ವಯಸ್ಸು ಅತಿ ಚಿಕ್ಕದು ಎನಿಸುತ್ತಿರುತ್ತದೆ.

ಆದರೆ, ಕಾಲವು ಸರಿದಂತೆಲ್ಲ ನಾವು ವಯಸ್ಕರಾಗುತ್ತ ಹೋಗುತ್ತೇವೆ, ವೃದ್ಧರಾಗುತ್ತೇವೆ. ಆದರೆ, ಯಾರಿಗೂ ತಾವು ವೃದ್ಧರಾಗುವುದು ಬೇಕಿರುವುದಿಲ್ಲ ಹಾಗೆಂದು ಕಾಲದ ಪರಿಣಾಮದಿಂದ ಯಾರೊಬ್ಬರೂ ತಪ್ಪಿಸಿಕೊಳ್ಳುವುದಾಗುವುದಿಲ್ಲ.

ಕಾಲವು ಪರಮ ಪ್ರಭುವಿನ ಅವ್ಯಕ್ತರೂಪವಾಗಿದೆ. ಅದು ಭಗವಂತನ ವೈಯಕ್ತಿತ್ತ ಆಯುಧ. ನಾವು ದೊಡ್ಡ ದೊಡ್ಡರಾಜರುಗಳು ಬಂದು ಹೋಗಿದ್ದನ್ನು ನೋಡಿದ್ದೇವೆ. ನಮ್ಮ ತಾತ-ಮುತ್ತಾತಂದಿರನ್ನು ನೋಡಿದ್ದೇವೆ. ಕೆಲವರು ಅದಾಗಲೇ ನಮ್ಮೆದುರೇ ಗತಿಸಿ ಹೋಗಿದ್ದಾರೆ. ಇವೆಲ್ಲವೂ ಕಾಲದ ಪರಿಣಾಮ. ಈ ಇಡಿಯ ಜಗತ್ತು ಕಾಲನ ಕೈಲಿದೆ. ಇದೀಗ ಭಗವಾನ್ ಶ್ರೀಕೃಷ್ಣನು ಭೂಮಿಯಿಂದ ಮತ್ಸರಿಗಳನ್ನು ಉಚ್ಚಾಟನೆ ಮಾಡುವ ಸಲುವಾಗಿ ಬಂದಿದ್ದಾನೆ.

ಈ ಶ್ಲೋಕದ ಭಾವಾನುವಾದದಲ್ಲಿ ಪ್ರಭುಪಾದರು ಹೀಗೆ ಹೇಳಿದ್ದಾರೆ:

ಮನುಷ್ಯ ಜೀವಿಗಳಲ್ಲಿ ಎರಡು ವರ್ಗಗಳಿವೆ. ಒಂದು ಮತ್ಸರಿಗಳದ್ದು, ಇನ್ನೊಂದು ವಿಧೇಯರದ್ದು. ಸರ್ವಶ್ರೇಷ್ಠ ಭಗವಂತನು ಏಕನೂ ಸಕಲ ಜೀವಿಗಳ ತಂದೆಯೂ ಆಗಿದ್ದರಿಂದ ಮತ್ಸರಿಸುವ ಜೀವಿಗಳೂ ಕೂಡ ಅವನ ಮಕ್ಕಳೇ ಆಗಿದ್ದಾರೆ. ಆದರೆ ಅವರನ್ನು ಅಸುರರೆಂದು ಕರೆಯಲಾಗಿದೆ. ಪರಮ ಪಿತನಿಗೆ ವಿಧೇಯರಾದ ಜೀವಿಗಳನ್ನು ದೇವತೆಗಳೆಂದು ಕರೆಯಲಾಗಿದೆ.

ಏಕೆ೦ದರೆ ಅವರು ಬದುಕಿನ ಐಹಿಕ ಭಾವನೆಯಿಂದ ಕಲುಷಿತರಾಗಿಲ್ಲ. ಅಸುರರು ಭಗವಂತನ ಅಸ್ತಿತ್ವವನ್ನು ಅಲ್ಲಗಳೆಯುವುದರಿಂದ ಭಗವಂತನ ಮತ್ಸರಿಗಳು ಮಾತ್ರವಲ್ಲ, ಇತರ ಸಕಲ ಜೀವಿಗಳ ಮತ್ಸರಿಗಳೂ ಆಗಿದ್ದಾರೆ. ಭಗವಂತನು ಅಸುರರನ್ನು ಈ ಜಗತ್ತಿನಿಂದ ತೊಲಗಿಸಿ ಪಾಂಡವರಂತಹ ದೇವತೆಗಳ ಆಳ್ವಿಕೆಯನ್ನು ಸ್ಥಾಪಿಸಿದಾಗ, ಈ ಜಗತ್ತಿನಲ್ಲಿ ಅಸುರರ ಪ್ರಾಧಾನ್ಯವನ್ನು ಸಾಂದರ್ಭಿಕವಾಗಿ ತಿದ್ದಿದಂತಾಗುತ್ತದೆ.

ಕಾಲ ಎಂಬ ಭಗವಂತನ ಪ್ರಚ್ಛನ್ನ ಬಿರುದು ಔಚಿತ್ಯಪೂರ್ಣವಾಗಿದೆ. ಆತ ಎಂದೂ ಅಪಾಯಕರನಲ್ಲ, ಆದರೆ ಅವನು ಶಾಶ್ವತತೆ, ಜ್ಞಾನ, ಆನಂದಗಳ ದಿವ್ಯ ರೂಪನಾಗಿದ್ದಾನೆ. ಭಕ್ತರಿಗೆ ಅವನ ನೈಜರೂಪ ತೆರೆದಿರುತ್ತದೆ; ಭಕ್ತರಲ್ಲದವರಿಗೆ ಕಾರಣರೂಪವಾದ ಕಾಲರೂಪನಾಗಿ ಕಾಣಿಸಿಕೊಳ್ಳುತ್ತಾನೆ. ಈ ಕಾರಣ ರೂಪ ಎಂದೂ ಅಸುರರಿಗೆ ಹರ್ಷದಾಯಕವಾಗಿರುವುದಿಲ್ಲ. ಆದ್ದರಿಂದಲೇ, ಭಗವಂತನಿಂದ ಪರಾಜಿತರಾಗಲಾರೆವೆಂಬ ಸುರಕ್ಷಿತ ಭಾವನೆಯನ್ನು ಹೊಂದಲು, ಅವರು ಭಗವಂತನನ್ನು ರೂಪರಹಿತನೆಂದು ಭಾವಿಸುತ್ತಾರೆ.

ಜಗತ್ತಿನಲ್ಲಿ ಎರಡು ಬಗೆಯ ಜನರಿರುವರು. ಭಗವಂತನ ಭಕ್ತರು ಮತ್ತು ನಾಸ್ತಿಕರು. ಅವರನ್ನು ‘ಅಸುರʼರು ಎಂದೂ ಹೇಳಬಹುದು. ಇತರ ದೇವತೆಗಳನ್ನು ಪೂಜಿಸುವವರು ಕೂಡ ಪರೋಕ್ಷವಾಗಿ ಪರಮ ಪ್ರಭುವನ್ನೇ ಪೂಜಿಸಿದಂತೆ ಎಂದು ಭಗವದ್ಗೀತೆಯಲ್ಲಿ ಹೇಳಿದೆ. ಶಾಸ್ತ್ರಗಳಲ್ಲಿ ‘ವಿಷ್ಣುಭಕ್ತಃ ಸ್ಮೃತೋ ದೈವ’ ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ಯಾರು ಭಗವಾನ್ ಶ್ರೀ ವಿಷ್ಣು ಅಥವಾ ಕೃಷ್ಣ ಅಥವಾ ನಾರಾಯಣನನ್ನು ಪೂಜಿಸುತ್ತಾರೋ, ಅವರನ್ನು ದೇವತೆಗಳೆಂದೇ ತಿಳಿಯಬೇಕು. ಹಾಗೆಯೇ ಭಗವಂತನನ್ನು ಸ್ತುತಿಸದವರು ದೇವತೆಗಳ ವಿರುದ್ಧ- ಅಂದರೆ, ಅಸುರರು ಎಂದು ತಿಳಿಯಬೇಕು!

ಭಗವದ್ಗೀತೆಯ 16ನೇ ಅಧ್ಯಾಯದಲ್ಲಿ ಶ್ರೀಕೃಷ್ಣನು ದೇವತೆ ಮತ್ತು ಅಸುರರ ಎಲ್ಲ ಗುಣಗಳನ್ನು ಸ್ಪಷ್ಟೀಕರಿಸುತ್ತಾನೆ. 16ನೇ ಅಧ್ಯಾಯವು ದಿವ್ಯ ಮತ್ತು ದುಷ್ಟ ಗುಣಗಳ ವಿವರಣೆಗಾಗಿಯೇ ಬಹುಪಾಲು ಮೀಸಲಿದೆ. ಸರ್ವೇಸಾಮಾನ್ಯವಾಗಿ ನಾವು ‘ ಅಸುರ’ ಎಂದಾಕ್ಷಣ ದೊಡ್ಡ ದೇಹದ ಅಮಾನುಷ ಜೀವಿಗಳನ್ನು ಕಲ್ಪಿಸಿಕೊಳ್ಳತೊಡಗುತ್ತೇವೆ.

ಕಪ್ಪು ಬಣ್ಣದ, ಕುರೂಪದ, ವಿಚಿತ್ರ ರೂಪ ನಮ್ಮ ಕಣ್ ಕಟ್ಟುತ್ತದೆ. ಆದರೆ ಭಗವಾನ್ ಶ್ರೀಕೃಷ್ಣನು ‘ಅಸುರ’ರ ನಿಜವಾದ ಗುಣಲಕ್ಷಣಗಳೇನು ಎಂಬುದನ್ನು ಭಗವದ್ಗೀತೆಯಲ್ಲಿ ಬಹಳ ಚೆನ್ನಾಗಿ ವಿವರಿಸಿರುವನು.

ಇಲ್ಲಿ ಮೊದಲು ಭಗವಂತನು ದಿವ್ಯ ಗುಣಗಳ, ದೈವೀಗುಣಗಳ ಕುರಿತು ಹೇಳಿರುವನು; ನಿರ್ಭೀತಿ, ಪಾವಿತ್ರ್ಯ, ಸಂಸ್ಕೃತಿ, ಸಭ್ಯತೆ, ಆಧ್ಯಾತ್ಮಜ್ಞಾನ, ದಾನಗುಣ, ಸ್ವನಿಯಂತ್ರಣ, ಯಾಗಾದಿಗಳ ಆಚರಣೆ, ವೇದಾಧ್ಯಯನ, ವ್ರತ, ಜಪ-ತಪ, ಸರಳತೆ, ಅಹಿಂಸೆ… ಹೀಗೇ ಕೃಷ್ಣನು ದೈವೀಗುಣಗಳ ಪಟ್ಟಿ ನೀಡಿರುವನು. ಈ ಎಲ್ಲ ಗುಣಗಳು ನಮ್ಮಲ್ಲಿ ಅಲ್ಪಾಂಶದಷ್ಟು ಇದ್ದೇ ಇರುವವು.

ಅಸುರ ಗುಣಗಳಲ್ಲಿ ಯಾವುದನ್ನು ಮಾಡಬೇಕು – ಮಾಡಬಾರದು ಎಂಬ ವಿವೇಚನೆಯೇ ಇರುವುದಿಲ್ಲ. ಶುಚಿತ್ವ, ನಡವಳಿಕೆ, ಸತ್ಯವಚನ ಇವು ಯಾವ ಲಕ್ಷಣಗಳೂ ಇರುವುದಿಲ್ಲ. ಅವರು ಬಹಳವಾಗಿ ಸುಳ್ಳನ್ನಾಡುತ್ತಿರುತ್ತಾರೆ.

ಶ್ರೀಕೃಷ್ಣನು ಹೇಳುತ್ತಾನೆ, ಅಸುರರು ಈ ಜಗತ್ತು ನೈಜವಾದುದಲ್ಲ ಎಂದು ತಿಳಿಯುತ್ತಾರೆ. ಈ ಭೌತಿಕ ಜಗತ್ತು ಮಿಥ್ಯೆ ಎನ್ನುತ್ತಾರೆ. ಇದಕ್ಕೆ ಯಾವ ತಳಹದಿಯೂ ಇಲ್ಲ. ಇದು ಭಗವಂತನ ನಿಯಂತ್ರಣದಲ್ಲಿಲ್ಲ ಎಂದೂ ಅವರು ವಾದಿಸುತ್ತಾರೆ! ಅವರ ಈ ಮಾತುಗಳು ಅದೆಷ್ಟು ಅತಾರ್ಕಿಕವೆಂಬುದು ಮೇಲ್ನೋಟಕ್ಕೆ ತಿಳಿದುಹೋಗುತ್ತದೆ!

ಈ ಜಗತ್ತಿನಲ್ಲಿ ಪ್ರತಿಯೊಂದೂ ಕಾಲಕ್ಕೆ ಸರಿಯಾಗಿ ನಡೆಯುತ್ತ ಸಾಗುತ್ತದೆ. ಪ್ರತಿ ಮುಂಜಾನೆ ಸೂರ್ಯೋದಯವಾಗುತ್ತದೆ. ಹೀಗಿರುವಾಗ, ಜಗತ್ತಿನ ನಿಯಂತ್ರಕನೊಬ್ಬನಿಲ್ಲ ಎಂದು ಅದು ಹೇಗೆ ಹೇಳಲು ಸಾಧ್ಯ!? ಖಂಡಿತವಾಗಿಯೂ ಇರುವನು. ಆದ್ದರಿಂದಲೇ ಪ್ರತಿಯೊಂದೂ ಕಾಲ ಕಾಲಕ್ಕೆ ಸಂಭವಿಸುತ್ತ ಸಾಗುವುದು. ಋತುಗಳು ಬದಲಾಗುವುದು, ಹೂ-ಹಣ್ಣು ಚಿಗುರುವುದು.

ಶ್ರೀಲ ಪ್ರಭುಪಾದರು ಒಂದು ಉದಾಹರಣೆ ನೀಡುತ್ತಿದ್ದರು. ಟಾಟಾ ಅಥವಾ ಬಿರ್ಲಾ, ಅಥವಾ ಯಾರಾದರೂ ಉದ್ಯಮಿಯನ್ನು ಯೋಚಿಸಿಕೊಳ್ಳಿ. ಅವರು ಯಾವುದೋ ಒಂದು ಸ್ಥಳದಲ್ಲಿ ಕುಳಿತಿರಬಹುದು. ಆದರೆ ಅವರ ನಿರ್ದೇಶನದಡಿಯಲ್ಲಿ ನಿರಂತರವಾಗಿ ಒಂದಲ್ಲ ಒಂದು ಕೆಲಸಗಳು ನಡೆಯುತ್ತಲೇ ಇರುತ್ತವೆ.

ಅವರ ಉದ್ದಿಮೆಯು ಹತ್ತು ಹಲವು ಶಾಖೆಗಳನ್ನು ಹೊಂದಿದೆ. ಅದರೆ ಅವೆಲ್ಲದರ ಹಿಂದಿನ ಮಿದುಳು ಅವುಗಳ ನಿರ್ವಾಹಕರದ್ದಾಗಿರುತ್ತದೆ. ಅವರು ಯೋಜನೆಗಳನ್ನು ಹಾಕುತ್ತಾರೆ, ಕಾರ್ಯತಂತ್ರ ರೂಪಿಸುತ್ತಾರೆ. ಮತ್ತು ಎಲ್ಲ ಬಗೆಯ ಆಡಳಿತಾತ್ಮಕ ವ್ಯವಸ್ಥೆಗಳನ್ನೂ ಕಲ್ಪಿಸುತ್ತಾರೆ. ಇದರಿಂದ ಎಲ್ಲ ಕೆಲಸಗಳೂ ಸುಗಮವಾಗಿ ಸಾಗಿ ಅಂತಿಮ ಉತ್ಪನ್ನ ದೊರಕುತ್ತದೆ. ಪ್ರತಿಯೊಂದು ಶಾಖೆಯ ಪ್ರತಿ ಕಚೇರಿಯಲ್ಲೂ ಅವರು ಕಾಣಿಸಿಕೊಳ್ಳಬೇಕೆಂದೇನೂ ಇಲ್ಲ. ಅವರು ಒಂದೆಡೆ ಕುಳಿತು ಎಲ್ಲವನ್ನೂ – ಎಲ್ಲರನ್ನೂ ನಿಯಂತ್ರಿಸುತ್ತಾರೆ.

ಇದೇ ಬಗೆಯಲ್ಲಿ ಜಗತ್ತಿನ ಆಡಳಿತ ಸೂತ್ರವು ಭಗವಂತನ ಕೈಲಿದೆ. ಆದರೆ ಈ ಅಸುರ ಪಂಗಡದ ಜನರು, ಜಗತ್ತಿಗೆ ಆಧಾರ ಯಾರೂ ಇಲ್ಲವೆಂದು ವಾದಿಸುತ್ತಾರೆ! ಭಗವಂತನ ನಿಯಂತ್ರಣವೆಂಬುದೇ ಇಲ್ಲವೆನ್ನುತ್ತಾರೆ.

ಆದರೆ, ಭಗವಾನ್ ಶ್ರೀಕೃಷ್ಣನೇ ಸ್ವತಃ ಇವೆಲ್ಲವನ್ನೂ ಹೇಳಿರುವನು. ಇದೇ ಅಧ್ಯಾಯದ 18ನೇ ಶ್ಲೋಕದಲ್ಲಿ: ಮಿಥ್ಯಾಹಂಕಾರ, ಬಾಹುಬಲ, ಜಂಭ, ಕಾಮವಾಸನೆ ಮತ್ತು ಕ್ರೋಧಗಳಿಂದ ಉನ್ಮತ್ತರಾದವರು ಭಗವಂತನನ್ನು ಕುರಿತು ಮತ್ಸರ ತಾಳುವರು ಎಂದು ಹೇಳಿರುವನು.

ನಮ್ಮ ನೈಜ ಅಹಂಕಾರವು ‘ನಾವೆಲ್ಲರೂ ಭಗವಂತನ ಸೇವಕರು’ ಎಂಬ ತಿಳುವಳಿಕೆಯಾಗಿದೆ. ಆದರೆ, ಅಸುರರು ಭಗವಂತನನ್ನು ನಂಬುವುದಿಲ್ಲ. ಮಿಥ್ಯಾಹಂಕಾರ, ಬಲ, ಗರ್ವ ಇವುಗಳಿಂದ ಕೂಡಿದ ಅವರು ಶಕ್ತಿಶಾಲಿ ಅಸುರರಾಗಿ ಬೀಗುವರು. ಉದಾಹರಣೆಗೆ, ನಾವು ರಾವಣನನ್ನು ನೋಡಬಹುದು. ಹಿರಣ್ಯಕಶಿಪುವನ್ನು ನೋಡಬಹುದು.

ಅವರು ಬಹಳ ಬಹಳ ಶಕ್ತಿಶಾಲಿ ಅಸುರರು. ಅವರು ತಮ್ಮನ್ನು ತಾವು ಸ್ವತಃ ರಕ್ಷಕರೆಂದು ತಿಳಿದಿದ್ದರು. ತಮ್ಮ ಇಂದ್ರಿಯ ಸುಖದ ಅನುಭೂತಿಗೆ ಯಾರೂ ಅಡ್ಡಿಪಡಿಸಬಾರದೆಂದು ಬಯಸಿದ್ದರು. ಇದು ಕೂಡ ಅಸುರರ ಗುಣಗಳಲ್ಲೊಂದು. ಅವರು ಕೇವಲ ಇಂದ್ರಿಯ ತೃಪ್ತಿಯ ಕಾರ್ಯಗಳಲ್ಲಿ ಮಗ್ನರಾಗಿರುವರು.

ಕಾಮತೃಷೆ, ಕ್ರೋಧ ಮತ್ತು ದೇವೋತ್ತಮ ಪರಮಪುರುಷನೆಡೆಗೆ ಮತ್ಸರ- ಇವು ಅಸುರರಲ್ಲಿರುವ ಪ್ರಧಾನ ಅವಗುಣಗಳು, ಶ್ರೀಲ ಪ್ರಭುಪಾದರು ಹೇಳುವಂತೆ ಯಾರು ದೇಹಭಾವನೆಯಲ್ಲಿ ಮುಳುಗಿರುತ್ತಾರೆಯೋ ಅಂತಹವರು ನೈಜ ಧರ್ಮದ ವಿರುದ್ಧ ನಡೆಯುವರು.

ಶ್ರೀಕೃಷ್ಣನು ಹೇಳುತ್ತಾನೆ, “ಯಾರು ಮತ್ಸರಿಗಳೂ, ದುಷ್ಟರೂ ಆಗಿರುವರೋ ಅವರು ನೀಚಾಧಮರೇ ಸರಿ. ನಾನು ಅವರನ್ನು ವಿವಿಧ ಅಸುರೀ ಕುಲಗಳ ಭೌತಿಕ ಸಾಗರದಲ್ಲಿ ಮುಳುಗಿಸಿಬಿಡುತ್ತೇನೆ.” ಭಗವಂತನು ಇಂತಹ ಅಸುರರನ್ನು ಖಂಡಿಸಿದ್ದಾನೆ ಮತ್ತು ಅವರನ್ನು ವಿವಿಧ ಯೋನಿಗಳಲ್ಲಿ ಮತ್ತೆ ಮತ್ತೆ ಹುಟ್ಟಿಬರುವಂತೆ ಮಾಡುತ್ತೇನೆ ಎಂದಿದ್ದಾನೆ.

ನೀವು ಕೇಳಬಹುದು: ಭಗವಂತನು ಕರುಣಾಮಯಿಯಾದಲ್ಲಿ ಅವನೇಕೆ ಹಾಗೆ ಶಿಕ್ಷಿಸಬೇಕು? ಎಂದು. ವಾಸ್ತವವಾಗಿ ನಮಗಿದು ಶಿಕ್ಷೆಯಂತೆ ಕಂಡರೂ, ಪರಮಪ್ರಭುವಾದ ಶ್ರೀಕೃಷ್ಣನು ಆ ಜೀವಿಯ ಮೇಲಿನ ಕರುಣೆಯಿಂದಾಗಿಯೇ, ಅದಕ್ಕೆ ಉಪಯೋಗವಾಗಲೆಂದೇ ಹಾಗೆ ಮಾಡುವನು.

ಭಗವಂತನು ಪರಮಸತ್ಯನಾದ್ದರಿಂದ ಆತ ಮಾಡುವುದೆಲ್ಲವೂ ಸತ್ಯವೇ ಆಗಿರುವುದು. ಅಲ್ಲಿ ದ್ವಂದ್ವಕ್ಕೆ ಅವಕಾಶವೇ ಇಲ್ಲ. ಶ್ರೀಲ ಪ್ರಭುಪಾದರು ಹೇಳುವಂತೆ, ಅಸುರರು ಭಗವಂತ ಮಾತ್ರವಲ್ಲ, ಇನ್ನಿತರ ಜೀವಿಗಳ ಬಗೆಗೂ ಮತ್ಸರ ಭಾವ ತಾಳಿರುತ್ತಾರೆ.

ಇದಕ್ಕೆ ಉದಾಹರಣೆಯಾಗಿ ಹಿರಣ್ಯಕಶಿಪುವನ್ನು ನೋಡಬಹುದು. ನಮಗೆಲ್ಲ ತಿಳಿದಿರುವಂತೆ ಹಿರಣ್ಯಕಶಿಪು ಉಗ್ರ ತಪಸ್ಸು ಮಾಡಿ, ಕಠಿಣ ವ್ರತಗಳನ್ನು ಆಚರಿಸಿ ಬ್ರಹ್ಮನನ್ನು ಒಲಿಸಿಕೊಂಡನು. ಅವನು, ತಾನು “ಅಮರ’ನಾಗಿ ಉಳಿಯಬೇಕೆನ್ನುವ ವರವನ್ನು ಬಯಸಿದ್ದನು.

ವಾಸ್ತವವಾಗಿ ಪ್ರತಿಯೊಂದು ಜೀವಿಯೂ ಸಾಯಲೇಬೇಕು. ಇದು ಅನಿವಾರ್ಯ. ಇದುವೇ ನಿಯಮ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳುವಂತೆ, ನಾವು ಹುಟ್ಟಿದ ಕೂಡಲೇ ನಮ್ಮ ಸಾವೂ ಸಹ ನಿಶ್ಚಿತವಾಗಿಬಿಡುತ್ತದೆ. ಮತ್ತು ನಾವು ಸತ್ತ ಕೂಡಲೇ ಜನನವೂ ಸಹ, ಪುನರ್ಜನ್ಮವೂ ಸಹ ನಿಶ್ಚಿತವಾಗಿ ಬಿಡುತ್ತದೆ.

ಸಂಗತಿ ಹೀಗಿದ್ದರೂ ದೈತ್ಯನಾದ ಹಿರಣ್ಯಕಶಿಪು ಯಾವ ಅಡಚಣೆಯೂ ಇಲ್ಲದೆ ಇಂದ್ರಿಯ ಸುಖವನ್ನು ಅನುಭವಿಸಲು ಬಯಸಿದ್ದನು. ಇದು ಭಕ್ತನಿಗೆ ತೀರಾ ವಿರುದ್ಧವಾದ ಮನಃಸ್ಥಿತಿ. ಭಕ್ತನು ಭಗವಂತನಿಗೆ ಅಡಚಣೆಯಿಲ್ಲದೆ ಸೇವೆಯನ್ನು ಸಲ್ಲಿಸಲು ಬಯಸುತ್ತಾನೆ. ಅವನಲ್ಲಿ ಭಗವತ್ ಭಾವ ತುಂಬಿರುತ್ತದೆ.

ಆದರೆ ಅಸುರರು ನಿರಂತರ ಇಂದ್ರಿಯ ಸುಖ ಅಪೇಕ್ಷಿಸುತ್ತಾರೆ. ಆದ್ದರಿಂದಲೇ ಹಿರಣ್ಯಕಶಿಪು ಅಂತಹ ಘನಘೋರ ತಪಸ್ಸನ್ನು ಆಚರಿಸಿದುದು. ಆ ಕಾರಣದಿಂದಲೇ ಆ ದೈತ್ಯನು 30ರಿಂದ 35 ಸಾವಿರ ವರ್ಷಗಳ ಪರ್ಯಂತ ಬ್ರಹ್ಮನನ್ನು ಒಲಿಸಿಕೊಳ್ಳುವ ಸಲುವಾಗಿ ತಪಸ್ಸು ಮಾಡಿದುದು. ಬಹಳ ಜಟಿಲವಾದ ತಪಸ್ಸದು.

ಆ ಮೂಲಕ ಅವನು ತನಗೆ ಸಾವಿಲ್ಲದಂತೆ ಅನುಗ್ರಹಿಸಬೇಕು ಎಂದು ಕೇಳಿಕೊಂಡನು. ಅದಕ್ಕಾಗಿ ಅವನು – ‘ನೆಲದ ಮೇಲಾಗಲೀ, ಆಕಾಶದಲ್ಲಾಗಲೀ, ಮನುಷ್ಯನಿಂದಾಗಲೀ, ಪ್ರಾಣಿಯಿಂದಾಗಲೀ ಸಾವು ಉಂಟಾಗಬಾರದು’ ಎಂದು ತಾಕೀತು ಮಾಡಿದನು.

ಅವನ ಈ ನಿಬಂಧನೆಗಳು ಬ್ರಹ್ಮನನ್ನು ಕೂಡ ಇಕ್ಕಟ್ಟಿಗೆ ಸಿಲುಕಿಸಿದವು. ಏಕೆಂದರೆ, ಆ ದೈತ್ಯನು ದೇವತೆಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದನು. ಆದರೆ ಅವನು ವರ ನೀಡಲೇಬೇಕಾಗಿತ್ತು. ಅಂತಿಮವಾಗಿ ಭಗವಂತನು ನರಸಿಂಹನ ಅವತಾರವೆತ್ತಿ ಬಂದು ದುಷ್ಟ ಹಿರಣ್ಯಕಶಿಪುವಿನ ವಧೆ ಮಾಡಿದನು.

ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ‘ಸಂಭವಾಮಿ ಯುಗೇ ಯುಗೇ’ ಎಂದು ಘೋಷಿಸಿದ್ದಾನೆ. ಅದರಂತೆ, ಆತನು ಭಕ್ತರ ಬಯಕೆಯನ್ನು ಈಡೇರಿಸುವ ಸಲುವಾಗಿ, ದುಷ್ಟರ ಸಂಹಾರಕ್ಕಾಗಿ ಮತ್ತೆ ಮತ್ತೆ ಅವತಾರ ತಾಳಿ ಬರುತ್ತಾನೆ. ಬ್ರಹ್ಮನು ಹಿರಣ್ಯಕಶಿಪುವಿನ ನಿಬಂಧನೆಗಳಿಂದ ಇಕ್ಕಟ್ಟಿನ ಪರಿಸ್ಥಿತಿ ತಲಪಿದ್ದನು.

ಪರಮ ಭಕ್ತನಾದ ಬ್ರಹ್ಮನನ್ನು ಅದರಿಂದ ಪಾರುಮಾಡಲು ನಾರಾಯಣನು ಬಯಸಿದನು. ಆದರಂತೆ, ಹಿರಣ್ಯಕಶಿಪು ಹಾಕಿದ ನಿಬಂಧನೆಗಳಿಗೆ ಪ್ರತ್ಯುತ್ತರವಾಗಿ ಭಗವಂತನು ಸೂಕ್ತ ಅವತಾರ ತಾಳಿ ಬಂದು ಸಂಹಾರ ಕಾರ್ಯ ನಡೆಸಿದನು.

ಈ ಹಿರಣ್ಯಕಶಿಪುವಾದರೂ ಅದಷ್ಟು ಮತ್ಸರಿಯಾಗಿದ್ದನೆಂದರೆ, ಸದಾ ಹರಿನಾಮ ಸ್ಮರಣೆ ಮಾಡುತ್ತಿದ್ದ ಸ್ವಂತ ಮಗ ಪ್ರಹ್ಲಾದನನ್ನೇ ಕೊಲ್ಲಿಸಹೊರಟಿದ್ದನು. ಪ್ರಹ್ಲಾದನ ಸಾಯಿಸಲು ಅದೆಷ್ಟು ಕಟ್ಟು ನಿಟ್ಟಾದ ನಿರ್ಬಂಧವಿತ್ತೆಂದರೆ, ಅಲ್ಲಿ ಹರಿ ಶ್ರವಣ, ಕೀರ್ತನ, ಸೇವನಗಳೇ ಮೊದಲಾದ ಭಕ್ತಿಸೇವೆಗಳಿಗೆ ಅವಕಾಶವೇ ಇರಲಿಲ್ಲ. ಆದರೂ ಪರಮಭಾಗವತನಾದ ಆ ಬಾಲಕನು ಸದಾ ಹರಿಸ್ಮರಣೆಯಲ್ಲಿ ಮಗ್ನನಾಗಿರುತ್ತಿದ್ದನು.

ಸ್ವತಃ ತ೦ದೆಯಾದವನು ಮಗನನ್ನು ಕೊಲ್ಲಿಸುವನೆ? ಎಂದು ನೀವು ಕೇಳಬಹುದು. ಯಾಕಾಗಬಾರದು? ಪ್ರಭುಪಾದರು ಹೇಳುತ್ತಾರೆ, ಅಸುರೀ ಮನಃಸ್ಥಿತಿಯವರು ತಮ್ಮ ಇಂದ್ರಿಯ ಸುಖಕ್ಕಾಗಿ ಎಂತಹ ಹೇಯ ಕೃತ್ಯವನ್ನಾದರೂ ಮಾಡಬಲ್ಲರು ಎಂದು.

ದೈತ್ಯರಾಜ ಹಿರಣ್ಯಕಶಿಪುವು ತನ್ನ ಮಗನನ್ನು ಬ್ರಾಹ್ಮಣರಿಬ್ಬರ ಬಳಿ ವಿದ್ಯಾಭ್ಯಾಸಕ್ಕೆ ಕಳುಹಿಸಿದನು. ರಾಜನೀತಿ, ಅರ್ಥಶಾಸ್ತ್ರ ಇತ್ಯಾದಿಗಳ ಅಧ್ಯಯನ ಮಾಡಿಸುವುದು ಆತನ ಇಂಗಿತವಾಗಿತ್ತು. ಆದರೆ ಪ್ರಹ್ಲಾದನು ಅದಾಗಲೇ, ತಾನು ತನ್ನ ತಾಯಿಯ ಉದರದಲ್ಲಿದ್ದಾಗಲೇ ದೇವರ್ಷಿ ನಾರದರಿಂದ ಹರಿನಾಮ ದೀಕ್ಷೆ ಪಡೆದುಕೊಂಡುಬಿಟ್ಟಿದ್ದನು.

ಅವನು ಆಧ್ಯಾತ್ಮಿಕವಾಗಿ ಸಂಪೂರ್ಣ ವಿಕಸಿತ ಜೀವಿಯಾಗಿದ್ದನು. ಅವನಿಗೆ ಭೌತಿಕ ಸುಖ-ಸಂತೋಷಗಳಲ್ಲಿ ಎಷ್ಟು ಮಾತ್ರದ ಆಸಕ್ತಿಯೂ ಇರಲಿಲ್ಲ. ಆದ್ದರಿಂದ, ಗುರುಕುಲದಲ್ಲಿ ಸಮಯ ಸಿಕ್ಕಾಗಲೆಲ್ಲ ತನ್ನ ಸಹಪಾಠಿಗಳಿಗೆ ಬೋಧನೆಯನ್ನು ಮಾಡುತ್ತಿದ್ದನು. ಅಲ್ಲಿರುತ್ತಿದ್ದವರೆಲ್ಲರೂ ಅಸುರ ಬಾಲಕರೇ ಆಗಿದ್ದರೂ, ಪ್ರಹ್ಲಾದ ಮಹಾರಾಜನ ಕಾರಣದಿಂದಾಗಿ ಅವರಲ್ಲಿ ಕೆಲವರು ಭಕ್ತರಾಗಿ ಪರಿವರ್ತಿತರಾದರು.

ಇದರ ಪರಿಣಾಮ ಯಾವ ಸ್ತರವನ್ನು ತಲಪಿತು ಎಂಬುದನ್ನು ನಾವು ಬಲ್ಲೆವು. ಎಳೆಯ ಬಾಲಕ ಪ್ರಹ್ಲಾದನ ಮೇಲೆರಗಿದ ದಂಡನೆಗಳನ್ನೂ ಬಲ್ಲೆವು. ಆಗ ಶ್ರೀಕೃಷ್ಣನು ‘ಪರಿತ್ರಾಣಾಯ ಸಾಧೂನಾಮ್ ವಿನಾಶಾಯ ಚ ದುಷ್ಕೃತಾಂ’ ಎಂದಿದ್ದ ತನ್ನ ಮಾತನ್ನು ನಡೆಸಿಕೊಡಲೆಂದು ನರಸಿಂಹ ರೂಪಿಯಾಗಿ ಬಂದು ಹಿರಣ್ಯಕಶಿಪುವನ್ನು ಕೊಂದು ಹಾಕಿದನು.

ಪ್ರಭುವಾದರು ಹೇಳುವಂತೆ, ಭಗವಂತನು ಯಾವುದೇ ಬಗೆಯಲ್ಲಾದರೂ ಹಿರಣ್ಯಕಶಿಪುವನ್ನು ದಂಡಿಸಬಹುದಿತ್ತು. ಮೃತ್ಯು ಅಥವಾ ತನ್ನ ಯಾವುದೇ ಪ್ರತಿನಿಧಿಯ ಮೂಲಕ ಆತನನ್ನು ಸಂಹರಿಸಬಹುದಿತ್ತು. ಆದರೆ ಭಗವಂತನಿಗೆ ತನ್ನ ಭಕ್ತನ ಸಂಕಷ್ಟವನ್ನು ನೋಡಲಾಗುವುದಿಲ್ಲ. ಶ್ರೀಕೃಷ್ಣನು ಎಂದೂ ಅದನ್ನು ಸಹಿಸಲಾರ.

ಯಾವ ಜೀವಿಯೂ ತನ್ನ ಮಿತಿ ಮೀರಿ ಧಾರ್ಷ್ಟ್ಯ ಮೆರೆಯುವುದನ್ನು ಕೂಡ ಭಗವಂತನು ಮನ್ನಿಸಲಾರ. ಆ ಕಾರಣದಿಂದಲೇ ಅವನು ತಾನೇ ವಿವಿಧ ರೂಪಗಳನ್ನು ಧರಿಸಿ, ಭಕ್ತರ ರಕ್ಷಣೆಗೆ ಧಾವಿಸಿಬರುವನು. ಪ್ರಹ್ಲಾದನ ವಿಷಯದಲ್ಲಿಯೂ ಹಾಗೆಯೇ ಆಯಿತು.

ಭಗವಂತನು ಜಗದ್ಧೋದರಕ್ಕಾಗಿ ಅವತಾರ ತಳೆದು ಬರುವಾಗಲೆಲ್ಲ ತಾನೊಬ್ಬನೆ ಬರುವುದಿಲ್ಲ. ಅವನ ಸೇವೆಗಾಗಿ, ಅವನ ಲೀಲೆಯಲ್ಲಿ ಭಾಗಿಗಳಾಗಲು ಆಧ್ಯಾತ್ಮಿಕ ಲೋಕದ ಶುದ್ಧ ಭಕ್ತರು ಅವನೊಂದಿಗೆ ಅವತರಿಸಿ ಬರುತ್ತಾರೆ.

ದ್ವಾಪರ ಯುಗದಲ್ಲಿ ಭಗವಾನ್ ಶ್ರೀಕೃಷ್ಣನು ತನ್ನ ಶುದ್ಧ ಭಕ್ತರಾದ ಪಾಂಡವರಿಗೆ ಸಹಾಯ ಮಾಡಲು ಕುರುಕ್ಷೇತ್ರ ಯುದ್ಧವನ್ನು ಆಯೋಜಿಸಿದನು. ತಾನೇ ಅರ್ಜುನನ ಸಾರಥಿಯಾಗಿ ನಿಂತನು! ರಣರಂಗದಲ್ಲಿ ಭಗವದ್ಗೀತೆಯನ್ನು ಬೋಧಿಸಿದನು.

ಕೃಷ್ಣನು ಹೇಳುತ್ತಾನೆ…. ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ…’ ಯಾವ ಸಂದರ್ಭಗಳಲ್ಲಿ ಧರ್ಮಕ್ಕೆ ಚ್ಯುತಿಯುಂಟಾಗುತ್ತದೆಯೋ ಆಗ…..

ಇಲ್ಲಿ ‘ಧರ್ಮ’ ಎಂದರೆ ‘ಜಾತಿ’ ಅಥವಾ ʼಮತೀಯ ಆಚರಣೆ’ಗಳಲ್ಲ. ‘ಧರ್ಮ’ ಅ೦ದರೆ ನಿರ್ದಿಷ್ಟ ಗುಣ. ಬೆಂಕಿಯ ಧರ್ಮ ಸುಡುವುದು. ‘ಸಿಹಿ’ಯಾಗಿರುವುದು ಸಕ್ಕರೆಯ ಧರ್ಮವೇ ಸರಿ. ಬೆಂಕಿಯಿಂದ ಶಾಖವನ್ನು ಸಕ್ಕರೆಯಿಂದ ಸಿಹಿಯನ್ನು ಬೇರ್ಪಡಿಸಲಾಗದು. ಹಾಗೆಯೇ, ನಮ್ಮ ನೈಜ ಧರ್ಮ- ಭಗವಂತನಿಗೆ ಶರಣಾಗಿ, ಆತನ ಸೇವೆ ಮಾಡುವುದು.

ಭಗವಂತನಿಗೆ ಶರಣಾಗುವುದು, ಆತನ ಸೇವೆಯಲ್ಲಿ ಆನಂದ ಹೊಂದುವುದು. ಇದೇ ಅತ್ಯುನ್ನತ ಧರ್ಮ. ಆದರೆ, ನಾವಿಲ್ಲಿ ಭಗವಂತನಿಂದ ಸ್ವತಂತ್ರರಾಗಿ ಇಂದ್ರಿಯ ಸುಖ ಅನುಭವಿಸಲು ಬಯಸುತ್ತಿದ್ದೇವೆ. ನಾವು ಭಗವಂತನನ್ನು ತೃಪ್ತಿಗೊಳಿಸಿದರೆ, ಇಡಿಯ ವಿಶ್ವವೇ ತೃಪ್ತವಾಗುತ್ತದೆ. ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಭಕ್ತಿಸೇವೆ ಸಲ್ಲಿಸಬೇಕು.

ಅದರ ಹೊರತಾಗಿ ಕಾಮ, ಕ್ರೋಧಾದಿಗಳ ಸಂತೃಪ್ತಿಯಲ್ಲಿ ಮಗ್ನರಾದರೆ ಯಾವ ಫಲವೂ ದೊರಕದು. ಏಕೆಂದರೆ ಅವು ತೃಪ್ತವಾಗುವಂಥವಲ್ಲ. ನಾವು ನಮ್ಮೆಲ್ಲ ಭಾವನೆಗಳನ್ನೂ ಭಗವಂತನಿಗೆ ಅರ್ಪಿಸಬೇಕು. ಭಗವಂತನ ಇಂದ್ರಿಯಗಳನ್ನು ತೃಪ್ತಿಪಡಿಸಬೇಕು. ಆಗ ಎಲ್ಲವೂ ಸಂತೃಪ್ತವಾಗುತ್ತವೆ.

ಆದರೆ ಅಸುರರ ಸ್ವಭಾವ ಹಾಗಲ್ಲ. ಅವರು ಸೃಷ್ಟಿಯ ಸಕಲವೂ ತಮಗಾಗಿಯೇ ಇದೆ ಎಂದು ತಿಳಿಯುತ್ತಾರೆ. ಆದರೆ ಯಾವುದನ್ನೂ ಸಂತೃಪ್ತರಾಗುವಷ್ಟು ಪಡೆಯಲಾಗದೆ, ಪರಮ ಭೋಕ್ತಾರ ದೇವೋತ್ತಮ ಪರಮ ಪುರುಷನಲ್ಲಿ ಮತ್ಸರ ತಾಳುತ್ತಾರೆ. ಅವರಿಗೆ ತಿಳಿಯದು…. ಅಥವಾ ತಿಳಿದೂ ಮರೆತಂತಿರುವರು… ಕಾಲ ರೂಪಿಯಾದ ಭಗವಂತನು ಸಮಯದೊ೦ದಿಗೆ ಎಲ್ಲವನ್ನೂ ನಾಶ ಮಾಡುವನೆಂದು.

ನಾವು ಜಗನ್ನಿಯಮದಂತೆ ಜನನ-ಮರಣಗಳ ನಿರಂತರ ಚಕ್ರದಿಂದ ಪಾರಾಗಬೇಕೆಂದರೆ ಪರಮ ಪ್ರಭುವಿನ ಮೊರೆ ಹೋಗಬೇಕು. ಶುದ್ಧ ಭಕ್ತಿಸೇವೆ ನಮ್ಮನ್ನು ಅಂತಹ ಸಂಕಟದಿಂದ ಪಾರು ಮಾಡುತ್ತದೆ.

ಮರಣ ಕಾಲದಲ್ಲಿ ಭಗವಂತನನ್ನು ನೆನೆದು ಮೋಕ್ಷ ಪಡೆದ ಅಜಾಮಿಳನ ಕಥೆ ಭಾಗವತದಲ್ಲಿ ಬರುತ್ತದೆ. ಜೀವಮಾನವಿಡೀ ನಾವು ಭಗವಂತನ ಸ್ಮರಣೆಯಲ್ಲಿದ್ದರೆ ಮೃತ್ಯುಭಯವೇ ಇರುವುದಿಲ್ಲ. ಆದ್ದರಿಂದ ನಾವು ಭಗವದ್ಭಕ್ತರಾಗಬೇಕು. ಭಕ್ತರ, ಸುರರ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇದು ಭಕ್ತಿಸೇವೆಯಿಂದ ಸಾಧ್ಯವಾಗುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi