– ಆಕರ: ಸತ್ಯಗೌರಚಂದ್ರದಾಸ ಅವರ ಆಂಗ್ಲ ಉಪನ್ಯಾಸ, ಅನುವಾದ: ಚೇತನಾ ತೀರ್ಥಹಳ್ಳಿ
“ನಮ್ಮ ಗ್ರಹಿಕೆಗೆ ನಿಲುಕದ, ನಮ್ಮಿಂದ – ಅರ್ಥೈಸಿಕೊಳ್ಳಲಾಗದ ಘಟನೆಗಳನ್ನು ನಾವು ‘ಪವಾಡ’ ಎಂದುಬಿಡುತ್ತೇವೆ. ಇಂತಹ ವೈಚಿತ್ರ್ಯಗಳನ್ನು ಸೃಷ್ಟಿಸಿರುವ ಸರ್ವಶಕ್ತ ಭಗವಂತನಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಮತ್ತು ಅವನು ತಾನು ಬಯಸಿದ್ದನ್ನು ಮಾಡಬಲ್ಲ ಎಂಬುದು ನಮಗೆ ಹೊಳೆಯುವುದೇ ಇಲ್ಲ!”

ಒಂದೆರಡು ‘ಪವಾಡ’ ದಂತಹ ಘಟನೆಗಳೊಡನೆ ಆರಂಭಿಸೋಣ. ಇವು ಸತ್ಯ ಘಟನೆಗಳು.
ಘಟನೆ -1
2004ರ ಜೂನ್ 26ನೇ ತಾರೀಖು. ಬ್ರೂಟನ್ ರೋಡಿನಲ್ಲಿ ಯುವ ದಂಪತಿ ಮತ್ತು ಒಂದು ಮಗು. ಆಗ ತಾನೆ ಅವರ ಶಾಪಿಂಗ್ ಮುಗಿದಿದೆ. ತಾಯಿಯ ಕೈ ಬಿಡಿಸಿಕೊಂಡು ಮಗು ರಸ್ತೆಯ ಮತ್ತೊಂದು ಬದಿಗೆ ಓಡುತ್ತಿದೆ. ಅದೇ ಸಮಯಕ್ಕೆ ಸರಿಯಾಗಿ ವೇಗವಾಗಿ ಬರುತ್ತಿರುವ ಒಂದು ಕಾರು.
ಚಾಲಕನಿಂದ ನಿಯಂತ್ರಣ ಸಾಧ್ಯವಾಗಲಿಲ್ಲ. ಅರೆಕ್ಷಣದಲ್ಲಿ ಮಗು ರಸ್ತೆಯ ಮೇಲೆ ಬಿದ್ದಿತ್ತು. ಕಾರು ಮಗುವಿನ ಮೇಲೆ ಚಕ್ರಗಳನ್ನುರುಳಿಸಿಕೊಂಡು ಹಾದು ಹೋಗಿತ್ತು.
ಮಗು ಅಂಗಾತ ಮಲಗಿಬಿಟ್ಟಿದೆ! ತಂದೆ ತಾಯಿಗಳು ಉದ್ವೇಗಗೊಂಡರು. ಹಾಗೆಯೇ ಎತ್ತಿಕೊಂಡು ಸಮೀಪದ ಆಸ್ಪತ್ರೆಗೆ ಧಾವಿಸಿದರು. ಅಲ್ಲಿನ ಡಾಕ್ಟರ್- ಥಾಮಸ್. ಮಗುವಿನ ಹೆಸರು ಮೋಮು, ಅವನ ತಂದೆ ವೈದ್ಯರಿಗೆ ನಡೆದ ಘಟನೆ ವಿವರಿಸಿದ. ಆಸ್ಪತ್ರೆಯ ತಜ್ಞ ವೈದ್ಯರು ಸುತ್ತುವರಿದರು. ಎಲ್ಲ ಬಗೆಯ ಪರೀಕ್ಷೆಗಳು ನಡೆದವು. ಆ ವೇಳೆಗೆ ಗಾಬರಿಯಿಂದ ಮೂರ್ಛೆ ಹೋಗಿದ್ದ ಮಗುವಿಗೆ ಎಚ್ಚರವಾಯ್ತು.
ಆಶ್ಚರ್ಯ! ಮಗುವಿನ ದೇಹದ ಮೇಲಾಗಲೀ, ಒಳಗಾಗಲೀ ಅಪಘಾತದ ಒಂದೇ ಒಂದು ಕುರುಹಿಲ್ಲ!!
ವೈದ್ಯರು ಮಗುವಿನ ಮೇಲೆ ಕಾರು ಹಾದು ಹೋಗಿದ್ದು ನಿಜವೇ? ಎಂದು ಮತ್ತೆ ಮತ್ತೆ ಕೇಳಿ ಖಚಿತ ಪಡಿಸಿಕೊಂಡರು. ಇತರ ಪ್ರತ್ಯಕ್ಷದರ್ಶಿಗಳು ಕೂಡ ಕಾರಿನ ಚಕ್ರ ಮಗುವಿನ ಮೇಲೆ ಹಾದು ಹೋಗಿದ್ದನ್ನು ನೋಡಿದುದಾಗಿ ತಿಳಿಸಿದರು. ಇಷ್ಟೆಲ್ಲ ಆದರೂ ಮಗುವಿನ ಕೂದಲು ಕೂಡ ಕೊಂಕದೆ ಉಳಿದಿತ್ತು!
ಘಟನೆ -2
‘ವೈಸಾ’ದ ಕ್ರಿಕೆಟ್ ಮೈದಾನ. ಅಲ್ಲೊಮ್ಮೆ ಒಂದು ಸಣ್ಣ ಮಟ್ಟದ ಪಂದ್ಯ ನಡೆಯುತ್ತಿತ್ತು. ಅವರಲ್ಲೊಬ್ಬ ಕ್ರೀಡಾಳು ದಿಲೀಪ್ ಕುಮಾರ್. ಗಟ್ಟಿಮುಟ್ಟು ದೇಹದ ಸ್ವಸ್ಥ ಯುವಕ. ಅವರು ಬ್ಯಾಟಿಂಗ್ ಮಾಡುತ್ತಿದ್ದರು.
ಅದೊಂದು ಅತಿ ಚಿಕ್ಕ ಮೈದಾನ. ಅಭಿವೃದ್ಧಿಪಡಿಸದ ಸ್ಥಳೀಯ ಮಟ್ಟದ್ದು. ಮೈದಾನದಲ್ಲಿ ಒಂದು ಚೆರ್ರಿಮರ. ಸರಿ ಸುಮಾರು ಅದರ ಕೆಳಗೇ ಬ್ಯಾಟಿಂಗ್ ಪಿಚ್ ಇದ್ದುದು. ದಿಲೀಪ್ ಬ್ಯಾಟಿಂಗ್ ಮಾಡುತ್ತಿರುವಾಗ ಆ ಮರದಿಂದ ಒಂದು ಚಿಕ್ಕ ಚೆರ್ರಿ ಹಣ್ಣು ಕೆಳ ಬಿದ್ದಿತು.
ಆಶ್ಚರ್ಯ! ಚೆರ್ರಿ ಹಣ್ಣು ತನ್ನ ಎದೆಯ ಮೇಲೆ ಬೀಳುತ್ತಿದ್ದಂತೆಯೇ ಆಘಾತಗೊಂಡ ದಿಲೀಪ್ ಕುಮಾರ್ ಅಲ್ಲಿಯೇ ಮೃತಪಟ್ಟರು!!
ಈ ಎರಡೂ ಘಟನೆಗಳನ್ನು ತಾಳೆ ಹಾಕಿ ನೋಡಿ. ಒಂದೆಡೆ, ಮೂರು ವರ್ಷದ ಎಳೆಯ ಮಗು ಮೈಮೇಲೆ ಮೋಟಾರು ಗಾಡಿ ಹಾದು ಹೋದರೂ ಸ್ವಸ್ಥವಾಗಿ ಬದುಕುಳಿಯಿತು. ಮತ್ತೊಂದೆಡೆ, ಬಲಿಷ್ಠ ದೇಹದ ತರುಣ ವಯಸ್ಸಿನ ಕ್ರಿಕೆಟಿಗ ಕೇವಲ ಒಂದು ಚೆರ್ರಿ ಹಣ್ಣು ಎದೆ ಮೇಲೆ ಬಿದ್ದದ್ದೇ ನೆವವಾಗಿ ಜೀವ ಕಳೆದುಕೊಂಡರು.

ಈ ಎರಡೂ ಘಟನೆಗಳು ಆಯಾ ಸಂದರ್ಭದಲ್ಲಿ ಪತ್ರಿಕೆಗಳಿಂದ ವರದಿ ಮಾಡಲ್ಪಟ್ಟವು. ಈ ಘಟನೆಗಳನ್ನು ಅವು ಅದ್ಭುತ ಪವಾಡ, ಆಕಸ್ಮಿಕ ಎಂದೆಲ್ಲ ಕರೆದವು. ನಮಗೆ ಅರ್ಥವಾಗದ ಘಟನೆಗಳನ್ನು ನಾವು ವಿವರಿಸುವುದು ಹಾಗೆಯೇ ಅಲ್ಲವೆ?
ಚಿಕ್ಕ ಮಗುವೊಂದಿದೆ. ಅದು ಆಕಾಶದಲ್ಲಿ ಹಾರುವ ವಿಮಾನವನ್ನು ನೋಡುತ್ತದೆ. ಅದರ ಗ್ರಹಿಕೆಗೆ ವಿಮಾನ ಒಂದು ಪವಾಡದಂತೆ ತೋರುತ್ತದೆ. ವೈಮಾನಿಕ ತತ್ತ್ವಗಳ, ವಿಜ್ಞಾನದ ಸಾಮಾನ್ಯ ತಿಳುವಳಿಕೆಯೂ ಇಲ್ಲದ ಮಗುವಿನ ಪಾಲಿಗೆ ಅದು ‘ಪವಾಡ’ ಎನಿಸುವುದು ಸಹಜವೇ! ಆದರೆ ವಿಜ್ಞಾನ ಬಲ್ಲವನಿಗೆ ಅದು ಖಂಡಿತ ಪವಾಡವಲ್ಲ, ಅದರಲ್ಲೂ ವೈಮಾನಿಕ ವಿಜ್ಞಾನದ ಬಗ್ಗೆ ತಿಳಿದವರಿಗೆ ಅದೊಂದು ಅತ್ಯಂತ ಸರಳವಾದ ವಿಚಾರ.
ಯಾವುದೇ ಒಂದು ಅರಿವಿನ ಬಗ್ಗೆ ನಮಗೆ ಎಲ್ಲಿಯವರೆಗೆ ಮೌಢ್ಯ ಕವಿದಿರುತ್ತದೆಯೋ ಅಲ್ಲಿಯವರೆಗೆ ಅದು ‘ಪವಾಡ’ವೆಂದೇ ನಮಗೆ ತೋರುತ್ತದೆ.
ಕಲ್ಕತ್ತೆಯ ಒಬ್ಬ ಜಗತ್ಪ್ರಸಿದ್ಧ ಜಾದೂಗಾರರಿರುವರು. ಅವರ ಹೆಸರು ಪಿ.ಸಿ.ಸರ್ಕಾರ್ ಎಂದು. ಅವರು ಎಂತಹದೆಂತಹದೋ ವಸ್ತುಗಳಿಂದ ಬೂದಿ, ಉಂಗುರ, ಬಟ್ಟೆ, ನೋಟುಗಳು….. ಹೀಗೆ ಏನೇನನ್ನೋ ಸೃಷ್ಟಿಸುವರು. ಒಮ್ಮೆ ಅವರು ಜನರು ನೋಡು ನೋಡುತ್ತಿದ್ದಂತೆಯೇ ತಾಜಮಹಲ್ ಅನ್ನು ಅವರ ದೃಷ್ಟಿಯಿಂದ ಮಾಯ ಮಾಡಿಬಿಟ್ಟರು! ಅಲ್ಲಿ ನೆರೆದಿದ್ದ ಸಾವಿರಾರು ಜನರು ಈ ಪವಾಡದಿಂದ ದಂಗಾಗಿ ಹೋದರು. ಸರ್ಕಾರ್ ಅವರನ್ನು ಹೃತ್ತೂರ್ವಕ ಹೊಗಳಿದರು.
ಆದರೆ ಸರ್ಕಾರ್, ಒಬ್ಬ ಪ್ರಾಮಾಣಿಕ ಮನುಷ್ಯ. ಅವರು ‘ನಾನೇನೂ ವಸ್ತುಗಳನ್ನು ಸೃಷ್ಟಿಸಲು, ಮಾಯ ಮಾಡಲು ದೇವರಲ್ಲ. ಇದೊಂದು ವಿದ್ಯೆಯಷ್ಟೆ. ನಾನು ಚಿನ್ನ, ಹಣ, ಬೂದಿಗಳನ್ನು ಸೃಷ್ಟಿಸಿ ಕೊಡುವುದನ್ನು ಕಲಿತಿರುವೆನಷ್ಟೆ” ಎಂದು ವಿನಮ್ರತೆಯಿಂದ ಹೇಳುವರು.
ಆದರೆ, ಕೆಲವರಿದ್ದಾರೆ. ಚಿಟಿಕೆ ಬೂದಿಯನ್ನು ಖಾಲಿ ಕೈಗಳಿಂದ ಸೃಷ್ಟಿಸಿ ಕೊಡುತ್ತಾರೆ, ಮತ್ತು ತಮ್ಮನ್ನು ತಾವು ‘ದೇವರು’ ಎಂದು ಹೇಳಿಕೊಳ್ಳುತ್ತಾರೆ. ಮುಗ್ಧಜನರು ಇದನ್ನು ನಂಬಿಕೊಳ್ಳುತ್ತಾರೆ. ಅವರಿಗೆ ಭಗವದ್ ವಿಜ್ಞಾನದ ಅರಿವಿರುವುದಿಲ್ಲ. ಆದರೆ, ಯಾರು ಭಗವದ್ವಿ ಜ್ಞಾನವನ್ನು ಅರಿತಿರುವರೋ, ಅಂತಹವರಿಗೆ ಖಂಡಿತ ಅದೊಂದು ಪವಾಡವೆನಿಸದು.
ಅವನು ಈ ಜಗತ್ತಿನಲ್ಲಿ ನಡೆಯುವ ಎಲ್ಲ ಪ್ರಕ್ರಿಯೆಗಳನ್ನೂ ಅರ್ಥೈಸಿಕೊಳ್ಳಬಲ್ಲ. ವ್ಯಕ್ತಿಯೊಬ್ಬ ಕೃಷ್ಣನನ್ನು ಭಗವದ್ವಿ ಜ್ಞಾನವನ್ನು ಅರಿತಿರುವನೆಂದರೆ, ಆತ ಜಗತ್ತಿನ ಪ್ರತಿಯೊಂದು ವ್ಯಾಪಾರವನ್ನೂ ಅರ್ಥ ಮಾಡಿಕೊಳ್ಳಬಲ್ಲನೆಂದೇ ತಿಳಿಯಬೇಕು.
ಹಾಗಾದರೆ, ಇಲ್ಲಿ ಮಗುವು ಬದುಕುಳಿದಿದ್ದನ್ನೂ ಯುವ ಕ್ರಿಕೆಟಿಗ ಮರಣ ಹೊಂದಿದ್ದನ್ನೂ ಹೇಗೆ ಅರ್ಥೈಸಿಕೊಳ್ಳಬೇಕು? ಇದನ್ನು ಉನ್ನತ ಭಗವದ್ಭಕ್ತ ಪ್ರಹ್ಲಾದನು ಬಹಳ ಚೆನ್ನಾಗಿ ವಿವರಿಸಿದ್ದಾನೆ. ಆತ ಕೇವಲ ಐದು ವರ್ಷದ ಬಾಲಕನಿರುವಾಗಲೇ ಭಗವದ್ವಿಜ್ಞಾನವನ್ನು ಕುರಿತು ಮಾತನಾಡುತ್ತಿದ್ದನು. ಆದ್ದರಿಂದಲೇ ಆತನನ್ನು “ಮಹಾಜನ”ರಲ್ಲಿ ಒಬ್ಬನೆಂದು ಪರಿಗಣಿಸಬೇಕು.
ಪ್ರಹ್ಲಾದನು ವಿವರಿಸುವಂತೆ;
ಬಾಲಸ್ಯ ನೇಹ ಶರಣಂ ಪಿತರೌ ನೃಸಿಂಹ
ನಾರ್ತಸ್ಯ ಚಾಗದಮುದನ್ವತಿ ಮಜ್ಜತೋ ನೌಃ |
ಸ್ತಾವದ್ ವಿಭೋ ತನುಭೃತಾಂ ತ್ವದುಪೇಕ್ಷಿತಾನಾಮ್ ||
ಕೆಲವೊಮ್ಮೆ ಮಗುವಿನ ಬಳಿಯಲ್ಲಿಯೇ ತಂದೆತಾಯಿಗಳಿದ್ದರೂ ಅವರಿಂದ ಅದನ್ನು ರಕ್ಷಿಸಲಾಗುವುದಿಲ್ಲ. ಕಾಯಿಲೆಯೆಂದು ವೈದ್ಯರ ಬಳಿ ಹೋಗಿ ಔಷಧ ಪಡೆದರೂ ಯಾತನೆಯಿಂದ ಮುಕ್ತಿ ದೊರೆಯುವುದಿಲ್ಲ.
ನಾವು ಅಂತಹ ಕೆಲವು ಸನ್ನಿವೇಶಗಳನ್ನು ನೋಡಿಯೇ ಇರುತ್ತೇವೆ. ವೈದ್ಯರು ‘ಈತ ಇನ್ನು ಹೆಚ್ಚು ಕಾಲ ಬದುಕುವುದಿಲ್ಲ’ ಎಂದು ಹೇಳಿದ್ದರೂ ಆ ವ್ಯಕ್ತಿಯು ಗುಣಮುಖನಾಗಿ ಬಹಳ ಕಾಲದವರೆಗೆ ಬದುಕಿಬಿಟ್ಟಿರುತ್ತಾನೆ. ಹಾಗೆಯೇ, ಕೆಲವೊಮ್ಮೆ ವೈದ್ಯರು ಬಹಳ ವಿಶ್ವಾಸದಿಂದ “ಈತನು ಉಳಿಯುವನು” ಎಂದು ಹೇಳಿದ್ದರೂ ಆ ವ್ಯಕ್ತಿಯು ತೀರಿಕೊಂಡುಬಿಟ್ಟಿರುತ್ತಾನೆ.

ಪ್ರಹ್ಲಾದ ಮಹಾರಾಜನು ಹೇಳುತ್ತಾನೆ, “ತಂದೆ ತಾಯಿಯರಿಂದ ಮಗುವಿನ ರಕ್ಷಣೆ ಸಾಧ್ಯವಿಲ್ಲ. ಅಂತಹ ರಕ್ಷಣೆಯನ್ನು ಆಶ್ರಯವನ್ನು ನೀಡುವವನು ಭಗವಂತ. ಆತನೇ ನಮ್ಮನ್ನು ಉಪೇಕ್ಷಿಸಿದರೆ ಜೀವಿಗಳು ಇನ್ನು ಯಾರನ್ನು ಮೊರೆ ಹೋಗಲಾದೀತು?”
ಭಗವಂತ ನಮ್ಮನ್ನು ಉಪೇಕ್ಷಿಸಿದರೆ ಉಳಿಕೆಗೆ ಅನ್ಯ ಮಾರ್ಗವೇ ಇಲ್ಲ ಎನ್ನುವುದು ಪ್ರಹ್ಲಾದನ ಮಾತುಗಳ ಸಾರವಾಗಿದೆ.
”ವೈದ್ಯನಾದವನು ರೋಗಿಗೆ ಔಷಧಗಳನ್ನು ನೀಡಬಲ್ಲನಷ್ಟೆ. ಆತ ಎಂದಿಗೂ ರೋಗಿಯನ್ನು ರಕ್ಷಿಸಲು ಸಾಧ್ಯವಿಲ್ಲ. ಜೀವಿಗಳನ್ನು ರಕ್ಷಿಸಬಲ್ಲವನು ಭಗವಂತ ಮಾತ್ರ. ಅವನೇ ಪ್ರತಿಯೊಂದು ಕ್ರಿಯೆಯ ಕರ್ತೃವಾಗಿದ್ದಾನೆ, ನಿಯಂತ್ರಕನಾಗಿದ್ದಾನೆ. ಕೃಷ್ಣನು ನಮ್ಮೆಲ್ಲರ ಪಾಲಕನಾಗಿದ್ದಾನೆ. ಒಂದು ವೇಳೆ ಕೃಷ್ಣನು ರಕ್ಷಣೆ ನಿರಾಕರಿಸಿದರೆ, ಬೇರೆ ಯಾರಿಂದಲೂ ಅದನ್ನು ಒದಗಿಸಲು ಖಂಡಿತ ಸಾಧ್ಯವಿಲ್ಲ.
ಕೃಷ್ಣನ ರಕ್ಷಣೆಯಿದ್ದರೆ, ಯಾರಿಂದಲೂ ಯಾವ ಹಾನಿಯನ್ನೂ ಮಾಡಲಾಗುವುದಿಲ್ಲ. ಕೃಷ್ಣನ ರಕ್ಷಣೆ ಇಲ್ಲವಾದರೆ, ಯಾರಿಂದಲೂ ಕೇಡನ್ನು ತಪ್ಪಿಸಲಾಗುವುದಿಲ್ಲ”
ಆದ್ದರಿಂದ, ಎಲ್ಲಿಯವರೆಗೆ ನಾವು ಕೃಷ್ಣನನ್ನು ಭಗವದ್ವಿಜ್ಞಾನವನ್ನು ಅರಿಯುವುದಿಲ್ಲವೋ, ಅಲ್ಲಿಯವರೆಗೆ ನಮಗೆ ಕೃಷ್ಣನ ಆಶ್ರಯವನ್ನು ಪಡೆಯುವುದು ಹೇಗೆ, ಆತನ ರಕ್ಷಣೆ ಹೊಂದುವುದು ಹೇಗೆ ಎಂಬುದು ತಿಳಿಯುವುದಿಲ್ಲ. ಕೃಷ್ಣ ವಿಜ್ಞಾನ ಆರಂಭವಾಗುವುದು “ಅರಿಯುವಿಕೆ” ಯಿಂದ. ನಮ್ಮ ನಿಜ ಸ್ವರೂಪದ ಅರಿಯುವಿಕೆಯಿಂದ. ಶ್ರೀಲ ಪ್ರಭುಪಾದರ ಭಗವದ್ಗೀತೆ ಮತ್ತು ಭಾಗವತಗಳಲ್ಲಿ ಇದನ್ನು ಮತ್ತೆ ಮತ್ತೆ ಹೇಳಲಾಗಿದೆ.
ಶ್ರೀಲ ಪ್ರಭುಪಾದರು, “ನಮ್ಮ – ನಿಜ ಸ್ವರೂಪವು ಈ ದೇಹಕ್ಕಿಂತ ಸಂಪೂರ್ಣ ಭಿನ್ನವಾಗಿದೆ” ಎಂದು ಸ್ಪಷ್ಟವಾಗಿ ವಿವರಿಸಿದ್ದಾರೆ. ಈ ದೇಹವು ಮತ್ತೆ ಮತ್ತೆ ಬದಲಾಗುತ್ತಲೇ ಇದ್ದರೂ ನಮ್ಮ ಮೂಲ ಪರಿಚಯವು ಹಾಗೆಯೇ ಇರುತ್ತದೆ, ಮತ್ತು ಅದು ಆಧ್ಯಾತ್ಮಿಕವಾದುದಾಗಿರುತ್ತದೆ. ಈ ದೇಹದೊಂದಿಗಿನ ನಮ್ಮ ಗುರುತಿಸುವಿಕೆ ಕೇವಲ ತಾತ್ಕಾಲಿಕವಷ್ಟೆ.
ರಾತ್ರಿಯ ವೇಳೆ ಕೆಲವೊಮ್ಮೆ ನಮಗೆ ಸ್ವಪ್ನಗಳು ಬೀಳುತ್ತವೆ. ಇದೊಂದು ಸಹಜ ಜೈವಿಕ ಪ್ರಕ್ರಿಯೆ. ಮಲಗಿದಾಗ ಎರಡು ಹಂತಗಳಿರುತ್ತವೆ. ಒಂದು ಸ್ವಪ್ನದ ಹಂತ, ಮತ್ತೊಂದು ಗಾಢನಿದ್ರೆ. ಕನಸು ಕಾಣುವ ವೇಳೆಯಲ್ಲಿ ನಾವು ನಮ್ಮ ಸದ್ಯದ ಅಸ್ತಿತ್ವವನ್ನು ಮರೆಯುತ್ತ ಸಾಗುತ್ತೇವೆ.
ಹಾಗೆಯೇ ನಮ್ಮ ನೈಜ ಸ್ಥಿತಿ ಕೂಡ ಇದೆ. ಶಾಸ್ತ್ರಗಳು ನಮ್ಮ ಅಸ್ತಿತ್ವವನ್ನು ‘ಸ್ವಪ್ನದಂತೆ’ ಎಂದು ಹೇಳುತ್ತವೆ. ಈ ಸ್ವಪ್ನದಲ್ಲಿ ನಾವೆಲ್ಲರೂ ನಮ್ಮ ನಿಜ ಸ್ವರೂಪವನ್ನು ಮರೆತಿದ್ದೇವೆ. ಕನಸಿನಲ್ಲಿ ನಮ್ಮನ್ನು ಒಂದು ಸಿಂಹವೋ, ಹುಲಿಯೋ ಅಟ್ಟಿಸಿಕೊ೦ಡು ಬ೦ದ೦ತಾದಾಗ ನಾವು ಉದ್ವೇಗಕ್ಕೊಳಗಾಗುತ್ತೇವೆ.
ನಮ್ಮ ಉಸಿರಾಟದಲ್ಲಿಯೂ ವ್ಯತ್ಯಾಸವುಂಟಾಗುತ್ತದೆ. ಮೈ ಬೆವರಲಾರಂಭಿಸುತ್ತದೆ. ನಾವು ಕಾಣುತ್ತಿರುವುದು ಕನಸೇ ಆದರೂ, ನಿದ್ರೆಗೆ ಶರಣಾದ ನಮಗೆ ನಮ್ಮ ಅಸ್ತಿತ್ವ ಮರೆತು, ಕನಸಲ್ಲಿ ಕಂಡದೇ ದಿಟ ಎಂಬಂತೆ ಅನುಭವಿಸಿ ಪ್ರತಿಕ್ರಿಯಿಸುತ್ತೇವೆ. ಅದರಂತೆಯೇ, ಈ ಲೌಕಿಕ ಜಗತ್ತಿನಲ್ಲಿ ಕೂಡ ನಾವು ಚೇತನಾತ್ಮರು, ಭಗವಾನ್ ಶ್ರೀಕೃಷ್ಣರ ಭಕ್ತರು ಎಂಬುದನ್ನು ಮರೆತು, ಬೇರೆಯದೇ ಪಾತ್ರವನ್ನು ನಮ್ಮದೆಂಬಂತೆ ತಿಳಿದು ವರ್ತಿಸುತ್ತೇವೆ.
ನಾನು ಭಾರತೀಯ, ನಾನು ಅಮೆರಿಕನ್, ನಾನು ಗಂಡು, ನಾನು ಹೆಣ್ಣು…. ಹೀಗೆ. ನಮ್ಮ ಕೆಲಸದ ಜೊತೆ, ನಮ್ಮ ಅಂತಸ್ತಿನ ಜೊತೆ, ನಮ್ಮ ಜಾತಿಯ ಜೊತೆ, ನಾವು ವಾಸ ಮಾಡುತ್ತಿರುವ ಪ್ರದೇಶದ ಜೊತೆ ನಮ್ಮನ್ನು ಗುರುತಿಸಿಕೊಂಡು ಅದನ್ನು ನಮ್ಮ ವಾಸ್ತವ ಎಂಬಂತೆ ಅನುಭವಿಸುತ್ತೇವೆ.
ಇಂತಹ ಅನುಭವಕ್ಕೆ ಹೊರತಾಗಿ ಬದುಕುವವರು ಬೆರಳೆಣಿಕೆಯಷ್ಟು ಮಾತ್ರ. ಯುಧಿಷ್ಠಿರನಂತಹ ಸಜ್ಜನ ಭಕ್ತನು ಕೂಡ ವ್ಯಾಕುಲತೆಗೆ ಒಳಗಾಗುತ್ತಿದ್ದ. ಕುರುಕ್ಷೇತ್ರ ಯುದ್ಧ ಮುಗಿದ ಬಳಕ, ತನ್ನ ದೊಡ್ಡಪ್ಪ – ಚಿಕ್ಕಪ್ಪಂದಿರು ಅರಮನೆ ತೊರೆದು ಹೋದಾಗಲೂ ಅವನು ಶೋಕಿಸುತ್ತಿದ್ದ. ವೃದ್ಧಾಪ್ಯದ ಕೊನೆಯ ಹಂತದಲ್ಲಿದ್ದ ಧೃತರಾಷ್ಟ್ರ, ಅಂಧ ಧೃತರಾಷ್ಟ್ರ ತಾನಿಲ್ಲದೆ ಹೇಗೆ ಇರಬಲ್ಲ ಎಂಬುದು ಅವನ ಯೋಚನೆ!
ನಮಗೆ ಕೂಡ ಇಂತಹ ಆಲೋಚನೆಗಳು ಬರುವುದಿದೆಯಲ್ಲವೆ? ನಮ್ಮ ರಕ್ಷಣೆಯಲ್ಲಿರುವ ಜನರು ಇದ್ದಕ್ಕಿದ್ದಂತೆ ಕಾಣೆಯಾದಾಗ ನಾವು ‘ನಾನಿಲ್ಲದೆ ಅವನು/ಳು ಹೇಗೆ ಬದುಕಬಲ್ಲನು/ಳು?’ ಎಂದು ಚಿಂತಿಸುತ್ತೇವೆ. ನಮ್ಮ ಸಾಕು ಪ್ರಾಣಿ ಕಳೆದುಹೋದರೂ ನಾವು ಹಾಗೆ ಚಿಂತಿಸತೊಡಗುತ್ತೇವೆ.

ಇದೆಲ್ಲ ಒಂದು ನಾಟಕದ ಹಾಗೆ. ನೀವು ನಾಟಕವನ್ನು ನೋಡಿರುತ್ತೀರಿ. ಅದರಲ್ಲಿ ನಟಿಸುವವರೆಲ್ಲ ರಂಗಭೂಮಿಯ ಹೊರಗೂ ಪರಿಚಿತರಿರುತ್ತಾರೆ. ಅವರ ನಡುವೆ ಬೇರೆಯೇ ಬಾಂಧವ್ಯವಿರುತ್ತದೆ. ದ್ವೇಷವಿದ್ದರೂ ಇರಬಹುದು. ಆದರೆ, ರಂಗಭೂಮಿಯ ಮೇಲೆ ಅವರು ತಮ್ಮ ಪಾಲಿನದನ್ನು ನಟಿಸಬೇಕಾಗುತ್ತದೆ.
ನಿರ್ದೇಶಕನ ಮಾತಿನಂತೆ ನಡೆಯಬೇಕಾಗುತ್ತದೆ. ಹಾಗಾದಾಗ ಮಾತ್ರ ನಾಟಕ ಸುಸೂತ್ರವಾಗಿ ನಡೆಯುತ್ತದೆ. ಹೊರಗಿನ ವ್ಯಾಪಾರಗಳೇನೇ ಇರಲಿ, ಎಲ್ಲ ನಟರೂ ನಿರ್ದೇಶಕನ ಮಾತುಗಳಿಗೆ ಬೆಲೆ ಕೊಡಲೇಬೇಕು.
ಹಾಗೆಯೇ ಎಲ್ಲ ಜೀವಿಗಳನ್ನು ನಿರ್ದೇಶಿಸುವವನು ಶ್ರೀಕೃಷ್ಣ. ಅವನು ಕೊಟ್ಟ ಪಾತ್ರವನ್ನು, ಅವನ ನಿರ್ದೇಶನದಂತೆ ಮಾಡಿ ಮುಗಿಸುವುದಷ್ಟೆ ನಮ್ಮ ಕೆಲಸ. ಕೃಷ್ಣನ ನಿರ್ದೇಶನದಂತೆ ನಡೆಯದೆ ಹೋದರೆ ನಮ್ಮ ಜೀವನ ಕೆಡುತ್ತದೆ. ಹೇಗಿದ್ದರೂ ನಷ್ಟ ನಮಗೇ!
ಈ ಕಾರಣದಿಂದಲೇ ಕೃಷ್ಣ ತನಗೆ ಶರಣಾಗುವಂತೆ ಸೂಚಿಸಿದ್ದಾನೆ. “ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಮ್ ತರಣಮ್ ವ್ರಜ.” ಉಳಿದೆಲ್ಲ ಧರ್ಮಗಳನ್ನು ಪರಿತ್ಯಜಿಸಿ ಕೃಷ್ಣನಿಗೆ ಶರಣಾಗಬೇಕು. ಆಗ ಮಾತ್ರ ಜೀವನದ ಸಾರ್ಥಕತೆ ಸಿದ್ಧಿಸುತ್ತದೆ.
ಆದರೆ, ಏಕೆ? ಏಕೆ ಕೇವಲ ಕೃಷ್ಣನನ್ನು ನೆಚ್ಚಿಕೊಳ್ಳಬೇಕು? ಏಕೆ ಕೃಷ್ಣನಿಗೆ ಶರಣಾಗಬೇಕು? ಏಕೆಂದರೆ, ಜೀವ ಸೃಷ್ಟಿಯ ನಿರ್ಮಾರ್ತೃವೂ, ನಿರ್ದೇಶಕನೂ ಅವನೇ ಆಗಿರುವನು. ನಾಟಕದಲ್ಲಿನ ನಿರ್ದೇಶಕನಂತೆ, ಶ್ರೀಕೃಷ್ಣನು ಜೀವಿಗಳ ಪಾತ್ರವನ್ನು ನಿರ್ದೇಶಿಸುವನು.
ಹೀಗೆ ನಾವು ಕೃಷ್ಣನಿಗೆ ಶರಣಾದ ಕ್ಷಣದಿಂದಲೇ ಕೃಷ್ಣ ವಿಜ್ಞಾನದ ಅರಿವಿನ ವ್ಯಾಪ್ತಿಗೆ ಒಳಗೊಳ್ಳುತ್ತೇವೆ. ಮತ್ತು ಒಮ್ಮೆ ನಾವು ಕೃಷ್ಣ ವಿಜ್ಞಾನವನ್ನು ಅರಿತೆವೆಂದರೆ, ಯಾವ ಘಟನೆಗಳೂ ನಮಗೆ ಪವಾಡವಾಗಿ ತೋರುವುದಿಲ್ಲ.
ಲೇಖನದ ಆರಂಭದಲ್ಲಿ ಹೇಳಿರುವಂತೆ ಪುಟ್ಟ ಮಗು ಅಪಘಾತದಿಂದ ಬದುಕುಳಿದಿದ್ದು ನಮಗೀಗ ಅಚ್ಚರಿಯಾಗಿ ತೋರುವುದಿಲ್ಲ. ಹಾಗಾದರೆ, ಮಗು ಹೇಗೆ ಬದುಕಿ ಉಳಿಯಿತು? ಏಕೆಂದರೆ, ಅದರ ಕರ್ಮ ಉಳಿದಿತ್ತು. ಅದು ಬದುಕಲೇಬೇಕಾಗಿತ್ತು. ಮತ್ತು ಕ್ರಿಕೆಟಿಗನ ಸಾವು, ಅದೂ ಚೆರ್ರಿಯ ಕಾರಣದಿಂದ!? ಇಲ್ಲಿ ಆತನ ಲೆಕ್ಕಾಚಾರ ಮುಗಿದಿತ್ತು. ಕೃಷ್ಣನ ಇಚ್ಛೆಯಂತೆ ಅವನ ಜೀವಿತಾವಧಿ ಕೊನೆಗೊಂಡಿತು.
ನಾವು ಮೊದಲ ಉಸಿರು ತೆಗೆದುಕೊಂಡ ದಿನವೇ ನಮ್ಮ ಕೊನೆಯುಸಿರಿನ ಘಳಿಗೆ ಕೂಡ ನಿಶ್ಚಿತವಾಗಿಬಿಟ್ಟಿರುತ್ತದೆ. ಅನಂತರ ನಾವು ಆ ದೇಹದಿಂದ ಹೊರಗೆಳೆಯಲ್ಪಟ್ಟು, ಕರ್ಮಾನುಸಾರ ಮತ್ತೊಂದು ದೇಹಕ್ಕೆ ವರ್ಗಾಯಿಸಲ್ಪಡುತ್ತೇವೆ. ಈ ನಡುವಿನ ಅವಧಿಯಲ್ಲಿ ನಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸುವುದಷ್ಟೆ ನಮ್ಮ ಕೆಲಸ.
ಆದರೆ ನಾವು ಈ ಕೃಷ್ಣ ವಿಜ್ಞಾನವನ್ನು ಅರಿಯುವುದು ಹೇಗೆ? ಏಕೆಂದರೆ, ಕೃಷ್ಣನನ್ನು ಅರಿತುಕೊಳ್ಳುವುದು ಸುಲಭ ಸಂಗತಿಯೇನಲ್ಲ. ಅವನನ್ನು ಅರಿಯುವುದೆಂದರೆ, ಪ್ರತಿಯೊಂದನ್ನೂ ಅರಿಯುವುದೆಂದರ್ಥ.
ಶ್ರೀಲ ಪ್ರಭುಪಾದರು ಹೇಳುವಂತೆ, ಸ್ವತಃ ಶ್ರೀಕೃಷ್ಣನೇ ಗೀತೆಯಲ್ಲಿ ಹೇಳಿರುವಂತೆ ಸಂಪೂರ್ಣವಾಗಿ, ಶರಣಾಗತರಾಗುವುದರಿಂದ ಮಾತ್ರವೇ ಕೃಷ್ಣನನ್ನು ಅರಿಯಬಹುದು. ಭಕ್ತಿಸೇವೆಯು ಮನುಷ್ಯನನ್ನು ಪರಿಪೂರ್ಣ ಕೃಷ್ಣಪ್ರಜ್ಞಾವಂತನಾಗಿಸುವುದು. ಆಧ್ಯಾತ್ಮಿಕ ಗುರುವಿನ ಪಾದಪದ್ಮಗಳ ಆಶ್ರಯದಲ್ಲಿ ಭಗವದ್ಗೀತೆ, ಭಾಗವತಗಳಲ್ಲಿ ನೀಡಲಾಗಿರುವ ನಿರ್ದೇಶನಗಳನ್ನು ಶ್ರದ್ಧಾಭಕ್ತಿಯಿಂದ ಅನುಸರಿಸಿದರೆ, ಕೃಷ್ಣ ವಿಜ್ಞಾನವು ನಮಗೆ ಕರಗತವಾಗುವುದು.
ಈ ನಿರ್ದೇಶನಗಳು ತಾವಾಗಿಯೇ ನಮ್ಮಲ್ಲಿ ಶಕ್ತಿಯನ್ನು ತುಂಬುತ್ತವೆ. ಮುಂದೆ ನಾವು ಅವುಗಳನ್ನು ಅನುಸರಿಸುವ ಸಾಮರ್ಥ್ಯ ನಮಗೆ ಬಂದೊದಗುತ್ತದೆ. ಹೀಗೆ ಮಾಡುವುದರಿಂದ ಸಾವಧಾನವಾಗಿ, ಆದರೆ ಖಚಿತವಾಗಿ ಕೃಷ್ಣ ವಿಜ್ಞಾನದ ಅರಿವು ಪ್ರಾಪ್ತವಾಗುತ್ತಾ ಭಗವಂತನೆಡೆಗೆ ಪ್ರೇಮ ಭಾವವು ಅಭಿವೃದ್ಧಿಗೊಳ್ಳುತ್ತದೆ.






Leave a Reply