ಶ್ರೀಲ ಕವಿರಾಜ ಗೋಸ್ವಾಮಿ

ಶ್ರೀಲ ಚೈತನ್ಯ ಮಹಾಪ್ರಭುಗಳ ಜೀವನ ಚರಿತ್ರೆಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ‘ಶ್ರೀ ಚೈತನ್ಯ ಚರಿತಾಮೃತ!’ ಇದರ ಕರ್ತೃ ಶ್ರೀ ಕೃಷ್ಣ ದಾಸ ಕವಿರಾಜ ಗೋಸ್ವಾಮಿಗಳು. ಇವರು ಶ್ರೀ ರಘುನಾಥ ದಾಸ ಗೋಸ್ವಾಮಿಗಳಿಂದ ದೀಕ್ಷೆ ಪಡೆದು ಶ್ಯಾಮಕುಂಡದ ಬಳಿ ಪರಿತ್ಯಾಗ ಜೀವನ ನಡೆಸುತ್ತಿದ್ದರು.

ಶ್ರೀ ಕೃಷ್ಣದಾಸರು ‘ಗೋವಿಂದ ಲೀಲಾಮೃತ’ ಎಂಬ ಮಹತ್ಕೃತಿಯನ್ನು ರಚಿಸಿದ್ದರು. ಅದರ ಲಾಲಿತ್ಯವನ್ನು ಮೆಚ್ಚಿ ಶ್ರೀ ಜೀವಗೋಸ್ವಾಮಿಗಳು ಅವರಿಗೆ ‘ಕವಿರಾಜ’ ಎಂಬ ಬಿರುದನ್ನಿತ್ತರು. ಮುಂದೆ, ಬಹುಜನ ಭಕ್ತರ ಅಪೇಕ್ಷೆಯಂತೆ, ಶ್ರೀಮದನ ಮೋಹನದೇವನ ಸಮ್ಮತಿ ಪಡೆದು ಶ್ರೀ ಕೃಷ್ಣ ದಾಸ ಕವಿರಾಜರು ‘ಚೈತನ್ಯ ಚರಿತಾಮೃತ’ ವನ್ನು ರಚಿಸಿದರು.

ಕವಿರಾಜ ಗೋಸ್ವಾಮಿಗಳು ವೈದಿಕ ಶಾಸ್ತ್ರಗಳಲ್ಲಿ ಅಪ್ರತಿಮ ಪಾಂಡಿತ್ಯ ಹೊಂದಿದ್ದರು. ಅವರ ಕೃತಿಗಳಲ್ಲಿ ಶ್ರುತಿ, ಸ್ಮೃತಿ ನ್ಯಾಯ, ಜ್ಯೋತಿಷ್ಯ, ಮತ್ತಿತರ ಲಲಿತ ಕಲೆಗಳ ಮೇಲಿನ ಅವರ ಪ್ರಭುತ್ವವನ್ನು ಕಾಣಬಹುದು. ಆದಾಗ್ಯೂ ಕೂಡ ಅವರು ನಾನೊಬ್ಬ ಕಿವುಡ, ಮೂಕ, ಸಂಪೂರ್ಣ ಅನಕ್ಷರಸ್ಥ, ಲೌಕಿಕ ಚಿಂತನೆಯವನು ಮತ್ತು ಕ್ರಿಮಿಗಿಂತ ಕೀಳಾದವನು’ ಎಂದು ದೀನರಾಗಿ ಹೇಳಿಕೊಳ್ಳುತ್ತಿದ್ದರು.

ಅವರ ಈ ವಿನಮ್ರತೆಯೇ ಅವರ ಸಂಪೂರ್ಣ ಜ್ಞಾನದ ಕುರುಹಾಗಿತ್ತು. ಈ ಕಾರಣದಿಂದಲೇ ಶ್ರೀಕೃಷ್ಣದಾಸ ಕವಿರಾಜ ಗೋಸ್ವಾಮಿಗಳಿಗೆ ‘ಹುಲ್ಲಿನ ಎಸಳಿಗಿಂತಲೂ ದೀನ; ಮರಕ್ಕಿಂತಲೂ ಹೆಚ್ಚು ಸಹನಾಶೀಲ’ ಎಂಬ ವಿಶೇಷಣ ಅಂಟಿಕೊಂಡಿತು.

ಶ್ರೀ ಚೈತನ್ಯ ಮಹಾಪ್ರಭುಗಳ ಅನುಚರ – ಮುಕ್ತಾತ್ಮರಾದ ಶ್ರೀ ಕೃಷ್ಣದಾಸ ಕವಿರಾಜ ಗೋಸ್ವಾಮಿಗಳ ಸಾಹಚರ್ಯದಿಂದ (ಶ್ರೀ ಚೈತನ್ಯ ಚರಿತಾಮೃತ ಪಠಣದ ಮೂಲಕ) ವ್ಯಕ್ತಿಯೊಬ್ಬವೈಷ್ಣವ ಲಕ್ಷಣಗಳಾದ ದೈನ್ಯ, ಮುಗ್ಧತೆ, ಏಕತೆ, ಸಮಾನತೆ, ಮೃದು ಸ್ವಭಾವ, ಪರಿಶುದ್ಧತೆ, ಸ್ವಾರ್ಥರಾಹಿತ್ಯ, ಸಹನೆ, ಕರುಣೆ, ಗುರುತ್ವ, ಭೌತಿಕ ಬಯಕೆಗಳಿಂದ ಬಿಡುಗಡೆ, ಸ್ಥಿತ ಪ್ರಜ್ಞೆ, ಷಡ್ಗುಣಗಳ ಮೇಲೆ ನಿಯಂತ್ರಣ ಮೊದಲಾದವೆಲ್ಲವನ್ನು ಪಡೆಯಬಹುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi