ಕೃಷ್ಣನನ್ನು ಕೇಂದ್ರವಾಗಿರಿಸಿ

ಶ್ರೀ ಶ್ರೀಮದ್‌ ಅಭಯ ಚರಣಾರವಿಂದ ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದರು 10ನೇ ಸೆಪ್ಟೆಂಬರ್, 1973ರಂದು ಸ್ಟಾಕ್‌ ಹೋಮ್‌ನಲ್ಲಿ ನೀಡಿದ ಉಪನ್ಯಾಸ.

ಪ್ರಭು ಕೃಷ್ಣಮ ಭಗವದ್ಗೀತೆಯಲ್ಲಿ ಅನೇಕ ಯೋಗ ಪದ್ಧತಿಗಳನ್ನು ವಿವರಿಸುತ್ತಾನೆ. ಆದರೆ ಉತ್ತಮವಾದ ಒಂದನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತಾನೆ.

ಶ್ರೀ ಭಗವಾನುವಾಚ

ಮಯ್ಯಾ ಸಕ್ತಮನಾಃ ಪಾರ್ಥ ಯೋಗಂ ಯುಞ್ಜನ್ಮದಾಶ್ರಯಃ |

ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಛೃಣು ||

“ ದೇವೋತ್ತಮ ಪರಮ ಪುರುಷನು ಹೀಗೆ ಹೇಳಿದನು – ಪಾರ್ಥ, ನನ್ನಲ್ಲಿ ಆಸಕ್ತವಾದ ಮನಸ್ಸಿನಿಂದ ನನ್ನನ್ನೊಳಗೊಂಡ ಸಂಪೂರ್ಣ ಪ್ರಜ್ಞೆಯಲ್ಲಿ ಯೋಗಾಭ್ಯಾಸವನ್ನು ಮಾಡುವುದರಿಂದ, ನೀನು ನನ್ನನ್ನು ಸಂಪೂರ್ಣವಾಗಿಯೂ, ಸಂಶಯವಿಲ್ಲದಂತೆಯೂ ತಿಳಿದುಕೊಳ್ಳಬಹುದು. ಅದು ಹೇಗೆ ಎನ್ನುವುದನ್ನು ಕೇಳು.” (ಭಗವದ್ಗೀತಾ – 7.1)

ಈ ಶ್ಲೋಕವು ನಾವು ಪ್ರಕಟಿಸಿದ ಭಗವದ್ಗೀತಾ ಯಥಾರೂಪದ 7ನೇ ಅಧ್ಯಾಯದ್ದು. ಲೇಖಕರ ಸ್ವಂತ ತಾತ್ವಿಕ ವಿಚಾರಗಳನ್ನು ಒಳಗೊಂಡ ಭಗವದ್ಗೀತೆಯ ಅನೇಕ ಮುದ್ರಣಗಳಿವೆ. ಆದರೆ ನಾವು ಅಂತಹ ಭಗವದ್ಗೀತೆಯನ್ನು ಒಪ್ಪಿಕೊಳ್ಳುವುದಿಲ್ಲ. ಭವದ್ಗೀತೆಯು ದೇವೋತ್ತಮ ಪರಮಪುರುಷನಿಂದ ಹೇಳಲ್ಪಟ್ಟಿದೆ.

ಇಲ್ಲಿ ಭಗವಾನ್ ಉವಾಚ ಎಂದು ಹೇಳಲಾಗಿದೆ. ಸಂಸ್ಕೃತ ಪಂಡಿತರಿಗೆ ಭಗವಾನ್ ಪದದ ಅರ್ಥ ಗೊತ್ತಾಗುತ್ತದೆ. ಭಗ ಎಂದರೆ ”ಐಶ್ವರ್ಯ” ಮತ್ತು ಏನನ್ನಾದರೂ ಹೊಂದಿದರೆ ಅಂಥವರಿಗೆ ವಾನ್‌ ಎಂದು ಹೇಳುತ್ತಾರೆ. ಆದ್ದರಿಂದ ಭಗವಾನ್ ಎಂದರೆ ”ಐಶ್ವರ್ಯವನ್ನು ಹೊಂದಿರುವವ.”

ಆರು ರೀತಿಯ ಐಶ್ವರ್ಯಗಳಿವೆ. ಅವು ಯಾವುವೆಂದರೆ ಸಂಪತ್ತು, ಯಶಸ್ಸು, ಬಲ, ಜ್ಞಾನ, ವೈರಾಗ್ಯ ಮತ್ತು ಸೌಂದರ್ಯ. ಒಬ್ಬ ವ್ಯಕ್ತಿ ತುಂಬಾ ಸಿರಿವಂತನಾಗಿದ್ದರೆ, ಬಹಳ ಪ್ರಭಾವಿ ಅಥವಾ ಬಲವಂತನಾಗಿದ್ದರೆ, ತನ್ನ ಕಾರ್ಯಗಳಿಂದ ಬಹಳ ಪ್ರಸಿದ್ಧಿಯನ್ನು ಹೊಂದಿದ್ದರೆ, ಹಾಗೆಯೇ ಒಬ್ಬ ವ್ಯಕ್ತಿ ಬಹಳ ಸುಂದರವಾಗಿದ್ದರೆ, ಅಥವಾ ಬಹಳ ತಿಳಿದವನಾಗಿದ್ದರೆ ಅಂತಹವರು ಅನೇಕ ಜನರ ಚಿತ್ತವನ್ನು ಆಕರ್ಷಿಸುತ್ತಾರೆ.

ನಾವೆಲ್ಲರೂ ಈ ಐಶ್ವರ್ಯಗಳನ್ನು ಅಲ್ಪಸ್ವಲ್ಪ ಪ್ರಮಾಣದಲ್ಲಿ ಹೊಂದಿರುತ್ತೇವೆ. ನಾವೆಲ್ಲರೂ ಸ್ವಲ್ಪ ಸಿರಿವಂತಿಕೆ, ಸ್ವಲ್ಪ ಬುದ್ಧಿವಂತಿಕೆ, ಅಥವಾ ಸ್ವಲ್ಪ ಬಲವನ್ನು ಹೊಂದಿರಬಹುದು. ಆದರೆ ಈ ಎಲ್ಲಾ ಐಶ್ವರ್ಯಗಳನ್ನು ಅತ್ಯಧಿಕವಾಗಿ ಹೊಂದಿರುವವನು ಭಗವಂತನಲ್ಲದೇ ಮತ್ಯಾರೂ ಅಲ್ಲ.

ಇದರ ಸಂಸ್ಕೃತ ಪದ ಅಸಮೋರ್ಧ್ವ, ಅಸಮ ಎಂದರೆ ಸಮನಿಲ್ಲದವ ಮತ್ತು ಊರ್ಧ್ವ ಎಂದರೆ ಮಿಗಿಲಾದ. ಯಾರೂ ಕೂಡ ಭಗವಂತನಿಗೆ ಸಮಾನರಲ್ಲ ಮತ್ತು ಅವನಿಗಿಂತಲೂ ಶ್ರೇಷ್ಠರಲ್ಲ. ಅದುವೇ ಭಗವಂತನ ವ್ಯಾಖ್ಯಾನ. “”ಭಗವಂತ ಶ್ರೇಷ್ಠನಾಗಿದ್ದಾನೆ” ಇದರ ಅರ್ಥ ಯಾವುದೇ ಐಶ್ವರ್ಯದಿಂದಾಗಲಿ ಯಾರೂ ಭಗವಂತನಿಗೆ ಸಮಾನರಲ್ಲ ಮತ್ತು ಮಿಗಿಲಾದವರಲ್ಲ.

ಕೃಷ್ಣನನ್ನು ವಿವರಿಸಲು ವ್ಯಾಸದೇವರು ಭಗವದ್ಗೀತೆಯನ್ನು ಬರೆಯುತ್ತಾರೆ. ಭಗವದ್ಗೀತೆ ಮಹಾಭಾರತದ ಅಧ್ಯಾಯಗಳಲ್ಲಿ ಒಂದು. ಮಹಾಭಾರತ ಎಂದರೆ ”ಶ್ರೇಷ್ಠ ಭಾರತದ ಇತಿಹಾಸ’ ಎಂದರ್ಥ. ಇಂಡಿಯಾ ಎನ್ನುವ ಹೆಸರು ಪಾಶ್ಚಿಮಾತ್ಯರಿಂದ ಬಂದಿದೆ.

ಆದರೆ ನಿಜವಾದ ಹೆಸರು ಭಾರತವರ್ಷ. ಭಾರತ ವರ್ಷ ಎಂದರೆ ಕೇವಲ ಭಾರತ ಒಂದೇ ಅಲ್ಲ, 5000 ವರ್ಷಗಳ ಹಿಂದೆ ಇಡೀ ಗ್ರಹವು ಭಾರತ ವರ್ಷವೆಂದು ಕರೆಯಲ್ಪಡುತ್ತಿತ್ತು. ಈಗ ಭರತ ವರ್ಷ ಎಂದರೆ ಕೇವಲ ಭಾರತ ಒಂದೇ.

ಆದ್ದರಿಂದ ಭಗವದ್ಗೀತೆಯ ಹಿನ್ನೆಲೆ ಏನೆಂದರೆ ಕುರುಕ್ಷೇತ್ರ ಮಹಾಯುದ್ಧ. ಈಗಲೂ ಕುರುಕ್ಷೇತ್ರ ಎಂಬ ಸ್ಥಳ ಅಸ್ತಿತ್ವದಲ್ಲಿದೆ. ಅಲ್ಲಿ 5000 ವರ್ಷಗಳ ಹಿಂದೆ ಯುದ್ಧ ನಡೆದಿತ್ತು. ಈ ಯುದ್ಧದ ಪ್ರಮುಖ ಪಕ್ಷಗಳು ದಾಯಾದಿಗಳಾಗಿದ್ದ ಕೌರವರು ಮತ್ತು ಪಾಂಡವರಾಗಿದ್ದರು. ಅಲ್ಲಿ ದೇವೋತ್ತಮ ಪರಮ ಪುರುಷನಾದ ಭಗವಾನ್ ಶ್ರೀ ಕೃಷ್ಣನಿಂದ ಭಗವದ್ಗೀತೆ ಹೇಳಲ್ಪಟ್ಟಿತು.

ಆದ್ದರಿಂದ ಇದನ್ನು ಭಗವಾನ್ ಉವಾಚ ಎಂದು ಹೇಳಲಾಗುತ್ತದೆ. ಕೃಷ್ಣನು ಅರ್ಜುನನಿಗೆ ಭಕ್ತಿಯೋಗವನ್ನು ಕಲಿಸುತ್ತಿದ್ದಾನೆ. ಯೋಗದಿಂದ ನೀವು ಪರಮ ಪ್ರಭುವನ್ನು ಸಂಪರ್ಕಿಸಬಹುದು. ಯೋಗ ಎಂದರೆ ‘ಸಂಬಂಧ”. ಪರಮ ಪ್ರಭುವಿನೊಂದಿಗೆ ನಮ್ಮ ಸಂಬಂಧ ಬೆಳೆಸಲು ಅನೇಕ ಯೋಗ ಪದ್ಧತಿಗಳಿವೆ.

ಪರಮ ಸತ್ಯವನ್ನು ಮೂರು ಹಂತಗಳಲ್ಲಿ ಸಾಕ್ಷಾತ್ಕರಿಸಿಕೊಳ್ಳಬಹುದು; ನಿರಾಕಾರ, ಸ್ಥಾನಿಕ (localized) ಮತ್ತು ಸಾಕಾರ ರೂಪದಲ್ಲಿ ವಿಭಿನ್ನ ಜನರು ವಿವಿಧ ದೃಷ್ಟಿಕೋನದಿಂದ ಪರಮಸತ್ಯವನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳುತ್ತಾರೆ ಎಂದು ಶ್ರೀಮದ್ ಭಾಗವತದಲ್ಲಿ ಹೇಳಲಾಗಿದೆ. ಉದಾಹರಣೆಗೆ, ಒಂದು ವೇಳೆ ನೀವು ಬೆಟ್ಟವನ್ನು ದೂರದಿಂದ ನೋಡಿದರೆ ನಿಮಗೆ ಮೋಡದ ಹಾಗೆ ಕಾಣಿಸುತ್ತದೆ.

ಸ್ವಲ್ಪ ಹತ್ತಿರ ಹೋದರೆ ನಿಮಗೆ ಹಸಿರು ಕಾಣಿಸುತ್ತದೆ. ಒಂದು ವೇಳೆ ನೀವು ಬೆಟ್ಟವನ್ನು ತಲಪಿದರೆ ನಿಮಗೆ ಅಲ್ಲಿ ಅನೇಕ ಮರಗಳು, ಮನೆಗಳು, ಜೀವಿಗಳು ಮತ್ತು ಪ್ರಾಣಿಗಳು ಕಾಣುತ್ತವೆ. ವಸ್ತು ಒಂದೇ ಆಗಿದ್ದರೂ ಕೂಡ ಬೇರೆ ಬೇರೆ ಅಂತರ ಮತ್ತು ವ್ಯಕ್ತಿಯ ದೃಷ್ಟಿಕೋನದಿಂದ ಅದೇ ವಸ್ತು ಬೇರೆ ಬೇರೆಯಾಗಿ ಸಾಕ್ಷಾತ್ಕಾರಗೊಳ್ಳುತ್ತದೆ.

ಆದ್ದರಿಂದ ಶ್ರೀಮದ್ಭಾಗವತವು ಹೇಳುತ್ತದೆ, ವದಂತಿ ತತ್ತತ್ತ್ವವಿದಸ್ತತ್ವಂ ಯಜ್ಞಾನಮದ್ವಯಂ – ವಸ್ತು ಒಂದೇ ಆಗಿದೆ, ಆದರೆ ವಿಭಿನ್ನ ತಿಳುವಳಿಕೆಯಿಂದ ಕೆಲವರು ಪರಮಸತ್ಯವನ್ನು ನಿರಾಕಾರ ಬ್ರಹ್ಮನ್ ಎಂದು, ಕೆಲವರು ಪರಮಾತ್ಮನೆಂದು ಮತ್ತು ಕೆಲವರು ದೇವೋತ್ತಮ ಪರಮಪುರುಷನೆಂದು ಸಾಕ್ಷಾತ್ಕರಿಸಿಕೊಂಡಿರುತ್ತಾರೆ. ಅಂತಿಮವಾಗಿ ಪರಮಸತ್ಯವು ಭಗವಾನ್, ದೇವೋತ್ತಮ ಪರಮ ಪುರುಷನಾಗಿದ್ದಾನೆ.

ಆದುದರಿ೦ದ ಮಹಾಭಾರತದ ರಚನಾಕಾರರಾದ ವೇದವ್ಯಾಸರು ಭಗವಾನ್ ಉವಾಚ ಎಂದು ಹೇಳುತ್ತಾರೆ. ಕೃಷ್ಣಪ್ರಜ್ಞಾ ಆಂದೋಲನದಲ್ಲಿ ಭಗವಾನ್ ಎಂದರೆ ಕೃಷ್ಣನೇ ಎಂದು ನಾವು ಅರ್ಥಮಾಡಿಕೊಂಡಿರುತ್ತೇವೆ. ಕೃಷ್ಣನಿಗೆ ಲಕ್ಷಾಂತರ ಹೆಸರಿಡಬಹುದು, ಆದರೆ ಕೃಷ್ಣ ಎಂಬುವುದು ಪ್ರಮುಖವಾದ ಹೆಸರು.

ಕೃಷ್ಣನೆಂದರೆ ಸರ್ವ ಆಕರ್ಷಕ”. ಭಗವಂತನು ಸರ್ವಾಕರ್ಷಕನಾಗಿರಬೇಕು. ಭಗವಂತನು ಒಬ್ಬ ವ್ಯಕ್ತಿಗೆ ಆಕರ್ಷಕನಾಗಿ ಇನ್ನೊಬ್ಬ ವ್ಯಕ್ತಿಗೆ ಆಕರ್ಷಕನಲ್ಲದವ ಆಗಿರಲಾರ. ಭಗವಂತನು ಪ್ರತಿಯೊಂದು ಜೀವಿಗೆ ಆಕರ್ಷಕನಾಗಿದ್ದಾನೆ. ಕೃಷ್ಣನ ಚಿತ್ರಗಳಲ್ಲಿ ಅವನು ಹಸು ಕರುಗಳು, ಮರಗಳು, ಗೋಪಿಯರು ಮತ್ತು ಗೋಪಬಾಲಕರನ್ನು ಪ್ರೀತಿಸುವುದನ್ನು ನೀವು ನೋಡುತ್ತೀರಿ. ಭಗವಂತನಿಗೆ ಪ್ರತಿಯೊಬ್ಬರೂ ಪ್ರೀತಿಯ ವಸ್ತುಳೇ. ಏಕೆಂದರೆ ಪ್ರತಿಯೊಬ್ಬರೂ ಭಗವಂತನ ಮಕ್ಕಳಾಗಿದ್ದಾರೆ.

ಭಗವದ್ಗೀತೆಯಲ್ಲಿ ಕೃಷ್ಣನು ಅನೇಕ ಜೀವರಾಶಿಗಳಿವೆ ಮತ್ತು ವೈವಿಧ್ಯಮಯವಾದ ಜೀವನಗಳಿವೆ, ”ಭೌತಿಕ ಪ್ರಕೃತಿಯೇ ಅವರ ತಾಯಿಯಾಗಿದ್ದಾಳೆ ಮತ್ತು ನಾನು ಬೀಜ ಕೊಡುವ ತಂದೆಯಾಗಿದ್ದೇನೆ’ ಎಂದು ಹೇಳುತ್ತಾನೆ.

ಭಗವಂತ ಸರ್ವರಿಗೂ ಆಕರ್ಷಕನಾಗಿದ್ದಾನೆ ಮತ್ತು ಸರ್ವರಿಗೂ ಸಮಾನನಾಗಿದ್ದಾನೆ. ಭಗವಂತನಿಗೆ ಇದು ಪ್ರಾಣಿ, ಇದು ಮನುಷ್ಯ, ಇದು ಮರ ಎಂಬ ಭೇದವಿಲ್ಲ. ಪ್ರತಿಯೊಂದು ಜೀವಿಯೂ ಭಗವಂತನ ಅಂಶವಾಗಿದೆ. ಅದುವೇ ದೈವ ಪ್ರಜ್ಞೆ ಅಥವಾ ಕೃಷ್ಣಪ್ರಜ್ಞೆ ಬಗ್ಗೆ ನಮ್ಮ ತಿಳುವಳಿಕೆ.

ಭಗವಂತನೊಂದಿಗೆ ಸಂಬಂಧ ಬೆಸೆಯಲು ಅನೇಕ ಯೋಗ ಪ್ರಕ್ರಿಯೆಗಳಿವೆ. ಅದರಲ್ಲಿ ಪ್ರಮುಖವಾದದ್ದು ಜ್ಞಾನಯೋಗ, ಹಠಯೋಗ ಮತ್ತು ಭಕ್ತಿಯೋಗ. ಭಕ್ತಿಯೋಗವೇ ಸರ್ವೋತ್ತಮವಾದದ್ದು ಎಂದು ಭಗವದ್ಗೀತೆಯಲ್ಲಿ(6.47) ವಿವರಿಸಲಾಗಿದೆ.

ಯೋಗಿನಾಮಪಿ ಸರ್ವೆಷಾಂ ಮದ್ಗತೇನಾನ್ತರಾತ್ಮನಾ

ಶ್ರದ್ಧಾವಾನ್‌ ಭಜತೇ ಯೋ ಮಾಂ ಮೇ ಯುಕ್ತತಮೋ ಮತಃ ||

ಎಲ್ಲ ಯೋಗಿಗಳಲ್ಲಿ, ಯಾವ ಯೋಗಿ ಕೃಷ್ಣನನ್ನು ಸದಾ ಪ್ರೇಮ ಮತ್ತು ಶ್ರದ್ಧೆಯಿಂದ ಸ್ಮರಿಸುತ್ತಾನೋ ಅವನೇ ಮೊದಲನೆಯ ದರ್ಜೆಯ ಯೋಗಿ.

ಭಗವದ್ಗೀತೆಯ 7ನೇ ಅಧ್ಯಾಯವು ಹೇಗೆ ಮೊದಲನೇ ದರ್ಜೆಯ ಯೋಗಿಯಾಗಬಹುದು ಎಂದು ವಿವರಿಸುತ್ತದೆ. ಸ್ವತಃ ಕೃಷ್ಣನೇ ಅದನ್ನು ಹೇಗೆ ಮಾಡುವುದೆಂದು ವಿವರಿಸುತ್ತಾನೆ. ಭಗವಂತನನ್ನು ಅರಿಯಬೇಕಾದರೆ ಸ್ವತಃ ಭಗವಂತನಿಂದಲೇ ತಿಳಿದುಕೊಳ್ಳಬೇಕು. ಭಗವಂತನ ಬಗ್ಗೆ ಊಹಿಸುವುದರ ಬದಲು ಭಗವ೦ತನನ್ನು ಭಗವಂತನ ಮಾತುಗಳಿಂದಲೇ ಅರ್ಥಮಾಡಿಕೊಳ್ಳಬೇಕು.

ವೇದವ್ಯಾಸರು ಎಲ್ಲ ವೈದಿಕ ಜ್ಞಾನದ ರಚನಾಕಾರರಾಗಿದ್ದಾರೆ ಮತ್ತು ಅವರು ಕೃಷ್ಣನನ್ನು ದೇವೋತ್ತಮ ಪರಮಪುರುಷನೆಂದು ಸ್ವೀಕರಿಸುತ್ತಾರೆ. ಆನಂತರದ ಎಲ್ಲ ಆಚಾರ್ಯರುಗಳಾದ ರಾಮಾನುಜಾಚಾರ್ಯ, ಮಧ್ವಾಚಾರ್ಯ, ವಿಷ್ಣುಸ್ವಾಮಿ ಮತ್ತು ಪ್ರಭು ಚೈತನ್ಯರು ಕೃಷ್ಣನನ್ನು ಒಪ್ಪಿಕೊಳ್ಳುತ್ತಾರೆ.

ನಮ್ಮ ವೈದಿಕ ಸಂಸ್ಕೃತಿಯ ಪ್ರಕಾರ ಕೃಷ್ಣನೇ ದೇವೋತ್ತಮ ಪರಮ ಪುರುಷನಾಗಿದ್ದಾನೆ. ಇಲ್ಲಿಯೂ ಕೂಡ ಭಗವಾನ್ ಉವಾಚ ಎಂದು ಹೇಳಲಾಗಿದೆ. ಕೃಷ್ಣಪ್ರಜ್ಞೆಯಲ್ಲಿ ನಾವು ಹೇಗೆ ಮೊದಲನೆಯ ದರ್ಜೆಯ ಯೋಗಿಯಾಗಿರಬಹುದು ಎಂದು ಕೃಷ್ಣನು ಕಲಿಸುತ್ತಿದ್ದಾನೆ. ಅವನು ಹೇಳುತ್ತಾನೆ. ಮಯ್ಯಾಸಕ್ತ ಮನಾಃ ಪಾರ್ಥ ಯೋಗಂ ಯುಞ್ಜನ್ಮದಾಶ್ರಯಃ ಮಯಿ ಎಂದರೆ ‘ನನ್ನಲ್ಲಿ’ ಮತ್ತು ಆಸಕ್ತ’ ಎಂದರೆ ‘ಆಸಕ್ತಿ’ ಎಂದರ್ಥ.

ಕೃಷ್ಣಪ್ರಜ್ಞೆ ಯೋಗಪದ್ಧತಿ ಎಂದರೆ ಕೃಷ್ಣನ ಆಸಕ್ತಿಯನ್ನು ವೃದ್ಧಿಸುವುದಾಗಿದೆ. ಪ್ರತಿಯೊಬ್ಬರಿಗೂ ಯಾವುದಾದರೊಂದು ಆಸಕ್ತಿ ಇದ್ದೇ ಇರುತ್ತದೆ. ಕೆಲವರಿಗೆ ತಮ್ಮ ಕುಟುಂಬದಲ್ಲಿ, ಕೆಲವರಿಗೆ ಸ್ನೇಹಿತರಲ್ಲಿ, ಕೆಲವರಿಗೆ ತಮ್ಮ ಮನೆ ಬಗ್ಗೆ ಅಥವಾ ಕೆಲವರಿಗೆ ತಮ್ಮ ಹವ್ಯಾಸ, ನಾಯಿ ಅಥವಾ ಬೆಕ್ಕುಗಳಲ್ಲಿ ಆಸಕ್ತಿ ಇದ್ದೇ ಇರುತ್ತದೆ.

ಅದಕ್ಕೆ ಪಂಡಿತರಾಗಿರಬೇಕಿಲ್ಲ. ಪ್ರತಿಯೊಬ್ಬರ ಹೃದಯದಲ್ಲಿ ಆಸಕ್ತಿ ಇದ್ದೇ ಇರುತ್ತದೆ. ಪ್ರತಿಯೊಬ್ಬರೂ ಯಾರಲ್ಲಿಯಾದರೂ ಆಸಕ್ತರಾಗಬಯಸುತ್ತಾರೆ ಅಥವಾ ಪ್ರತಿಯೊಬ್ಬರೂ ಯಾರನ್ನಾದರೂ ಪ್ರೀತಿಸಲು ಬಯಸುತ್ತಾರೆ. ಪ್ರೀತಿ ಎಂದರೆ ಏಕತ್ತ್ವ ಅಲ್ಲ. ಪ್ರೀತಿಸಲು ಇಬ್ಬರಿರಬೇಕು, ಪ್ರಿಯಕರ ಮತ್ತು ಪ್ರೀತಿಪಾತ್ರರಾದವರು.

ಕೃಷ್ಣಪ್ರಜ್ಞೆಯ ಯೋಗಪದ್ಧತಿಯೆಂದರೆ ಕೃಷ್ಣನಲ್ಲಿ ಆಸಕ್ತಿಯನ್ನು ವೃದ್ಧಿಸಿಕೊಳ್ಳುವುದಾಗಿದೆ. ಆದ್ದರಿಂದ ಇಲ್ಲಿ ಈ ರೀತಿಯಾಗಿ ಹೇಳಲಾಗಿದೆ. ಮಯ್ಯಾಸಕ್ತಮನಾಃ ಪಾರ್ಥ – ”ಕ್ರಮೇಣವಾಗಿ ಒಬ್ಬನು ನನ್ನಲ್ಲಿ ಆಸಕ್ತಿಯನ್ನು ವೃದ್ಧಿಸಿಕೊಳ್ಳುವುದು.” ಕೃಷ್ಣನು ಹೇಳುತ್ತಾನೆ – ತನ್ನಲ್ಲಿ ಶರಣಾಗತಿ ಪಡೆದು ಈ ಯೋಗ ಪದ್ಧತಿಯನ್ನು ಅಭ್ಯಸಿಸಬೇಕೆಂದು.

ನೀವು ಕೃಷ್ಣನ ಆಶ್ರಯವನ್ನು ನೇರವಾಗಿ ಪಡೆಯಬಹುದು ಅಥವಾ ಕೃಷ್ಣನಲ್ಲಿ ಆಶ್ರಯ ಪಡೆದವರ ಮೂಲಕ ಆಶ್ರಯ ಪಡೆಯಬಹುದು. ಇದುವೇ ಮದ್‌-ಆಶ್ರಯಃ ಪದದ ಅರ್ಥ. ಇದುವೇ ಗುರುಶಿಷ್ಯ ಪರಂಪರೆ. ನೀವು ಕೃಷ್ಣನಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದಾಗಲೀ ಅಥವಾ ಕೃಷ್ಣಭಕ್ತನ ಆಸಕ್ತಿ ಬೆಳೆಸಿಕೊಳ್ಳುವುದಾಗಲೀ ಎರಡೂ ಒಂದೇ.

ಉದಾಹರಣೆಗೆ ಏನನ್ನಾದರೂ ವಿದ್ಯುತ್‌ ನಿಂದ ಚಾರ್ಜ್ ಮಾಡಿದರೆ ಅದು ಕೂಡ ವಿದ್ಯುತ್ ಪೂರಣವಾಗುತ್ತದೆ. ನಮಗೆ ನಿತ್ಯದ ಅನುಭವವಿದೆ. ವಿದ್ಯುತ್ ಕೇಂದ್ರದಿಂದ ವಿದ್ಯುತ್ ತಂತಿಗಳಲ್ಲಿ ಹರಡುತ್ತದೆ. ಅದಕ್ಕೆ ಪ್ಲಗ್‌ನ್ನು ಹಾಕಿದ ಅನಂತರ ಅದು ಕೂಡ ವಿದ್ಯುತ್ ಪೂರಣವಾಗುತ್ತದೆ.

ಅದೇ ರೀತಿಯಾಗಿ ಹೇಗೆ ಶಿಷ್ಯ ಪರಂಪರೆಯಲ್ಲಿ ಕೃಷ್ಣನ ಉಪದೇಶ ಹರಡುತ್ತದೋ ಹಾಗೆಯೇ ನೀವು ಕೃಷ್ಣನ ಉಪದೇಶಗಳನ್ನು ಹರಡಿದರೆ, ನಿಮಗೆ ಕೃಷ್ಣನ ಸಂಪರ್ಕ ಸಿಗುತ್ತದೆ. ಇದನ್ನು ಯೋಗಂ ಯುಞ್ಜನ್ಮದಾಶ್ರಯಃ ಎಂದು ಕರೆಯಲಾಗುತ್ತದೆ. ಇದರ ಅರ್ಥ ಸದಾ ಕೃಷ್ಣನೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದು.

ಕೃಷ್ಣನು ಈ ಶ್ಲೋಕದಲ್ಲಿ ಹೇಳುತ್ತಾನೆ, ‘ದಯವಿಟ್ಟು ನನ್ನಿಂದ ಕೇಳಿ”, ಕೃಷ್ಣನು ಸ್ವತಃ ಮಾತನಾಡುತ್ತಿದ್ದಾನೆ. ಆದ್ದರಿಂದ ನಾವು ಒಂದು ವೇಳೆ ಸ್ವತಃ ಕೃಷ್ಣನೇ ಬೋಧಿಸಿದಂತಹ ಭಗವದ್ಗೀತಾ ಯಥಾರೂಪವನ್ನು ಸ್ವೀಕರಿಸಿದರೆ ನಮಗೆ ನಿಸ್ಸಂದೇಹವಾಗಿ ಭಗವಂತನ ಬಗ್ಗೆ ಅರ್ಥವಾಗುತ್ತದೆ.

ನಮ್ಮ ಇಂದಿನ ಸ್ಥಿತಿಯಲ್ಲಿ ಮೊಂಡ ಭೌತಿಕ ಇಂದ್ರಿಯಗಳೊಂದಿಗೆ ಮತ್ತು ನಾಲ್ಕು ದೋಷಗಳಿಂದ ನಮಗೆ ಭಗವಂತನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಮಗೆ ಈ ಭೌತಿಕ ಸ್ಥಿತಿಯಲ್ಲಿ ನಾಲ್ಕು ದೋಷಗಳಿವೆ. ನಾವು ತಪ್ಪುಗಳನ್ನು ಮಾಡುತ್ತೇವೆ, ಭ್ರಮೆಗೆ ಒಳಪಡುತ್ತೇವೆ, ಮೋಸವನ್ನು ಮಾಡುತ್ತೇವೆ ಮತ್ತು ನಮ್ಮ ಇಂದ್ರಿಯಗಳು ಅಪರಿಪೂರ್ಣವಾಗಿವೆ.

ಪ್ರತಿದಿನ ಸೂರ್ಯನನ್ನು ನಮ್ಮ ಕಣ್ಣುಗಳಿಂದ ನೋಡುತ್ತೇವೆ. ಸೂರ್ಯ ಭೂಮಿಗಿಂತ ಸಾವಿರಪಟ್ಟು ದೊಡ್ಡದಿದ್ದರೂ ಕೂಡ ನಮ್ಮ ಅಪರಿಪೂರ್ಣ ಇಂದ್ರಿಯಗಳಿಂದ ಅದು ಒಂದು ತಟ್ಟೆಯ ರೀತಿಯಾಗಿ ಕಾಣುತ್ತದೆ. ಈ ರೀತಿಯಾಗಿ ನಾವು ನಮ್ಮ ಇಂದ್ರಿಯಗಳನ್ನು ಅವಲೋಕನ ಮಾಡಿದರೆ ಅವು ಅಪರಿಪೂರ್ಣವಾಗಿ ಕಾಣುತ್ತವೆ.

ಅಪರಿಪೂರ್ಣ ಇಂದ್ರಿಯಗಳ ಆಧಾರದ ಮೇಲೆ ಊಹೆ ಮಾಡುವುದು ಪರಿಪೂರ್ಣವಾದುದಲ್ಲ. ಆದ್ದರಿಂದ ವಿಜ್ಞಾನಿಗಳು, ತತ್ತ್ವಜ್ಞಾನಿಗಳಂತಹ ಊಹಾಗಾರರು ”ಬಹುಶಃ” ”ಈ ರೀತಿಯಾಗಿ ಇರಬಹುದು” ಎಂದು ಸಿದ್ಧಾಂತಗಳನ್ನು ಮಂಡಿಸುತ್ತಾರೆ. ಇದರ ಅರ್ಥ ಇದು ಪರಿಪೂರ್ಣಜ್ಞಾನವಲ್ಲ. ಆದರೆ ಒಂದು ವೇಳೆ ಪರಮ ಪರಿಪೂರ್ಣನಾದ ಭಗವಂತನಿಂದ ಜ್ಞಾನವನ್ನು ಪಡೆದರೆ ಅದು ನಿಜವಾಗಿಯೂ ಪರಿಪೂರ್ಣವಾಗಿರುತ್ತದೆ.

ನಮ್ಮ ಪ್ರಕ್ರಿಯೆ ಈ ರೀತಿಯಾಗಿದೆ – ಭಗವದ್ಗೀತೆಯ ನಾಲ್ಕನೆಯ ಅಧ್ಯಾಯದಲ್ಲಿ ಕೃಷ್ಣ ಹೇಳುತ್ತಾನೆ. ತಾನು ಈ ಸಿದ್ಧಾಂತವನ್ನು ಮೊದಲಿಗೆ ಸೂರ್ಯಭಗವಾನನಿಗೆ ಹೇಳಿದೆನೆಂದು, ಸೂರ್ಯಭಗವಾನ್‌ ಮುಖಾಂತರ ಅವನ ಮಗ ಮನುವಿಗೆ ಮತ್ತು ಮನುವಿನ ಮುಖಾಂತರ ಅವನ ಮಗ ಇಕ್ಷ್ವಾಕುವಿಗೆ ಈ ಸಿದ್ಧಾಂತ ಹೇಳಲ್ಪಟ್ಟಿತು.

ಈ ರೀತಿಯಾಗಿ ಶಿಷ್ಯ ಪರಂಪರೆಯ ಮೂಲಕ ಭಗವದ್ಗೀತೆ ಈ ಭೂಮಿಗೆ ಬಂದಿದೆ. ಕೃಷ್ಣನ ಬೋಧನೆಗಳಿಗೆ ಅನಗತ್ಯ ವ್ಯಾಖ್ಯಾನ ಕೊಡುವ ಬದಲು ಈ ಶಿಷ್ಯಪರಂಪರೆಯನ್ನು ಸ್ವೀಕರಿಸಿದರೆ ನಮಗೆ ಭಗವದ್ಗೀತಾ ಅರ್ಥವಾಗುತ್ತದೆ.

ಪರಮಪುರುಷನಾದ ಕೃಷ್ಣನನ್ನು ಯಾವುದೇ ವ್ಯಾಖ್ಯಾನವಿಲ್ಲದೆ ಅವನು ಹೇಗೆ ಇದ್ದಾನೆ ಹಾಗೆಯೇ ಅರ್ಥಮಾಡಿಕೊಳ್ಳುವುದೇ ನಮ್ಮ ಕೃಷ್ಣಪ್ರಜ್ಞೆ ಚಳವಳಿಯಾಗಿದೆ. ಅದುವೇ ಕೃಷ್ಣಪ್ರಜ್ಞೆಯೋಗ. ಕೃಷ್ಣನನ್ನು ಸದಾ ಮಧ್ಯದಲ್ಲಿರಿಸಿ (ಕೇಂದ್ರದಲ್ಲಿ) ಇದನ್ನು ಪಡೆಯಬಹುದು ಎಂದು ಕೃಷ್ಣ ಹೇಳುತ್ತಾನೆ. ನೀವು ಕೃಷ್ಣನನ್ನು ಕೇಂದ್ರದಲ್ಲಿರಿಸಿ, ಸದಾ ಅವನ ರೂಪವನ್ನು ಯೋಚಿಸುತ್ತಾ ಈ ಯೋಗವನ್ನು ಅಭ್ಯಸಿಸಿದರೆ ನಿಮಗೆ ಕೃಷ್ಣ ಕಾಣಿಸುತ್ತಾನೆ. ಇದುವೇ ಕೃಷ್ಣಪ್ರಜ್ಞೆಯ ಯೋಗ ಪದ್ಧತಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi