ವ್ರಜೇ ನಂದಿಮುಖೀ ಯಾಸೀತ್ ಸಾದ್ಯ ಸಾರಂಗ ಠಾಕುರಃ |
ಪ್ರಹ್ಲಾದೋ ಮನ್ಯತೇ ಕೈಶ್ಚಿನ್ ಮತ್ ಪಿತ್ರಾ ಸ ನ ಮನ್ಯತೇ ||
ವ್ರಜದ ನಂದಮುಖಿಯು ಗೌರಲೀಲಾದಲ್ಲಿ ಸಾರಂಗ ಠಾಕುರ ಆದರು. ಕೆಲವರು ಅವರನ್ನು ಪ್ರಹ್ಲಾದ ಎನ್ನುತ್ತಾರೆ. ಆದರೆ ಅದು ನನ್ನ ತಂದೆಯ ಅಭಿಪ್ರಾಯವಲ್ಲ. (ಗೌರ ಗಣೋದ್ದೇಶ ದೀಪಿಕಾ 172)
ಭಕ್ತಿಸೇವೆಯ ಶ್ರೀ ಚೈತನ್ಯ ವೃಕ್ಷದ ಶಾಖೆಗಳಲ್ಲಿ ಶ್ರೀ ಸಾರಂಗ ಠಾಕುರರ ಹೆಸರನ್ನು ಉಲ್ಲೇಖಿಸಲಾಗಿದೆ. ರಾಮದಾಸ, ಕವಿಚಂದ್ರ, ಗೋಪಾಲ ದಾಸ, ಭಾಗವತ ಆಚಾರ್ಯರ ಜೊತೆಯಲ್ಲಿ ಸಾರಂಗ ಠಾಕುರರನ್ನೂ ಪಟ್ಟಿಮಾಡಲಾಗಿದೆ. ಅವರನ್ನು ಸಾರಂಗಪಾಣಿ ಅಥವಾ ಸಾರಂಗಧರ ಎಂದೂ ಕರೆಯುತ್ತಿದ್ದರು.
ಅವರು ನವದ್ವೀಪದ ಮೋದದ್ರುಮ ದ್ವೀಪವೆಂಬ ಸ್ಥಳದಲ್ಲಿ ವಾಸಿಸುತ್ತಿದ್ದರು. ಒಂಬತ್ತು ರೀತಿಯ ಭಕ್ತಿಸೇವೆಯಲ್ಲಿ ಅದು ಸೇವಾ ಮನೋಭಾವವನ್ನು ಪ್ರತಿನಿಧಿಸುತ್ತದೆ. ಅವರಿದ್ದ ಪಟ್ಟಣದ ಹೆಸರು ಮಾಮಗಾಛಿ. ಅವರು ಗಂಗಾ ನದಿಯ ದಂಡೆಯ ಮೇಲೆ ಒಂದು ಏಕಾಂತ ಸ್ಥಳದಲ್ಲಿ ಧ್ಯಾನಕ್ಕಾಗಿ ಕುಳಿತು ಪವಿತ್ರ ನಾಮಗಳನ್ನು ಜಪಿಸುತ್ತಿದ್ದರು. ಈ ಆಚರಣೆಗಳ ಮೂಲಕ ಅವರು ಅನೇಕ ಪವಾಡ ಶಕ್ತಿಯನ್ನು ಪಡೆದಿದ್ದರು.
ತಮ್ಮ ಭಜನೆಗೆ ಅಡ್ಡಿಯಾಗುತ್ತದೆ ಎಂದು ಸಾರಂಗ ಠಾಕುರರು ಮೊದಲು ಯಾರನ್ನೂ ಶಿಷ್ಯರನ್ನಾಗಿ ಸ್ವೀಕರಿಸಲು ಅಪೇಕ್ಷಿಸಿರಲಿಲ್ಲ. ಆದರೆ ಮಹಾಪ್ರಭುಗಳು ಶಿಷ್ಯರನ್ನು ಸ್ವೀಕರಿಸುವಂತೆ ಅವರಿಗೆ ಪದೇ ಪದೇ ಪ್ರೇರೇಪಣೆ ಮಾಡುತ್ತಿದ್ದರು.
ಗೌಡೀಯ ವೈಷ್ಣವ ಅಭಿಧಾನ ಹೀಗೆ ಹೇಳಿದೆ, ”ಶ್ರೀವಾಸ ಪಂಡಿತರ ಮನನೋಯಿಸಿದ್ದಕ್ಕಾಗಿ ದೇವಾನಂದ ಪಂಡಿತರನ್ನು ಮಹಾಪ್ರಭುಗಳು ಟೀಕಿಸುತ್ತಿದ್ದಾಗ, ಸಾರಂಗ ಠಾಕುರರು ಅವರನ್ನು ನವದ್ವೀಪದ ರಸ್ತೆಯಲ್ಲಿ ಭೇಟಿ ಮಾಡಿದರು. ಶಿಷ್ಯರನ್ನು ಸ್ವೀಕರಿಸಬಾರದೆಂಬ ದೃಢ ನಿರ್ಧಾರವನ್ನು ಕೈಬಿಡಬೇಕೆಂದು ಮಹಾಪ್ರಭುಗಳು ಸಾರಂಗ ಠಾಕುರರಿಗೆ ಆದೇಶಿಸಿದರು.”

ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಗೋಸ್ವಾಮಿ ಠಾಕುರ ಅವರು ತಮ್ಮ ಅನುಭಾಷ್ಯ ದಲ್ಲಿ ಬರೆಯುತ್ತಾರೆ, ”ಶಿಷ್ಯರನ್ನು ಸ್ವೀಕರಿಸಬೇಕೆಂಬ ಮಹಾಪ್ರಭುಗಳ ಆದೇಶದಂತೆ ಸಾರಂಗ ಠಾಕುರರು ನಿರ್ಧರಿಸಿ ಮರುದಿನ ಬೆಳಗ್ಗೆ ತಾವು ಯಾರನ್ನು ನೋಡುತ್ತಾರೋ ಅವರನ್ನು ತಮ್ಮ ಶಿಷ್ಯರನ್ನಾಗಿ ಮಾಡಿಕೊಳ್ಳುವುದಾಗಿ ತೀರ್ಮಾನಿಸಿದರು.”
ಆದರೆ, ವಿಧಿ ಸಂಕಲ್ಪ, ಮರುದಿನ ಅವರು ಗಂಗಾನದಿಯ ದಂಡೆಗೆ ಸ್ನಾನ ಮಾಡಲು ಹೋದಾಗ ಅವರ ಬಳಿಗೆ ಮೃತದೇಹವೊಂದು ತೇಲುತ್ತ ಬಂದಿತು. ಅವರು ಅದಕ್ಕೆ ಮರುಜೀವ ನೀಡಿ ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು. ಈ ಶಿಷ್ಯ ಠಾಕುರ ಮುರಾರಿ ಎಂದು ಪ್ರಸಿದ್ಧರಾದರು. ಕೆಲವು ಸಲ ಸಾರಂಗ ಮುರಾರಿ ಎಂದೂ ಅವರನ್ನು ಕರೆಯುತ್ತಿದ್ದರು.
ಬಾಲಕ ಮುರಾರಿಯು ಸರ್ಪ ಕಚ್ಚಿದ್ದರಿಂದ ಮೃತಪಟ್ಟ. ಆಗಿನ ಕಾಲದಲ್ಲಿ ಇದ್ದ ಪದ್ಧತಿಯಂತೆ, ಅವನ ಪೋಷಕರು ಅವನ ದೇಹವನ್ನು ತೆಪ್ಪದಲ್ಲಿ ಇಟ್ಟು ಗಂಗಾ ನದಿಯಲ್ಲಿ ತೇಲಿಬಿಟ್ಟಿದ್ದರು.
ಸಾರಂಗ ಠಾಕುರರು ಸ್ವತಃ ಮಹಾಪ್ರಭುಗಳ ಧರ್ಮವನ್ನು ಬೋಧಿಸುವ ಅಧಿಕಾರ ಪಡೆದುಕೊಂಡಿದ್ದರು. ಅವರ ಶಿಷ್ಯ ಪರಂಪರೆಯು ಇನ್ನೂ ಶವ (ಹೆಣ) ಎಂಬ ಹಳ್ಳಿಯಲ್ಲಿದೆ ಎಂದು ಗೌಡೀಯ ವೈಷ್ಣವ ಅಭಿಧಾನದಲ್ಲಿ ಹೇಳಲಾಗಿದೆ.
ಸಾರಂಗ ಠಾಕುರರು ಸ್ಥಾಪಿಸಿದ ವಿಗ್ರಹಗಳಿಗೆ ಮಾಮಗಾಛಿಯಲ್ಲಿ ಸೇವೆ ಸಲ್ಲಿಸಲಾಗುತ್ತಿದೆ. ಮೂಲ ದೇವಸ್ಥಾನವನ್ನು ಬಕುಲ ವೃಕ್ಷದ ಮುಂದೆ ನಿರ್ಮಿಸಲಾಯಿತು. ರಾಧಾ ಗೋಪಿನಾಥ ವಿಗ್ರಹಗಳನ್ನು ಇಲ್ಲಿ ನೋಡಬಹುದು. ಅದರಂತೆಯೇ ಮಹಾಪ್ರಭುಗಳ ಇತರ ಸಹವರ್ತಿಗಳಾದ ವಾಸುದೇವ ದತ್ತ ಠಾಕುರ, ಮದನ ಗೋಪಾಲ ಅವರು ಸ್ಥಾಪಿಸಿದ್ದ ವಿಗ್ರಹಗಳನ್ನೂ ಕಾಣಬಹುದು.
ನವದ್ವೀಪ ಧಾಮ ಪರಿಕ್ರಮ ಮಾಡುವ ಭಕ್ತರು ಈ ಮಂದಿರಕ್ಕೆ ಭೇಟಿ ನೀಡುತ್ತಾರೆ. ಮೇಲೆ ತಿಳಿಸಿರುವ ಸಾರಂಗ ಮುರಾರಿ ಅವರ ಮನೆ ಸಮೀಪದಲ್ಲಿ, ವೃಂದಾವನ ದಾಸ ಠಾಕುರ ಅವರ ಜನ್ಮ ಸ್ಥಳದಲ್ಲಿ ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಗೋಸ್ವಾಮಿ ಠಾಕುರ ಅವರು ದೇವಸ್ಥಾನವೊಂದನ್ನು ಸ್ಥಾಪಿಸಿದ್ದಾರೆ.
ಸಾರಂಗ ಠಾಕುರರು ಅಗ್ರಹಾಯಣ ಮಾಸ ಕೃಷ್ಣ ತ್ರಯೋದಶಿಯಂದು ತಿರೋಭಾವ ಹೊಂದಿದರು. ಮತ್ತೊಂದು ಅಭಿಪ್ರಾಯದಂತೆ, ಅವರು ಆಷಾಢ ಕೃಷ್ಣ ಚತುರ್ದಶಿಯಂದು ತಿರೋಭಾವ ಹೊಂದಿದರು.






Leave a Reply