“ನೀವು ದೇವರೇ!?”

ಸ್ಥಳ: ಬಾಸ್ಟನ್, ಮಸ್ಸಾಚುಸೆಟ್ಸ್‌, ದಿನಾಂಕ 23ನೇ ಡಿಸೆಂಬರ್, 1969

ಶ್ರೀ ಶ್ರೀಮದ್‌ ಎ.ಸಿ.ಭಕ್ತವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಕೆಲವು ಸಂದರ್ಶಕರ ನಡುವೆ ನಡೆದ ಸಂವಾದ

– ಅನುವಾದ : ಚೇತನಾ ತೀರ್ಥಹಳ್ಳಿ

ಶ್ರೀಲ ಪ್ರಭುಪಾದ: ಯಾವುದೇ ಗುರು ಅಥವಾ ಯಾವುದಾದರೊಂದು ಆದರ್ಶವನ್ನು ಅನುಸರಿಸಿ ನೀವು ನೈಜವಾಗಿ ಭಗವತ್ಪ್ರೇಮವನ್ನು ಬೆಳೆಸಿಕೊಳ್ಳಲು ಶಕ್ಯವಾಗುವುದಾದರೆ ಅದು ಬಹಳ ಒಳ್ಳೆಯದು. ಇಲ್ಲವಾದಲ್ಲಿ ಅನವಶ್ಯಕವಾಗಿ ಸಮಯ ಹಾಳು ಮಾಡಿದಂತಾಗುತ್ತದೆಯಷ್ಟೆ. ಅದೊಂದು ಪರೀಕ್ಷೆ.

ಆದರೆ, ನನಗೆ ತಿಳಿದಂತೆ ಈ ಯೋಗಿಗಳು ತಮ್ಮನ್ನು ತಾವು ದೇವರೆಂದು ಹೇಳಿಕೊಳ್ಳುವರು. ಅವರು ಪ್ರತಿಯೊಬ್ಬನೂ ಭಗವಂತನೆಂದು ಹೇಳುವರು. ಹಾಗಾದರೆ ನಾಯಿ ಯಾರು? ನನಗೆ ಅವರ ಮಾತುಗಳು ಸಮ್ಮತವೆನಿಸುವುದಿಲ್ಲ. ಪ್ರತಿಯೊಬ್ಬನ ದೇವನಾಗುವುದು ಹೇಗೆ ಸಾಧ್ಯ? ಹಾಗಾದಲ್ಲಿ ‘ದೇವರು’ ಎನ್ನುವುದರ ಅರ್ಥವಾದರೂ ಏನು?

ಸಂದರ್ಶಕ 1: ನಾನು ಪ್ರತಿಯೊಬ್ಬನನ್ನೂ ಪ್ರೀತಿಸಲು ಬಯಸುತ್ತೇನೆ.

ಶ್ರೀಲ ಪ್ರಭುಪಾದ: ಅದು ಶುದ್ಧ ಬೊಗಳೆ. ನೀವು ಪ್ರತಿಯೊಬ್ಬನನ್ನೂ ಪ್ರೀತಿಸುವುದು ಸಾಧ್ಯವಿಲ್ಲ. ನೀವು ಭಗವಂತನನ್ನು ಪ್ರೀತಿಸಿದರೆ ಸಾಕು, ಪ್ರತಿಯೊಬ್ಬನನ್ನೂ ಪ್ರೀತಿಸಿದಂತಾಗುತ್ತದೆ. ಏಕೆಂದರೆ ಭಗವಂತನೇ ಎಲ್ಲವೂ ಆಗಿದ್ದಾನೆ.

ಸ೦ದರ್ಶಕ 1: ಭಗವಂತನೇ ಎಲ್ಲವೂ ಆಗಿರುವನಾದರೆ, ನೀವೇಕೆ ಎಲ್ಲ ಜೀವಿಗಳನ್ನೂ ಪ್ರತ್ಯೇಕವಾಗಿ ಪ್ರೀತಿಸಲಾರಿರಿ?

ಶ್ರೀಲ ಪ್ರಭುಪಾದ: ನೀವೊಂದು ಮರವನ್ನು ಪ್ರೀತಿಸುತ್ತೀರಾದರೆ, ಅದರ ಬೇರಿಗೆ ನೀರು ಹಾಕುವಿರಿ. ಅದರ ಪ್ರತಿಯೊಂದು ಎಲೆಗಳಿಗಲ್ಲ. ನೀವು ನಿಮ್ಮ ದೇಹದ ಪೋಷಣೆಗಾಗಿ ಹೊಟ್ಟೆಗೆ ಆಹಾರ ನೀಡುವಿರಿ ಹೊರತು ಕಣ್ಣು, ಕಿವಿಗಳಿಗಲ್ಲ.

ಸ್ವಾದಿಷ್ಟ ತಿನಿಸನ್ನು ಕಂಡಾಗ ನೀವು ಅದನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಇಲ್ಲಿಗೆ (ಬಾಯಿಯನ್ನು ತೋರಿಸುತ್ತ) ಹಾಕಿಕೊಳ್ಳುತ್ತೀರಿ. ಏಕೆ? ಅದೇ ಸೂಕ್ತವಾದ ಕ್ರಮ. ನಿಮ್ಮ ದೇಹದಲ್ಲಿ ಒಂಬತ್ತು ರಂಧ್ರಗಳಿವೆ. ಆದರೂ ನೀವೇಕೆ ಅದನ್ನು ಈ ರಂಧ್ರದಲ್ಲಿಯೇ ಹಾಕಿಕೊಳ್ಳುವಿರಿ?

ಸಂದರ್ಶಕ 1: ಹೌದು, ಆದರೆ…

ಶ್ರೀಲ ಪ್ರಭುಪಾದ: ಮೊದಲು ಈ ಪ್ರಶ್ನೆಗೆ ಉತ್ತರಿಸಿ.

ಸಂದರ್ಶಕ 1: ಸರಿ, ನಾನು ನಿಮ್ಮ ಮಾತನ್ನು ಒಪ್ಪುವೆ… ಆದರೆ…

ಶ್ರೀಲ ಪ್ರಭುಪಾದ: ನೀವು ಸರಿಯಾದ ಕ್ರಮವನ್ನೇ ಅನುಸರಿಸಬೇಕು. ಆಗ ಮಾತ್ರ ಅದನ್ನು ಪಡೆಯಲು ಸಾಧ್ಯ. ಅದುವೇ ಪ್ರೀತಿ.

ಸ೦ದರ್ಶಕ 1: ನೀವು ಬೇರನ್ನು ಗಮನಿಸಬೇಕಾದುದೇನೂ ಸರಿಯೇ. ಆದರೆ ಅದೇ ವೇಳೆಗೆ ನೀವು ಉಳಿದೆಲ್ಲವನ್ನು ಕಡೆಗಣಿಸಲಾರಿರಿ. ನನ್ನ ಮಾತಿನ ಅರ್ಥ…

ಶ್ರೀಲ ಪ್ರಭುಪಾದ: ನೀವು ಬೇರನ್ನು ಕಡೆಗಣಿಸಿ ಎಲೆಯನ್ನು ಮಾತ್ರ ಗಮನಿಸುತ್ತ ಉಳಿದರೆ, ನೀವು ನಿಮ್ಮ ಸಮಯವನ್ನು ಪೋಲು ಮಾಡುತ್ತಿರುವಿರಷ್ಟೆ.

ಸಂದರ್ಶಕ 1: ಹಾಗಲ್ಲ, ನಾನು ಹೇಳ ಹೊರಟಿದ್ದು ಹೀಗಿದೆ; ದೇವರ ಮೇಲಿನ ಪ್ರೀತಿ, ಮತ್ತು ಲೋಕದ ಮೇಲಿನ ಪ್ರೀತಿ ಜೊತೆಗೆ ಸಾಗಲಾರವೇನು?

ಶ್ರೀಲ ಪ್ರಭುಪಾದ: ಹೌದು, ನೀವು ಭಗವಂತನನ್ನು ಪ್ರೀತಿಸಿದಿರಾದರೆ, ಜಗತ್ತನ್ನು ಪ್ರೀತಿಸಿದಂತಾಗುತ್ತದೆ. ಏಕೆ೦ದರೆ, ಲೋಕವು ಭಗವಂತನ ಶಕ್ತಿಯ ಸ್ವರೂಪವಾಗಿದೆ.

ಸಂದರ್ಶಕ 1 : ಆದರೆ ನೀವು, ಯಾವಾಗ ಭಗವಂತನೆಡೆಗಿನ ಪ್ರೇಮವು ಅಧಿಕಗೊಳ್ಳುವುದೋ, ಆಗ ಲೋಕದ ಮೇಲಿನ ಮೋಹ ಕಡಮೆಯಾಗುತ್ತ ಹೋಗುತ್ತದೆ ಎಂದು ಹೇಳಿದ್ದೀರಲ್ಲ?

ಶ್ರೀಲ ಪ್ರಭುಪಾದ: ಲೋಕವೆಂದರೇನು? ಅದು ಭಗವಂತನ ಶಕ್ತಿಯ ಮತ್ತೊಂದು ಸ್ವರೂಪವಷ್ಟೆ. ನೀವು ನಿಮ್ಮ ದೇಹವನ್ನು ಪ್ರೀತಿಸುವಿರೆಂದಾದರೆ, ನಿಮ್ಮ ಬೆರಳುಗಳನ್ನೂ ಸಹಜವಾಗಿಯೇ ಪ್ರೀತಿಸುವಿರಿ. ಭಗಂವತನ ಪರಮೋನ್ನತನಾಗಿದ್ದಾನೆ. ಆದ್ದರಿಂದ, ನೀವು ಭಗವಂತನನ್ನು ಪ್ರೀತಿಸಿದರೆ ನಿಮಗೆ ಎಲ್ಲರನ್ನೂ ಪ್ರೀತಿಸಬೇಕೆಂಬುದರ ಅರಿವಾಗುತ್ತದೆ.

ಸಂದರ್ಶಕ 2: ದೇವರು ಎಂದರೇನು?

ಶ್ರೀಲ ಪ್ರಭುಪಾದ: ದೇವರೆಂದರೆ ಏನು? ನೀವು ಹೇಳಬಲ್ಲಿರೇನು?

ಸಂದರ್ಶಕ 2: ಇಲ್ಲ, ಭಗವಂತನು ಶಕ್ತಿಯೇ? ಅಥವಾ ಭಗವಂತನು …

ಶ್ರೀಲ ಪ್ರಭುಪಾದ: ಶಕ್ತಿ ಎಂದರೆ ಭಗವಂತನ ಶಕ್ತಿ ಕಿರಣಗಳು ಹೇಗೆ ಸೂರ್ಯನ ಶಕ್ತಿಯೋ ಹಾಗೆ. ಅರ್ಥೈಸಿಕೊಳ್ಳಲು ಪ್ರಯತ್ನಿಸಿ. ಶಕ್ತಿ-ಕಿರಣಗಳು ಮತ್ತು ಸೂರ್ಯ ಒಂದಕ್ಕಿಂತ ಒಂದು ಭಿನ್ನವಲ್ಲ. ಆದರೆ, ನೀವು ಕೇವಲ ಸೂರ್ಯ ಕಿರಣಗಳಿಂದಲೇ ತೃಪ್ತರಾಗುವಿರಾದರೆ, ಸೂರ್ಯ ದೊರೆಯುವುದಿಲ್ಲ.

ಸಂದರ್ಶಕ 2: ನೀವು ಹೇಳುತ್ತಿರುವುದು ಶಕ್ತಿಯೇ ಭಗವಂತ ಎಂದೋ? ಭಗವಂತನೇ ಶಕ್ತಿ ಎಂದೋ?

ಶ್ರೀಲ ಪ್ರಭುಪಾದ: ಶಕ್ತಿ, ಭಗವಂತನಿಗಿಂತ ಅಭಿನ್ನವಾಗಿದೆ ಮತ್ತು ಅವನ ಒಂದು ರೂಪವಾಗಿದೆ. ಅದೇ ವೇಳೆಗೆ, ಶಕ್ತಿಯೇ ಭಗವಂತನಲ್ಲ ಎಂಬುದನ್ನು ಅರಿಯಬೇಕು. ಕಿರಣಗಳು ಸೂರ್ಯನ ಶಕ್ತಿಯಾಗಿವೆ. ಆದರೆ, ನಿಮ್ಮ ಕೋಣೆಯಲ್ಲಿ ಸೂರ್ಯನ ಕಿರಣಗಳು ಪ್ರವೇಶಿಸಿದಾಗ ‘ಸೂರ್ಯ ನನ್ನ ಕೋಣೆಗೆ ಬಂದಿದ್ದಾನೆ’ ಎಂದು ನೀವು ಯೋಚಿಸುವುದು ತಪ್ಪಾಗುತ್ತದೆ. ಆದರೂ ಸೂರ್ಯ ಕಿರಣಗಳು ಸೂರ್ಯನಿಗಿಂತ ಬೇರೆಯಲ್ಲ.

ಸಂದರ್ಶಕ 2: ಕೇವಲ ಜಪ ಮಾಡುವುದರಿಂದ ಅಲೌಕಿಕ ಆನಂದವನ್ನು ಹೊಂದಬಹುದು ಎಂದು ಸಾಧಿಸುವಂತೆ ತೋರುತ್ತದೆ.

ಶ್ರೀಲ ಪ್ರಭುಪಾದ: ಅದು ಆತ್ಮ ಜ್ಞಾನದ ಒಂದು ವಿಧಾನ. ಆತ್ಮಜ್ಞಾನ ಹೊಂದಲು ಇನ್ನೂ ಬೇರೆ ಬೇರೆ ಬಗೆಯ ವಿಧಾನಗಳಿವೆ. ಈ ಯುಗದಲ್ಲಿ, ಜನರು ಅಲ್ಪಮತಿಗಳಾಗಿರುವ ಈ ಕಾಲಕ್ಕೆ ಈ ವಿಧಾನವು ಸೂಕ್ತವಾಗಿದೆ.

ಸಂದರ್ಶಕ 1: ನೀವು ಜಪ ಮಾಡುವ ಮೂಲಕ ಏನು ಮಾಡುತ್ತಿರುವಿರಿ? ಇದೊಂದು ಬಗೆಯ…

ಶ್ರೀಲ ಪ್ರಭುಪಾದ: ನೀವು ಜಪ ಮಾಡಿದರೆ, ನಿಮಗೆ ತಿಳಿಯುತ್ತದೆ. ನಿಮಗೆ ಮಕ್ಕಳಿಲ್ಲವೆಂದಾದಲ್ಲಿ, ಮಕ್ಕಳನ್ನು ಹೆರುವ ನೋವು ಯಾವ ಬಗೆಯದೆಂದು ತಿಳಿಯುವುದು ಹೇಗೆ ಸಾಧ್ಯ?

ಸಂದರ್ಶಕ 2: ಆದರೆ ಇದು, ಬಾವಿಯಲ್ಲಿ ಬಿದ್ದು ನೋಡುದ ಹೊರತು, ಬಾವಿಯಲ್ಲಿ ಬಿದ್ದರೆ ಏನಾಗುವುದೆಂದು ತಿಳಿಯದು ಎನ್ನುವ ಹಾಗಿದೆ.

ಶ್ರೀಲ ಪ್ರಭುಪಾದ: ಮೊತ್ತ ಮೊದಲನೆಯದಾಗಿ, ನಿಮಗೆ ನಿಮ್ಮ ಬಗ್ಗೆಯೇ ತಿಳುವಳಿಕೆಯಿಲ್ಲ. ಮೌಢ್ಯದ ಮೊದಲ ಚಿಹ್ನೆಯೆಂದರೆ ನೀವು ನಿಮ್ಮನ್ನು ಯಾವುದು ನೀವಲ್ಲವೋ ಅಂತಹ ದೇಹದೊಂದಿಗೆ ಗುರುತಿಸಿಕೊಳ್ಳುವುದು. ಮೊದಲು ನಿಮ್ಮನ್ನು ನೀವು ತಿಳಿದುಕೊಳ್ಳಿ. ಅನಂತರ ನಿಮಗೆ ಭಗವಂತನನ್ನು ಅರಿಯುವುದು ಸಾಧ್ಯವಾಗುತ್ತದೆ. ನಿಮಗೆ ನಿಮ್ಮ ಬಗ್ಗೆಯೇ ತಿಳಿದಿಲ್ಲವಲ್ಲ!

ಸ೦ದರ್ಶಕ 2: ಆದರೆ ನಾನು ದೇವರು. ಸರಿಯೇ? ನಾನು ದೇವರು. ನೀವು ಕೂಡ ದೇವರಾಗಿರುವಿರಿ.

ಶೀಲ ಪ್ರಭುಪಾದ: ನೀವು ನಾಯಿಯಾಗಿರುವಿರಿ!

ಸಂದರ್ಶಕ 2: ಆದರೆ ನೀವು ನಾನಾಗಿರುವಿರಿ,  ನಾನು ನೀವಾಗಿರುವೆ, ಇಬ್ಬರೂ ದೇವರಾಗಿರುವೆವು, ಸರಿಯೇ?

ಶ್ರೀಲ ಪ್ರಭುಪಾದ: ಖಂಡಿತ ಇಲ್ಲ.

ಸಂದರ್ಶಕ 2: ಏಕಿಲ್ಲ?

ಶ್ರೀಲ ಪ್ರಭುಪಾದ: ನಿಮಗೆ ಭಗವಂತನ ಅರ್ಥ ಗೊತ್ತಿಲ್ಲ. ಭಗವಂತ ಎಂದರೆ ಏನೆಂದು ತಿಳಿದಿರುವಿರಿ? ಮೊದಲು ಅದನ್ನು ಹೇಳಿ.

ಸಂದರ್ಶಕ 2: ಎಲ್ಲವೂ ಭಗವಂತನೇ.

ಶ್ರೀಲ ಪ್ರಭುಪಾದ: ಈ ವಿವರಣೆಯನ್ನು ಪರಿಗಣಿಸಿದರೆ, ನೀನು ಭಗವಂತ. ಆದರೆ, ಮೊದಲು ಭಗವಂತನೆಂದರೆ ಯಾರು ಎಂದು ವಿವರಿಸಿ.

ಸಂದರ್ಶಕ 2: ಭಗವಂತನೆಂದರೆ ಸರ್ವಸ್ವ ಅಷ್ಟೆ.

ಶ್ರೀಲ ಪ್ರಭುಪಾದ: ಅದು ವಿವರಣೆಯಲ್ಲ. ಭಗವಂತನು ಎಲ್ಲವೂ ಅಲ್ಲ.

ಸಂದರ್ಶಕ 2: ಅದುವೇ ಭಗವಂತ. ಅವೆಲ್ಲವೂ ಅಷ್ಟೆ.

ಶ್ರೀಲ ಪ್ರಭುಪಾದ: ಪ್ರತಿಯೊಂದು ವಸ್ತುವೂ ಭಗವಂತನ ಶಕ್ತಿಯೇ. ಎಲ್ಲವೂ ಭಗವಂತನಲ್ಲ ಎಂದು ನಾನು ಹೇಳುತ್ತೇನೆ.

ಸಂದರ್ಶಕ 2: ಎಲ್ಲವೂ ಭಗವಂತನಲ್ಲವೆ?

ಶ್ರೀಲ ಪ್ರಭುಪಾದ: ಹೌದು, ಕಿರಣ ಮತ್ತು ಸೂರ್ಯ ಎರಡೂ ಅಭಿನ್ನವಾದರೂ ಒಂದಕ್ಕಿಂತ ಒಂದು ಬೇರೆಯಾಗಿವೆ. ಕಿರಣವನ್ನು ನೀವು ಸೂರ್ಯನೆಂದು ಒಪ್ಪಲಾರಿರಿ. ಸೂರ್ಯನ ಬಿಸಿಲಲ್ಲಿ ನಿಂತ ನೀವು ‘ನಾನು ಸೂರ್ಯಗ್ರಹದಲ್ಲಿದ್ದೇನೆ’ ಎಂದು ಹೇಳಲಾರಿರಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi