– ಆಕರ : ಶ್ರೀವಾಸುದೇವ ಕೇಶವದಾಸ ಇವರ ಆಂಗ್ಲ ಉಪನ್ಯಾಸ, ಅನುವಾದ: ಚೇತನಾ ತೀರ್ಥಹಳ್ಳಿ
ಒಂದು ಹಳ್ಳಿಯಲ್ಲಿ ಒಬ್ಬ ಯುವಕನಿದ್ದ. ಬಹಳಷ್ಟು ಜನ-ಸಂನ್ಯಾಸಿಗಳು, ಯೋಗಿಗಳು ಪ್ರವಚನಗಳನ್ನು ನೀಡುತ್ತ ತಮ್ಮ ರಹಸ್ಯ ವಿದ್ಯೆಗಳನ್ನು ಪ್ರದರ್ಶಿಸುತ್ತಾ ಅವನ ಹಳ್ಳಿಯನ್ನು ಹಾದು ಹೋಗುತ್ತಿದ್ದರು.

ಆ ತರುಣ ಈ ಸಂನ್ಯಾಸಿಗಳಿಂದ ಆಕರ್ಷಿತನಾಗಿ, ತಾನೂ ಅವರಲ್ಲೊಬ್ಬನಾಗಬೇಕು, ಅವರಂತೆಯೇ ಶಕ್ತಿಸಾಮರ್ಥ್ಯಗಳನ್ನು ಪಡೆಯಬೇಕು ಎಂದು ಬಯಸಿದ; ಅದಕ್ಕಾಗಿ ಅವನು ಹಿಮಾಲಯಕ್ಕೆ ತೆರಳಿ ಯೋಗದ ಮೂಲಕ ರಹಸ್ಯ ವಿದ್ಯೆಗಳನ್ನು ಕಲಿಯಲು ನಿರ್ಧರಿಸಿದ. ಅದರಂತೆ ಗೂಢ ಸಿದ್ಧಿಗಳನ್ನು ಪಡೆದ ಮೇಲೆ ಸ್ವಸ್ಥಾನಕ್ಕೆ ಮರಳಿ, ತನ್ನ ಜನರೆದುರು ಅವನ್ನು ಪ್ರದರ್ಶಿಸುವ ಬಯಕೆ ಅವನಲ್ಲಿ ಉಂಟಾಯಿತು.
ಇದೊಂದು ಬಗೆಯ ಸಹಜ ಒತ್ತಡವೆಂದು ಹೇಳಬಹುದು. ನಾವು ಯಾವುದಾದರೂ ರಹಸ್ಯವಾದುದೊ೦ದನ್ನು ಗಳಿಸಿದರೆ, ಅದನ್ನು ಇತರರಿಗೆ ತೋರಿಸುವವರೆಗೂ ಸಮಾಧಾನವಿರುವುದಿಲ್ಲ. ಅದರಂತೆ ಆತನೂ ತಾನು ಕಲಿತ ರಹಸ್ಯ ವಿದ್ಯೆಯನ್ನು ತನ್ನ ಊರಿನ ಜನರೆದುರು ಪ್ರದರ್ಶಿಸಬೇಕೆಂಬ ಬಯಕೆಯಿಂದ ಹಿಮಾಲಯದಿಂದ ತನ್ನ ಹಳ್ಳಿಗೆ ಮರಳಿದ.
ಅಲ್ಲಿನ ಜನರನ್ನು ಕರೆದು, “ನಾನು ದೊಡ್ಡದೊಂದು ರಹಸ್ಯಶಕ್ತಿಯನ್ನು ಗಳಿಸಿದ್ದೇನೆ. ನಾನು “ಲಘಿಮಾಸಿದ್ದಿ”ಯೆಂಬ ಗೂಢವಿದ್ಯೆಯನ್ನು ಸಂಪಾದಿಸಿದ್ದೇನೆ” ಎಂದು ಹೇಳಿಕೊಂಡ. ಹಳ್ಳಿಗರು ಹಿಮಾಲಯಕ್ಕೆ ಹೋಗಿ ಈತ ಅದ್ಭುತವಾದ ಏನನ್ನೋ ಕಲಿತು ಬಂದಿರುವನೆಂದುಕೊಂಡರು.
“ಲಘಿಮಾಸಿದ್ದಿ”ಯೆಂದರೆ ಏನು? ಅವರಲ್ಲೊಬ್ಬ ಕೇಳಿದ. “ಲಘಿಮಾಸಿದ್ದಿ”ಯೆಂದರೆ ಹಗುರಕ್ಕಿಂತ ಹಗುರಾಗುವ ವಿದ್ಯೆ” ಅವನೆಂದ. ಹಳ್ಳಿಯ ಮುಗ್ಧ ಜನರು ಆಶ್ಚರ್ಯದಿಂದ ಕಣ್ಣರಳಿಸುತ್ತಾ, “ಓಹ್! ನೀನು ನಿಜವಾಗಿಯೂ ಹಗುರದಲ್ಲಿ ಹಗುರವಾಗಬಲ್ಲೆಯೇನು!?” ಎಂದು ಕೇಳಿದರು, ಅವರೆಲ್ಲರೂ ಆ ಬಗ್ಗೆ ತಮಗೆ ಮನವರಿಕೆ ಮಾಡಿಕೊಡಲು ಆತ ಪ್ರಾಯೋಗಿಕವಾಗಿ ತನ್ನ ವಿದ್ಯೆಯನ್ನು ತೋರಿಸಬೇಕೆಂದು ಕೇಳಿಕೊಂಡರು.
ಅವನಂತೂ ಅದಕ್ಕೆ ಸಿದ್ಧನಾಗಿಯೇ ಇದ್ದ. ಹಳ್ಳಿಗರು ಕೇಳಿದ ತತ್ ಕ್ಷಣ ಸಂತೋಷದಿಂದ ಒಪ್ಪಿಕೊಂಡ. ಅದರಂತೆ ತಾನು ನೀರಿನ ಮೇಲೆ ನಡೆದು ತೋರಿಸುವುದಾಗಿ ಹೇಳಿದ. ಜನರೆಲ್ಲ ಕಾತರದಿಂದ ನದಿಯ ದಡದಲ್ಲಿ ನೆರೆದರು. ಅವನು ಮಾಡಲಿರುವ ಪವಾಡಕ್ಕೆ ಕಾದರು. ಆ ಯುವಕ ಲೀಲಾಜಾಲವಾಗಿ ನೀರಿನ ಮೇಲೆ ನೆಲದ ಮೇಲೆ ಇರಿಸುವಷ್ಟೇ ಸಹಜವಾಗಿ ಹೆಜ್ಜೆಯಿಕ್ಕುತ್ತಾ ಆಚೆದಡಕ್ಕೆ ನಡೆದು ತಲಪಿದ.
ಜನರೆಲ್ಲಾ ಮೆಚ್ಚುಗೆಯ ಉದ್ಘಾರ ತೆಗೆದರು. ಆತ ಮತ್ತೆ ಆಚೆ ದಡದಿಂದ ನೀರ ಮೇಲೆ ನಡೆದುಕೊಂಡೇ ಈಚೆ ಬಂದು ತಲಪಿದ. ಜನರೆಲ್ಲ ಕರತಾಡನ ಮಾಡುತ್ತಿದ್ದರೆ, ಅವರಲ್ಲೊಬ್ಬ ವೃದ್ಧ ಮಾತ್ರ ” ಮಗೂ, ಕೇವಲ ಎರಡು ರೂಪಾಯಿ ಮೌಲ್ಯದ ಕೆಲಸಕ್ಕೆ ನೀನು ಹಿಮಾಲಯದಲ್ಲಿ 10 ವರ್ಷ ವ್ಯಯಿಸಿದೆಯಾ?” ಎಂದು ಕೇಳಿಬಿಟ್ಟ.
ಯುವಕನಿಗೆ ಗಲಿಬಿಲಿಯಾಯಿತು. ತಾನು ಇಂತಹ ಅದ್ಭುತ ಪವಾಡ ಮಾಡುತ್ತಿದ್ದರೆ, ಅದನ್ನು ಕೇವಲ ‘ಎರಡು ರೂಪಾಯಿ’ಗೆ ಏಕೆ ಹೋಲಿಸುತ್ತಿದ್ದೀರೆಂದು ವಾದಕ್ಕಿಳಿದ. ವೃದ್ಧ ನಗುತ್ತ “ನದಿಯಲ್ಲಿ ಈ ದಡದಿಂದ ಆ ದಡಕ್ಕೆ ಹೋಗಲು ದೋಣಿಯವನಿಗೆ ಎರಡು ರೂಪಾಯಿ ಕೊಟ್ಟರೆ ಸಾಕು, ಇಷ್ಟೆಲ್ಲಾ ಏಕೆ ಪಡಿಪಾಟಲು! ಎರಡು ರೂಪಾಯಿ ಇದ್ದರೆ ಸಾಕು, ನಾನು ಕೂಡ ಹೀಗೆ ನೀರ ಮೇಲೆ ಹೋಗಬಲ್ಲೆ’ ಎಂದ!!
ಈ ಕಥೆಯನ್ನು ಉಲ್ಲೇಖಿಸುತ್ತಾ ಶೀಲ ಪ್ರಭುಪಾದರು, ಕೃಷ್ಣಪ್ರಜ್ಞೆಯ ಹೊರತಾಗಿ ಉಳಿದೆಲ್ಲ ತತ್ತ್ವಶಾಸ್ತ್ರಗಳೂ ‘ಎರಡು ರೂಪಾಯಿ ಮೌಲ್ಯದ ತತ್ತ್ವಜ್ಞಾನವೆಂದು ಹೇಳುತ್ತಾರೆ. ಅವುಗಳು ಅದಕ್ಕಿಂತ ಹೆಚ್ಚಿನವೇನಲ್ಲ!
ಪ್ರಭುಪಾದರು ಭಾಗವತದ 1:13:40ನೇ ಶ್ಲೋಕಕ್ಕೆ ನೀಡಿದ ಭಾವಾರ್ಥದಲ್ಲಿ ಇದನ್ನು ಸ್ಪಷ್ಟಪಡಿಸುತ್ತಾರೆ. ಅದರಲ್ಲಿ ಅವರು, ”ಜಗತ್ತಿನಲ್ಲಿ ವಿವಿಧ ಬಗೆಯ ತತ್ತ್ವಜ್ಞಾನಿಗಳಿದ್ದಾರೆ. ಅವರೆಲ್ಲರಿಗಿಂತಲೂ ಶ್ರೇಷ್ಠ ತತ್ತ್ವಜ್ಞಾನಿಗಳೆಂದರೆ, ಯಾರು ದೇವೋತ್ತಮ ಪರಮಪುರುಷನನ್ನು ನೋಡಿರುತ್ತಾರೋ, ಅವನಿಗೆ ಸ೦ಪೂರ್ಣ ಶರಣಾಗಿ ಭಗವಂತನ ಭಕ್ತಿಸೇವೆಯಲ್ಲಿ ತೊಡಗಿಕೊಂಡಿರುತ್ತಾರೋ ಅವರು ಮಾತ್ರ” ಎಂದು ಹೇಳುತ್ತಾರೆ.
ಅದೇಕೆ ಕೃಷ್ಣಪ್ರಜ್ಞೆಯೇ ಸರ್ವೋತ್ಕೃಷ್ಟ ಮತ್ತು ಉಳಿದೆಲ್ಲವೂ ಎರಡು ರೂಪಾಯಿ ಮೌಲ್ಯದೆಂದು ಹೇಳಲಾಗುತ್ತದೆ? ಏಕೆಂದರೆ, ನಾವು ಕೃಷ್ಣಪ್ರಜ್ಞೆಯಿಂದ ಭಗವಂತನ ಅಲೌಕಿಕ ಪ್ರೇಮದ, ಸೇವೆಯ ಭಾಗ್ಯವನ್ನು ಗಳಿಸಿಕೊಳ್ಳಬಹುದು, ಮತ್ತು ಇದು ಇತರ ಯಾವ ತತ್ತ್ವಗಳಿಂದಲೂ ಸಾಧ್ಯವಾಗದು. ಆದ್ದರಿಂದಲೇ ಕೃಷ್ಣಪ್ರಜ್ಞೆ ಉಳಿದೆಲ್ಲವುಗಳಿಗಿಂತ ಬಹಳ ಬಹಳ ಬಹಳ ಎತ್ತರದಲ್ಲಿರುವುದು.

ಭಾಗವತದಲ್ಲಿ ಯುಧಿಷ್ಟಿರನು ತನ್ನ ದೊಡ್ಡಪ್ಪ ಧೃತರಾಷ್ಟ್ರನು ಯಾವ ಸೂಚನೆಯನ್ನು ನೀಡದೆ ಅರಮನೆ ತೊರೆದುಹೋದುದರಿಂದ ತೀವ್ರ ದುಃಖಿತನಾಗಿ ವ್ಯಾಕುಲಗೊಳ್ಳುವ ಸಂದರ್ಭದ ಚಿತ್ರಣವಿದೆ. ಈ ಸಂದರ್ಭದಲ್ಲಿ ದೇವರ್ಷಿ ನಾರದರು ಅಲ್ಲಿಗೆ ಆಗಮಿಸಿ ಆತನಿಗೆ ಅಲೌಕಿಕ ಜ್ಞಾನವನ್ನು ಬೋಧಿಸುತ್ತಾರೆ.
ಲೌಕಿಕ ಸುಖಭೋಗಗಳಲ್ಲಿ ಮುಳುಗಿದ್ದ ಧೃತರಾಷ್ಟ್ರನಿಗೆ ಭಕ್ತನಾದ ವಿದುರನು ಉಪದೇಶ ನೀಡಿ ಮೇಲೆತ್ತಿದಂತೆ, ನಾರದ ಮುನಿಗಳು ಯುಧಿಷ್ಠಿರನಿಗೆ ಕವಿದಿದ್ದ ಭ್ರಾಂತಿಯ ಮೋಡವನ್ನು ಚದುರಿಸಿದರು.
ಈ ಲೌಕಿಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಯಾತನೆ ಅನುಭವಿಸುತ್ತಿರುವರು. ಧೃತರಾಷ್ಟ್ರನಂಥವರು, ಸಂತ ಸ್ವಭಾವದ ಅನೇಕರು ಯಾತನಾಮಯ ಜೀವನ ನಡೆಸುತ್ತಿರುವರು. ಆದರೆ ಇಲ್ಲಿ ಧೃತರಾಷ್ಟ್ರ, ಯುಧಿಷ್ಠಿರರು ಭಾಗ್ಯಶಾಲಿಗಳು. ಅವರಿಗೆ ಸೂಕ್ತ ಸಮಯದಲ್ಲಿ ಭಗವದ್ಭಕ್ತರ ನಿರ್ದೇಶನಗಳು ದೊರೆತು, ಅವರು ಜ್ಞಾನದ ಉನ್ನತ ವೇದಿಕೆಗೆ ಏರಿಸಲ್ಪಟ್ಟರು. ಆದರೆ ನಮಗೆ ಈ ಬಗೆಯ ಮಾರ್ಗದರ್ಶನ ನೀಡುವವರು ಎಲ್ಲಿದ್ದಾರೆ? ನಮ್ಮನ್ನು ಜ್ಞಾನದ ವೇದಿಕೆಗೆ ಏರಿಸುವವರು ಯಾರಿದ್ದಾರೆ?
ಈ ಪ್ರಶ್ನೆಗೆ ಉತ್ತರ ಹುಡುಕಲು ಕಷ್ಟಪಡಬೇಕಿಲ್ಲ. ನಮ್ಮ ಪೂಜ್ಯ ಆಧ್ಯಾತ್ಮಿಕ ಗುರುಗಳಾದ ಶ್ರೀಲ ಪ್ರಭುಪಾದರೇ ನಮ್ಮನ್ನು ಉನ್ನತ ಜ್ಞಾನದ ಹಾದಿಯಲ್ಲಿ ಮುನ್ನಡೆಸುವರು. ಅವರು ಇಂದಿಗೂ ತಮ್ಮ ಪುಸ್ತಕಗಳ ಮೂಲಕ ನಮ್ಮೊಂದಿಗಿರುವರು. ಇದನ್ನು ಸ್ವತಃ ಶ್ರೀಲ ಪ್ರಭುಪಾದರೆ ”ನಾನು ನನ್ನ ಪುಸ್ತಕಗಳ ಮೂಲಕ ಜೀವಿಸಿರುತ್ತೇನೆ” ಎಂದು ಹೇಳುವ ಮೂಲಕ ಸ್ಪಷ್ಟಪಡಿಸಿರುವರು.
ಆದ್ದರಿಂದ ನಾವು ಕೂಡ ಪ್ರಭುಪಾದರ ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ಜ್ಞಾನದ ಉನ್ನತ ಹಂತಕ್ಕೇರಬಹುದು. ಈ ನಿಟ್ಟಿನಲ್ಲಿ ಶೀಲ ಪ್ರಭುಪಾದರು ಅನುವಾದಿಸಿ, ಭಾವಾರ್ಥ ನೀಡಿರುವ ಶ್ರೀಮದ್ಭಾಗವತ ಮಹಾಪುರಾಣವು ನಮ್ಮ ಸುತ್ತ ಕವಿದಿರುವ ಭ್ರಾ೦ತಿಯನ್ನು ತೊಡೆದು ಜ್ಞಾನದ ಪ್ರಕಾಶ ಹೊರಹೊಮ್ಮಿಸುವಲ್ಲಿ ಆತ್ಯ೦ತ ಪರಿಣಾಮಕಾರಿಯಾಗಿದೆ.
ಯುಧಿಷ್ಠಿರನ ಭ್ರಮೆಯನ್ನು ಕಳೆದ ನಾರದ ಮುನಿಯಷ್ಟೇ ಈ ಗ್ರಂಥವು ಸಹ ಅದ್ಭುತ ಉಪದೇಶವನ್ನು ಸಾರುತ್ತದೆ. ವಾಸ್ತವವಾಗಿ ಶ್ರೀಮದ್ಭಾಗವತದ ರಚನೆಗೆ ವೇದವ್ಯಾಸರನ್ನು ಪ್ರೇರೇಪಿಸಿದವರೇ ಈ ನಾರದ ಮುನಿಗಳು.
ಸುಮಾರು ಐದು ಸಾವಿರ ವರ್ಷಗಳ ಹಿಂದೆ ವೇದವ್ಯಾಸರು ಮಹಾಭಾರತವನ್ನು ರಚಿಸಿದರು. ವೇದಗಳನ್ನು ಸಂಕಲಿಸಿದರು. ಪುರಾಣಗಳನ್ನೂ ಉಲ್ಲೇಖಿಸಿದರು. ತಾವು ಅಷ್ಟೊಂದು ಬಗೆಯ ಗ್ರಂಥಗಳನ್ನು ರಚಿಸಿದ್ದರೂ ಅವರಿಗೆ ತೃಪ್ತಿಯಿರಲಿಲ್ಲ. ಯಾವುದೇ ಅತಿ ಮುಖ್ಯವಾದ ಅಂಶವೇ ತಪ್ಪಿಹೋಗಿದೆ ಎಂದು ಅವರು ಯೋಚಿಸುತ್ತಿದ್ದರು.
ಇದೇ ಸಂದರ್ಭದಲ್ಲಿ ನಾರದ ಮುನಿಗಳು ವ್ಯಾಸರನ್ನು ಭೇಟಿ ಮಾಡಿದರು. ವೇದವ್ಯಾಸರು ಆ ವರೆಗೆ ಬರೆದ ಯಾವ ಕೃತಿಯಲ್ಲಿಯೂ ಭಗವಂತನ ಶುದ್ಧ ಭಕ್ತಿಸೇವೆಯ ಬಗ್ಗೆ ವಿವರಣೆ ಇಲ್ಲವೆಂಬ ಅಂಶವನ್ನು ಎತ್ತಿತೋರಿಸಿದರು. ಅವರ ಉಳಿದ ಕೃತಿಗಳೂ ಲೌಕಿಕ ಸಂಗತಿಗಳಿಂದ ಕಲುಷಿತವಾಗಿವೆಯೆಂದೂ, ಅವು ಯಾತನೆಗೆ ಸಿಲುಕಿರುವ ಮಾನವನನ್ನು ಈ ಲೌಕಿಕ ಜಗತ್ತಿನಿಂದ ಮೇಲೆತ್ತಲಾರವೆಂದೂ ಹೇಳಿದರು.
ಮಾನವನು ನೈಜ ಶಾಂತಿಯನ್ನು, ನೈಜ ತೃಪ್ತಿಯನ್ನು ಪಡೆಯಬೇಕೆಂದಾದಲ್ಲಿ, ಅವನು ಕೇವಲ ಪಾರಮಾರ್ಥಿಕ ಸಂದೇಶಗಳನ್ನು ಕೇಳಬೇಕು. ಭಗವಂತನಿಗೆ ಶುದ್ಧ ಭಕ್ತಿಸೇವೆಯನ್ನು ಅರ್ಪಿಸಬೇಕು ಎಂದು ಹಿತ ನುಡಿದರು.
ನಾರದ ಮುನಿಗಳ ಉಪದೇಶದಿಂದ ಪ್ರೇರಿತರಾದ ವೇದವ್ಯಾಸರು ಭಾಗವತವನ್ನು ರಚಿಸಿದರು. ಭಾಗವತವು ಉಳಿದೆಲ್ಲ ವೈದಿಕ ಸಾಹಿತ್ಯಗಳಿಗಿಂತ ಭಿನ್ನವಾದುದು. ಭಾಗವತಕ್ಕೆ ಸರಿಸಾಟಿಯಾದ ವೇದಶಾಸ್ತ್ರ ಮತ್ತೊಂದಿಲ್ಲ. ಇದು ಎಲ್ಲ ವೈದಿಕ ಶಾಸ್ತ್ರಗಳ ಸಾರ. ಆದ್ದರಿಂದಲೇ, ‘ಸರ್ವವೇದಾಂತ ಸಾರಮ್ ಶ್ರೀಭಾಗವತಮ್ ಇಷ್ಯತೇ’ ಎಂದು ಹೇಳಲಾಗಿದೆ.

‘ಸರ್ವ ವೇದಾಂತ’ – ಎಲ್ಲ ಬಗೆಯ ಸನಾತನ ಶಾಸ್ತ್ರಗ್ರಂಥಗಳು, ಅದರ ಸಾರವೇ ಭಾಗವತ ಕ್ಷೀರ ಸಾಗರ ಮತ್ತದರ ಕೆನೆಯಿದ್ದ ಹಾಗೆ. ಕ್ಷೀರಸಾಗರಕ್ಕೆ ಹೋಲಿಸಿದರೆ ಕೆನೆಯ ಪ್ರಮಾಣ ಅಲ್ಪ. ಆದರೆ ಆ ಇಡಿಯ ಸಾಗರದ ಸತ್ತ್ವ ಈ ಕೆನೆಯಲ್ಲಿರುತ್ತದೆ. ಹಾಗೆಯೇ ವೇದಗಳ ಸತ್ತ್ವ ಭಾಗವತದಲ್ಲಿ ಅಡಕವಾಗಿದೆ. ಅದು ಸಕಲವನ್ನೂ ಒಳಗೊಂಡಿದೆ.
‘ತದ್‌ರಸಾಮೃತ ತೃಪ್ತಸ್ಯ….’ ಯಾರು ಭಾಗವತ ರಸಾಮೃತದ ಪಾನಮಾಡಿ ಪರಿತೃಪ್ತರಾಗಿರುತ್ತಾರೆಯೋ ಅವರು…… ಅಂಥವರಿಗೆ ಬೇರೆ ಯಾವ ಶಾಸ್ತ್ರವೂ ಗ್ರಂಥವೂ ರುಚಿಸದು. ಅದು ಅಷ್ಟರ ಮಟ್ಟಿಗೆ ಪರಿಪೂರ್ಣ ಶಾಸ್ತ್ರಕೃತಿ. ಜೊತೆಗೆ ಅದು ‘ಅಕಳಂಕ ಪುರಾಣ’ವೂ ಹೌದು.
ಶ್ರೀಮದ್ಭಾಗವತಮ್ ಪುರಾಣಮ್…
ಯದ್ ವೈಷ್ಣವಾನಾಮ್ ಪ್ರಿಯಮ್…
ಅದು ಶುದ್ಧ ಭಕ್ತರಿಗೆ ಅತ್ಯಂತ ಪ್ರೀತಿ ಪಾತ್ರವಾದ ಕೃತಿ.
ಭಾಗವತವನ್ನು ʼಅಕಳಂಕ’ ಎಂದು ಹೇಗೆ ಹೇಳುವಿರಿ? ಇದಕ್ಕೆ ಎರಡು ಕಾರಣಗಳು. ಒಂದು, ಅದು ಪರಮಹಂಸರ ಸಂದೇಶಗಳನ್ನೊಳಗೊಂಡಿದೆ ಎನ್ನುವ ಕಾರಣಕ್ಕಾಗಿ ಪರಮಹಂಸ ಅಂದರೆ ಅತ್ಯುನ್ನತ ಹಂತದ ಸಾಧಕ.
ಹಂಸ ಪಕ್ಷಿಯು ಹಾಲು-ನೀರಿನ ಮಿಶ್ರಣದಲ್ಲಿ ನೀರನ್ನು ಬೇರ್ಪಡಿಸಿ ಹಾಲನ್ನು ಮಾತ್ರ ಹೀರುವ ಹಾಗೆ; ಪರಮಹಂಸರು ಹಾಲಿನಲ್ಲಿ ಬೆರೆತ ನೀರಿನಂತೆ ಬೆರೆತು ಹೋಗಿರುವ ಲೌಕಿಕತೆಯನ್ನು ಬೇರ್ಪಡಿಸಿ, ಕೇವಲ ಪಾರಮಾರ್ಥಿಕವಾದುದನ್ನು ಮಾತ್ರ ಪಡೆಯಬಲ್ಲವರಾಗಿರುತ್ತಾರೆ. ಭಾಗವತವು ಇಂತಹ ಪರಮಹಂಸರ ಜೀವನವನ್ನು ವಿವರಿಸುತ್ತದೆ. ಇಲ್ಲಿ ಯಾವ ಬಗೆಯ ಲೌಕಿಕ ಕಲ್ಮಷಗಳಿಲ್ಲ. ಇದು ಪರಿಪೂರ್ಣ- ಪರಿಶುದ್ಧ ಈ ಕಾರಣದಿಂದಲೇ ಇದು ಅಕಳಂಕ.
ಹಾಗೆಯೇ ಮತ್ತೊಂದು ಕಾರಣವನ್ನು ಶ್ರೀಲ ಪ್ರಭುಪಾದರು ಬಹಳ ಸುಂದರವಾಗಿ ವಿವರಿಸುತ್ತಾರೆ;
ನೀವು ವೇದ, ಪುರಾಣಗಳು, ರಾಮಾಯಣ, ಮಹಾಭಾರತ, ಉಪನಿಷತ್ತುಗಳು… ಇವೆಲ್ಲವನ್ನೂ ತೆಗೆದುಕೊಳ್ಳಿ. ಅವೆಲ್ಲವೂ ಒಂದಲ್ಲ ಒಂದು ಬಗೆಯಲ್ಲಿ ಪರಮ ಪ್ರಭುವಿಗೆ ಸಂಬಂಧಿಸಿದುದಾಗಿವೆ. ಯಾವ ಸಾಹಿತ್ಯ ಭಗವಂತನೊಂದಿಗೆ ಬೆಸೆದುಕೊಂಡಿಲ್ಲವೋ ಅದು ವೈದಿಕ ಸಾಹಿತ್ಯವಾಗಲು ಸಾಧ್ಯವಿಲ್ಲ.
ಅದು ಕೇವಲ ಇತಿಹಾಸವಾಗುವುದು. ನಮಗೆ ಕೇವಲ ಇತಿಹಾಸ ಓದುವ ಆಸಕ್ತಿಯಿಲ್ಲ. ನಮಗೆ ಭಗವಂತನೊಂದಿಗೆ ಬೆಸೆದಿರುವ ಇತಿಹಾಸ ಅಧ್ಯಯನ ಮಾಡುವ ಇಚ್ಛೆ ಇದೆ. ಆದ್ದರಿಂದಲೇ ನಮ್ಮ ಸಾಹಿತ್ಯಗಳು ಭಗವಂತನ ಜೊತೆ ಬೆಸೆದುಕೊಂಡಿದೆ. ಹಾಗೆಯೇ ಇನ್ನಿತರ ತತ್ತ್ವಗಳನ್ನೂ ಒಳಗೊಂಡಿವೆ.
ಆದರೆ, ಭಾಗವತದಲ್ಲಿ ಪರಮ ಪ್ರಭುವು ಕೇವಲ ಪೂರಕ ಸಂಗತಿಯಾಗುವುದಿಲ್ಲ. ಇಲ್ಲಿ ಭಗವಂತನೇ ಕೇಂದ್ರಬಿಂದು. ಭಾಗವತ, ನೇರವಾಗಿ ಅವನದೇ ವಿವರಣೆಗಳನ್ನು ನೀಡುವ ಕೃತಿ. ಭಾಗವತದ ಪ್ರಪ್ರಥಮ ಶ್ಲೋಕದಿಂದ ಅಂತಿಮ ಚರಣದವರೆಗೂ ಕೇವಲ ಭಗವಾನ್ ಶ್ರೀಕೃಷ್ಣನ ಸಂದೇಶಗಳು ಮತ್ತು ಅವನ ಶುದ್ಧ ಭಕ್ತರ ಸಂಗತಿಗಳೇ ತುಂಬಿಕೊಂಡಿವೆ. ಕೃಷ್ಣನೇ ಕೇಂದ್ರಬಿಂದು. ಅವನೇ ಅದರ ಆದ್ಯಂತ. ಅದರಲ್ಲಿ ಶ್ರೀಕೃಷ್ಣನ ಹೊರತಾದ ಯಾವ ಚಿತ್ರಣವೂ, ವಿವರಣೆಯೂ ಇಲ್ಲ.

ಭಗವಾನ್ ಶ್ರೀಕೃಷ್ಣ ಮತ್ತು ಅವನ ಸ್ವರೂಪಗಳು. ಇವೇ ಕೃತಿಯ ತುಂಬ ತುಂಬಿಕೊಂಡಿರುವ ಅಂಶಗಳು. ಆದ್ದರಿಂದಲೇ ಭಾಗವತ ಒಂದು ಅಕಳಂಕ ಕೃತಿ. ಭಗವಾನ್ ಶ್ರೀಕೃಷ್ಣನು ಪರಮ ಪರಿಶುದ್ಧನಾದ್ದರಿಂದ, ಮತ್ತು ಸಂಪೂರ್ಣ ಭಾಗವತವು ಶ್ರೀಕೃಷ್ಣನ ಸಂಗತಿಗಳಿಂದಲೇ ತುಂಬಿರುವುದರಿಂದ, ಅದು ಕೂಡ ಪರಮ ಪರಿಶುದ್ಧ ಕಳಂಕರಹಿತ ಕೃತಿ.
ಭಾಗವತವನ್ನು ಓದುವುದರಿಂದ ಎಲ್ಲ ವೇದ ಶಾಸ್ತ್ರಗಳ ಜ್ಞಾನವೂ ನಮ್ಮದಾಗುತ್ತದೆ. ಆದ್ದರಿಂದ ಅವುಗಳನ್ನು ಪ್ರತ್ಯೇಕವಾಗಿ ಓದಬೇಕೆಂದಿಲ್ಲ. ಇಡಿಯ ಜಗತ್ತಿನ ಜ್ಞಾನವೇ ನಮಗೆ ಭಾಗವತ ಅಧ್ಯಯನದಿಂದ ದೊರೆತು ಹೋಗುತ್ತದೆ. ಆದ್ದರಿಂದ ಬೇರೇನನ್ನೂ ಓದಬೇಕಾದ ಅಗತ್ಯವಿಲ್ಲ. ಭಾಗವತ ಓದುವುದರಿಂದ ನಮಗೆ ಜ್ಞಾನ ಪ್ರಾಪ್ತಿಯಾಗುತ್ತದೆ ಎನ್ನುವುದೊಂದು ಸರಳ ಸೂತ್ರ. ಆದ್ದರಿಂದಲೇ ಭಾಗವತ ಒಂದು ಮಹಾಪುರಾಣ.
“ನದಿಗಳಲ್ಲಿ ಅತ್ಯಂತ ಶ್ರೇಷ್ಠವಾದ ನದಿ ಗಂಗಾನದಿ, ಎಲ್ಲ ದೇವತೆಗಳಿಗಿಂತ ಪರಮೋನ್ನತನಾದವನು ಅಚ್ಯುತ, ವೈಷ್ಣವರಲ್ಲಿ ಶಿವನು ಅತಿಶ್ರೇಷ್ಠ; ಹಾಗೆಯೇ ಪರಮೋನ್ನತ ಪುರಾಣವೆಂದರೆ, ಅದು ಶ್ರೀಮದ್ಭಾಗವತ ಮಹಾ ಪುರಾಣ” ಎನ್ನುವ ಮಾತು ಭಾಗವತದ ಮಹಿಮೆಯನ್ನು ಸಾರುತ್ತದೆ.
ಶ್ರೀಮದ್ಭಾಗವತವು ನಮಗೆ ನಿವೃತ್ತಿ ಮಾರ್ಗದ ವಿಜ್ಞಾನವನ್ನು ಬೋಧಿಸುತ್ತದೆ. ನಿವೃತ್ತಿ ಮಾರ್ಗ ಮತ್ತು ಪ್ರವೃತ್ತಿ ಮಾರ್ಗಗಳೆಂಬ ಎರಡು ಮಾರ್ಗಗಳಿವೆ. ನಿವೃತ್ತಿ ಮಾರ್ಗವು ಅಂತಿಮವಾಗಿ ದೀರ್ಘಕಾಲೀನ ಫಲವನ್ನೂ, ಪ್ರವೃತ್ತಿ ಮಾರ್ಗವು ಅಲ್ಪಕಾಲೀನ ಫಲವನ್ನೂ ಗಳಿಸಿಕೊಡುತ್ತವೆ.
ಸಾಮಾನ್ಯವಾಗಿ ಈ ಭೌತಿಕ ಜಗತ್ತಿನ ಜನರು ಅಲ್ಪಕಾಲದ ಲಾಭಗಳತ್ತಲೇ ಅಂಟಿಕೊಂಡಿರುತ್ತಾರೆ. ಈ ದೀರ್ಘಕಾಲವೂ ಕೂಡ ವಾಸ್ತವವಾಗಿ ಅಲ್ಪಕಾಲವೇ. ಏಕೆಂದರೆ ಜೀವನವು ನೀರ ಮೇಲಿನ ಗುಳ್ಳೆಯಂತೆ ಕ್ಷಣಿಕವಾದುದು. ನೈಜ ಜ್ಞಾನವೆಂದರೆ, ಯಾವುದು ಜ್ಞಾನವನ್ನು ದೊರಕಿಸಿಕೊಡುತ್ತದೆಯೋ, ಅದು. ಮತ್ತು ಆ ಜ್ಞಾನವು ಶಾಶ್ವತ ಆತ್ಮದೊಂದಿಗೆ ಇರುವ೦ಥದ್ದು. ಇದನ್ನು ಪಡೆಯುವ ‘ನಿವೃತ್ತಿಮಾರ್ಗ’ವು ಭಾಗವತದಲ್ಲಿ ವಿವರಿಸಲ್ಪಟ್ಟಿದೆ.
ಕೆಲವು ವೈದಿಕ ಸಾಹಿತ್ಯಗಳು ಭಾಗವತವನ್ನು “ನಿಗಮ ಕಲ್ಪತರೋರ್ ಗಲಿತಮ್ ಫಲಮ್” ಎನ್ನುತ್ತವೆ. ಅಂದರೆ, ‘ಭಾಗವತವು ವೇದಗಳೆಂಬ ವೃಕ್ಷಗಳ ಮಾಗಿದ ಫಲ” ಎಂದು. ಒಂದು ಮರವೆ೦ದ ಮೇಲೆ, ಅದರಲ್ಲಿ ಹಲವಾರು ರೆಂಬೆ-ಕೊಂಬೆಗಳಿರುತ್ತವೆ. ತೊಗಟೆ, ಎಲೆ, ಹೂ, ಕಾಯಿ, ಹಣ್ಣುಗಳಿರುತ್ತವೆ.
ಆದರೆ, ಮರದ ಅತ್ಯುತ್ತಮ ಭಾಗವೆಂದರೆ, ಅದರ ಹಣ್ಣುಗಳು. ಅದರಲ್ಲೂ ಚೆನ್ನಾಗಿ ಕಳಿತ ಹಣ್ಣುಗಳು. ಶ್ರೀಮದ್ಭಾಗವತವು ಕಳಿತ ಹಣ್ಣುಗಳಿಗೆ ಹೋಲಿಸಲ್ಪಟ್ಟಿದೆ. ಮತ್ತದು ‘ಶುಕ ಮುಖ ದಂಷ್ಟ್ರಾದ್ರವಿಶ’ – ಶುಕಮುನಿಗಳಿಂದ ಹೇಳಲ್ಪಟ್ಟಿದೆ.
ಆದ್ದರಿಂದ ಇದರ ಸ್ವಾದ ಹೆಚ್ಚುವಂತೆ, ಶುಕ ಮುನಿಗಳ ಬಾಯಿಯಿಂದ ಹೊರಹೊಮ್ಮಿದ ಭಾಗವತ ಹೆಚ್ಚಿನ ರುಚಿಯನ್ನು ಗಳಿಸಿದೆ.
ಶುಕದೇವ ಗೋಸ್ವಾಮಿಗಳು ಮುಕ್ತಾತ್ಮರು. ಆರಂಭದಲ್ಲಿ ಅವರು ಅವ್ಯಕ್ತ ಬ್ರಹ್ಮನ ಕುರಿತು ಒಲವುಳ್ಳವರಾಗಿದ್ದರು. ಆದರೆ ತಮ್ಮ ತಂದೆಯಿಂದ ಭಾಗವತವನ್ನು ಕೇಳುತ್ತಲೇ ದೇವೋತ್ತಮ ಪರಮ ಪುರುಷನತ್ತ ಆಕರ್ಷಿತರಾಗಿ ಪರಮಭಕ್ತರಾದರು.
ಶ್ರೀಲ ಪ್ರಭುಪಾದರು ನಾಲ್ಕು ಬಗೆಯ ಒಳ್ಳೆಯ ಮತ್ತು ಕೆಟ್ಟ ಜನರಿರುತ್ತಾರೆಂದು ಹೇಳಿರುವರು. ಆರ್ತ, ಅರ್ಥಾರ್ಥಿ, ಜ್ಞಾನಿ ಮತ್ತು ಜಿಜ್ಞಾಸು – ಇವರು ನಾಲ್ಕು ಬಗೆಯ ಸಜ್ಜನರು.

ನಾಲ್ಕು ಬಗೆಯ ದುಷ್ಟ ಜನರು – ಸದಾ ಕಾಮ್ಯ ಕರ್ಮಗಳಲ್ಲಿ ಆಸಕ್ತರಾಗಿರುವರು, ಪಾಪಕಾರ್ಯ ನಿರತರಾಗಿರುವವರು, ಭೌತಿಕವಾದದಲ್ಲಿ ಬಲವುಳ್ಳವರು ಮತ್ತು ದೇವೋತ್ತಮ ಪರಮಪುರುಷನ ಬಗ್ಗೆ ಗೌರವವಾಗಲೀ, ಭಕ್ತಿಯಾಗಲೀ ಇರದ ನಾಸ್ತಿಕರು. ಭಾಗವತವು ಎಲ್ಲ ಬಗೆಯ ಜನರಿಗೂ ಗ್ರಹಿಕೆಗೆ ನಿಲುಕುವಂತೆ ಹೇಳಲ್ಪಟ್ಟಿದೆ. ಆದ್ದರಿಂದ, ಭಾಗವತವನ್ನು ಯಾವುದೋ ಒಂದು ಪಂಗಡದ, ಸಮೂಹದ ಸ್ವತ್ತೆಂದು ಭಾವಿಸಬಾರದು. ಅದು ಸಮಾಜದ ಎಲ್ಲ ವಿಧದ ಜನರಿಗಾಗಿಯೇ ಇರುವಂಥದ್ದು.
ಈ ಮಾಗಿದ ಫಲದ ಸ್ವಾದವನ್ನು ಸವಿಯುವುದು ಹೇಗೆ? ರುಚಿಯಾಗಿರುವ ಹಣ್ಣನ್ನು ಸವಿಯುವುದು ಕೂಡ ಬಹು ಮುಖ್ಯ. ಅದರಲ್ಲಿಯೂ ಭಾಗವತವೆಂಬ ಈ ಮಾಗಿದ ಹಣ್ಣನ್ನು ಸವಿಯುವುದು ಅತಿ ಮುಖ್ಯ ಸಂಗತಿ. ಈ ಹಣ್ಣು ನಮಗೆ ಪರಂಪರಾನುಗತವಾಗಿ ದೊರೆತಿರುವಂತಹದು.
ಬಹಳ ಜಾಗರೂಕತೆಯಿಂದ, ಎಲ್ಲಿಯೂ ಕುಂದುಂಟಾಗದಂತೆ ಆಚಾರ್ಯ ಪರಂಪರೆಯ ಮೂಲಕ ಹರಿದು ಬಂದಿರುವಂತಹದು. ಅದೇನೂ ಇದ್ದಕ್ಕಿದ್ದಂತೆ ಮರದಿಂದ ಉದುರಿಬಿದ್ದ ಹಣ್ಣಲ್ಲ. ಇತ್ತೀಚಿನ ದಿನಗಳಲ್ಲಿ ಕೆಲವರು ಭಾಗವತ ಉಪನ್ಯಾಸ ನೀಡುವುದನ್ನೇ ಒಂದು ಉದ್ಯೋಗವಾಗಿ ಮಾಡಿಕೊಂಡಿದ್ದಾರೆ.
ಅವರ್ಯಾರೂ ಗುರು-ಶಿಷ್ಯ ಪರಂಪರೆಯ ಕೊಂಡಿಗೆ ಬೆಸೆದುಕೊಂಡವರಲ್ಲ. ಅವರು ನಿರೂಪಿಸುವ ಭಾಗವತ-ಭಕ್ತಿಯೋಗಗಳು ಸತ್ತ್ವಶಾಲಿಯಲ್ಲ ಅದೇನಿದ್ದರೂ ಅವರ ಭಾಷಾಶೈಲಿ, ಜನಪ್ರಿಯತೆ, ವ್ಯಾಕರಣ, ಉಚ್ಚಾರಣೆಗಳೇ ಮೊದಲಾದ ಅಂಶಗಳು ಮೇಲೆ ತೋರುತ್ತವಷ್ಟೆ. ಅವರು ಭಾಗವತವನ್ನು ಯಥಾವತ್ತಾಗಿ ನಿರೂಪಿಸಲುಬಾರದೆ ಪದಗಳ ಜಗ್ಗಾಟದಲ್ಲಿ ಸೋಲುತ್ತಿರುತ್ತಾರೆ.
ಈ ‘ಭಾಗವತದ ವ್ಯಾಪಾರಿ’ಗಳು ಅಜ್ಞಾನಿ – ಮೂಢರು. ಅವರು ನೇರವಾಗಿ ದಶಮಸ್ಕಂದದ ರಾಧಾಕೃಷ್ಣರ ಲೀಲೆಗಳ ವಿವರಣೆಗೆ ಧುಮುಕುತ್ತಾರೆ. ರಾಸಲೀಲೆಯ ಬಣ್ಣನೆಗೆ ತೊಡಗುತ್ತಾರೆ. ಹತ್ತನೇ ಸ್ಕಂದದ ಕೇವಲ ಅಧ್ಯಾಯಗಳಲ್ಲಿ ಹೇಳಲ್ಪಟ್ಟಿರುವ ಈ ವಿವರಣೆಗಳನ್ನೇ ಅವರು ಆಯ್ದುಕೊಳ್ಳುತ್ತಾರೆ.
ಭಾಗವತದಲ್ಲಿ ಯಾವುದನ್ನೂ ಅಪೂರ್ಣವಾಗಿ ಬಿಡಬಾರದು. ಆರಂಭದಿಂದ ಅಂತ್ಯದವರೆಗೆ ಪ್ರತಿಯೊಂದನ್ನೂ ಸಂಪೂರ್ಣವಾಗಿ ತೆಗೆದುಕೊಳ್ಳಬೇಕು. ಆದರೆ ಈ ಭಾಗವತದ ವ್ಯಾಪಾರಿಗಳು ಅಜ್ಞರು. ಅವರು ಹೇಳುವ ಭಾಗವತ ವಿವರಣೆಗಳು ಸರ್ಪದ ನಾಲಗೆ ಸೋಕಿದ ಹಾಲಿನಷ್ಟು ಕಹಿ, ವಿಷ.
ಆದ್ದರಿಂದ ನಾವು ಕೇವಲ ಭಕ್ತರಿಂದ ವಾಚಿಸಲ್ಪಡುವ ಭಾಗವತವನ್ನು ಮಾತ್ರ ಶ್ರವಣ ಮಾಡಬೇಕು.
ಈ ವ್ಯಾಪಾರಿಗಳಾದರೋ, ‘ಭಾಗವತ ಸಪ್ತಾಹ’ದ ಹೆಸರಲ್ಲಿ ಕೇವಲ ಏಳು ದಿನಗಳಲ್ಲಿ ಭಾಗವತ ಪ್ರವಚನ ಮಾಡುವೆವೆಂದು ಹೇಳುವರು. ಏಕೆ ಏಳು ದಿನ? ಪರೀಕ್ಷಿತ ಮಹಾರಾಜನು ತನ್ನ ಮೃತ್ಯುವು ಏಳು ದಿನಗಳ ಅಂತರದಲ್ಲಿದ್ದಾಗ, ಅಷ್ಟು ದಿನಗಳ ಕಾಲ ಶುಕದೇವ ಗೋಸ್ವಾಮಿಗಳಿಂದ ಭಾಗವತ ಶ್ರವಣಮಾಡಿ ಕೃತಕೃತ್ಯನಾದನು.
ಆತನಿಗೆ ತನ್ನ ಮೃತ್ಯುವಿನ ದಿನಾಂಕ ತಿಳಿದಿತ್ತು. ಮತ್ತು ಆತನಿಗೆ ಭಾಗವತವನ್ನು ಬೋಧಿಸಿದವರು ಮಹಾತ್ಮರಾದ, ಭಕ್ತಶ್ರೇಷ್ಠರಾದ ಶುಕಮುನಿಗಳು. ಈ ಕಾರಣದಿಂದ ಏಳು ದಿನಗಳಲ್ಲಿ ಸಂಪೂರ್ಣ ಭಾಗವತವನ್ನು ಬೋಧಿಸುವುದು ಅವರಿಗೆ ಸಾಧ್ಯವಾಯಿತು.
ಆದರೆ ನಮಗೆ ನಮ್ಮ ಅ೦ತ್ಯ ಎಂದಿಗೆನ್ನುವ ಸಂಗತಿ ತಿಳಿದಿಲ್ಲ. ನಮಗೆ ಯಾವ ಕ್ಷಣದಲ್ಲಾದರೂ ಸಾವು ಬರಬಹುದು, ಅದು ನಿಶ್ಚಿತವಲ್ಲ. ಹೀಗಿರುವಾಗ ನಾವು – ‘ನಿತ್ಯಂ ಭಾಗವತ ಸೇವೆಯಾ’ – ನಿತ್ಯವೂ ಭಾಗವತವನ್ನು ಪಠಿಸಬೇಕು. ಇದರಿಂದ ನಮ್ಮ ಹೃದಯದಲ್ಲಿನ ಕಶ್ಮಲಗಳೆಲ್ಲ ಕೊಚ್ಚಿಹೋಗುವವು.
ಹಾಗೆಯೇ ಶ್ರವಣ- ಮಾಡುವಾಗಲೂ ಅರ್ಹ ವ್ಯಕ್ತಿಯಿಂದ ಹೇಳಲ್ಪಟ್ಟಾಗ ಮಾತ್ರ ಮಾಡಬೇಕು. ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಮಹಾರಾಜರು ಭಾಗವತದ ಪ್ರಥಮ ಶ್ಲೋಕದ ಮೇಲೆಯೇ ಮೂರು ತಿಂಗಳ ಕಾಲ ವ್ಯಾಖ್ಯಾನ ಮಾಡಿದ್ದರು. ಮತ್ತೀಗ ನಾವು ಸಂಪೂರ್ಣ ಭಾಗವತವನ್ನು ಕೇವಲ ಒಂದು ವಾರದಲ್ಲಿ ಅರಿತುಕೊಳ್ಳುವ ತರಾತುರಿಯಲ್ಲಿದ್ದೇವೆ! ಅದು ಖಂಡಿತ ಸಾಧ್ಯವಿಲ್ಲ.
ಆದರೆ ಶುಕದೇವ ಗೋಸ್ವಾಮಿಗಳಿಂದ ಒಂದು ವಾರದಲ್ಲಿ ಭಾಗವತವನ್ನು ಬೋಧಿಸಲು ಸಾಧ್ಯವಾಯಿತು. ಪರೀಕ್ಷಿತನೂ ಅದನ್ನು ಅರಿತುಕೊಳ್ಳುವಲ್ಲಿಸಫಲನಾದ. ಏಕೆಂದರೆ ಅವರಿಬ್ಬರೂ ಭಕ್ತ ಭಾಗವತರಾಗಿದ್ದರು, ಕೃಷ್ಣಪ್ರಜ್ಞಾವಂತರಾಗಿದ್ದರು.
(ಮುಂದುವರಿಯುವುದು)






Leave a Reply