ಶ್ರೀಲ ಪ್ರಭುಪಾದ – ಭಾಗ-2
ಶತಮಾನ ಕಂಡ ಪರಮಾದ್ಭುತ ಘಟನೆ !
• ಡಾ. ಅರಳುಮಲ್ಲಿಗೆ ಪಾರ್ಥಸಾರಥಿ
ಮುಂಬೈನಲ್ಲಿ ವಿಶ್ವಕ್ಕೆ ಮಾದರಿಯಾಗಬಲ್ಲ ಕೃಷ್ಣ ದೇವಾಲಯ ನಿರ್ಮಾಣ ಮಾಡಲು ಪ್ರಭುಪಾದರು ಶ್ರೀ ಎನ್ ಎಂಬ ವ್ಯಕ್ತಿಯೊಡನೆ ಜಮೀನು ಪಡೆಯಲು ಒಪ್ಪಂದ ಮಾಡಿಕೊಂಡು ಮುಂಗಡ ಹಣ ನೀಡಿದ್ದರು.

ಲೋಭ, ಸ್ವಾರ್ಥ ಹಾಗೂ ವಂಚನೆಯ ಆ ವ್ಯಕ್ತಿ ಆ ನಿವೇಶನವನ್ನು ವರ್ಗಾಯಿಸಲು ಸತಾಯಿಸಿದ್ದಷ್ಟೇ ಅಲ್ಲದೇ ಪ್ರಭುಪಾದರ ಭಕ್ತಿ ಹಾಗೂ ಪೂಜಾ ಚಟುವಟಿಕೆಗಳನ್ನು ಭಗ್ನಗೊಳಿಸಿ, ಆ ನಿವೇಶನದಲ್ಲಿದ್ದ ಪ್ರಭುಪಾದರ ಶಿಷ್ಯರನ್ನು ಅಲ್ಲಿಂದ ಓಡಿಸಿ, ಆ ಭೂಮಿಯನ್ನು ನುಂಗಿ ಹಾಕಲು ಪ್ರಯತ್ನಿಸಿದ.
‘ನಿಮ್ಮ ದೇವರ ವಿಗ್ರಹಗಳನ್ನು ಕಿತ್ತೆಸೆಯುತ್ತೇನೆ’ ಎಂದು ಪ್ರಭುಪಾದರಲ್ಲಿ ನುಡಿದು ಹೀನವಾಗಿ ಮಾತಾಡಿದ್ದ. ಇದಾಗಿ ಒಂದುವಾರದೊಳಗೆ ಆತ ಹೃದಯಾಘಾತಕ್ಕೆ ಈಡಾಗಿ ಮೃತನಾದ. ಮುಂದೆ ಆತನ ಪತ್ನಿ ಪ್ರಭುಪಾದರಿಗೆ ಆ ಜಾಗವನ್ನು ನೋಂದಾಯಿಸಿಕೊಟ್ಟಳು.
”ಸಮುದ್ರ ದಾಟಬಾರದು ಎಂಬ ಹಳೆಯ ಮಾತಿಗೆ ಅವರು ಕಣ್ಣುಮುಚ್ಚಿದರು. ಜಗತ್ತನ್ನೆಲ್ಲಾ ವ್ಯಾಪಿಸಬಲ್ಲ ಹೊರಕಣ್ಣು ಬಿಚ್ಚಿದರು. ಲಕ್ಷಾಂತರ ಜನರ ಕಣ್ಣಿನ ಪೊರೆ ಹರಿಸಿದರು. ಕೃಷ್ಣ ವಿಗ್ರಹದ ಮುಂದೆ ಮುಚ್ಚಿಟ್ಟಿದ್ದ ತೆರೆ ಸರಿಸಿದರು. ನೊಂದು ಬೆಂದಿದ್ದ ಜೀವಗಳ ಕಣ್ಣೀರು ಒರೆಸಿದರು.
ಮಾನವ ಧರ್ಮದ ಗಂಧ ಅರೆದರು. ಕೃಷ್ಣನನ್ನು ತಮ್ಮೆಡೆಗೆ ಕರೆದರು. ಒಳಗಣ್ಣು ತೆರೆದರು. ವ್ಯಕ್ತಿ ವ್ಯಕ್ತಿಗಳ, ದೇಶ ದೇಶಗಳ ಒಳಗೊಳಗೇ ಒಳಗಿಂದೊಳಗೆ ಆಳಕ್ಕೆ ಇಳಿದರು. “
“ಭಾರತೀಯ ಸನಾತನ ಧರ್ಮದ ಗಾಳಿ ಗಂಧವಿಲ್ಲದ ವಿದೇಶೀ ಶಿಷ್ಯರಿಗೆ, ಕೃಷ್ಣಭಕ್ತರಿಗೆ ಅವರು ಕರೆ ನೀಡಿದರು. ವೃಥಾ ಕಳೆದುಹೋದ ಆಯುಷ್ಯ ಅಳಕೋಬೇಕು. ಮಾಡಿರುವ ದುಷ್ಕರ್ಮ ಕಳಕೋಬೇಕು. ಇಂದ್ರಿಯಗಳನ್ನು ಸೆಳಕೋಬೇಕು. ಕೃಷ್ಣ ಪ್ರಜ್ಞೆಯನ್ನು ತಿಳ್ಕೊಬೇಕು. ಈ ದೇಹ ಇರುವಾಗಲೇ, ಈ ಜನ್ಮದಲ್ಲೇ ಕೃಷ್ಣಸಾಕ್ಷಾತ್ಕಾರ ಮಾಡಿಕೋಬೇಕು.
ನಮ್ಮ ಹೃದಯದಲ್ಲಿರುವ ಚೈತನ್ಯದ ದರ್ಶನವಾಗಬೇಕು. ನರನಾಡಿಗಳಲ್ಲಿ ಚೈತನ್ಯ ತುಂಬುವ ಚೈತನ್ಯರ ದರ್ಶನವಾಗಬೇಕು. ಅಂತರಂಗದ ಜ್ಯೋತಿ ಪ್ರಜ್ವಲಿಸಬೇಕು. ಬುದ್ಧಿ ಮನಸ್ಸುಗಳ ವಿಕಸನವಾಗಬೇಕು. ಮನಸ್ಸಿಗೆ ಶಾಂತಿ, ಜೀವನಕ್ಕೆ ನೆಮ್ಮದಿ, ಬಾಳಿಗೊಂದು ಸಾರ್ಥಕತೆ ದೊರೆಯಬೇಕು. ಹಾಗಾಗಬೇಕಾದರೆ ಜೀವನವೆಲ್ಲಾ ಕೃಷ್ಣಮಯವಾಗಬೇಕು.”

ಭಕ್ತಿ ಎನ್ನುವುದು ಶಾಂತಿ ಮಂತ್ರವೇನೋ ನಿಜ. ಆದರೆ ಸರಿಯಾದ ರೀತಿಯಲ್ಲಿ ಅದರ ಚಿಂತನೆ ಹಾಗೂ ಸಿಂಚನವಾದಲ್ಲಿ ಅದು ಲಕ್ಷಾಂತರ ಬಡ ಮಕ್ಕಳ ಒಡಲು ತುಂಬುವ ಅಕ್ಷಯಪಾತ್ರೆಯಾಗಬಹುದು. ಲಕ್ಷ ಲಕ್ಷ ದೀನ ದಲಿತರ ಮಡಿಲು ಮುಚ್ಚುವ ಅಕ್ಷಯ ವಸ್ತ್ರವಾಗಬಹುದು.
ಈ ಕನಸು ಕಂಡ ಪ್ರಭುಪಾದರು ಉನ್ಮತ್ತರ, ಉದ್ವಿಗ್ನರ, ಸಿರಿಗರ ಬಡಿದವರ, ಅಜ್ಞಾನಿಗಳ ಮತಿಗೆ ಮಂಗಳದ ತಿಳಿವು ನೀಡಿದರು. ಪ್ರತಿಯೊಬ್ಬ ಮಾನವರಲ್ಲೂ ದೇವರನ್ನು ಕಂಡು, ಅವರೆಲ್ಲ ಕೃಷ್ಣನತ್ತ ಮುಖಮಾಡುವ ಪರಿಪೂರ್ಣಜ್ಞಾನ ನೀಡಿದರು. ಯುಗ ಯೋಗಿಗಳೆನಿಸಿದ ಪ್ರಭುಪಾದರು ಅತ್ಯಲ್ಪ ಕಾಲದಲ್ಲಿ ಶತಮಾನ ಸಾಧನೆ ಮಾಡಿ ತೋರಿಸಿದರು.
ಸಾಧಿಸಬೇಕೆನ್ನುವವರಿಗೆ ವಯಸ್ಸು ಮುಖ್ಯವಲ್ಲ, ಇಚ್ಛಾಶಕ್ತಿ ಮುಖ್ಯ ಎನ್ನುವುದನ್ನು ನಿರೂಪಿಸಿದರು. ಲಾಸ್ ಏಂಜಲೀಸ್, ನ್ಯೂಯಾರ್ಕ್, ಸಿಡ್ನಿ, ನೈರೋಬಿ, ಸಿಂಗಪುರ, ಮಾಂಟ್ರಿಯಲ್, ಜಪಾನ್, ಎಲ್ಲೇ ಇದ್ದರೂ ಅಪ್ಪಟ ಭಾರತೀಯ ಸನಾತನ ಧರ್ಮದ ಛಾಪು ಮೂಡಿಸಿದರು. ಕಾಯಾ – ವಾಚಾ – ಮನಸಾ ಕೃಷ್ಣ ಸ್ಮರಣೆಯ, ಕೃಷ್ಣಪ್ರಜ್ಞೆಯ ಬದುಕನ್ನು ಬದುಕುವ ಕಲೆಯನ್ನು ಕೋಟ್ಯಂತರ ಜನರಿಗೆ ತೋರಿಸಿಕೊಟ್ಟರು.
ಜಗತ್ತಿನ ತುಂಬಾ ಕೃಷ್ಣಪ್ರಜ್ಞೆಯ ನಂದಾದೀಪ ಬೆಳಗಿದರು. ಜಗದಾದ್ಯಂತ ಕೋಟಿ ಕೋಟಿ ಕೃಷ್ಣ ಭಕ್ತರನ್ನು ಸಂಘಟಿಸಿದರು. ನಿಜವಾದ ಅರ್ಥದಲ್ಲಿ ಜಗದ್ಗುರುಗಳೆನಿಸಿದರು. ಪ್ರಭುಪಾದರು ಆಸ್ತಿಕತೆಯ, ಅಜ್ಞಾನದ ಕತ್ತಲನ್ನು ನಂದಿಸಿದರು. ಕೃಷ್ಣ ಚೇತನಗಳಿಗೆ ವಂದಿಸಿದರು. ಯುಗಧರ್ಮಕ್ಕೆ ಸ್ಪಂದಿಸಿದರು.
ಎಂತಹ ಸನ್ನಿವೇಶ, ವ್ಯಕ್ತಿಗಳನ್ನಾದರೂ ಎದುರಿಸಬಲ್ಲ, ನಿರ್ವಹಿಸಬಲ್ಲ ಕೆಚ್ಚು ಋಷಿ ಪರಂಪರೆಯ ತೇಜಸ್ವೀ ಕಣ್ಣುಗಳು, ದೇಹದ ಅಂಗುಲ ಅಂಗುಲದಲ್ಲೂ ತುಂಬಿಕೊಂಡಿದ್ದ ಪರಂಪರೆಯ ಶ್ರೇಷ್ಠಮೌಲ್ಯಗಳು, ನರನಾಡಿಯಲ್ಲಿ ಪ್ರವಹಿಸುತ್ತಿದ್ದ ಭಕ್ತಿಗಂಗಾ, ದೃಢಸಂಕಲ್ಪದ ಧೀರ ಗಂಭೀರ ಮುಖಭಾವ. ಸೌಜನ್ಯದಿಂದ ತುಂಬಿರುತ್ತಿದ್ದ ಮಾತುಗಳು. ಸಮುದ್ರದಂತಹ ರಾಜಗಾಂಭೀರ್ಯ ಹಾಗೂ ತಳಸ್ಪರ್ಶಿ ಪಾಂಡಿತ್ಯ ಹಸನ್ಮುಖದ ಮಂದಹಾಸ.
ವಿನಮ್ರತೆ, ಸಜ್ಜನಿಕೆಯ ಸಾಕಾರಮೂರ್ತಿ; ಜಗದಗಲ ಮಿಗಿಲಗಲ, ಮುಗಿಲಗಲ, ವ್ಯಾಪಿಸಿದ್ದ ಮಹಾದ್ಭುತ ಪ್ರಭಾವದ, ಐದಡಿ ಐದಂಗುಲ ಎತ್ತರವಿದ್ದ ಶ್ರೀಲ ಪ್ರಭುಪಾದರು ಕೃಷ್ಣಾನುಗ್ರಹ ಗೃಹೀತಾತ್ಮರು, ತಮ್ಮ ಅಕ್ಕಪಕ್ಕಗಳಲ್ಲಿ ಅಜಾನುಬಾಹುಗಳಂತೆ ಇರುತ್ತಿದ್ದ ಅಮೆರಿಕನ್ ಶಿಷ್ಯರುಗಳನ್ನು ಸಮರ್ಥವಾಗಿ ಹಾಗೂ ಲೀಲಾಜಾಲವಾಗಿ ನಿಭಾಯಿಸುತ್ತಿದ್ದ ಮಹಾನ್ ಮಾಂತ್ರಿಕ.

ಅವರ ಚಿಂತನೆಯಲ್ಲಿ ಭಾರತದ ಯುಗ ಯುಗಗಳ ಸನಾತನಧರ್ಮ ಸಾರಭೂತವಾಗಿತ್ತು. ಅವರ ಕಣ್ಣುಗಳಲ್ಲಿ ಉಪನಿಷತ್ತಿನ ರಹಸ್ಯಗಳಿರುತ್ತಿದ್ದವು. ಅವರ ಮಾತಿನಲ್ಲಿ ಕೋಟಿ ಕೋಟಿ ಜನರನ್ನು ಕೃಷ್ಣಭಕ್ತರನ್ನಾಗಿ ಮಾಡುವ ಗಾರುಡಿಯಿತ್ತು. ಕೃಷ್ಣನಲ್ಲಿ ಭಕ್ತಿಮಾಡುವ ಎಲ್ಲ ಮನುಷ್ಯರನ್ನೂ ಪ್ರಭುಪಾದರು ಹೃದಯ ತುಂಬಿ ಪ್ರೀತಿಸುತ್ತಿದ್ದರು. ಆ ಪ್ರೀತಿ ಒಮ್ಮೊಮ್ಮೆ ತಾಯಿಯ ಪ್ರೀತಿಯಂತೆ, ಒಮ್ಮೊಮ್ಮೆ ಹಸುಗೂಸಿನ ಮುಗ್ಧ ಪ್ರೀತಿಯಂತೆ ಶಿಷ್ಯರಿಗೆ ಅನುಭವಕ್ಕೆ ಬರುತ್ತಿತ್ತು.
ಆಧ್ಯಾತ್ಮಿಕ ಮೌಲ್ಯಗಳ ಪ್ರಸರಣ, ಶಾಂತಿ, ನೆಮ್ಮದಿಗಳ ಸಾರ್ಥಕ ಜೀವನದತ್ತ ಪ್ರೇರಣೆ, ಅದಕ್ಕಾಗಿ ಅಗತ್ಯವಿರುವ ಶಿಕ್ಷಣದ ಪ್ರಸಾರ, ಭಗವದ್ಗೀತೆ, ಭಾಗವತಗಳಿಗೆ ಅನುಗುಣವಾಗಿ ಕೃಷ್ಣಪ್ರಜ್ಞೆಯ ಪ್ರಸಾರ, ಭಕ್ತರನ್ನು, ಸದಸ್ಯರನ್ನು ಕೃಷ್ಣ ಸನ್ನಿಧಾನದತ್ತ ಸೆಳೆಯುವುದು,
ಚೈತನ್ಯ ಪ್ರಭುಗಳ ಆದೇಶದಂತೆ ಕೃಷ್ಣನಾಮ ಸ್ಮರಣೆ, ಭಜನೆ, ಸಂಕೀರ್ತನೆಗಳು ಆಂದೋಲನ, ಸರಳ ಹಾಗೂ ಸಹಜ ನಡೆ ನುಡಿಗಳ ಜೀವನದ ಪ್ರಚಾರ, ಶ್ರೀಕೃಷ್ಣ ಭಕ್ತಿಯ ಕೇಂದ್ರಗಳಾಗಿ ದೇವಾಲಯಗಳ ಪವಿತ್ರ ಸನ್ನಿಧಾನ ನಿರ್ಮಾಣ, ಈ ಎಲ್ಲ ಧ್ಯೇಯಗಳ ಸಾಧನೆಗಾಗಿ ಸ್ವಾಮಿ ಪ್ರಭುಪಾದರು ರೂಪಿಸಿದ ಮಹಾನ್ ಸಂಸ್ಥೆ ಇಸ್ಕಾನ್.
ಅಮೆರಿಕದಲ್ಲಿ ತಾವಿದ್ದ ಅಪಾರ್ಟ್ಮೆಂಟಿನಲ್ಲಿ ಉಪನ್ಯಾಸ, ಪ್ರವಚನ, ಸಂಕೀರ್ತನ ಮಾಡುತ್ತಿದ್ದ ಪ್ರಭುಪಾದರು ಭಕ್ತಾದಿಗಳಿಗೆ ಪ್ರಸಾದಕ್ಕೆಂದು ತಾವೇ ತರಕಾರಿ ಊಟದ ವ್ಯವಸ್ಥೆ ಮಾಡಿದರು. ಶುದ್ಧಸಾತ್ವಿಕ ಆಹಾರ ತಯಾರಿಸಿ ಹಸಿದವರಿಗೆ ಹೊಟ್ಟೆ ತುಂಬಿಸುವ ದಾಸೋಹದ ಕ್ರಮಗಳನ್ನು ಶಿಷ್ಯರಿಗೆ ಹೇಳಿಕೊಟ್ಟರು.
ಜಪಮಣಿ ಹಿಡಿದು ಜಪಮಾಡುವುದನ್ನು ಕಲಿಸಿದರು. ವೈಷ್ಣವ ಚಿಹ್ನೆಯಾದ ತಿಲಕ, ಗೋಪೀಚಂದನ, ಧಾರಣೆ ಕಲಿಸಿದರು. ತಾವಿದ್ದ ಕೋಣೆಯ ಮುಂಭಾಗದಲ್ಲೇ ಹೋಮಾಗ್ನಿಯನ್ನು ಪ್ರತಿಷ್ಠಾಪಿಸಿ ಹವನ ಹೋಮ ಸಂಸ್ಕೃತಿಯನ್ನು ತಿಳಿಸಿಕೊಟ್ಟರು. ಕೃಷ್ಣ ಜನ್ಮಾಷ್ಟಮಿ, ರಥಯಾತ್ರೆಗಳ ಅದ್ಭುತ ರೂಪ ಕಲ್ಪನೆಗಳನ್ನು ಯಶಸ್ವಿಯಾಗಿ ಸಾಕಾರಗೊಳಿಸಿದರು.
ಇಂದಿರಾಗಾಂಧಿ, ಲಾಲ್ ಬಹದ್ದೂರ ಶಾಸ್ತ್ರಿ ಡಾ|| ರಾಧಾಕೃಷ್ಣನ್, ಹಾಗೂ ಅನೇಕ ದೇಶಗಳ ಪ್ರಧಾನಿಗಳು, ರಾಷ್ಟ್ರಾಧ್ಯಕ್ಷರುಗಳನ್ನು ಅತ್ಯಂತ ನಿಕಟವಾಗಿ ಬಲ್ಲವರಾಗಿದ್ದರು. ಅವರ ರಥಯಾತ್ರೆಗೆ ಜಗತ್ತಿನ ನಾನಾ ನಾಯಕರು, ಪತ್ರಿಕೆಗಳು ಉತ್ತಮ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಿ ಅಭಿನಂದನೆಯ ಮಹಾಪೂರವನ್ನು ಹರಿಸುತ್ತಿದ್ದರು.

ಅಮೆರಿಕದ ನ್ಯೂಯಾರ್ಕ್ ಡೈಲಿನ್ಯೂಸ್ ಪತ್ರಿಕೆಯು ನ್ಯೂಯಾರ್ಕ್ ನ ಮ್ಯಾನ ಹಟನ್ನಲ್ಲಿ ನಡೆದ ರಥಯಾತ್ರೆಯನ್ನು ಪೂರ್ವ ಪಶ್ಚಿಮಗಳ ಅಪೂರ್ವ ಸಮಾಗಮವೆಂದು ಬಣ್ಣಿಸಿತು. ಪ್ರಭುಪಾದರ ‘ಶ್ರೀ ಮದ್ಭಾಗವತ’, ‘ಭಗವದ್ಗೀತೆ’ ಗ್ರಂಥಗಳಿಗೆ ವಿಶ್ವದಾದ್ಯಂತ ಪ್ರಶಂಸೆ, ಅಭಿನಂದನೆಗಳು ಬಂದವು.
1965 ರಿಂದಲೂ ಅವರಿಗೆ ಅನಾರೋಗ್ಯ ಕಾಡುತ್ತಿತ್ತು. ತಾವು ನಿವೃತ್ತರಾಗಿ, ಶಿಷ್ಯರಿಗೆ ನಿರ್ವಹಣೆಯ ಜವಾಬ್ದಾರಿ ಕೊಡುವ ಮಾತನ್ನು ಅವರು ಅನೇಕ ಬಾರಿ ಆಡಿದ್ದರು. ಒಮ್ಮೆ ಹೃಷೀಕೇಶಕ್ಕೆ ಹೋಗಿದ್ದಾಗ ತಮ್ಮ ಅಂತ್ಯ ಸಮೀಪಿಸುತ್ತಿದೆ ಎನಿಸಿ ತತ್ ಕ್ಷಣ ವೃಂದಾವನಕ್ಕೆ ಹಿಂತಿರುಗಿದರು.
ಆದರೆ ಕೆಲವೇ ದಿನಗಳಲ್ಲಿ ಆರೋಗ್ಯ ಸುಧಾರಿಸಿ, ಅವರು ಮತ್ತೆ ವಿಶ್ವಪರ್ಯಟನೆ ಕೈಗೊಂಡರು. ಆದರೆ ತಮ್ಮ ಜೀವಿತದ ಅಂತಿಮ ಘಳಿಗೆಗಳಲ್ಲಿ ತಾವಿರಬೇಕಾದದ್ದು ಶ್ರೀಕೃಷ್ಣನ ವೃಂದಾವನದಲ್ಲಿ ಎಂದು ದೃಢವಾವಾಗಿ ನಂಬಿದ್ದ ಪ್ರಭುಪಾದರು ವೃಂದಾವನಕ್ಕೆ ಹಿಂತಿರುಗಿದರು.
1977ರ ನವೆಂಬರ್ 14 ರಂದು ಸಂಜೆ ಏಳೂವರೆ ಘಂಟೆಗೆ ವೃಂದಾವನದ ಕೃಷ್ಣ ಬಲರಾಮರ ದೇವಾಲಯದಲ್ಲೇ ಶ್ರೀಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಎನ್ನುವ ಜ್ಞಾನ ಸೂರ್ಯ ಅಸ್ತಂಗತನಾದ. ಪ್ರಪಂಚದ ನಾನಾ ದೇಶಗಳಲ್ಲಿದ್ದ ಅವರ ಲಕ್ಷಾಂತರ ಶಿಷ್ಯರು ದುಃಖಸಾಗರದಲ್ಲಿ ಮುಳುಗಿದರು. ಆದರೆ ಅವರು ಎಂದೂ ಆರದ ನಂದಾದೀಪವಾಗಿ ಗ್ರಂಥಗಳ ರೂಪದಲ್ಲಿ ಕೃಷ್ಣ ದೇವಾಲಯಗಳ ಭಕ್ತಿಜ್ಯೋತಿಗಳಲ್ಲಿ, ಶಿಷ್ಯಕೋಟಿಯ ಹೃದಯಗಳಲ್ಲಿ ನಿರಂತರ ಬೆಳಗುತ್ತಾ ಅಜರಾಮರವಾಗಿದ್ದಾರೆ.
ಮಹತ್ತು ಬೃಹತ್ತುಗಳನ್ನು ಪರಮಾದ್ಭುತಗಳನ್ನು ಸಾಧಿಸಿ ತೋರಿಸಿದ ಭಕ್ತಿ ಭಾರ್ಗವರಾಗಿದ್ದ ಅವರು ಎಪ್ಪತ್ತರ ವಯಸ್ಸಿನಲ್ಲೂ ಚೈತನ್ಯದ ಚಿಲುಮೆಯಾಗಿದ್ದರು. ಮಹತ್ಕಾರ್ಯ ಸಾಧನೆಗೆಂದೇ ಪರಮಾತ್ಮನಿಂದ ಆಯ್ಕೆಯಾದವರು ತಾವು ಎನ್ನುವ ವಿಶ್ವಾಸ ಅವರದಾಗಿತ್ತು. ಎಲ್ಲ ಬಣ್ಣಗಳ, ಎಲ್ಲ ಚರ್ಮಗಳ, ಎಲ್ಲ ದೇಹಗಳ ಒಳಗಿರುವ ಪರಮಾತ್ಮ ಒಂದೇ ಎಂಬ ತಿಳಿವು ನೀಡಿದ ಅವರು ಕೋಟ್ಯಂತರ ಜನರ ಆತ್ಮ ಶಕ್ತಿಯನ್ನು ಉದ್ದೀಪಿಸಿದ ಶಕ್ತಿಸಾಗರವಾದರು.






Leave a Reply